ಮುಸ್ಲಿಮರು ನಗಿಸುವುದೂ ಅಪರಾಧವೆ?
ಈ ದೇಶದಲ್ಲಿ ಈಗ ಹಿಂದೂಗಳನ್ನು ಬಿಟ್ಟು ಪರಧರ್ಮದವರು ನಗಿಸುವುದು ಅಪರಾಧ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಫಾರೂಕಿ ತಾನು ಮುಸ್ಲಿಮ್ ಎನ್ನುವ ಕಾರಣಕ್ಕೆ ವ್ಯವಸ್ಥಿತ ಹಿಂಸೆಗೆ ಒಳಗಾಗುತ್ತಾರೆ. ಅಂದರೆ ಪರಧರ್ಮದವರು ನಗಿಸುವುದು, ವ್ಯಂಗ್ಯ ಮಾಡುವುದು ಕೂಡ ಅಪರಾಧವಾಗಿ ಕಾಣುತ್ತದೆ. ಇದಕ್ಕೆ ಮುನವ್ವರ್ ಫಾರೂಕಿಯ ಬದುಕಿನ ಪಯಣವೇ ಸಾಕ್ಷಿ ಒದಗಿಸುತ್ತದೆ.
ಕನ್ನಡದ ಹಿರಿಯ ಸಾಹಿತಿ ಡಿ.ವಿ.ಗುಂಡಪ್ಪ ಅವರು ಮಂಕುತಿಮ್ಮನ ಕಗ್ಗದಲ್ಲಿ ‘ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ’ ಎನ್ನುತ್ತಾರೆ. ಆದರೆ ಗುಜರಾತ್ ಮೂಲದ ಮುನವ್ವರ್ ಫಾರೂಕಿ ಎಂಬ ಕಾಮಿಡಿಯನ್ ಬದುಕಿನ ಬಿಕ್ಕಟ್ಟುಗಳನ್ನು ನೋಡಿದರೆ, ಈ ದೇಶದಲ್ಲಿ ಈಗ ಹಿಂದೂಗಳನ್ನು ಬಿಟ್ಟು ಪರಧರ್ಮದವರು ನಗಿಸುವುದು ಅಪರಾಧ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಒಂದು ಹಂತಕ್ಕೆ ನಾನು ಇನ್ನು ಮುಂದೆ ನಗಿಸುವುದಿಲ್ಲ ಎಂದು ಘೋಷಿಸಿ ರಿಯಾಲಿಟಿ ಶೋಗಳಲ್ಲಿ ತನ್ನನ್ನು ತೊಡಗಿಸಿಕೊಂಡರು. ಫಾರೂಕಿ ತಾನು ಮುಸ್ಲಿಮ್ ಎನ್ನುವ ಕಾರಣಕ್ಕೆ ವ್ಯವಸ್ಥಿತ ಹಿಂಸೆಗೆ ಒಳಗಾಗುತ್ತಾರೆ. ಅಂದರೆ ಪರಧರ್ಮದವರು ನಗಿಸುವುದು, ವ್ಯಂಗ್ಯ ಮಾಡುವುದು ಕೂಡ ಅಪರಾಧವಾಗಿ ಕಾಣುತ್ತದೆ. ಇದಕ್ಕೆ ಮುನವ್ವರ್ ಫಾರೂಕಿಯ ಬದುಕಿನ ಪಯಣವೇ ಸಾಕ್ಷಿ ಒದಗಿಸುತ್ತದೆ.
ಕನ್ನಡದಲ್ಲಿಯೂ ಸ್ಟ್ಯಾಂಡ್ ಅಪ್ ಕಾಮಿಡಿ ತಲೆಎತ್ತುತ್ತಿದೆ. ಅನೇಕ ಯುವಕ ಯುವತಿಯರು ಸ್ಟ್ಯಾಂಡ್ ಅಪ್ ಕಾಮಿಡಿಯನ್ನು ವೃತ್ತಿಯ ಜತೆ ಪ್ರಮುಖ ಹವ್ಯಾಸವನ್ನಾಗಿಯೂ, ಆದಾಯದ ಮೂಲವನ್ನಾಗಿಯೂ ಮಾಡಿಕೊಂಡಿದ್ದಾರೆ. ಪ್ರಾಯೋಜಿತ ಟಿಕೆಟ್ ಶೋಗಳು ಬೆಂಗಳೂರಿನಲ್ಲಿ ನಡೆಯುತ್ತಿವೆ. ನಾನು ಕೆಲವು ಸ್ಟ್ಯಾಂಡ್ ಅಪ್ ಕಾಮಿಡಿಗಳನ್ನು ಗಮನಿಸಿದ್ದೇನೆ. ಅಪ್ಪಿತಪ್ಪಿಯೂ ರಾಜಕೀಯ ಭ್ರಷ್ಟಾಚಾರವನ್ನಾಗಲಿ, ಜಾತಿ ಧರ್ಮ ಲಿಂಗದ ಕಾರಣಕ್ಕೆ ಸಮಾಜದಲ್ಲಿ ನಡೆಯುವ ಅಸಮಾನ ನಡವಳಿಕೆಗಳನ್ನಾಗಲಿ ಕಾಮಿಡಿಯಲ್ಲಿ ವ್ಯಂಗ್ಯವನ್ನಾಗಿಯೂ ತರುವುದಿಲ್ಲ. ಈ ಕಾರಣಕ್ಕೆ ಯಾವ ಕಮಿಡಿಯನೂ ಚರ್ಚೆಗೆ ಒಳಗಾಗಿಲ್ಲ. ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಯುವಜನತೆಯನ್ನು ಖುಷಿಗೊಳಿಸಿ ಹಣ ಗಳಿಸುವುದೇ ಈ ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳ ಉದ್ದೇಶವಾದಂತೆ ಕಾಣುತ್ತಿದೆ. ಇದಕ್ಕೆ ದೈನಂದಿನ ಘಟನೆಗಳನ್ನೂ, ಗಂಡು ಹೆಣ್ಣಿನ ಆಕರ್ಷಣೆಯ ಲೈಂಗಿಕ ಸಂಗತಿಗಳನ್ನೂ ವಸ್ತುವನ್ನಾಗಿಸಿಕೊಳ್ಳುತ್ತಿದ್ದಾರೆ.
ದೇಶದ ಕೆಲವು ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳು ದೇಶದ ರಾಜಕಾರಣವನ್ನು ಟೀಕೆ ಮಾಡುತ್ತಾ ಕಾಮಿಡಿ ಮಾಡಿದ್ದಕ್ಕಾಗಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ಕಳೆದ ಒಂದು ದಶಕದಲ್ಲಿ ಹಾಗೆ ಕಾಮಿಡಿ ಮಾಡಿ ತೊಂದರೆಗೊಳಗಾದ ಕಾಮಿಡಿಯನ್ ಗಳೆಂದರೆ, ಕುನಾಲ್ ಕಮ್ರಾ, ಮುನವ್ವರ್ ಫಾರೂಕಿ, ವೀರ ದಾಸ್, ಕೆನ್ನಿ ಸೆಬಾಸ್ಟಿಯನ್, ವರುಣ್ ಗ್ರೋವರ್, ಹಸನ್ ಮಿನಾಝ್, ಅಗ್ರಿಮಾ ಜೋಶುವಾ ಮೊದಲಾದವರನ್ನು ಪಟ್ಟಿ ಮಾಡಬಹುದು. ಇದರಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನವ್ವರ್ ಫಾರೂಕಿ ತಾನು ಮುಸ್ಲಿಮ್ ಆದ ಕಾರಣಕ್ಕಾಗಿ ಕಾಮಿಡಿ ಮಾಡಿ ಅಪಾರ ಹಿಂಸೆಗೆ ಒಳಗಾಗಿದ್ದಾರೆ. ಈತನ ಬಗ್ಗೆ ಸರಕಾರ ನಡೆದುಕೊಂಡ ನಡೆಗಳನ್ನು ನೋಡಿದರೆ ಮುಸ್ಲಿಮರು ಈ ದೇಶದ ರಾಜಕಾರಣದ ಬಗ್ಗೆ, ಧರ್ಮದ ಬಗ್ಗೆ, ಇಲ್ಲಿನ ಜನರ ಬಗ್ಗೆ ಕಾಮಿಡಿ ಮಾಡಬಾರದು ಎನ್ನುವ ಸಂದೇಶವನ್ನು ರವಾನೆ ಮಾಡುವಂತೆ ಕಾಣುತ್ತಿದೆ.
ತೀರಾ ಈಚೆಗೆ ಇದೇ ವರ್ಷ ಮಾರ್ಚ್‌ನಲ್ಲಿ ಮುಂಬೈನ ಪೋರ್ಟ್ ಪ್ರದೇಶದ ಹುಕ್ಕಾ ಪಾರ್ಲರ್ ಮೇಲೆ ದಾಳಿ ನಡೆಸಿ 14 ಜನರನ್ನು ಬಂಧಿಸಲಾಯಿತು. ಇದರಲ್ಲಿ ಮುನವ್ವರ್ ಫಾರೂಕಿ ಕೂಡ ಒಬ್ಬರಾಗಿದ್ದರು. ಆನಂತರ ಜಾಮೀನಿನ ಮೇಲೆ ಬಿಡುಗಡೆಯಾದರು. ಇದು ಮೊದಲ ಬಂಧನವಲ್ಲ ತಾನು ಕಾಮಿಡಿ ಮಾಡಿದ್ದಕ್ಕಾಗಿ ಹಲವು ಬಾರಿ ಹೀಗೆ ಬಂಧನಕ್ಕೆ ಒಳಗಾಗಿ ಹಿಂಸೆ ಅನುಭವಿಸಿದ್ದಾರೆ. 2022ರಲ್ಲಿ ಬೆಂಗಳೂರಿನಲ್ಲಿ ಮುನವ್ವರ್ ಶೋ ಬ್ಯಾನ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮುನವ್ವರ್ ‘ದ್ವೇಷ ಗೆದ್ದಿದೆ, ಕಲಾವಿದ ಸೋತಿದ್ದಾನೆ’ ಎಂದು ಟ್ವೀಟ್ ಮಾಡಿದ್ದರು. ಇದು ಹೀಗೆ ರದ್ದಾದ ಕಾರ್ಯಕ್ರಮಗಳಲ್ಲಿ ಹನ್ನೆರಡನೇ ಕಾರ್ಯಕ್ರಮವಾಗಿತ್ತು. ಮಧ್ಯಪ್ರದೇಶದ ಇಂಧೋರ್‌ನ ಕೆಫೆಯೊಂದರಲ್ಲಿ 2020ರ ಜನವರಿ ಒಂದರಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುತ್ತಾರೆ ಎನ್ನುವ ಬಿಜೆಪಿಯ ಸಂಸದರೊಬ್ಬರ ಆರೋಪದ ಮೇರೆಗೆ ಐದು ಜನ ಸಹಚರರೊಂದಿಗೆ ಬಂಧಿಸಲಾಗಿತ್ತು. ಸರಿಯಾಗಿ 37 ದಿನಗಳ ಕಾಲ ಜೈಲಲ್ಲಿದ್ದು ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿ ಫೆಬ್ರವರಿ 5ಕ್ಕೆ ಬಿಡುಗಡೆಯಾಗಿದ್ದರು. ಹೀಗೆ ಧಾರ್ಮಿಕ ಮೂಲಭೂತವಾದಿಗಳ ದಾಳಿಗೆ ಎದುರಾದರೂ, ಮುನವ್ವರ್ ಡೆಮಾಕ್ರಟಿಕ್ ಆದ ಉತ್ತರ ನೀಡಿದ್ದರು. ಇದು ಯುವ ತಲೆಮಾರಿಗೆ ಒಂದು ಮಾದರಿಯಂತಿತ್ತು.
ಯಾರು ಈ ಮುನವ್ವರ್ ಫಾರೂಕಿ?
2002ರ ಗುಜರಾತಿನ ಕೋಮುಗಲಭೆಯಿಂದ ಮುನವ್ವರ್ ಕುಟುಂಬ ತತ್ತರಿಸುತ್ತದೆ. ತಂದೆಯ ಡ್ರೈವರ್ ವೃತ್ತಿ ಬದುಕು ಸಾಗಿಸಲು ಕಷ್ಟವಾಗುತ್ತದೆ. ಹೀಗಾಗಿ ನಾಲ್ಕು ಸಹೋದರಿಯರ ಜೊತೆ ಮುನವ್ವರ್ ಕುಟುಂಬ ಮುಂಬೈಗೆ ಸ್ಥಳಾಂತರವಾಗಿ ಹೊಸ ಜೀವನ ಆರಂಭಿಸುತ್ತಾರೆ. ಮುಂದೆ ಸ್ಟೀಲ್ ಸಾಮಾನು ಮಾರುವ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಮುನವ್ವರ್ ಕಾಮಿಡಿ ಜರ್ನಿ ಶುರುವಾಗಿದ್ದು 2020ರ ಫೆಬ್ರವರಿಯಲ್ಲಿ. ಸಮಾಜ ಮತ್ತು ರಾಜಕೀಯದ ಬಗೆಗಿನ ಮುನವ್ವರ್ ಗ್ರಹಿಕೆ ತುಂಬಾ ತೀಕ್ಷ್ಣ ಮತ್ತು ಆಳವಾಗಿವೆ. ಎಷ್ಟೋ ಬಾರಿ ಜೋಕುಗಳೇ ಕಟುವಾದ ಸತ್ಯವನ್ನು ಹೇಳುತ್ತವೆ ಎನ್ನುವುದು ಮುನವ್ವರ್ ನಿಲುವು. ಬಹುಶಃ ಈ ಕಟುವಾದ ಸತ್ಯವೇ ಫಾರೂಕಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರ್ಯಾಪರ್ ಕೂಡ ಆಗಿರುವ ಫಾರೂಕಿ ‘‘ಸಂಗೀತ ಜಗತ್ತಿನ ಅತ್ತುತ್ತಮ ಕಲಾ ಪ್ರಕಾರ. ಒಂದು ಕತೆ ನಾಲ್ಕು ಗಂಟೆಗಳನ್ನು ನಿರೂಪಿಸುವುದನ್ನು ಸಂಗೀತ ಕೆಲವು ನಿಮಿಷಗಳಲ್ಲಿ ಹೇಳುತ್ತದೆ’’ ಎನ್ನುತ್ತಾರೆ.
ಇದೀಗ ಮುನವ್ವರ್ ಆನ್‌ಲೈನ್ ಸ್ಟಾರ್. 2022ರಲ್ಲಿ ಕಂಗನಾ ರಣಾವತ್ ನಡೆಸುವ ‘ಲಾಕ್ ಅಪ್ ರಿಯಾಲಿಟಿ’ ಶೋನಲ್ಲಿ ಗೆದ್ದಿದ್ದರು. 2023ರಲ್ಲಿ ಸಲ್ಮಾನ್ ಖಾನ್ ನಡೆಸುವ ಬಿಗ್ ಬಾಸ್ 17ರ ಸೀಝನ್‌ನ ವಿನ್ನರ್ ಕೂಡ. ಮುನವ್ವರ್‌ರ ವೀಡಿಯೋಗಳನ್ನು ಮಿಲಿಯನ್ ಗಟ್ಟಲೆ ಜನ ನೋಡುತ್ತಾರೆ, 2010 ರಲ್ಲಿ ಆರಂಭಿಸಿದ ಯೂಟ್ಯೂಬ್ ಚಾನೆಲ್‌ನಲ್ಲಿ ಇದೀಗ 52 ಲಕ್ಷ ಚಂದಾದಾರರಿದ್ದು, 43 ಕೋಟಿಯಷ್ಟು ವೀಕ್ಷಣೆಯಿದೆ. ಮುನವ್ವರ್ ಕಾಮಿಡಿ ಶೋ ಮಾಡುವಾಗ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸೇರುತ್ತಿದ್ದರು. ಅವರುಗಳೆಲ್ಲಾ ಮುನವ್ವರ್ ಮಾತಿಗೆ ನಕ್ಕು ಕೇಕೆ ಹಾಕಿ ಚಪ್ಪಾಳೆ ತಟ್ಟಿ ಹಗುರಾಗುತ್ತಿದ್ದರು. ಇದೇ ಮುನವ್ವರ್ ಸಂಕಷ್ಟಕ್ಕೆ ಸಿಲುಕಿದಾಗ ಇವರೆಲ್ಲಾ ಮೌನತಾಳಿದ್ದರು. ‘‘ನನ್ನನ್ನು ಉದ್ದೇಶ ಪೂರ್ವಕವಾಗಿ ಹಿಂಸಿಸಲಾಗುತ್ತದೆ ಎಂದು ಬಹುತೇಕರಿಗೆ ಗೊತ್ತಿದ್ದೂ ಇವರುಗಳೆಲ್ಲಾ ಬಾಯಿ ಮುಚ್ಚಿಕೊಂಡಿದ್ದರು. ಮಾತನಾಡಿದರೆ ಇವರೂ ಟ್ರೋಲ್‌ಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ಒಳ್ಳೆಯವರ ಈ ಮೌನವೇ ದ್ವೇಷ ಹೆಚ್ಚಲು ಕಾರಣವಾಗಿದೆ’’ ಎಂಬುದು ಮುನವ್ವರ್ ನಿಲುವಾಗಿತ್ತು. ಹಾಗಾಗಿ ಫಾರೂಕಿಯ ಕಾರ್ಯಕ್ರಮದಲ್ಲಿ ಚಪ್ಪಾಳೆ ತಟ್ಟುವ ಕೈಗಳು, ಮುಷ್ಟಿ ಬಿಗಿಮಾಡಿ ಪ್ರತಿರೋಧ ತೋರಲಿಲ್ಲ.
‘‘ನೀವು ಮುಸ್ಲಿಮ್ ಆಗಿರುವುದಕ್ಕೇ ಈ ಬಗೆಯ ದ್ವೇಷ ಹೆಚ್ಚುತ್ತಿದೆ ಅನ್ನಿಸುತ್ತಿದೆಯಾ?’’ ಎಂದು ಕೇಳಿದರೆ ಮುನವ್ವರ್ ಬಹಳ ಸೂಕ್ಷ್ಮವಾಗಿ ಉತ್ತರಿಸುತ್ತಾರೆ, ‘‘ನಾನು ಮುಸ್ಲಿಮ್ ಎನ್ನುವ ಕಾರಣಕ್ಕೆ ಈ ಬಗೆಯ ದ್ವೇಷ ಹೆಚ್ಚುತ್ತಿದೆ ಎಂದು ನಾನು ನಂಬುವುದಿಲ್ಲ. ಹಾಗೊಮ್ಮೆ ನಂಬಿದರೆ, ನನಗೆ ತುಂಬಾ ನೋವಾಗುತ್ತದೆ. ಒಂದು ವೇಳೆ ಈ ವಿಷಯ ಗೊತ್ತಿದ್ದರೂ, ಅದನ್ನು ಮರೆತು ದಯವಿಟ್ಟು ನನ್ನನ್ನು ಮುಸ್ಲಿಮ್ ಹಾಸ್ಯನಟ ಎಂದು ಕರೆಯಬೇಡಿ, ಹಾಸ್ಯನಟ ಎಂದಷ್ಟೇ ಕರೆಯಿರಿ ಎಂದು ಕೇಳಿಕೊಳ್ಳುವೆ. ಜನರೊಳಗೆ ಸೇರುತ್ತಿರುವ ಸರಕಾರಿ ವಿಷದ ಬಗೆಗೆ ನನಗೆ ಆತಂಕವಾಗುತ್ತಿದೆ. ಜನರು ಸೌಹಾರ್ದದಿಂದ ಬಾಳಬೇಕೆಂದು ನಾನು ಬಯಸುತ್ತೇನೆ. ನನ್ನ ಕೆಲಸ, ಹಾಡು, ಕಾಮಿಡಿ ಎಲ್ಲದರ ಮೂಲಕ ಸೌಹಾರ್ದ ತರುವ ಬಗ್ಗೆಯೇ ಮಾತನಾಡಿದ್ದೇನೆ. ಹಾಗಾಗಿ ನಾನು ಮುಸ್ಲಿಮ್ ಆಗಿರುವ ಕಾರಣಕ್ಕೇ ಹೀಗೆ ನನ್ನ ವಿರುದ್ಧ ದ್ವೇಷ ಕಾರುತ್ತಿದ್ದಾರೆಂದು ತಿಳಿದಿಲ್ಲ. ಯಾಕೆಂದರೆ ನನ್ನ ಶೇ. 80ರಷ್ಟು ಅಭಿಮಾನಿಗಳು ಹಿಂದೂಗಳೇ ಆಗಿದ್ದಾರೆ. ಶೇ. 10ರಷ್ಟು ಜನ ನನ್ನನ್ನು ದ್ವೇಷಿಸುತ್ತಿರಬಹುದು. ಅದರ ಶೇ. 5ರಷ್ಟಾದರೂ ಜನ ನನ್ನ ಬಳಿ ಬಂದು ನಿನ್ನ ಬಗ್ಗೆ ತಪ್ಪು ತಿಳಿದಿದ್ದೆವು ಎಂದು ಹೇಳುತ್ತಾರೆಂದು ನಾನು ನಂಬಿದ್ದೇನೆ. ಮೋದೀಜಿಯವರು ‘ನನ್ನ ದೇಶದಲ್ಲಿ ಯಾರೂ ಹಿಂದೂ-ಮುಸ್ಲಿಮ್ ಎಂಬ ಭೇದ ಆಚರಿಸುವುದಿಲ್ಲ, ಎಲ್ಲರೂ ಸೌಹಾರ್ದದಿಂದ ಬದುಕುತ್ತಾರೆ, ಜೈಹಿಂದ್’ ಎಂದು ಟ್ವೀಟ್ ಮಾಡಿದಂತೆ ಕನಸು ಕಂಡೆ. ಒಂದು ಕ್ಷಣ ಯೋಚಿಸಿ ಈ ನನ್ನ ಕನಸು ನಿಜವಾದರೆ, ಎಷ್ಟು ಒಳ್ಳೆಯ ಕೆಲಸ ಆಗುತ್ತೆ, ಎಂತಹ ಪರಿಣಾಮ ಬೀರಬಹುದು’’ ಎನ್ನುತ್ತಾರೆ.
ಡಾ. ಬಾಬಾ ಸಾಹೇಬ ಅಂಬೇಡ್ಕರ್ ಪ್ರಜಾಪ್ರಭುತ್ವದ ಬಗ್ಗೆ ವಿವರಿಸುವಾಗ ಬಹಳ ಮುಖ್ಯವಾಗಿ ‘‘ಪ್ರಜಾಪ್ರಭುತ್ವದ ಹೆಸರಲ್ಲಿ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರ ಕತ್ತು ಹಿಸುಕುವ ಕೆಲಸ ಆಗಬಾರದು. ಕಡೆಯದಾಗಿ ವಿಚಾರವಂತ ಜನಸಮುದಾಯ (Public Conscience) ಇರಬೇಕು. ಸಮಾಜದಲ್ಲಿ ವ್ಯಾಪಕ ಅನ್ಯಾಯ, ಅಕ್ರಮ, ದೌರ್ಜನ್ಯಗಳು ನಡೆದಾಗ ಇದರ ವಿರುದ್ಧ ಧ್ವನಿ ಎತ್ತಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಜೀವಂತವಾಗಿರುತ್ತದೆ’’ ಎನ್ನುತ್ತಾರೆ. ಈ ಅರ್ಥದಲ್ಲಿ ಪರೋಕ್ಷವಾಗಿ ಮುನವ್ವರ್ ಫಾರೂಕಿಯನ್ನು ನಗಿಸದಂತೆ ನಿರ್ಬಂಧ ಹೇರಿದ್ದು ಪ್ರಜಾಪ್ರಭುತ್ವದ ವ್ಯಂಗ್ಯದಂತೆ ಕಾಣುತ್ತದೆ.