ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚಿಸಿದ ಫಿಲಂ ಚೇಂಬರ್ ಅದನ್ನು ಹಿಂಪಡೆದದ್ದು ಸರಿಯೇ?

ಕಾನೂನು ಎನ್ನುವುದು ಎಲ್ಲರಿಗೂ ಸಲ್ಲುವಂತಹುದು. ಸ್ತ್ರೀಪೀಡಕರನ್ನು ನಿಯಂತ್ರಿಸಲು ಜಾರಿಗೆ ಬಂದ ಪಾಶ್ ಕಾನೂನನ್ನು ಎಲ್ಲಾ ಸರಕಾರಿ ಹಾಗೂ ಖಾಸಗಿ ಸಂಸ್ಥೆಯವರೂ ಪಾಲಿಸಲೇಬೇಕು. ಪಾಲಿಸದೆ ಮೊಂಡಾಟ ಮಾಡುವವರು ಕಾನೂನಿನ ಕ್ರಮಕ್ಕೆ ಒಳಗಾಗಬೇಕು. ಇದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಹೊರತಲ್ಲ. ಪಾಶ್ ಕಾನೂನಿನ ಅಡಿಯಲ್ಲಿ ಮಹಿಳೆಯರ ಸುರಕ್ಷೆಗೆ ಖಾತರಿ ಬೇಕೇ ಬೇಕು. ಮತ್ತೆ ಮೀ ಟೂ ಪ್ರಕರಣಗಳು ಚಲನಚಿತ್ರ ಕ್ಷೇತ್ರದಲ್ಲಿ ಸದ್ದು ಮಾಡದಂತೆ ತಡೆಯಬೇಕು.

Update: 2024-12-05 05:25 GMT

ದೇಶ ತಾಂತ್ರಿಕವಾಗಿ ತುಂಬಾ ಮುಂದುವರಿದಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಅವಕಾಶಗಳು ಹೇರಳವಾಗಿವೆ. ಅನೇಕ ಕಾನೂನುಗಳು ಮಹಿಳಾ ಪರವಾಗಿವೆ. ಮಹಿಳೆಯರು ಅಬಲೆಯರಲ್ಲ ಸಬಲರಾಗಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಲಿಂಗಭೇದ ಇನ್ನೂ ತೊಲಗಿಲ್ಲ, ಹೆಣ್ಣು ಭ್ರೂಣ ಹತ್ಯೆ ನಿಂತಿಲ್ಲ, ಹೆಣ್ಣುಮಕ್ಕಳ ಮೇಲೆ ನಿತ್ಯ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಕ್ಕೆ ನಿಯಂತ್ರಣವೇ ಇಲ್ಲ. ಫೊಕ್ಸೊನಂತಹ ಕಾನೂನು ಜಾರಿಯಾದರೂ ಬಾಲೆಯರು ಲೈಂಗಿಕ ಕಿರುಕುಳದಿಂದ ಮುಕ್ತರಾಗಿಲ್ಲ.

ಇನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಕೆಲಸಗಳಲ್ಲಿ ದುಡಿಯುವ ಮಹಿಳೆಯರಿಗಂತೂ ವಿಕೃತ ಮನಸ್ಥಿತಿಯ ಪುರುಷರಿಂದ ಲೈಂಗಿಕ ಕಿರುಕುಳ ತಪ್ಪುತ್ತಿಲ್ಲ. ಮಹಿಳೆಯರು ದುಡಿಯುವ ಸ್ಥಳದಲ್ಲಿ ನಡೆಯುವ ಲೈಂಗಿಕ ಶೋಷಣೆಯನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತಂದಿರುವ ಕಾನೂನೇThe Prevention of Sexual Harassment (PoSH) Act 2013.

ಸರಕಾರಿ ಅಥವಾ ಖಾಸಗಿ ವಲಯದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಗಟ್ಟುವ, ನಿಷೇಧಿಸುವ ಹಾಗೂ ಪರಿಹಾರ ಒದಗಿಸುವ ಉದ್ದೇಶದಿಂದಲೇ ‘ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ (PoSH) ರೂಪಿಸಲಾಗಿದೆ. ಸಂಸ್ಥೆ ಅಥವಾ ಕಚೇರಿ ಯಾವುದೇ ಇರಲಿ, ಅಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಲೈಂಗಿಕ ಕಿರುಕುಳದಿಂದ ರಕ್ಷಣೆ ಒದಗಿಸುವುದು ಪಾಶ್ ಕಾನೂನಿನ ಪ್ರಕಾರ ಕಡ್ಡಾಯವಾಗಿದೆ.

ಪಾಶ್ ಕಾಯ್ದೆಯ ಕಲಂ 4ರ ನಿಬಂಧನೆಗಳ ಪ್ರಕಾರ ಪ್ರತೀ ಉದ್ಯೋಗದಾತರು ತಮ್ಮ ಸಂಸ್ಥೆ/ಕಚೇರಿಗಳಲ್ಲಿ ಬರುವ ಲೈಂಗಿಕ ಕಿರುಕುಳದ ದೂರುಗಳ ವಿಚಾರಣೆಗಾಗಿ ಆಂತರಿಕ ದೂರು ಸಮಿತಿ(ಐಸಿಸಿ) ಹೆಸರಿನ ಕಮಿಟಿಯನ್ನು ರಚಿಸಬೇಕಿದೆ. ಕೆಲಸದ ಸ್ಥಳದಲ್ಲಿ ಅವ್ಯಾಹತವಾಗಿ ಯಾವುಯಾವುದೋ ರೂಪದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಕುರಿತು ಮೇಲಧಿಕಾರಿಗಳಿಗೆ ದೂರು ಕೊಡಲು ಸಂತ್ರಸ್ತೆಯರು ಹಿಂದೇಟು ಹಾಕುತ್ತಾರೆ. ಎಲ್ಲಿ ತಮ್ಮ ಕೆಲಸಕ್ಕೆ ಸಂಚಕಾರ ಬರುವುದೋ ಎನ್ನುವ ಅವ್ಯಕ್ತ ಭಯದಿಂದ ಸಾಧ್ಯವಾದಷ್ಟೂ ಕಿರುಕುಳವನ್ನು ಸಹಿಸಿಕೊಳ್ಳುವ ಅನಿವಾರ್ಯತೆಗೆ ಅನೇಕ ಮಹಿಳಾ ಉದ್ಯೋಗಿಗಳು ಒಳಗಾಗುತ್ತಾರೆ. ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂತ್ರಸ್ತ ಮಹಿಳಾ ಉದ್ಯೋಗಿಗಳು ಧೈರ್ಯವಾಗಿ ಆಯಾ ಸಂಸ್ಥೆಯಲ್ಲಿ ರಚಿತವಾದ ಆಂತರಿಕ ದೂರು ಸಮಿತಿಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಬಹುದಾಗಿದೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಪೀಡಕರ ವಿರುದ್ಧ ಮಹಿಳೆಯರಿಗೆ ರಕ್ಷಣೆ ಕೊಡುವುದಕ್ಕಾಗಿಯೇ ಆಂತರಿಕ ದೂರು ಸಮಿತಿಗಳನ್ನು ರಚಿಸಬೇಕೆಂದು ಪಾಶ್ ಕಾನೂನು ಒತ್ತಾಯಿಸುತ್ತದೆ. ಈಗಾಗಲೇ ಈ ರೀತಿಯ ಸಮಿತಿಗಳನ್ನು ಅನೇಕ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ರಚಿಸಿ ಪಾಶ್ ಕಾನೂನನ್ನು ಅಳವಡಿಸಿಕೊಂಡಿವೆ. ಸಮಿತಿಯ ಭಯದಿಂದಲಾದರೂ ಸ್ತ್ರೀ ಪೀಡಕರು ನಿಯಂತ್ರಣಕ್ಕೆ ಒಳಗಾಗುತ್ತಾರೆಂದು ಅಪೇಕ್ಷಿಸಲಾಗುತ್ತಿದೆ.

ಆದರೆ... ಚಲನಚಿತ್ರ ಕ್ಷೇತ್ರ ಎನ್ನುವುದು ಭಾರತದ ಬಹುತೇಕ ಭಾಷೆ ಹಾಗೂ ರಾಜ್ಯಗಳಲ್ಲಿ ವಿಸ್ತರಣೆಗೊಂಡಿದೆ. ಈ ಕ್ಷೇತ್ರದಲ್ಲಿ ಅನೇಕ ಸ್ತರಗಳಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಕಲಾವಿದೆಯರಾಗಿ, ತಂತ್ರಜ್ಞರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಅಷ್ಟೇ ಯಾಕೆ ಸಿನೆಮಾ ನೇಪಥ್ಯದಲ್ಲಿ ಹಲವಾರು ಮಹಿಳೆಯರು ಪುರುಷರ ಜೊತೆಗೂಡಿ ದುಡಿಯುತ್ತಿದ್ದಾರೆ. ಸಿನೆಮಾ ಕ್ಷೇತ್ರ ಎನ್ನುವುದು ದೊಡ್ಡ ಉದ್ಯಮವಾಗಿದೆ. ಸಾವಿರಾರು ಕೋಟಿ ರೂ.ಗಳ ವ್ಯವಹಾರ ನಿತ್ಯ ನಡೆಯುವಂತಹ ಕ್ಷೇತ್ರವಾಗಿದೆ. ಆದರೆ ಇಲ್ಲಿಯವರೆಗೂ ಮಹಿಳೆಯರ ಸುರಕ್ಷತೆ ಎನ್ನುವುದು ಮರೀಚಿಕೆಯಾಗಿದೆ. ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳಿಗೆ ಕೆಲಸದ ಸ್ಥಳದಲ್ಲಿ ರಕ್ಷಣೆ ಇಲ್ಲದಾಗಿದೆ. ಪೀಡಕ ಪುರುಷರು ಒಡ್ಡುವ ಆಸೆ, ಆಮಿಷ, ಬಲವಂತಕ್ಕೆ ಅನೇಕ ಕಲಾವಿದೆಯರು ಸಂತ್ರಸ್ತರಾಗಿದ್ದಾರೆ ಎಂಬ ಆರೋಪ ಅವ್ಯಾಹತವಾಗಿ ಕೇಳಿ ಬರುತ್ತಲೇ ಇದೆ.

ಈ ಕ್ಷೇತ್ರದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ವಿರುದ್ಧ ‘ಮೀ ಟೂ’ ಚಳವಳಿ ನಡೆದು ಅನೇಕ ಸಂಭಾವಿತರ ಮುಖವಾಡಗಳು ಕಳಚಿ ಬಿದ್ದವು. ಸಂತ್ರಸ್ತ ಕಲಾವಿದರುಗಳು ಧೈರ್ಯವಾಗಿ ತಮ್ಮ ಮೇಲಾದ ಲೈಂಗಿಕ ಪೀಡಣೆಯ ವಿರುದ್ಧ ಧ್ವನಿ ಎತ್ತಿದಾಗ ಬಣ್ಣದ ಲೋಕದ ನಿಜ ಬಣ್ಣ ಬಯಲಾಗತೊಡಗಿತು. ಆಗಲೇ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಸುರಕ್ಷತೆಯ ಅಗತ್ಯದ ಕುರಿತು ಆಗ್ರಹಗಳು ಹೆಚ್ಚಾಗ ತೊಡಗಿದವು. ಪಾಶ್ ಕಾನೂನಿನ ಅಡಿಯಲ್ಲಿ ಸಮಿತಿ ರಚಿಸಬೇಕೆಂದು ಒತ್ತಾಯವೂ ಹೆಚ್ಚಾಗತೊಡಗಿತು.

ಇಂತಹ ಒತ್ತಡಗಳಿಂದಾಗಿ ಕೇರಳ ಸರಕಾರವು ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನಕ್ಕೆ ನ್ಯಾಯಮೂರ್ತಿ ಕೆ.ಹೇಮಾರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಈ ಸಮಿತಿಯ ವರದಿ ಬಹಿರಂಗಗೊಂಡು ಚಿತ್ರೋದ್ಯಮದಲ್ಲಿ ಸಂಚಲನವನ್ನೇ ಹುಟ್ಟು ಹಾಕಿತು. ಮಲಯಾಳಂ ಚಿತ್ರರಂಗದ ಅನೇಕ ದಿಗ್ಗಜರ ಸ್ತ್ರೀಪೀಡಕತನ ಬಟಾಬಯಲಾಯಿತು.

ಮಲಯಾಳಂ ಸಿನಿರಂಗದ ಲೈಂಗಿಕ ಕಿರುಕುಳ ಪ್ರಕರಣಗಳು ದೇಶಾದ್ಯಂತ ಆತಂಕ ಮತ್ತು ಆಕ್ರೋಶವನ್ನು ಹುಟ್ಟು ಹಾಕಿದವು. ಕನ್ನಡ ಸಿನೆಮಾಕ್ಷೇತ್ರಕ್ಕೆ ಸಂಬಂಧಿಸಿದಂತೆಯೇ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ಮಾಡಿಸಬೇಕೆಂಬ ಒತ್ತಾಯ ಹೆಚ್ಚಾಯಿತು. ಕಳೆದ ಸೆಪ್ಟಂಬರ್ ತಿಂಗಳಲ್ಲಿ ಫೈರ್ Film industry for Rights & Equality) ಸಂಸ್ಥೆಯ ಸದಸ್ಯರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಸಮಿತಿಯೊಂದನ್ನು ರಚಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಇದರಿಂದಾಗಿ ಎಚ್ಚೆತ್ತ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿಯವರು ಕನ್ನಡ ಚಲನಚಿತ್ರರಂಗದ ಮಹಿಳಾ ಕಲಾವಿದರು ಹಾಗೂ ತಂತ್ರಜ್ಞರು ಮತ್ತು ಕಾರ್ಮಿಕರ ರಕ್ಷಣೆಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು (ಕೆಎಫ್‌ಸಿಸಿ) ಆದಷ್ಟು ಬೇಗ ಪಾಶ್ ಕಾನೂನಿನಂತೆ ಲೈಂಗಿಕ ದೌರ್ಜನ್ಯ ತಡೆಗಾಗಿ ಆಂತರಿಕ ದೂರು ಸಮಿತಿಯನ್ನು ರಚಿಸಬೇಕು ಎಂದು ಸೆಪ್ಟಂಬರ್ 16ರಂದು ಸೂಚಿಸಿದರು.

ಕೆಎಫ್‌ಸಿಸಿ ಸಭೆಯಲ್ಲಿ ಈ ಸಮಿತಿ ರಚನೆಯ ಬಗ್ಗೆ ಸಭೆಗಳಾಗಿ ವಿರೋಧ ವ್ಯಕ್ತವಾದವು. ಪುರುಷಪ್ರಧಾನ ವ್ಯವಸ್ಥೆಯ ಪ್ರತಿಬಿಂಬವಾಗಿರುವ ಫಿಲಂ ಚೇಂಬರ್‌ನಲ್ಲಿರುವ ಬಹುತೇಕರು ಸಮಿತಿ ರಚನೆಯ ಅಗತ್ಯವನ್ನೇ ಪ್ರಶ್ನಿಸಿದರು. ನಮ್ಮ ಫಿಲಂ ಇಂಡಸ್ಟ್ರಿಯಲ್ಲಿ ಎಲ್ಲವೂ ಸರಿಯಾಗಿದೆಯಾದ್ದರಿಂದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇಲ್ಲವಾಗಿರುವುದರಿಂದ ಲೈಂಗಿಕ ದೌರ್ಜನ್ಯ ತಡೆ ಸಮಿತಿಯ ಅಗತ್ಯವೇ ಇಲ್ಲವೆಂದು ವಾದಿಸಿದರು. ಸಭೆಯಲ್ಲಿ ಗಲಾಟೆ ಮಾಡಿದರು. ಫೈರ್ ಸಂಸ್ಥೆಯ ಮೇಲೆಯೇ ಆರೋಪ ಮಾಡಿದರು. ಆದರೆ ಇದು ಯಾವುದಕ್ಕೂ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಯವರು ಮಣಿಯದೆ ಇದ್ದಾಗ ಸಮಿತಿಯ ರಚನೆಗೆ ಸಮಯ ಬೇಕೆಂದು ಚೇಂಬರ್‌ನವರು ಕೇಳಿದರು. ಆದರೆ ಎರಡು ತಿಂಗಳು ಕಳೆದರೂ ಆ ಸಮಯ ಬರಲೇ ಇಲ್ಲ. ಫೈರ್ ಸಂಸ್ಥೆಯವರು ಸುಮ್ಮನಿರಲಿಲ್ಲ. ನಾಗಲಕ್ಷ್ಮೀಯವರ ಮೇಲೆ ಒತ್ತಡ ತಂದರು. ನಾಗಲಕ್ಷ್ಮೀಯವರು ಚೇಂಬರಿನ ವಿಳಂಬ ಧೋರಣೆಯ ಮೇಲೆ ಕೆಂಡಾಮಂಡಲರಾಗಿ ತಮ್ಮ ಅಸಮಾಧಾನ ಹೊರಹಾಕಿದರು. ಈ ಉದಾಸೀನತೆಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸುವುದಾಗಿ ಎಚ್ಚರಿಸಿದರು. ಬೇರೆ ದಾರಿ ಕಾಣದೇ ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್‌ರವರು ಫೈರ್ ಸಂಸ್ಥೆಯ ಕವಿತಾ ಲಂಕೇಶ್ ರವರ ಅಧ್ಯಕ್ಷತೆಯಲ್ಲಿ ವಿವಿಧ ರಂಗಗಳನ್ನು ಪ್ರತಿನಿಧಿಸುವ 11 ಸದಸ್ಯರುಗಳನ್ನೊಳಗೊಂಡ ಸಮಿತಿಯನ್ನು ರಚಿಸಿ ಡಿಸೆಂಬರ್ 2ರಂದು ಅಧಿಕೃತವಾಗಿ ಘೋಷಣೆ ಮಾಡಿದರು. ಚೇಂಬರ್ ಲೆಟರ್ ಹೆಡ್‌ನಲ್ಲಿ ವಿವರ ದಾಖಲಿಸಿ ಸಹಿ ಮಾಡಿ ಪತ್ರಿಕಾ ಹೇಳಿಕೆ ಕೊಟ್ಟರು. ಸದ್ಯಕ್ಕೆ ಸಮಿತಿಯಾದರೂ ರಚನೆ ಆಯಿತಲ್ಲವೆಂದು ನಿಟ್ಟುಸಿರು ಬಿಡುವಷ್ಟರಲ್ಲಿ ಫಿಲಂ ಚೇಂಬರಿನ ಪುರುಷಾಹಂಕಾರ ಪೀಡಿತ ಕೆಲವರು ಸಮಿತಿಯ ರಚನೆಗೆ ಉಗ್ರವಾದ ಪ್ರತಿರೋಧ ವ್ಯಕ್ತಪಡಿಸಿದರು. ಇದನ್ನು ಅಪೇಕ್ಷಿಸದೇ ಇದ್ದ ಚೇಂಬರ್ ಅಧ್ಯಕ್ಷರು ಕಕ್ಕಾಬಿಕ್ಕಿಯಾದರು. ಸಮಿತಿ ರಚಿಸುವುದೇ ಆದರೆ ಅದಕ್ಕೆ ತಾವೇ ಸದಸ್ಯರಾಗಬೇಕೆಂಬ ಒತ್ತಾಯ ಕೆಲವರದ್ದಾಗಿತ್ತು. ಈ ಹಿಂದಿನ ಸಭೆಯಲ್ಲಿ ಫಾಶ್ ಸಮಿತಿ ರಚನೆಗೆ ವಿರೋಧಿಸಿದವರೇ ಈಗ ಈ ಕೋರಿಕೆ ಇಟ್ಟರಂತೆ. ಹೇಗೂ ಕಾನೂನಿನ ಪ್ರಕಾರ ಸಮಿತಿ ರಚನೆ ತಡೆಯಲು ಸಾಧ್ಯವಿಲ್ಲವಾದ್ದರಿಂದ ಆ ಸಮಿತಿಯಲ್ಲೇ ಸೇರಿಕೊಂಡು ಮುಂದೆ ತಮಗೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂಬುದು ಕೆಲವರ ಒತ್ತಾಸೆಯಾಗಿತ್ತು. ಅತ್ತ ಮಹಿಳಾ ಆಯೋಗದ ಒತ್ತಾಯ, ಇತ್ತ ಫಿಲಂ ಚೇಂಬರಿನ ಕೆಲವರ ವಿರೋಧ ಇವೆರಡರ ನಡುವೆ ಏನು ಮಾಡಬೇಕೆಂಬುದೇ ತಿಳಿಯದ ಸುರೇಶ್‌ರವರು ಸಮಿತಿ ರಚನೆಯ ನಿರ್ಧಾರವನ್ನೇ ಸಂಜೆ ವೇಳೆಗೆ ವಾಪಸ್ ಪಡೆದು ಯೂಟರ್ನ್ ಹೊಡೆದರು. ಅದಕ್ಕೆ ಕೊಟ್ಟ ಕಾರಣಗಳೂ ವಿಚಿತ್ರವಾಗಿವೆ.

ಡಿಸೆಂಬರ್ 14ರಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಘೋಷಣೆಯಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದೆ. ಕಾನೂನು ಪ್ರಕಾರ ಈ ರೀತಿ ಸಮಿತಿ ರಚಿಸಲು ನನಗೆ ಅಧಿಕಾರವಿಲ್ಲ, ಹಾಲಿ ಅಧ್ಯಕ್ಷನಾಗಿ ಸಹಿ ಮಾಡಿದ್ದರೂ ಅದು ಊರ್ಜಿತವಾಗುವುದಿಲ್ಲ. ಆದ್ದರಿಂದ ಫಾಶ್ ಸಮಿತಿ ರಚನೆಯನ್ನು ತಡೆ ಹಿಡಿದಿದ್ದೇನೆ ಹಾಗೂ ಮಹಿಳಾ ಆಯೋಗಕ್ಕೂ ವಿಷಯ ತಿಳಿಸಿದ್ದೇನೆ ಎಂಬುದು ಎನ್.ಎಂ. ಸುರೇಶ್‌ರವರ ಯೂಟರ್ನ್ ನಡೆಗೆ ಸಮರ್ಥನೆಯಾಗಿತ್ತು.

ಚುನಾವಣೆ, ನೀತಿ ಸಂಹಿತೆ ಎಂಬುದೆಲ್ಲಾ ಫಾಶ್ ಸಮಿತಿ ರಚನೆಗೆ ಮೊದಲು, ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳ ಘೋಷಣೆಗೆ ಮೊದಲು ಚೆಂಬರಿನ ಹಾಲಿ ಅಧ್ಯಕ್ಷರಿಗೆ ಗೊತ್ತಿರಲಿಲ್ಲವೇ? ಗೊತ್ತಿತ್ತು.. ಆದರೆ ತಮ್ಮ ಮಂಡಳಿಯ ಸದಸ್ಯರಿಂದಲೇ ಈ ರೀತಿಯ ವಿರೋಧ ಬರುತ್ತದೆ ಎಂಬುದು ಗೊತ್ತಿರಲಿಲ್ಲ. ಯಾವಾಗ ಸಮಿತಿಯ ಸದಸ್ಯಗಿರಿಯ ಆಕಾಂಕ್ಷಿತರು ಹಾಗೂ ಮಹಿಳಾ ಪರವಾದ ಇಂತಹ ಸಮಿತಿಯೇ ಅನಗತ್ಯ ಎನ್ನುವ ಪುರುಷಾಹಂಕಾರ ಪೀಡಿತರುಗಳು ಅಧ್ಯಕ್ಷರ ಮೇಲೆ ದಂಡೆತ್ತಿ ದಾಳಿಗೆ ಇಳಿದರೋ ಆಗ ಅಧ್ಯಕ್ಷರು ತಮ್ಮ ರಕ್ಷಣೆಗಾಗಿ ಯೂಟರ್ನ್ ತೆಗೆದುಕೊಳ್ಳದೆ ಬೇರೆ ದಾರಿ ಇರಲಿಲ್ಲ. ಚುನಾವಣೆಯ ನೆಪ ಹೇಳಿ ಬೆಳಗ್ಗೆ ರಚಿಸಿದ ಸಮಿತಿಯನ್ನು ಸಂಜೆಗೆ ತಡೆಹಿಡಿದರು.

ಫಾಶ್ ಕಾನೂನನ್ನು ಅಳವಡಿಸದೆ ಇರುವುದಕ್ಕೆ ನ್ಯಾಯಾಲಯ ದಲ್ಲಿ ಪ್ರಶ್ನಿಸಬಹುದಾಗಿದೆ. ಕಾನೂನಿನ ಉಲ್ಲಂಘನೆ ಮಾಡಿದ್ದಕ್ಕೆ ನ್ಯಾಯಾಂಗದ ಕ್ರಮಕ್ಕೂ ಆಗ್ರಹಿಸಬಹುದಾಗಿದೆ. ಇಷ್ಟಕ್ಕೂ ಪಾಶ್ ಕಾನೂನಿನ ಪ್ರಕಾರ ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚನೆಗೆ ಫಿಲಂ ಚೇಂಬರ್ ಒಪ್ಪಿಗೆಯೇ ಬೇಕಾಗಿಲ್ಲ. ಆದರೂ ಫಿಲಂ ಚೇಂಬರ್ ಸಹಕಾರದಿಂದಲೇ ಸಮಿತಿ ರಚನೆಯಾಗಲಿ ಎನ್ನುವುದು ಫೈರ್ ಸಂಸ್ಥೆ ಹಾಗೂ ಮಹಿಳಾ ಆಯೋಗದ ಉದ್ದೇಶವಾಗಿತ್ತು. ಈಗಾಗಲೇ ಮೂರು ತಿಂಗಳುಗಳ ಕಾಲ ಫಿಲಂ ಚೇಂಬರ್‌ನವರು ಸಮಿತಿ ಮಾಡದೆ ಕಾಲಹರಣ ಮಾಡಿಯಾಗಿದೆ. ಚೇಂಬರ್ ಚುನಾವಣೆಯ ಸಂದರ್ಭದಲ್ಲಿ ಸಮಿತಿ ರಚನೆ ಮಾಡಿದ ನಿರ್ಧಾರವನ್ನು ಹಿಂಪಡೆಯಲಾಗಿದೆ. ಡಿಸೆಂಬರ್ 14ರ ನಂತರವೂ ವಾಣಿಜ್ಯ ಮಂಡಳಿಯವರು ಈಗ ರಚಿಸಲಾದ ಸಮಿತಿಗೆ ಅನುಮೋದನೆ ಕೊಡದೆ ಮತ್ತೆ ಮೊಂಡಾಟವನ್ನೇ ಮುಂದುವರಿಸಿದರೆ ನ್ಯಾಯಾಲಯದ ಮೂಲಕವೇ ಸಮಿತಿ ರಚನೆಗೆ ಆದೇಶ ಪಡೆಯಬೇಕಾಗುತ್ತದೆ. ಈ ಹಿಂದೆ ಡಬ್ಬಿಂಗ್ ಪ್ರಕರಣದಲ್ಲಿ ಹಠಮಾರಿ ಧೋರಣೆ ತೆಗೆದುಕೊಂಡು ನ್ಯಾಯಾಲಯದಿಂದ ಫಿಲಂ ಚೇಂಬರ್ ಛೀಮಾರಿ ಹಾಕಿಸಿಕೊಂಡು ಲಕ್ಷಾಂತರ ರೂಪಾಯಿ ದಂಡ ಕಟ್ಟಿದೆ. ಈಗ ಪಾಶ್ ಕಾನೂನು ಉಲ್ಲಂಘನೆಯ ಕೇಸಿನಲ್ಲಿ ಮತ್ತೆ ನ್ಯಾಯಾಲಯದಿಂದ ಮುಖಭಂಗ ಅನುಭವಿಸುವುದಂತೂ ಶತಸಿದ್ಧ.

ಈಗ ರಾಜ್ಯ ಮಹಿಳಾ ಆಯೋಗವು ದಿಟ್ಟ ಹೆಜ್ಜೆ ಇಡಬೇಕಿದೆ. ಚಲನಚಿತ್ರರಂಗದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ರಕ್ಷಣೆಗಾಗಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇನ್ನೊಂದು ತಿಂಗಳ ಒಳಗಾಗಿ ಈಗ ರಚನೆಗೊಂಡ ಸಮಿತಿಯನ್ನು ಮುಂದುವರಿಸದೇ ಇದ್ದಲ್ಲಿ ಕಾನೂನಿನ ಕ್ರಮವನ್ನು ಎದುರಿಸಲು ಸಿದ್ಧರಾಗಿ ಎಂದು ಫಿಲಂ ಚೇಂಬರಿಗೆ ಲಿಖಿತ ಎಚ್ಚರಿಕೆ ಕೊಡಬೇಕಿದೆ. ಫೈರ್ ಸಂಸ್ಥೆಯವರು ಫಿಲಂ ಚೇಂಬರಿನ ಕಳ್ಳಾಟದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿ ತಾರ್ಕಿಕ ಅಂತ್ಯಕಾಣಿಸಬೇಕಿದೆ.

ಕಾನೂನು ಎನ್ನುವುದು ಎಲ್ಲರಿಗೂ ಸಲ್ಲುವಂತಹುದು. ಸ್ತ್ರೀಪೀಡಕರನ್ನು ನಿಯಂತ್ರಿಸಲು ಜಾರಿಗೆ ಬಂದ ಪಾಶ್ ಕಾನೂನನ್ನು ಎಲ್ಲಾ ಸರಕಾರಿ ಹಾಗೂ ಖಾಸಗಿ ಸಂಸ್ಥೆಯವರೂ ಪಾಲಿಸಲೇಬೇಕು. ಪಾಲಿಸದೆ ಮೊಂಡಾಟ ಮಾಡುವವರು ಕಾನೂನಿನ ಕ್ರಮಕ್ಕೆ ಒಳಗಾಗಬೇಕು. ಇದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಹೊರತಲ್ಲ. ಪಾಶ್ ಕಾನೂನಿನ ಅಡಿಯಲ್ಲಿ ಮಹಿಳೆಯರ ಸುರಕ್ಷೆಗೆ ಖಾತರಿ ಬೇಕೇ ಬೇಕು. ಮತ್ತೆ ಮೀ ಟೂ ಪ್ರಕರಣಗಳು ಚಲನಚಿತ್ರ ಕ್ಷೇತ್ರದಲ್ಲಿ ಸದ್ದು ಮಾಡದಂತೆ ತಡೆಯಬೇಕು. ಕಾನೂನು ಎನ್ನುವುದು ಎಲ್ಲರಿಗೂ ಸಲ್ಲುವಂತಹುದು. ಸ್ತ್ರೀಪೀಡಕರನ್ನು ನಿಯಂತ್ರಿಸಲು ಜಾರಿಗೆ ಬಂದ ಪಾಶ್ ಕಾನೂನನ್ನು ಎಲ್ಲಾ ಸರಕಾರಿ ಹಾಗೂ ಖಾಸಗಿ ಸಂಸ್ಥೆಯವರೂ ಪಾಲಿಸಲೇಬೇಕು. ಪಾಲಿಸದೆ ಮೊಂಡಾಟ ಮಾಡುವವರು ಕಾನೂನಿನ ಕ್ರಮಕ್ಕೆ ಒಳಗಾಗಬೇಕು. ಇದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಹೊರತಲ್ಲ. ಪಾಶ್ ಕಾನೂನಿನ ಅಡಿಯಲ್ಲಿ ಮಹಿಳೆಯರ ಸುರಕ್ಷೆಗೆ ಖಾತರಿ ಬೇಕೇ ಬೇಕು. ಮತ್ತೆ ಮೀ ಟೂ ಪ್ರಕರಣಗಳು ಚಲನಚಿತ್ರ ಕ್ಷೇತ್ರದಲ್ಲಿ ಸದ್ದು ಮಾಡದಂತೆ ತಡೆಯಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಶಿಕಾಂತ ಯಡಹಳ್ಳಿ

contributor

Similar News