ಆರ್‌ಬಿಐ ಹೇಳುವಂತೆ ದೇಶದಲ್ಲಿ ಉದ್ಯೋಗಗಳು ಏರಿಕೆಯಾಗಿರುವುದು ನಿಜವೇ?
ಶ್ರೀಮಂತರು ಶ್ರೀಮಂತರಾಗುತ್ತಲೇ ಇರುವಾಗ ಬಡವರು ಇನ್ನಷ್ಟು ಬಡವರಾಗುತ್ತಾ ಹೋಗುತ್ತಿದ್ದಾರೆ. ನಿರುದ್ಯೋಗ, ಯಾವುದೋ ಒಂದು ಕೆಲಸ, ಕಡಿಮೆ ಸಂಬಳದ ಕೆಲಸ ಇಂಥ ಸುಳಿಯಲ್ಲಿ ಎಲ್ಲರೂ ಸಿಲುಕಿಕೊಂಡಿದ್ದಾರೆ. ಆದರೆ ತನ್ನ ಕಾಲದಲ್ಲಿ ದೇಶದಲ್ಲಿ ಆತ್ಮವಿಶ್ವಾಸ ತುಂಬು ತುಳುಕುತ್ತಿದೆ ಎನ್ನುತ್ತಿದ್ದಾರೆ ಮೋದಿ. ಹೂಡಿಕೆ ಹೆಚ್ಚುತ್ತಿಲ್ಲ, ವಿದೇಶಿ ಹೂಡಿಕೆಯೂ ಬರುತ್ತಿಲ್ಲ. ಮೊದಲಿದ್ದಂತೆ ಉದ್ಯೋಗದ ಅವಕಾಶಗಳೂ ಇಲ್ಲ. ಆದರೆ ಆರ್‌ಬಿಐ ಮಾತ್ರ ಈಗ ದೇಶದಲ್ಲಿ ಉದ್ಯೋಗಗಳು ದುಪ್ಪಟ್ಟಾಗಿವೆ ಎಂದು ಹೇಳುತ್ತಿದೆ.
2022-23ಕ್ಕೆ ಹೋಲಿಸಿಕೊಂಡರೆ, 2023-24ರಲ್ಲಿ ಉದ್ಯೋಗಗಳು ದುಪ್ಪಟ್ಟಾಗಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳುತ್ತಿದೆ.
ಆರ್‌ಬಿಐ ಹೇಳಿರುವುದನ್ನು ಕೇಳಿಸಿಕೊಂಡು ಜನ ಸಂಭ್ರಮಿಸಬೇಕೋ ಅಥವಾ ಯಾವ ವಲಯದಲ್ಲಿ ಉದ್ಯೋಗಗಳ ಏರಿಕೆಯಾಗಿದೆ, ಆ ಉದ್ಯೋಗಗಳ ಮಟ್ಟ, ಗುಣಮಟ್ಟ ಎಂಥದು ಎಂದು ನೋಡಬೇಕೋ ಎಂಬುದು ಈಗಿರುವ ಪ್ರಶ್ನೆ.
ಆರ್‌ಬಿಐ ಹೇಳುತ್ತಿರುವ ಆ ಉದ್ಯೋಗಗಳಿಗೆ ಪಿಎಫ್ ಮತ್ತು ಗ್ರ್ಯಾಚುಯಿಟಿ ಸವಲತ್ತು ಇದೆಯೇ ಇಲ್ಲವೆ? ಅವರಲ್ಲಿ ನಿಜವಾಗಿಯೂ ಎಷ್ಟು ಕ್ಯಾಶುವಲ್ ಕೆಲಸಗಾರರಿದ್ದಾರೆ? ಸಿಗುವ ಸಂಬಳವೆಷ್ಟು? ಸ್ವಯಂ ಉದ್ಯೋಗಿಗಳ ಪ್ರಮಾಣ ಎಷ್ಟು? ಅವರ ಗಳಿಕೆ ಎಷ್ಟು? ಎಂಬ ಪ್ರಶ್ನೆಗಳೂ ಇವೆ.
ಬೇರೆ ಬೇರೆ ವಲಯಗಳಲ್ಲಿನ ವಸ್ತುಸ್ಥಿತಿಯನ್ನು ಬಿಡಿಬಿಡಿಯಾಗಿ ನೋಡದೆ ಹೋದರೆ ಸಮಸ್ಯೆಯ ಆಳ-ಅಗಲ ಅರ್ಥವಾಗುವುದಿಲ್ಲ.
ಸಿಟಿ ಬ್ಯಾಂಕ್‌ನ ಒಂದು ವರದಿಯನ್ನು ಬ್ಲೂಮ್ ಬರ್ಗ್ ಪ್ರಕಟಿಸಿದ್ದು, ಅದರ ಪ್ರಕಾರ ಭಾರತ ಮುಂದಿನ ದಶಕದಲ್ಲಿ ವರ್ಷಕ್ಕೆ ಸುಮಾರು 1.2 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬೇಕಾಗುತ್ತದೆ ಮತ್ತು ಅದಕ್ಕಾಗಿ ಅದು ಹೆಣಗಾಡುವ ಸ್ಥಿತಿ ಇದೆ.
ಪ್ರಸಕ್ತ ಶೇ.7ರ ಜಿಡಿಪಿ ಬೆಳವಣಿಗೆ ದರ ಆಧರಿಸಿ, ವರ್ಷಕ್ಕೆ 80 ರಿಂದ 90 ಲಕ್ಷ ಉದ್ಯೋಗಗಳನ್ನು ಮಾತ್ರ ಸೃಷ್ಟಿಸಲು ಸಾಧ್ಯ ಎಂದು ವರದಿ ಹೇಳಿದೆ.
ಹೂಡಿಕೆ, ಉದ್ಯೋಗ, ಸಂಬಳ ಇತ್ಯಾದಿಗಳ ಕುರಿತ ವರದಿಗಳನ್ನು ಪರಿಶೀಲಿಸಿದರೆ, ಅಲ್ಲಿರುವುದಕ್ಕೂ ಆರ್‌ಬಿಐ ಹೇಳುತ್ತಿರುವುದಕ್ಕೂ ತಾಳೆಯಾಗುವುದಿಲ್ಲ.
ಉದ್ಯೋಗಗಳ ಮಟ್ಟ ಎಂಥದು, ಸಂಬಳ ಎಷ್ಟು ಮತ್ತು ಆ ಸಂಬಳದಿಂದ ಬೆಲೆಯೇರಿಕೆಯ ಸವಾಲನ್ನು ಎದುರಿಸಿ ಜೀವನ ಸಾಗಿಸಬಹುದೆ?
ಸಿಟಿ ಬ್ಯಾಂಕ್ ದೇಶದಲ್ಲಿನ ವಾಸ್ತವದ ಬಗ್ಗೆ ಹೇಳಿರುವುದು ಆರ್‌ಬಿಐಗೆ ಮುಜುಗರ ತಂದಿರಲೂ ಬಹುದು.
ಕೆಲವು ವರದಿಗಳ ಕಡೆಗಮನ ಹರಿಸುವುದಾದರೆ,
1.ಇದೇ ಜೂನ್ 23ರಂದು ‘ಬಿಸಿನೆಸ್ ಸ್ಟ್ಯಾಂಡರ್ಡ್’ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ,
7 ವರ್ಷಗಳಲ್ಲಿ ಅಂದರೆ 2015-16ರಿಂದ 2022-23ರವರೆಗಿನ ಅವಧಿಯಲ್ಲಿ ಉತ್ಪಾದನಾ ವಲಯದ 18 ಲಕ್ಷ ಅಸಂಘಟಿತ ಉದ್ಯಮಗಳು ಮುಚ್ಚಿವೆ.
54 ಲಕ್ಷ ಜನರ ಪಾಲಿನ ಉದ್ಯೋಗಗಳು ಇಲ್ಲವಾಗಿವೆ.
ಅಸಂಘಟಿತ ವಲಯದಲ್ಲಿ ಮೆಕ್ಯಾನಿಕ್‌ನಂತಹ ಕೆಲಸಗಳು, ಸಣ್ಣಪುಟ್ಟ ಅಂಗಡಿಗಳು ಮೊದಲಾದವು ಬರುತ್ತವೆ.
ಈ ವಲಯದಲ್ಲಿ ಕೆಲಸ ಮಾಡುವವರ ಸಂಖ್ಯೆ ಈಗ ಶೇ.15ರಷ್ಟು ಕಡಿಮೆಯಾಗಿದೆ. ಕಳೆದ ಅಕ್ಟೋಬರ್‌ವರೆಗಿನ ಅಂಕಿಅಂಶಗಳು ಹೇಳುತ್ತಿರುವ ವಾಸ್ತವ ಇದಾಗಿದೆ.
ಆದರೆ ಇದ್ದಕ್ಕಿದ್ದಂತೆ ಆರ್‌ಬಿಐ ವರದಿ ಪ್ರಕಟವಾಗಿ, ಉದ್ಯೋಗಗಳು ದುಪ್ಪಟ್ಟಾಗಿರುವುದಾಗಿ ಹೇಳಿಬಿಡುತ್ತದೆ.
2. ‘ದಿ ಹಿಂದೂ’ ಪತ್ರಿಕೆಯಲ್ಲಿ ಜುಲೈ 10ರಂದು ಪ್ರಕಟ ವಾಗಿರುವ ವರದಿ ಹೇಳುತ್ತಿರುವ ಪ್ರಕಾರ, ನೋಟ್ ಬ್ಯಾನ್, ಜಿಎಸ್‌ಟಿ ಹಾಗೂ ಕೋವಿಡ್ ಪರಿಣಾಮವಾಗಿ ಅಸಂಘಟಿತ ವಲಯದ 1.6 ಕೋಟಿ ನೌಕರಿಗಳು ಇಲ್ಲವಾಗಿವೆ. ಇದು ಬಿಸಿನೆಸ್ ಸ್ಟ್ಯಾಂಡರ್ಡ್ ಉಲ್ಲೇಖಿಸಿರುವುದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಉದ್ಯೋಗಗಳು ಇಲ್ಲವಾಗಿರುವುದನ್ನು ತೋರಿಸುತ್ತಿದೆ.
2016ರಿಂದ 2023ರ ಅವಧಿಯಲ್ಲಿ ರೂ. 11 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ. ನೋಟ್ ಬ್ಯಾನ್ ಮತ್ತು ಜಿಎಸ್‌ಟಿಯಂತೂ ಸಣ್ಣ ಉದ್ಯೋಗಗಳನ್ನು ಸಂಪೂರ್ಣ ಹಾಳುಗೆಡವಿಬಿಟ್ಟಿತು. ಲಕ್ಷಗಟ್ಟಲೆ ಉದ್ಯಮಗಳು ಮುಚ್ಚಿದವು. ಕೋಟಿಗಟ್ಟಲೆ ಮಂದಿಯ ನೌಕರಿ ಹೋಯಿತು.
ಆದರೆ ಇದಾವುದನ್ನೂ ಹೇಳದೆ ಆರ್‌ಬಿಐ ಇದ್ದಕ್ಕಿದ್ದಂತೆ ಉದ್ಯೋಗ ದುಪ್ಪಟ್ಟಾಗಿರುವುದಾಗಿ ಹೇಳತೊಡಗಿದೆ.
3.ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ (ಪಿಎಲ್‌ಎಫ್‌ಎಸ್) ಡೇಟಾ ಪ್ರಕಾರ, ಭಾರತದಲ್ಲಿ 12 ಕೋಟಿ ಉದ್ಯೋಗಿಗಳು ನಿಯಮಿತ ಸಂಬಳ ಪಡೆಯುವವ ರಾಗಿದ್ದಾರೆ. ಆದರೆ ಅವರಿಗೆ ಬರುವ ಸಂಬಳ ಎಷ್ಟು ಗೊತ್ತೆ? ಮಾಸಿಕ ಕೇವಲ 20,000 ರೂ.
ಇನ್ನು ಕ್ಯಾಶುವಲ್ ಆಗಿ ಕೆಲಸ ಮಾಡುವ 100 ಕೋಟಿ ಜನರು ಪಡೆಯುತ್ತಿರುವ ಮಾಸಿಕ ಸಂಬಳ 12,000 ರೂ. ಆಸುಪಾಸಿನಲ್ಲಿದೆ.
ಇಷ್ಟು ದೊಡ್ಡ ಸಂಖ್ಯೆಯ ಜನರ ಗಳಿಕೆ ಏನು ಎಂದು ನೋಡಿದರೆ ಇದು ವಾಸ್ತವ.
ಸಂಬಳವೇ ಇಷ್ಟು ಕಡಿಮೆ ಎನ್ನುವುದು ಒಂದೆಡೆಯಾದರೆ, ಈ ಸಂಬಳದಲ್ಲಿ ಏರಿಕೆಯಾಗುವುದಿಲ್ಲ ಎಂಬುದು ಮತ್ತೊಂದು ಕಟು ವಾಸ್ತವ. ಅಲ್ಲದೆ ಯಾವುದೇ ಸಾಮಾಜಿಕ ಭದ್ರತೆಯೂ ಇಲ್ಲ. ಹೀಗಿರುವಾಗ ಉದ್ಯೋಗಗಳು ಡಬಲ್ ಆಗಿವೆ ಎಂದರೆ ನಂಬಲು ಸಾಧ್ಯವೆ?
ವರದಿ ಪ್ರಕಾರ,
2022ರಲ್ಲಿ 9.8 ಕೋಟಿ ಜನರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದರು. 2023ರಲ್ಲಿ 10.96 ಕೋಟಿ ಆಯಿತು. 2016ಕ್ಕಿಂತ ಇದು ಸ್ವಲ್ಪ ಕಡಿಮೆ. ಆಗ 11.13 ಕೋಟಿ ಜನರು ಈ ವಲಯದಲ್ಲಿ ಕೆಲಸದಲ್ಲಿದ್ದರು.
ಅಸಂಘಟಿತ ಕ್ಷೇತ್ರದ ಪೂರ್ತಿ ಸ್ಥಿತಿಯೇ ಹದಗೆಟ್ಟು ಹೋಗಿದೆ. ಇದೆಲ್ಲವನ್ನೂ ನೋಡಿದರೆ, ಕೋವಿಡ್ ನೆಪ ಹೇಳಿ ಸರಕಾರ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ.
ಐಐಟಿಯಲ್ಲಿ ಓದಿದವರಿಗೇ ಉದ್ಯೋಗ ಕೊಡಲಾರದ ಸ್ಥಿತಿಯಲ್ಲಿದೆ ಸರಕಾರ. ಕೆಲಸ ಸಿಕ್ಕಿದರೂ ಸಂಬಳ ಕಡಿಮೆ.
4. ‘ಇಕನಾಮಿಕ್ ಟೈಮ್ಸ್’ನಲ್ಲಿ ಜುಲೈ10ರಂದು ಪ್ರಕಟವಾಗಿರುವ ವರದಿ ಪ್ರಕಾರ,
2024ರ ಐಐಟಿ ಬ್ಯಾಚ್‌ಗೆ ವಾರ್ಷಿಕ ವೇತನ ರೂ. 15ರಿಂದ 16 ಲಕ್ಷದ ವ್ಯಾಪ್ತಿಯಲ್ಲಿದೆ. ಡೆಲಾಯಿಟ್ ಮತ್ತು ಟೀಮ್ ಲೀಸ್ ಪ್ರತ್ಯೇಕವಾಗಿ ಮಾಡಿರುವ ಅಧ್ಯಯನದಲ್ಲಿ ಈ ಅಂಶ ಕಂಡುಕೊಳ್ಳಲಾಗಿದೆ. ಆದರೆ 2023ರಲ್ಲಿ ಈ ವೇತನ ವಾರ್ಷಿಕ ರೂ. 18ರಿಂದ 20 ಲಕ್ಷದ ವ್ಯಾಪ್ತಿಯಲ್ಲಿತ್ತು.
ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಪ್ರಕಾರ, 2024ರ ಬ್ಯಾಚ್‌ನ ಶೇ.38ರಷ್ಟು ಐಐಟಿ ಪದವೀಧರರು ಇನ್ನೂ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಐಐಟಿಯ 7,000ಕ್ಕೂ ಹೆಚ್ಚು ಪದವೀಧರರಿಗೆ ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಕೆಲಸ ಸಿಕ್ಕಿಲ್ಲ. ಎರಡು ವರ್ಷಗಳ ಹಿಂದೆ ಈ ಪ್ರಮಾಣ ಇದಕ್ಕಿಂತ ಅರ್ಧದಷ್ಟು, ಅಂದರೆ 3,400 ಇತ್ತು.
ಇವೆಲ್ಲವೂ ವಿವಿಧ ವರದಿಗಳು ಹೇಳುತ್ತಿರುವ ಸತ್ಯ.
ಆದರೆ ಇಲ್ಲೇನಾಗುತ್ತದೆ ಎಂದರೆ ಇವೆಲ್ಲ ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಕಟವಾಗುತ್ತವೆ ಮತ್ತು ಮರೆಯಾಗಿಬಿಡುತ್ತವೆ. ಆದರೆ ಸರಕಾರ ಹೇಳುವ ಸುಳ್ಳು ಏಕಕಾಲಕ್ಕೇ ಎಲ್ಲ ಮಾಧ್ಯಮಗಳಲ್ಲೂ ಪ್ರಕಟವಾಗುತ್ತವೆ, ಪ್ರಸಾರವಾಗುತ್ತವೆ ಮತ್ತು ಅದೇ ಸತ್ಯ ಎನ್ನುವ ಭಾವನೆ ಮೂಡುತ್ತದೆ. ವಾಸ್ತವ ಮಾತ್ರ ಅದಕ್ಕಿಂತ ಬೇರೆಯೇ ಆಗಿರುತ್ತದೆ.
ಎಷ್ಟೆಲ್ಲ ಹಣ ಖರ್ಚು ಮಾಡಿ, ನಾಲ್ಕು ನಾಲ್ಕು ವರ್ಷಗಳ ಕಾಲ ಓದಿದವರು ಡೆಲಿವರಿ ಬಾಯ್ ಥರದ ಕೆಲಸ ಮಾಡಬೇಕಾಗಿ ಬಂದರೆ ಅವರ ಸಂಬಳ ಎಷ್ಟಿರಬಹುದು?
ಸ್ನಾತಕೋತ್ತರ ಪದವೀಧರರು ಎಸೆಸೆಲ್ಸಿ ವಿದ್ಯಾರ್ಹತೆಯ ಜವಾನರ ಕೆಲಸಕ್ಕೆ ಅರ್ಜಿ ಹಾಕುವಂತಹ ಸ್ಥಿತಿಯಿದೆ ಎಂದಾದರೆ ನಿರುದ್ಯೋಗದ ಸ್ಥಿತಿ ಏನಿರಬಹುದು? ಇದನ್ನು ಯೋಚಿಸಿದರೆ ವಾಸ್ತವ ಕೊಂಚವಾದರೂ ಮನದಟ್ಟಾಗುತ್ತದೆ.
ಐಟಿ ವಲಯದಲ್ಲಿ ಹೊಸದಾಗಿ ನಡೆದಿರುವ ನೇಮಕಾತಿ 2 ದಶಕಗಳಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂದು ವರದಿಯೊಂದು ಹೇಳುತ್ತಿದೆ.
2024ರಲ್ಲಿ 60ರಿಂದ 70 ಸಾವಿರದ ನಡುವೆ ಹೊಸಬರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಕೋವಿಡ್‌ಗಿಂತ ಮೊದಲು ವಾರ್ಷಿಕ 2 ಲಕ್ಷ ಹೊಸಬರನ್ನು ನೇಮಿಸಿಕೊಳ್ಳಲಾಗುತ್ತಿತ್ತು.
ಹೂಡಿಕೆಯೇ ಕಡಿಮೆಯಾಗುತ್ತಿದೆ ಎಂದು ಒಂದೆಡೆ ವರದಿಯಿದ್ದರೆ, ಉದ್ಯೋಗಗಳು ದುಪ್ಪಟ್ಟಾಗಿವೆ ಎಂದು ಇನ್ನೊಂದೆಡೆ ಆರ್‌ಬಿಐ ಹೇಳುತ್ತಿರುವುದು ವಿಪರ್ಯಾಸ.
‘ದಿ ಹಿಂದೂ’ ವರದಿಯ ಪ್ರಕಾರ, ಖಾಸಗಿ ಹೂಡಿಕೆ 20 ವರ್ಷಗಳಲ್ಲೇ ಅತ್ಯಂತ ಕಡಿಮೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ದಾಖಲಾಗಿದೆ.
ಕಾರ್ಪೊರೇಟ್ ವಲಯಗಳು ಘೋಷಿಸಿರುವ ಹೊಸ ಹೂಡಿಕೆ ರೂ. 44,300 ಕೋಟಿ ಮಾತ್ರ. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೊಸ ಹೂಡಿಕೆ ಪ್ರಮಾಣ ಸುಮಾರು 7.9 ಲಕ್ಷ ಕೋಟಿ ರೂ. ಇತ್ತು.
ಈ ಸಲ ಹೂಡಿಕೆದಾರರು ಕಾದು ನೋಡುವ ಕ್ರಮದ ಮೊರೆಹೋಗಿದ್ದಾರೆ ಎಂದು ಆ ವರದಿ ಹೇಳುತ್ತಿದೆ.
2014-15ರ ಮೊದಲ ತ್ರೈಮಾಸಿಕದಲ್ಲಿ ಹೊಸ ಹೂಡಿಕೆ 2.9 ಲಕ್ಷ ಕೋಟಿ ರೂ. ಇತ್ತು. 2019-20ರ ಮೊದಲ ತ್ರೈಮಾಸಿಕದಲ್ಲಿ ಈ ಪ್ರಮಾಣ 2.1 ಲಕ್ಷ ಕೋಟಿ ರೂ. ಇತ್ತು. ಆದರೆ ಸರಕಾರ ಮಾತ್ರ ಕಾರ್ಪೊರೇಟ್ ತೆರಿಗೆ ತಗ್ಗಿಸಿ ಮಾಡಿಕೊಂಡಿರುವ ನಷ್ಟ 2020-21ರಲ್ಲಿ 1,00,241 ಕೋಟಿ ರೂ. 2019-20ರಲ್ಲಿ ಮಾಡಿಕೊಂಡಿರುವ ತೆರಿಗೆ ನಷ್ಟ 1,28,170 ಕೋಟಿ ರೂ. ಅದೆಲ್ಲದರ ಹೊರೆ ಜನಸಾಮಾನ್ಯರ ಮೇಲೆಯೇ ಬಿದ್ದಿರುತ್ತದೆ. ಕಾರ್ಪೊರೇಟ್ ವಲಯಕ್ಕೆ ಇಷ್ಟೊಂದು ರಿಯಾಯಿತಿ ಕೊಡಲಾಗುತ್ತಿದ್ದರೂ ಉದ್ಯೋಗ ಸೃಷ್ಟಿಯಾಗುವ ಬದಲು ಉದ್ಯೋಗಗಳು ಮಾತ್ರ ಕಣ್ಮರೆಯಾಗುತ್ತಲೇ ಇವೆ.
ಈಗ ಒಬ್ಬನೇ ವ್ಯಕ್ತಿ, ಒಂದೇ ಉದ್ಯಮ ಸಮೂಹ ಎಲ್ಲ ವಲಯಗಳನ್ನೂ ತನ್ನ ಹಿಡಿತಕ್ಕೆ ತೆಗೆದುಕೊಂಡಿರುವಾಗ ಆ ಸ್ಥಿತಿ ಇನ್ನೂ ಕರಾಳವಾಗಿದೆ.
ಕಳೆದ 10 ವರ್ಷಗಳಲ್ಲಿ ಎಲ್ಲ ವಲಯಗಳಲ್ಲೂ ಎರಡೇ ಕಂಪೆನಿಗಳ ದರ್ಬಾರು ನಡೆದಿದೆ, ಮತ್ತವುಗಳ ಪಾಲು ಒಂದೇ ಸಮನೆ ಹೆಚ್ಚುತ್ತಲೇ ಇದೆ.
ಅದಾನಿ, ಅಂಬಾನಿ ಏನೇ ಕೇಳಿದರೂ ನಿಮಿಷಗಳಲ್ಲಿ ಮೋದಿ ಮಾಡಿಕೊಡುತ್ತಾರೆ. ಆದರೆ ಜನಸಾಮಾನ್ಯರು 24 ಗಂಟೆ ಕೈಮುಗಿದು ಕೇಳಿಕೊಂಡರೂ ಅವರಿಗಾಗಿ ಮೋದಿ ಕೊಟ್ಟಿದ್ದೇನೂ ಇಲ್ಲ ಎಂಬ ರಾಹುಲ್ ಆರೋಪವನ್ನು ಗಮನಿಸಬೇಕು.
ಇದೇ ವೇಳೆ ವಿದೇಶಿ ಹೂಡಿಕೆಯನ್ನು ಆಕರ್ಷಿಸುವಲ್ಲಿ ಕೂಡ ಮೋದಿ ಆರ್ಥಿಕ ನೀತಿ ಸೋತಿದೆ. ‘ಇಂಡಿಯನ್ ಎಕ್ಸ್ ಪ್ರೆಸ್’ನಲ್ಲಿ ಪ್ರಕಟವಾಗಿರುವ ಬರಹವೊಂದು ವಿಶ್ಲೇಷಿಸಿರುವ ಪ್ರಕಾರ, ಅದಾನಿ, ಅಂಬಾನಿಗಳ ದರ್ಬಾರು ದೇಶವಿದೇಶದ ಹಲವಾರು ಕಂಪೆನಿಗಳು ಹೂಡಿಕೆಗೆ ಹಿಂಜರಿಯುವಂತೆ ಮಾಡಿದೆ. ಆ ಕಂಪೆನಿಗಳಿಗೆ ಇರುವ ಇನ್ನೊಂದು ಭಯ ವಸೂಲಿಗಾಗಿಯೇ ಬಳಕೆಯಾಗುತ್ತಿರುವ ಈ.ಡಿ., ಸಿಬಿಐಗಳಂಥ ಏಜೆನ್ಸಿಗಳದ್ದು.
ಶ್ರೀಮಂತರು ಶ್ರೀಮಂತರಾಗುತ್ತಲೇ ಇರುವಾಗ ಬಡವರು ಇನ್ನಷ್ಟು ಬಡವರಾಗುತ್ತ ಹೋಗುತ್ತಿದ್ದಾರೆ.
ನಿರುದ್ಯೋಗ, ಯಾವುದೋ ಒಂದು ಕೆಲಸ, ಕಡಿಮೆ ಸಂಬಳದ ಕೆಲಸ ಇಂಥ ಸುಳಿಯಲ್ಲಿ ಎಲ್ಲರೂ ಸಿಲುಕಿಕೊಂಡಿದ್ದಾರೆ. ಆದರೆ ತನ್ನ ಕಾಲದಲ್ಲಿ ದೇಶದಲ್ಲಿ ಆತ್ಮವಿಶ್ವಾಸ ತುಂಬು ತುಳುಕುತ್ತಿದೆ ಎನ್ನುತ್ತಿದ್ದಾರೆ ಮೋದಿ.
ಹೂಡಿಕೆ ಹೆಚ್ಚುತ್ತಿಲ್ಲ, ವಿದೇಶಿ ಹೂಡಿಕೆಯೂ ಬರುತ್ತಿಲ್ಲ. ಮೊದಲಿದ್ದಂತೆ ಉದ್ಯೋಗದ ಅವಕಾಶಗಳೂ ಇಲ್ಲ.
ಮಾರ್ಚ್‌ನಲ್ಲಿ ಮಹಾರಾಷ್ಟ್ರದಲ್ಲಿ 17,471 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಬಂದಿದ್ದ ಅರ್ಜಿಗಳು 17 ಲಕ್ಷ. ಉತ್ತರ ಪ್ರದೇಶದಲ್ಲಿ 60 ಸಾವಿರ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಬಂದಿದ್ದ ಅರ್ಜಿಗಳು 50 ಲಕ್ಷ.
ಈಗ ನಿರುದ್ಯೋಗ ವಿಚಾರದಲ್ಲಿ ಸಿಟಿ ಬ್ಯಾಂಕ್ ಹೇಳಿರುವ ಸತ್ಯದ ಬಗ್ಗೆಯೂ ಮೋದಿ ಸರಕಾರ ಅಸಮಾಧಾನ ತೋರಿಸಿದೆ ಮತ್ತು ವರದಿಯನ್ನು ಪ್ರಶ್ನಿಸಿದೆ. ಜನರನ್ನು ಭ್ರಮೆಯಲ್ಲಿಯೇ ಮುಳುಗಿಸಿಡಲು ಬಯಸುವ ಅದಕ್ಕೆ ಸತ್ಯಗಳು ಬೇಕಿಲ್ಲ. ಅದಕ್ಕೇನಿದ್ದರೂ ಮಡಿಲ ಮೀಡಿಯಾಗಳು ಹರಡುವ ಸುಳ್ಳು ವೈಭವವೇ ಇಷ್ಟ.
ಉದ್ಯೋಗಳು ದುಪ್ಪಟ್ಟಾಗಿವೆ ಎಂಬ ಆರ್‌ಬಿಐ ವರದಿ ಕೂಡ ಅಂತಹ ಸುಳ್ಳಿನ ಬಡಿವಾರದ ಒಂದು ಭಾಗದ ಹಾಗೆಯೇ ಭಾಸವಾಗುತ್ತದೆ.