ಕೇಜ್ರಿವಾಲ್ ಬಂಧನ ಮೋದಿ ಪರಿವಾರಕ್ಕೆ ದುಬಾರಿಯಾದೀತೇ?

ಆಡಳಿತಾರೂಢ ಬಿಜೆಪಿಗೆ ಸರಿಯಾಗಿಯೇ ಪೈಪೋಟಿ ನೀಡಬೇಕೆಂದರೆ ಬೇರೆಬೇರೆಯಾಗಿ ಕಣಕ್ಕಿಳಿಯುವುದಕ್ಕಿಂತ ಒಟ್ಟಾಗಿ ಹೋಗಬೇಕಿರುವುದು ವಿಪಕ್ಷಗಳಿಗೆ ಅರಿವಾಗಿದೆ. ಈಗ ಅರವಿಂದ್ ಕೇಜ್ರಿವಾಲ್ ಅವರ ಬಂಧನವೇ ಅಂಥ ಹೊಸ ರಾಜಕೀಯ ಸಾಧ್ಯತೆಗೆ ಮುಖ್ಯ ಕಾರಣವಾಗಬಹುದು. ಚುನಾವಣೆಯ ಅಂಚಿನಲ್ಲಿ ಈಗಿನ ಈ ಬೆಳವಣಿಗೆ ಎಲ್ಲ ವಿಪಕ್ಷಗಳನ್ನು ಒಂದೆಡೆಗೆ ತರುವ ಮಹತ್ವದ ರಾಜಕೀಯ ತಿರುವಿಗೆ, ಚುನಾವಣಾ ರಾಜಕೀಯದ ಹೊಸ ತೀವ್ರತೆಗೆ ಮುನ್ನುಡಿ ಬರೆಯಬಹುದು.

Update: 2024-03-24 04:17 GMT
Editor : Thouheed | Byline : ವಿ. ಪದ್ಮನಾಭ

ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಎಎಪಿ ನಾಯಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವುದು ಮೋದಿ ರಾಜಕೀಯ ಬದುಕಿನಲ್ಲೇ ಅತಿ ದೊಡ್ಡ ಪ್ರಮಾದವಾಗಿ ಪರಿಣಮಿಸಬಹುದೇ ಎಂಬ ಸಂಶಯ ಕೆಲವು ರಾಜಕೀಯ ವಿಶ್ಲೇಷಕರನ್ನು ಕಾಡಲಾರಂಭಿಸಿದೆ.

ಕೇಜ್ರಿವಾಲ್ ಬಂಧನದಿಂದ ಇಡೀ ವಿಪಕ್ಷ ಒಕ್ಕೂಟ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಾಗಿ ಬಿಜೆಪಿ ಹಾಗೂ ಮೋದಿಗೆ ಸವಾಲು ಹಾಕಲು ಸಿದ್ಧವಾದಂತಿದೆ.

ವಿಪಕ್ಷಗಳ ಈ ಒಗ್ಗಟ್ಟು ಏನೇನು ರಾಜಕೀಯ ಪರಿಣಾಮಗಳನ್ನು ಬೀರಬಹುದು? ಮಹಾ ಚುನಾವಣೆ ಹೊಸ್ತಿಲಲ್ಲಿ ಕೇಜ್ರಿವಾಲ್ ಬಂಧನ ಮೋದಿಯವರು ಊಹಿಸದ ಪರಿಣಾಮ ಅವರ ಪಕ್ಷಕ್ಕಾಗಲಿದೆಯೇ? ಈಗಿನ ಬೆಳವಣಿಗೆಗಳು ಮೋದಿಯವರ ಇಡೀ ಲೆಕ್ಕಾಚಾರವನ್ನೇ ಬದಲಿಸಿಬಿಡಬಹುದೇ? ಆಡಳಿತ ಪಕ್ಷದ ವಿರುದ್ಧದ ಸಂಚಲನವೊಂದು ಒಳಗೊಳಗೇ ಕ್ರಿಯಾಶೀಲವಾಗಿ, ಅದು ಮೋದಿ ಮತ್ತವರ ಬಿಜೆಪಿಗೆ ಚುನಾವಣೆಯಲ್ಲಿ ಪಾಠ ಕಲಿಸಲಿದೆಯೇ? ಎಂಬ ಸಂಶಯ ಇತ್ತೀಚಿನ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸಿದವರಿಗೆ ಅರಿವಾಗದಿರದು.

ದಿಲ್ಲಿ ಮತ್ತು ಪಂಜಾಬ್‌ಗಳಲ್ಲಿ ಇಂಥದೊಂದು ಸಾಧ್ಯತೆಯನ್ನು ಇಲ್ಲವೆಂದು ಹೇಳಲಿಕ್ಕಾಗದು. ದಿಲ್ಲಿಯಲ್ಲಿ ಎಎಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಪಂಜಾಬ್‌ನಲ್ಲಿ ಅವೆರಡೂ ಪ್ರತ್ಯೇಕವಾಗಿ ಕಣಕ್ಕಿಳಿದಿದ್ದರೂ ಅನಿರೀಕ್ಷಿತ ಬದಲಾವಣೆಗಳನ್ನು ತಳ್ಳಿಹಾಕುವಂತಿಲ್ಲ.

ಉತ್ತರ ಪ್ರದೇಶದಲ್ಲಿಯೂ ವೋಟುಗಳ ಲೆಕ್ಕಾಚಾರ ಬದಲಾಗಬಹುದು. ಅಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಯೊಂದಿಗೆ ಕಣಕ್ಕಿಳಿದಿವೆ.

ಬಿಹಾರದಲ್ಲಿಯೂ ಆರ್‌ಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ವಿಚಾರ ಬಹಳ ಮುಖ್ಯವಾಗಿದೆ.

ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಪಕ್ಷ ಮತ್ತು ಉದ್ಧವ್ ಠಾಕ್ರೆಯವರ ಶಿವಸೇನೆ ಬಣಗಳ ನಡುವೆ ಕಾಂಗ್ರೆಸ್ ಇರಲಿದ್ದು, ಅಲ್ಲಿಯೂ ವೋಟುಗಳ ಸಮೀಕರಣ ಬದಲಾಗಬಹುದು.

ಇದೇ ವೇಳೆ ಕೇರಳದಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ಎದುರಾಳಿಗಳಾಗಿರಲಿವೆ. ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಜೊತೆ ಕಾಂಗ್ರೆಸ್ ಮೈತ್ರಿಯಿದೆ. ಈ ಸ್ಥಿತಿಯನ್ನು ಮೋದಿ ಮತ್ತು ಅಮಿತ್ ಶಾ ಮತ್ತೆ ಮತ್ತೆ ಲೇವಡಿ ಮಾಡುತ್ತಿರುವುದೂ ಇದೆ. ಕೇರಳದಲ್ಲಿ ಶತ್ರುಗಳಂತಿರುವ ಅವೆರಡೂ ಬೇರೆಡೆ ಮಿತ್ರರಾಗುವುದು ಹೇಗೆ ಎಂದು ಆಡಿಕೊಳ್ಳಲಾಗುತ್ತಿದೆ. ಅವೆರಡೂ ಒಗ್ಗಟ್ಟಾಗಿ ಹೋಗದ ಸ್ಥಿತಿಯ ಲಾಭ ಮಾಡಿಕೊಳ್ಳುವುದಕ್ಕೆಂದೇ ಬಿಜೆಪಿಯೂ ಕಾದುಕೊಂಡೂ ಇದೆ.

ಆದರೆ ಆಡಳಿತಾರೂಢ ಬಿಜೆಪಿಗೆ ಸರಿಯಾಗಿಯೇ ಪೈಪೋಟಿ ನೀಡಬೇಕೆಂದರೆ ಬೇರೆಬೇರೆಯಾಗಿ ಕಣಕ್ಕಿಳಿಯುವುದಕ್ಕಿಂತ ಒಟ್ಟಾಗಿ ಹೋಗಬೇಕಿರುವುದು ವಿಪಕ್ಷಗಳಿಗೆ ಅರಿವಾಗಿದೆ. ಈಗ ಅರವಿಂದ್ ಕೇಜ್ರಿವಾಲ್ ಅವರ ಬಂಧನವೇ ಅಂಥ ಹೊಸ ರಾಜಕೀಯ ಸಾಧ್ಯತೆಗೆ ಮುಖ್ಯ ಕಾರಣವಾಗಬಹುದು.

ಚುನಾವಣೆಯ ಅಂಚಿನಲ್ಲಿ ಈಗಿನ ಈ ಬೆಳವಣಿಗೆ ಎಲ್ಲ ವಿಪಕ್ಷಗಳನ್ನು ಒಂದೆಡೆಗೆ ತರುವ ಮಹತ್ವದ ರಾಜಕೀಯ ತಿರುವಿಗೆ, ಚುನಾವಣಾ ರಾಜಕೀಯದ ಹೊಸ ತೀವ್ರತೆಗೆ ಮುನ್ನುಡಿ ಬರೆಯಬಹುದು.

ಈ ನಿಟ್ಟಿನಲ್ಲಿ ಹಲವು ಸಣ್ಣ ಪಕ್ಷಗಳು ‘ಇಂಡಿಯಾ’ ಮೈತ್ರಿಯ ಭಾಗವಾಗಲು ಶುಕ್ರವಾರ ನಿರ್ಧರಿಸಿದ್ದು ಒಂದು ಮಹತ್ವದ ಘಟನೆ.

ಲೋಕತಂತ್ರ ಸುರಕ್ಷಾ ಪಾರ್ಟಿ, ಬಹುಜನ್ ಮುಕ್ತಿ ಪಾರ್ಟಿ, ಸ್ವತಂತ್ರ ಜನತಾ ಪಾರ್ಟಿ ಮೊದಲಾದ ಹಲವಾರು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜೊತೆ ಬೇಷರತ್ತಾಗಿ ನಿಲ್ಲಲು ಒಮ್ಮತದ ನಿರ್ಣಯ ತೆಗೆದುಕೊಂಡು ದಿಲ್ಲಿಯಲ್ಲಿ ರಾಹುಲ್ ಗಾಂಧಿ ಮತ್ತು ಖರ್ಗೆ ಸಮ್ಮುಖದಲ್ಲಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿವೆ.

ಬಹುಶಃ ಇದು ಈ ದೇಶದಲ್ಲಿನ ವಿಲಕ್ಷಣ ರಾಜಕೀಯ ಸನ್ನಿವೇಶದಲ್ಲಿ ವಿಪಕ್ಷಗಳೆಲ್ಲ ಒಂದಾಗಬೇಕಿರುವ ತುರ್ತನ್ನು ಸೂಚಿಸುತ್ತಲೇ, ಮುಂದೆ ಅಂಥ ಸಾಧ್ಯತೆ ಹೆಚ್ಚಬಹುದು ಎಂಬುದನ್ನೂ ಹೇಳಿದಂತಿದೆ.

ಈಗಾಗಲೇ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬಂಧನವಾಗಿದೆ. ಈಗ ಅದೇ ಈ.ಡಿ.ಯನ್ನು ಬಳಸಿಕೊಂಡು ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ.

ಕೇಜ್ರಿವಾಲ್ ಗೆಲುವಂತೂ ಯಾರೂ ಪಡೆದಿರದಂಥ ಬಹುಮತದ ಗೆಲುವಾಗಿತ್ತು. ಪಂಜಾಬ್‌ನಲ್ಲಿಯೂ ಅಂಥದೇ ಭರ್ಜರಿ ಗೆಲುವನ್ನು ಕಂಡು ಅಧಿಕಾರಕ್ಕೇರಿದ್ದ ಪಕ್ಷ ಎಎಪಿ. ಅಂಥ ಪಕ್ಷದ ಸಿಎಂ ಈಗ ಬಂಧಿತರಾಗಿದ್ದಾರೆ. ಹಾಗೆ ಜನರು ಗೆಲ್ಲಿಸಿದ ನಾಯಕನನ್ನೂ ಕೇಂದ್ರ ಪ್ರಾಯೋಜಿತ ಈ.ಡಿ. ತಂಡ ಬಂದು ಬಂಧಿಸಿ ಕರೆದುಕೊಂಡು ಹೋಗಿಬಿಡುತ್ತದೆ.

ಒಬ್ಬ ಜನಪ್ರಿಯ ಮುಖ್ಯಮಂತ್ರಿಯನ್ನೂ ಹೀಗೆ ಬಂಧಿಸುವ ಇವರ ರಾಜಕಾರಣದ ಹಿಂದಿನ ಉದ್ದೇಶ, ಮತ್ತಿದಕ್ಕೆ ‘ಇಂಡಿಯಾ’ ಮೈತ್ರಿ ಪಕ್ಷಗಳು ತೋರಿಸಬಹುದಾದ ಪ್ರತಿಕ್ರಿಯೆ ರಾಜಕೀಯವಾಗಿ ಏನೇ ಇದ್ದರೂ ಈ ವಿಷಯವೇ ಅವುಗಳನ್ನು ತಮ್ಮೊಳಗಿನ ಭಿನ್ನಾಭಿಪ್ರಾಯಗಳು ಮರೆಯುವಂತೆ ಮಾಡಿ ಒಟ್ಟಿಗೆ ತರಬಹುದೆನಿಸುತ್ತಿದೆ.

ಸದ್ಯದ ಪರಿಸ್ಥಿತಿ ಹೇಗಿದೆಯೆಂದರೆ ವಿಪಕ್ಷಗಳ ನಾಯಕರ ವಿರುದ್ಧ ಅದೆಷ್ಟು ಭ್ರಷ್ಟಾಚಾರ ಆರೋಪ ಇದ್ದರೂ ಅವರು ಬಿಜೆಪಿ ಸೇರಿಬಿಟ್ಟರೆ ಯಾವ ಈ.ಡಿ. ಕಾರ್ಯಾಚರಣೆಯೂ ಅಂಥವರ ವಿರುದ್ಧ ಇರುವುದೇ ಇಲ್ಲ. ಯಾರನ್ನು ಕಡು ಭ್ರಷ್ಟರು ಎಂದು ಮೋದಿಯೇ ಹೇಳಿಕೊಂಡು ಓಡಾಡಿದ್ದರೋ ಅಂಥವರನ್ನೇ ಬಳಿಕ ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ. ಅಂತಹವರ ಜೊತೆಯೇ ರಾಜ್ಯಗಳಲ್ಲಿ ಬಿಜೆಪಿ ಮೈತ್ರಿ ಸರಕಾರ ನಡೆಸುತ್ತಿದೆ. ಅಂಥವರ ವಿರುದ್ಧದ ಪ್ರಕರಣಗಳ ಫೈಲನ್ನು ಮುಚ್ಚಿ ಮೂಲೆಗೆ ಎಸೆಯಲಾಗಿದೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಏನೇನಾಯಿತು ಎಂಬುದು ಇದಕ್ಕೆ ಒಂದು ಉತ್ತಮ ಉದಾಹರಣೆ.

ಯಾರು ವಿರೋಧ ಮಾಡುತ್ತಾರೋ ಅಂಥವರನ್ನು ತನಿಖೆಯ ಚಕ್ರವ್ಯೆಹದಲ್ಲಿ ಸಿಲುಕಿಸಲಾಗುತ್ತದೆ.

ಬಹುಮತದಿಂದ ಆರಿಸಿಬಂದ ಮುಖ್ಯಮಂತ್ರಿಯೊಬ್ಬ ತನ್ನ ಹುದ್ದೆಯಲ್ಲಿ ಇರುವುದೇ ಗ್ಯಾರಂಟಿಯಿರದಂಥ ಸ್ಥಿತಿಯನ್ನು ಈ ದೇಶದಲ್ಲಿ ಈಗ ತಂದಿಡಲಾಗಿದೆ.

ಇದಕ್ಕೆ ಸರಿಯಾಗಿ ಮಡಿಲ ಮೀಡಿಯಾಗಳು ಏನನ್ನೂ ಪ್ರಶ್ನಿಸದೆ, ಸರಕಾರದ್ದೇ ಭಾಗವಾಗಿ ಮಾತನಾಡುತ್ತ, ಪ್ರಜಾಸತ್ತೆಯಲ್ಲಿ ಇನ್ನಷ್ಟು ಹತಾಶ ಸ್ಥಿತಿಗೆ ಕಾರಣವಾಗುತ್ತಿವೆ.

ಈಗಿನ ಸ್ಥಿತಿ ನೋಡಿದರೆ ಒಡಿಶಾದಲ್ಲಿನ ನವೀನ್ ಪಾಟ್ನಾಯಕ್ ಮುಂದೆಯೂ ಆತಂಕವಿದೆ.

ಲೋಕಸಭೆ ಚುನಾವಣೆ ಜೊತೆಗೇ ವಿಧಾನಸಭೆ ಚುನಾವಣೆಯೂ ನಡೆಯಲಿರುವ ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ ಎದುರಲ್ಲಿಯೂ ಸವಾಲು ಇದೆ.

ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, ಇಂಥದೇ ಏನಾದರೂ ಆಟವನ್ನಾಡಿ ನಾಯ್ಡುರನ್ನೇ ಸಿಎಂ ಕುರ್ಚಿಯ ಮೇಲೆ ಕೂರಿಸಲೂ ಬಹುದು ಎಂಬುದು ಅಲ್ಲಿನ ಆತಂಕ.

ಮಮತಾ ಬ್ಯಾನರ್ಜಿ ಅಥವಾ ಪಿಣರಾಯಿ ವಿಜಯನ್ ಎದುರಲ್ಲಿಯೂ ಇಂಥದೇ ಸಂದರ್ಭಗಳು ಬಂದರೂ ಅಚ್ಚರಿಪಡುವಂಥದ್ದು ಏನಿಲ್ಲ,.

ಈಗ ಎಎಪಿಯ ಎಲ್ಲ ಪ್ರಮುಖ ನಾಯಕರು ಜೈಲಿನಲ್ಲಿದ್ದಾರೆ. ದೇಶದುದ್ದಕ್ಕೂ ಈಗ, ಅದು ಉತ್ತರ ಪ್ರದೇಶವಾಗಲಿ, ಬಿಹಾರವಾಗಲಿ, ಮಹಾರಾಷ್ಟ್ರವಾಗಲಿ, ತಮಿಳುನಾಡು ಆಗಲಿ ಒಂದು ವಿಲಕ್ಷಣ ಕರಾಳತೆಯನ್ನು ಬಿಜೆಪಿಯ ಇವತ್ತಿನ ರಾಜಕೀಯ ತಂದಿಟ್ಟಿದೆ. ಹೀಗಿರುವಾಗ ವಿಪಕ್ಷಗಳು ಒಗ್ಗಟ್ಟಾಗುವ ಪ್ರಮೇಯವೊಂದು, ಅನಿವಾರ್ಯತೆಯೊಂದು ತಾನೇ ತಾನಾಗಿ ಬಂದಿದೆ. ಅದು ಎಲ್ಲ ವಿಪಕ್ಷಗಳನ್ನೂ ಬಿಜೆಪಿಯ ಈ ರಾಜಕಾರಣಕ್ಕೆ ಪ್ರತಿಯಾಗಿ ಕೂಡಿಸಿ ಕರೆದೊಯ್ಯಬಹುದು.

ಈಗ ಎಎಪಿ ಎದುರು ಬಂದಿರುವ ಬಿಕ್ಕಟ್ಟು, ಅದರ ವಿರುದ್ಧ ಈ.ಡಿ. ಹೊರಿಸುತ್ತಿರುವ ಆರೋಪಗಳನ್ನು ನೋಡಿದರೆ, ಅದರ ಬ್ಯಾಂಕ್ ಖಾತೆಗಳೂ ಸ್ಥಗಿತಗೊಳ್ಳಬಹುದು. ಅದರ ಕೇಂದ್ರ ಕಚೇರಿ ಕೂಡ ಸೀಝ್ ಆಗಬಹುದು.

ಈಗಾಗಲೇ ಕಾಂಗ್ರೆಸ್‌ನ ನಾಲ್ಕು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಹೀಗಿರುವಾಗ ಈಗಿನ ಸ್ಥಿತಿಯಲ್ಲಿ ಚುನಾವಣೆಯನ್ನು ಬಿಜೆಪಿಗೆ ವಿರುದ್ಧವಾಗಿ ವಿಪಕ್ಷಗಳು ಒಗ್ಗಟ್ಟಾಗಿ ಎದುರಿಸದೇ ಹೋದಲ್ಲಿ ಅದರ ಇಂಥದೇ ರಾಜಕಾರಣ ಎಲ್ಲ ಪಕ್ಷಗಳ ನಾಯಕರ ವಿರುದ್ಧವೂ ನಡೆಯಬಹುದು. ಹೀಗೆ ಬಂಧನಗಳು, ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದು ಮುಂದುವರಿಯಬಹುದು. ಆಗ ಆ ನಾಯಕರು ಒಂದೋ ಬಿಜೆಪಿ ಜೊತೆ ಸೇರಿಕೊಳ್ಳಬೇಕಾಗುತ್ತದೆ. ಇಲ್ಲವೇ ಹೀಗೆ ಬಲಿಪಶುವಾಗಬೇಕಾಗುತ್ತದೆ.

ನೆನಪು ಮಾಡಿಕೊಳ್ಳುವುದಾದರೆ, ಎಎಪಿ ಆಂದೋಲನದ ಮೂಲಕ ಹುಟ್ಟಿದ್ದ ಪಕ್ಷ. ಆಗ ಅದರ ಹೋರಾಟ ನಡೆದದ್ದು ಕಾಂಗ್ರೆಸ್ ವಿರುದ್ಧ. ಸಂಘ ಪರಿವಾರದ ಜನರು ಅದರ ಹಿಂದೆಮುಂದೆ ಇದ್ದರು. ಈಗ ಅದೇ ಬಿಜೆಪಿ ಮತ್ತು ಸಂಘ ಪರಿವಾರದ ಷಡ್ಯಂತ್ರಕ್ಕೆ ಕೇಜ್ರಿವಾಲ್ ಮತ್ತವರ ಪಕ್ಷ ಬಲಿಪಶುವಾಗಬೇಕಿದೆ.

ವಿಪರ್ಯಾಸವೆಂದರೆ, ಅವತ್ತು ಯಾವ ಕಾಂಗ್ರೆಸ್ ಅನ್ನು ಎಎಪಿ ವಿರೋಧಿಸಿತ್ತೋ ಅದರ ಜೊತೆಗೇ ಈಗ ಇವತ್ತಿನ ಕರಾಳ ರಾಜಕೀಯ ಪರಿಸ್ಥಿತಿಯನ್ನು ಎದುರಿಸುವುದಕ್ಕಾಗಿ ಹೋಗಬೇಕಾದ ಅನಿವಾರ್ಯತೆ ತಲೆದೋರಿದೆ.

ಇದೊಂದು ವಿಚಿತ್ರ ರಾಜಕೀಯ ಚಕ್ರ.

ದೇಶದ ರಾಜಕಾರಣದ ಮೇಲೆ ಬಹಳ ದೊಡ್ಡ ಪ್ರಭಾವ ಬೀರಿದ್ದ ನಾಯಕ ಕೇಜ್ರಿವಾಲ್ ಇಂದು ಕೋರ್ಟ್ ಮುಂದೆ ಹತಾಶ ಸ್ಥಿತಿಯಲ್ಲಿ ನಿಲ್ಲುವಂತೆ ಮಾಡಿರುವುದು ಅದೇ ಬಿಜೆಪಿಯ ವಿಪಕ್ಷ ದಮನ ನೀತಿ. ಹೀಗಾಗಿಯೇ ಇಂಥದೊಂದು ನೀತಿಯ ವಿರುದ್ಧ ವಿಪಕ್ಷಗಳು ಒಗ್ಗಟ್ಟಾಗಬೇಕಾದ ಕಾಲ ಬಂದಿದೆ.

ಈ ದೇಶದಲ್ಲಿ ನಿರುದ್ಯೋಗ ಪ್ರಮಾಣ ಬಹುದೊಡ್ಡ ಪ್ರಮಾಣದಲ್ಲಿ ಬೆಳೆಯಲು, ನಿಯಂತ್ರಿಸಲಾಗದ ಬೆಲೆಯೇರಿಕೆಗೆ ಜನರು ತತ್ತರಿಸುವಂತಾಗಲು, ದೇಶದ ಎಲ್ಲವೂ ಖಾಸಗಿಯವರ ಕೈಗೆ ಹಸ್ತಾಂತರವಾಗುವಂತಾಗಲು, ಧರ್ಮದ ಹೆಸರಿನಲ್ಲಿ ಜನರು ಹೊಡೆದಾಡಿಕೊಳ್ಳುವಂತಾಗಲು ಕಾರಣವಾದ ಮೋದಿ ನೀತಿಯ ವಿರುದ್ಧ ಈಗ ವಿಪಕ್ಷಗಳು ಒಗ್ಗಟ್ಟಾಗದೆ ಹೋದರೆ, ಈಗಲೂ ಮುಖ ತಿರುಗಿಸಿಕೊಂಡು ಹೋಗುತ್ತಿದ್ದರೆ ಮುಂದೆ ಕಾದಿರುವುದು ಅಪಾಯ ಮಾತ್ರ.

ಯಾವ ಅಜಿತ್ ಪವಾರ್‌ರನ್ನು ಮಹಾ ಭ್ರಷ್ಟ ಎಂದು ಆರೋಪಿಸಿತ್ತೋ ಅವರನ್ನೇ ಕರೆದು ಡಿಸಿಎಂ ಮಾಡಿ ಜೊತೆಗಿಟ್ಟುಕೊಳ್ಳುವ ಬಿಜೆಪಿ, ಒಂದು ರಾಜ್ಯದ ಜನತೆ ಒಮ್ಮತದಿಂದ ಗೆಲ್ಲಿಸಿದ್ದ ಮುಖ್ಯಮಂತ್ರಿಯನ್ನು ಭ್ರಷ್ಟಾಚಾರ ಆರೋಪ ಹೊರಿಸಿ ಜೈಲಿಗೆ ಕಳಿಸುತ್ತದೆ ಎಂಬುದೇ ಅತ್ಯಂತ ಹಾಸ್ಯಾಸ್ಪದ ಮತ್ತು ವಿಪರ್ಯಾಸದ ಸಂಗತಿಯಾಗಿದೆ.

ಬಿಜೆಪಿಯ ಈ ದ್ವಂದ್ವನೀತಿಯಲ್ಲಿರುವುದು ಮತ್ತದೇ ಉದ್ದೇಶ. ವಿಪಕ್ಷಗಳನ್ನು ಖಾಲಿ ಮಾಡುವುದು, ಇಲ್ಲವೇ ಮುಗಿಸಿಹಾಕುವುದು.

ಇಂಥ ಹೊತ್ತಿನಲ್ಲಿ ಈ ದೇಶದ ಜನರು ನಿಜವಾಗಿಯೂ ತಮ್ಮ ರಾಜಕೀಯ ಭಾಗವಹಿಸುವಿಕೆಯ ಮಹತ್ವವನ್ನು ಮನವರಿಕೆ ಮಾಡಿಕೊಂಡು ಬಹಳ ದೊಡ್ಡ ತೀರ್ಮಾನ ಕೊಡಬಲ್ಲ ಸವಾಲು ಅವರ ಮುಂದಿದೆ.

ಹೆಚ್ಚು ದಿನಗಳೇನಿಲ್ಲ. ಕಾದು ನೋಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿ. ಪದ್ಮನಾಭ

contributor

Similar News