ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡಲಿರುವ ಕಾಫಿನಾಡಿನ ಪ್ರತಿಭೆ

Update: 2024-05-07 09:30 GMT

ಚಿಕ್ಕಮಗಳೂರು, ಮೇ 6: ಐಪಿಎಲ್ ಕ್ರಿಕೆಟ್‌ನ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ದೇಶಗಳ ಆತಿಥ್ಯದಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯತ್ತ ಇಡೀ ದೇಶದ ಕ್ರಿಕೆಟ್ ಅಭಿಮಾನಿಗಳ ಕಣ್ಣು ನೆಟ್ಟಿದೆ.

ಈ ಬಾರಿ ಅಮೆರಿಕದಲ್ಲಿ ನಡೆಯುವ ಐಸಿಸಿ ಟಿ20 ಕ್ರಿಕೆಟ್‌ನಲ್ಲಿ ಕಾಫಿನಾಡಿನ ಕನ್ನಡಿಗನ ಹೆಸರು ಸದ್ದು ಮಾಡಿದೆ. ಬಿಸಿಸಿಐ ಪ್ರಕಟಿಸಿದ ಭಾರತ ತಂಡದ ಕ್ರಿಕೆಟಿಗರ ಪಟ್ಟಿಯಲ್ಲಿ ಈತನ ಹೆಸರಿಲ್ಲದಿದ್ದರೂ ಈ ಬಾರಿಯ ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಈ ಕನ್ನಡಿಗ ಆಡಲಿದ್ದಾರೆ. ಅಷ್ಟಕ್ಕೂ ಈ ಕನ್ನಡನಾಡಿನ ಕ್ರಿಕೆಟಿಗ ಯಾರು?, ಯಾವ ದೇಶದ ಪರ ಆಡಲಿದ್ದಾನೆಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ನೂಸ್ತೋಷ್ ಕೆಂಜಿಗೆ ಎಂಬ ಕಾಫಿನಾಡು ಮೂಲದ ಕನ್ನಡಿಗನ ಹೆಸರು ಇದೀಗ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಇದೇ ಮೊದಲ ಬಾರಿಗೆ ಅಮೆರಿಕ ದೇಶದಲ್ಲಿ ನಡೆಯುವ ಐಸಿಸಿ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಟವಾಡಲು ಆಯ್ಕೆಯಾಗುವ ಮೂಲಕ ಕಾಫಿನಾಡಿನ ಈ ಕನ್ನಡಿಗ ದೇಶ, ರಾಜ್ಯ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ ಎಂಬ ಕುಗ್ರಾಮದ ಕಾಫಿ ಬೆಳೆಗಾರ ಹಾಗೂ ಲೇಖಕರೂ ಆದ ಡಾ.ಪ್ರದೀಪ್ ಹಾಗೂ ಶೃತಕೀರ್ತಿ ದಂಪತಿಯ ಪುತ್ರನಾಗಿರುವ ನೂಸ್ತೋಷ್ ಸದ್ಯ ಅಮೆರಿಕ ದೇಶದಲ್ಲಿ ಉದ್ಯೋಗದಲ್ಲಿದ್ದು, ಉದ್ಯೋಗದೊಂದಿಗೆ ಕ್ರಿಕೆಟ್ ಆಡುವುದನ್ನೂ ಅಲ್ಲಿ ಮುಂದುವರಿಸಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಇವರ ಸಾಧನೆ ಕಂಡು ನೂಸ್ತೋಷ್ ಕೆಂಜಿಗೆ ಅಮೆರಿಕ ದೇಶದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅಮೆರಿಕದ ದೇಶೀಯ ಕ್ರಿಕೆಟ್‌ನಲ್ಲಿ ಎಡಗೈ ಬೌಲರ್ ಹಾಗೂ ಎಡಗೈ ಬ್ಯಾಟರ್ ಆಗಿ ಅತ್ಯುತ್ತಮ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಈ ಬಾರಿ ಅಮೆರಿಕ ದೇಶದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ನೂಸ್ತೋಷ್ ಕೆಂಜಿಗೆ ಆಯ್ಕೆ ಆಗಿದ್ದಾರೆ.

ಅಮೆರಿಕದ ಪರ ಆಡಲಿರುವ 11 ಮಂದಿ ರಾಷ್ಟ್ರೀಯ ಕ್ರಿಕೆಟ್ ತಂಡದ ಕ್ರಿಕೆಟಿಗರ ಪೈಕಿ ನೂಸ್ತೋಷ್ ಕೆಂಜಿಗೆ ವಿಶಿಷ್ಟ ಶೈಲಿಯ ಸ್ಪಿನ್ ದಾಳಿಗೆ ಹೆಸರುವಾಸಿಯಾಗಿದ್ದು, ಎಡಗೈ ಬ್ಯಾಟರ್ ಆಗಿಯೂ ಅತ್ಯುತ್ತಮ ಸಾಧನೆ ಮಾಡಿರುವ ದಾಖಲೆ ಹೊಂದಿದ್ದಾರೆ. ನೂಸ್ತೋಷ್ ಕೆಂಜಿಗೆ ಎಸೆಸೆಲ್ಸಿವರೆಗೆ ಊಟಿಯ ಬೋರ್ಡಿಂಗ್ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡಿದ್ದು, ನಂತರ ಬೆಂಗಳೂರಿನ ವಿಶ್ವವಿದ್ಯಾಲಯವೊಂದರಲ್ಲಿ ಎಮ್‌ಟೆಕ್ ಮಾಡಿದ್ದಾರೆ. ಬಾಲ್ಯದಿಂದಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದ ಅವರಿಗೆ ಪೋಷಕರು ಬೆಂಗಳೂರಿನಲ್ಲಿ ಇರ್ಫಾನ್ ಶೇಟ್ ಎಂಬ ಕ್ರಿಕೆಟ್ ಕೋಚ್ ಅವರಿಂದ ಉತ್ತಮ ತರಬೇತಿ ಕೊಡಿಸಿದ್ದರು.

ಇತ್ತೀಚೆಗೆ ಅಮೆರಿಕ ದೇಶದಲ್ಲಿ ನಡೆದ ಐಪಿಎಲ್ ಮಾದರಿಯ ಟಿ20 ಕ್ರಿಕೆಟ್‌ನಲ್ಲೂ ಆಡಿರುವ ನೂಸ್ತೋಷ್ ಅಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. 2017ರಲ್ಲಿ ನೂಸ್ತೋಷ್ ಅಮೆರಿಕ ದೇಶದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಸೇರ್ಪಡೆಗೊಂಡಿದ್ದು, ಅಲ್ಲಿಂದ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡುತ್ತಲೇ ಬಂದಿದ್ದರು.

ಟಿ20 ವಿಶ್ವಕಪ್ ಕ್ರಿಕೆಟ್‌ನ ಅರ್ಹತಾ ಸುತ್ತುಗಳಲ್ಲಿ ವಿವಿಧ ದೇಶಗಳ ವಿರುದ್ಧ ಬೌಲರ್, ಬ್ಯಾಟರ್ ಆಗಿ ಅತ್ಯುತ್ತಮ ಆಲ್‌ರೌಂಡರ್ ಪ್ರದರ್ಶನ ನೀಡುವ ಮೂಲಕ ಅಮೆರಿಕ ತಂಡ ವಿಶ್ವಕಪ್ ಟಿ20 ಕ್ರಿಕೆಟ್‌ಗೆ ಅರ್ಹತೆ ಪಡೆಯಲು ಕಾರಣವಾಗಿದ್ದ ಅವರ ಸಾಧನೆ ಕಂಡು ಅಮೆರಿಕ ಕ್ರಿಕೆಟ್ ಸಂಸ್ಥೆ ರಾಷ್ಟ್ರೀಯ ತಂಡಕ್ಕೆ ಅವರನ್ನು ಈ ಬಾರಿ ಆಯ್ಕೆ ಮಾಡಿದ್ದು, ಅಮೆರಿಕದಲ್ಲಿ ಜೂ.2ರಿಂದ ನಡೆಯುವ ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಅವರು ಅಮೆರಿಕ ದೇಶವನ್ನು ಪ್ರತಿನಿಧಿಸಿ ಆಡಲಿದ್ದಾರೆ. ವಿಶ್ವಕಪ್ ಟಿ20 ಕ್ರಿಕೆಟ್‌ನ ಲೀಗ್ ಹಂತದ ಪಂದ್ಯಾವಳಿಗಳಲ್ಲಿ ನೂಸ್ತೋಷ್ ಕೆಂಜಿಗೆ ಅಮೆರಿಕ ದೇಶದ ಪರವಾಗಿ ಭಾರತದ ವಿರುದ್ಧ ಆಡಲಿದ್ದಾರೆ.

ಕರ್ನಾಟಕ ಮೂಲದ ಅನೇಕ ಕ್ರಿಕೆಟಿಗರು ಬೇರೆ ಬೇರೆ ದೇಶಗಳ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡುವ ಮೂಲಕ ಆ ದೇಶ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಅಪಾರ ಕೊಡುಗೆ ನೀಡಿದ್ದಾರೆ. ಬೆಂಗಳೂರು ಮೂಲದ ಕನ್ನಡಿಗ ರಚಿನ್ ರವೀಂದ್‌ರ ನ್ಯೂಜಿಲ್ಯಾಂಡ್ ದೇಶದ ಪರ ಆಡುವ ಮೂಲಕ ಈಗಾಗಲೇ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಧನೆ ಮಾಡಿ ಉತ್ತಮ ಭವಿಷ್ಯ ಕಂಡುಕೊಂಡಿದ್ದಾರೆ.

ನೂಸ್ತೋಷ್ ಬಾಲ್ಯದಿಂದಲೇ ಕ್ರಿಕೆಟ್ ಆಟದ ಬಗ್ಗೆ ಆಸಕ್ತಿ ಹೊಂದಿದ್ದ. ಆತನ ಆಸಕ್ತಿಗೆ ಪೂರಕವಾಗಿ ಬೆಂಗಳೂರಿನಲ್ಲಿ ಇರ್ಫಾನ್ ಶೇಟ್ ಎಂಬವರಿಂದ ತರಬೇತಿ ಕೊಡಿಸಿದ್ದೆವು. ಎಮ್‌ಟೆಕ್ ಬಳಿಕ ಅಮೆರಿಕ ದೇಶಕ್ಕೆ ಕೆಲಸಕ್ಕೆ ಹೋಗಿದ್ದು, ಈ ವೇಳೆ ಕ್ರಿಕೆಟ್ ಆಟವನ್ನೂ ಮುಂದುವರಿಸಿದ್ದ. ಅಲ್ಲಿ ಆತನ ಕ್ರಿಕೆಟ್ ಸಾಧನೆ ಕಂಡು ಸದ್ಯ ಅಮೇರಿಕ ದೇಶದ ವಿಶ್ವಕಪ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾನೆ. ಈ ಸುದ್ದಿ ಕೇಳಿ ಸಂತಸವಾಗಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ನಾಸ್ತೋಷ್ ಅಮೇರಿಕಾ ದೇಶದ ಪರ ಆಡಲಿದ್ದಾನೆ.

- ಶೃತಕೀರ್ತಿ, ನೂಸ್ತೋಷ್ ತಾಯಿ

ಅಮೆರಿಕದಲ್ಲಿ ಕ್ರಿಕೆಟ್ ಅಷ್ಟೇನೂ ಜನಪ್ರಿಯ ಅಲ್ಲದಿದ್ದರೂ ಅಲ್ಲಿ ಇತ್ತೀಚೆಗೆ ಕ್ರಿಕೆಟ್ ಕ್ರೇಜ್ ಜೋರಾಗುತ್ತಿದೆ. ಐಎಫ್‌ಎಲ್ ಮಾದರಿಯ ಕ್ರಿಕೆಟ್ ಅಲ್ಲಿ ಆಯೋಜಿಸಿ ಬಳಿಕವಂತೂ ಅಮೆರಿಕದಲ್ಲೂ ಕ್ರಿಕೆಟ್ ಫೀವರ್ ಹೆಚ್ಚಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದಂತಹ ದೇಶಗಳ ಎನ್‌ಆರ್‌ಐಗಳು ಅಲ್ಲಿ ಹೆಚ್ಚಿರುವುದರಿಂದ ಅಲ್ಲಿ ಕ್ರಿಕೆಟ್‌ಗೂ ಜನಪ್ರಿಯತೆ ಕಂಡುಕೊಳ್ಳುತ್ತಿದೆ. ಈ ವಿಶ್ವಕಪ್‌ನಲ್ಲಿ ನನ್ನ ಮಗ ಹೇಗೆ ಪ್ರದರ್ಶನ ನೀಡುತ್ತಾನೆಂಬ ಕುತೂಹಲವಿದೆ. ಭಾರತದ ವಿರುದ್ಧವೂ ಆತನ ಪ್ರದರ್ಶನ ನೋಡಲು ಕಾತರದಿಂದ ಕಾಯುತ್ತಿದ್ದೇವೆ.

- ಪ್ರದೀಪ್ ಕೆಂಜಿಗೆ, ನೂಸ್ತೋಷ್ ತಂದೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ. ಎಲ್ ಶಿವು

contributor

Similar News