ಕರ್ನಾಟಕವನ್ನು ಕಾಡುತ್ತಲೇ ಇರುವ ಎತ್ತಿನಹೊಳೆ ಯೋಜನೆ ಕುರಿತ ಪ್ರಶ್ನೆಗಳು

Update: 2024-09-18 04:21 GMT

ಸತೀಶ್ ಜಿ.ಟಿ. | ಕನ್ನಡಕ್ಕೆ: ಕೆ.ಎನ್. ಲಿಂಗಪ್ಪ

ಪ್ರತಿಪಕ್ಷಗಳು ಎಬ್ಬಿಸಿರುವ ವಿವಾದಗಳು ಮತ್ತು ನಾಯಕತ್ವದ ಬಗ್ಗೆ ತನ್ನದೇ ಆದ ಆಂತರಿಕ ಸೆಣಸಾಟಗಳನ್ನು ಎದುರಿಸಲು ಹೆಣಗಾಡುತ್ತಿರುವ ಕರ್ನಾಟಕದ ಕಾಂಗ್ರೆಸ್ ಸರಕಾರವು, ಇತ್ತೀಚೆಗೆ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿದೆ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಗುಡ್ಡಗಾಡು ಪ್ರದೇಶವಾದ ಮಲೆನಾಡು ಜಿಲ್ಲೆಗಳು ಮತ್ತು ಕರಾವಳಿ ಪ್ರದೇಶದಲ್ಲಿ ಹರಿಯುವ ನೇತ್ರಾವತಿ ನದಿಯ ಜಲಾನಯನ ಪ್ರದೇಶದಿಂದ 24.01 ಟಿಎಂಸಿ ಅಡಿ ನೀರನ್ನು ಬಳಸಿಕೊಂಡು ದಕ್ಷಿಣ ಕರ್ನಾಟಕದ ಏಳು ಒಣ ಜಿಲ್ಲೆಗಳಿಗೆ ನೀರು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.

ಆದರೆ, 23,251 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನ ಗೊಳ್ಳುತ್ತಿರುವ ಈ ಯೋಜನೆ ಆರಂಭದಿಂದಲೂ ವಿವಾದಕ್ಕೀ ಡಾಗಿದೆ. ಪಶ್ಚಿಮ ದಿಕ್ಕಿಗೆ ಹರಿಯುವ ನದಿಗಳಿಂದ ಹೆಚ್ಚುವರಿ ನೀರನ್ನು ತಿರುಗಿಸುವ ಮೂಲಕ ಒಣ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯಗಳನ್ನು ಒದಗಿಸುವ ಕುರಿತು ರಾಜ್ಯ ಸರಕಾರದ ಸೂಪರ್ ಇಂಟೆಂಡೆಂಟ್ ಇಂಜಿನಿಯರ್ ಆಗಿ ನಿವೃತ್ತರಾದ ಡಾ. ಜಿ.ಎಸ್ ಪರಮಶಿವಯ್ಯ ಅವರು ಸಲ್ಲಿಸಿದ ವರದಿಯೇ ಈ ಯೋಜನೆಯ ಮೂಲ. ಎತ್ತಿನಹೊಳೆ ಯೋಜನೆಯು ಅವರ ವರದಿಯ ಆರಂಭದಲ್ಲಿ ಏನು ಶಿಫಾರಸು ಮಾಡಿದ್ದರೋ ಅದರ ಒಂದು ಭಾಗ.

ಈ ಯೋಜನೆಯನ್ನು ವಿರೋಧಿಸಿ ಹೋರಾಟಗಾರರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮೊರೆ ಹೋಗಿದ್ದರು. ಅರಣ್ಯ ಮತ್ತು ಪರಿಸರದ ಅನುಮತಿ ಪಡೆಯದೆ ಸರಕಾರ ಇದನ್ನು ಜಾರಿಗೊಳಿಸುತ್ತಿದೆ ಎಂದು ಅವರು ಸಮರ್ಥಿಸಿಕೊಂಡರು. ಆದಾಗ್ಯೂ, ಅವರ ಅರ್ಜಿಗಳನ್ನು 2019ರಲ್ಲಿ ಎನ್‌ಜಿಟಿಯ ಪ್ರಧಾನ ಪೀಠವು ರದ್ದುಗೊಳಿಸಿತು. ಈ ಯೋಜನೆಯು ಒಣ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ ಎಂಬ ಸರಕಾರದ ವಾದವನ್ನು ಎತ್ತಿ ಹಿಡಿದಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 2014ರಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿತು. ಇದೀಗ ಮೊದಲ ಹಂತ ಉದ್ಘಾಟನೆಗೊಂಡಿದೆ. ನೇತ್ರಾವತಿಗೆ ಸೇರುವ ನದಿಗಳಾದ ಎತ್ತಿನಹೊಳೆ, ಕೇರಿ ಹೊಳೆ, ಹೊಂಗದಹಳ್ಳ ಮತ್ತು ಕಾಡುಮನೆ ಹೊಳ್ಳಗಳನ್ನು ಎಂಟು ಸ್ಥಳಗಳಲ್ಲಿ ತಿರುಗಿಸುವ ಮೂಲಕ 24.01 ಟಿಎಂಸಿ ಅಡಿ ನೀರು ಎತ್ತಬಹುದು ಎಂದು ಜಲಸಂಪನ್ಮೂಲ ಇಲಾಖೆ ಅಂದಾಜಿಸಿದೆ. ಯೋಜನೆ ಪೂರ್ಣಗೊಂಡರೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಅನುಕೂಲವಾಗಲಿದೆ.

ಜಲಸಂಪನ್ಮೂಲ ಖಾತೆಯನ್ನು ಹೊಂದಿರುವ ಡಿ.ಕೆ. ಶಿವಕುಮಾರ್ ಕಳೆದ ಒಂದು ವರ್ಷದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ಇರುವ ಅಡೆತಡೆಗಳನ್ನು ತೆರವುಗೊಳಿಸಲು ವಿಶೇಷ ಗಮನ ನೀಡಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಮತ್ತು ಅವರು ಗುರುತ್ವಾಕರ್ಷಣ ಕಾಲುವೆ ಮತ್ತು ಫೀಡರ್ ಕಾಲುವೆಗಳಿಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಉಳಿದಿರುವ ತೊಂದರೆಗಳನ್ನು ನಿವಾರಿಸಿ ಮಾರ್ಚ್ 2027ರೊಳಗೆ ಯೋಜನೆಯನ್ನು ಪೂರ್ಣಗೊಳಿಸುವಂತೆ ನೋಡಿಕೊಳ್ಳುವುದಾಗಿ ಹೇಳಿದರು.

ಆದರೂ, ಇದು ಸುಲಭದ ಕೆಲಸವಲ್ಲ, ಏಕೆಂದರೆ ಮಲೆನಾಡು ಮತ್ತು ಕರಾವಳಿ ಭಾಗದ ಜನರು ವಿರೋಧಿಸುತ್ತಲೇ ಇದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದ ನಿವಾಸಿಗಳು ಸಾಕಷ್ಟು ನೀರು ಒದಗಿದರೂ ಸರಕಾರ ಭರವಸೆ ನೀಡಿದಂತೆ ನೀರು ಸಿಗುತ್ತದೆಯೇ ಎಂಬ ಅನುಮಾನ ಅವರಿಗಿದೆ.

ಯೋಜನಾ ಪ್ರದೇಶದಲ್ಲಿ ನೀರಿನ ಲಭ್ಯತೆ, ಕೆಲವು ತಜ್ಞರು ಅಭಿಪ್ರಾಯ ಪಡುವಂತೆ 9.55 ಟಿಎಂಸಿ ಅಡಿ ಮಾತ್ರ. ಸರಕಾರವು ಹೇಳುವಂತೆ 24.01 ಟಿಎಂಸಿ ಅಡಿ ಅಲ್ಲ. 5 ಟಿಎಂಸಿ ಅಡಿಗಿಂತ ಹೆಚ್ಚು ಕೊರತೆ ಬೀಳುವುದಿಲ್ಲ ಎಂದು ವಾದಿಸುತ್ತಲೇ ಯೋಜನಾ ಪ್ರದೇಶದ ಕೆಳಗೆ ಇರುವ ಇನ್ನೂ ಕೆಲವು ಹೊಳೆಗಳಿಂದ ನೀರನ್ನು ಎತ್ತಲು ಸಮೀಕ್ಷೆ ಮಾಡುವಂತೆ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಅವರ ಹೇಳಿಕೆ ಪರಿಸರ ಪ್ರೇಮಿಗಳಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಎನ್‌ಜಿಟಿಯ ಮುಂದೆ ಅರ್ಜಿದಾರರಲ್ಲಿ ಒಬ್ಬರಾದ ಕಿಶೋರ್ ಕುಮಾರ್, ಇಂತಹ ಕ್ರಮವು ಅರಣ್ಯಗಳಿಗೆ ಮತ್ತಷ್ಟು ಹಾನಿ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಈ ವರ್ಷ ಜುಲೈನಲ್ಲಿ ಸುರಿದ ಭಾರೀ ಮಳೆಯ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಹಲವು ಕಡೆ ಭೂಕುಸಿತ ಸಂಭವಿಸಿತು. ಅಂತಹ ಕೆಲವು ಸ್ಥಳಗಳು ಎತ್ತಿನಹೊಳೆ ಯೋಜನೆಯ ಕಾಮಗಾರಿ ನಡೆದ ಸ್ಥಳಗಳಿಗೆ ಸಮೀಪದಲ್ಲಿವೆ. ಈ ದುರಂತಕ್ಕೆ ಯೋಜನೆಯೇ ಕಾರಣ ಎಂದು ಇಲ್ಲಿನ ನಿವಾಸಿಗಳು ಆರೋಪಿಸುತ್ತಾರೆ. ಭೂಕುಸಿತಕ್ಕೂ ಯೋಜನೆಗೂ ಯಾವುದೇ ಸಂಬಂಧವಿಲ್ಲ ಎಂದು ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಅಧಿಕಾರಿಗಳು ವಾದಿಸುತ್ತಾರೆ.

ಬರಪೀಡಿತ ಪ್ರದೇಶಗಳ ಜನರಿಗೆ ಪ್ರತೀ ಬೇಸಿಗೆಯಲ್ಲಿ ಕಾಡುವ ಕುಡಿಯುವ ನೀರಿನ ಬಿಕ್ಕಟ್ಟಿಗೆ ದೀರ್ಘಾವಧಿಯ ಪರಿಹಾರಗಳ ಅಗತ್ಯವಿದ್ದರೂ ಎತ್ತಿನಹೊಳೆ ಯೋಜನೆಯ ಸುತ್ತಲಿನ ಬಹು ಸಮಸ್ಯೆಗಳು ಬದಿಗಿಡುವಂತಹದ್ದಲ್ಲ.

-ಕೃಪೆ: ದಿ ಹಿಂದೂ

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News