ಕೋಲಾರ ನಗರ ಸಭೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ; ನೀರು ಶುದ್ದೀಕರಣ ಘಟಕ ದುರಸ್ತಿಗೆ ಆಗ್ರಹ

Update: 2024-02-19 05:46 GMT

ಕೋಲಾರ: ಹಲವು ತಿಂಗಳುಗಳಿಂದ ಶುದ್ಧೀಕರಣ ಘಟಕದ ಫಿಲ್ಟರ್ ರಿಪೇರಿ ಮಾಡಿಸದೆ ಇರುವುದರಿಂದ ನೀರು ಶುದ್ಧೀಕರಣ ಘಟಕ ಸ್ಥಗಿತಗೊಂಡಿದೆ. ಇದರಿಂದ ನಗರದ 35 ವಾರ್ಡುಗಳಿಂದ ಒಳಚರಂಡಿಯಲ್ಲಿ ಹರಿದು ಬರುವ ಮಲಮಿಶ್ರಿತ ತ್ಯಾಜ್ಯ ನೀರು ನೇರವಾಗಿ ಚಿನ್ನಾಪುರ ಕಾಲುವೆಗೆ ಹರಿಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕೋಲಾರ ತಾಲೂಕಿನ ಚಿನ್ನಾಪುರ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕೋಲಾರ ನಗರದಲ್ಲಿ 2011 ರಿಂದ ಒಳಚರಂಡಿ ಶುದ್ಧೀಕರಣ ಘಟಕ ಕಾರ್ಯ ನಿರ್ವಹಿಸುತ್ತಿದೆ. ಒಳಚರಂಡಿಯಲ್ಲಿ ಹರಿಯುವ ತ್ಯಾಜ್ಯ ಹಾಗೂ ನೀರನ್ನು ಬೇರ್ಪಡಿಸಿ ತ್ಯಾಜ್ಯ ನೀರನ್ನು ಮೊದಲ ಹಂತದ ಶುದ್ಧೀಕರಣಕ್ಕೆ ಒಳಪಡಿಸಿ ಕೋಲಾರ ನಗರಸಭೆ ವ್ಯಾಪ್ತಿಗೆ ಸಮೀಪದಲ್ಲೇ ಇರುವ ಚಿನ್ನಾಪುರ ಗ್ರಾಮದ ಕೆರೆಯಲ್ಲಿ ಬಿಡಲಾಗುತ್ತಿತ್ತು. ಇಲ್ಲಿ ಎರಡು ಮೂರು ತೆರದ ಟ್ಯಾಂಕ್‌ಗಳಲ್ಲಿ ನೀರನ್ನು ಸಂಗ್ರಹಿಸಿ ಬಳಿಕ ಶುದ್ಧ್ದೀಕರಿಸಿದ ನೀರನ್ನು ಕೆರೆಯ ಹೊರಗಿನ ಕಾಲುವೆಗೆ ಹರಿಸಲಾಗುತ್ತದೆ. ಆದರೆ ಹಲವು ತಿಂಗಳಿಂದ ಚಿನ್ನಾಪುರ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತವಾಗಿದೆ.

ತೆರದ ಪ್ರದೇಶದಲ್ಲಿ ಮಲಮಿಶ್ರಿತ ತ್ಯಾಜ್ಯ ನೀರು ಹರಿಯುತ್ತಿರುವ ಕಾರಣ ಕಳೆದ ಒಂದೇ ತಿಂಗಳಲ್ಲಿ ಚಿನ್ನಾಪುರ ಗ್ರಾಮವೊಂದರಲ್ಲೇ ಸುಮಾರು ೨೦ಕ್ಕೂ ಹೆಚ್ಚು ಹಸುಗಳ ಸಾವನಪ್ಪಿರುವುದು ಇದೀಗ ಬೆಳಕಿಗೆ ಬಂದಿದೆ. ಇದು ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಆತಂಕವನ್ನು ಉಂಟು ಮಾಡಿದೆ. ಇಷ್ಟೇ ಅಲ್ಲದೆ ಈ ನೀರು ರಾಜ ಕಾಲುವೆಯಿಂದ ಕಾಮಧೇನಹಳ್ಳಿ ಕೆರೆ ಹಾಗೂ ಮಣಿಘಟ್ಟ ಕರೆಯನ್ನು ಸೇರುವ ಮೂಲಕ ಪಾಲಾರ್ ನದಿಗೆ ಹರಿಯುತ್ತಿದೆ. ಇದರಿಂದ ಪಾಲಾರ್ ನದಿ ಪಾತ್ರದ ಗ್ರಾಮಗಳ ಅಂತರ್ಜಲಕ್ಕೆ ಸೇರುತ್ತಿದೆ. ಚಿನ್ನಾಪುರ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿನ ನೀರು ಸಹ ಕುಡಿಯಲು ಯೋಗ್ಯವಲ್ಲವೆಂದು ಹೇಳಲಾಗಿದ್ದು, ಗ್ರಾಮದ ಜನ ಸಮೀಪದ ಚೊಕ್ಕಹಳ್ಳಿಯಿಂದ ಟ್ಯಾಂಕರ್ ಮೂಲಕ ನೀರು ತರಿಸಿ ಪ್ರತಿ ಬಿಂದಿಗೆ ನೀರು ರೂ.೧೦ ಕೊಟ್ಟು ಖರೀದಿಸುತ್ತಿದ್ದಾರೆ.

ಒಟ್ಟಾರೆ ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಚಿನ್ನಾಪುರ ಮತ್ತು ಸುತ್ತಮುತ್ತಲ ಗ್ರಾಮಗಳ ನೀರಿನ ಸಮಸ್ಯೆಗೆ ಒಳಗಾಗುತ್ತಿರುವುದು ಕಂಡೂ ಕಾಣದಂತೆ ಇದ್ದು, ಮುಂದಿನ ದಿನಗಳಲ್ಲಿ ತ್ಯಾಜ್ಯ ನೀರಿನಿಂದ ಆಗುವ ದುಷ್ಪರಿಣಾಮಗಳು ಕೋಲಾರ ನಗರಕ್ಕೂ ತಲುಪುವ ವಿಫುಲ ಅವಕಾಶಗಳನ್ನು ತಳ್ಳಿಹಾಕುವಂತಿಲ್ಲ. ಈ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಇನ್ನಾದರೂ ಸಂಬಂಧಪಟ್ಟ ಇಲಾಖೆಯಾಗಲೀ ಅಥವಾ ಜಿಲ್ಲಾಡಳಿತವಾಗಲೀ ಯಾವ ರೀತಿಯ ಕ್ರಮ ಕೈಗೊಳ್ಳುವುದು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನಗರಸಭೆ ಕೋಲಾರ ವತಿಯಿಂದ ಕೋಲಾರ ನಗರದ ಮೊದಲನೇ ಹಂತದ ಒಳಚರಂಡಿ ಯೋಜನೆಯ ೧೦.೧೬ ಎಮ್.ಎಲ್.ಡಿ. ಸಾಮರ್ಥ್ಯದ ಗ್ರಾಮಸಾರ ಶುದ್ಧೀಕರಣ ಘಟಕ ಸಧ್ಯಕ್ಕೆ ಕಾರ್ಯನಿರ್ವಹಿಸುತ್ತಿಲ್ಲ. ಇಲ್ಲಿನ ಫಿಲ್ಟರ್ ಕೆಟ್ಟು ನಿಂತಿದೆ. ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. 

- ಶಿವಾನಂದ, ಪೌರಾಯುಕ್ತರು, ನಗರಸಭೆ, ಕೋಲಾರ

ಕೋಲಾರ ಚಿನ್ನಾಪುರ ಕೆರೆ ನೀರಿನ ಸೇವನೆಯಿಂದಾಗಿ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ತ್ಯಾಜ್ಯ ಸಂಸ್ಕರಣಾ ಘಟಕವನ್ನು ರಿಪೇರಿ ಮಾಡಿ, ಕೆರೆಗೆ ವಿಷಪೂರಿತ ನೀರು ಹರಿಯದಂತೆ ಕ್ರಮವಹಿಸಿ, ಜನರ ಪ್ರಾಣಗಳನ್ನೂ ಉಳಿಸಬೇಕು.

- ಅನಿಲ್ ಕುಮಾರ್, ನಿವಾಸಿ ಚಿನ್ನಾಪುರ ಗ್ರಾಮ

ಕಲುಷಿತ ನೀರು ಸೇವನೆಯಿಂದಾಗುವ ಅನಾಹುತಗಳಿಗೆ ಕೋಲಾರ ಜಿಲ್ಲಾಡಳಿತ ಹೊಣೆಯಾಗಬೇಕಾಗುತ್ತದೆ. ಈಗಾಗಲೇ ಜಾನುವಾರುಗಳು ಸಾವನಪ್ಪಿರುವುದು ಬೆಳಕಿಗೆ ಬಂದಿದೆ. ಇದರಿಂದ ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆದರೆ ಜಾನುವಾರುಗಳ ಸಾವಿಗೂ ದೊಡ್ಡಮಟ್ಟದ ಪರಿಹಾರ ನೀಡಬೇಕಾಗುತ್ತದೆ.

- ನಳಿನಿಗೌಡ, ಜಿಲ್ಲಾಧ್ಯಕ್ಷೆ, ರಾಜ್ಯ ರೈತ ಸಂಘ, ಕೋಲಾರ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸಿ.ವಿ.ನಾಗರಾಜ ಕೋಲಾರ

contributor

Similar News