ಬುಡಕಟ್ಟುಗಳಿಗೆ ಮಾದರಿ ಕೊರಗರ ‘ಭೂಮಿ ಹಬ್ಬ’

ದಕ್ಷಿಣ ಕನ್ನಡ ಮತ್ತು ಕೇರಳದ ಗಡಿಭಾಗದಲ್ಲಿ ಹೆಚ್ಚಿರುವ ಈ ಭಾಗದ ಮೂಲನಿವಾಸಿಗಳಾದ ಕೊರಗರು ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ಜೀವಂತವಾಗಿಟ್ಟುಕೊಂಡಿ ದ್ದಾರೆ. ಈ ಕಾರಣಕ್ಕೆ ಕರ್ನಾಟಕದ ಬುಡಕಟ್ಟುಗಳಲ್ಲಿಯೇ ಕೊರಗ ಸಮುದಾಯಕ್ಕೆ ವಿಶಿಷ್ಟವಾದ ಚರಿತ್ರೆಯಿದೆ. ಆಗಸ್ಟ್ 18, 1993 ಕೊರಗ ಸಮುದಾಯದ ಐತಿಹಾಸಿಕ ಮೈಲುಗಲ್ಲು. ಕಾಲ್ನಡಿಗೆಯಲ್ಲಿ ಮಂಗಳೂರಿನ ಬಾವುಟಗುಡ್ಡೆ ಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಕೊರಗ ಸಮುದಾಯ ತಮ್ಮ ಹಕ್ಕೊತ್ತಾಯಗಳಿಗಾಗಿ ಗಟ್ಟಿಯಾಗಿ ಧ್ವನಿ ಎತ್ತಿದ ದಿನ.

Update: 2024-08-27 05:53 GMT

ಇದೇ ಆಗಸ್ಟ್ 18ರಂದು ಉಡುಪಿ ಸಮೀಪದ ಸಚೇರಿಪೇಟೆಯಲ್ಲಿ ಉಡುಪಿ ಜಿಲ್ಲಾ ಕೊರಗ ಅಸೋಸಿ ಯೇಷನ್ ಹಾಗೂ ಸಚೇರಿಪೇಟೆಯ ಆದರ್ಶ ಸ್ಪೋರ್ಟ್ಸ್ ಕ್ಲಬ್ ಇವರು ಜಂಟಿಯಾಗಿ ಕೊರಗರ 16ನೇ ‘ಭೂಮಿಹಬ್ಬ’ವನ್ನು ಆಚರಿಸಿದರು. ಮೆರವಣಿಗೆಯಲ್ಲಿ ಕೊಂಬು, ಗಜಮೇಳ, ಚಂಡೆ, ಕತ್ತಿವರಸೆಯ ತಾಲೀಮು, ವಾಹನ ರ್ಯಾಲಿ ಹಬ್ಬಕ್ಕೆ ರಂಗು ನೀಡಿದವು. ಬಳಕುಂಜೆ ಕೊರಗರ ಗುರಿಕಾರ ತೆಂಗಿನ ಸಸಿ ನೆಟ್ಟು ಚಾಲನೆ ನೀಡಿದರು. ಜೇನು ಹಂಚಿ ಬಾಯಿ ಸಿಹಿ ಮಾಡಿಕೊಂಡರು. ಕೊರಗರ ಧ್ವಜಾರೋಹಣ ನೆರವೇರಿಸಿದರು. ಉಡುಪಿ ಜಿಲ್ಲೆಯ ಕೊರಗ ಸಂಘದ ಅಧ್ಯಕ್ಷೆ ಗೌರಿಯವರು ಸಂಘಟನೆಯ ಎಲ್ಲರನ್ನೂ ಒಳಗೊಂಡು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. 2008ರಿಂದ ಹೀಗೆ ಪ್ರತೀ ವರ್ಷ ‘ಭೂಮಿಹಬ್ಬ’ವನ್ನು ಆಚರಿಸುವಾಗಲೂ ಕೊರಗರ ಹೋರಾಟದ ಕಥೆಯೊಂದು ಬಿಚ್ಚಿಕೊಳ್ಳುತ್ತದೆ.

ದಕ್ಷಿಣ ಕನ್ನಡ ಮತ್ತು ಕೇರಳದ ಗಡಿಭಾಗದಲ್ಲಿ ಹೆಚ್ಚಿರುವ ಈ ಭಾಗದ ಮೂಲನಿವಾಸಿಗಳಾದ ಕೊರಗರು ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ಜೀವಂತವಾಗಿಟ್ಟುಕೊಂಡಿದ್ದಾರೆ. ಈ ಕಾರಣಕ್ಕೆ ಕರ್ನಾಟಕದ ಬುಡಕಟ್ಟುಗಳಲ್ಲಿಯೇ ಕೊರಗ ಸಮುದಾಯಕ್ಕೆ ವಿಶಿಷ್ಟವಾದ ಚರಿತ್ರೆಯಿದೆ. ಆಗಸ್ಟ್ 18, 1993 ಕೊರಗ ಸಮುದಾಯದ ಐತಿಹಾಸಿಕ ಮೈಲುಗಲ್ಲು. ಕಾಲ್ನಡಿಗೆಯಲ್ಲಿ ಮಂಗಳೂರಿನ ಬಾವುಟಗುಡ್ಡೆಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಕೊರಗ ಸಮುದಾಯ ತಮ್ಮ ಹಕ್ಕೊತ್ತಾಯಗಳಿಗಾಗಿ ಗಟ್ಟಿಯಾಗಿ ಧ್ವನಿ ಎತ್ತಿದ ದಿನ. ಪರಿಣಾಮ ಆಗ ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಮುಹಮ್ಮದ್ ಪೀರ್ ಅವರ ಅಧ್ಯಕ್ಷತೆಯಲ್ಲಿ ಅಧ್ಯಯನ ನಡೆಸಿ 1994ರಲ್ಲಿ ವರದಿ ಸಲ್ಲಿಸಲಾಯಿತು. ಈ ವರದಿ ಕೊರಗ ಸಮುದಾಯದ ಪ್ರತೀ ಕುಟುಂಬಕ್ಕೆ ಎರಡುವರೆ ಎಕರೆ ಜಮೀನು ನೀಡಬೇಕೆಂದು ಶಿಫಾರಸು ಮಾಡಿತು. ಇದನ್ನು ಆಧರಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಜಾಗೃತವಾಯಿತು. ಆಗ ಈ ಸಂಘಟನೆಯ ಅಧ್ಯಕ್ಷರಾಗಿದ್ದ ಪಿ. ಗೋಕುಲದಾಸ್ ಅವರ ನೇತೃತ್ವದ ‘ಕಾಳತ್ತೂರ್ ಚಲೋ’ ತೀವ್ರವಾದಾಗ 300 ಎಕರೆ ಜಾಗವನ್ನು 270 ಕುಟುಂಬಗಳಿಗೆ ಹಂಚಿ ‘ಕೊರಗರ ಭೂಮಿಹಕ್ಕು ಅಭಿಯಾನ’ಕ್ಕೆ ಚಾಲನೆ ಸಿಕ್ಕಿತ್ತು. ಹೀಗೆ 1993ರಲ್ಲಿ ಆರಂಭಗೊಂಡ ಭೂಮಿಹಕ್ಕು ಪ್ರತಿಪಾದನಾ ಅಭಿಯಾನ 450ಕ್ಕೂ ಹೆಚ್ಚು ಕುಟುಂಬಗಳು 490 ಎಕರೆ ಜಮೀನಿನ ಹಕ್ಕುಪತ್ರ ಪಡೆಯಲು ಕಾರಣವಾಗಿದೆ.

ಮತ್ತೊಂದೆಡೆ ‘ಅಜಲು’ ಎಂಬ ಅಮಾನವೀಯ ಕ್ರೌರ್ಯವನ್ನು ತಡೆಯಲು ಕೊರಗ ಸಮುದಾಯ ಸತತ ಎಂಟು ವರ್ಷ ಹೋರಾಡಿದ ಫಲವಾಗಿ 2000, ಆಗಸ್ಟ್ 17ರಂದು ಆಗಿನ ರಾಜ್ಯಪಾಲರಾಗಿದ್ದ ವಿ.ಎಸ್. ರಮಾದೇವಿಯವರು ‘ಅಜಲು ನಿಷೇಧ ಕಾಯ್ದೆ’ ತಂದರು. ಅಸ್ಪಶ್ಯ ಸಮುದಾಯವೊಂದು ತನ್ನ ಇರುವಿಕೆಗಾಗಿ ಧ್ವನಿ ಎತ್ತಿದ ದಿನ, ಅಜಲು ಎಂಬ ಹೀನ ಪದ್ಧತಿಯಿಂದ ಮುಕ್ತಿ ಪಡೆದು ಕೊರಗ ಸಮುದಾಯಕ್ಕೆ ಹೊಸ ದಿನವಾಗಿ, ಕೊರಗ ಸಮುದಾಯದ ಸ್ವಾತಂತ್ರ್ಯ ಮತ್ತು ಭೂಮಿಹಕ್ಕಿನ ಯಶಸ್ಸಿನ ಹಿನ್ನೆಲೆಯಲ್ಲಿ ಕೊರಗರು ಆಗಸ್ಟ್ 18ರಂದು ಪ್ರತೀವರ್ಷ ‘ಭೂಮಿಹಬ್ಬ’ ಆಚರಿಸುತ್ತಾರೆ. ಈ ಹೋರಾಟ ಪರಂಪರೆ ಕೊರಗ ಸಮುದಾಯ ಹೊಸ ತಲೆಮಾರನ್ನು ಚಳವಳಿಗೆ ಅಣಿಗೊಳಿಸಿದೆ. ಇಂತಹ ಚಳವಳಿಯ ಕಾವು ಪಡೆದು ಸಮುದಾಯಕ್ಕಾಗಿ ದಿಟ್ಟವಾಗಿ ಧ್ವನಿ ಎತ್ತುವ ಕೊರಗ ಸಮುದಾಯದ ಶಿಕ್ಷಿತ ಹೊಸ ತಲೆಮಾರು ಜಾಗೃತಗೊಂಡಿದೆ.

‘‘1992ರಲ್ಲಿ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದ ಸಂಕಪ್ಪ ರೈ ಅವರಿಗೆ ಕೊರಗರ ಸಂಘಟನೆಗಳ ಮೂಲಕ ಭೂಮಿ ಕೊಡಲು ಮನವಿ ಕೊಟ್ಟೆವು. ಈ ಮನವಿಗೆ ಸರಕಾರ ಮಣಿಯಲಿಲ್ಲ. ಆಗ ಸರಕಾರದ ಎಲ್ಲಾ ಯೋಜನೆಗಳು ‘ಭೂಮಿ’ ಆಧಾರಿತವಾಗಿದ್ದವು. ಹಾಗಾಗಿ ನಮಗೆ ಭೂಮಿ ಬೇಕೇ ಬೇಕು ಎನ್ನುವ ನಿರ್ಧಾರಕ್ಕೆ ಬಂದೆವು. ಸಮಗ್ರ ಗ್ರಾಮೀಣ ಆಶ್ರಮದೊಂದಿಗೆ ನಮ್ಮ ಸಂಘಟಿತ ಪ್ರಯತ್ನವೇ ಮುಂದೆ 1993 ರ ಆಗಸ್ಟ್ 18ರ ಭೂ ಹೋರಾಟ. ಈ ಹೋರಾಟದಿಂದ 1994ರಲ್ಲಿ ಡಾ. ಮುಹಮ್ಮದ್ ಪೀರ್ ಅವರ ವರದಿ ಸಲ್ಲಿಕೆಯಾದರೂ ಸರಕಾರ ಭೂಮಿ ಕೊಡಲಿಲ್ಲ. ಹಾಗಾಗಿ ಎಲ್ಲೆಲ್ಲಿ ಸರಕಾರದ ಭೂಮಿ ಇದೆಯೋ ಅಲ್ಲಲ್ಲಿ ಭೂ ಆಕ್ರಮಣ ಚಳವಳಿ ಶುರುಮಾಡಿದೆವು. 1997ರಲ್ಲಿ ಸೂರಾಲು ಚಳವಳಿ, 1999ರಲ್ಲಿ ಕಾಳತ್ತೂರ್ ಚಲೋ ಗೇರು ನಿಗಮದ ಭೂ ಆಕ್ರಮಣಕ್ಕೆ ಮುಂದಾದೆವು. ಆಗ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನೊಳಗೊಂಡಂತೆ ಕೊರಗರ 22 ಜನರನ್ನು ಮಂಗಳೂರು ಜೈಲಿಗೆ ಹಾಕಿದರು. ಒಬ್ಬರು ಗರ್ಭಿಣಿ, ನಾಲ್ಕು ತಿಂಗಳ ಮಗುವೂ ಸೇರಿದ್ದರು. 28 ದಿನದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಯಿತು. ಪರಿಣಾಮ ನಿಧಾನಕ್ಕೆ ಸರಕಾರ ಎಲ್ಲೆಲ್ಲಿ ಎಷ್ಟೆಷ್ಟು ಭೂಮಿ ಇದೆಯೋ ಅಷ್ಟಷ್ಟು ಭೂಮಿಯನ್ನು ಕೊಡತೊಡಗಿತು. ಮುಂದೆ ಪಾಲಡ್ಕದಲ್ಲಿಯೂ ಭೂ ಆಕ್ರಮಣ ಮಾಡಿದೆವು. ಹೀಗೆ ನಿರಂತರ ಭೂ ಆಕ್ರಮಣ ಮತ್ತು ಹಕ್ಕೊತ್ತಾಯಗಳ ಫಲವಾಗಿ ಕೊರಗರಿಗೆ ಭೂಮಿ ಸಿಗುವಂತಾಗಿದೆ’’ ಎಂದು ಬಾಬು ಕೊರಗ ಅವರು ಈ ಹೋರಾಟವನ್ನು ನೆನಪಿಸಿಕೊಳ್ಳುತ್ತಾರೆ.

ಕೊರಗರನ್ನು ಭೂ ಹೋರಾಟಕ್ಕೆ ಅಣಿಗೊಳಿಸಿದ್ದು ಯಾರು? ಎನ್ನುವ ಪ್ರಶ್ನೆ ಎದುರು ನಿಲ್ಲುತ್ತದೆ. ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು 1987ರಿಂದ ರಾಜ್ಯದ ಬುಡಕಟ್ಟು ಸಮುದಾಯಗಳ ಹಕ್ಕೊತ್ತಾಯಗಳ ಪರವಾಗಿ ಕೆಲಸ ಮಾಡುತ್ತಿದೆ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಕೊರಗರು, ಹಲಸರು, ಗೊಂಡ, ಮಲೆಕುಡಿಯ, ಹಕ್ಕಿಪಿಕ್ಕಿ, ಜೇನುಕುರುಬ, ಬೆಟ್ಟಕುರುಬ, ಎರವ, ಸೋಲಿಗ, ಡೋಂಗ್ರಿ ಗರಾಸಿಯ ಈ ಸಮುದಾಯಗಳನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಜಾಗೃತಗೊಳಿಸಿ ಸ್ವಾಭಿಮಾನದ ಘನತೆಯ ಬದುಕು ರೂಪಿಸಲು ಶ್ರಮಿಸುವ ಒಂದು ಸಂಸ್ಥೆಯಾಗಿದೆ.

ಮುಖ್ಯವಾಗಿ ಸಮುದಾಯಗಳ ಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಹಕ್ಕು ಕೊಡಿಸುವುದು, ವಸತಿ ಸೌಲಭ್ಯ, ಜೀವನಾಧಾರಕ್ಕೆ ಮೂಲಭೂತ ಸೌಕರ್ಯ ಒದಗಿಸುವುದು, ಶಿಕ್ಷಣ, ಪೌಷ್ಟಿಕ ಆಹಾರ ಹಾಗೂ ಆರೋಗ್ಯದ ಸೌಲಭ್ಯಗಳನ್ನು ಕೊಡಿಸುವ ಕಾರ್ಯವನ್ನು ಈ ಸಂಸ್ಥೆ ಮಾಡುತ್ತಿದೆ. ಈ ಕೆಲಸದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕರ್ನಾಟಕ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಜಂಟಿಯಾಗಿ ಶ್ರಮಿಸಿವೆ.

ಕೊರಗ ಸಮುದಾಯದಲ್ಲಿ ಮೊದಲು ಪಿಎಚ್.ಡಿ. ಪಡೆದ ಮಹಿಳೆ, ಇದೀಗ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಸಬಿತಾ ಗುಂಡ್ಮಿ ಅವರು ‘‘ಕೊರಗರು ಈ ವರ್ಷ 16ನೇ ವರ್ಷದ ಭೂಮಿ ಹಬ್ಬವನ್ನು ಆಚರಿಸಿಕೊಂಡರು. ಈ ಆಚರಣೆಯ ಉದ್ದೇಶವೆಂದರೆ, ತನ್ನ ಗತಕಾಲದಿಂದ ಪ್ರಸಕ್ತ ಜಾಗತೀಕರಣ ದಿನದವರೆಗೂ ಅಂಟಿಕೊಂಡ ಅಜಲು, ಅಸ್ಪಶ್ಯತೆಯ ಕಳಂಕವನ್ನು ಕೊರಗರ ಮನಸ್ಸಿನಿಂದ ಕಿತ್ತೊಗೆದು, ಸ್ವಾವಲಂಬಿ ಮತ್ತು ಸ್ವತಂತ್ರ ಜೀವನವನ್ನು ಕಟ್ಟಿಕೊಡುವುದಾಗಿದೆ’’ ಎನ್ನುತ್ತಾರೆ.

ಫೆಬ್ರವರಿ 11, 2020ರಂದು ಯುಎಇಯ ಅಬುಧಾಬಿಯಲ್ಲಿ ನಡೆದ ವಿಶ್ವಸಂಸ್ಥೆಯ ಆಯೋಜನೆಯ ವರ್ಣರಂಜಿತ ಕಾರ್ಯಕ್ರಮದಲ್ಲಿ ಉಡುಪಿಯ ನೇಜಾರ್‌ನ ಕೊರಗ ಸಮುದಾಯದ ಶಕುಂತಲಾ ಅವರು ‘2019ರ ವಿಶ್ವಸಂಸ್ಥೆ ಹ್ಯಾಬಿಟ್ಯಾಟ್ ಪ್ರಶಸ್ತಿ’ಯನ್ನು ಸ್ವೀಕರಿಸಿದರು. ಇದು ಕೊರಗ ಸಮುದಾಯದ ಇತಿಹಾಸದಲ್ಲಿ ದಾಖಲಾದ ದಿನ. ಕಾರಣ ಮೊದಲ ಬಾರಿಗೆ ಕೊರಗ ಸಮುದಾಯದ ಮಹಿಳೆಯೊಬ್ಬರು ವಿದೇಶಕ್ಕೆ ತೆರಳಿ ಇಂತಹ ಅಂತರ್‌ರಾಷ್ಟ್ರೀಯ ಪ್ರಶಸ್ತಿಯೊಂದನ್ನು ಸ್ವೀಕರಿಸಿದ್ದರು.

ಶಕುಂತಲಾ ನೇಜಾರ್ ಅವರು ‘‘ನಾವು ಮೊದಲು ಸಂಘಟನೆ ಅಂದ್ರೆ ಹೆದರುತ್ತಿದ್ದೆವು. ಗಂಡಸರನ್ನು ಮುಂದೆ ಬಿಟ್ಟು ನಾವು ಹಾಗೆ ಹಿಂದೆ ಇದ್ದುಕೊಂಡು ಸಂಘಟನೆಗೆ ಸೇರಿದೆವು. ನಾವು ಒಂದೊಂದು ಗ್ರಾಮದಲ್ಲಿ ಹತು ್ತಮನೆ, ಇಪ್ಪತ್ತು ಮನೆಗಳಲ್ಲಿ ಮೀಟಿಂಗ್ ಮಾಡಿ ಅವರಲ್ಲಿ ಸಂಘಟನೆ ಮಾಡುತ್ತಾ ಇದ್ದೆವು. ಮೊದಲು ಅಸ್ಪಶ್ಯತೆ ಹೋಗಲಾಡಿಸಲು ಜನರಲ್ಲಿ ಜಾಗೃತಿ ಮೂಡಿಸಿದೆವು’’ ಎಂದು ತನ್ನ ಹೋರಾಟದ ಹಾದಿಯನ್ನು ನೆನೆಯುತ್ತಾರೆ. 1993ರ ಹೋರಾಟ ನಡೆಯುತ್ತಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಹುಡುಗಿಯಾಗಿದ್ದ ಸುಶೀಲಾ ನಾಡ ಈಗ ಕೊರಗರ ಹಕ್ಕೊತ್ತಾಯಗಳಿಗೆ ದನಿ ಎತ್ತುವ ಹೋರಾಟಗಾರ್ತಿಯಾಗಿದ್ದಾರೆ.

ಕೊರಗರು ತಮ್ಮದೇ ಆದ ಕೊರ್ರೆ ಭಾಷೆಯನ್ನು ಉಳಿಸಿಕೊಳ್ಳುತ್ತಿದ್ದಾರೆ. ತಮಗೇ ವಿಶಿಷ್ಟವಾದ ಕಲೆಗಳಿಗೆ ಮರುಜೀವ ನೀಡುತ್ತಿದ್ದಾರೆ. ಸಮಗ್ರ ಗ್ರಾಮೀಣ ಆಶ್ರಮದ ಅಡಿಯಲ್ಲಿ ದೀಪಿಕಾ ಉಡುಪಿ ಸಂಪಾದಕತ್ವದಲ್ಲಿ ಕೊರಗರದೇ ಆದ ‘ನಮ್ಮದನಿ’ ಮಾಸಿಕವನ್ನು ತರುತ್ತಿದ್ದಾರೆ. ತಾವು ಕೃಷಿಕರು ಎನ್ನುವುದಕ್ಕೆ ‘ಹಸಿರು’, ನಾವೆಲ್ಲಾ ಸಮಾನರು ಎನ್ನಲು ‘ಹಳದಿ’ ಬಣ್ಣವನ್ನು ಒಳಗೊಂಡ ಕೊರಗರದೇ ಆದ ಬಾವುಟ ಕೊರಗರ ಸ್ವಾಭಿಮಾನವನ್ನು ಎತ್ತಿಹಿಡಿಯುತ್ತಿದೆ. ಇಂತಹ ಕೊರಗರ ಚಳವಳಿ ಇಡೀ ಕರ್ನಾಟಕದ ಎಲ್ಲಾ ಬುಡಕಟ್ಟುಗಳಿಗೆ ಮಾದರಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಅರುಣ್ ಜೋಳದಕೂಡ್ಲಿಗಿ

contributor

Similar News