ಕರಾವಳಿಯಲ್ಲಿ ಭೂ ಸುಧಾರಣೆ ಮತ್ತು ಸಾಮಾಜಿಕ ಪರಿವರ್ತನೆ

ಭಾರತದಲ್ಲಿ ಭೂಸುಧಾರಣಾ ಶಾಸನವು ಗೇಣಿ ಪದ್ಧತಿಯ ನಿವಾರಣೆಯ ಮೂಲಕ ಎರಡು ಪ್ರಮುಖ ಪರಿವರ್ತನೆಗಳನ್ನು ತರುವ ಗುರಿ ಹೊಂದಿತ್ತು. ಅವುಗಳಲ್ಲಿ ಒಂದು ಸಾಮಾಜಿಕ ಸಮಾನತೆ ಮತ್ತು ಇನ್ನೊಂದು ಕೃಷಿಯ ಅಭಿವೃದ್ಧಿ. ಸಾಮಾಜಿಕ ಸಮಾನತೆಗಾಗಿ ಗ್ರಾಮೀಣ ವಲಯದಲ್ಲಿ ಬಲಿಷ್ಠ ಭೂಮಾಲಕರ ಕಪಿಮುಷ್ಟಿಯಿಂದ ಶೋಷಿತ ಗೇಣಿದಾರರನ್ನು ಬಿಡುಗಡೆಗೊಳಿಸಬೇಕಾಗಿತ್ತು. ಅಲ್ಲದೆ ಕಾರ್ಮಿಕ ವರ್ಗದವರಿಗೆ ಸೂಕ್ತ ಸಂಬಳ ಕೊಡಿಸುವ ಮೂಲಕ ಬಡತನದ ನಿವಾರಣೆಯನ್ನು ಮಾಡಬೇಕಾಗಿತ್ತು. ಉಳುವವನಿಗೇ ಭೂಮಿಯ ಒಡೆತನ ದೊರಕಿದಾಗ ಸಹಜವಾಗಿ ಆತ ಹೆಚ್ಚಿನ ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿ ಉತ್ಪಾದನೆಯಲ್ಲಿ ಹೆಚ್ಚಳವಾಗಬಹುದೆಂಬ ಆಶಯವೂ ಇತ್ತು. ಜೊತೆಯಲ್ಲೇ ಕೃಷಿ ಕಾರ್ಮಿಕರ ಕೂಲಿಯಲ್ಲಿ ಹೆಚ್ಚಳವಾಗಬೇಕೆಂಬ ಇರಾದೆಯೂ ಇತ್ತು.

Update: 2024-01-18 05:06 GMT

ಭಾಗ- 1

‘ಉಳುವವನೇ ಹೊಲದೊಡೆಯ’ ಎಂಬ ಶಿರೋನಾಮೆಯಿಂದ ಬರಬೇಕಾಗಿದ್ದ ಶಾಸನವು ಭೂಸುಧಾರಣೆ ಎಂದರೆ ‘Land Reforms’ ಎಂಬ ಹೆಸರಿನಿಂದ ಹೇರಲ್ಪಟ್ಟದ್ದೇ ಅದರ ವಿಫಲತೆಗೆ ಮೊದಲ ಕಾರಣ ಎಂಬುದು ನನ್ನ ಅನಿಸಿಕೆ. ಏಕೆಂದರೆ ಭೂಸುಧಾರಣೆ ಎಂಬ ಪರಿಕಲ್ಪನೆಯು ಕೃಷಿ ವಿಸ್ತರಣೆ, ಹೊಸ ನೀರಾವರಿ ಸೌಲಭ್ಯ, ಉತ್ಪನ್ನ ಪ್ರಮಾಣದಲ್ಲಿ ಹೆಚ್ಚಳ, ಬೆಳೆ ಪರಿವರ್ತನೆ, ತಳಿ ಸುಧಾರಣೆ ಇತ್ಯಾದಿ ವಿವಿಧ ಆಯಾಮಗಳನ್ನು ಹೊಂದಿದೆ. ಅದರಲ್ಲಿ ಶೋಷಣೆಗೆ ಒಳಗಾದ ಗೇಣಿದಾರರ ಹಾಗೂ ಬಡ ಕೃಷಿಕೂಲಿ ಕಾರ್ಮಿಕರ ವಿಮೋಚನೆಯ ಅಂಶವು ಸಂಕ್ಷಿಪ್ತವಾಗಿಯಷ್ಟೇ ಇದೆ.

ಭಾರತದಲ್ಲಿ ಭೂಸುಧಾರಣಾ ಶಾಸನವು ಗೇಣಿ ಪದ್ಧತಿಯ ನಿವಾರಣೆಯ ಮೂಲಕ ಎರಡು ಪ್ರಮುಖ ಪರಿವರ್ತನೆಗಳನ್ನು ತರುವ ಗುರಿ ಹೊಂದಿತ್ತು. ಅವುಗಳಲ್ಲಿ ಒಂದು ಸಾಮಾಜಿಕ ಸಮಾನತೆ ಮತ್ತು ಇನ್ನೊಂದು ಕೃಷಿಯ ಅಭಿವೃದ್ಧಿ. ಸಾಮಾಜಿಕ ಸಮಾನತೆಗಾಗಿ ಗ್ರಾಮೀಣ ವಲಯದಲ್ಲಿ ಬಲಿಷ್ಠ ಭೂಮಾಲಕರ ಕಪಿಮುಷ್ಟಿಯಿಂದ ಶೋಷಿತ ಗೇಣಿದಾರರನ್ನು ಬಿಡುಗಡೆಗೊಳಿಸಬೇಕಾಗಿತ್ತು. ಅಲ್ಲದೆ ಕಾರ್ಮಿಕ ವರ್ಗದವರಿಗೆ ಸೂಕ್ತ ಸಂಬಳ ಕೊಡಿಸುವ ಮೂಲಕ ಬಡತನದ ನಿವಾರಣೆಯನ್ನು ಮಾಡಬೇಕಾಗಿತ್ತು. ಉಳುವವನಿಗೇ ಭೂಮಿಯ ಒಡೆತನ ದೊರಕಿದಾಗ ಸಹಜವಾಗಿ ಆತ ಹೆಚ್ಚಿನ ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿ ಉತ್ಪಾದನೆಯಲ್ಲಿ ಹೆಚ್ಚಳವಾಗಬಹುದೆಂಬ ಆಶಯವೂ ಇತ್ತು. ಜೊತೆಯಲ್ಲೇ ಕೃಷಿ ಕಾರ್ಮಿಕರ ಕೂಲಿಯಲ್ಲಿ ಹೆಚ್ಚಳವಾಗಬೇಕೆಂಬ ಇರಾದೆಯೂ ಇತ್ತು. ಆದರೆ ಆ ಆಶಯ ಮತ್ತು ಇರಾದೆಗಳು ಈಡೇರದಂತಹ ತೊಡಕುಗಳನ್ನು ಶಾಸನದಲ್ಲೇ ಉಳಿಸಿದ್ದು ಹಾಗೂ ಶಾಸನದ ಜಾರಿಯಲ್ಲಿ ನಿಧಾನಗತಿಯನ್ನು ಅನುಸರಿಸಿದ್ದು ಅದರ ವಿಫಲತೆಗೆ ಕಾರಣವಾಯಿತು.

ಭೂಸುಧಾರಣಾ ಶಾಸನವನ್ನು ಮೇಲಿನಿಂದ ತಳಕ್ಕೆ ಹೊರಿಸಿದುದೇ ಅದರ ನಿಧಾನಗತಿಗೆ ಕಾರಣವೆನ್ನಬಹುದು. ಅಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲೇ ಕೇಂದ್ರ ಸರಕಾರವು ರಾಜ್ಯ ಸರಕಾರಗಳಿಗೆ ಭೂಸುಧಾರಣಾ ಶಾಸನವನ್ನು ಜಾರಿಗೊಳಿಸುವಂತೆ ನಿರ್ದೇಶನ ನೀಡಿತು. ಇದರ ಹಿಂದೆ ಉತ್ತರಪ್ರದೇಶ ಮತ್ತು ಪಂಜಾಬ್ ಪ್ರಾಂತಗಳಲ್ಲಿ ಬ್ರಿಟಿಷರ ಕೃಷಿ ನೀತಿಯ ವಿರುದ್ಧ ಪ್ರತಿಭಟಿಸಲು ಸಂಘಟಿತರಾದ ಕಮ್ಯುನಿಸ್ಟ್ ಪ್ರೇರಿತ ರೈತ ಸಂಘಗಳ ಹೋರಾಟದ ಪ್ರಭಾವವೂ ಇತ್ತು. ಆದರೆ ಕಾಂಗ್ರೆಸ್ ಸರಕಾರದಲ್ಲಿ ಜನಪ್ರತಿನಿಧಿಗಳಾಗಿ ಆರಿಸಿ ಬಂದವರು ದೊಡ್ಡ ಭೂಮಾಲಕರೇ ಆಗಿದ್ದರು. ಅವರು ತಮ್ಮ ವಿಸ್ತಾರವಾದ ಆಸ್ತಿಗಳನ್ನು ಕಳಕೊಳ್ಳಲು ಸಿದ್ಧರಿರಲಿಲ್ಲ. ಆದರೂ ಭೂಸುಧಾರಣೆ ಎಂಬ ಶಾಸನದ ಮೂಲಕ ತಾವು ಸಮಾಜವಾದದ ದೃಷ್ಟಿಕೋನ ಹೊಂದಿರುವುದನ್ನು ಪ್ರಚುರ ಪಡಿಸಬೇಕಾಗಿತ್ತು. ಹಾಗಾಗಿ ವಿವಿಧ ರಾಜ್ಯಗಳಲ್ಲಿ ವಿವಿಧ ಮಟ್ಟಗಳಲ್ಲಿ ಈ ಶಾಸನವು ಜಾರಿಗೊಂಡದ್ದರಿಂದಾಗಿ ನಿರೀಕ್ಷಿತ ಪರಿಣಾಮಗಳನ್ನುಂಟು ಮಾಡಲಿಲ್ಲ. ಕಮ್ಯುನಿಸ್ಟ್ ಪಕ್ಷದ ಆಡಳಿತವಿದ್ದ ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಮಾತ್ರ ಶಾಸನದ ಜಾರಿಯು ಸಫಲವಾದ ವರದಿಗಳು ಸಿಗುತ್ತವೆ.

ಕರ್ನಾಟಕ ರಾಜ್ಯದಲ್ಲಿ ಭೂ ಸುಧಾರಣಾ ಶಾಸನದ ಜಾರಿಯ ಪ್ರಕ್ರಿಯೆ ನಡೆದ ಬಗೆ ಹೀಗಿದೆ.

1951ರ ಮೊದಲ ಪಂಚವಾರ್ಷಿಕ ಯೋಜನೆ ಕಳೆದರೂ ರಾಜ್ಯಮಟ್ಟದಲ್ಲಿ ಈ ಶಾಸನದ ಪ್ರಸ್ತಾಪವೇ ಬರಲಿಲ್ಲ. 1956ರ ಎರಡನೇ ಪಂಚವಾರ್ಷಿಕ ಯೋಜನೆಯ ಆರಂಭದಲ್ಲೇ ಕೇಂದ್ರ ಸರಕಾರದಿಂದ ಭೂಸುಧಾರಣೆಯ ಜಾರಿಗೆ ಸ್ಪಷ್ಟ ನಿರ್ದೇಶನ ಬಂತು. ಇದಕ್ಕೆ ಸ್ಪಂದನೆಯಾಗಿ ಶಾಸನ ಸಭೆಯು 1957ರಲ್ಲಿ ಜತ್ತಿ ಸಮಿತಿಯನ್ನು ರಚಿಸಿ ಶಾಸನವನ್ನು ರೂಪಿಸಲು ಉದ್ಯುಕ್ತವಾಯಿತು. ಮುಂದೆ ಕರ್ನಾಟಕದ ಮುಖ್ಯ ಮಂತ್ರಿಯಾದ ಬಿ.ಡಿ. ಜತ್ತಿಯವರ ಅಧ್ಯಕ್ಷತೆಯ ಈ ಸಮಿತಿಯು ಒಂದೇ ವರ್ಷದಲ್ಲಿ ಅಂದರೆ 1958ರಲ್ಲೇ ತನ್ನ ವರದಿ ನೀಡಿತು. ಅದರ ಆಧಾರದಲ್ಲಿ ಶಾಸನವನ್ನು ರೂಪಿಸಲು ಶಾಸಕರು ಮೂರು ವರ್ಷ ಕಳೆದರು. ಅಂದರೆ 1961ರಲ್ಲಿ ಭೂಸುಧಾರಣಾ ಶಾಸನವು ರೂಪುಗೊಂಡು ರಾಷ್ಟ್ರಪತಿಗಳ ಅಂಕಿತಕ್ಕೆ 1962ರಲ್ಲಿ ಕಳಿಸಲ್ಪಟ್ಟಿತು. ವಿಚಿತ್ರವೆಂದರೆ ಅಲ್ಲಿಯೂ ಸಮಯ ಕಳೆದು 1965ರಲ್ಲಿ ಶಾಸನವು ಜಾರಿಯಾಯಿತು. ಇದಕ್ಕಾಗಿಯೇ 1957ರಿಂದ 1965ರ ವರೆಗೆ ಎಂಟು ವರ್ಷಗಳು ಬೇಕಾದುವು. ಅಂದರೆ ಈ ಅವಧಿಯು ದೊಡ್ಡ ಭೂಮಾಲಕರಿಗೆ ತಮ್ಮ ಒಡೆತನದಲ್ಲಿರುವ ಭೂಮಿಯ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಿತು. ಬೇನಾಮಿ ಹೆಸರುಗಳಲ್ಲಿ ತಮ್ಮ ಸುಪರ್ದಿಯಲ್ಲೇ ಭೂಮಿಯನ್ನು ಉಳಿಸಿಕೊಂಡರು. ಈ ಶಾಸನದ ಮಾಹಿತಿಯು ಮಾಧ್ಯಮಗಳ ಸಂಪರ್ಕವಿಲ್ಲದಿದ್ದ ಅನಕ್ಷರಸ್ಥ ಗೇಣಿದಾರರು ಹಾಗೂ ಬಡ ಕೂಲಿಕಾರ್ಮಿಕರ ಅರಿವಿಗೇ ಬರಲಿಲ್ಲ. ಮಧ್ಯಮ ವರ್ಗದ ಹಿಡುವಳಿದಾರರು ತಮ್ಮ ಅಸ್ತಿತ್ವವನ್ನು ಗಟ್ಟಿ ಮಾಡಿಕೊಂಡರಲ್ಲದೆ ಕೆಳಸ್ತರದ ಶೋಷಿತರ ಸಂಘಟನೆಗೆ ತೊಡಗಲಿಲ್ಲ. ಸ್ಥಳೀಯ ದೊಡ್ಡ ಭೂಮಾಲಕರ ಸ್ನಾಯುಬಲದ ಭಯವೂ ಅವರಿಗಿದ್ದುದು ಈ ನಿರ್ಲಿಪ್ತತೆಗೆ ಕಾರಣವಾಗಿತ್ತು.

1965ರಲ್ಲಿ ಜಾರಿಯಾದ 1961ರ ಕರ್ನಾಟಕ ಭೂಸುಧಾರಣಾ ಕಾಯ್ದೆಯ ಬಗ್ಗೆ ಗೇಣಿದಾರರಲ್ಲಿ ಎಚ್ಚರ ಮೂಡಿದಾಗ 1970ನೇ ದಶಕ ಆರಂಭವಾಗಿತ್ತು. ಕರ್ನಾಟಕದ ಪೀಠಭೂಮಿಯ ವಿಸ್ತಾರವಾದ ಜಿಲ್ಲೆಗಳಲ್ಲಿ ಭೂಮಾಲಕರ ಹಿಡಿತವೇ ಬಲವಾಗಿ ಗೇಣಿದಾರರಿಂದ ಯಾವುದೇ ಸ್ಪಂದನೆ ಕಾಣಿಸಲಿಲ್ಲ. ಕೊಡಗಿನಲ್ಲಿ ಪ್ಲಾಂಟೇಶನ್ ಬೆಳೆಗಳಿದ್ದುದರಿಂದ ಈ ಶಾಸನ ಲಗಾವಾಗಲಿಲ್ಲ. ಅದು ಸ್ಪಲ್ಪವಾದರೂ ಸ್ಪಂದನೆ ಕಂಡದ್ದು ಕರಾವಳಿಯಲ್ಲಿ ಅಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಹಾಗೂ ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ.

ಸ್ವಾತಂತ್ರ್ಯ ಪೂರ್ವದ ಗ್ರಾಮೀಣ ಬದುಕು

ರಾಜರುಗಳು ಹಿಂದೆ ಹಂಚುತ್ತಿದ್ದ ಜಹಗೀರು, ಉಂಬಳಿ, ದೇವಾದಾಯ ಮುಂತಾದ ಭೂಮಿಯ ಮೇಲಿನ ಹಕ್ಕುಗಳು ಕೆಲವೇ ಮಂದಿಯ ಕೈಯಲ್ಲಿ ಭೂಮಿ ಸೇರುವಂತೆ ಮಾಡಿತು. ತೆರಿಗೆ ಸಂಗ್ರಹವನ್ನೇ ಗುರಿಯಾಗಿಟ್ಟುಕೊಂಡು ಬ್ರಿಟಿಷರು ಜಾರಿ ಮಾಡಿದ ಜಮೀನ್ದಾರಿ ಮತ್ತು ರೈತವಾರಿ ಪದ್ಧತಿಗಳಿಂದಾಗಿ ಭೂಹಿಡುವಳಿಗಳು ಬಡವರಿಂದ ಶ್ರೀಮಂತ ರೈತರ ಕೈ ಸೇರುತ್ತಿದ್ದುವು. ಅವರಿಂದ ಭತ್ತದ ಗದ್ದೆಗಳನ್ನು ಭೂರಹಿತ ಕಾರ್ಮಿಕರು ಗೇಣಿಗೆ ಪಡೆದುಕೊಳ್ಳುತ್ತಿದ್ದರು. ಹೀಗಾಗಿ ಗ್ರಾಮೀಣ ವಲಯದಲ್ಲಿ ಕೆಲವೇ ದೊಡ್ಡ ಜಮೀನ್ದಾರರು, ಶ್ರೀಮಂತ ರೈತರು, ಮಧ್ಯಮ ವರ್ಗದ ರೈತರು, ಗೇಣಿದಾರರು ಹಾಗೂ ಬಹುಮಂದಿ ಖಾಯಂ ಕೂಲಿ ಕಾರ್ಮಿಕರು ಹೀಗೆ ವಿವಿಧ ಸ್ತರಗಳಲ್ಲಿ ಉತ್ಪಾದನಾ ಪ್ರಕ್ರಿಯೆಯ ಪಾಲುದಾರರಿದ್ದರು. ಕೊನೆಯ ಎರಡು ವರ್ಗದವರು ಆಸ್ತಿ ಮತ್ತು ಆದಾಯ ಇಲ್ಲದವರಾಗಿ ಮೇಲಿನ ಎರಡು ವರ್ಗಗಳಿಂದ ವಿವಿಧ ರೀತಿಯ ಶೋಷಣೆಗೆ ಒಳಗಾಗಿದ್ದರು. ಬಿಟ್ಟಿಬೇಗಾರಿ, ಅಕ್ಕಿಗಾಗಿ ಸಾಲ ಮತ್ತು ಬಡ್ಡಿಗಳ ಜಾಲದಲ್ಲಿ ಯಾವುದೇ ಸ್ವಂತಿಕೆ ಇಲ್ಲದೆ ಜೀವನ ಸಾಗಿಸುತ್ತಿದ್ದರು. ಕೆಳಸ್ತರದವರಿಗೆ ಮೂರು ಹೊತ್ತಿನ ಊಟಕ್ಕೆ ತತ್ವಾರ ಇತ್ತು. ಗಾಳಿ, ಮಳೆಯಿಂದ ರಕ್ಷಿಸಿಕೊಳ್ಳಲು ಸರಿಯಾದ ಮನೆ ಇರಲಿಲ್ಲ, ಶಾಲೆಗೆ ಹೋಗಲಾಗದೆ ಮಕ್ಕಳು ಬಾಲಕಾರ್ಮಿಕರಾಗುತ್ತಿದ್ದರು, ಸ್ವಾಸ್ಥ್ಯ ಕೆಟ್ಟಾಗ ಔಷಧಿಗಳಿಗೆ ಆಸ್ಪತ್ರೆ ಇರಲಿಲ್ಲ, ಮಳೆಗಾಲದಲ್ಲಿ ಕೆಲಸವಿಲ್ಲದಿದ್ದಾಗ ಧಣಿಗಳಲ್ಲೇ ಅಕ್ಕಿಗಾಗಿ ಮೊರೆ ಇಡಬೇಕಾಗುತ್ತಿತ್ತು. ಹೀಗಾಗಿ ಪರೋಕ್ಷವಾಗಿ ಜೀತ ವ್ಯವಸ್ಥೆಯೇ ಜಾರಿಯಲ್ಲಿತ್ತು. ಹೆಣ್ಣಾಳುಗಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು. ಒಕ್ಲುಗಳ ಮತ್ತು ಕೂಲಿಕಾರರ ಮಕ್ಕಳನ್ನು ಶಾಲೆಗೆ ಸೇರದಂತೆ ನಿರ್ಬಂಧಿಸುತ್ತಿದ್ದರು. ಪಲಾಯನಕ್ಕೆ ಯತ್ನಿಸಿದ ಹುಡುಗರು ಸಿಕ್ಕಿದರೆ ಹಿಡಿಸಿ ತಂದು ಹೊಡೆದು ಹದ ಮಾಡುತ್ತಿದ್ದರು. ಬೆಳಗ್ಗೆ ಬೆಳಕಾಗುತ್ತಲೇ ಬಂದು ಧಣಿಗಳ ಗದ್ದೆಯಲ್ಲಿ ಉತ್ತು ಕೊಟ್ಟ ಬಳಿಕವೇ ತನ್ನ ಗೇಣಿಯ ಗದ್ದೆಯಲ್ಲಿ ಉಳಬೇಕಾಗಿತ್ತು. ಧಣಿಗಳ ಗದ್ದೆಯಲ್ಲಿ ಹೀಗೆ ಮಾಡಿದ ಕೆಲಸಕ್ಕೆ ಮಧ್ಯಾಹ್ನ ಊಟ ಮತ್ತು ಸಂಜೆ ಚಾಕ್ಕೆ ನಾಲ್ಕಾಣೆ ಬಿಟ್ಟರೆ ಬೇರೆ ಸಂಬಳವಿರಲಿಲ್ಲ. ಇದನ್ನೇ ಬಿಟ್ಟಿ ಬೇಗಾರಿ ಎನ್ನುತ್ತಿದ್ದರು. ಶ್ರೀಮಂತರ ಸಾಲ ಪಡೆಯಲು ಆಸ್ತಿಯನ್ನು ಅಡವಿಟ್ಟ ಮಧ್ಯಮ ವರ್ಗದ ಹಿಡುವಳಿದಾರರು ತಮ್ಮದೇ ಆಸ್ತಿಯಲ್ಲಿ ಗೇಣಿದಾರರಾದದ್ದೂ ಇದೆ.

ಜಾರಿ ಪ್ರಕ್ರಿಯೆಯಲ್ಲಿ ಜಾರಿದ ಭೂಸುಧಾರಣೆ

‘ಉಳುವವನೇ ಹೊಲದೊಡೆಯ’ ಎಂಬ ತತ್ವವೇ ಆತ್ಮವಾಗಿದ್ದ ಈ ಶಾಸನವನ್ನು ವಿಧಾನಸಭೆಯಲ್ಲಿ ಅನಿವಾರ್ಯವಾಗಿ ಅನುಮೋದಿಸಿದ ಶಾಸಕರಲ್ಲಿ ಅನೇಕರು ಸ್ವತಃ ಭೂಮಾಲಕರಾಗಿದ್ದು ತಮ್ಮ ಒಡೆತನದ ಭೂಮಿಯನ್ನು ಕಳೆದುಕೊಳ್ಳಲು ಇಷ್ಟಪಟ್ಟವರಲ್ಲ. ಹಾಗಾಗಿಯೇ ಶಾಸನವನ್ನು ಮಂಡಿಸುವಲ್ಲಿಂದಲೇ ನಿಧಾನ ನೀತಿಯನ್ನು ಅನುಸರಿಸಿದ ಅವರು ಅದು ಕಾನೂನಾಗಿ ಜಾರಿಯಾಗುವ ತನಕ ಸಿಕ್ಕಿದ ಎಂಟು ವರ್ಷಗಳಲ್ಲಿ ಗೇಣಿದಾರರನ್ನು ಒಕ್ಕಲೆಬ್ಬಿಸಿ ತಮ್ಮಲ್ಲಿದ್ದ ಭೂಮಿಗಳನ್ನು ಬೇನಾಮಿ ಹೆಸರಲ್ಲಿ ನೋಂದಾಯಿಸಿ ತಮ್ಮಲ್ಲೇ ಉಳಿಯುವಂತೆ ಕಾಪಾಡಿಕೊಂಡರು. Land Tribunalಗಳಲ್ಲಿ ತಮ್ಮ ಪರ ಇರಬಲ್ಲವರನ್ನೇ ಸದಸ್ಯರಾಗಿ ನೇಮಿಸಿದರು. ತಮ್ಮ ಹಣಬಲ ಮತ್ತು ಸ್ನಾಯುಬಲವನ್ನು ಪ್ರಯೋಗಿಸಿ ಅನೇಕ ಗೇಣಿದಾರರು ಡಿಕ್ಲರೇಶನ್ ಸಲ್ಲಿಸದಂತೆ ನೋಡಿಕೊಂಡರು. ಡಿಕ್ಲರೇಶನ್ ಹಾಕಿ ಗೇಣಿ ಭೂಮಿಯ ಸ್ವಾಮ್ಯಕ್ಕಾಗಿ ಅರ್ಜಿ ಸಲ್ಲಿಸಿದ ನಿಜವಾದ ಗೇಣಿದಾರನ ವಿರುದ್ಧ ಪರಿಶಿಷ್ಟ ಜಾತಿಯ ಸುಳ್ಳು ಅರ್ಜಿದಾರನನ್ನು ನಿಲ್ಲಿಸಿ ತೀರ್ಪು ತಮ್ಮ ಕಡೆಗೆ ಬರುವಂತೆ ಮಾಡಿದರು. ತಮ್ಮ ವಶವಿದ್ದ ಭೂಮಿಗೆಲ್ಲಾ ಬೇಲಿ ಹಾಕಿಸಿಕೊಂಡು ರಕ್ಷಿಸಿದರು. ಬೇರೆ ಗ್ರಾಮಗಳಲ್ಲಿದ್ದ ಗೇಣಿ ಭೂಮಿಗಳನ್ನು ಮಾರಿದರು. ಬಡವರ ಪರ ಮತ್ತು ನ್ಯಾಯದ ಪರ ಇದ್ದ ಕಂದಾಯ ಇಲಾಖೆಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದರು.

(ನಾಳೆಯ ಸಂಚಿಕೆಗೆ)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಚಂದ್ರಶೇಖರ ದಾಮ್ಲೆ, ಸುಳ್ಯ

contributor

Similar News