ಕರಾವಳಿಯಲ್ಲಿ ಭೂ ಸುಧಾರಣೆ ಮತ್ತು ಸಾಮಾಜಿಕ ಪರಿವರ್ತನೆ
ಧಣಿ, ಒಕ್ಲು, ಚಾಲಗೇಣಿ, ಮೂಲಗೇಣಿ, ವಾದೆಗೇಣಿ, ಬಿಟ್ಟಿ ಬೇಗಾರಿ, ವಿಷು, ಒಕ್ಲುತನದ ನವೀಕರಣ, ಹಸುರ್ವಾಣಿ, ಡಿಕ್ಲರೇಶನ್ ಇತ್ಯಾದಿ ಪದಗಳ ಪರಿಚಯ ಹೊಸ ತಲೆಮಾರಿನ ಯುವಜನರಿಗೆ ಇಲ್ಲ. ತಮ್ಮ ಅಜ್ಜ-ಅಜ್ಜಿ ಧಣಿಗಳ ಶೋಷಣೆಗೊಳಗಾಗಿ ಹೇಗೆ ನವೆದಿದ್ದರು ಎಂಬುದೂ ಅವರಿಗೆ ಗೊತ್ತಿಲ್ಲ.
ಭಾಗ- 2
‘ಉಳುವವನೇ ನೆಲದೊಡೆಯ’ ಶಾಸನ ಸಫಲವಾಗಲು ಕಂದಾಯ ಇಲಾಖೆಯ ವತಿಯಿಂದ ಪೂರ್ವಭಾವಿ ಸರ್ವೇ ನಡೆಸಿ ಯಾರು ನಿಜವಾದ ಗೇಣಿದಾರರೆಂಬುದನ್ನು ಗುರುತಿಸಬೇಕಿತ್ತು. ಹಾಗೆ ಮಾಡಿದ್ದರೆ ನ್ಯಾಯಯುತವಾಗಿ ಅರ್ಹ ಗೇಣಿದಾರರಿಗೆ ಭೂಮಿ ದೊರಕುತ್ತಿತ್ತು. ಕೇರಳದಲ್ಲಿ ಹಾಗೆ ಮಾಡಿದ್ದರಿಂದ ಭೂ ಮಸೂದೆ ಯಶಸ್ವಿಯಾ ಯಿತೆಂಬ ಮಾಹಿತಿ ಇದೆ. ಆದರೆ ಕರ್ನಾಟಕದಲ್ಲಿ ಗೇಣಿದಾರರೇ ಡಿಕ್ಲರೇಶನ್ ಹಾಕಬೇಕೆಂಬ ನಿಯಮವಿದ್ದುದರಿಂದ ಅವರಿಗೆ ಸೂಕ್ತ ಸರ್ವೇ ನಂಬ್ರ, ಸ್ಥಳದ ವಿಸ್ತೀರ್ಣ ಇತ್ಯಾದಿ ಮಾಹಿತಿಗಳಿಲ್ಲದೆ ಡಿಕ್ಲರೇಶನ್ ಹಾಕಲು ಅಡಚಣೆಯಾಯಿತು. ಈ ತೊಡಕನ್ನು ಶ್ರೀ ಡಿ. ದೇವರಾಜ ಅರಸು ಅವರು 1979ರಲ್ಲಿ ನಿವಾರಿಸಿದ್ದರೂ ಅಷ್ಟರೊಳಗೆ ಸಾಕಷ್ಟು ಹಾನಿಯಾಗಿತ್ತು. 1980ರ ದಶಕದಲ್ಲಿ ನಾನು ನಡೆಸಿದ ಅಧ್ಯಯನದ ಪ್ರಕಾರ ಭೂಸುಧಾರಣೆಯಲ್ಲಿ ಯಶಸ್ವಿಯೆಂದು ಪರಿಗಣಿಸಲ್ಪಟ್ಟ ಅವಿಭಜಿತ ದಕ್ಷಿಣಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಯಶಸ್ಸು ಶೇ. 30 ಮಾತ್ರವಿತ್ತು. ಅಂದರೆ ಡಿಕ್ಲರೇಶನ್ ಹಾಕಿದವರಲ್ಲಿ ಶೇ. 30 ಗೇಣಿದಾರರಿಗೆ ಮಾತ್ರ ಭೂಮಿಯ ಒಡೆತನದ ಹಕ್ಕು ಸಿಕ್ಕಿದೆ.
ಇನ್ನುಳಿದವರು ಭೂಮಿ ಕಳಕೊಂಡು ಕೂಲಿ ಕಾರ್ಮಿಕರಾಗಿದ್ದಾರೆ ಅಥವಾ ಊರು ಬಿಟ್ಟು ಪಟ್ಟಣ ಸೇರಿದ್ದಾರೆ ಅಥವಾ ಊರಿನಲ್ಲೇ ಇದ್ದು ಸಮೀಪದ ನಗರಗಳಲ್ಲಿ ಕೃಷಿಯೇತರ ಉದ್ಯೋಗಗಳಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಶಾಸನದ ಮಹತ್ವಾಕಾಂಕ್ಷೆಯಾಗಿದ್ದ ಸಾಮಾಜಿಕ ಸಮಾನತೆಯನ್ನು ತರಲು ಸಾಧ್ಯವಾಗಲಿಲ್ಲ.
ಇನ್ನೊಂದು ಉದ್ದೇಶವೆಂದರೆ ಕೃಷ್ಯುತ್ಪಾದನೆಯಲ್ಲಿ ಹೆಚ್ಚಳದ ನಿರೀಕ್ಷೆ. ಇದು ಕೂಡಾ ವಿಫಲವಾಗಿದೆ. ಏಕೆಂದರೆ ಭೂ ಒಡೆತನ ಪಡೆದ ಗೇಣಿದಾರ ಮಕ್ಕಳು ಆಸ್ತಿಯನ್ನು ಪಾಲು ಮಾಡಿಕೊಂಡರು. ಆಗ ಇದ್ದ ಹಿಡುವಳಿಯೂ ತೀರಾ ಸಣ್ಣ ತುಂಡು ಭೂಮಿಗಳಾದುವು. ಸಾಧ್ಯವಾದವರು ಅಂತಹ ತುಂಡುಗಳನ್ನು ಮಾರಿ ಪೇಟೆಗಳಲ್ಲಿ ಭವಿಷ್ಯವನ್ನು ಹುಡುಕಿಕೊಂಡು ಹೋದರು. ಇನ್ನು ಕೆಲವರು ಭತ್ತ ಬೆಳೆಯದೆ ಗದ್ದೆಯನ್ನು ಹಡಿಲು ಬಿಟ್ಟರು. ಇಂತಹ ಸಂದರ್ಭದಲ್ಲಿ ಸಾಧ್ಯವಾಗಬಹುದಾಗಿದ್ದ Cooperative farming ಅಂದರೆ ಸಹಕಾರಿ ಕೃಷಿ ಕೂಡ ಚಾಲನೆಯನ್ನು ಪಡೆಯಲಿಲ್ಲ.
ವಾಸ್ತವಿಕ ಪಲ್ಲಟಗಳು
ಭೂಸುಧಾರಣೆಯ ಶಾಸನದಿಂದಾಗಿ ಸಾಮಾಜಿಕ ಸಮಾನತೆ ಮತ್ತು ಕೃಷಿ ಉತ್ಪಾದಕತೆಯಲ್ಲಿ ಪ್ರಗತಿಯಾದೀತೆಂಬ ಎರಡೂ ಉದ್ದೇಶಗಳು ಈಡೇರಿಲ್ಲ. ಆದರೆ ಅನಿರೀಕ್ಷಿತವಾದ ಅನುದ್ದೇಶಿತ ಪಲ್ಲಟಗಳು ಸಂಭವಿಸಿವೆ. ಮುಖ್ಯವಾಗಿ ಶೇ. 30 ಮಾತ್ರ ಯಶಸ್ಸು ಎಂಬುದು ಹೌದಾದರೂ ಭೂಮಿ ಪಡೆದ ಗೇಣಿದಾರರ ಸಂಖ್ಯೆ 1,36,880ರಷ್ಟಿತ್ತು. ಈ ಕಾರಣದಿಂದ ಶ್ರೀಮಂತ ಭೂಮಾಲಕರೆಲ್ಲ ರಲ್ಲೂ ಭೂಮಿ ಕಳಕೊಳ್ಳುವ ಭಯ ಆವರಿಸಿತು. ಅವರು ಗೇಣಿದಾರರೊಡನೆ ಅರ್ಧಾಂಶ ಭೂಮಿ ಬಿಟ್ಟು ಕೊಡುವುದು ಅಥವಾ ಗೇಣಿದಾರರಿಗೆ ಪರಿಹಾರ ನೀಡಿ ಪೂರ್ತಿ ಭೂಮಿಯನ್ನು ಸ್ವಾಧೀನ ಪಡೆಯುವುದು ಇತ್ಯಾದಿ ಒಪ್ಪಂದದ ಮಾಡಿದರು. ಇಂತಹ ಪ್ರಕರಣಗಳಲ್ಲಿ ಗೇಣಿದಾರರು ಕೃಷಿ ಕ್ಷೇತ್ರದಿಂದ ಹೊರಗೆ ವಲಸೆ ಹೋದರು. ಅಲ್ಲದೆ ತುಂಡು ಭೂಮಿ ಪಡೆದ ಮಾಜಿ ಗೇಣಿದಾರರು ಕೂಡಾ ಹಳ್ಳಿ ಬಿಟ್ಟು ನಗರವನ್ನು ಸೇರಿದರು. ಖಾಸಗಿ ಆಸ್ತಿಯೊಳಗೆ ಮನೆ ನೀಡಿ ಕೆಲಸದಾಳುಗಳನ್ನು ಇಟ್ಟುಕೊಳ್ಳುವ ಕ್ರಮವೇ ಸ್ಥಗಿತಗೊಂಡಿತು. ಏಕೆಂದರೆ ಹೀಗೆ ವಾಸ್ತವ್ಯಕ್ಕೆ ನೀಡಿದ ಮನೆ ಅಡಿಸ್ಥಳದ ಮೇಲೆ ಕೆಲಸದಾಳು ಡಿಕ್ಲರೇಶನ್ ಕೊಡಬಹುದೆಂಬ ಭಯ ಕಾಡತೊಡಗಿತು. ಹೀಗಾಗಿ ಗ್ರಾಮೀಣ ವಲಯದಲ್ಲಿ ಪರಸ್ಪರ ವಿಶ್ವಾಸ ಮತ್ತು ಸಹಕಾರಗಳ ಸಂಬಂಧಗಳು ಬಹುತೇಕ ಕಾಣೆಯಾದುವು. ಆದರೆ ಪರೋಕ್ಷವಾಗಿ ಪ್ರತಿಯೊಬ್ಬ ಗೇಣಿದಾರರು ಹಾಗೂ ಕೆಲಸದಾಳುಗಳು ಭೂಮಾಲಕರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿದರು. ಅವರು ವರ್ಷದ ಹನ್ನೆರಡು ತಿಂಗಳಲ್ಲೂ ಕೃಷಿಯೇತರ ಉದ್ಯೋಗಗಳಲ್ಲಿ ತೊಡಗಿ ಸಂಪಾದನೆಯನ್ನು ಏರಿಸಿಕೊಂಡರು. ಮಕ್ಕಳನ್ನು ಶಾಲೆ-ಕಾಲೇಜಿಗೆ ಕಳಿಸಿದರು. ಅವರಲ್ಲಿ ಆರ್ಥಿಕ ಭದ್ರತೆ ಪಡೆದವರು ಇಂಗ್ಲಿಷ್ ಮೀಡಿಯಂ ಶಾಲೆಗಳಿಗೇ ಮಕ್ಕಳನ್ನು ಕಳಿಸಿದರು. ತಮ್ಮ ಮಾಜಿ ಧಣಿಗಳ ಮಕ್ಕಳಿಗೆ ತಮ್ಮ ಮಕ್ಕಳು ಸಹಪಾಠಿಗಳಾಗುವುದು ಅವರಿಗೆ ಹೆಮ್ಮೆಯ ವಿಷಯವಾಗಿತ್ತು.
ಎರಡನೆಯದಾಗಿ ಹಿಂದೆ ಧಣಿಗಳು ನೀಡಿದ್ದ ಮನೆಗಳಿಗಿಂತ ಉತ್ತಮವಾದ ಮನೆಗಳಲ್ಲಿ ವಾಸಮಾಡತೊಡಗಿದರು. ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದವರು ಕೆಲವರು ದ್ವಿಚಕ್ರವಾಹನ ಖರೀದಿಸಿದರು. ಅವರ ಹೆಣ್ಣು ಮಕ್ಕಳೂ ಬೀಡಿಕಟ್ಟುವುದು, ಟೈಲರಿಂಗ್, ಮುದ್ರಣಾಲಯ, ಸೇಲ್ಸ್‌ಗರ್ಲ್ ಇತ್ಯಾದಿ ಕೆಲಸಗಳಿಗೆ ಹೋಗಿ ಸಂಪಾದಿಸಿದರು. ಪುರುಷರು ಕಂಟ್ರಾಕ್ಟ್ ಕೆಲಸಗಳಲ್ಲಿ ತೊಡಗಿ ಹೆಚ್ಚಿನ ಆದಾಯ ಗಳಿಸತೊಡಗಿದರು. ಇದೆಲ್ಲವೂ ಅವರ ಸಾಮಾಜಿಕ ಸ್ಥಾನಮಾನಗಳನ್ನು ಏರಿಸಿತು. ಭೂಮಿ ಕಳೆದುಕೊಂಡ ಭೂಮಾಲಕರೂ ಪ್ರಗತಿಯಲ್ಲಿ ಹಿಂದುಳಿಯಲಿಲ್ಲ. ಅವರು ವಿದ್ಯಾಭ್ಯಾಸ ಪಡೆದು ಬ್ಯಾಂಕ್‌ಗಳಲ್ಲಿ ಉದ್ಯೋಗ ಗಳಿಸಿದರು. ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಪದವಿ ಗಳಿಸಿ ಹೆಚ್ಚಿನ ಗೌರವದ ಸ್ಥಾನಗಳಿಗೆ ಏರಿದರು. ಬಂಟ ಜಾತಿಯಲ್ಲಿ ಹಿಂದೆ ಭೂಮಿಗಿದ್ದ ಗೌರವವು ಈಗ ಪದವಿಗಳಿಗೆ ದೊರಕಿತು. ಪರಿಣಾಮವಾಗಿ ಹೆಚ್ಚು ವಿದ್ಯಾವಂತರಿಗೆ ಹೆಚ್ಚಿನ ವರದಕ್ಷಿಣೆ ಸಿಗತೊಡಗಿತು. ಕೃಷಿ ಭೂಮಿ ಹಾಗೂ ಉದ್ಯಮವು ದ್ವಿತೀಯ ದರ್ಜೆಗೆ ಇಳಿಯಿತು. ಎಷ್ಟೋ ಕೃಷಿ ಭೂಮಿ ಉಳುಮೆ ಇಲ್ಲದೆ ಹಡಿಲು ಬಿತ್ತು. ಭತ್ತ ಬೆಳೆಯುವ ಪ್ರದೇಶವೇ ಕಡಿಮೆಯಾಯಿತು. ಹೀಗೆ ಕೃಷಿಕ ಸಂಬಂಧಗಳೆಲ್ಲವೂ ಮರೆಯಾಗಿ ಔಪಚಾರಿಕ ವಾಣಿಜ್ಯ ಸಂಬಂಧಗಳೇ ಕಾಣಿಸಿಕೊಂಡುವು.
ಕರಾವಳಿಯ ಹೆದ್ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ಇದ್ದ ಗದ್ದೆಗಳಲ್ಲೆಲ್ಲಾ ಈಗ ಕಟ್ಟಡಗಳು ಆವರಿಸಿವೆ. ಹೊಸ ಉದ್ಯಮಗಳು ತಲೆ ಎತ್ತಿವೆ. ಇವುಗಳಲ್ಲಿ ಈಗ ಕೆಲಸಕ್ಕೆ ಕರಾವಳಿಯವರು ಸಿಗುತ್ತಿಲ್ಲ. ಉತ್ತರ ಕರ್ನಾಟಕದವರು ಮತ್ತು ಉತ್ತರ ಭಾರತದ ಹಿಂದಿಯವರು ಬರುತ್ತಿದ್ದಾರೆ. ಒಟ್ಟಿನಲ್ಲಿ ಇಂದು ಕರ್ನಾಟಕದ ಕರಾವಳಿಯ ಭೌಗೋಳಿಕ, ಔದ್ಯಮಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ, ಜನಾಂಗೀಯ, ಭಾಷಿಕ ಪಲ್ಲಟಗಳಾಗಿರುವುದರ ಹಿಂದೆ ಭೂಸುಧಾರಣೆಯ ಪರಿಣಾಮವಿದೆ. ಏನಿದ್ದರೂ ಈಗ ಭೂಮಿಯನ್ನು ಗೇಣಿಗೆ ಕೊಡುವ ಪ್ರಶ್ನೆಯೇ ಇಲ್ಲ. ಕೃಷಿ ಮಾಡದೆ ಹಾಗೇ ಬಿಟ್ಟರೂ ಭೂಮಿಯ ಒಡೆತನವನ್ನು ಉಳಿಸಿಕೊಳ್ಳುವ ಪ್ರವೃತ್ತಿ ಹೆಚ್ಚಿದೆ.
ಭೂಸುಧಾರಣೆ ಶಾಸನವನ್ನು ಜಾರಿ ಮಾಡಿದ್ದರಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 1965ರ ಬಳಿಕ ಹೊಗೆಯಾಡುತ್ತ, 1970ರ ಬಳಿಕ ಕೆಂಡ ಕಾಣಿಸಿಕೊಳ್ಳುತ್ತ, 1974ರಿಂದ ಸುಮಾರು 1980ರ ತನಕ ಜ್ವಾಲೆಯೇ ಮೇಲೆದ್ದು ಆನಂತರ ಬೇಗೆ ಇಳಿಮುಖವಾಯಿತು. ಈಗ ಈ ಪ್ರಕ್ರಿಯೆಗಳೆಲ್ಲವೂ ಮರೆತೇ ಹೋಗಿವೆ. ಧಣಿ, ಒಕ್ಲು, ಚಾಲಗೇಣಿ, ಮೂಲಗೇಣಿ, ವಾದೆಗೇಣಿ, ಬಿಟ್ಟಿ ಬೇಗಾರಿ, ವಿಷು, ಒಕ್ಲುತನದ ನವೀಕರಣ, ಹಸುರ್ವಾಣಿ, ಡಿಕ್ಲರೇಶನ್ ಇತ್ಯಾದಿ ಪದಗಳ ಪರಿಚಯ ಹೊಸ ತಲೆಮಾರಿನ ಯುವಜನರಿಗೆ ಇಲ್ಲ. ತಮ್ಮ ಅಜ್ಜ-ಅಜ್ಜಿ ಧಣಿಗಳ ಶೋಷಣೆಗೊಳಗಾಗಿ ಹೇಗೆ ನವೆದಿದ್ದರು ಎಂಬುದೂ ಅವರಿಗೆ ಗೊತ್ತಿಲ್ಲ. ಈಗ ಹಟ್ಟಿ, ಗೊಬ್ಬರ, ನೇಗಿಲು, ಪತ್ತಾಯ, ಕಾಂಡೊ, ಬೈಲ್, ಪುದ್ದಾರ್, ಮುಂತಾದ ವಿಷಯಗಳ ಸನಿಹದಲ್ಲಿ ಅವರಿಲ್ಲ. ಅಡವು, ಅಳಿಯಕಟ್ಟು, ಬಾಗಾಯತ್, ವರ್ಗ, ದರ್ಖಾಸ್ತು, ಬೇನಾಮಿ, ಫಸಲುಗೇಣಿ, ಪೊಲಿಸಾಲ, ಕುಮ್ಕಿ, ಕುಮೇರಿ, ಪಟ್ಟಾದಾರ, ಶಿರಸ್ತೆದಾರ, ವಂತಿಕೆ-ವರಾಡ ಇತ್ಯಾದಿ ತಿಳಿದಿಲ್ಲ. ಇನ್ನು ರೈತಸಂಘ, ಒಕ್ಲು ಮಸೂದೆ, ಡಿಕ್ಲರೇಶನ್, ಟ್ರಿಬ್ಯೂನಲ್, ಪಟ್ಟಾಹಕ್ಕು, ಪರಾಭಾರೆ ಇತ್ಯಾದಿ ಪರಿಕಲ್ಪನೆಗಳ ಅರಿವಿಲ್ಲ ತಿಳಿದಿಲ್ಲ. ಅಂದರೆ ಭೂಸುಧಾರಣೆಯ ಶಾಸನವು ಸಮಾನತೆಯನ್ನು ಸಾಧಿಸದಿದ್ದರೂ ಜನರಿಗೆ ಸ್ವಾತಂತ್ರ್ಯವನ್ನು ನೀಡಿದೆ, ಸಹಕಾರ ಸಂಘಗಳಲ್ಲಿ ಸದಸ್ಯರಾಗಲು ಅರ್ಹತೆ ಸಿಕ್ಕಿದೆ, ಉದ್ಯಮ ಸ್ಥಾಪಿಸಲು ಬಂಡವಾಳಕ್ಕಾಗಿ ಸಾರ್ವಜನಿಕ ಬ್ಯಾಂಕ್‌ಗಳಿಂದ ಸಾಲ ಸಿಗುತ್ತದೆ, ರುಡ್‌ಸೆಟ್‌ನಂತಹ ಅಲ್ಪಾವಧಿಯ ತರಬೇತಿಗಳನ್ನು ಪಡೆದು ತಾಂತ್ರಿಕ ಕೌಶಲದ ಸ್ವದ್ಯೋಗಗಳಲ್ಲಿ ತೊಡಗಬಹುದಾಗಿದೆ ಹಾಗೂ ಶಿಕ್ಷಣದ ಮೂಲಕ ಉನ್ನತ ಸ್ಥಾನಗಳಿಗೆ ಏರಲು ಸಾಧ್ಯವಾಗಿದೆ. ಇವೆಲ್ಲವೂ ಸಾಮಾಜಿಕ ಪ್ರಗತಿಯ ಜಾಡಿನಲ್ಲಿ ಸಾಗುತ್ತಿವೆ ಎನ್ನುವಷ್ಟರ ಮಟ್ಟಿಗೆ ಭೂಸುಧಾರಣೆಯು ಪರಿವರ್ತನೆಗಳನ್ನು ತಂದಿದೆ ಎನ್ನಬಹುದು. ಈ ಎಲ್ಲ ಪಲ್ಲಟಗಳನ್ನು ನಾನು 2022 ರಲ್ಲಿ ಪ್ರಕಟಿಸಿದ ‘ನೆಲದನಂಟು’ ಎಂಬ ಕಾದಂಬರಿಯಲ್ಲಿ ಕಥಾರೂಪದಲ್ಲಿ ದಾಖಲಿಸಿದ್ದೇನೆ.