ತತ್ವಪದಗಳ ಅಧ್ಯಯನಕ್ಕಾಗಿಯೇ ಪ್ರಾಧಿಕಾರವೊಂದು ರಚನೆಯಾಗಲಿ

Update: 2024-01-12 06:18 GMT

ಅರಿತೋ ಅರಿಯದೆಯೋ ಸಾಹಿತ್ಯ ಚರಿತ್ರೆಕಾರರು ಕ್ರಿ.ಶ. 17,18,19ನೇ ಶತಮಾನಗಳು ಕನ್ನಡ ಸಾಹಿತ್ಯದಲ್ಲಿ ಕತ್ತಲಯುಗವೆಂದು ಕರೆದು ಬಹು ದೊಡ್ಡ ಚಾರಿತ್ರಿಕ ಪ್ರಮಾದವನ್ನೆಸಗಿದರು. ಸಾಹಿತ್ಯದ ಸ್ವರೂಪ ಮತ್ತು ಮೊತ್ತ ಕುರಿತಂತೆ ಅವರಿಗಿರುವ ಪಾರ್ಶ್ವಿಕ ಗ್ರಹಿಕೆಗಳು ಅವರನ್ನು ಈ ಬಗೆಯ ಅಪಸವ್ಯಗಳಿಗೆ ಎಡೆ ಮಾಡಿದವು. ವಸಾಹತೋತ್ತರ ಚಿಂತನಾ ಕ್ರಮಗಳು ಮತ್ತು ಚಿಂತನಾ ಪ್ರಸ್ಥಾನಗಳಾದರೂ ಈ ಬಗೆಯ ತಪ್ಪುಗಳನ್ನು ಸರಿ ಪಡಿಸುವಲ್ಲಿ ಅಷ್ಟೇನು ಶ್ರಮ ಪಡಲಿಲ್ಲವೆಂದೇ ತೋರುತ್ತದೆ. ಇಂಥದೊಂದು ಪ್ರಮಾದ ಏಕಾಯಿತು ಎಂಬುದನ್ನು ಹುಡುಕುವುದಕ್ಕಿಂತ ಈ ಪ್ರಮಾದದಿಂದಾಗಿ ಕನ್ನಡ ವಾಙ್ಮಯಕ್ಕೆ, ಅದಕ್ಕಿಂತ ಹೆಚ್ಚಾಗಿ ಕನ್ನಡಿಗರ ಬದುಕಿಗೆ ಆದ ಹಾನಿಗಳೇನು? ಎಂಬುದನ್ನು ಗಮನಿಸುವುದೇ ಹೆಚ್ಚು ಅಪೇಕ್ಷಣೀಯ ಎಂದುತೋರುತ್ತದೆ.

ಈ ಕಾಲಘಟ್ಟವನ್ನು ಕತ್ತಲಯುಗವೆಂದು ನಂಬಿಸಿದ್ದಕ್ಕಾಗಿ ಈ ಅವಧಿಯಲ್ಲಿ ಕನ್ನಡದ ನೆಲದಲ್ಲಿ ವ್ಯಾಪಕವಾಗಿ ನಡೆದತಾತ್ವಿಕ ಅನುಸಂಧಾನಗಳು, ದಾರ್ಶನಿಕ ಆದಾನ-ಪ್ರದಾನಗಳನ್ನು ಗುರುತಿಸದಂತೆ ಒಂದು ಸಾಂಸ್ಕೃತಿಕ ರಾಜಕಾರಣ ತನ್ನ ಜನವಿರೋಧಿ ಆಧಿಪತ್ಯವನ್ನು ಒಳ ನುಗ್ಗಿಸಲು ಸಾಧ್ಯವಾಯಿತು. ತತ್ಪರಿಣಾಮ ಇಲ್ಲಿ ಘಟಿಸಿದ ಪ್ರಾಯೋಗಿಕ ಬದುಕಿನ ನಿಲುವು-ನೆಲೆಗಳನ್ನು ತುಚ್ಛೀಕರಿಸಿ ಕಲ್ಪಿತ ವಾಸ್ತವಗಳನ್ನು ವೈಭವೀಕರಿಸಿ ಜನಮಾನಸವನ್ನು ಜಡಗೊಳಿಸಿದ್ದು ಸೂರ್ಯಸ್ಪಷ್ಟ. ಹುಸಿ ಚೈತನ್ಯದ ಬಗೆಗೆ ಗಳಹುವ ಜಡವಾದಿಗಳ ಅಬ್ಬರದಲ್ಲಿ ಸರ್ವಶೂನ್ಯ ನಿರಾಲಂಬದ ಅನುಭೂತಿಯೊಂದು ಹಿಂದಕ್ಕೆ ಬಿತ್ತು. ಇದು ಆಧುನಿಕ ಜೀವನ ಶೈಲಿಯ ತುಡಿತಕ್ಕೆ ಕಾರಣವಾದದ್ದೂ ಉಂಟು. ಈಗ ಅರಿವುಗೊಳಿಸಿಕೊಳ್ಳದಿದ್ದರೆ ಸದ್ಯದ ಸಂಕಟಗಳಿಗೆ ಪರಿಹಾರ ಸಾಧ್ಯವಿಲ್ಲ. ಅಂದರೆ ಕಾಲದ ಜರೂರಿಯಾಗಿ ಕಾಣಿಸಿಕೊಂಡಿದ್ದ ದಾರ್ಶನಿಕ ಕೊಡು-ಕೊಳ್ಳುವಿಕೆಯನ್ನು ಹಿಡಿದಿಟ್ಟುಕೊಂಡಿದ್ದ ಸಕಲರ ಜೀವದ್ರವ್ಯವಾಗಿದ್ದ ಅಸಂಖ್ಯ ತತ್ವಪದಗಳನ್ನು ನಾವು ಗಂಭೀರವಾಗಿ ಪರಿಗಣಿಸಲಿಲ್ಲ. ಅವರು ಕತ್ತಲಯುಗವೆಂದು ಕರೆದ ಈ ಅವಧಿಯಲ್ಲಿ ಕನ್ನಡ ಮಾತು ಬಲ್ಲ ಪ್ರದೇಶಗಳುದ್ದಕ್ಕೂ ನೂರಾರು ಅನುಭಾವಿಗಳು ತಮ್ಮ ಬದುಕೇ ಆಗಿದ್ದ ಪದಗಳನ್ನು ಸೃಜಿಸಿ ಹಾಡಿ ಹಾಡಿಸುತ್ತಲೇ ಬಂದಿದ್ದನ್ನು ಪರಿಗಣಿಸಲು ಆಗಲಿಲ್ಲ. ಇಂತಹ ಅವಜ್ಞೆಗೆ ಬಹು ಮುಖ್ಯಕಾರಣವೆಂದರೆ ಇವೆಲ್ಲ ಸಮಸ್ತ ಶೂದ್ರ, ದಲಿತ ಸಮೂಹಗಳಿಂದ ಬಂದ ಬಹುಜನರ ಸಾಹಿತ್ಯ. ಇಲ್ಲಿಗೆ ಬಂದಾಕ್ಷಣ ಎಲ್ಲ ಬಂಧನಗಳೂ ಕಳಚಿ ಬೀಳುತ್ತವೆ. ಬಯಲು ಗಳಿಕೆಯ ಈ ಸಾಧಕರು ಖಾಲಿಯಾಗಲು ಆಸ್ಪದವೇ ಇಲ್ಲದಂತೆ ತುಂಬಿಕೊಂಡಿದ್ದನ್ನು ನಾವು ಹಂಚಿಕೊಳ್ಳಲು ನಮ್ಮೊಳಗಿನ ಕಸವನ್ನು ನಾವು ಖಾಲಿ ಮಾಡಿಕೊಂಡಿರಲೇ ಇಲ್ಲ.

ಅದೇನೇ ಇರಲಿ ವಚನ-ಕೀರ್ತನೆಗಳ ತರುವಾಯ ಕನ್ನಡ ಸಾಹಿತ್ಯದಲ್ಲಿ ಹರಿಗಡಿಯದಂತೆ ಪ್ರವಹಿಸುತ್ತಿರುವ ಆನುಭಾವಿಕ ಮಹಾಪ್ರಸ್ಥಾನವೊಂದನ್ನು ನಾವು ಈಗಲಾದರೂ ಅರಿತು ಅನುಷ್ಠಾನಗೊಳಿಸದಿದ್ದರೆ ಬಹುದೊಡ್ಡ ಹಾನಿ ಆಗುವುದಾದರೆ ಮೊದಲು ಮಾನವ ಸಮುದಾಯಗಳಿಗೆ ಎಂಬ ಎಚ್ಚರವಿರಲಿ. ಅಂತೂ ಈಗಾಗಲೇ ಅಲ್ಲಲ್ಲಿ ಪಾಳು ದೇಗುಲ, ಊರ ಮುಂದಿನ ಬಯಲು, ಮರಣದ ಮನೆಯಲ್ಲಿ ನಿತಾಂತವಾಗಿ ಅನುರಣಿಸುತ್ತಿದ್ದ ಈ ತತ್ವಪದಗಳು ಮೊದಲ ಬಾರಿಗೆ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮೂಲಕ ಸಂಪಾದನೆಗೊಂಡು ಸುಮಾರು 51 ಸಂಪುಟಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಪ್ರಕಟಗೊಂಡಿವೆ. ಇದು ತತ್ವಪದಗಳ ಕುರಿತ ಆರಂಭ ಬಿಂದು. ಇವುಗಳ ಬಗೆಗೆ ಅಧ್ಯಯನ ಇನ್ನು ಮುಂದೆ ಶುರು ಆಗಬೇಕಿದೆ. ವಚನ ಸಂಪುಟ, ದಾಸ ಸಂಪುಟಗಳಿಗಿಂತ ಅತಿ ಹೆಚ್ಚು ಸಂಪುಟಗಳಲ್ಲಿ ಕಾಣಿಸಿಕೊಂಡದ್ದು ಈ ತತ್ವಪದ ಸಾಹಿತ್ಯವೇ. ಅಜಮಾಸು ಐನೂರಕ್ಕಿಂತಲೂ ಹೆಚ್ಚು ತತ್ವಾನುಸಂಧಾನಿಗಳ ಬದುಕಿನ ಉಪಸೃಷ್ಟಿಯಾಗಿರುವ ಸಾವಿರಾರು ಪದಗಳಲ್ಲಿ ಭಾರತದ ಈವರೆಗಿನ ತಾತ್ವಿಕ ಧಾರೆಗಳೆಲ್ಲ ಎಡೆ ಪಡೆದುಕೊಂಡಿವೆ. ತತ್ವಪದದೊಳಗಣ ಪ್ರವೇಶವಿರದಿದ್ದವರಿಗೆ ಇವೇನೋ ಸುಮ್ಮನೆ ಭಜನೆ ಮಾಡುವ ಪಾಮರ ಸೃಷ್ಟಿ ಎನಿಸಬಹುದು. ಆದರೆ ಅದರೊಳಗಿನ ಹೂರಣವು ತುಸು ನಾಲಿಗೆಗೆ ತಾಗಿದರೂ ಸಾಕು. ಹಲವು ಜಾತಿ, ಮತ, ಪಂಥ, ಭಾಷೆ, ಲಿಂಗ, ಪ್ರದೇಶಗಳಿಂದ ಬಂದವರೆಲ್ಲ ಕೇವಲ ಬರೆದದ್ದಲ್ಲ! ಬದುಕಿದ್ದು ಹಂಗ್ಹಂಗೆ ದಾಖಲಾಗಿವೆ. ಇಲ್ಲಿ ಬ್ರಾಹ್ಮಣ ಸಮೂಹದಿಂದ ಬಂದವರೂ ಇದ್ದಾರೆ, ದಲಿತ ಸಮೂಹದಿಂದ ಬಂದವರೂ ಇದ್ದಾರೆ. ಮಹಿಳೆಯರು ದೊಡ್ಡ ಮಟ್ಟದಲ್ಲಿ ತತ್ವಾನುಸಂಧಾನಿಗಳಾಗಿ ಕಾಣಿಸಿಕೊಂಡು ಅದರಲ್ಲಿ ಕೆಲವರಾದರೂ ತತ್ವಪದಗಳನ್ನು ರಚಿಸಿದ್ದಾರೆ. ಇಲ್ಲಿ ಎಲ್ಲರೂ ತಮ್ಮ ತಮ್ಮ ಜಾತಿಗೋಡೆಗಳನ್ನು ದಾಟಿ ಬಯಲಿಗೆ ಬಂದಿದ್ದಾರೆ! ಅಲ್ಲಿ ತಾತ್ವಿಕ ವಾದ, ವಾಗ್ವಾದ, ಖಂಡನ-ಮಂಡನ, ತರ್ಕ, ಪ್ರಮಾಣ ಹೀಗೆ ಈವರೆಗಿನ ಆನುಭಾವಿಕ ಹುಡುಕಾಟಗಳು ತುಂಬ ಸರಳವಾಗಿ ಎಡೆ ಪಡೆದುಕೊಂಡಿವೆ. ನಾಥ, ಆರೂಢ, ಅವಧೂತ, ಶರಣ, ಶಾಕ್ತ, ಸೂಫಿ, ಅಚಲ, ಆಜೀವಿಕ ಹೀಗೆ ಎಷ್ಟೆಲ್ಲಾ ಧಾರೆಗಳು ಹೂಬಾಹೂಬ್ ಅಡಕಗೊಂಡಿವೆ. ಆದಾಗ್ಯೂ ನಮ್ಮ ಶಿಷ್ಟ ಸಮಾಜ ಅವರನ್ನು ಈವರೆಗೂ ಒಳಗೆ ಬಿಟ್ಟುಕೊಂಡಿರಲೇ ಇಲ್ಲ. ಇದರಿಂದ ತತ್ವಾನುಸಂಧಾನಿಗಳಿಗೇನು ಲುಕ್ಸಾನು ಇಲ್ಲ. ಹಾನಿ ಆದದ್ದು ನಮಗೆ ಅಷ್ಟೇ. ಸಮಾಜ ತಮ್ಮನ್ನು ಗುರುತಿಸಿ ಅಟ್ಟಕ್ಕೇರಿಸಬೇಕೆಂದು ಬಯಸಿದವರು ಅಲ್ಲ. ಅವರಿಗೆ ಜನತೆಯ ಬದುಕು ಹಸನಾಗಬೇಕು. ಇಲ್ಲದ ಭ್ರಮೆಗಳನ್ನು ಸೃಷ್ಟಿಸಿಕೊಂಡು ತೆರಣಿಯ ಹುಳು ತಾನು ಸೃಷ್ಟಿಕೊಂಡಿರುವ ಬಲೆಯಲ್ಲಿ ತಾನೇ ಬಿದ್ದು ಸಾವ ತೆರನಂತಾಗಬಾರದು ಎಂಬುದೇ ಕಳಕಳಿ. ರಾಜಕೀಯ ಅರಾಜಕತೆ, ಸಾಮಾಜಿಕ ವೈಷಮ್ಯ, ಆರ್ಥಿಕ ಸಂಕಟ, ಸಾಂಸ್ಕೃತಿಕ ಅಪಮಾನಗಳ ನಡುವೆಯೂ ಸಾಮಾನ್ಯ ಜನರನ್ನು ಬದುಕಿನಿಂದ ವಿಮುಖರಾಗದಂತೆ ಕಾಪಾಡಿದವರೇ ಈ ತತ್ವಪದಕಾರರು. ಶತಮಾನಗಳುದ್ದಕ್ಕೂ ಜನಮಾನಸವನ್ನು ನಿರ್ವಹಿಸಿದ ಈ ಪದ-ಪದಾರ್ಥವನ್ನು ಕುರಿತು ಜಿಜ್ಞಾಸೆ ಹರಿಸಬೇಕಿದೆ. ಈಗಲಾದರೂ ನಾವು ತತ್ವಪದಗಳ ಕುರಿತು ಗಂಭೀರವಾದ ಅಧ್ಯಯನ ನಡೆಸಬೇಕಿದೆ. ತತ್ವಪದಗಳು ಕೇವಲ ಓದು ಪಠ್ಯಗಳಲ್ಲ. ಅವೆಲ್ಲ ಸಾಧಕ ಪಠ್ಯಗಳು. ಅಂದರೆ ಅವು ಓದುತ್ತ, ಹಾಡುತ್ತ, ಬದುಕುತ್ತ, ದಾಟುತ್ತ, ದಾಟಿಸುತ್ತ ಪ್ರವಹಿಸಬೇಕಾದ ಜೀವಜೀವಯಾನ. ಹೀಗಾಗಿ ಇವುಗಳ ಹಾಡುಗಾರಿಕೆ, ಅವುಗಳ ಪರಿಸರ, ಭಾಷಿಕ ಸಾಮರ್ಥ್ಯ, ತಾತ್ವಿಕ ಸೂಕ್ಷ್ಮತೆ, ಆನುಭಾವಿಕ ವೈವಿಧ್ಯತೆ, ಎತ್ತರ ಬಿತ್ತರಗಳನ್ನು ವ್ಯಾಪಕ ಅಧ್ಯಯನಕ್ಕೊಳಪಡಿಸಬೇಕಿದೆ. ಈ ಕೆಲಸವು ಕೆಲವು ವ್ಯಕ್ತಿ ಅಥವಾ ಸಂಸ್ಥೆಗಳಿಂದ ಕಾರ್ಯಸಾಧುವಲ್ಲ. ಹಾಗೆ ಆಗಕೂಡದು. ಬಹುತ್ವವೇ ಕೇಂದ್ರವಾಗಿರುವ ಇವು ಬಹುಮುಖಿ ನೆಲೆಯಲ್ಲಿ ಮತ್ತು ಪ್ರಜಾತಾಂತ್ರಿಕ ಪರಿವೇಷದಲ್ಲಿ ನಡೆಯಬೇಕು. ಕಾರಣ ನಮ್ಮ ಘನತೆವೆತ್ತ ಸರಕಾರ ತತ್ವಪದಗಳ ಅಧ್ಯಯನಕ್ಕಾಗಿಯೇ ಪ್ರಾಧಿಕಾರವೊಂದನ್ನು ರಚಿಸಬೇಕು. ನಿಜವಾದ ಪ್ರಜಾತಾಂತ್ರಿಕ ವ್ಯವಸ್ಥೆಯೊಂದು ನೆಲೆಗೊಂಡು ಸಕಲ ಜೀವರ ಲೇಸಿಂಗೆ ಬಯಸುವುದಾದರೆ ಇಂಥ ಅಧ್ಯಯನಗಳು ಸಾಂಸ್ಕೃತಿಕ ರಾಜಕಾರಣದ ಭಾಗವಾಗಬೇಕು. ಸಾಂಸ್ಕೃತಿಕ ರಾಜಕಾರಣದ ಮೂಲಕವೇ ಅಧಿಕಾರ ರಾಜಕಾರಣ ಸಂಭವಿಸುತ್ತದೆ ಎಂಬ ಪರಿಜ್ಞಾನ ಮೊಳೆಯದಿದ್ದರೆ ಬಹುತ್ವದ ನಾಶ ತಪ್ಪಿದ್ದಲ್ಲ.

-ಎಸ್. ನಟರಾಜ ಬೂದಾಳು

ಕಡಕೋಳ ಮಲ್ಲಿಕಾರ್ಜುನ

ರಹಮತ್ ತರೀಕೆರೆ

ಮೀನಾಕ್ಷಿ ಬಾಳಿ

ಕೃಷ್ಣಮೂರ್ತಿ ಹನೂರು

ಲಕ್ಷ್ಮೀಪತಿ ಕೋಲಾರ

ಎಸ್.ಜಿ. ಸಿದ್ದರಾಮಯ್ಯ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News