‘ಸಂವಿಧಾನ ಜಾಗೃತಿ ಜಾಥಾ’ ಅಂತರಂಗದ ಕತ್ತಲೆಗೆ ಬೆಳಕಾಗಲಿ...

ನಡೆ-ನುಡಿಗೆ ಹೆಸರಾಗಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಬಾಬಾಸಾಹೇಬರ ಆಲೋಚನೆಗಳಿಗೆ ನೀರೆರೆಯುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪನವರ ಮಹತ್ವಾಕಾಂಕ್ಷಿ ಆಂದೋಲನವಾದ ‘ಸಂವಿಧಾನ ಜಾಗೃತಿ ಜಾಥಾ’ ಅರಿವಿನ ಕಹಳೆಯನ್ನು ಊದುತ್ತಿದೆ. ಈ ಜ್ಞಾನದ ಕ್ರಾಂತಿಕಹಳೆ ಮನುಷ್ಯರ ಅಂತರಂಗದೊಳಗಿರುವ ಕತ್ತಲೆಗೆ ಬೆಳಕಾಗಲಿ. ಆ ಮೂಲಕ ಜಾತಿ ಸಂಕೋಲೆಗಳಿಂದ ಬಿಡುಗಡೆಗೊಂಡ ಸಮಾಜ ಮಾನವೀಯ ನೆಲೆಯಲ್ಲಿ ಬದುಕುತ್ತಾ, ಪ್ರಜ್ಞೆ, ಕರುಣೆ, ಸಮತೆ, ಮೈತ್ರಿ ಹಾಗೂ ದಯೆಯನ್ನೇ ಪ್ರತಿಪಾದಿಸುತ್ತಾ ಏಳಿಗೆ ಹೊಂದಲಿ.

Update: 2024-02-09 05:39 GMT

‘ಸಂವಿಧಾನ’ ಎಂಬುದು ಜೀವಸಂಕುಲಗಳ ಬದುಕನ್ನು ರಕ್ಷಿಸುತ್ತಾ, ಘನತೆಯ ಬದುಕನ್ನು ಕಟ್ಟಿಕೊಡುವ ಆಡಳಿತಾತ್ಮಕ ಕಾನೂನು. ಇಂತಹ ಮಾನವೀಯ ಸಂವಿಧಾನಕ್ಕಾಗಿ ಜಗತ್ತಿನಾದ್ಯಂತ ಹಲವಾರು ಕ್ರಾಂತಿಗಳು ಜರುಗಿವೆ. ಇಂಗ್ಲೆಂಡ್, ಅಮೆರಿಕ, ಪ್ರಾನ್ಸ್, ಜರ್ಮನಿ, ಇಟಲಿ, ಭಾರತ; ಹೀಗೆ ನೂರಾರು ದೇಶಗಳಲ್ಲಿ ಉಳ್ಳವರ ಅಟ್ಟಹಾಸದಿಂದ ಹಸಿವು, ಅವಮಾನ ಹಾಗೂ ಅಮಾನವೀಯ ನಡೆಗಳಿಂದ ನೊಂದು-ಬೆಂದಿದ್ದ ಜನ ತಮ್ಮ ಉಳಿವಿಗಾಗಿ ಕ್ರಾಂತಿಯನ್ನೇ ನಡೆಸಿ ಗೆದ್ದದ್ದು ಈಗ ಇತಿಹಾಸ.

ಭಾರತದ ಇತಿಹಾಸದಲ್ಲಿ ಸಿಂಧೂಬಯಲಿನ ನಾಗರಿಕತೆಯನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಅಲ್ಲಿನ ದ್ರಾವಿಡರು ನಾಗರಿಕರಂತೆ ವರ್ತಿಸುತ್ತಾ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ನಡೆಸಿದ ಚಹರೆಗಳಿವೆ. ಆದರೆ, ಆರ್ಯರ ಆಗಮನದ ನಂತರ ರೂಢಿಗೊಂಡ ಚಾತುರ್ವರ್ಣ, ಜಾತಿಪದ್ಧತಿ, ಅಸ್ಪಶ್ಯತೆ, ಲಿಂಗತಾರತಮ್ಯ, ವರ್ಗ ಅಸಮಾನತೆಗಳು ಜನರನ್ನು ಶ್ರೇಣೀಕರಿಸಿ, ಕೆಲವರಿಗೆ ಸುಖಸಮೃದ್ಧಿಯನ್ನು, ಹಲವರಿಗೆ ದುಃಖದುಮ್ಮಾನಗಳನ್ನೂ ನೀಡಿದ್ದ ಅಸಮಾನತೆಯ ಕಾನೂನೇ ಕ್ರಿ. ಪೂ. 185ರ ಮನುಸ್ಮತಿಯ ಕಾನೂನು. ಅದರಲ್ಲೂ ಅಕ್ಷರ, ಅಧಿಕಾರ, ಆಸ್ತಿಗಳು ಕೆಲವರಿಗಷ್ಟೇ ಮೀಸಲಾಗಿಸಿಕೊಂಡು ಹಲವರನ್ನು ಜಾತಿಯ ಹೆಸರಿನಲ್ಲಿ ದಬ್ಬಾಳಿಕೆ ನಡೆಸಿಕೊಂಡು ಬಂದ ಚರಿತ್ರೆ ಭಾರತದ್ದು. ಇಂತಹ ಅಮಾನವೀಯ, ಅಸಮಾನತೆಯ ತಾರತಮ್ಯಗಳನ್ನು ಧರ್ಮ, ದೇವರು, ಸಂಸ್ಕೃತಿ, ಸಂಪ್ರದಾಯ, ನಂಬಿಕೆ, ಆಚರಣೆಗಳನ್ನು ಶಾಸ್ತ್ರಗ್ರಂಥಗಳ ಪ್ರಮಾಣದ ನಂಬಿಕೆಯಲ್ಲಿ ಶತಶತಮಾನಗಳಿಂದ ಸಮರ್ಥಿಸುತ್ತಾ, ಜನಮಾನಸದಲ್ಲಿ ಅದೇ ಸತ್ಯ ಎಂದು ಬಿಂಬಿಸುತ್ತಾ ಬಂದರು. ಆದರೆ ಇಡೀ ಭಾರತಕ್ಕೆ ಸಮಾನತೆಯನ್ನು ತಂದುಕೊಟ್ಟ ಕಾನೂನೇ ಬಾಬಾಸಾಹೇಬ್ ಅಂಬೇಡ್ಕರ್ ಅವರ 1950 ಜನವರಿ 26ರ ಭಾರತದ ಸಂವಿಧಾನ. ಈಗ ಈ ಹೆಮ್ಮೆಯ ಸಂವಿಧಾನಕ್ಕೆ 75ರ ನಡಿಗೆ.

ಭಾರತದ ಪ್ರಜೆಯನ್ನು ಧರ್ಮ, ಮೂಲವಂಶ, ಜಾತಿ, ಲಿಂಗ, ಜನ್ಮಸ್ಥಳದ ಆಧಾರಗಳ ಮೇಲೆ ತಾರತಮ್ಯ ಮಾಡುವುದು ನಿಷೇಧಕ್ಕೊಳಪಡಿಸಿ, ಎಲ್ಲರೂ ಶಿಕ್ಷಣ ಪಡೆದು ಘನತೆಯಿಂದ ಬದುಕುತ್ತಾ ಪರಸ್ಪರ ಪ್ರೀತಿ-ಗೌರವಗಳನ್ನು ಕೊಟ್ಟುಕೊಳ್ಳುತ್ತಾ ತನಗಿಚ್ಛೆಯಾದ ಧರ್ಮ ಅನುಸರಿಸುವ ಮೂಲಭೂತ ಹಕ್ಕು ಮನುಷ್ಯ ಬದುಕಿಗೆ ಕೊಟ್ಟದ್ದು ಹಾಗೂ ಚಾರಿತ್ರಿಕವಾಗಿ ಅನ್ಯಾಯಕ್ಕೆ ಒಳಗಾದವರನ್ನೂ ವಿಶೇಷವಾಗಿ ಮಾನ್ಯ ಮಾಡುತ್ತಾ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಪ್ರತಿಪಾದಿಸುತ್ತಿರುವ ತಾಯಿಯೇ ಭಾರತದ ಸಂವಿಧಾನ. ಇಂತಹ ತಾಯ್ತನದ ಸಂವಿಧಾನದ ರಚನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಬಾಬಾಸಾಹೇಬ್ ಅಂಬೇಡ್ಕರ್ ಅವರು ರಾಷ್ಟ್ರಪ್ರೇಮವನ್ನು ಮೆರೆದದ್ದು ನಮಗೆಲ್ಲ ಮಾದರಿಯಾಗಲೇಬೇಕು. ಏಕೆಂದರೆ; ಶತಶತಮಾನಗಳಿಂದ ಸವರ್ಣೀಯರ ಅಟ್ಟಹಾಸ, ಅವಮಾನ, ಅಪಮಾನ, ಬಹಿಷ್ಕಾರ, ದೌರ್ಜನ್ಯ, ಅತ್ಯಾಚಾರ ಹಾಗೂ ಹಲ್ಲೆಗಳಿಗೆ ಒಳಗಾಗಿದ್ದ ಶೋಷಿತ ಸಮುದಾಯದಲ್ಲಿ ಹುಟ್ಟಿದ ಅಂಬೇಡ್ಕರ್ ಅವರು ತಮ್ಮ ಸಮುದಾಯಕ್ಕೆ ಏಕಮುಖವಾಗಿ ಏನೆಲ್ಲ ದಕ್ಕಿಸಿಕೊಳ್ಳುವುದಕ್ಕೆ ಹಠ ಹಿಡಿಯಬಹುದಿತ್ತು, ಅದಕ್ಕೆ ಅವಕಾಶವೂ ಇತ್ತು. ಆದರೆ ಅವರೊಳಗಿದ್ದ ದೇಶ ಕುರಿತಾದ ವಿಶಾಲತೆಯ ಪ್ರಜ್ಞೆ, ಪ್ರಗತಿ, ಸಹಿಷ್ಣುತೆ, ತಾಳ್ಮೆ ಹಾಗೂ ಭಾರತದ ಪ್ರಜೆಗಳ ಮೇಲಿದ್ದ ಕಾಳಜಿಯನ್ನು ಸಂವಿಧಾನದ ಕಾನೂನುಗಳಲ್ಲಿ ತೋರಿದ್ದರು. ಇಂತಹ ಅಪ್ಪಟ ದೇಶಪ್ರೇಮಿಯನ್ನು ಈಗ ಜಾತಿಯ ಕಣ್ಣಲ್ಲಿ ನೋಡುವುದನ್ನು ನಿಲ್ಲಿಸಿ, ಅಂತಃಕರಣದಿಂದ ಅರಿತು ಅನುಸರಣೆಯಲ್ಲಿ ಕಾಣಬೇಕಿದೆ.

ಸಮಾನತೆಯನ್ನೇ ಉಸಿರಾಗಿಸಿಕೊಂಡಿರುವ ಭಾರತದ ಸಂವಿಧಾನವನ್ನು ಸಹಿಸದ ಸಂಪ್ರದಾಯವಾದಿಗಳು ಹಲವಾರು ಕುತಂತ್ರದ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಅದರಲ್ಲಿ ಒಂದು ಅಂಬೇಡ್ಕರ್ ಒಬ್ಬರೆ ಸಂವಿಧಾನವನ್ನು ರಚಿಸಿಲ್ಲ ಎನ್ನುತ್ತಾ ಜಾತಿಯ ಕಾರಣಕ್ಕಾಗಿ ಅವರ ಪ್ರತಿಭೆ ಹಾಗೂ ಪರಿಶ್ರಮವನ್ನು ಬಚ್ಚಿಡುವ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಉತ್ತರಯೆಂಬಂತೆ ಭಾರತದ ಪ್ರಥಮ ರಾಷ್ಟ್ರಪತಿಗಳಾದ ಡಾ. ರಾಜೇಂದ್ರ ಪ್ರಸಾದ್ ಅವರು ಹೀಗೆ ಹೇಳುತ್ತಾರೆ; ‘ಡಾ. ಅಂಬೇಡ್ಕರ್‌ರವರ ಆರೋಗ್ಯ ತೀರಾ ಹದಗೆಟ್ಟಿದ್ದರೂ ಲೆಕ್ಕಿಸದೆ ಸಂವಿಧಾನ ರಚನೆಯಲ್ಲಿ ಅವರು ಸಂಪೂರ್ಣವಾಗಿ ತೊಡಗಿಸಿಕೊಂಡರು ಹಾಗೂ ಅವರು ಎಷ್ಟೊಂದು ಶ್ರದ್ಧೆಯಿಂದಲೂ, ಉತ್ಸಾಹದಿಂದಲೂ ದುಡಿದರೆಂಬುದನ್ನು ಅವರ ದೈನಂದಿನ ನಡವಳಿಕೆಗಳನ್ನು ಕುರ್ಚಿಯಲ್ಲಿ ಕುಳಿತು ನನ್ನಷ್ಟರ ಮಟ್ಟಿಗೆ ಕಣ್ಣಾರೆ ಕಂಡವರು ಇನ್ನೊಬ್ಬರಿಲ್ಲ. ಭಾರತ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಅವರನ್ನು ಚುನಾಯಿಸಬೇಕಂದು ನಾವು ತೆಗೆದುಕೊಂಡ ನಿರ್ಧಾರ ಎಷ್ಟೊಂದು ಅರ್ಥಪೂರ್ಣವಾಗಿದೆಯೋ ಅವರ ಕರ್ತವ್ಯ ಮತ್ತು ಶ್ರದ್ಧೆಯೂ ಅಷ್ಟೇ ಪರಿಣಾಮಕಾರಿಯಾದುದು’ ಎಂದು ಸಮಚಿತ್ತದಿಂದ ನೋಡಿ ಬಾಬಾಸಾಹೇಬರನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಸಂವಿಧಾನ ಸಭೆಯ ಉಪಾಧ್ಯಕ್ಷರೂ, ಕರಡು ರಚನಾ ಸಮಿತಿಯ ಸದಸ್ಯರೂ ಆಗಿದ್ದ ಶ್ರೀ, ಟಿ. ಟಿ. ಕೃಷ್ಣಮಾಚಾರಿ ಹೇಳುತ್ತಾರೆ; ‘ಸಂವಿಧಾನ ಕರಡು ಸಮಿತಿಗೆ ನೇಮಿಸಿದ 7 ಜನ ಸದಸ್ಯರಲ್ಲಿ ಒಬ್ಬರು ಮಧ್ಯದಲ್ಲಿ ರಾಜೀನಾಮೆ ನೀಡಿದರು ಮತ್ತು ಆ ಜಾಗವನ್ನು ಮತ್ತೆ ತುಂಬಲಾಯಿತು ಎಂಬುದು ಈ ಸದನಕ್ಕೆ ತಿಳಿದಿರಬಹುದು. ಆದರೆ ಒಬ್ಬರು ಮರಣವನ್ನಪ್ಪಿದರು ಮತ್ತೆ ಆ ಜಾಗಕ್ಕೆ ಯಾರನ್ನೂ ತುಂಬಲಿಲ್ಲ. ಮತ್ತೊಬ್ಬರು ಅಮೆರಿಕದಲ್ಲೇ ಇದ್ದರು; ಅವರ ಜಾಗವನ್ನು ಬೇರೆಯವರಿಂದ ತುಂಬಲಿಲ್ಲ. ಮತ್ತೊಬ್ಬರು ರಾಜ್ಯದ ಆಡಳಿತ ಕಾರ್ಯಗಳಲ್ಲಿ ನಿರತರಾಗಿದ್ದರು. ಮತ್ತೆ ಇಬ್ಬರು ದಿಲ್ಲಿಯಿಂದ ದೂರವೇ ಉಳಿದರು; ಕಾರಣ ಅವರ ಆರೋಗ್ಯ ಅವರನ್ನು ಅನುಮತಿಸಲಿಲ್ಲ. ನಂತರ ಸಂವಿಧಾನದ ಕರಡನ್ನು ರಚಿಸುವ ಭಾರ ಡಾ. ಅಂಬೇಡ್ಕರ್‌ರವರ ಮೇಲೆ ಬಿತ್ತು ಮತ್ತು ಅವರು ಆ ಕಾರ್ಯವನ್ನು ಒಂಟಿಯಾಗಿ ನಿಭಾಯಿಸಿದ ರೀತಿ ಶ್ಲಾಘನೀಯ ಮತ್ತು ನಾವೆಲ್ಲ ಯಾವುದೇ ಅನುಮಾನಗಳಿಲ್ಲದೆ ಅವರಿಗೆ ಚಿರಋಣಿಯಾಗಿರಬೇಕು’. ಬಾಬಾಸಾಹೇಬರಿಗೆ ‘ಡಾಕ್ಟರ್ ಆಫ್ ಲಾ’ ಪದವಿ ನೀಡಿದ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯ 1952ರಲ್ಲಿ ೞಊ್ಟಞಛ್ಟಿ ಟ್ಛ ಐ್ಞಜಿಚ್ಞ ್ಚಟ್ಞಠಿಜಿಠ್ಠಿಠಿಜಿಟ್ಞೞ ಎಂದು ಗೌರವಿಸಿದ್ದು ಭಾರತೀಯರಿಗೆ ಹೆಮ್ಮೆಯ ಸಂಗತಿ.

ಬಾಬಾಸಾಹೇಬರು 1950 ಜನವರಿ 26ರಂದು ದೇಶಕ್ಕೆ ಸಂವಿಧಾನವನ್ನು ಸಮರ್ಪಣೆ ಮಾಡುತ್ತ ಒಂದು ಮಾತನ್ನು ಹೇಳುತ್ತಾರೆ: ‘ಇಂದು ನಾವು ವೈರುಧ್ಯದ ಬದುಕಿಗೆ ಕಾಲಿಡುತ್ತಿದ್ದೇವೆ. ಒಂದು ಓಟು ಒಂದು ಮೌಲ್ಯ ಇರುವ ರಾಜಕೀಯ ಸಮಾನತೆಯನ್ನು ಸಾಧಿಸಿದ್ದೇವೆ. ಆದರೆ ಸಾಮಾಜಿಕ, ಆರ್ಥಿಕ ಸಮಾನತೆಯನ್ನು ಸಾಧಿಸುತ್ತೇವೆಂಬ ನಂಬಿಕೆ ನನಗಿಲ್ಲ. ಏಕೆಂದರೆ ಸಂವಿಧಾನ ಜಾರಿಗೊಳಿಸುವ ಜಾಗದಲ್ಲಿ ಸಂವಿಧಾನ ವಿರೋಧಿಗಳು ಇದ್ದಾರೆ. ಹಾಗಾಗಿ ಅವರುಗಳು ನನ್ನ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡುತ್ತಾರೆ ಎಂಬ ನಂಬಿಕೆ ನನಗಿಲ್ಲ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ನಮ್ಮ ಕಣ್ಣೆದುರಿಗೆಯೇ ಅಂಬೇಡ್ಕರ್ ಸಂವಿಧಾನವನ್ನು ಬದಲಾಯಿಸುವುದಕ್ಕೆ ನಾವು ಬಂದಿರುವುದು, ಮತ್ತೆ ಮನುಧರ್ಮಶಾಸ್ತ್ರವನ್ನು ಮರುಸ್ಥಾಪಿಸುತ್ತೇವೆ ಎಂಬ ಮಾತುಗಳು ಬಹಿರಂಗವಾಗಿ ಹೇಳಲಾಗುತ್ತಿವೆ. ನಾವು ಚುನಾಯಿಸುತ್ತಿರುವ ಜನಪ್ರತಿನಿಧಿಗಳಲ್ಲಿ ಸಮಾನತೆಯನ್ನು ಒಪ್ಪದೇ ಇರುವವರು ಇದ್ದಾರೆ. ಅಂದರೆ ನಮ್ಮ ಸಂವಿಧಾನವನ್ನು ತಿರಸ್ಕರಿಸುವವರು. ಇಂತಹ ನಕಲಿಗಳನ್ನು ಚುನಾವಣೆಯಲ್ಲಿ ಸೋಲಿಸಬೇಕಿದೆ. ಏಕೆಂದರೆ ನಮ್ಮ ಏಳಿಗೆ ನಮ್ಮ ಕೈಯಲ್ಲೇ ಇದೆ. ಹಾಗೆಯೇ ಅಂತ್ಯವೂ ಕೂಡ!.

ಬಾಬಾಸಾಹೇಬರು ಕಣ್ಣೀರು ಹಾಕುತ್ತಾ ತಮ್ಮ ಕೊನೆಯ ಸಂದೇಶವನ್ನು ನಾನಕ್ ಚಂದು ರತ್ತುವರೊಟ್ಟಿಗೆ ಹೀಗೆ ಹೇಳುತ್ತಾರೆ; ‘‘ಬಹಳ ಕಷ್ಟಪಟ್ಟು ನನ್ನ ಹೋರಾಟದ ರಥವನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ. ಇದು ಹೀಗೇ ಮುನ್ನಡೆಯಬೇಕು. ಅದರ ಮಾರ್ಗದಲ್ಲಿ ಏನೆಲ್ಲ ಎಡರುತೊಡರುಗಳು ಎದುರಾಗಬಹುದು. ಅಡ್ಡಿ ಅಡಚಣೆಗಳು ಅಡ್ಡಬರಬಹುದು. ಚ್ಯುತಿ ನ್ಯೂನತೆಗಳಂತಹ ಕಷ್ಟಗಳು ಅದರ ಮುನ್ನಡೆಗೆ ತೊಂದರೆ ಒಡ್ಡಬಹುದು. ಇವೆಲ್ಲವನ್ನು ಮೆಟ್ಟಿ ನಿಲ್ಲುತ್ತಾ ಮುಂದೆ ಸಾಗಬೇಕು. ನನ್ನ ಜನರು ಈ ಸಂದರ್ಭದ ಸವಾಲನ್ನು ಸ್ವೀಕರಿಸುವ ಧೀಮಂತಿಕೆ ತೋರಬೇಕು. ಒಂದು ಗೌರವಾರ್ಹವಾದ ಮರ್ಯಾದೆಯ ಬದುಕು ಕಟ್ಟಿಕೊಳ್ಳಬೇಕೆಂದರೆ ಅವರೆಲ್ಲ ಇದಕ್ಕೆ ಸಿದ್ಧರಾಗಬೇಕು. ಒಂದು ವೇಳೆ ನನ್ನ ಜನ ಹಾಗೂ ನನ್ನ ಅನುಯಾಯಿಗಳು ಈ ಆಂದೋಲನದ ರಥವನ್ನು ಮುಂದೆ ನಡೆಸುವಲ್ಲಿ ವಿಫಲರಾದರೂ ಪರವಾಗಿಲ್ಲ. ಅವರು ಮಾಡಬಹುದಾದ ಉತ್ತಮ ಕೆಲಸವೆಂದರೆ ಅದು ಎಲ್ಲಿಗೆ ಬಂದಿದೆಯೋ ಅಲ್ಲಿಯೇ ನಿಲ್ಲುವಂತಾದರೂ ನೋಡಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿಯೂ ಅದು ಹಿಂದಕ್ಕೆ ಹೋಗದಂತೆ ಎಚ್ಚರಿಕೆ ವಹಿಸಬೇಕು. ಇದು ನನ್ನ ಕೊನೆ ಸಂದೇಶ. ನನ್ನ ಈ ಮಾತಿಗೆ ಎಲ್ಲರೂ ಕಿವಿಗೊಡುವರೆಂಬ ವಿಶ್ವಾಸ ನನಗಿದೆ’’ ಎಂಬ ಎಚ್ಚರಿಕೆಯ ಮಾತು ಭಾರತೀಯರಿಗೆ ಅರ್ಥವಾಗಬೇಕಿದೆ.

ಭಾರತದ ಶಿಕ್ಷಣ ಕ್ಷೇತ್ರಕ್ಕೆ ಖಾಸಗಿ ಗ್ರಹಣ ಬಡಿದು ದಿಕ್ಕೆಟ್ಟುಹೋಗಿದೆ. ನಮ್ಮ ಸಂವಿಧಾನದಲ್ಲಿ ವಿದ್ಯೆ ಎಲ್ಲರಿಗೂ ಮುಕ್ತವಾಗಿದೆ, ನಿಜ. ಆದರೆ ಕೊಟ್ಟಂತೆ ಕಾಣಿಸುತ್ತಾ ಸಹಜವಾಗೇ ತಳಸಮುದಾಯಗಳನ್ನು ಹೊರಗಿಡುವ ತಂತ್ರಗಾರಿಕೆ ಜೊತೆಗೆ ನಡೆಯುತ್ತಿದೆ. ಅಕ್ಷರ-ಆರೋಗ್ಯ-ಸಂಪತ್ತುಗಳು ಕಡ್ಡಾಯ, ಉಚಿತ ಹಾಗೂ ಸಮಾನವಾಗಿ ಹಂಚಿಕೆಯಾದರೆ ಭಾರತದ ಸಂವಿಧಾನದ ಅಂತರಾಳದೊಳಗಿರುವ ಆಶಯಕ್ಕೆ ವೇಗ ಬಂದಂತಾಗುತ್ತದೆ. ಸಮಾನತೆ ಸಾಧಿಸುವುದಕ್ಕೆ ಕರ್ನಾಟಕದಲ್ಲಿ ಜಾರಿಗೊಂಡ 1974ರ ‘ಉಳುವವನೆ ಭೂ ಒಡೆಯ’ ಕಾನೂನು ವೇಗದ ಹೆಜ್ಜೆ. ಭಾರತದ ಸಂವಿಧಾನಬದ್ಧ ಕಾನೂನು ಹಾಗೂ ಶಿಕ್ಷೆಗಳಿದ್ದರೂ ಜಾತಿಯ ಕಾರಣಕ್ಕಾಗಿ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಬಹಿಷ್ಕಾರ, ಅವಮಾನ, ಮರ್ಯಾದೆ ಹತ್ಯೆಗಳು ರೂಪಾಂತರಗೊಂಡು ಎಗ್ಗಿಲ್ಲದೆ ಜರುಗುತ್ತಿವೆ. ಇದಕ್ಕೆ ಸಂವಿಧಾನದೊಳಗಿರುವ ಕಾನೂನುಗಳು ಪರಿಣಾಮಕಾರಿಯಾಗಿ ಜಾರಿಗೊಳ್ಳಬೇಕಿದೆ. ಉದಾ: ಅಟ್ರಾಸಿಟಿ ಆ್ಯಕ್ಟ್ ಭಯ ಹುಟ್ಟಿಸಿತ್ತೇ ಹೊರತು, ಸಮಾನತೆ ಸಾಧಿಸಲಿಲ್ಲ!. ಇದಕ್ಕೆಲ್ಲ ಅರಿವಿನ ಕೊರತೆಯೇ ಹೊರತು ಬೇರೇನೂ ಅಲ್ಲ. ಭಾರತದಲ್ಲಿ ಈಗ ಆಗುತ್ತಿರುವ ಎಲ್ಲಾ ಬದಲಾವಣೆಗಳು ಬಹಿರಂಗ ಒತ್ತಡಗಳಿಂದ, ಆದರೆ ಅಂತರಂಗ ಕತ್ತಲಲ್ಲೇ ಇದೆ. ಇದನ್ನು ಅರಿತಿರುವ ನಡೆ-ನುಡಿಗೆ ಹೆಸರಾಗಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಬಾಬಾಸಾಹೇಬರ ಆಲೋಚನೆಗಳಿಗೆ ನೀರೆರೆಯುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪನವರ ಮಹತ್ವಾಕಾಂಕ್ಷಿ ಆಂದೋಲನವಾದ ‘ಸಂವಿಧಾನ ಜಾಗೃತಿ ಜಾಥಾ’ ಅರಿವಿನ ಕಹಳೆಯನ್ನು ಊದುತ್ತಿದೆ. ಈ ಜ್ಞಾನದ ಕ್ರಾಂತಿಕಹಳೆ ಮನುಷ್ಯರ ಅಂತರಂಗದೊಳಗಿರುವ ಕತ್ತಲೆಗೆ ಬೆಳಕಾಗಲಿ. ಆ ಮೂಲಕ ಜಾತಿ ಸಂಕೋಲೆಗಳಿಂದ ಬಿಡುಗಡೆಗೊಂಡ ಸಮಾಜ ಮಾನವೀಯ ನೆಲೆಯಲ್ಲಿ ಬದುಕುತ್ತಾ, ಪ್ರಜ್ಞೆ, ಕರುಣೆ, ಸಮತೆ, ಮೈತ್ರಿ ಹಾಗೂ ದಯೆಯನ್ನೇ ಪ್ರತಿಪಾದಿಸುತ್ತಾ ಏಳಿಗೆ ಹೊಂದಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಪ್ರದೀಪ್ ಎನ್.ವಿ.

contributor

Similar News