ಸರಿದಾರಿಗೆ ತರುವ ಹೊಣೆಗಾರಿಕೆ
ಸರಕಾರವೊಂದು ಹಳಿತಪ್ಪಿದರೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡರೆ, ಅದನ್ನು ಸರಿದಾರಿಗೆ ತರುವ ಹೊಣೆಗಾರಿಕೆ ವಿವೇಕಿಗಳಾದ, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧರಾದ ಎಲ್ಲ ನಾಗರಿಕರ ಮೇಲೆ ಇರುತ್ತದೆ. ಅದಕ್ಕೆ ಹಲವಾರು ಮಾರ್ಗಗಳೂ, ವಿಧಾನಗಳೂ ಇವೆ. ಡಿ.ಕೆ. ಶಿವಕುಮಾರ್ ಅವರು ಕರೆದ ಸಭೆ ಪ್ರಜಾಪ್ರಭುತ್ವದ ತತ್ವ, ಸಿದ್ಧಾಂತಗಳಿಗೆ ವಿರುದ್ಧವಾದದ್ದು, ಈ ಸಭೆಗೆ ನಾವು ಬರುವುದಿಲ್ಲ, ಅಕಾಡಮಿ, ಪ್ರಾಧಿಕಾರಗಳು ಸ್ವಾಯತ್ತ ಸಂಸ್ಥೆಗಳು ಎಂದು ಹೇಳುವ ಎದೆಗಾರಿಕೆಯನ್ನು ನಮ್ಮ ಅಕಾಡಮಿಗಳ, ಪ್ರಾಧಿಕಾರಗಳ ಅಧ್ಯಕ್ಷರು ತೋರಿಸಿದರೆ, ಅದೇ ಸರಿದಾರಿಗೆ ತರಲು ಇರುವ ಅತ್ಯುತ್ತಮ ದಾರಿಗಳಲ್ಲಿ ಒಂದಾಗಿರುತ್ತದೆ. ಈ ಎಚ್ಚರ ಇಲ್ಲದಿದ್ದರೆ, ಅಕಾಡಮಿ, ಪ್ರಾಧಿಕಾರಗಳು ಸ್ವಾಯತ್ತ ಸಂಸ್ಥೆಗಳಾಗಿ ಹೆಜ್ಜೆ ಹಾಕುವುದು ಸಾಧ್ಯವಿಲ್ಲದ ಮಾತಾಗುತ್ತದೆ.
ರಾಜ್ಯದಲ್ಲಿರುವ ವಿವಿಧ ಅಕಾಡಮಿಗಳು, ಪ್ರಾಧಿಕಾರಗಳು ಸ್ವಾಯತ್ತ ಸಂಸ್ಥೆಗಳೇ?
ಇದು ಚರ್ಚಿಸಬೇಕಾದ ವಿಚಾರವೇ ಅಲ್ಲ ಎನ್ನುವ ರೀತಿಯಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ. ಶಿವಕುಮಾರ್ ಈ ರಾಜ್ಯದ ಉಪ ಮುಖ್ಯಮಂತ್ರಿಯೂ ಆಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡಾಗ ಈ ಹೇಳಿಕೆ ಬೇರೆಬೇರೆಯ ಆಯಾಮವನ್ನು ಪಡೆದುಕೊಳ್ಳುತ್ತದೆ.
ಒಂದು ರಾಜ್ಯದ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಎಂದೂ ಯಾರ ಅಡಿಯಾಳಾಗಿಯೂ ಕೆಲಸ ಮಾಡಬಾರದು. ಯಾವ ಸರಕಾರದ ನಿರ್ದೇಶನವೂ ಇಂತಹ ಸಂಸ್ಥೆಗಳಿಗೆ ಇರಬಾರದು; ಸಲಹೆ, ಸೂಚನೆ, ಮಾರ್ಗದರ್ಶನಗಳೇನಿದ್ದರೂ ಬರಬೇಕಾದದ್ದು, ಆ ಕ್ಷೇತ್ರಗಳ ಪರಿಣತರಿಂದ, ಅನುಭವಿಗಳಿಂದ, ಚಿಂತಕರಿಂದ. ನಿಜವಾದ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಈ ಸಂಸ್ಥೆಗಳು ಸ್ವಾಯತ್ತ ಸಂಸ್ಥೆಗಳಾಗಿಯೇ ಕೆಲಸ ಮಾಡಬೇಕು. ಮುಕ್ತ ಚಿಂತನೆ, ಸ್ವತಂತ್ರ ಕಾರ್ಯವಿಧಾನ ಈ ಸಂಸ್ಥೆಗಳನ್ನು ಹೆಚ್ಚು ಕ್ರಿಯಾಶೀಲವಾಗಿ ಮತ್ತು ಜನಪರವಾಗಿ ಇರಿಸಬಲ್ಲವು.
ಉಪ ಮುಖ್ಯಮಂತ್ರಿಗಳು ಈ ಅಂಶವನ್ನು ಸರಿಯಾಗಿ ಗ್ರಹಿಸಿಲ್ಲ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಈ ಸ್ವಾಯತ್ತ ಸಂಸ್ಥೆಗಳ ಮೇಲೆ ಅಧಿಕಾರದ ಲಗಾಮು ಹೇರಬಾರದು. ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರ ಈ ಸ್ವಾಯತ್ತ ಸಂಸ್ಥೆಗಳನ್ನು ತನ್ನ ಅಧೀನ ಸಂಸ್ಥೆಗಳು, ಸರಕಾರದ ಕೈಗೊಂಬೆಗಳು ಎಂದು ಭಾವಿಸಿದ್ದು ಇವತ್ತು ಇಡೀ ರಾಷ್ಟ್ರದಲ್ಲಿರುವ ಸ್ವಾಯತ್ತ ಸಂಸ್ಥೆಗಳು ಎಂತಹ ಕರುಣಾಜನಕ ಸ್ಥಿತಿಯಲ್ಲಿವೆ ಎಂಬುದನ್ನು ತೋರಿಸುತ್ತಿದೆ. ಚಲನಚಿತ್ರಗಳ ಗುಣಾತ್ಮಕ ಬದಲಾವಣೆಗೆ ಅಗತ್ಯವಾದ ತರಬೇತಿ ನೀಡಬೇಕಾದ ಪೂನಾದ ಫಿಲಂ ಇನ್‌ಸ್ಟಿಟ್ಯೂಟ್ ಈಗ ಎಂಥ ದುರಂತ ಸ್ಥಿತಿಯಲ್ಲಿದೆ ಎಂಬುದನ್ನು ನೋಡಬಹುದು. ಹಾಗೆಯೇ ಎನ್‌ಸಿಇಆರ್‌ಟಿ. ಇಡೀ ರಾಷ್ಟ್ರದ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ಗುಣಮಟ್ಟವನ್ನು ನೋಡಿಕೊಳ್ಳಬೇಕಾದ ರಾಷ್ಟ್ರೀಯ ಸಮಿತಿ ಈ ಸಂಸ್ಥೆ. ನಮ್ಮ ಮಕ್ಕಳು ಓದಬೇಕಾದ ಪಠ್ಯಗಳನ್ನು, ಅವುಗಳ ಗುಣಾತ್ಮಕ ಹೊಣೆಗಾರಿಕೆಯನ್ನು ನಿರ್ಧರಿಸುವ ಕೆಲಸವೂ ಈ ಸಮಿತಿಯದೇ. ಈ ಸಂಸ್ಥೆ ಮಾಡಿರುವ ಅನಾಹುತಗಳನ್ನು ಇವತ್ತು ಇಡೀ ರಾಷ್ಟ್ರದ ಮಕ್ಕಳು, ಪೋಷಕರು ಅನುಭವಿಸುತ್ತಿದ್ದಾರೆ. ರಾಷ್ಟ್ರದ ಭವಿಷ್ಯಕ್ಕೆ, ಮುನ್ನಡೆಗೆ ಮಾರಕವಾಗುವ ಚಟುವಟಿಕೆಗಳು ಈ ಎನ್‌ಸಿಇಆರ್‌ಟಿಯಿಂದ ತೆರೆಮರೆಯಲ್ಲಿಯೇ ನಡೆಯುತ್ತಿವೆ. ಇಂತಹ ಹತ್ತಾರು ಸ್ವಾಯತ್ತ ಸಂಸ್ಥೆಗಳ ಉದಾಹರಣೆಯನ್ನು ಕೊಡುವುದು ಕಷ್ಟವಾಗಲಾರದು.
ಇದಕ್ಕೆ ಮುಖ್ಯ ಕಾರಣ, ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಈ ಸಂಸ್ಥೆಗಳ ಸ್ವಾಯತ್ತೆಯ ಮೇಲೆ ದಾಳಿ ಮಾಡಿದ್ದು. ಇವೆಲ್ಲ ಸರಕಾರದ ಅಧೀನದಲ್ಲಿರಬೇಕಾದ ಸಂಸ್ಥೆಗಳೇ ಎಂದು ತನಗೆ ತಾನೇ ಭಾವಿಸಿಕೊಂಡದ್ದು. ಅದರ ಫಲವಾಗಿ ಪರಿಣತರು, ಅನುಭವಿಗಳು, ಚಿಂತಕರು, ರಾಷ್ಟ್ರದ ಮುಖ್ಯ ಬೆಳವಣಿಗೆಗೆ ಕಾರಣರಾಗಬಹುದಾದಂಥ ವ್ಯಕ್ತಿಗಳು ಇರಬೇಕಾಗಿದ್ದ ಈ ಸ್ವಾಯತ್ತ ಸಂಸ್ಥೆಗಳಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರು ತುಂಬಿಕೊಂಡಿರುವುದು. ಪಕ್ಷಕ್ಕಾಗಿ ದುಡಿದವರಿಗೆ ಈ ಸ್ಥಾನಗಳನ್ನು ಕೊಡಬೇಕಾದದ್ದು ತನ್ನ ಕರ್ತವ್ಯ ಎಂದು ಬಿಜೆಪಿ ಸರಕಾರ ಭಾವಿಸಿ ಸ್ವಾಯತ್ತ ಸಂಸ್ಥೆಗಳ ಸ್ವರೂಪವನ್ನೇ ಬದಲಾಯಿಸಿತು.
ಕಲೆ, ಸಾಹಿತ್ಯ, ಸಂಸ್ಕೃತಿ ಒಂದು ನಾಡಿನ ಹಿರಿಮೆಯನ್ನು ಎತ್ತಿಹಿಡಿಯುತ್ತವೆ. ಹಾಗೆಯೇ ನಾಳಿನ ತಲೆಮಾರಿಗೆ ಅಗತ್ಯವಾದ ಚಿಂತನೆಯನ್ನು, ನೈತಿಕ ಬಲವನ್ನು ಕಟ್ಟಿಕೊಡುತ್ತವೆ. ಸೂಕ್ಷ್ಮ ಸಂವೇದನೆಯನ್ನು ಬೆಳೆಸುವ ಅವಕಾಶ ಇಂತಹ ಸಂಸ್ಥೆಗಳಿಗೇ ಇರುತ್ತವೆ. ಇದನ್ನು ಸರಕಾರ ನಡೆಸುವ ಪಕ್ಷಗಳು ತಪ್ಪಾಗಿ ಗ್ರಹಿಸಿದರೆ ಅದು ನಾಡಿಗೇ ಕೇಡು ಉಂಟುಮಾಡುತ್ತದೆ.
ಕರ್ನಾಟಕದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ್ತು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸಾಹಿತಿಗಳು, ಕಲಾವಿದರು, ಚಿಂತಕರು, ಪ್ರಜ್ಞಾವಂತ ನಾಗರಿಕರು ಕೋಮುವಾದಿ ಪಕ್ಷವಾದ ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ಬಯಸಿದ್ದು, ಮಾತನಾಡಿದ್ದು ಬಹಳ ಮುಖ್ಯವಾದ ಸಂಗತಿ. ಕೆಲವರು ನೇರವಾಗಿ ಕಣಕ್ಕೇ ಇಳಿದು ಕಾಂಗ್ರೆಸ್ ಪರವಾಗಿ ಪ್ರಚಾರವನ್ನೂ ಮಾಡಿದರು. ಹಾಗೆ ಮಾಡದ ಅನೇಕರು ತಮ್ಮ ಬರಹಗಳ ಮೂಲಕ, ಚಿಂತನೆಯ ಮೂಲಕ, ಮಾತುಕತೆಯ ಮೂಲಕ ಬಿಜೆಪಿಯನ್ನು ಸೋಲಿಸಬೇಕು ಎಂದು ಹೇಳಿದರು. ಇಂತಹ ಕೆಲಸಗಳ ಹಿಂದಿನ ಆಶಯ ನಮ್ಮ ರಾಷ್ಟ್ರದಲ್ಲಿ, ನಮ್ಮ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತೆ ಜಾರಿಗೆ ಬರಬೇಕು. ಸರ್ವಾಧಿಕಾರದತ್ತ ಹೆಜ್ಜೆ ಹಾಕಿದ್ದ, ಪ್ರಜಾಪ್ರಭುತ್ವದ ವಿರೋಧಿಗಳಾಗಿದ್ದ ಕೋಮು ಶಕ್ತಿಗಳು ಮತ್ತೆ ತಲೆ ಎತ್ತಬಾರದು ಎಂಬುದೇ ಆಗಿತ್ತು. ಅಂತಹ ಗಳಿಗೆಯಲ್ಲಿ ನಮ್ಮ ರಾಜ್ಯದಲ್ಲಿ ಇದ್ದ ಪರ್ಯಾಯವೆಂದರೆ ಕಾಂಗ್ರೆಸ್ ಪಕ್ಷ. ಜೊತೆಗೆ ಕಾಂಗ್ರೆಸ್ ಪಕ್ಷದ ಯುವ ನಾಯಕರಾಗಿದ್ದ ರಾಹುಲ್ ಗಾಂಧಿ ಅವರು ನಡೆಸಿದ ‘ಭಾರತ ಜೋಡೊ’ ಯಾತ್ರೆ ಹುಟ್ಟಿಸಿದ ಹೊಸ ಭರವಸೆ. ಅದೂ ಅಲ್ಲದೆ ಕಾಂಗ್ರೆಸ್ ಪಕ್ಷ ಇಡೀ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ನಡೆಸುತ್ತಿದ್ದ ವಿವಿಧ ಪ್ರಯತ್ನಗಳು. ಕಾಂಗ್ರೆಸ್ ತನ್ನ ಇತಿಹಾಸದಲ್ಲಿ ಅನೇಕ ತಪ್ಪು ಹೆಜ್ಜೆಗಳನ್ನು ಇಟ್ಟಿದ್ದರೂ, ಅದು ಮತ್ತೆ ಮತ್ತೆ ತನ್ನ ತಪ್ಪುಗಳನ್ನು ತಿದ್ದಿಕೊಂಡು, ನಿಜವಾದ ಪ್ರಜಾಸತ್ತಾತ್ಮಕ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದುದು ಈ ಪಕ್ಷದ ಬಗ್ಗೆ ಸಾಹಿತಿಗಳ, ಕಲಾವಿದರ, ಚಿಂತಕರ ಮತ್ತು ಸೂಕ್ಷ್ಮ ಸಂವೇದನೆಯ ನಾಗರಿಕರು ಭರವಸೆ ಇಟ್ಟುಕೊಳ್ಳುವಂತೆ ಮಾಡಿತು. ಈ ಕಾರಣದಿಂದಾಗಿಯೇ ಕಾಂಗ್ರೆಸ್ ಗೆಲುವನ್ನು ಇವರೆಲ್ಲ ಬಯಸಿದರು; ಬೆಂಬಲವನ್ನೂ ಸೂಚಿಸಿದರು. ಕೆಲವರು ಬೆವರನ್ನೂ ಹರಿಸಿದರು.
ಇದರ ಅರ್ಥ, ಇವರೆಲ್ಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಂದಲ್ಲ. ನಮ್ಮ ಉಪಮುಖ್ಯಮಂತ್ರಿಗಳು ಎಡವಿರುವುದೂ ಇಲ್ಲಿಯೇ. ಇವರನ್ನೆಲ್ಲ ಕಾಂಗ್ರೆಸ್ ಕಾರ್ಯಕರ್ತರು ಎಂದು ತಪ್ಪಾಗಿ ಗ್ರಹಿಸಿರುವುದೂ ಈ ಕಾರಣಕ್ಕೆ. ಕಾರ್ಯಕರ್ತರ ಜೊತೆಯಲ್ಲಿ ಅಕಾಡಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರನ್ನೂ ಸೇರಿಸಿ ಸಭೆ ಮಾಡುವುದು ಮತ್ತು ಇದನ್ನು ಸಮರ್ಥಿಸಿಕೊಂಡು ಮಾತನಾಡುತ್ತಿರುವುದು ಇಂತಹ ತಪ್ಪುಗ್ರಹಿಕೆಯ ಕಾರಣದಿಂದಲೇ.
ಜೊತೆಗೆ ಇನ್ನೊಂದು ತಪ್ಪೂ ಆಗಿದೆ. ಅಕಾಡಮಿಯ ಮತ್ತು ಪ್ರಾಧಿಕಾರಗಳ ಸ್ಥಾನಗಳನ್ನು ಆಕ್ರಮಿಸಿಕೊಂಡುಬಿಡಬೇಕೆಂಬ ತರಾತುರಿಯಲ್ಲಿ ನಮ್ಮ ಕೆಲವು ಸಾಹಿತಿಗಳು, ಕಲಾವಿದರು ಮಂತ್ರಿಗಳ, ಶಾಸಕರ, ರಾಜಕಾರಣಿಗಳ ಮನೆಗಳಿಗೆ ನುಗ್ಗಿ ಲಾಬಿಮಾಡಿದ್ದು (ಇದು ಬಹಳ ಹಿಂದಿನಿಂದಲೂ ನಡೆದುಬಂದ ಕೆಟ್ಟ ಪರಿಪಾಠವೂ ಹೌದು) ಶಿವಕುಮಾರ್ ಅವರ ಮಾತುಗಳಿಗೆ ಸಮರ್ಥನೆಯನ್ನು ನೀಡುವಂತಿದೆ. ‘ಇಂಥ ಸಭೆಗಳೆಗೆ ನಾವು ಹಾಜರಾಗುವುದಿಲ್ಲ’ ಎಂದು ಎದೆಸೆಟೆದು ನಿಲ್ಲುವ ಧೈರ್ಯವನ್ನು ತೋರಿಸುವುದು ಲಾಬಿ ಮಾಡಿದವರಿಗೆ ಸಾಧ್ಯವಾಗುವುದಿಲ್ಲ.
‘ಕಾಂಗ್ರೆಸ್ ಪಕ್ಷವನ್ನು ಸರಿದಾರಿಗೆ ತರುವುದು ನಮ್ಮಂಥವರ ಮೇಲಿದೆ’ ಎಂದು ಅಕಾಡಮಿಯ ಅಧ್ಯಕ್ಷರೊಬ್ಬರು ಹೇಳಿದರೆಂಬ ಮಾತೂ ಚರ್ಚೆಯಲ್ಲಿದೆ. ಪಕ್ಷವನ್ನು ಸರಿದಾರಿಗೆ ತರಲು ಪಕ್ಷದಲ್ಲಿಯೇ ಸಾವಿರಾರು ಜನರಿದ್ದಾರೆ. ಅದರಲ್ಲಿ ಬುದ್ಧಿಜೀವಿಗಳೂ, ಚಿಂತಕರೂ, ಪಕ್ಷದ ಬಗ್ಗೆ ಅಪಾರ ಶ್ರದ್ಧೆ, ನಂಬಿಕೆ, ನಿಷ್ಠೆ ಇಟ್ಟುಕೊಂಡವರೂ ಇದ್ದಾರೆ. ಅದನ್ನೆಲ್ಲ ಅವರು ನೋಡಿಕೊಳ್ಳುತ್ತಾರೆ. ಅದು ಪಕ್ಷದ ಆಂತರಿಕ ವಿಚಾರವೂ ಹೌದು.
ಸರಕಾರವೊಂದು ಹಳಿತಪ್ಪಿದರೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡರೆ, ಅದನ್ನು ಸರಿದಾರಿಗೆ ತರುವ ಹೊಣೆಗಾರಿಕೆ ವಿವೇಕಿಗಳಾದ, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧರಾದ ಎಲ್ಲ ನಾಗರಿಕರ ಮೇಲೆ ಇರುತ್ತದೆ. ಅದಕ್ಕೆ ಹಲವಾರು ಮಾರ್ಗಗಳೂ, ವಿಧಾನಗಳೂ ಇವೆ. ಡಿ.ಕೆ. ಶಿವಕುಮಾರ್ ಅವರು ಕರೆದ ಸಭೆ ಪ್ರಜಾಪ್ರಭುತ್ವದ ತತ್ವ, ಸಿದ್ಧಾಂತಗಳಿಗೆ ವಿರುದ್ಧವಾದದ್ದು, ಈ ಸಭೆಗೆ ನಾವು ಬರುವುದಿಲ್ಲ, ಅಕಾಡಮಿ, ಪ್ರಾಧಿಕಾರಗಳು ಸ್ವಾಯತ್ತ ಸಂಸ್ಥೆಗಳು ಎಂದು ಹೇಳುವ ಎದೆಗಾರಿಕೆಯನ್ನು ನಮ್ಮ ಅಕಾಡಮಿಗಳ, ಪ್ರಾಧಿಕಾರಗಳ ಅಧ್ಯಕ್ಷರು ತೋರಿಸಿದರೆ, ಅದೇ ಸರಿದಾರಿಗೆ ತರಲು ಇರುವ ಅತ್ಯುತ್ತಮ ದಾರಿಗಳಲ್ಲಿ ಒಂದಾಗಿರುತ್ತದೆ. ಈ ಎಚ್ಚರ ಇಲ್ಲದಿದ್ದರೆ, ಅಕಾಡಮಿ, ಪ್ರಾಧಿಕಾರಗಳು ಸ್ವಾಯತ್ತ ಸಂಸ್ಥೆಗಳಾಗಿ ಹೆಜ್ಜೆ ಹಾಕುವುದು ಸಾಧ್ಯವಿಲ್ಲದ ಮಾತಾಗುತ್ತದೆ.
ಸರಕಾರಗಳನ್ನು ಮಾತ್ರವಲ್ಲ, ಸರಕಾರವನ್ನು ನಡೆಸುವ ವ್ಯಕ್ತಿಗಳನ್ನೂ ತಿದ್ದುವ ಕೆಲಸ ಆಗಾಗ ನಡೆಯಬೇಕಾಗುತ್ತದೆ. ಅದಕ್ಕೆ ನಿಚ್ಚಳವಾದ ತಿಳುವಳಿಕೆ, ತಾತ್ವಿಕ ಸ್ಪಷ್ಟತೆ ಮತ್ತು ಪ್ರಜಾಸತ್ತೆಯಲ್ಲಿ ಅನುಸರಿಸಬೇಕಾದ ಮಾರ್ಗಗಳ ಅರಿವು ಅಗತ್ಯ. ಈ ದಿಕ್ಕಿನಲ್ಲಿ ನಾವೆಲ್ಲ ಚಿಂತಿಸಬೇಕಾದ ಮತ್ತು ಕಾರ್ಯಪ್ರವೃತ್ತರಾಗಬೇಕಾದ ಅಗತ್ಯ ಈ ಹೊತ್ತು ಕಾಣಿಸುತ್ತಿದೆ.
ಇನ್ನೊಂದು ಅಂಶವನ್ನೂ ಇಲ್ಲಿ ಹೇಳಬೇಕು: ಈ ಸ್ವಾಯತ್ತ ಸಂಸ್ಥೆಗಳ ನೇಮಕವನ್ನು ಸರಕಾರ ನೇರವಾಗಿ ತಾನೇ ಮಾಡುವ ವಿಧಾನವನ್ನು ಬದಲಾಯಿಸಿ, ಪರಿಣತರ ಸಮಿತಿಯೊಂದನ್ನು ರಚಿಸಿ, ಈ ಸಮಿತಿ ಶಿಫಾರಸು ಮಾಡುವ ಹೆಸರುಗಳಲ್ಲಿ ತನ್ನ ಆಯ್ಕೆಯನ್ನು ಮಾಡಿಕೊಂಡು ನೇಮಕಮಾಡುವುದು ಒಳ್ಳೆಯ ವಿಧಾನವಾಗಬಹುದು. ಹಾಗೆ ಮಾಡುವಾಗ ಪ್ರಾದೇಶಿಕ ಪ್ರಾತಿನಿಧ್ಯ, ಸಮುದಾಯಗಳ ಪ್ರಾತಿನಿಧ್ಯ, ಲಿಂಗ ಸಮಾನತೆ ಮೊದಲಾದ ಅಂಶಗಳನ್ನೂ ಗಮನದಲ್ಲಿಟ್ಟುಕೊಳ್ಳಬಹುದು. ಇಂತಹ ಕ್ರಮ ಜಾರಿಗೆ ಬಂದರೆ ರಾಜಕಾರಣಿಗಳೂ ನಿರಾಳವಾಗಿರಬಹುದು; ಸ್ವಾಯತ್ತ ಸಂಸ್ಥೆಗಳೂ ತಮ್ಮ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬಹುದು.