ಕಡಿಮೆ ಕೂಲಿ ಹೆಚ್ಚು ಕೆಲಸ: ಸಂಕಷ್ಟದಲ್ಲಿ ಬೀಡಿ ಕಾರ್ಮಿಕರ ಬದುಕು

Update: 2024-03-18 06:45 GMT

ದಾವಣಗೆರೆ, ಮಾ.17: ಚಿಕ್ಕ ಚಿಕ್ಕ ಮನೆಗಳು, ಕೂಡು ಕುಟುಂಬ, ನಿತ್ಯ ದುಡಿದೇ ಉಣ್ಣುವ ಸ್ಥಿತಿ. ಕಡಿಮೆ ಕೂಲಿ, ದುಡಿಮೆ ಇಲ್ಲ ಎಂದರೆ ಬದುಕು ಸಾಗಿಸುವುದು ಕಷ್ಟ. ಇದರೊಂದಿಗೆ ಹಲವು ಆರೋಗ್ಯ ಸಮಸ್ಯೆಗಳು. ಇದು ಜಿಲ್ಲೆಯಲ್ಲಿನ ಮಹಿಳಾ ಬೀಡಿ ಕಾರ್ಮಿಕರು ಅನುಭವಿಸುತ್ತಿರುವ ದುಃಸ್ಥಿತಿ.

ಒಂದು ಕಾಲದಲ್ಲಿ ಕಾರ್ಮಿಕರ ಹಲವಾರು ಹೋರಾಟಗಳನ್ನು ರೂಪಿಸಿರುವಂತಹ ಮಧ್ಯ ಕರ್ನಾಟಕದ ಪ್ರಮುಖ ನಗರವಾದ ದಾವಣಗೆರೆಯಲ್ಲಿ ಬೀಡಿ ಕಾರ್ಮಿಕರ ಯಾತನೆ, ಸಂಕಟ, ಅಧೋಗತಿಗೆ ತಲುಪಿದೆ.

ದಾವಣಗೆರೆ ನಗರ ಒಂದರಲ್ಲಿಯೇ 8 ರಿಂದ 10 ಸಾವಿರ ಬೀಡಿ ಕಾರ್ಮಿಕರಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ಬೀಡಿ ಕಟ್ಟುವ ಕಾರ್ಮಿಕರಿದ್ದಾರೆ. ಮಾಹಿತಿ ಹಕ್ಕಿನಲ್ಲಿ ಪಡೆದ ಅಂಕಿ ಅಂಶಗಳಂತೆ ರಾಜ್ಯದಲ್ಲಿ ಬೀಡಿ ಕಟ್ಟುವ ಕಾರ್ಮಿಕರ ಸಂಖ್ಯೆ 2,23,823 ಇದೆ ಎಂದು ರಾಜ್ಯ ಕಾರ್ಮಿಕ ಇಲಾಖೆ ಮಾಹಿತಿಯನ್ನು ನೀಡುತ್ತಾರೆ. ಆದರೆ ವಾಸ್ತವದಲ್ಲಿ ಅಂಕಿ ಅಂಶಗಳು ಬೇರೆಯೇ ಇದ್ದು ಸರಿಯಾದ ರೀತಿಯಲ್ಲಿ ಬೀಡಿ ಕಾರ್ಮಿಕರ ಸಮೀಕ್ಷೆ ನಡೆದಿರುವುದಿಲ್ಲ ಎಂದು ಸಂಘಟನೆಗಳು ಆರೋಪಿಸಿವೆ.

ಸಿಗದ ಕನಿಷ್ಠ ವೇತನ :

ಬೀಡಿ ಕಂಪನಿಗಳ ಮಾಲಕರು ಅಥವಾ ಗುತ್ತಿಗೆದಾರರು ಕನಿಷ್ಠ ಕೂಲಿಯನ್ನು ನೀಡದೆ ಸತಾಯಿಸುತ್ತಿದ್ದು. ಬೀಡಿ ಕಾರ್ಮಿಕರಿಗೆ ಗುರುತಿನ ಚೀಟಿ, ಪಿಎಫ್, ಬೋನಸ್, ಇಎಸ್‌ಐ, ಲಾಗ್ ಬುಕ್ಕುಗಳನ್ನು ಬೀಡಿ ಕಂಪನಿಗಳು ಅಥವಾ ಮಾಲಕರು ನೀಡದೆ ಸತಾಯಿಸುತ್ತಿದ್ದಾರೆ ಎಂದು ಕಾರ್ಮಿಕರ ಆರೋಪವಾಗಿದೆ.

ಬೀಡಿ ಕಟ್ಟುವ ಎಲ್ಲ ಮಹಿಳೆಯರು ಆರ್ಥಿಕ ಸಂಕಷ್ಟದಲ್ಲಿರು ವವರು. ಅವರು ನೀಡುವ ಕಡಿಮೆ ಕೂಲಿಯಲ್ಲಿ ಮಕ್ಕಳ ಶಿಕ್ಷಣ, ಸಂಸಾರ ನಿಭಾಯಿಸಬೇಕಾಗಿದೆ. ಬೇರೆ ಕೆಲಸ ಗೊತ್ತಿಲ್ಲದ ಅದೆಷ್ಟೋ ಕುಟುಂಬಗಳು ಈ ವೃತ್ತಿಯನ್ನು ಮುಂದುವರಿಸಿರುವುದರಿಂದ ಜೀವನದ ಅಭದ್ರತೆ ಅವರನ್ನು ಕಾಡುತ್ತಿದೆ. ಸ್ಥಳೀಯ ಮಹಿಳೆಯರಿಗೆ ಉದ್ಯೋಗಗಳು ಸಿಗದೇ ಇರುವುದರಿಂದ ಉಪಜೀವನಕ್ಕಾಗಿ ಮಹಿಳೆಯರು ಬೀಡಿ ಕಟ್ಟಿ ಜೀವನ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಇದೆ.

ದಿನವೊಂದಕ್ಕೆ 1 ಸಾವಿರ ಬೀಡಿ ಕಟ್ಟಿದರೆ ಅವರಿಗೆ 180 ರೂ. ಗಳಿಂದ 200 ರೂ. ಕೂಲಿ ಸಿಗುತ್ತದೆ. ಗುಣಮಟ್ಟದ 500 ಗ್ರಾಂ ಎಲೆ, 200 ಗ್ರಾಂ ತಂಬಾಕು ನೀಡಿದರೆ 1 ಸಾವಿರ ಬೀಡಿಗಳನ್ನು ಕಟ್ಟಬಹುದು. ಆದರೆ ಗುತ್ತಿಗೆದಾರರು 1,150 ಬೀಡಿ ಕಟ್ಟಲೇಬೇಕು ಎನ್ನುವ ಒತ್ತಡ ಹೇರಲಾಗುತ್ತದೆ ಎಂದು ಬೀಡಿ ಕಾರ್ಮಿಕರು ಆರೋಪಿಸುತ್ತಿದ್ದಾರೆ.

ಸ್ವಂತ ಸೂರು ಇಲ್ಲ: ಬೀಡಿ ಕಟ್ಟಿ ಜೀವನ ನಡೆಸುವಂತವರಿಗೆ ಸ್ವಂತ ಮನೆಗಳಿಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡಬೇಕಾದಂತಹ ಸ್ಥಿತಿ. ತಿಂಗಳಾಂತ್ಯಕ್ಕೆ ಬಾಡಿಗೆ ಹೊಂದಿಸುವ ಸಂದಿಗ್ಧ ಪರಿಸ್ಥಿತಿ. ಸ್ವಂತ ಮನೆ ಇದ್ದವರು 10*20 ಅಳತೆಯ ಕೊಳಚೆ ಪ್ರದೇಶದ ಮನೆಗಳಲ್ಲಿ ವಾಸ ಮಾಡುವಂತಹ ಪರಿಸ್ಥಿತಿಯಿದೆ.

ಗುರುತಿನ ಚೀಟಿಯಿಲ್ಲದೆ ಚಿಕಿತ್ಸೆ ಇಲ್ಲ: ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ ಕಾರ್ಮಿಕ ಮಂತ್ರಾಲಯದ ಅಡಿಯಲ್ಲಿ ಆಸ್ಪತ್ರೆ ಇದ್ದು ಅಲ್ಲಿ ಗುರುತಿನ ಚೀಟಿ ಇದ್ದವರಿಗೆ ಚಿಕಿತ್ಸೆ, ಗುರುತಿನ ಚೀಟಿ ಇಲ್ಲದವರು ಚಿಕಿತ್ಸೆಯಿಂದ ಹೊರಗುಳಿದಿದ್ದು ಅವರ ಆರೋಗ್ಯಕ್ಕಾಗಿ ಬೇರೆ ಮಾರ್ಗಗಳನ್ನು ಅನುಸರಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ಆರೋಗ್ಯದ ಸಮಸ್ಯೆಗಳು: ಬೀಡಿ ಕಾರ್ಮಿಕರು ಸಾಕಷ್ಟು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೆನ್ನು ನೋವು, ದೃಷ್ಟಿದೋಷ, ಉಸಿರಾಟ ತೊಂದರೆ, ಹೊಟ್ಟೆ ನೋವು, ಸ್ನಾಯು ಸೆಳೆತ, ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವ, ರಕ್ತಹೀನತೆ, ತಂಬಾಕು ಧೂಳಿನಿಂದ ತಲೆ ತಿರುಗುವಿಕೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಗರ್ಭಕಂಠದ ಕ್ಯಾನ್ಸರ್, ಗರ್ಭಪಾತದ ಆವರ್ತನ, ರಕ್ತದೊತ್ತಡ, ನವಜಾತ ಶಿಶುಗಳ ಮರಣ, ಬೀಡಿ ಕಾರ್ಮಿಕರಿಗೆ ಜನಿಸಿದ ಮಕ್ಕಳು ಕಡಿಮೆ ತೂಕ ಹೊಂದಿರುತ್ತವೆ ಎಂದು ದೃಢಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಪ್ರಕಾಶ್ ಎಚ್. ಎನ್.

contributor

Similar News