ನಾಡಿನ ಸಾಕ್ಷಿಪ್ರಜ್ಞೆಯಾಗಿ ಸದಾ ನಮ್ಮ ಜೊತೆಗಿರಲಿ

Update: 2024-08-29 06:04 GMT
Editor : Thouheed | Byline : ಬಿ. ಸುರೇಶ

ದಿನಪತ್ರಿಕೆಯೊಂದು ಹೊಸ ಶತಮಾನದಲ್ಲಿ ಆರಂಭವಾಗಿ ಇಪ್ಪತ್ತೆರಡನೇ ವಸಂತದವರೆಗೆ ಮುಟ್ಟುವುದೆಂದರೆ ಅದು ನಿಜಕ್ಕೂ ಕನ್ನಡದ ಓದುಗರೇ ಮಾಡಿದ ಪವಾಡ ಅನ್ನಬೇಕು. ಯಾಕೆಂದರೆ ಹೊಸ ಶತಮಾನದ ಆರಂಭದ ಹೊತ್ತಿಗೆ ಈ ದೇಶದಲ್ಲಿ ಜಾಗತೀಕರಣ ಯಾವ ವೇಗದಲ್ಲಿ ಇತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಈ ಪ್ರಕ್ರಿಯೆಯು ಬಂಡವಾಳಶಾಹಿ ಪರವಾದುದು. ಹಾಗಾಗಿ ಹಲವು ಪತ್ರಿಕೆಗಳು ಬೃಹತ್ ಬಂಡವಾಳಿಗರಿಗೆ ಮಾರಾಟವಾಗಿದ್ದನ್ನು ಸಹ ಕಂಡಿದ್ದೇವೆ. ಈ ಬಂಡವಾಳ ವ್ಯವಸ್ಥೆ ಮಾಧ್ಯಮವನ್ನು ಸಹ ಸರಕಾಗಿಸಿ, ಜಾಹೀರಾತಿಗೆ ಆದ್ಯತೆ ಕೊಟ್ಟು, ಮಾಧ್ಯಮಗಳ ಪ್ರಮುಖ ಕೆಲಸವಾದ ಸುದ್ದಿ ಎಂಬುದನ್ನು ನಗಣ್ಯವಾಗಿಸಿ, ರೋಚಕತೆಯನ್ನು ಹೂರಣ ಮಾಡಿದ್ದರ ಪರಿಣಾಮವನ್ನು ನಿತ್ಯ ನೋಡುತ್ತಲೇ ಇದ್ದೇವೆ. ಬಹುತೇಕ ರಾಷ್ಟ್ರೀಯ ಮಟ್ಟದ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ಆಳುವವರ ಆಣತಿಗೆ ಬಾಲವಾಡಿಸುತ್ತ ಬದುಕಿರುವುದನ್ನು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಅಪರೂಪದಲ್ಲಿ ಅಪರೂಪ ಎಂಬಂತೆ ಕೆಲವು ಪತ್ರಿಕೆಗಳು ಮತ್ತು ಮಾಧ್ಯಮಗಳು ನಾವು ನಮ್ಮ ಕೆಲಸ ಜವಾಬ್ದಾರಿಯಿಂದ ಮಾಡುತ್ತೇವೆ ಎಂದು ಎದೆ ಸೆಟೆಸಿ ನಿಂತಿವೆ. ಅಂತಹವುಗಳಲ್ಲಿ ‘ವಾರ್ತಾಭಾರತಿ’ ಸಹ ಒಂದು. 2003ರಲ್ಲಿ ಆರಂಭವಾಗಿ ಇಲ್ಲಿಯವರೆಗೆ ತನ್ನ ಸ್ವತಂತ್ರ ಚಿಂತನೆಯನ್ನು, ಮೊನಚಾದ ರಾಜಕೀಯ ವಿಶ್ಲೇಷಣೆಯನ್ನು, ಜೊತೆಗೆ ಸಮಕಾಲೀನ ಸಾಂಸ್ಕೃತಿಕ ಮತ್ತು ಸಾಮಾಜಿಕ ಜಗತ್ತಿನ ತಲ್ಲಣಗಳನ್ನು, ಎಲ್ಲ ವರ್ಗದ ಜನರ ಪ್ರಾತಿನಿಧ್ಯದ ಜೊತೆಗೆ ‘ವಾರ್ತಾಭಾರತಿ’ ಕಾಯ್ದಿಟ್ಟುಕೊಂಡಿದೆ. ಇದು ನಿಜಕ್ಕೂ ಮೆಚ್ಚಬೇಕಾದ ಸಂಗತಿ.

ಈ ವರೆಗಿನ ಪಯಣ ಒಂದು ಬಗೆಯಾದರೆ ಮುಂಬರುವ ದಿನಗಳು ಇನ್ನೂ ಕರಾಳವಾಗಬಹುದಾದ ಸಾಧ್ಯತೆ ಇದೆ. ಅಂತಹ ಎಲ್ಲಾ ಪ್ರಕ್ಷುಬ್ಧತೆಗಳ ನಡುವೆ ‘ವಾರ್ತಾಭಾರತಿ’ ಸೌಹಾರ್ದದ ಸೊಡರನ್ನು ಜೀವಂತವಾಗಿರಿಸಿ, ನಾಡಿನ ಸಾಕ್ಷಿಪ್ರಜ್ಞೆಯಾಗಿ ಸದಾ ನಮ್ಮ ಜೊತೆಗಿರಲಿ ಎಂದು ಹಾರೈಸುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಿ. ಸುರೇಶ

contributor

ರಂಗಕರ್ಮಿ ಹಾಗೂ ಚಲನಚಿತ್ರ ತಯಾರಕರು

Similar News