ಅರ್ಥವಿಲ್ಲದ ಮಾತುಗಳು
ಮಾನ್ಯರೇ,
ಮೊನ್ನೆಯ ದಿನ ಅಂದರೆ ಜ.22 ರಂದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ವಿಗ್ರಹಕ್ಕೆ ‘ಪ್ರಾಣಪ್ರತಿಷ್ಠಾಪನೆ’ ಮಾಡಿದ್ದಾರೆ. ಬಳಿಕ ಅವರು ಆಡಿದ ಮಾತುಗಳು ಎಂದಿನಂತೆ ಉತ್ಪ್ರೇಕ್ಷಿತ ಶೈಲಿಯ ಹಾಗೂ ಅವರ ಭಕ್ತರನ್ನು ಬಹುಶಃ ಸಮ್ಮೋಹಗೊಳಿಸುವ ನುಡಿಗಳಾಗಿವೆಯಾದರೂ ವೈಚಾರಿಕತೆಯ ಹಿನ್ನೆಲೆಯಲ್ಲಿ ಯೋಚಿಸುವವರಿಗೆ ಹಲವು ಪ್ರಶ್ನೆಗಳನ್ನುಂಟು ಮಾಡಿವೆ. ಈ ‘ವಿಗ್ರಹದ ಪ್ರತಿಷ್ಠಾಪನೆಯು ಭಾರತಕ್ಕೆ ಸಮೃದ್ಧಿಯ ಹೊಸ ಯುಗದ ಆಗಮನದ ಸಂಕೇತ’ವೆಂದು ಹೇಳಿದ್ದಾರೆ. ಆದರೆ ಅದು ಹೇಗೆ ಸಮೃದ್ಧಿಯ ಹೊಸ ಯುಗದ ಆರಂಭದ ಸಂಕೇತವಾದೀತು ಎಂಬುದು ಅನೇಕರಲ್ಲಿ ಪ್ರಶ್ನೆಯಾಗಿ ಉಳಿದಿದೆ.
ತ್ರೇತಾಯುಗದಲ್ಲಿ ಅಯೋಧ್ಯಾ ಪುರವಾಸಿಗಳು 14 ವರ್ಷ ರಾಮನಿಂದ ದೂರವಾಗಿದ್ದರೆಂದು ವಾಲ್ಮೀಕಿ ರಾಮಾಯಣ ಹೇಳಿದೆ. ಆದರೆ ನಾವು ಅಂದರೆ ಭಾರತೀಯರು ಐದು ಶತಮಾನಗಳ ಕಾಲ ರಾಮನನ್ನು ಕಳೆದುಕೊಂಡಿದ್ದೆವು ಎಂಬುದು ನಿಜವೇ? ಈ ಸುವಿಶಾಲ ಭಾರತದಲ್ಲಿ ಎಲ್ಲೂ, ಯಾರೂ ಆತನಿಗಾಗಿ ಗುಡಿಯನ್ನು ಕಟ್ಟಿರಲಿಲ್ಲವೇ? ಅಥವಾ ಯಾರ ಎದೆಯಗುಡಿಸಲಲ್ಲಿ ಆತನಿಗೆ ಸ್ಥಳಾವಕಾಶ ಮಾಡಿಕೊಟ್ಟಿರಲಿಲ್ಲವೇ? ತುಲಸಿದಾಸರ ರಾಮಚರಿತಮಾನಸದಿಂದ ಕುವೆಂಪುರವರ ರಾಮಾಯಣ ದರ್ಶನಂವರೆಗೆ ಭಾರತದಾದ್ಯಂತ ನೂರಾರು ರಾಮಾಯಣಗಳ ಸೃಷ್ಟಿ (ಎ.ಕೆ.ರಾಮಾನುಜಂರವರ ಪ್ರಕಾರ 300 ರಾಮಾಯಣಗಳಿವೆ), ನಿರಂತರ ಸಾಗಿಬಂದ ನಾಟಕಗಳು, ಯಕ್ಷಗಾನಗಳು, ಜನಪದ ಕ್ಷೇತ್ರದಲ್ಲಾದ ರಾಮನ ಕಲಾ ಸೃಷ್ಟಿ, ಹರಿಕಥೆಗಳು, ಸಿನೆಮಾಗಳು, ಧಾರಾವಾಹಿಗಳು, ಮನೆ ಮನೆಗಳಲ್ಲಾಗುವ ಪೂಜೆಗಳು ಇಲ್ಲೆಲ್ಲಾ ರಾಮನು ಇನ್ನು ಮುಂದೆ ಇರಬಹುದಾದಂತೆ ಇರಲಿಲ್ಲವೆ? ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಆಸ್ತಿಕರು, ಅಧ್ಯಾತ್ಮವಾದಿಗಳು ಹೇಳುವಂತೆ ಈ ಬ್ರಹ್ಮಾಂಡಕ್ಕೇ ಸೃಷ್ಟಿಕರ್ತನಾದ ದೇವರಿಗೆ ನಾವು, ಹುಲುಮಾನವರು ಮನೆಯನೊಂದ ಕಟ್ಟಿಕೊಡುತ್ತೇವೆ ಎಂಬ ಭಾವನೆಯೇ ಅರ್ಥರಹಿತವಾದದ್ದು; ಹಾಸ್ಯಾಸ್ಪದವಾದದ್ದು ಎಂದೆನಿಸುವುದಿಲ್ಲವೇ?
ದೇಶದ ಭವಿಷ್ಯವು ಹಿಂದಿಗಿಂತಲೂ ಹೆಚ್ಚು ಸುಂದರವಾಗಲಿದೆ ಎಂದಿರುವ ಸದಾಶಯವೇನೊ ಒಳ್ಳೆಯದೆ. ಆದರೆ ಅದು ಸಂಭವಿಸುವುದು ರಾಮಮಂದಿರದ ನಿರ್ಮಾಣದಿಂದಲೆ?
‘ರಾಮನ ರೂಪದಲ್ಲಿ ಭಾರತೀಯ ನಾಗರಿಕ ಮೌಲ್ಯಗಳು ಹಾಗೂ ಮಾನವೀಯತೆಯ ಪ್ರಾಣಪ್ರತಿಷ್ಠಾಪನೆಯೂ ಇದಾಗಿದೆ’ ಎಂಬ ಹೇಳಿಕೆಯಂತೂ ಸಂಪೂರ್ಣ ವಿರುದ್ಧಾರ್ಥದಲ್ಲಿ ಸಮ್ಮತಿಸಬಹುದು. ಒಟ್ಟಿನಲ್ಲಿ ಭಾರತದ ಇತಿಹಾಸದಲ್ಲಿ ಇಂತಹ ಹುಚ್ಚು ಹೊಳೆ ಇದೇ ಮೊದಲು ಎಂದರೆ ತಪ್ಪಾಗಲಾರದು. ಇದೇ ಕಡೆಯದಾಗಲಿ ಎಂದು ಆಶಿಸೋಣ!
-ಪು.ಸೂ. ಲಕ್ಷ್ಮೀನಾರಾಯಣ ರಾವ್
ಬೆಂಗಳೂರು