ರಾಜ್ಯಗಳಲ್ಲಿ ಸ್ವಾತಂತ್ರ್ಯ ಪೂರ್ವ ಹಿಂದುಳಿದ ವರ್ಗಗಳ ಚಳವಳಿಗಳು

ಬ್ರಿಟಿಷರ ಆಡಳಿತದಲ್ಲಿ ಇತರ ಹಿಂದುಳಿದ ವರ್ಗಗಳ ಸಂಬಂಧ ಯಾವ ರಾಜ್ಯಗಳಲ್ಲಿ ಚಳವಳಿ ಪರಿಣಾಮಕಾರಿಯಾಗಿತ್ತೋ ಅಂತಹ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ, ಪರಿಶಿಷ್ಟ ವರ್ಗಗಳ ಜೊತೆಯಲ್ಲಿ ಇತರ ಹಿಂದುಳಿದ ವರ್ಗಗಳು 1950ಕ್ಕೂ ಮುನ್ನ ಆದ್ಯತಾ ಉಪಚಾರ ತತ್ವದ ಅಡಿಯಲ್ಲಿ ಮೀಸಲಾತಿ ಪಡೆದುಕೊಂಡಿದ್ದವು. ಆದರೆ 1970ರವರೆಗೂ, ಬಿಹಾರ, ಉತ್ತರ ಪ್ರದೇಶ, ಗುಜರಾತ್, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಇತರ ಹಿಂದುಳಿದ ವರ್ಗಗಳು ಮೀಸಲಾತಿಯನ್ನು ಪಡೆಯಲಾಗಿರಲಿಲ್ಲ. ಪ್ರಸಕ್ತ, ಅಖಿಲ ಭಾರತ ಸೇವೆಗಳ ಜೊತೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇತರ ಹಿಂದುಳಿದ ವರ್ಗಗಳು ಮೀಸಲಾತಿ ಕೋಟಾ ಪ್ರಯೋಜನ ಪಡೆಯುತ್ತಿವೆ.

Update: 2024-03-26 05:30 GMT

ತಮಿಳುನಾಡು 

ತಮಿಳುನಾಡಿನಲ್ಲಿ ಬ್ರಾಹ್ಮಣರು, ಬ್ರಿಟಿಷರ ಶಿಕ್ಷಣ ವ್ಯವಸ್ಥೆ ಮತ್ತು ಇತರ ಸೌಕರ್ಯಗಳ ಮುಖ್ಯ ಫಲಾನುಭವಿಗಳಾಗಿದ್ದರು. ವಿದ್ಯಾವಂತ ಬ್ರಾಹ್ಮಣರು ರಾಜ್ಯದ ಸರಕಾರಿ ಸೇವೆಯಲ್ಲಿ ಹೆಚ್ಚಿನ ಪಾಲನ್ನು ಪಡೆದುಕೊಂಡಿದ್ದರು. ಮೌಂಟಾಗು- ಚೆಲ್‌ಮ್ಸ್ ಫೋರ್ಡ್ ಸುಧಾರಣೆಗಳು ಸೃಷ್ಟಿಸಿದ ಸರಕಾರಿ ಸೇವೆಯಲ್ಲಿ ಬ್ರಾಹ್ಮಣರು ಏಕಸ್ವಾಮ್ಯ ಪಡೆದ ಪರಿಸ್ಥಿತಿಯು ಬ್ರಾಹ್ಮಣೇತರರನ್ನು ಎಚ್ಚರಿಸಿತು ಮತ್ತು ಆತಂಕಗೊಳಿಸಿತು ಕೂಡಾ. ಇದರ ಪರಿಣಾಮವಾಗಿ ಬ್ರಾಹ್ಮಣೇತರ ಗಣ್ಯಜಾತಿಗಳು ಮುಂದಾಳತ್ವ ವಹಿಸಿ ಮೊದಲು ‘ದಕ್ಷಿಣ ಭಾರತದ ಉದಾರ ಒಕ್ಕೂಟ’ವನ್ನು ಸ್ಥಾಪಿಸಿ, ಆನಂತರ 1916ರಲ್ಲಿ ಜಸ್ಟಿಸ್ ಪಕ್ಷ ಸ್ಥಾಪಿಸಿಕೊಂಡವು. 1920ರಲ್ಲಿ ಅಧಿಕಾರಕ್ಕೆ ಬಂದ ನಂತರ, ಈ ಪಕ್ಷವು ಸರಕಾರಿ ಸೇವೆಗಳ ಮೇಲಿನ ಬ್ರಾಹ್ಮಣರ ಹಿಡಿತವನ್ನು ಸಡಿಲ ಗೊಳಿಸಲು ಕ್ರಮಗಳನ್ನು ತೆಗೆದುಕೊಂಡಿತು. 1927ರ ಕೋಮು ಆಧಾರಿತ ಸರಕಾರದ ಆದೇಶಾನುಸಾರ ವಿವಿಧ ಸಮುದಾಯಗಳಿಗೆ ನೇಮಕಗಳಲ್ಲಿ ಪ್ರತ್ಯೇಕ ಮೀಸಲಾತಿಯನ್ನು ನೀಡಲಾಯಿತು.

ಒಂದು ಕುತೂಹಲದ ಸಂಗತಿ ಎಂದರೆ ಜಸ್ಟಿಸ್ ಪಕ್ಷದ ನಾಯಕರು ಭೂಮಾಲಕ ವರ್ಗಗಳಿಂದ ಬಂದವರು, ಅವರು ಭೂರಹಿತ ಜಾತಿಗಳನ್ನು ತಮ್ಮೊಳಗೆ ಸೇರಿಸಿಕೊಳ್ಳುವ ಮೂಲಕ ತಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳಲು ಉತ್ಸುಕರಾಗಿರಲಿಲ್ಲ. 1927ರ ಕೋಮುವಾದಿ ಸರಕಾರದ ಆದೇಶದಿಂದಾಗಿ ವೆಳ್ಳಾಲ ಜಾತಿ ಅದರಲ್ಲೂ ಮುದಲಿಯಾರರು ಮೇಲುಗೈ ಪಡೆದುಕೊಳ್ಳುವರು. ಇದರಿಂದ ಜಸ್ಟಿಸ್ ಪಕ್ಷದೊಡನೆ ಬಹುಜನರು ಗುರುತಿಸಿಕೊಳ್ಳಲು ಹಿಂಜರಿದರು. ಇದರಿಂದ ಪಕ್ಷವು ರಾಷ್ಟ್ರೀಯ ಆಂದೋಲನದಿಂದ ದೂರ ಸರಿಯುವಂತಾಯಿತು, ಅಲ್ಲದೆ ಪಕ್ಷವನ್ನು ಮತ್ತಷ್ಟು ದುರ್ಬಲಗೊಳಿಸಿತು.

1927ರ ಕೋಮುವಾದಿ ಸರಕಾರದ ಆದೇಶವನ್ನು ಮೊದಲ ಬಾರಿಗೆ 1947ರಲ್ಲಿ ಬ್ರಾಹ್ಮಣೇತರ ಜಾತಿಗಳನ್ನು, ಬ್ರಾಹ್ಮಣೇತರ ಹಿಂದೂಗಳು ಮತ್ತು ಬ್ರಾಹ್ಮಣೇತರ ಹಿಂದುಳಿದ ಹಿಂದೂಗಳಾಗಿ ವಿಭಜಿಸಲಾಯಿತು. ಈ ವಿಭಾಗೀಯ ಮೀಸಲಾತಿಯನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸಿತು ಮತ್ತು ಇದರ ಪರಿಣಾಮವಾಗಿ, ಪರಿಶಿಷ್ಟ ಜಾತಿಗಳು, ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮಾತ್ರ ಮೀಸಲಾತಿ ನೀಡುವಲ್ಲಿ ಸರಕಾರವು ಮತ್ತೊಂದು ಆದೇಶವನ್ನು 1951ರಲ್ಲಿ ಹೊರಡಿಸಿತು. ಇದು ಬ್ರಾಹ್ಮಣೇತರ ಮೇಲ್ಜಾತಿಗಳಿಂದ ಯಾವುದೇ ತೀಕ್ಷ್ಣವಾದ ಪ್ರತಿಕ್ರಿಯೆಗೆ ಕಾರಣವಾಗಲಿಲ್ಲ. ಏಕೆಂದರೆ ಅವರು ಸೌಕರ್ಯ-ಸೌಲಭ್ಯಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಕಷ್ಟು ಪ್ರಬಲರಾಗಿದ್ದರು.

ಮೀಸಲಾತಿ ನೀತಿಯನ್ನು ಬ್ರಿಟಿಷ್ ಆಳ್ವಿಕೆಯಲ್ಲಿ ಪ್ರಾರಂಭಿಸಲಾಯಿತು. ಮತ್ತು ಪದೇ ಪದೇ ಮಾರ್ಪಡಿಸಲಾಯಿತು. ಮದ್ರಾಸಿನಲ್ಲಿ ‘ಹಿಂದುಳಿದ’ ಪದವನ್ನು ಮೊದಲು ಶಿಕ್ಷಣ ಇಲಾಖೆಯಲ್ಲಿ ಅನಕ್ಷರಸ್ಥ ಮತ್ತು ನಿರ್ಗತಿಕ ಜಾತಿಗಳಿಂದ ಬರುವ ಜಾತಿಗಳಿಗೆ ವಿದ್ಯಾರ್ಥಿವೇತನ ಪಾವತಿಸಲು ಬಳಸಲಾಯಿತು.

ಭಾರತ ಸರಕಾರವು 1922ರಲ್ಲಿ ಪರಿಚಯಿಸಿದ ಮೀಸಲಾತಿ ನೀತಿಯು ಬ್ರಾಹ್ಮಣೇತರರಿಗೆ ಹೆಚ್ಚಿನ ಉದ್ಯೋಗಗಳ ದಿಕ್ಕಿನಲ್ಲಿ ನಿರೀಕ್ಷಿತ ಫಲಿತಾಂಶವನ್ನು ತಂದಿತು. 1947ರಲ್ಲಿ ಕೇವಲ ಪ್ರತಿಶತ 21ರಷ್ಟು ಪತ್ರಾಂಕಿತ ಹುದ್ದೆಗಳು ಮತ್ತು ಪ್ರತಿಶತ 20ರಷ್ಟು ಪತ್ರಾಂಕಿತವಲ್ಲದ ಹುದ್ದೆಗಳನ್ನು ಬ್ರಾಹ್ಮಣರು ಪಡೆದುಕೊಂಡರು. ಬ್ರಾಹ್ಮಣೇತರರು ಉಳಿದ ಹುದ್ದೆಗಳನ್ನು ಗಳಿಸಿದರು.

1950ರಲ್ಲಿ ರಾಜ್ಯದ ಸೇವೆಗಳಲ್ಲಿ ಕೋಮು ಪ್ರಾತಿನಿಧ್ಯದ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲಾಯಿತು ಮತ್ತು ‘ಅದ್ಯತಾ ಉಪಚಾರ ತತ್ವ’ದ ಪ್ರಯೋಜನವನ್ನು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಯಿತು. ಹೊಸ ವ್ಯವಸ್ಥೆ ಅಡಿಯಲ್ಲಿ 20 ನೇಮಕಾತಿಗಳ ಒಂದು ಆವೃತ್ತಿಯನ್ನು ಒಂದು ಘಟಕವಾಗಿ ತೆಗೆದುಕೊಳ್ಳಲಾಗಿದೆ. ಮೂರನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೂ ಮತ್ತು 5 ಅನ್ನು ಹಿಂದುಳಿದ ವರ್ಗಗಳಿಗೆ ಮೀಸಲಾಗಿರಿಸಿ, ಉಳಿದವುಗಳನ್ನು ಮುಕ್ತ ಸ್ಪರ್ಧೆ ಎಂದು ಪರಿಗಣಿಸಿ ತುಂಬಿಸಲಾಗಿದೆ. 1951ರ ಜನಗಣತಿ ಆಧಾರದ ಮೇಲೆ, 1954ರಲ್ಲಿ ಆಂಧ್ರಪ್ರದೇಶವನ್ನು ತಮಿಳುನಾಡಿನಿಂದ ಬೇರ್ಪಡಿಸಿದ ಹಿನ್ನೆಲೆಯಲ್ಲಿ ಮೀಸಲಾತಿಯ ಸಂಖ್ಯೆಯನ್ನು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳಿಗೆ ಪ್ರತಿಶತ 16 ಮತ್ತು ಹಿಂದುಳಿದ ವರ್ಗಗಳಿಗೆ ಪ್ರತಿಶತ 25ರಷ್ಟಕ್ಕೆ ಬದಲಾಯಿಸಿತು. ಈ ಉದ್ದೇಶಕ್ಕಾಗಿ ವಿವಿಧ ಸಮುದಾಯಗಳನ್ನು ಐದು ಸ್ಪಷ್ಟ ಪ್ರವರ್ಗಗಳಾಗಿ ಸಂಯೋಜಿಸಲಾಯಿತು.

ಸರಕಾರದ ಕೋಮುವಾದದ ಆದೇಶವು ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವಿನ ವಿವಾದದ ಪ್ರಮುಖ ಅಂಶವಾಯಿತು. ಸಾರ್ವಜನಿಕ ಸೇವೆಗಳಲ್ಲಿ ವರ್ಷಗಟ್ಟಲೆ ಏಕಸ್ವಾಮ್ಯ ಹೊಂದಿದ್ದ ಬ್ರಾಹ್ಮಣರು ಕೇವಲ ಎರಡು ಹುದ್ದೆಗಳನ್ನು ಪಡೆಯುವಂತಾಯಿತು. ಅವರು ಕೇಂದ್ರ ಸರಕಾರ ಮತ್ತು ಖಾಸಗಿ ಉದ್ಯಮಗಳಲ್ಲಿ ಉದ್ಯೋಗಗಳನ್ನು ಹುಡುಕುವ ಒತ್ತಡಕ್ಕೊಳಗಾದರು. ಮತ್ತೆ ನೀತಿಯನ್ನು ಮರುಪರಿಶೀಲನೆಗೆ ಆಗ್ರಹಿಸಿದರು. ಇದನ್ನು 1947ರಲ್ಲಿ ಪರಿಷ್ಕರಿಸಲಾಯಿತು, ಆದರೆ ಮತ್ತೆ 14 ಹುದ್ದೆಗಳಲ್ಲಿ ಎರಡು ಹುದ್ದೆಗಳನ್ನು ಮಾತ್ರ ಪಡೆಯಲು ಅವರು ಅರ್ಹರಾದುದರಿಂದ ಆ ಪರಿಷ್ಕರಣೆಯೂ ಅವರ ವಿರುದ್ಧ ಹೋದಂತಾಯಿತು.

ಕರ್ನಾಟಕ:

1882ರಲ್ಲಿ ಜನರು ತಮ್ಮ ಕುಂದುಕೊರತೆಗಳು ಮತ್ತು ಆಕಾಂಕ್ಷೆಗಳನ್ನು ವ್ಯಕ್ತಪಡಿಸಲು ಸಮರ್ಥರಾಗುವಂತೆ ಸೀಮಿತ ಪೌರತ್ವ ಹಕ್ಕುಗಳನ್ನು ನೀಡಿ, ಆದರೆ ಯಾವುದೇ ಶಾಸಕಾಂಗ ಅಧಿಕಾರಗಳಿಲ್ಲದ ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ರಚಿಸಲಾಯಿತು. ಆದಾಗ್ಯೂ ಅಂದಿನಿಂದ ರಾಜಕೀಯ ಪ್ರಜ್ಞೆಯು ಜನರಲ್ಲಿ ಮತ್ತು ವಿಶೇಷವಾಗಿ ರಾಜ್ಯದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರಂಥ ಪ್ರಬಲ ಜಾತಿಗಳಲ್ಲಿಯೇ ಇತ್ತು. 1905ರಲ್ಲಿ ಮೈಸೂರು ಲಿಂಗಾಯತ ಶಿಕ್ಷಣ ನಿಧಿ ಸಂಘ ಮತ್ತು 1906ರಲ್ಲಿ ಒಕ್ಕಲಿಗರ ಸಂಘವು ಬೆಂಗಳೂರಿನಲ್ಲಿ ರೂಪುಗೊಂಡವು. ಅವರ ಸಮುದಾಯದ ಸದಸ್ಯರ ಶಿಕ್ಷಣ, ಸೇವೆಗಳು ಮತ್ತು ವೃತ್ತಿಗಳಲ್ಲಿ ಆಸಕ್ತಿ ವಹಿಸಲು ಪ್ರಾರಂಭಿಸಿದರು. ಇಷ್ಟಾದರೂ ಅವರ ಪ್ರಯತ್ನಗಳು ಆಳುವ ವರ್ಗದ ಬೆಂಬಲ ಸಿಗದೆ ದುರ್ಬಲವಾಗಿದ್ದವು. ಆದರೆ ಪ್ರಜಾಪ್ರತಿನಿಧಿ ಸಭೆಯು, ಜನರು ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಮತ್ತು ತೀರ್ಮಾನಗಳಿಗೆ ಸಮ್ಮತಿಸಲು ಪರಿಣಾಮಕಾರಿಯಾದ ಹೊಸ ಪ್ರಜಾಸತ್ತಾತ್ಮಕ ವೇದಿಕೆಯಾಗಿತ್ತು ಎಂಬುದೂ ಮುಖ್ಯವಾಗಿತ್ತು.

1875ರಲ್ಲಿ ಮೈಸೂರು ರಾಜ್ಯದಲ್ಲಿ ಸಾರ್ವಜನಿಕ ಸೇವೆಗಳಿಗೆ ನೇಮಕಾತಿ ನೀತಿಯ ಬಗ್ಗೆ ಅಷ್ಟೇನೂ ಉಗ್ರ ಸ್ವರೂಪದ ಹೋರಾಟಗಳು ಹೊರಹೊಮ್ಮಲಿಲ್ಲ. ಆದರೂ ಸೌಮ್ಯ ರೀತಿಯ ಪ್ರತಿಭಟನೆಗಳು ನಡೆದುದಂತೂ ಹೌದು. 1912ರಲ್ಲಿ ಎಂ. ವಿಶ್ವೇಶ್ವರಯ್ಯ ದಿವಾನರಾದರು. ಸಾರ್ವಜನಿಕ ಸೇವೆಗೆ ಬರುವ ವ್ಯಕ್ತಿಗೆ ಅರ್ಹತೆಯೇ ಮಾನದಂಡವಾಗಿರಬೇಕು ವಿನಾ ಮತ್ಯಾವುದೇ ಮಾನದಂಡ ಇರಕೂಡದು ಎಂಬ ಹಳೆಯ ಸಿದ್ಧಾಂತವನ್ನೇ ಅವರು ಪ್ರತಿಪಾದಿಸಿದರು. ಮಹಾರಾಜರು ಆ ನೀತಿಯನ್ನು ತಿರಸ್ಕರಿಸಿದರು ಮತ್ತು ಪ್ರಾತಿನಿಧಿಕ ಸಭೆಯಲ್ಲಿನ ಚರ್ಚೆಗಳಿಂದ ಪ್ರಭಾವಿತರಾದರು. ವಿವಿಧ ಜಾತಿಗಳು ಮತ್ತು ಸಮುದಾಯಗಳ ಸಂಘಟನೆಗಳು ಮಾಡಿದ ಮನವಿಗಳನ್ನು ಪುರಸ್ಕರಿಸಿ ಬ್ರಾಹ್ಮಣೇತರರನ್ನು ಸೇವೆಗೆ ನೇಮಿಸಲು ನಿಸ್ಸಂದಿಗ್ಧವಾಗಿ ಘೋಷಿಸಿದರು.

1918ರಲ್ಲಿ ಮೈಸೂರು ಮಹಾರಾಜರು ಸಾರ್ವಜನಿಕ ಸೇವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣರಿದ್ದಾರೆ ಮತ್ತು ರಾಜ್ಯದ ಇತರ ಎಲ್ಲಾ ಪ್ರಮುಖ ಸಮುದಾಯಗಳಿಗೆ ರಾಜ್ಯದ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಭಾವಿಸಿದರು. ಈ ಉದ್ದೇಶಕ್ಕಾಗಿ ಸರಕಾರವು ಆಗಸ್ಟ್ 1918ರಲ್ಲಿ ಸರ್ ಲೆಸ್ಲಿ ಸಿ. ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ, ಪರಿಶೀಲನಾಂಶಗಳ ಮೇಲೆ ವಿಚಾರಣೆ ಮಾಡಿ ವರದಿ ನೀಡಲು ಸೂಚಿಸಿತು.

ಮಿಲ್ಲರ್ ಸಮಿತಿಯು ಜುಲೈ 1919ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಅದು 1916 ಮತ್ತು 1918ರ ಅವಧಿಯಲ್ಲಿಯೂ ಬ್ರಾಹ್ಮಣೇತರರ ಸ್ಥಿತಿ ಉತ್ತಮವಾಗಿರಲಿಲ್ಲ ಎಂದು ಹೇಳಿದೆ. ಪಡೆದ ಪಲಿತಾಂಶಗಳು ಪ್ರತೀ ವರ್ಷ ಅಸಮಾನತೆಯಲ್ಲಿ ಯಾವುದೇ ಪ್ರಗತಿಶೀಲ ವ್ಯತ್ಯಾಸವನ್ನು ತೋರಿಸಲಿಲ್ಲ; ಆದರೆ ಮತ್ತೊಂದೆಡೆ ವಾಸ್ತವವಾಗಿ ವರ್ಷದಿಂದ ವರ್ಷಕ್ಕೆ ಅದು ಉಲ್ಭಣಗೊಂಡಿತು. ಎಲ್ಲಾ ಶ್ರೇಣಿಯ ವೇತನಗಳಲ್ಲಿ ಬ್ರಾಹ್ಮಣರ ಶೇಕಡವಾರು ಪ್ರಮಾಣವೂ ಪ್ರತಿಶತ 67ರಿಂದ ಪ್ರತಿಶತ 82ರ ವರೆಗೆ ಮತ್ತು 100ರಿಂದ 200 ರೂಪಾಯಿಗಳ ಶ್ರೇಣಿಯಲ್ಲಿ ಪ್ರತಿಶತ 100ವರೆಗೆ ಇದೆ ಎಂದು ವರದಿಯಿಂದ ದೃಢಪಟ್ಟಿತ್ತು.

ಹಿಂದುಳಿದ ವರ್ಗಗಳು ಎಂದರೆ, ಬ್ರಾಹ್ಮಣರು, ಆಂಗ್ಲೋ ಇಂಡಿಯನ್ನರು ಮತ್ತು ಯುರೋಪಿಯನ್ನರನ್ನು ಹೊರತುಪಡಿಸಿ ಎಲ್ಲಾ ಸಮುದಾಯಗಳನ್ನು ಒಳಗೊಂಡಿರಬೇಕು ಎಂದು ಸಮಿತಿ ಸಲಹೆ ನೀಡಿತು. ಜನಸಂಖ್ಯೆಯ ಕೇವಲ ಶೇ. 4.5ರಷ್ಟಿದ್ದ ಬ್ರಾಹ್ಮಣ ಸಮುದಾಯವು ಸೇವೆಗಳಲ್ಲಿ ಅಗಾಧವಾದ ಭಾಗವನ್ನು ಅನುಭವಿಸಿತ್ತು. ವರದಿಯು ಗಮನಾರ್ಹವಾಗಿ ಗಮನಿಸಿರುವ ಅಂಶವೆಂದರೆ-‘‘ಬ್ರಾಹ್ಮಣರನ್ನು ಹೊರತುಪಡಿಸಿ ಇತರ ಸಮುದಾಯಗಳಿಂದ ಪಡೆಯಲಾದ ಅಧಿಕಾರಿಗಳ ಪ್ರಮಾಣದಲ್ಲಿ ವ್ಯಾಪಕವಾದ ಹೆಚ್ಚಳವನ್ನು ಯಾವುದೇ ಭಯವಿಲ್ಲದೆ ಸುರಕ್ಷಿತವಾಗಿ ಪ್ರತಿಪಾದಿಸಬಹುದು ಎಂದು ನಾವು ಭಾವಿಸುತ್ತೇವೆ. ಇದರಿಂದಾಗಿ, ಒಟ್ಟಾರೆಯಾಗಿ ಸೇವೆಗಳ ದಕ್ಷತೆಯು ಭೌತಿಕವಾಗಿ ಕಡಿಮೆಯಾಗುತ್ತದೆ.’’

ಮಿಲ್ಲರ್ ವರದಿಯನ್ನು ಸ್ವೀಕರಿಸಿದ ನಂತರ ಸರಕಾರವು ಮೇ 1921ರಲ್ಲಿ ಆದೇಶಗಳನ್ನು ಜಾರಿಗೊಳಿಸಿತು ಮತ್ತು ಕೇಂದ್ರೀಯ ನೇಮಕಾತಿ ಮಂಡಳಿಯನ್ನು ಸ್ಥಾಪಿಸಿ, ಹಿಂದುಳಿದ ವರ್ಗಗಳಿಗೆ ಶೇ.75ರಷ್ಟು ಹುದ್ದೆಗಳನ್ನು ಕಾದಿರಿಸಿತು. ಈ ನೇಮಕಾತಿ ನೀತಿಯ ಪರಿಣಾಮವಾಗಿ, ಆರು ವರ್ಷಗಳ ನಂತರ ಸ್ಥಾನ ಸ್ವಲ್ಪ ಸುಧಾರಿಸಲು ಪ್ರಾರಂಭಿಸಿತು. ಬ್ರಾಹ್ಮಣರ ಪ್ರಾಬಲ್ಯ 1918ರಲ್ಲಿ ಶೇ. 69.64ರಷ್ಟಿದ್ದದ್ದು 1957ರ ಹೊತ್ತಿಗೆ ಅದು ಶೇ.27.65 ಕ್ಕೆ ಬಂದು ನಿಂತಿತು.

ಮಹಾರಾಷ್ಟ್ರ:

19ನೇ ಶತಮಾನದಲ್ಲಿ ಪೂನಾ ಮತ್ತು ಕೊಲ್ಲಾಪುರಗಳು ಭಾರತದಲ್ಲಿ ಹಿಂದುಳಿದ ಜಾತಿಗಳ ಚಳವಳಿಯ ಪರ ಹೊರಹೊಮ್ಮುವಿಕೆಗೆ ನಾಯಕತ್ವವನ್ನು ಒದಗಿಸಿದವು. ಶಿಕ್ಷಣ ಕ್ಷೇತ್ರದ ಮೊದಲ ನಾಯಕರಲ್ಲಿ ಒಬ್ಬರು ಪುಣೆಯ ಜ್ಯೋತಿಬಾ ಫುಲೆ. ಅವರು ಶೂದ್ರ ಮಾಲಿ ಜಾತಿಯಿಂದ ಬಂದವರು. ಫುಲೆ (1827-1890) ಅವರನ್ನು ಭಾರತದಲ್ಲಿ ಬ್ರಾಹ್ಮಣೇತರ ಚಳವಳಿಯ ಪಿತಾಮಹ ಎಂದು ಕರೆಯಲಾಗುತ್ತದೆ. ಅಸ್ಪಶ್ಯರ ಸ್ಥಿತಿ ಅವರನ್ನು ತೀವ್ರ ಚಿಂತನೆಗೆ ಹಚ್ಚಿತ್ತು. ಅವರು ಕೆಳಜಾತಿಗಳಿಗೆ ತಮ್ಮದೇ ಆದ ಸಂಘಗಳನ್ನು ರಚಿಸಲು ಪ್ರೇರೇಪಿಸಿದರು ಮತ್ತು ಸಾಮಾಜಿಕ ಸ್ಥಾನಮಾನ, ಶಿಕ್ಷಣ ಮತ್ತು ಧರ್ಮದಲ್ಲಿ ಶೂದ್ರರಿಗೆ ಸಂಬಂಧಿಸಿದಂತೆ ಪರಂಪರಾಗತ ಬಹಿಷ್ಕಾರಕ್ಕೊಳಗಾದವರ ವಿಮೋಚನೆಗೆ ಶ್ರಮಿಸಿದರು.

ಜ್ಯೋತಿಬಾ ಅವರು ಸಾರ್ವಜನಿಕ ಸೇವೆಗಳಲ್ಲಿ ಎಲ್ಲಾ ಜಾತಿಗಳ ಸದಸ್ಯರಿಗೆ ಸಾಕಷ್ಟು ಪ್ರಾತಿನಿಧ್ಯದ ತತ್ವವನ್ನು ಬೋಧಿಸಿದರು. ಈ ಆಧಾರದ ಮೇಲೆ ಅಂಬೇಡ್ಕರ್ ತುಳಿತಕ್ಕೊಳಗಾದವರ ಕಾರಣಕ್ಕಾಗಿ ಮುಂದಾಳತ್ವ ವಹಿಸಿ ಸೈಮನ್ ಆಯೋಗ (1927) ಮತ್ತು ಮೊದಲ ದುಂಡು ಮೇಜಿನ ಪರಿಷತ್ತಿನ (1930-31) ಮುಂದೆ ಅವರಿಗೆ ಸ್ಥಾನಗಳ ಮೀಸಲಾತಿ ಕೊಡಬೇಕೆಂದು ಕೇಳಿದರು.

ಬಾಂಬೆ ಪ್ರಾಂತದಲ್ಲಿ ಹುಟ್ಟಿಕೊಂಡ ಬ್ರಾಹ್ಮಣೇತರ ಚಳವಳಿಯು ಕೊಲ್ಹಾಪುರವನ್ನೂ ವಿಸ್ತರಿಸಿತು- ಒಂದು ಸಣ್ಣ ಮರಾಠಾ ರಾಜ್ಯ-ಬ್ರಾಹ್ಮಣ- ಬ್ರಾಹ್ಮಣೇತರ ವಿರೋಧಾಭಾಸಗಳು 1991ರಲ್ಲಿ ಪ್ರಾರಂಭವಾದವು. ಅದಕ್ಕೆ ಕಾರಣ, ಆರ್.ಪಿ. ಪರಂಜಾಪೆಯವರು ಮಹಾನ್ ಶಿವಾಜಿಯ ಉತ್ತರಾಧಿಕಾರಿ ಕೊಲ್ಹಾಪುರದ ಮಹಾರಾಜರ ವೈದಿಕ ವಿಧಿಗಳ ಹೊಸ ಹಕ್ಕುಗಳನ್ನು, ಅವರ ಬ್ರಾಹ್ಮಣ ಆನುವಂಶಿಕ ಪುರೋಹಿತರಾಗಿ ಪಡೆಯಲು ನಿರಾಕರಿಸಿದರು. ಅವರ ಆನುವಂಶಿಕ ಭೂ ಆಸ್ತಿಯನ್ನು ಮತ್ತು ಭತ್ತೆಗಳನ್ನು ಮುಟ್ಟುಗೋಲು ಹಾಕಿ ಕೊಳ್ಳಲಾಯಿತು; ಸಮಸ್ಯೆ ತೀವ್ರವಾಯಿತು. ಬ್ರಾಹ್ಮಣರ ಬಗ್ಗೆ ಅಸಮಾಧಾನ ಹೊಂದಿದ್ದ ಮಹಾರಾಜರು ತಮ್ಮ ಹೆಚ್ಚಿನ ಸಮಯವನ್ನು ಬ್ರಾಹ್ಮಣೇತರ ಚಳವಳಿಗೆ ಮೀಸಲಿಟ್ಟರು. ಬ್ರಾಹ್ಮಣೇತರ ಸಮುದಾಯಗಳ ಅರ್ಹ ಸದಸ್ಯರಿಗೆ ರಾಜ್ಯದಲ್ಲಿ ಕನಿಷ್ಠ ಅರ್ಧದಷ್ಟು ಹುದ್ದೆಗಳನ್ನು ಮೀಸಲಿಡುವುದಾಗಿ ಅವರು 1902ರಲ್ಲಿ ಘೋಷಿಸಿದರು. ಆದ್ದರಿಂದ ಕೊಲ್ಹಾಪುರ ಹಿಂದುಳಿದ ವರ್ಗಗಳ ಸಮಾನತೆಯ ಚಳವಳಿಯಲ್ಲಿ ಹೆಗ್ಗರುತಾಗಿದೆ.

ರಾಷ್ಟ್ರಮಟ್ಟದಲ್ಲಿ:

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿರಂತರ ಶ್ರಮದಿಂದ ಶೋಷಿತ ವರ್ಗದವರು ಮೊದಲಿಗೆ ಶೇ.8.33ರಷ್ಟು ಮೀಸಲಾತಿ ಕೋಟಾವನ್ನು ಕೇಂದ್ರದ ಹುದ್ದೆಗಳಿಗೆ ಆಗಸ್ಟ್ 1943ರಲ್ಲಿ ಪಡೆದರು. ಅದನ್ನು ಜೂನ್ 1946ರಲ್ಲಿ ಶೇ.12.5ಕ್ಕೆ ಏರಿಸಲಾಯಿತು. ಸ್ವಾತಂತ್ರ್ಯಗಳಿಸಿದ ನಂತರ ಮತ್ತೆ ಅದನ್ನು ಶೇ.16.66ಕ್ಕೆ ಏರಿಸಲಾಯಿತು. ಸ್ವಾತಂತ್ರ್ಯ ಬಂದು 43 ವರ್ಷಗಳ ನಂತರ ಅಂದರೆ 1993ರಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿಯನ್ನು ನೀಡಲಾಯಿತು. ಬ್ರಿಟಿಷರ ಆಡಳಿತದಲ್ಲಿ ಇತರ ಹಿಂದುಳಿದ ವರ್ಗಗಳ ಸಂಬಂಧ ಯಾವ ರಾಜ್ಯಗಳಲ್ಲಿ ಚಳವಳಿ ಪರಿಣಾಮಕಾರಿಯಾಗಿತ್ತೋ ಅಂತಹ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ, ಪರಿಶಿಷ್ಟ ವರ್ಗಗಳ ಜೊತೆಯಲ್ಲಿ ಇತರ ಹಿಂದುಳಿದ ವರ್ಗಗಳು 1950ಕ್ಕೂ ಮುನ್ನ ಆದ್ಯತಾ ಉಪಚಾರ ತತ್ವದ ಅಡಿಯಲ್ಲಿ ಮೀಸಲಾತಿ ಪಡೆದುಕೊಂಡಿದ್ದವು. ಆದರೆ 1970ರವರೆಗೂ, ಬಿಹಾರ, ಉತ್ತರ ಪ್ರದೇಶ, ಗುಜರಾತ್, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಇತರ ಹಿಂದುಳಿದ ವರ್ಗಗಳು ಮೀಸಲಾತಿಯನ್ನು ಪಡೆಯಲಾಗಿರಲಿಲ್ಲ. ಪ್ರಸಕ್ತ, ಅಖಿಲ ಭಾರತ ಸೇವೆಗಳ ಜೊತೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇತರ ಹಿಂದುಳಿದ ವರ್ಗಗಳು ಮೀಸಲಾತಿ ಕೋಟಾ ಪ್ರಯೋಜನ ಪಡೆಯುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎನ್. ಲಿಂಗಪ್ಪ

ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

Similar News