ಮೈಸೂರು: ಸಿಎಫ್ ಟಿ ಆರ್ ಐ ನಲ್ಲಿ 9 ನೇ ಆಹಾರ ಸಮ್ಮೇಳನ
ಮೈಸೂರು, ಡಿ.9: ಭಾರತೀಯ ಆಹಾರ ಸಂಶೋಧನಾ ಕೇಂದ್ರ (ಸಿಎಫ್‌ಟಿಆರ್‌ಐ) ವತಿಯಿಂದ ಆಯೋಜಿಸಿರುವ 9ನೇ ಅಂತರ್‌ರಾಷ್ಟ್ರೀಯ ಆಹಾರ ಮೇಳ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾಹಿತಿ ಕೇಂದ್ರವಾದರೆ ಉದ್ಯಮಿಗಳು ಮತ್ತು ನಿರುದ್ಯೋಗಿಗಳಿಗೆ ಬದುಕು ಕಂಡುಕೊಳ್ಳುಕೊಳ್ಳುವ ಆಶಾಕಿರಣವಾಗಿದೆ.
ನಗರದ ಸಿಎಫ್‌ಟಿಆರ್‌ಐ ಆವರಣದಲ್ಲಿ 2 ದಿನ ಆಯೋಜಿಸಿರುವ 9ನೇ ಅಂತರ್‌ರಾಷ್ಟ್ರೀಯ ಆಹಾರ ಮೇಳದ ವಸ್ತು ಪ್ರದರ್ಶನ ಉಪಯುಕ್ತ ಕೇಂದ್ರವಾಗಿದೆ. ಸಿಎಫ್‌ಟಿಆರ್‌ಐ ಅವರ ನೂತನ ತಂತ್ರಜ್ಞಾನ ಅಳವಡಿಸಿ ಸಿದ್ಧಪಡಿಸಲಾದ ರೆಡಿ ಟೂ ಈಟ್ ಆಹಾರಗಳ ಪ್ರದರ್ಶನ ಮಾರಾಟ ಮತ್ತು ಹೊಸ ತಂತ್ರಜ್ಞಾನಗಳ ಅನಾವರಣ ಎಲ್ಲರ ಗಮನ ಸೆಳೆಯುತ್ತಿದೆ.
ಸಣ್ಣ ಉದ್ಯಮದಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಗಳ ಆಹಾರ ಉತ್ಪಾದನೆಗೆ ಬೇಕಾದ ಹೊಸ ಹೊಸ ಬಗೆಯ ತಂತ್ರಜ್ಞಾನಗಳು ಮತ್ತು ಮಾಹಿತಿಗಳು ಸಂಪೂರ್ಣ ಲಭ್ಯವಿದೆ. ಈಗಾಗಲೇ ಸಿಎಫ್‌ಟಿಆರ್‌ಐ ಮೂಲಕ ತರಬೇತಿ ಪಡೆದು ತಂತ್ರಜ್ಞಾನ ಅಳವಡಿಸಿಕೊಂಡಿರುವ ಉದ್ಯಮಿಗಳು ತಮ್ಮ ಆಹಾರ ಪದಾರ್ಥಗಳ ಪ್ರದರ್ಶನವನ್ನು ಮಾಡುತ್ತಿದ್ದಾರೆ.
ಸಿರಿಧಾನ್ಯಗಳ ಕೇಂದ್ರಗಳು, ಸಿರಿಧಾನ್ಯಗಳಿಂದ ತಯಾರಿಸಬಹುದಾದ ಹಿಟ್ಟು, ಕೇಕ್, ಚಟ್ನಿ ಪೌಡರ್, ಸಾಂಬಾರ್ ಪದಾರ್ಥಗಳು ಲಭ್ಯವಿದೆ. ಆಹಾರಗಳ ದೀರ್ಘ ಕಾಲದ ಶೇಖರಣೆ, ಅದರ ಮಾರಾಟ ಮತ್ತು ಯಾವ ರೀತಿಯಲ್ಲಿ ಅವುಗಳ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂಬೆಲ್ಲ ಮಾಹಿತಿಗಳು ಮತ್ತು ಪದಾರ್ಥಗಳು ಒಂದೇ ಸೂರಿನಲ್ಲಿ ಲಭ್ಯವಾಗುತ್ತಿವೆ.
ಇದರ ಜೊತೆಗೆ ಸಂಶೋಧನೆಗೆ ಬಳಸಬಹುದಾದ ಲ್ಯಾಬ್‌ಗೆ ಸಂಬಂಧಪಟ್ಟ ವಸ್ತುಗಳ ಪ್ರದರ್ಶನವೂ ಇದೆ. ಒಂದೇ ಬಾರಿಗೆ ಹೆಚ್ಚು ಹೆಚ್ಚು ಜನರಿಗೆ ತಯಾರಿಸಲು ಬೇಕಾದ ಇಲೆಕ್ಟ್ರಿಕ್ ಸ್ಟೌವ್, ಸಂಶೋಧನೆಗೆ ಒಳಪಡುವ ಇಲೆಕ್ಟ್ರಿಕ್ ಮೆಷಿನ್‌ಗಳು, ಆಹಾರಗಳ ಗುಣಮಟ್ಟ ಪರೀಕ್ಷಿಸುವ ಉಪಕರಣಗಳು ಸೇರಿದಂತೆ ಎಲ್ಲ ರೀತಿಯ ಲ್ಯಾಬ್‌ಗೆ ಸಂಬಂಧಿಸಿದ ವಸ್ತುಗಳು ಪ್ರದರ್ಶನಗೊಂಡಿವೆ.
ರೈತರಿಂದ ನೇರವಾಗಿ ಬೆಳೆಯಲಾದ ಸಿರಿಧಾನ್ಯಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಮಾಡ ಲಾಗುತ್ತಿದೆ. ಮಾರುಕಟ್ಟೆಗಿಂತಲೂ ಕಡಿಮೆ ಬೆಲೆಯಲ್ಲಿ ನವಣೆ, ಸಾಮೆ, ಊದಲು, ರಾಗಿ, ಜೋಳ ಸೇರಿದಂತೆ ಹಲವು ವಸ್ತುಗಳನ್ನು ಗ್ರಾಹಕರು ಖರೀದಿಸಿದರು.
ಸಿಎಫ್‌ಟಿಆರ್‌ಐ ಟೆಕ್ನಾಲಜಿ ಮೂಲಕ ಕುಡಿದ ಮತ್ತನ್ನು ತಗ್ಗಿಸುವ ಜ್ಯೂಸ್‌ಗಳು, ತೆಂಗಿನ ಕಾಯಿ ಮೂಲಕ ಕೊಬ್ಬರಿ ಎಣ್ಣೆ ತಯಾರು ಮಾಡುವ ಯಂತ್ರಗಳು, ಇದರ ಉಪ ಉತ್ಪನ್ನಗಳಿಂದ ತೆಂಗಿನ ಹಾಲಿನ ಜ್ಯೂಸ್, ಐಸ್‌ಕ್ರೀಮ್ ಸೇರಿದಂತೆ ಹಲವು ಬಗೆಯ ಉತ್ಪನ್ನಗಳ ಲಾಭದಾಯಕವನ್ನು ಪ್ರದರ್ಶಿಸಲಾಗಿದೆ.
ಯಾವುದೇ ಪ್ರಗತಿಶೀಲ ರೈತ ಅಥವಾ ಉದ್ಯಮಿಗಳು ತಮ್ಮಲ್ಲಿ ಮೂಡಬಹುದಾದ ಹೊಸ ಆಹಾರ ಪಧಾರ್ಥಗಳ ತಯಾರಿಕೆಗೆ ಬೇಕಾದ ಎಲ್ಲ ಸಹಕಾರವನ್ನು ಸಿಎಫ್‌ಟಿಆರ್‌ಐ ನೀಡಲಿದ್ದು, ಯಾರೇ ಹೊಸ ಉತ್ಪಾದನೆಯಲ್ಲಿ ತೊಡಗುತ್ತೇವೆ ಎಂದರೆ ಸ್ವತಃ ಸಿಎಫ್‌ಟಿಆರ್‌ಐ ಅದಕ್ಕೆ ಬೇಕಾಗುವ ಎಲ್ಲ ರಾಮೆಟೀರಿಯಲ್ ತಂತ್ರಜ್ಞಾನ ಜೊತೆಗೆ ಒಬ್ಬ ವಿಜ್ಞಾನಿಯನ್ನು ಇವರ ಸಹಾಯಕ್ಕೆ ನೀಡಿ ಅವರು ಉತ್ಪಾದಿಸುವ ಆಹಾರಗಳ ಬಗ್ಗೆ ಉಚಿತ ತರಬೇತಿ ನೀಡಿ, ಆಹಾರ ಎಷ್ಟು ಗುಣಮಟ್ಟ ಮತ್ತು ಸುದೀರ್ಘತೆಯನ್ನು ಕಾಪಾಡಿಕೊಳ್ಳಲಿದೆ ಎಂಬುದನ್ನು ಪರೀಕ್ಷಿಸಿ ನಂತರ ಅವರ ಆಹಾರಕ್ಕೆ ಪ್ರಮಾಣ ಪತ್ರವನ್ನು ನೀಡುವ ಅವಕಾಶವನ್ನು ಕಲ್ಪಿಸುವ ವ್ಯವಸ್ಥೆ ಸಹ ಮಾಡಲಾಗಿದೆ.
ಆಹಾರ ಉತ್ಪಾದನೆ ತಯಾರಿಕೆ ಬಗ್ಗೆ ಬೇರೆ ಬೇರೆ ದೇಶಗಳಿಗೆ ಉದ್ಯಮಿಗಳು ಹೋಗಿ ತರಬೇತಿ ಪಡೆದು ಬರುತ್ತಾರೆ. ಆದರೆ ಬೇರೆ ಬೇರೆ ದೇಶದ ಹಲವಾರು ವಿದ್ಯಾರ್ಥಿಗಳು ಉದ್ಯಮಿಗಳು ನಮ್ಮ ದೇಶಕ್ಕೆ ಅದರಲ್ಲೂ ಸಿಎಫ್‌ಟಿಆರ್‌ಐಗೆ ಬಂದು ತರಬೇತಿಯನ್ನು ಪಡೆಯುತ್ತಾರೆ. ಜೊತೆಗೆ ಆಹಾರ ಸಂರಕ್ಷಣೆ ಬಗ್ಗೆಯೂ ಉಪಯುಕ್ತ ಮಾಹಿತಿಯನ್ನು ಪಡೆಯುತ್ತಿದ್ದಾರೆ ಎಂದು ವಿಜ್ಞಾನಿ ಎನ್.ಭಾಸ್ಕರ್ ತಿಳಿಸಿದರು.
ಸಿಎಫ್‌ಟಿಆರ್‌ಐ ವತಿಯಿಂದ ಈಗಾಗಲೇ 5 ಸಾವಿರ ಟೆಕ್ನಾಲಜಿಯನ್ನು ಹೊರ ತಂದಿದ್ದು, ಈಗಾಗಲೇ 400ಕ್ಕೂ ಹೆಚ್ಚು ಕೈಗಾರಿಕೆಗಳು ಈ ಟೆಕ್ನಾಲಜಿಯನ್ನು ಬಳಸಿಕೊಂಡು ತಮ್ಮ ತಮ್ಮ ಆಹಾರ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ಹೊಸ ಉದ್ಯಮ ಬಯಸಿ ಬರುವ ಯಾರಿಗೇ ಆದರೂ ಸಿಎಫ್‌ಟಿಆರ್‌ಐ ಸದಾ ಬೆಂಬಲಕ್ಕೆ ನಿಲ್ಲುತ್ತದೆ.
-ಸತ್ಯೇಂದ್ರ ರಾವ್, ಮುಖ್ಯ ವಿಜ್ಞಾನಿ, ಸಿಎಸ್‌ಐಆರ್ ಮುಖ್ಯಸ್ಥ