ಸಾಕ್ಷಿಗಳನ್ನು ಕಾಶ್ಮೀರ ಪ್ರವಾಸಕ್ಕೆ ಕರೆದೊಯ್ದ ಕೊಲೆ ಆರೋಪಿ ನಮೋ ಬ್ರಿಗೇಡ್ ನರೇಶ್ ಶೆಣೈ !

Update: 2024-07-23 05:42 GMT

ನರೇಶ್ ಶೆಣೈ / ವಿನಾಯಕ ಬಾಳಿಗಾ/  ಎಸ್ ಬಾಲನ್

►ಬಾಳಿಗಾ ಕೊಲೆ ಪ್ರಕರಣ ವಿಚಾರಣೆಯನ್ನು ಬೆಂಗಳೂರಿಗೆ ವರ್ಗಾಯಿಸುವಂತೆ ಹೈಕೋರ್ಟ್ ಗೆ ಅರ್ಜಿ

ನಮೋ ಬ್ರಿಗೇಡ್ ಸ್ಥಾಪಕ, ಚಕ್ರವರ್ತಿ ಸೂಲಿಬೆಲೆ ಭಾಷಣದ ಹಿಂದಿನ ಬೆನ್ನೆಲುಬು ನರೇಶ್ ಶೆಣೈ ಆರೋಪಿಯಾಗಿರುವ ಕೊಲೆ ಪ್ರಕರಣವನ್ನು ಮಂಗಳೂರಿನಿಂದ ಬೆಂಗಳೂರಿಗೆ ವರ್ಗಾಯಿಸಬೇಕು ಎಂದು ಕೋರಿ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಿತು. ಕೊಲೆಯಾದ ಬಿಜೆಪಿ/ಸಾಮಾಜಿಕ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಸಹೋದರಿ ಅನುರಾಧ ಬಾಳಿಗ ಪರ ಹಿರಿಯ ವಕೀಲ ಎಸ್ ಬಾಲನ್ ವಾದಿಸಿದರು. ಕೊಲೆ ಆರೋಪಿ ನರೇಶ್ ಶೆಣೈ ಪರ ಹಿರಿಯ ವಕೀಲ ಅರುಣ್ ಶ್ಯಾಂ ವಾದಿಸಿದರು.

"ನಮೋ ಬ್ರಿಗೇಡ್ ಅಧ್ಯಕ್ಷನಾಗಿರುವ ಮಂಗಲ್ಪಾಡಿ ನರೇಶ್ ಶೆಣೈ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾರನ್ನು ಹಾಡುಹಗಲೇ ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದ. ಬಹಳ ವ್ಯವಸ್ಥಿತವಾಗಿ ನಡೆದ ಈ ಕೊಲೆಯಿಂದ ಇಡೀ ಕರಾವಳಿ ಬೆಚ್ಚಿ ಬಿದ್ದಿತ್ತು. ಕರಾವಳಿಯ ಪ್ರಜ್ಞಾವಂತರು ಈ ಕೊಲೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ವಿನಾಯಕ ಬಾಳಿಗ ಸಾಮಾಜಿಕ ಕಾರ್ಯಕರ್ತರಾಗಿದ್ದು ಭ್ರಷ್ಟಾಚಾರವನ್ನು ಬಯಲಿಗೆಳೆದರು ಎಂಬ ಒಂದೇ ಕಾರಣಕ್ಕಾಗಿ ಕೊಲೆ ನಡೆಸಲಾಯಿತು. ಇಡೀ ಕುಟುಂಬದ ಆಧಾರ ಸ್ಥಂಭವಾಗಿದ್ದ ಬಾಳಿಗಾರ ಕೊಲೆಯಿಂದ ಅವರ ಕುಟುಂಬ ಅತಂತ್ರವಾಗಿದೆ. ಸಮಾಜದಲ್ಲಿ ಭೀತಿ ಆವರಿಸಿದೆ" ಎಂದು ಎಸ್ ಬಾಲನ್ ಹೈಕೋರ್ಟ್ ನಲ್ಲಿ ವಾದ ಪ್ರಾರಂಭಿಸಿದರು.

"ನಮೋ ಬ್ರಿಗೇಡ್ ಸಂಸ್ಥಾಪಕ ನರೇಶ್ ಶೆಣೈ ನಡೆಸಿದ ಕೊಲೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಮಂಗಳೂರಿನ ನ್ಯಾಯಾಲಯದಲ್ಲಿ ಸಾಕ್ಷ್ಯ ವಿಚಾರಣೆ ನಡೆಯುತ್ತಿದೆ. ಸಾಕ್ಷಿಗಳ ಮೇಲೆ ನರೇಶ್ ಶೆಣೈ ಪ್ರಭಾವ ಬೀರುತ್ತಿದ್ದಾನೆ. ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ನರೇಶ್ ಶೆಣೈ ಪಟಾಲಂ ಕರೆದುಕೊಂಡು ಬರುತ್ತಿದೆ. ಸಾಕ್ಷ್ಯ ನುಡಿಯಲು ಕಟಕಟೆಗೆ ಬರುವ ಮೊದಲು ಸಾಕ್ಷಿಗಳಿಗೆ 'ಹೇಗೆ ಉತ್ತರ ಕೊಡಬೇಕು' ಎನ್ನುವುದನ್ನು ಖುದ್ದು ನರೇಶ್ ಶೆಣೈ ಪಾಠ ಮಾಡುತ್ತಾನೆ. ನರೇಶ್ ಶೆಣೈ ಸೂಚಿಸಿದಂತೆ ಸಾಕ್ಷಿಗಳು ಸಾಕ್ಷ್ಯ ನುಡಿಯುತ್ತಾರೆ. ಹಾಗಾಗಿ ಸಾಕ್ಷಿಗಳು ಪ್ರತಿಕೂಲ ಸಾಕ್ಷಿಯಾಗಿ (hostile witness) ಆಗಿ ಪರಿವರ್ತನೆ ಆಗಿದೆ. ಹಾಗೆ ಪ್ರತಿಕೂಲ ಸಾಕ್ಷಿಯಾದ ಸಾಕ್ಷ್ಯಗಳನ್ನು ಮತ್ತೆ ಪಾಟಿ ಸವಾಲಿಗೆ ಗುರಿಪಡಿಸಬೇಕಾಯಿತು" ಎಂದು ಎಸ್ ಬಾಲನ್ ವಿವರಿಸಿದರು.

"ನರೇಶ್ ಶೆಣೈ ಮತ್ತು ಪಟಾಲಂ ಸಾಕ್ಷ್ಯಗಳ ಜೊತೆ ಮಾತನಾಡುವ, ಅವರಿಗೆ ನಿರ್ದೇಶನ ನೀಡುವ ಎಲ್ಲಾ ದೃಶ್ಯಗಳು ಮಂಗಳೂರು ನ್ಯಾಯಾಲಯದ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಬಗ್ಗೆ ನಾನು ಮಂಗಳೂರು ನ್ಯಾಯಾಲಯಕ್ಕೆ ಪ್ರತ್ಯೇಕ ಅರ್ಜಿ ಹಾಕಿ ನ್ಯಾಯಾಧೀಶರ ಗಮನಕ್ಕೆ ತಂದಿದ್ದೇನೆ. ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ನರೇಶ್ ಶೆಣೈ ಪಟಾಲಂ ನ್ಯಾಯಾಲಯದ ಆವರಣದಲ್ಲೇ ಮಾತುಕತೆ ನಡೆಸುವುದು, ಪೊಲೀಸ್ ಇನ್ಸ್ ಪೆಕ್ಟರ್, ಆರೋಪಿಗಳು ಮತ್ತು ಸಾಕ್ಷಿಗಳು ಜೊತೆಯಾಗಿ ಮಾತನಾಡಿ ಪೂರ್ವಯೋಜಿತವಾಗಿ ಕೋರ್ಟ್ ಪ್ರವೇಶಿಸುವುದು ನ್ಯಾಯಾಲಯದ ಸಿಸಿಟಿವಿಯಲ್ಲಿ ದಾಖಲಾಗಿದೆ. ಹೀಗಾದರೆ ನ್ಯಾಯಯುತ ವಿಚಾರಣೆ (fair trial) ನಡೆಯುವುದಾದರೂ ಹೇಗೆ ?" ಎಂದು ಬಾಲನ್ ಪ್ರಶ್ನಿಸಿದರು.

"ಎಲ್ಲಕ್ಕಿಂತ ಮುಖ್ಯವಾಗಿ ಕೊಲೆ ಪ್ರಕರಣದ ಸಾಕ್ಷಿಗಳನ್ನು ನರೇಶ್ ಶೆಣೈ ಕಾಶ್ಮೀರ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾನೆ. ಕೆಲ ಸಾಕ್ಷಿಗಳ ಸಾಕ್ಷ್ಯಗಳನ್ನು ಈಗಾಗಲೇ ನ್ಯಾಯಾಲಯ ದಾಖಲಿಸಿಕೊಂಡಿದೆ. ಇನ್ನೂ ಕೆಲ ಸಾಕ್ಷಿಗಳ ಸಾಕ್ಷ್ಯ ದಾಖಲಾಗಬೇಕಿದೆ. ಹಾಗಿರುವಾಗ ಕೊಲೆ ಆರೋಪಿಯೇ ಸಾಕ್ಷಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ಆರೋಪಿ ಜೊತೆ ಅನೋನ್ಯವಾಗಿರುವ ಸಾಕ್ಷಿಗಳು ನಿಜವಾದ ಸಾಕ್ಷ್ಯ ನುಡಿಯಲು ಸಾಧ್ಯವೇ ? ಹಣ ಮತ್ತು ಅಧಿಕಾರದ ಬಲದಿಂದ ಈ ರೀತಿ ಸಾಕ್ಷಿಗಳನ್ನು ಕೈವಶ ಮಾಡಿಕೊಂಡು ವಿನಾಯಕ ಬಾಳಿಗ ಕೊಲೆ ಪ್ರಕರಣದ ವಿಚಾರಣೆಯ ದಿಕ್ಕು ತಪ್ಪಿಸಲಾಗುತ್ತಿದೆ" ಎಂದು ದಾಖಲೆಗಳ ಸಮೇತ ಎಸ್ ಬಾಲನ್ ಬಯಲು ಮಾಡಿದರು.

"ಕೊಲೆ ಆರೋಪಿ ನರೇಶ್ ಶೆಣೈ ಹಲವು ಬಾರಿ ದೂರುದಾರರಿಗೆ ಬೆದರಿಕೆ ಒಡ್ಡಿದ್ದಾನೆ. ಬಾಳಿಗಾ ಕೊಲೆ ಪ್ರಕರಣದ ಸಂಬಂಧ ನಡೆಯುತ್ತಿರುವ ಕಾನೂನು ಹೋರಾಟವನ್ನು ನಿಲ್ಲಿಸದೇ ಇದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ. ಸುಫಾರಿ ಕೊಟ್ಟು ಕೊಲ್ಲುವ ಮನಸ್ಥಿತಿ ಇರುವ ಆರೋಪಿ ನರೇಶ್ ಶೆಣೈ ಯಾವುದಕ್ಕೂ ಹೇಸುವ ವ್ಯಕ್ತಿಯಲ್ಲ. ಹಾಗಾಗಿ ದೂರುದಾರರಿಗೇ ಕೊಲೆ ಬೆದರಿಕೆ ಒಡ್ಡಿರುವ ಬಗ್ಗೆ ಎರಡು ಬಾರಿ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಎರಡು ಬಾರಿಯೂ ದೂರು ದಾಖಲಿಸಿ ಎನ್ ಸಿಆರ್ ಮಾಡಿದ್ದಾರೆಯೇ ಹೊರತು ಎಫ್ಐಆರ್ ‌ಮಾಡಿಲ್ಲ‌‌‌. ಒಂದು ಕಡೆ ಪೊಲೀಸ್ ಇನ್ಸ್ ಪೆಕ್ಟರ್, ಆರೋಪಿಗಳು, ಸಾಕ್ಷಿಗಳು ಒಟ್ಟಾಗಿದ್ದರೆ ಇನ್ನೊಂದೆಡೆ ದೂರುದಾರರಿಗೆ ಬೆದರಿಕೆಗಳು ಬರುತ್ತಿದೆ. ಹಾಗಾಗಿ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಿ ನ್ಯಾಯಯುತ ವಿಚಾರಣೆ ಅವಕಾಶ ಕಲ್ಪಿಸಬೇಕು" ಎಂದು ಎಸ್ ಬಾಲನ್ ಹೈಕೋರ್ಟ್ ಅನ್ನು ಕೇಳಿಕೊಂಡಿದ್ದಾರೆ.

ನರೇಶ್ ಶೆಣೈ ಪರ ಹೈಕೋರ್ಟ್ ಹಿರಿಯ ವಕೀಲ ಅರುಣ್ ಶ್ಯಾಂ ವಾದ ಮಂಡಿಸಿದರು. "ಆರೋಪಿಗಳು ಬೆದರಿಕೆ ಒಡ್ಡಿದ್ದರೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಬೇಕಿತ್ತು. ಆರೋಪಿಗೆ ಜಾಮೀನು ನೀಡಲಾಗಿದ್ದು, ಆ ಜಾಮೀನನ್ನು ರದ್ದುಗೊಳಿಸಲು ಹಲವು ಬಾರಿ ಅರ್ಜಿ ಸಲ್ಲಿಸಲಾಗಿತ್ತು. ಆ ಅರ್ಜಿಗಳನ್ನು ಎಲ್ಲಾ ನ್ಯಾಯಾಲಯಗಳು ತಿರಸ್ಕರಿಸಿವೆ. ಕೊಲೆ ಪ್ರಕರಣದಲ್ಲಿ ನರೇಶ್ ಶೆಣೈ ಒಬ್ಬನೇ ಆರೋಪಿಯಲ್ಲ.‌ ಹಲವು ಆರೋಪಿಗಳು ಇದ್ದಾರೆ. ಅದರೆ ಹೈಕೋರ್ಟ್ ಗೆ ಸಲ್ಲಿಸಿರುವ ವರ್ಗಾವಣೆ ಅರ್ಜಿಯಲ್ಲಿ ನರೇಶ್ ಶೆಣೈ ಒಬ್ಬರನ್ನೇ ಪ್ರತಿವಾದಿಯನ್ನಾಗಿಸಲಾಗಿದೆ. ಉಳಿದ ಆರೋಪಿಗಳನ್ನು ಪ್ರತಿವಾದಿಯನ್ನಾಗಿಸಿಲ್ಲ" ಎಂದು ವಾದಿಸಿದರು.

"ಉಳಿದ ಆರೋಪಿಗಳನ್ನು ನರೇಶ್ ಶೆಣೈ ಜೊತೆ ಯಾಕೆ ಪ್ರತಿವಾದಿಯನ್ನಾಗಿಸಲಿಲ್ಲ. ನಾವು ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಿದರೆ ನರೇಶ್ ಶೆಣೈ ಮಾತ್ರವಲ್ಲ, ಉಳಿದ ಆರೋಪಿಗಳಿಗೂ ಪರಿಣಾಮ ಬೀರುತ್ತೆ. ಹಾಗಾಗಿ ಅವರ ವಾದವನ್ನೂ ಕೇಳಲು ಅವರನ್ನೂ ಪ್ರತಿವಾದಿಯನ್ನಾಗಿಸಬೇಕಿತ್ತು ತಾನೆ ?" ಎಂದು ಹೈಕೋರ್ಟ್ ಪೀಠ ಹಿರಿಯ ವಕೀಲ ಎಸ್ ಬಾಲನ್ ಅವರನ್ನು ಪ್ರಶ್ನಿಸಿತು.

"ಕೊಲೆ ಪ್ರಕರಣದಲ್ಲಿ ಹಲವು ಆರೋಪಿಗಳಿದ್ದಾರೆ ನಿಜ. ಆದರೆ ಅವರೆಲ್ಲರೂ ನರೇಶ್ ಶೆಣೈ ಸಹಚರರು. ಅವರನ್ನೂ ಕೂಡಾ ಈ ಅರ್ಜಿ ವಿಚಾರಣೆಯಲ್ಲಿ ಪ್ರತಿವಾದಿ ಮಾಡುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಉಳಿದ ಅರೋಪಿಗಳನ್ನು ಪ್ರತಿವಾದಿಯನ್ನಾಗಿ ನ್ಯಾಯಾಲಯವೇ ಸೇರಿಸಬಹುದು ಅಥವಾ ಆರೋಪಿಗಳೇ implied ಆಗಬಹುದು. ಏನೇ ಆದರೂ ನ್ಯಾಯಯುತ ವಿಚಾರಣೆ ನಡೆದು ಇಡೀ ಕರಾವಳಿ ಮತ್ತು ಬಾಳಿಗ ಕುಟುಂಬಕ್ಕೆ ನ್ಯಾಯ ಸಿಗಬೇಕಾದರೆ ವಿಚಾರಣೆ ಬೆಂಗಳೂರಿಗೆ ವರ್ಗಾವಣೆಯಾಗಬೇಕು. ಬೆಂಗಳೂರಿನ ಯಾವ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದರೂ ನಮ್ಮ ಅಭ್ಯಂತರವಿಲ್ಲ" ಎಂದು ಎಸ್ ಬಾಲನ್ ವಾದ ಮಂಡಿಸಿದರು. ವಾದ ವಿವಾದ ಆಲಿಸಿದ ಹೈಕೋರ್ಟ್ ಪೀಠ ವಿಚಾರಣೆಯನ್ನು ಮುಂದೂಡಿದೆ.

(ದಿನಾಂಕ 22.07.2024 ರಂದು ಹೈಕೋರ್ಟ್ ಕಲಾಪದಲ್ಲಿ ನಡೆದ ವಾದ ವಿವಾದವನ್ನು ಪ್ರತ್ಯಕ್ಷದರ್ಶಿಯಾಗಿ ವರದಿ ಮಾಡಲಾಗಿದೆ. ಕಲಾಪದ ಆಯ್ದ ಭಾಗವನ್ನಷ್ಟೇ ಸರಳೀಕರಿಸಿ ಲೇಖನಕ್ಕೆ ಬಳಸಲಾಗಿದೆ - ನವೀನ್ ಸೂರಿಂಜೆ)

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ನವೀನ್ ಸೂರಿಂಜೆ

contributor

Similar News