ತ್ಯಾಜ್ಯ ನೀರಿನಿಂದ ತರಕಾರಿ ಬೆಳೆ!

Update: 2023-11-18 04:19 GMT

Photo: freepik

ಮಾನ್ಯರೆ,

ಬೆಂಗಳೂರು ನಗರದ, ಗ್ರಾಮಾಂತರ ಭಾಗಗಗಳಲ್ಲಿ ಬಹುತೇಕ ರೈತರು ತರಕಾರಿಗಳನ್ನು ತ್ಯಾಜ್ಯ ನೀರಿನಿಂದ ಬೆಳೆಯುತ್ತಿರುವ ಅಂಶ ಬೆಳಕಿಗೆ ಬಂದಿದೆ. ಕೈಗಾರಿಕೆ, ಗೃಹೋಪಯೋಗಿ ತ್ಯಾಜ್ಯ ನೀರಿನಿಂದ ಬೆಳೆಯುವ ತರಕಾರಿಗಳಲ್ಲಿ ವಿಷಕಾರಿ ರಾಸಾಯನಿಕ ಅಂಶಗಳು ಇರುವುದು ಸಂಶೋಧನಾ ವರದಿಗಳಲ್ಲಿ ಸಾಬೀತಾಗಿದೆ. ತ್ಯಾಜ್ಯ ನೀರಿನಿಂದ ಬೆಳೆಯುತ್ತಿರುವ ತರಕಾರಿಗಳಲ್ಲಿ ಭಾರೀ ಪ್ರಮಾಣದ ಲೋಹದ ಅಂಶ ಪತ್ತೆಯಾಗಿದೆ. ಇಂತಹ ಲೋಹಯುಕ್ತ ತರಕಾರಿಗಳನ್ನು ಸೇವನೆ ಮಾಡುವುದರಿಂದ ಮನುಷ್ಯ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆೆ. ಬದನೆ, ಟೊಮೆಟೊ, ಮೆಣಸಿನಕಾಯಿ ಸೇರಿದಂತೆ ೧೦ ತರಹದ ತರಕಾರಿಗಳಲ್ಲಿ ಭಾರೀ ಪ್ರಮಾಣದ ಲೋಹ ಇರುವುದು ಗೊತ್ತಾಗಿದೆ. ಕ್ಯಾಡ್ಮಿಯಂ ಅಪಾಯಕಾರಿ ಅಂಶವಾಗಿದ್ದು, ಇದು ಶ್ವಾಸಕೋಶದಲ್ಲಿ ವಿಷತ್ವವನ್ನು ಉಂಟುಮಾಡುತ್ತದೆ. ಅಲ್ಲದೆ, ಇವುಗಳು ಜನರ ಮೇಲೆ ಇನ್ನಿತರ ಕೆಟ್ಟ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಗಳೇ ಹೆಚ್ಚು.

ತ್ಯಾಜ್ಯ ನೀರಿನಿಂದ ಬೆಳೆಯುತ್ತಿರುವ ತರಕಾರಿ ಬೆಳೆಗಳು ಮಾರುಕಟ್ಟೆ ತಲುಪುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಈ ಹಿಂದೆಯೂ ಇಂತಹದ್ದೇ ಸುದ್ದಿ ಬೆಂಗಳೂರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚು ಸದ್ದು ಮಾಡಿತ್ತು. ಆದರೆ ಸರಕಾರವಾಗಲೀ, ಸ್ಥಳೀಯ ಬಿಬಿಎಂಪಿ ಆಗಲೀ ಯಾವುದೇ ಸೂಕ್ರ ಕ್ರಮ ತೆಗೆದುಕೊಳ್ಳದೇ ಇರುವುದು ವಿಷಾದನೀಯ. ಬೆಂಗಳೂರು ಸಿಲಿಕಾನ್ ಸಿಟಿ ಎಂಬ ಹಣೆಪಟ್ಟಿಯ ಜೊತೆಗೆ ಗಾರ್ಬೇಜ್ ಸಿಟಿ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದೆ. ಈ ಆಘಾತಕಾರಿ ಸುದ್ದಿಗಳಿಂದಾಗಿ ಮತ್ತಷ್ಟು ಜನರ ಪ್ರಾಣದ ಜೊತೆಗೆ ಆಟವಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಮತ್ತಷ್ಟು ಕಠಿಣ ಕೈಗಾರಿಕಾ ನೀತಿಯನ್ನು ಕೈಗೊಳ್ಳುವ ಅಗತ್ಯವಿದೆ. ಕೈಗಾರಿಕಾ ತ್ಯಾಜ್ಯ ನೀರನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಕೂಡಲೇ ಕ್ರಮ ತೆಗೆದುಕೊಳ್ಳ ಬೇಕಿದೆ.

-ಅನುಶ್ರೀ ಅರ್.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News