ಅಪಾತ್ರ ಸಮಾಜ

Update: 2023-12-24 04:51 GMT

ತನ್ನತನದ ಗುರುತಿಸಿಕೊಳ್ಳುವಿಕೆ ಬಾಲ್ಯದಲ್ಲಿ ಮನೆಯವರು ಮತ್ತು ಸುತ್ತಮುತ್ತಲಿನವರು ವಿಧಿಸುವ ಪಾತ್ರದ ಮೇಲೆಯೇ ಅವಲಂಬಿತವಾಗಿದ್ದು, ವ್ಯಕ್ತಿಯು ಬೆಳೆಯುತ್ತಿದ್ದಂತೆ ತನಗೆ ಕುಟುಂಬ ಮತ್ತು ಸಮಾಜ ವಿಧಿಸುವ ಪಾತ್ರಗಳಿಂದೀಚೆಗೆ ತನ್ನ ಗುರುತನ್ನು ರೂಪಿಸಿಕೊಳ್ಳುವುದು ಒಂದು ಶಕ್ತಿಶಾಲಿಯಾದ ಮನಸ್ಸಿನ ಲಕ್ಷಣ.

ಕುಟುಂಬವಾಗಲಿ, ತನ್ನ ಆಪ್ತ ಬಳಗವಾಗಲಿ ಅಥವಾ ಸಮಾಜವಾಗಲಿ ಗುರುತಿಸುವ ಪಾತ್ರಗಳಿಂದ, ಲಕ್ಷಣಗಳಿಂದ ಆಚೆಗೆ ತನ್ನತನದ ಹುಡುಕಾಟ ಅಥವಾ ಕಂಡುಕೊಳ್ಳುವಿಕೆಯ ಪ್ರಕ್ರಿಯೆಯಿಂದ ರೂಪುಗೊಳ್ಳುವ ವ್ಯಕ್ತಿತ್ವ ಆಯಾ ವ್ಯಕ್ತಿಯದಾಗಿರುತ್ತದೆ. ವಯಸ್ಸಾದಂತೆ, ಅನುಭವಗಳಿಗೆ ಒಳಗಾದಂತೆ, ಅರಿವು ಮೂಡಿದಂತೆ, ತನ್ನ ಯಶಸ್ಸು ಮತ್ತು ವೈಫಲ್ಯಗಳನ್ನು ವಿಶ್ಲೇಷಿಸಿದಂತೆ ವ್ಯಕ್ತಿಗೆ ತನ್ನತನದ ನಿಜವಾದ ಸ್ವರೂಪವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಬಹಳಷ್ಟು ಮಂದಿಗೆ ಕುಟುಂಬ ಮತ್ತು ಸಮಾಜ ಸತತವಾಗಿ ಆರೋಪಿಸುವ ಗುಣಲಕ್ಷಣಗಳನ್ನೇ ತನ್ನದೆಂದುಕೊಳ್ಳುವ ಮತ್ತು ಅವರು ನಿರೀಕ್ಷಿಸುವ ವಿಷಯಗಳಿಗೆ ನ್ಯಾಯವೊದಗಿಸುವುದರಲ್ಲೇ ತಮ್ಮತನವಿದೆ ಎಂದು ಭಾವಿಸಿರುತ್ತಾರೆ. ಆದರೆ ಇದು ಭಾವನೆ ಅಥವಾ ಮನೋಭಾವವಷ್ಟೇ. ಅವರ ಮನೋಭಾವದಿಂದಾಚೆಗೆ ಇರುವ ವ್ಯಕ್ತಿತ್ವ ಅಥವಾ ತನ್ನತನವನ್ನು ಕಂಡುಕೊಳ್ಳುವುದರಲ್ಲಿ ಯಶಸ್ಸು ಕಾಣುವುದು ಕೆಲವೇ ಮಂದಿಯಷ್ಟೇ.

ಮನಶಾಸ್ತ್ರವೂ ಕೂಡಾ ಒಬ್ಬ ತನ್ನಬಗ್ಗೆ ಹೊಂದಿರುವ ನಂಬಿಕೆಗಳ ಮೊತ್ತ ಮತ್ತು ಆ ಕ್ರಮದಲ್ಲಿ ಇತರರಿಗೆ ಪ್ರತಿಕ್ರಿಯಿಸುವ ತನ್ನತನದ ಪರಿಕಲ್ಪನೆಯ ಹಂತಕ್ಕೇ ವ್ಯಕ್ತಿತ್ವದ ವ್ಯಾಖ್ಯಾನವನ್ನು ನಿಲ್ಲಿಸಿಬಿಡುತ್ತದೆ. ಅದರಿಂದಾಚೆಗೆ ವ್ಯಕ್ತಿಗೆ ತನ್ನ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಲು ನೆರವಿಗೆ ಬರುವುದು ತತ್ವಶಾಸ್ತ್ರ. ತತ್ವಶಾಸ್ತ್ರವೆಂದರೆ ಮನಶಾಸ್ತ್ರಕ್ಕೆ ತೀರಾ ವಿರೋಧಾಭಾಸವುಂಟು ಮಾಡುವ ಅಧ್ಯಯನದ ವಿಷಯವೇನಲ್ಲ. ಮನಶಾಸ್ತ್ರವು ಮನಸ್ಸಿನ ಸ್ವರೂಪ, ಗ್ರಹಿಕೆ, ಪ್ರೇರಣೆ ಮತ್ತು ಪ್ರತಿಕ್ರಿಯೆಗಳನ್ನು ನಿರ್ದಿಷ್ಟವಾದ ಮತ್ತು ದೊರಕಿರುವಂತಹ ವಿಷಯ ವಸ್ತುಗಳ ಆಧಾರದ ಚೌಕಟ್ಟಿನಲ್ಲಿ, ಹಿಂದಿನ ಗಮನಿಸುವಿಕೆ ಮತ್ತು ಪ್ರಯೋಗದ ಆಧಾರದಲ್ಲಿ ಅಧ್ಯಯನ ಮಾಡುವುದಾದರೆ, ತತ್ವಶಾಸ್ತ್ರವು ಮನಸ್ಸಿನ ಸ್ವರೂಪ, ಗ್ರಹಿಕೆ, ಸಾಮರ್ಥ್ಯ, ಪ್ರಚೋದನೆ ಮತ್ತು ಪ್ರತಿಕ್ರಿಯೆಗಳನ್ನು ಲಭ್ಯವಿರುವ ವಿಷಯಗಳಿಂದಾಚೆಗೂ ಆಲೋಚನೆಯ ಕ್ರಮಗಳನ್ನು ವಿಸ್ತರಿಸಿಕೊಳ್ಳುವ ಬಗೆಯಾಗಿದೆ. ಇದೊಂದು ರೀತಿಯಲ್ಲಿ ವಿಶ್ವದ ಅಧ್ಯಯನವಿದ್ದಂತೆ. ಇದುವರೆಗೂ ಈ ಜಗತ್ತಿನಲ್ಲಿ ವಿಜ್ಞಾನಿಗಳು ಏನೆಲ್ಲಾ ಸಂಶೋಧಿಸಿದ್ದಾರೋ ಅದು ಎಷ್ಟೇ ಮಹತ್ತದ್ದಾಗಿದ್ದರೂ ಅಪೂರ್ಣವೇ ಆಗಿದೆ ಮತ್ತು ಅದು ಮುಂದೆ ಅರಿಯುವುದಕ್ಕೆ ಪ್ರೇರಕವಾಗಿ ಕೆಲಸ ಮಾಡುತ್ತಿವೆ.

ಮನಸ್ಸಿನ ವಿಷಯವೂ ಹಾಗೇ. ಮನಸ್ಸು ಅನಂತ ಆಕಾಶದಂತೆ. ಅದರಲ್ಲಿ ಹುಟ್ಟುವ ಆಲೋಚನೆಗಳು ಅಗಣಿತ ಮತ್ತು ಅಪರಿಮಿತ. ಆ ಆಲೋಚನೆಗಳಿಂದ ರೂಪುಗೊಳ್ಳುವ ಭಾವಗಳನ್ನು ಅಭಿವ್ಯಕ್ತಗೊಳಿಸಲು ಇರುವ ಅವಕಾಶ ಈ ಮನುಷ್ಯ ಸಮಾಜದಲ್ಲಿ ಅತ್ಯಂತ ಸಣ್ಣದು. ಸಮಾಜವು ಅತ್ಯಂತ ಸಂಕುಚಿತ ಚೌಕಟ್ಟನ್ನು ಮಾನಸಿಕ ವಿದ್ಯಮಾನಗಳಿಗೆ ಅನುಮತಿಸಿರುವ ಕಾರಣದಿಂದ ವ್ಯಕ್ತಿ ಅತ್ಯಂತ ಮುಕ್ತವಾಗಿ ತನ್ನತನದ ಅನ್ವೇಷಣೆಯನ್ನೂ ಮಾಡಬೇಕು ಮತ್ತು ಅವನ್ನು ಅಭಿವ್ಯಕ್ತಿಸುವುದರಲ್ಲಿ ಅತ್ಯಂತ ಎಚ್ಚರಿಕೆಯಿಂದಲೂ ಮತ್ತು ಕೌಶಲ್ಯದಿಂದಲೂ ತನ್ನನ್ನು ತಾನು ಕಾಯ್ದುಕೊಳ್ಳಬೇಕು. ಹಾಗಾಗಿಯೇ ವಿಪರೀತವಾದ ಸೃಜನಶೀಲತೆಯನ್ನು, ಮನೋವಿಸ್ತಾರವನ್ನು ಕಂಡುಕೊಂಡಂತಹ ವ್ಯಕ್ತಿಗಳು ಸಮೂಹದಲ್ಲಿ ಅಥವಾ ಸಮಾಜದಲ್ಲಿ ಜನರೊಟ್ಟಿಗೆ ಬೆರೆತಿರಲು ಇಷ್ಟಪಡುವುದಿಲ್ಲ. ಏಕೆಂದರೆ ಅವರ ಅಭಿವ್ಯಕ್ತಿಯನ್ನು ಸೀಮಿತ ಚೌಕಟ್ಟಿನಲ್ಲಿಯೇ ನೋಡುವ ಸಮಾಜಕ್ಕೆ ಸ್ವೀಕರಿಸಲು ಆಗುವುದಿಲ್ಲ ಮತ್ತು ಇವರ ಕ್ರಿಯೆಗೆ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ ತಮ್ಮ ವ್ಯಕ್ತಿತ್ವಕ್ಕೆ ಸಮಾಜವೇ ಅಪಾತ್ರವೆಂದು ಏಕಾಂಗಿತನಕ್ಕೆ ಸರಿಯತೊಡಗುತ್ತಾರೆ. ವಾಸ್ತವವಾಗಿ ಸಮಾಜದಲ್ಲಿ ಸೃಜನಶೀಲ, ಅನನ್ಯ ಮತ್ತು ಅಪರೂಪವೆಂದು ಗುರುತಿಸಲ್ಪಟ್ಟಿರುವ ಕಲಾವಿದರ, ಕವಿಗಳ, ಸಾಹಿತಿಗಳ, ತತ್ವಜ್ಞಾನಿಗಳ, ಯೋಗಿಗಳ ಹೊರತಾಗಿ ಗುರುತಿಸದೇ ಹೋಗಿರುವ ಬೇಕಾದಷ್ಟು ಜನ ಸರಿದು ಹೋಗಿದ್ದಾರೆ. ಜನರ ನಡುವೆ ಗುರುತಿಸಲ್ಪಟ್ಟು ಬದುಕಿದ ಆ ಮಹಾಂತರು ತಮ್ಮ ಸಾಮರ್ಥ್ಯದ ಹರಿವಿನ ಜೊತೆಗೆ ಸಮಾಜದೊಡನೆ ಇರಬೇಕಾಗಿರುವ ಕೌಶಲ್ಯವನ್ನೂ ಬೆಳೆಸಿಕೊಂಡವರೇ ಆಗಿರುತ್ತಾರೆ. ಇನ್ನೂ ಕೆಲವರು ಸಮಾಜದ ಮತ್ತು ಸಮಾಜದ ಕಟ್ಟುಪಾಡಿಗೆ ಒಳಗಾಗಿರುವ ಜನರ ಬಗ್ಗೆ ಕರುಣೆಯನ್ನು ಹೊಂದಿದ್ದು ಅವರಿಗೆ ನೆರವಾಗಲೂ ನಿರ್ಧರಿಸಿರುತ್ತಾರೆ. ನಮ್ಮ ಕಣ್ಣಿಗೆ ಕಂಡ ಬುದ್ಧ, ಮೈಕಲ್ ಆಂಜಲೋ, ರೆಂಬ್ರಾಂಡ್, ಐನ್‌ಸ್ಟೈನ್, ಕುವೆಂಪು, ಷೇಕ್‌ಸ್ಪ್ಪಿಯರ್, ಖಲೀಲ್ ಗಿಬ್ರಾನ್ ಅವರಷ್ಟೇ ಕವಿ, ಜ್ಞಾನಿ, ಕಲಾವಿದ, ವಿಜ್ಞಾನಿ ಮತ್ತು ತತ್ವಜ್ಞಾನಿಗಳೆಂದುಕೊಂಡರೆ ಅವರನ್ನೂ ನಾವು ಸರಿಯಾಗಿ ತಿಳಿದುಕೊಳ್ಳಲು ವಿಫಲವಾಗಿದ್ದೇವೆ ಎಂದೇ ಅರ್ಥ.

ಕುಟುಂಬ ಮತ್ತು ಸಮಾಜವು ವಿಧಿಸಿರುವ ಪಾತ್ರಗಳ ಮತ್ತು ಗುರುತುಗಳನ್ನಷ್ಟೇ ಆಧರಿಸಿಕೊಂಡಿರುವವರು ಮನಸ್ಸಿನ ಶಕ್ತಿಯ ಸಾಧ್ಯತೆಗಳನ್ನು ಯಾವುದೇ ವ್ಯಕ್ತಿಯು ಸಂಪೂರ್ಣವಾಗಿ ಕಂಡುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಮನುಷ್ಯನ ಸಂಘಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನೇ ಅಥವಾ ಇರುವುದನ್ನು ಇನ್ನಷ್ಟು ಅನುಕೂಲಕರವಾಗಿಸುವುದಕ್ಕೆ ಮಾತ್ರ ಅವಕಾಶ ಕೊಡುತ್ತದೆ. ಅದಕ್ಕೆ ಹೊರತಾಗಿ ಅಥವಾ ವ್ಯತಿರಿಕ್ತವಾಗಿ ವ್ಯಕ್ತಿ ತನ್ನನ್ನು ತನ್ನ ಮನೋಧರ್ಮಕ್ಕೆ ಅನುಗುಣವಾಗಿ ಪ್ರಕಟಿಸಿಕೊಂಡರೆ ಸಮಾಜ ಹೆದರುತ್ತದೆ. ತನಗೆ ಇದನ್ನು ನಿಯಂತ್ರಿಸಲು ಅಥವಾ ಹತೋಟಿಯಲ್ಲಿಡಲು ಆಗದು ಎಂಬ ಆತಂಕದಲ್ಲಿ ಆ ವ್ಯಕ್ತಿಯನ್ನೇ ಅದುಮುವಂತಹ ಪ್ರಯತ್ನ ಮಾಡುತ್ತದೆ. ಈ ತರಹದ ಪ್ರಹಾರಗಳಿಗೆ ಹೆದರಿ ಅಥವಾ ತನ್ನತನದ ಮನೋಬಲ ವಿಸ್ತಾರ ಮತ್ತು ಸಮಾಜದ ನಿರೀಕ್ಷಿತ ವ್ಯಕ್ತಿತ್ವಕ್ಕೆ ಸರಿದೂಗಿಸಿಕೊಂಡು ಹೋಗುವ ಕೌಶಲ್ಯವಿಲ್ಲದೆ ಚೌಕಟ್ಟಿನಲ್ಲಷ್ಟೇ ನೆಮ್ಮದಿಯಾಗಿದ್ದುಬಿಡಲು ಬಹಳಷ್ಟು ಮಂದಿ ನಿರ್ಧರಿಸಿಬಿಡುವ ಕಾರಣದಿಂದ ತಮ್ಮತನದ ಸ್ವರೂಪವನ್ನು ಮತ್ತು ಶಕ್ತಿಯನ್ನು ಹುಡುಕಿಕೊಳ್ಳದೆಯೇ, ಕಂಡುಕೊಳ್ಳದೆಯೇ ಮತ್ತು ಪ್ರಕಟಿಸದೆಯೇ ಈ ಭೂಮಿಯಿಂದ ತೆರಳಿಬಿಡುತ್ತಾರೆ.

ಅದೆಷ್ಟೋ ಮಹಾಂತರು ಅವರ ಜೀವಿತಾವಧಿಯಲ್ಲಿ ಸಮಾಜದಿಂದ ಕಿರುಕುಳಗಳನ್ನು, ವಿರೋಧಗಳನ್ನು, ಹಿಂಸೆಗಳನ್ನು ಅನುಭವಿಸಿದ್ದಾಗಲಿ ಮತ್ತು ಹತ್ಯೆಗೊಳಗಾಗಿದ್ದಾಗಲಿ ಏನೇನೂ ಆಶ್ಚರ್ಯವಿಲ್ಲ. ಆದರೆ ಅವರನ್ನೂ ಪರಿಗಣಿಸುವುದು ಮತ್ತು ಸಮಾಜದ್ದೇ ಮಹತ್ತರ ಗುರುತನ್ನಾಗಿಸಿಕೊಳ್ಳುವುದು ಅವರು ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದರೆ ಮಾತ್ರ. ಸಮಾಜ ಗಾತ್ರಕ್ಕೆ ಮಣಿಯುತ್ತದೆ. ಗುಣಕ್ಕಲ್ಲ. ಏಕೆಂದರೆ ಸಮಾಜವೇ ಗಾತ್ರದ್ದಾಗಿದೆ. ತನ್ನೊಳಗೆ ಇರುವ ಸಾಮಾನ್ಯ ಅನುಕೂಲಕಾರಿ ಗುಣಗಳೇ ಮತ್ತಷ್ಟು ಉತ್ತಮವಾಗಿರಲು ಆಶಿಸುತ್ತದೆ. ಅನುಪಮ ವ್ಯಕ್ತಿಗಳ ಪ್ರಾಮಾಣಿಕ ಮತ್ತು ಸತ್ವಶಾಲಿ ದರ್ಶನಗಳಿಗೆ ಈ ಸಮಾಜವು ಎಂದಿಗೂ ಪಾತ್ರವಾಗಿಲ್ಲ. ಅಪಾತ್ರ ಸಮಾಜವು ನಿರೀಕ್ಷಿಸುವುದು ವ್ಯಕ್ತಿಗಳು ತಮ್ಮ ಪಾತ್ರಗಳನ್ನಷ್ಟೇ ನಿರ್ವಹಿಸಿದರೆ ಸಾಕು ಎಂದು.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News