ಕಾಂಕ್ರಿಟ್ ಕಟ್ಟಡಗಳ ನಡುವೆಯೇ ಎದ್ದು ನಿಂತ ‘ಮೀಯವಾಕಿ’ ಕಾಡು
ಮಂಗಳೂರು ನಗರದ ನಡುವಿನ ಗಗನಚುಂಬಿ ಕಟ್ಟಡಗಳ ನಡುವೆ ಸುಂದರ ಹಸಿರು ಕಾಡಿನ ಸೃಷ್ಟಿ ಸಾಧ್ಯ. ಇಂತಹ ಹಸಿರು ಪರಿಸರದಿಂದ ಪರಿಸರ ಮಾಲಿನ್ಯ ನಿಯಂತ್ರಿಸುವ ಪ್ರಯತ್ನದ ಜತೆಗೆ ಶುದ್ಧ ಪರಿಸರ, ಗಾಳಿಯನ್ನು ಒದಗಿಸುವ ಉದ್ದೇಶದಿಂದ ನಗರದ ಪರಿಸರವಾದಿ ಜೀತ್ ಮಿಲನ್ ರೋಚ್ ಅವರು ‘ಮೀಯವಾಕಿ’ ಮೂಲಕ ಸುದ್ದಿಯಲ್ಲಿದ್ದಾರೆ.
ಮಂಗಳೂರಿನ ನಗರದಾದ್ಯಂತ 30ಕ್ಕೂ ಹೆಚ್ಚು ಮೀಯವಾಕಿ ಕಾಡುಗಳನ್ನು ಸೃಷ್ಟಿಸುವ ಮೂಲಕ ಏರುತ್ತಿರುವ ಬಿಸಿಲ ಧಗೆಯ ನಡುವೆಯೂ ನಗರದ ಅಲ್ಲಲ್ಲಿ ಹಸಿರು ವಾತಾವರಣಕ್ಕೆ ಕಾರಣರಾಗಿದ್ದಾರೆ. ರಸ್ತೆ ಅಗಲೀಕರಣ, ಆಧುನಿಕತೆಯ ಭರದಲ್ಲಿ ನಗರ ಈಗಾಗಲೇ ಹಸಿರಿನಿಂದ ದೂರವಾಗುತ್ತಿದ್ದು, ಬೇಸಗೆಯಲ್ಲಿ ಬಿಸಿಲ ಬೇಗೆಯನ್ನು ಸಹಿಸಲಾಗದೆ ಪರದಾಡುವ ಸಮಯದಲ್ಲಿ ನಗರದ ಕೆಲವೆಡೆ ಈ ಹಸಿರು ಕಾಡು ಒಂದಷ್ಟು ಹಿತಾನುಭವ ನೀಡುತ್ತವೆ.
ರಸ್ತೆ ಬದಿ, ಸ್ಮಶಾನ ಸೇರಿದಂತೆ ಹಲವು ಕಡೆಗಳಲ್ಲಿ ಈ ರೀತಿ ಕಾಡುಗಳನ್ನು ಬೆಳೆಸಿ ಮಾದರಿ ಕಾರ್ಯ ಮಾಡಿರುವ ಜೀತ್ ಮಿಲನ್, ಸುರತ್ಕಲ್ ಪರಿಸರದ ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಶಾಲೆಯ ಆವರಣದ 2 ಸೆಂಟ್ಸ್ ಜಾಗದಲ್ಲಿ ಶಾಲೆಯ ಆಡಳಿತ ಮಂಡಳಿಯ ಸಹಕಾರದಿಂದಲೂ ಮೀಯವಾಕಿ ಕಾಡು ಬೆಳೆಸಿದ್ದಾರೆ. ಖಾಲಿ ಬಿದ್ದ ಜಾಗಗಳನ್ನು ಆಯ್ದುಕೊಂಡು ಅಲ್ಲಿ ಮಾವು, ಹಲಸು, ಹೆಬ್ಬಲಸು, ರಕ್ತ ಚಂದನ, ತೆಕ್ಕೆ, ಅಂಟುವಾಳ, ಕದಂಬ, ಪುನರ್ಪುಳಿ, ಗೋಪಾದ, ರಾಮಪತ್ರೆ, ಬಾಳೆ ಸೇರಿದಂತೆ ಸುಮಾರು 80 ಪ್ರಭೇದದ ಗಿಡಗಳನ್ನು ನೆಡುವ ಮೂಲಕ ಕಡಿಮೆ ಜಾಗದಲ್ಲಿ ಸುಂದರ ಹಾಗೂ ಆಹ್ಲಾದಕರ ವಾತಾವರಣವನ್ನು ಜೀತ್ ಮಿಲನ್ ಸೃಷ್ಟಿಸಿದ್ದಾರೆ.
ಏನಿದು ಮೀಯವಾಕಿ?
ಜಪಾನ್ ದೇಶದ ಸಸ್ಯಶಾಸ್ತ್ರಜ್ಞ ಅಕಿರಾ ಮೀಯವಾಕಿ ವಿಶ್ವಕ್ಕೆ ಹೇಳಿಕೊಟ್ಟ ಸರಳ ಕಾಡು ಬೆಳೆಸುವ ವಿಧಾನವೇ ಮೀಯವಾಕಿ. ಈ ಮೀಯವಾಕಿ ವಿಶೇಷತೆ ಎಂದರೆ, ಹೆಚ್ಚಿನ ಭೂಮಿ ಇದಕ್ಕೆ ಬೇಕಾಗಿಲ್ಲ.
200 ಚದರ ಅಡಿ ಜಾಗದಲ್ಲೂ ಮಾಡಿ ಯಶಸ್ವಿಯಾದವರು ಇದ್ದಾರೆ. ಆಧುನಿಕತೆ, ರಸ್ತೆಗಳ ಅಗಲೀಕರಣಕ್ಕಾಗಿ ಮರಗಳ ಮಾರಣ ಹೋಮ, ತೀವ್ರಗೊಳ್ಳುತ್ತಿರುವ ತಾಪಮಾನದ ಪ್ರಸಕ್ತ ಸನ್ನಿವೇಶದಲ್ಲಿ ಈ ಮೀಯವಾಕಿ ವಿನೂತನ ಕಾಡು ಬೆಳೆಸುವ ವಿಧಾನ ಅತ್ಯಗತ್ಯ ಎನ್ನುವುದು ಜೀತ್ ಮಿಲನ್ ರೋಚ್ ಅವರ ಅಭಿಪ್ರಾಯ.
ತಯಾರಿ ಹೇಗೆ?
ಮಣ್ಣನ್ನು (ಮಣ್ಣು, ಮರಳು, ಗೊಬ್ಬರ) ಹದಗೊಳಿಸಿ ಬೇಕಾದ ಗಿಡಗಳನ್ನು ಆಯ್ಕೆ ಮಾಡಿಕೊಂಡು ಚೌಕಾಕಾರದ ಹೊಂಡಗಳನ್ನು ತೆಗೆದು ಅದರಲ್ಲಿ ಆಯ್ದ ಗಿಡಗಳನ್ನು ನೆಡಬೇಕು. ಯಾವ ಗಿಡದ ಪಕ್ಕ ಯಾವ ಗಿಡ ನೆಡಬೇಕೆನ್ನುವ ಬಗ್ಗೆ ಅರಿವು ಮುಖ್ಯವಾಗಿದ್ದು, ಕನಿಷ್ಠ ಎರಡರಿಂದ ಮೂರು ವರ್ಷ ನೀರುಣಿಸಿ ಕಾಲಕಾಲಕ್ಕೆ ಗೊಬ್ಬರ ಹಾಕಿ ಹದಗೊಳಿಸಬೇಕು. ಬೇಸಿಗೆಕಾಲದಲ್ಲಿ ಸ್ವಲ್ಪಹೆಚ್ಚೇ ಗಮನ ನೀಡಬೇಕು. 3 ವರ್ಷ ನೆಟ್ಟ ಗಿಡಗಳನ್ನು ಪೋಷಿಸಿದರೆ, 300 ವರ್ಷ ಅವು ನಮ್ಮನ್ನು ಸಂರಕ್ಷಿಸುತ್ತವೆ. ಕಾಡುಗಳನ್ನು ಬೆಳೆಸಲು ವರ್ಷಗಳೇ ಬೇಕು. ಆದ್ರೆ ಮೀಯವಾಕಿ ಬೆಳೆಸಲು ಒಂದೆರಡು ವರ್ಷ ಸಾಕು ಎನ್ನುತ್ತಾರೆ ಜೀತ್ ಮಿಲನ್ ರೋಚ್.
ಇಂತಹ ಹಸಿರು ಪರಿಸರದಿಂದ ಮನುಷ್ಯರ ಜತೆಗೆ ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳು, ಜೇನುಹುಳುಗಳು, ಚಿಟ್ಟೆಗಳು ಪ್ರಯೋಜನ ಪಡೆಯುತ್ತವೆ. ರಾಜ್ಯದಲ್ಲಿ ಎಷ್ಟೊಂದು ಶಾಲೆಗಳಿವೆ. ಸಾಕಷ್ಟು ಕಡೆ ಬೇಕಾದಷ್ಟು ಜಾಗವೂ ಇದೆ. ಈ ಶಾಲೆಯ ಆಡಳಿತ ಮಂಡಳಿಯವರಂತೆ ಎಲ್ಲರೂ ಮನಸ್ಸು ಮಾಡಿದರೆ ಶಾಲೆಗೊಂದು ವನವನ್ನು ಕೊಡುಗೆಯಾಗಿ ನೀಡಬಹುದು. ನಮ್ಮ ಶಾಲೆಯ ಮಕ್ಕಳು ಆಸಕ್ತಿಯಿಂದ ಇಲ್ಲಿ ಕೆಲಸ ಮಾಡುತ್ತಾರೆ. ಎಲ್ಲಾ ಗಿಡಗಳ ಬಗ್ಗೆ ತಿಳಿಯುತ್ತಾರೆ. ಅಲ್ಲದೆ ಇಲ್ಲಿರುವ ಪ್ರತಿಯೊಂದು ಗಿಡಕ್ಕೂ ಪ್ರಾಯೋಜಕರಿದ್ದಾರೆ. ನಮ್ಮ ಧರ್ಮಪ್ರಾಂತ್ಯದ ಪ್ರಮುಖರಾದ ಬಿಷಪ್ ಅವರ ಅನುಮತಿಯಿಲ್ಲದೆ ಯಾವುದೇ ಇಗರ್ಜಿ ಅಥವಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಗಿಡ, ಮರಗಳನ್ನು ಕಡಿಯುವ ಹಾಗಿಲ್ಲ.
-ಫಾ. ರಿಚರ್ಡ್ ಡಿಸೋಜಾ,
ಸೇಕ್ರೆಡ್ ಹಾರ್ಟ್ ಚರ್ಚ್, ಸುರತ್ಕಲ್