ಮತ್ಸ್ಯಕ್ಷಾಮ: ಉತ್ತರ ಕನ್ನಡದಲ್ಲಿ ಮೀನುಗಾರಿಕೆ ಭಾಗಶಃ ಬಂದ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸದ್ಯ ಮತ್ಸ್ಯಕ್ಷಾಮ ಉಂಟಾಗಿದ್ದು, ಇದರ ಪರಿಣಾಮವಾಗಿ ಮೀನುಗಾರಿಕೆ ಭಾಗಶಃ ಬಂದ್ ಆಗಿದೆ.
ಟ್ರಾಲರ್ ಬೋಟ್ಗಳು ಮೀನುಗಾರಿಕೆಗಾಗಿ ಆಳಸಮುದ್ರಕ್ಕೆ ತೆರಳದೆ ಸುಮಾರು ನಾಲ್ಕೈದು ತಿಂಗಳು ಕಳೆದಿದೆ. ಬೋಟ್ಗಳಲ್ಲಿ ದುಡಿಯುಲು ಇರುವ ಕಾರ್ಮಿಕರಿಗೂ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಮೀನುಗಾರಿಕಾ ಚಟುವಟಿಕೆಯಿಂದ ತುಂಬಿರುತ್ತಿದ್ದ ನಗರದ ಬೈತಖೋಲ್ ಮೀನುಗಾರಿಕೆ ಬಂದರು ಪ್ರದೇಶ ಖಾಲಿ ಖಾಲಿಯಾಗಿದೆ.
ಬೈತಖೋಲ್ ಮೀನುಗಾರಿಕೆ ಬಂದರಿನಲ್ಲಿ ೧೫೦ ರಷ್ಟು ಟ್ರಾಲರ್ ಬೋಟ್ಗಳಿವೆ. ಸಾಮಾನ್ಯವಾಗಿ ಡಿಸೆಂಬರ್, ಜನವರಿ, ಫೆಬ್ರವರಿ, ಮಾರ್ಚ್ ಸಮಯದಲ್ಲಿ ೬೦ರಿಂದ ೧೦೦ ಬೋಟ್ಗಳು ಮೀನುಗಾರಿಕೆಗೆ ತೆರಳುತ್ತಿದ್ದವು. ಸಿಗಡಿ, ಲೆಪ್ಪೆ ಮುಂತಾದ ಮೀನುಗಳು ಬಲೆಗೆ ಬೀಳುತ್ತವೆ. ಕೆಲವು ಬಾರಿ ಈ ಅವಧಿಯಲ್ಲಿ ಬೋಟ್ಗಳಿಗೆ ೧ ಟನ್ವರೆಗೂ ಮೀನುಗಳು ಬಲೆಗೆ ಬೀಳುತ್ತಿದ್ದವು. ಆದರೆ, ಪ್ರಸಕ್ತ ದಿನದಲ್ಲಿ ಒಂದು, ಎರಡು ಟ್ರಾಲರ್ ಬೋಟ್ಗಳು, ಕೆಲವು ಪರ್ಸೀನ್ ಬೋಟ್ಗಳು ಮಾತ್ರ ಸಮುದ್ರಕ್ಕೆ ತೆರಳುತ್ತಿವೆ. ಬೆಳಗ್ಗೆ ಅಲ್ಪಪ್ರಮಾಣದಲ್ಲಿ ಮೀನು ಖರೀದಿ ನಡೆಯುತ್ತಿದೆ ಎನ್ನುತ್ತಾರೆ ಬೈತಖೋಲ್ನ ಮೀನುಗಾರರು.
ಪರ್ಸೀನ್ ಬೋಟ್ಗಳಿಗೆ ಹೊರ ರಾಜ್ಯದ ಕಾರ್ಮಿಕರನ್ನು ಬಳಸಲಾಗುತ್ತದೆ. ಒಮ್ಮೆ ಅವರು ತಮ್ಮ ಊರುಗಳಿಗೆ ತೆರಳಿದರೆ ಮತ್ತೆ ವಾಪಸ್ ಬರುವುದಿಲ್ಲ. ಇದರಿಂದ ಅವರನ್ನು ಉಳಿಸಿಕೊಳ್ಳುವ ಸಲುವಾಗಿ ಕೆಲವು ಬೋಟ್ಗಳು ಸಮುದ್ರಕ್ಕೆ ತೆರಳುತ್ತಿವೆ. ಆದರೆ, ಪರ್ಸೀನ್ ಬೋಟ್ಗಳಿಗೂ ನಿರೀಕ್ಷೆಯಷ್ಟು ಮೀನು ಬೀಳುತ್ತಿಲ್ಲ ಎಂದು ಮೀನುಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದಾಗ ಒಂದು, ಎರಡು ಕ್ವಿಂಟಾಲ್ ಸಿಗಡಿಗಳು ಬೀಳುತ್ತಿದ್ದವು. ಪ್ರತಿ ದಿನ ಸರಾಸರಿ ೧ ಲಕ್ಷ ರೂ.ವರೆಗೂ ಆದಾಯ ಬರುತ್ತಿತ್ತು. ಆದರೆ, ಈ ಬಾರಿ ಮೀನೇ ಬೀಳುತ್ತಿಲ್ಲ. ಹೋದ ಡೀಸೆಲ್ ಖರ್ಚು, ಕಾರ್ಮಿಕರ ವೇತನವನ್ನೂ ನೀಡಲು ಕಷ್ಟವಾಗಿದ್ದರಿಂದ ಬೋಟ್ಗಳನ್ನು ದಡದಲ್ಲೇ ನಿಲ್ಲಿಸಲಾಗುತ್ತಿದೆ ಎನ್ನುತ್ತಾರೆ ಬೋಟ್ ಮಾಲಕರು.
ಹವಾಮಾನ ವೈಪರೀತ್ಯ, ಲೈಟ್ ಫಿಶಿಂಗ್ನಂತಹ ಅವೈಜ್ಞಾನಿಕ ಮೀನುಗಾರಿಕೆ ಮತ್ಸ್ಯಕ್ಷಾಮಕ್ಕೆ ಕಾರಣ ಎಂಬುದು ಮೀನುಗಾರಿಕೆ ತಜ್ಞರ ಅಭಿಪ್ರಾಯ. ಭೂಮಿಯ ಮೇಲಿನ ಉಷ್ಣಾಂಶ ಹೆಚ್ಚಾದಂತೆ ಕಡಲಿನ ನೀರಿನ ಉಷ್ಣಾಂಶವೂ ಹೆಚ್ಚುತ್ತದೆ. ಕೆಲವು ಮೀನುಗಳು ಆಳಕ್ಕೆ ಇಳಿಯುತ್ತವೆ ಎನ್ನುತ್ತಾರೆ ತಜ್ಞರು.
ಈ ಹಿಂದೆ ಫೆಬ್ರವರಿಯಲ್ಲೇ ಇಷ್ಟು ಮೀನಿನ ಕೊರತೆ ಎದುರಾದದ್ದು ನೋಡಿಲ್ಲ. ಬೋಟ್ಗಳು ಸಮುದ್ರಕ್ಕಿಳಿದರೆ ಲಾಭವಾಗುವುದಿರಲಿ, ಹೋದ ಖರ್ಚು ಕೂಡ ದೊರಕುವುದಿಲ್ಲ. ಇದರಿಂದ ಹೆಚ್ಚಿನ ಬೋಟ್ಗಳು ಲಂಗರು ಹಾಕಿವೆ ಎಂದು ಮೀನುಗಾರರು ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ.
‘ಸರಕಾರ ಮೀನುಗಾರರಿಗೂ ಬರ ಪರಿಹಾರ ನೀಡಲಿ’
ಅನಾವೃಷ್ಟಿಯಿಂದ ಬರ ಎದುರಾದಂತೆ ಸಮುದ್ರದಲ್ಲೂ ಬರಗಾಲ ಬಂದಿದೆ. ರೈತರಿಗೆ ನೀಡಿದಂತೆ ಸರಕಾರ ಮೀನುಗಾರರಿಗೂ ಬರ ಪರಿಹಾರ ನೀಡಬೇಕು ಎಂದು ಉತ್ತರ ಕನ್ನಡ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಒತ್ತಾಯಿಸಿದ್ದಾರೆ.