ಭರತನಾಟ್ಯ(ಸಾದಿರ್)ದಲ್ಲಿ ಸಾಂಸ್ಕೃತಿಕ ಹಿಂಸೆ
ತಮ್ಮ ಸಾದಿರ್ ಅಟ್ಟಂ ಕಲೆಯನ್ನು ‘ಕಲಾ ಮೀಮಾಂಸೆ, ಅಧ್ಯಾತ್ಮ, ಜನಪದೀಯತೆ ಮತ್ತು ಶೃಂಗಾರ’ ರಸಗಳೊಂದಿಗೆ ಬೆಸೆದ ಅತಿ ಶೂದ್ರ ಕಲಾವಿದರಿಗೆ 20ನೇ ಶತಮಾನದ ಆರಂಭದಲ್ಲಿ ಜಮೀನ್ದಾರರು, ಉನ್ನತ ಅಧಿಕಾರಿಗಳು, ಫ್ಯೂಡಲ್ ವ್ಯವಸ್ಥೆಯ ಆಶ್ರಯದಲ್ಲಿ ಪ್ರದರ್ಶನ ಮಾಡುವ ಅನಿವಾರ್ಯತೆ ಉಂಟಾಯಿತು. ತಂಜಾವೂರಿನಿಂದ ಮದ್ರಾಸ್‌ಗೆ ಸ್ಥಳಾಂತರಗೊಂಡ ಈ ಸಾದಿರ್ ನಾಟ್ಯ ಪರಂಪರೆಯು ತನ್ನ ಬಹುತ್ವದ ಪರಿಕಲ್ಪನೆಯಿಂದ ಭರತನಾಟ್ಯವೆನ್ನುವ ಬ್ರಾಹ್ಮಣತ್ವದ ಅಗ್ರಹಾರದ ಬಲೆಯೊಳಗೆ ಸಿಲುಕಿಕೊಂಡಿತು. 5ನೇ ವೇದ ಎಂದು ಕರೆಯಲ್ಪಡುವ ಕ್ರಿ.ಪೂ. 2ನೇ ಶತಮಾನದ ಭರತಮುನಿಯ ‘ನಾಟ್ಯಶಾಸ್ತ್ರ’ ವ್ಯಾಖ್ಯಾನವನ್ನು ಆಧರಿಸಿದ ಈ ಭರತನಾಟ್ಯಕ್ಕೆ ವೇದದ ಪಾವಿತ್ರ್ಯತೆಯನ್ನು ತೊಡಿಸಿ ಬ್ರಾಹ್ಮಣರ ಪ್ರವೇಶಕ್ಕೆ ರಹದಾರಿ ನಿರ್ಮಿಸಲಾಯಿತು.
ಕರ್ನಾಟಕ ಸಂಗೀತ ಮತ್ತು ನೃತ್ಯದಲ್ಲಿ ‘ಸಾಂಸ್ಕೃತಿಕ ಹಿಂಸೆ’ಯ ಕುರಿತು ಮಾತನಾಡುವಾಗ ಸಹಜವಾಗಿಯೇ ಭರತನಾಟ್ಯದ ಪ್ರಸ್ತಾಪ ಬರುತ್ತದೆ. ತಂಜಾವೂರಿನ ಭಾಗದಲ್ಲಿನ ಸ್ಥಳೀಯ ರಾಜರ ಒಡ್ಡೋಲಗದಲ್ಲಿ, ದೇವಸ್ಥಾನದ ಪ್ರಾಂಗಣದಲ್ಲಿ ತಮ್ಮ ಸಾದಿರ್‌ಶೈಲಿಯ ನಾಟ್ಯ ಪ್ರದರ್ಶನ ಮಾಡುತ್ತಿದ್ದ ದೇವದಾಸಿ ಕಲಾವಿದರ ಭವಿಷ್ಯದ ಮೇಲೆ 1855ರ ಹೊತ್ತಿಗೆ ಆತಂಕದ ಮೋಡ ಕವಿದಿತ್ತು. ಅರಮನೆಯ ರಾಜಕಾರಣದಲ್ಲಿ ಉಂಟಾದ ಪಲ್ಲಟಗಳಿಂದ ಯಾವುದೇ ಬೇರುಗಳಿಲ್ಲದ ದೇವದಾಸಿ ಸಮುದಾಯದ ನೃತ್ಯ ಕಲಾವಿದರಿಗೆ ಅವಕಾಶಗಳು ಕುಂಠಿತವಾಗಿ, ಮದ್ರಾಸ್‌ಗೆ (ಈಗಿನ ಚೆನ್ನೈ) ವಲಸೆ ಬಂದರು. ಹೊಸ ಸ್ಥಳದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡಿದರು. ತಮ್ಮ ಸಾದಿರ್ ಅಟ್ಟಂ ಕಲೆಯನ್ನು ‘ಕಲಾ ಮೀಮಾಂಸೆ, ಅಧ್ಯಾತ್ಮ, ಜನಪದೀಯತೆ ಮತ್ತು ಶೃಂಗಾರ’ ರಸಗಳೊಂದಿಗೆ ಬೆಸೆದ ಈ ಅತಿ ಶೂದ್ರ ಕಲಾವಿದರಿಗೆ 20ನೇ ಶತಮಾನದ ಆರಂಭದಲ್ಲಿ ಜಮೀನ್ದಾರರು, ಉನ್ನತ ಅಧಿಕಾರಿಗಳು, ಫ್ಯೂಡಲ್ ವ್ಯವಸ್ಥೆಯ ಆಶ್ರಯದಲ್ಲಿ ಪ್ರದರ್ಶನ ಮಾಡುವ ಅನಿವಾರ್ಯತೆ ಉಂಟಾಯಿತು. ತಂಜಾವೂರಿನಿಂದ ಮದ್ರಾಸ್‌ಗೆ ಸ್ಥಳಾಂತರಗೊಂಡ ಈ ಸಾದಿರ್ ನಾಟ್ಯ ಪರಂಪರೆಯು ತನ್ನ ಬಹುತ್ವದ ಪರಿಕಲ್ಪನೆಯಿಂದ ಭರತನಾಟ್ಯವೆನ್ನುವ ಬ್ರಾಹ್ಮಣತ್ವದ ಅಗ್ರಹಾರದ ಬಲೆಯೊಳಗೆ ಸಿಲುಕಿಕೊಂಡಿತು. 5ನೇ ವೇದ ಎಂದು ಕರೆಯಲ್ಪಡುವ ಕ್ರಿ.ಪೂ. 2ನೇ ಶತಮಾನದ ಭರತಮುನಿಯ ‘ನಾಟ್ಯಶಾಸ್ತ್ರ’ ವ್ಯಾಖ್ಯಾನವನ್ನು ಆಧರಿಸಿದ ಈ ಭರತನಾಟ್ಯಕ್ಕೆ ವೇದದ ಪಾವಿತ್ರ್ಯತೆಯನ್ನು ತೊಡಿಸಿ ಬ್ರಾಹ್ಮಣರ ಪ್ರವೇಶಕ್ಕೆ ರಹದಾರಿ ನಿರ್ಮಿಸಲಾಯಿತು.
ದೇವದಾಸಿ ಕಲಾವಿದರ ಬವಣೆ ಇಲ್ಲಿಗೇ ನಿಲ್ಲಲಿಲ್ಲ. ಇದೇ ಸಂದರ್ಭದಲ್ಲಿ ದೇವಸ್ಥಾನದ ನೃತ್ಯ ನಿಷೇಧಗೊಳಿಸಲಾಯಿತು. ಆದರೆ ದೇವದಾಸಿ ಕಲಾವಿದರಿಗೆ ಸೂಕ್ತ ಪುನರ್ವಸತಿ ಕಲ್ಪಿಸದೆ, ಅವರನ್ನು ಆಧುನಿಕತೆಯ ಹೊಸತನಕ್ಕೆ ಪರಿಚಯಿಸದೆ ಅಕ್ಷರಶಃ ತಬ್ಬಲಿಗಳಾದರು. ಇದು ಸಾಮಾಜಿಕ ಶೋಷಣೆಗೆ ವೇದಿಕೆ ಕಲ್ಪಿಸಿತು. 1947ರಲ್ಲಿ ದೇವದಾಸಿ ಪದ್ಧತಿಯನ್ನು ರದ್ದುಗೊಳಿಸಲಾಯಿತು. ಒಂದೆಡೆ ತಮ್ಮ ಸಾಂಸ್ಕೃತಿಕ ಗುರುತು ಸಾದಿರ್ ಅಟ್ಟಂ ಕಲೆಯನ್ನು ಕಳೆದುಕೊಂಡ ದೇವದಾಸಿ ಸಮುದಾಯವು ಸ್ವತಂತ್ರ ಭಾರತದಲ್ಲಿ ತೀವ್ರವಾದ ಲೈಂಗಿಕ ದೌರ್ಜನ್ಯ, ಶೋಷಣೆಗೆ ಗುರಿಯಾದರು. ನವ ಜೀತಗಾರಿಕೆಗೆ ಬಲಿಯಾದರು.
ಇಪ್ಪತ್ತನೇ ಶತಮಾನದ ಮೂವತ್ತರ ದಶಕದಲ್ಲಿ ರುಕ್ಮಿಣಿದೇವಿ ಅರುಂಡೆಲ್‌ರವರು ‘ದೇವದಾಸಿ ಸಮುದಾಯದ ಸಾದಿರ್ ನಾಟ್ಯ ಪರಂಪರೆಯನ್ನು ಅದರ ಲೈಂಗಿಕತೆ ಅಭಿವ್ಯಕ್ತಿಯಿಂದ ಬಿಡುಗಡೆಗೊಳಿಸಿ, ಭಕ್ತಿ ಭಾವವನ್ನು ತುಂಬುತ್ತೇವೆ’ ಎಂದು ಹೇಳುತ್ತಾ ಬಂದರು. ದೇವದಾಸಿ ಸಮುದಾಯದ ಸಾದಿರ್ ಕಲೆಯನ್ನು ಉದ್ದೇಶಪೂರ್ವಕವಾಗಿ ‘ಶೃಂಗಾರಭರಿತ’ ಎಂದು ಕರೆದು ತಮ್ಮದು ‘ಭಕ್ತಿ’ ಎನ್ನುವುದರ ಮೂಲಕ ‘ಬ್ರಾಹ್ಮಣೀಕರಣ’ಗೊಳಿಸಿದರು. ‘ನಾಟ್ಯ ಸೆಕ್ಸಿಯಾಗಿರಬಾರದು’ ಎಂದು ಹೀಗೆಳೆದು ಆ ಸೌಂದರ್ಯ ಮೀಮಾಂಸೆಗೆ ಕರ್ಮಠತನದ ಮಡಿವಂತಿಕೆಯ ಹೊದಿಕೆ ತೊಡಿಸಿದರು. 1936ರಲ್ಲಿ ಅದ್ಯಾರ್‌ನಲ್ಲಿ ಅಂತರ್‌ರಾಷ್ಟ್ರೀಯ ನೃತ್ಯ ಅಕಾಡಮಿ (ಈಗಿನ ಕಲಾಕ್ಷೇತ್ರ) ಸ್ಥಾಪಿಸಿ, ನೃತ್ಯದ ಸಾರ್ವತ್ರೀಕರಣದ ಹೆಸರಿನಲ್ಲಿ ಭರತನಾಟ್ಯ-ಬ್ರಾಹ್ಮಣರು ಎನ್ನುವ ಶಕೆಯನ್ನು ಆರಂಭಿಸಿದರು.
ಇವರಿಗೆ ಒತ್ತಾಸೆಯಾಗಿ ನಿಂತ ರಾಷ್ಟ್ರೀಯವಾದಿ ಇ. ಕೃಷ್ಣ ಅಯ್ಯರ್ ಭರತನಾಟ್ಯವನ್ನು ‘ದೇವದಾಸಿ ಸಮುದಾಯ’ದಿಂದ ಬಿಡುಗಡೆಗೊಳಿಸಿ ಅದನ್ನು ಶುದ್ಧೀಕರಿಸಬೇಕು ಮತ್ತು ಗೌರವಯುತಗೊಳಿಸಬೇಕು ಎಂದು ಪ್ರಚಾರ ಮಾಡಿದರು. ಆ ಮೂಲಕ ಒಂದು ಕಾಲದ ಅದ್ಭುತ ಕಲಾ ಮೀಮಾಂಸೆಯಾಗಿದ್ದ, ಜನಪದೀಯವಾಗಿದ್ದ ದೇವದಾಸಿ ಪದ್ಧತಿಯ ಸಾದಿರ್ ನೃತ್ಯ ಪರಂಪರೆಯ ಮೇಲೆ ಅಶುದ್ಧತೆಯ ಕಳಂಕ ಹೊರಿಸಿ ಶುದ್ಧೀಕರಣದ ನೆಪದಲ್ಲಿ ಅದರ ಮೂಲ ನೈಜ ಸ್ವರೂಪವನ್ನು ಸಂಪೂರ್ಣವಾಗಿ ಬದಲಿಸಿದರು, ಆತ್ಮವನ್ನೇ ನಿಷ್ಕ್ರಿಯಗೊಳಿಸಿದರು. ಆ ಕಾಲದಲ್ಲಿ ತೀವ್ರವಾಗಿದ್ದ ರಾಷ್ಟ್ರೀಯವಾದಿ ಚಳವಳಿಯೊಂದಿಗೆ ಈ ‘ಪಾವಿತ್ರ್ಯತೆಯ ಶುದ್ಧೀಕರಣ’ವನ್ನು ಬೆರೆಸಿ ಅದಕ್ಕೆ ‘ಶಾಸ್ತ್ರೀಯ’ ಮುಖವಾಡ ತೊಡಿಸಿದರು. ನೃತ್ಯವನ್ನು ಡಿe-ಛಿಚಿsಣiಟಿg ಮಾಡುವುದರ ಮೂಲಕ ‘ಸಾಂಸ್ಕೃತಿಕ ಹಿಂಸೆ’ಗೆ ಮುನ್ನುಡಿ ಬರೆದರು. ಇವರಿಬ್ಬರ ಅಂದಿನ ಭರತನಾಟ್ಯದ ‘ಬಾಹ್ಮಣೀಕರಣ’ ಪ್ರಕ್ರಿಯೆಯು ಇಂದಿನ ‘ಹಿಂದುತ್ವ ರಾಜಕಾರಣದ’ ಬುನಾದಿಯಾಗಿದೆ.
ಅಭಿನಯ ಪ್ರಧಾನವಾಗಿದ್ದ ದೇವದಾಸಿ ಪರಂಪರೆಯ ಸಾದಿರ್ ನಾಟ್ಯ ಕಲೆಯನ್ನು ಮಧ್ಯಮವರ್ಗದ ಬ್ರಾಹ್ಮಣರು ಭಕ್ತಿಯ ಹೆಸರಿನಲ್ಲಿ ಪಲ್ಲಟಗೊಳಿಸಿದರು. ಬಾಲ ಸರಸ್ವತಿಯಂತಹ ಮಹಾನ್ ಕಲಾವಿದರು ತಮ್ಮ ನೃತ್ಯ ಪರಂಪರೆಯ ಸೌಂದರ್ಯ ಮೀಮಾಂಸೆಯನ್ನು ಸಂಪೂರ್ಣವಾಗಿ ಬದಲಿಸಿ ಅದರ ಗುರುತುಗಳನ್ನು ಹಂತ ಹಂತವಾಗಿ ನಾಶ ಮಾಡಿದರು, ತಾಂತ್ರಿಕತೆಯನ್ನು ವೈಭವೀಕರಿಸುವುದರ ಮೂಲಕ ಪಾರಂಪರಿಕ ನಾಟ್ಯವನ್ನು ‘ಹಳತಾಗಿದೆ’ ಎಂದು ಬಿಂಬಿಸಿದರು. ಆದರೆ ನಮ್ಮ ದೇವದಾಸಿ ಪರಂಪರೆಯ ಕಲಾ ಅಸ್ಮಿತೆಯನ್ನು ಉಳಿಸಿಕೊಳ್ಳುತ್ತಲೇ ಅದನ್ನು ಆಧುನೀಕರಿಸುವ ಸವಾಲು ನಮ್ಮ ಮೇಲಿದೆ ಎಂದು ವಿವರಿಸಿದರು. ದೇವದಾಸಿ ಸಮುದಾಯದ ಮೇಲಿನ ಸಾಮಾಜಿಕ ಶೋಷಣೆ, ದೌರ್ಜನ್ಯದ ವಿರುದ್ಧ ಚಳವಳಿ ರೂಪಿಸಬೇಕಿದ್ದ ಸಂದರ್ಭದಲ್ಲಿ ಅವರ ಆತ್ಮವಾಗಿದ್ದ ನಾಟ್ಯ ಕಲೆಯನ್ನು ಕಸಿದುಕೊಂಡು ತಮ್ಮೊಳಗೆ ಜೀರ್ಣಿಸಿಕೊಂಡಿದ್ದು ‘ಸಾಂಸ್ಕೃತಿಕ ಹಲ್ಲೆ’ ಎನ್ನುವುದರಲ್ಲಿ ಅನುಮಾನವಿಲ್ಲ.
ದೇವದಾಸಿ ಪರಂಪರೆಯ ಕಾವ್ಯಾತ್ಮಕ ಅಭಿವ್ಯಕ್ತಿಯಾದ ‘ಶೃಂಗಾರ ಭಾವ’ವನ್ನು ಬೇಕಂತಲೇ ‘ಲೈಂಗಿಕತೆ’ ಎಂದು ಅಪಪ್ರಚಾರ ಮಾಡಿ ಅದಕ್ಕೆ ‘ಭಕ್ತಿಯ’ ಮುಖ ತೊಡಿಸಲು ಯತ್ನಿಸಿದ ರುಕ್ಮಿಣಿದೇವಿಯ ‘ಬ್ರಾಹ್ಮಣೀಕರಣದ’ ವಿರುದ್ಧ ಬಾಲ ಸರಸ್ವತಿ ಬಂಡಾಯವೆದ್ದರು. ಜನವರಿ 1945ರಲ್ಲಿ ಬಾಂಬೆನಲ್ಲಿ (ಈಗಿನ ಮುಂಬೈ) ನಡೆದ ‘ಅಖಿಲ ಭಾರತ ನೃತ್ಯ ಹಬ್ಬ’ದ ಆರಂಭವು ರುಕ್ಮಿಣಿದೇವಿಯವರ ನೃತ್ಯದ ಮೂಲಕ ಉದ್ಘಾಟನೆಯಾಯಿತು. ‘ಶ್ರೀಮತಿ ರುಕ್ಮಿಣಿದೇವಿಯವರು’ ಎಂದು ಸಂಬೋಧಿಸುತ್ತಾ ಅವರ ಜೀವನ ಚರಿತ್ರೆಯ ಪರಿಚಯ ಮಾಡಿಕೊಟ್ಟರು. (ಬಾಲ ಸರಸ್ವತಿಯವರ ಪರಿಚಯ ಮಾಡಿಕೊಡಲೇ ಇಲ್ಲ) ಇಡೀ ರಂಗ ಭೂಮಿಕೆಯನ್ನು ವೈಭವಯುತವಾಗಿ ಶೃಂಗರಿಸಲಾಗಿತ್ತು. ಇವರ ನಂತರ ರಾತ್ರಿ 9:30ಕ್ಕೆ ಬಾಲ ಸರಸ್ವತಿಯವರ ನೃತ್ಯವಿತ್ತು. ಸಹಜವಾಗಿಯೇ ಹಿಂದಿನ ಪ್ರದರ್ಶನದ ಅಲಂಕಾರವನ್ನು ಉಳಿಸಿರುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಬಾಲ ಸರಸ್ವತಿ ಅವರ ಪ್ರದರ್ಶನದ ವೇಳೆಗೆ ರಂಗವನ್ನು ಖಾಲಿಗೊಳಿಸಲಾಗಿತ್ತು. ರಂಗದ ಮೇಲೆ ಮೊಳೆ, ಧೂಳು ತುಂಬಿಕೊಂಡಿತ್ತು. ಬಾಲ ಸರಸ್ವತಿಯವರ ತಾಯಿ ಜಯಮ್ಮಾಳ್ ಸಹಾಯಕರ ಮೂಲಕ ಎಲ್ಲವನ್ನೂ ಗುಡಿಸಿ ಸ್ವಚ್ಚಗೊಳಿಸಿದ ನಂತರ ಸಂಪೂರ್ಣ ಖಾಲಿ ರಂಗದ ಮೇಲೆ ಬಾಲ ಸರಸ್ವತಿ ನೃತ್ಯ ಆರಂಭವಾಯಿತು. ಇಂತಹ ಪ್ರತಿಕೂಲ ವಾತಾವರಣದಲ್ಲಿ ತಮ್ಮ ಜೀವಮಾನದ ಅದ್ಭುತ ನಾಟ್ಯ ಪ್ರದರ್ಶನ ಮಾಡಿದ ಬಾಲ ಸರಸ್ವತಿ ‘ದೇವದಾಸಿ ಸಮುದಾಯ ಕಲಾ ಪರಂಪರೆ’ಯ ಘನತೆ, ಗೌರವವನ್ನು ಮರಳಿ ಗಳಿಸುತ್ತೇನೆ ಎಂದು ಸಂದೇಶ ಸಾರಿದರು. (ಬಾಲ ಅವರ ಅಳಿಯ ಡೊಗ್ಲಾಸ್ ನೈಟ್ ಅವರ ‘ಹರ್ ಆರ್ಟ್ ಆ್ಯಂಡ್ ಲೈಫ್’ ಪುಸ್ತಕದಲ್ಲಿ ಈ ಘಟನೆಯ ವಿವರಗಳಿವೆ)
1936ರ ರಾಷ್ಟ್ರೀಯ ಕಾಂಗ್ರೆಸ್ ಪ್ರದರ್ಶನದಲ್ಲಿ ಬಾಲ ಸರಸ್ವತಿ ಅವರಿಗೆ ನಾಟ್ಯ ಪ್ರಸ್ತುತಪಡಿಸಲು ಕೋರಿದರು. ಕಲಾವಿದರು ಆ ಮೂಲಕ ಒಂದು ರಾಜಕೀಯ ಸಂದೇಶ ಕೊಡಬೇಕೆನ್ನುವುದು ಅವರ ಉದ್ದೇಶವಾಗಿತ್ತು. ಆಗ ಬಾಲ ಸರಸ್ವತಿ ಅವರು ನೇಯುವ ಚರಕದ ಹಾಡಿಗೆ ಹೆಜ್ಜೆ ಹಾಕಿ ನರ್ತಿಸಿದರು. ಇದು ಅವರ ವೈವಿಧ್ಯತೆ ಮತ್ತು ಕಲಾ ಮೀಮಾಂಸೆಯ ಕುರಿತಾದ ಸ್ಪಷ್ಟತೆಯನ್ನು ತೋರಿಸುತ್ತದೆ.
ದೇವದಾಸಿ ಪರಂಪರೆ ಕಲೆಯ ಕುರಿತು ಬಾಲ ಸರಸ್ವತಿ ಅಮ್ಮ ಅವರ ಮೊಮ್ಮಗ ಅನಿರುದ್ಧ್ ‘‘ಇದು ಕೇವಲ ಒಂದು ನಿರ್ದಿಷ್ಟ ಸಮುದಾಯದ ಅವನತಿಯಲ್ಲ.. ಒಂದು ನಿರ್ದಿಷ್ಟ ಶೈಲಿಯ ಕಲಾತ್ಮಕತೆಯ ಅಂತ್ಯವೂ ಹೌದು.. ಉದಾಹರಣೆಗೆ ಯಾವುದು ಭಕ್ತಿ, ಯಾವುದು ಶೃಂಗಾರ ಎನ್ನುವುದರ ನಡುವೆ ವಿಭಜನೆ ಸೃಷ್ಟಿಸಲಾಗಿದೆ, ಇಲ್ಲಿ ಯಾವುದು ಯುಕ್ತ, ಯಾವುದು ಯುಕ್ತವಲ್ಲ ಎನ್ನುವುದನ್ನು ನಿರ್ಧರಿಸಲಾಗುತ್ತಿದೆ..’’ ಎನ್ನುತ್ತಾರೆ.
ನೃತ್ಯ ಇತಿಹಾಸಕಾರ ಮೋಹನ್ ಖೋಕರ್ ‘‘ಪುನರುಜ್ಜೀವನ ಮತ್ತು ಪುನರುತ್ಥಾನದ ಈ ಪರಿಸರ ಮತ್ತು ‘ಕೆಡುಕೆಲ್ಲವೂ ವಿದೇಶಿ ಮೂಲದ್ದು’ ಎನ್ನುವ ಬ್ರಾಹ್ಮಿನಿಸಂನ ಮಂತ್ರವು ದೇವದಾಸಿ ಕಲಾವಿದರನ್ನು ಅತಂತ್ರರನ್ನಾಗಿಸಿತು. ಈ ಬ್ರಾಹ್ಮಣ್ಯಕ್ಕೆ ‘ಸೂಕ್ತವಾದ ಸಂಸ್ಕೃತಿ’ಯ ಅಗತ್ಯವಿತ್ತು. ಬ್ರಾಹ್ಮಣ ಮಾಧ್ಯಮ, ಅಧಿಕಾರವನ್ನು ಬಳಸಿಕೊಂಡು ಭರತನಾಟ್ಯವನ್ನು ಬ್ರಾಹ್ಮಣೀಕರಣಗೊಳಿಸಿದರು. ರುಕ್ಮಿಣಿಗಳು, ಕಲಾನಿಧಿಗಳು, ಕಮಲಾಗಳು ಎಲ್ಲವೂ ಬ್ರಾಹ್ಮಣಮಯಗೊಂಡಿತು’’ ಎಂದು ಬರೆಯುತ್ತಾರೆ. ಭರತನಾಟ್ಯ ಆಧುನೀಕರಣಗೊಂಡಿತು, ಆದರೆ ಸಾದಿರ್ ಅಟ್ಟಂನ ಸ್ಫೂರ್ತಿ ಅಂತ್ಯಗೊಂಡಿತು. ಬಾಲ ಸರಸ್ವತಿಯವರ ಶಿಷ್ಯೆ ನಂದಿನಿ ರಮಣಿಯವರು ‘‘ತಮ್ಮ ಸಮುದಾಯಕ್ಕೆ ಅಂಟಿದ ಕಳಂಕವನ್ನು ಅಳಿಸುವುದು ಸರಸ್ವತಿಯವರ ಮುಖ್ಯ ಗುರಿಯಾಗಿತ್ತು, ಜಗತ್ತಿನ ಮುಂದೆ ತಮ್ಮ ಕಲೆಯನ್ನು ಸಾಬೀತು ಪಡಿಸಬೇಕಿತ್ತು.. ಆದರೆ ರುಕ್ಮಿಣಿದೇವಿಯವರು ಮುಕ್ತ ಮನಸ್ಸಿನವರಾಗಿದ್ದರು, ನೃತ್ಯವನ್ನು ಸಾರ್ವತ್ರೀಕರಿಸಿದರು, ಆದರೆ ಬಾಲ ಸರಸ್ವತಿ ಅವರು ಅನೇಕ ಕಾರಣಗಳಿಗೆ ಬಹಿರಂಗವಾಗಿ ತೆರೆದುಕೊಳ್ಳಲಿಲ್ಲ’’ ಎಂದು ಹೇಳುತ್ತಾರೆ. ಚಂದ್ರಲೇಖ ಅವರು ‘ಸ್ವತಃ ಭರತನಾಟ್ಯವೇ ಕುಟಿಲ ಕಲೆಯಾಗಿದೆ’ ಎನ್ನುತ್ತಾರೆ. ಸದಾನಂದ ಮೆನನ್‌ರಂತಹ ಕಲಾ ವಿಮರ್ಶಕರು ‘‘ಈ ಚರ್ಚೆ ಈಗ ಅಪ್ರಸ್ತುತ’’ ಎನ್ನುತ್ತಾರೆ. ರಮಾ ವೈದ್ಯನಾಥನ್‌ರಂತಹ ಕಲಾವಿದರು ‘‘ದೇವದಾಸಿ-ಬ್ರಾಹ್ಮಣ ಚರ್ಚೆಯು ಮೂವತ್ತರ ದಶಕದ ಕತೆ, ಇಲ್ಲಿ ಬ್ರಾಹ್ಮಣರೇ ಹೆಚ್ಚಿರುವುದರಿಂದ ಎಲ್ಲರಿಗೂ ಅಸೂಯೆಯಾಗಿದೆ’’ ಎನ್ನುತ್ತಾರೆ. ಕೃಷ್ಣಸ್ವಾಮಿ ಎನ್ನುವ ಕಲಾ ಪೋಷಕರು ‘ಬ್ರಾಹ್ಮಿನಿಸಂ ಎನ್ನುವುದೇ ಒಂದು ನಕಲಿ ವಾದ’ ಎನ್ನುತ್ತಾರೆ. ಆದರೆ 2023ರಲ್ಲಿ ಇದೇ ಕಲಾಕ್ಷೇತ್ರದಲ್ಲಿ ನಡೆದ ಜನಾಂಗೀಯ ನಿಂದನೆ, ಲೈಂಗಿಕ ಹಗರಣಗಳು ಯಾವುದೂ ಕೊನೆಗೊಂಡಿಲ್ಲ ಎಂದು ಹೇಳುತ್ತವೆ. ಕಲಾಕ್ಷೇತ್ರದ ಕಳೆದ ದಶಕಗಳ ಕಾರ್ಯ ಚಟುವಟಿಕೆಗಳು ಬ್ರಾಹ್ಮಣೀಕರಣ ಮತ್ತಷ್ಟು ಗಟ್ಟಿಗೊಂಡಿರುವುದಕ್ಕೆ ಉದಾಹರಣೆಯಾಗಿದೆ. ಎಂತಹ ವೈರುಧ್ಯವೆಂದರೆ ಈ ಬ್ರಾಹ್ಮಣ ಮಹಿಳೆಯರಿಗೆ ಸಾದಿರ್ ಪರಂಪರೆಯ ದೇವದಾಸಿ ಕಲಾವಿದರಿಂದ ತರಬೇತಿ ಕೊಡಿಸಿದರು.
‘ಬಾಲ’ ಎನ್ನುವ 31 ನಿಮಿಷಗಳ ಸಾಕ್ಷ್ಯಚಿತ್ರ ಮಾಡಿರುವ ನಿರ್ದೇಶಕ ಸತ್ಯಜಿತ್ ರೇ ಇಡೀ ಚಿತ್ರದಲ್ಲಿ ಸಾದಿರ್ ಪರಂಪರೆ, ಇದರೊಂದಿಗೆ ಗುರುತಿಸಿಕೊಂಡ ದೇವದಾಸಿ ಸಮುದಾಯದ ದುರಂತ ಮತ್ತು ತನ್ನ ಪರಂಪರೆಯ ಅಸ್ಮಿತೆಗಾಗಿ ಹೋರಾಡಿದ ಬಾಲ ಸರಸ್ವತಿಯವರ ಲೆಗಸಿ ಕುರಿತು ಎಲ್ಲಿಯೂ ಮಾತನಾಡುವುದಿಲ್ಲ. ಅವರಿಗೆ ಗೊತ್ತಿಲ್ಲವೆಂದಲ್ಲ, ಬೇಕಾಗಿಲ್ಲ ಎನ್ನುವುದು.
ಉಪ ಸಂಹಾರ
ರುಕ್ಮಿಣಿದೇವಿಯವರ ‘‘ನೀವು ಗೌರವಯುತವಾಗಿದ್ದರೆ ಶೃಂಗಾರವೂ ಗೌರವಯುತವಾಗಿರುತ್ತದೆ, ಇಲ್ಲವಾದರೆ ನಿಮ್ಮ ಶೃಂಗಾರ ಪ್ರದರ್ಶನವೂ ಗೌರವ ಕಳೆದುಕೊಳ್ಳುತ್ತದೆ’’ ಎಂದ ಮಾತುಗಳು ‘ಸಾಂಸ್ಕೃತಿಕ ಹಿಂಸೆ’ಗೆ ಸ್ಪಷ್ಟ ನಿದರ್ಶನವಾಗಿದೆ. ಇವರು ಶೂದ್ರ, ಅತಿಶೂದ್ರ ಸಮುದಾಯದ ಕಲಾವಿದರ ನೃತ್ಯ ಪರಂಪರೆಯನ್ನು ‘ಅಶುದ್ಧ’ ಎನ್ನುವ ಕಥನ ಕಟ್ಟುವುದರ ಮೂಲಕ ಭರತನಾಟ್ಯದಲ್ಲಿ ಚಾತುರ್ವರ್ಣ ವ್ಯವಸ್ಥೆಯನ್ನು ಮರಳಿ ಸ್ಥಾಪಿಸಿದ್ದಾರೆ. 19ನೇ ಶತಮಾನದಲ್ಲಿ ನಾಟ್ಯವನ್ನು ವೃತ್ತಿ ಮತ್ತು ಕಲೆಯಾಗಿ ಅವಲಂಬಿತರಾಗಿದ್ದ ದೇವದಾಸಿ ಮತ್ತು ಹಿಂದುಳಿದ ಮುಸ್ಲಿಮ್ ಜಾತಿಯ ಮಹಿಳೆಯರ ಮೇಲಿನ ಶೋಷಣೆಯನ್ನು ಕೊನೆಗೊಳಿಸುತ್ತೇವೆ ಎನ್ನುವ ‘ಪುನರುಜ್ಜೀವನ’ದ ಕಥನ ಪ್ರಾರಂಭಿಸಲಾಯಿತು. ದುರಂತವೆಂದರೆ ಈ ಪ್ರಕ್ರಿಯೆಯಲ್ಲಿ ಅವರ ಮೇಲೆ ಮತ್ತಷ್ಟು ಕಳಂಕ ಆರೋಪಿಸಿ, ಅವರನ್ನು ಅನ್ಯಗೊಳಿಸಿ ತಮ್ಮದೇ ‘ಶುದ್ಧ ಮಾದರಿ’ ಎಂದು ಹೈಜಾಕ್‌ಮಾಡಿರುವುದರ ಕುರಿತು ಮತ್ತಷ್ಟು ಚರ್ಚೆ ಆಗಬೇಕಿದೆ. ಅದು ಹೇಗೆ ದೇವದಾಸಿ ಪರಂಪರೆಯ ನಾಟ್ಯ ಕಲೆ ಗೌರವ ಕಳೆದುಕೊಂಡು ರುಕ್ಮಿಣೆ ದೇವಿಯವರ ‘ಬ್ರಾಹ್ಮಣಶಾಹಿ ಪರಂಪರೆ’ ಗೌರವ ಗಳಿಸಿತು ಎನ್ನುವುದರ ಕುರಿತು ಚರ್ಚೆಯಾಗಬೇಕಿದೆ. ಸ್ವಾತಂತ್ರ್ಯದ ಹೊಸ್ತಿಲಿನಲ್ಲಿ ದೇವದಾಸಿ ಸಮುದಾಯ ತನ್ನ ಈ ‘ಸಾಂಸ್ಕೃತಿಕ ಬಂಡವಾಳ’ವನ್ನು ಕಳೆದುಕೊಂಡು ಸಂಪೂರ್ಣವಾಗಿ ಬೀದಿಗೆ ಬಂದಿದ್ದು, ಸಾಮಾಜಿಕ ಶೋಷಣೆಗೆ ಒಳಗಾಗಿದ್ದದ್ದು ಎಲ್ಲವೂ ದಾಖಲಾಗಬೇಕಿದೆ. ಈ ಸಾಂಸ್ಕೃತಿಕ ಹಿಂಸೆಗೆ ‘ರಾಷ್ಟ್ರೀಯವಾದಿತನ’ದ ಮುಖವಾಡ ತೊಡಿಸಿ ಬ್ರಾಹ್ಮಣ ಯಾಜಮಾನಕೀಯತೆ ಸ್ಥಾಪಿಸಿದ ಆ ಎಲ್ಲಾ ವಿವರಗಳು ಮರು ವಿಶ್ಲೇಷಣೆಯಾಗಬೇಕಿದೆ.
ವಿ.ಆರ್. ದೇವಿಕಾ ಅವರು ಬರೆದ ‘ರುಕ್ಮಿಣಿ ದೇವಿ ಅರುಂಡೆಲ್ ಆರ್ಟ್ಸ್ ರಿವೈವಲಿಸ್ಟ್ ಆ್ಯಂಡ್ ಇನ್‌ಸ್ಟಿಟ್ಯೂಷನ್ ಬಿಲ್ಡರ್’ ಪುಸ್ತಕ ಬಿಡುಗಡೆಯಾಗಿದೆ. ಇವರು ‘‘ರುಕ್ಮಿಣಿದೇವಿಯವರ ಸಾಧನೆಗಳ ಬಗ್ಗೆ ನಿರ್ದಿಷ್ಟ ವಿಶ್ಲೇಷಣೆಯ ಅಗತ್ಯವಿತ್ತು. ಅವರ ಮೇಲಿನ ಆರೋಪಗಳನ್ನು ಮರು ವ್ಯಾಖ್ಯಾನಗೊಳಿಸುವ ಅಗತ್ಯವಿತ್ತು’’ ಎಂದು ಬರೆದಿದ್ದಾರೆ. ಈ ಪುಸ್ತಕದ ನೆಪದಲ್ಲಿ ಮತ್ತೊಮ್ಮೆ ಸಮಗ್ರ ಚರ್ಚೆಯಾಗಲಿ.
ಮತ್ತೆ ಮಳೆ ಹೊಯ್ಯುತ್ತಿದೆ ಎಲ್ಲಾ ಬಯಲಾಗುತ್ತಿದೆ.