ಆಡುವ ವಯಸ್ಸಿನ ಹೆಣ್ಣುಮಕ್ಕಳ ಹೊಸ ಚಿಂತೆ!

ವಿಜ್ಞಾನಿಗಳ ಪ್ರಕಾರ ಋತುಸ್ರಾವದ ವಯಸ್ಸು ಪ್ರಪಂಚದ ವಿವಿಧ ಖಂಡಗಳ ವಿವಿಧ ದೇಶಗಳ ಮೇಲೆ ಅವಲಂಬಿತವಾಗಿದೆ ಎನ್ನಲಾಗುತ್ತದೆ. ಉದಾಹರಣೆಗೆ ಅಮೆರಿಕ, ಯುರೋಪಿನಲ್ಲಿ ಹೆಣ್ಣುಮಕ್ಕಳ ಋತುಸ್ರಾವದ ವಯಸ್ಸು 14-15. ಆದರೆ ಭಾರತದಲ್ಲಿ ಸರಾಸರಿ ಋತುಸ್ರಾವದ ವಯಸ್ಸು 11-12 ಆಗಿದೆ. ಇತ್ತೀಚಿನ ದಿನಗಳಲ್ಲಿ ಭಾರತವೂ ಸೇರಿದಂತೆ ಕೆಲವು ದೇಶಗಳಲ್ಲಿ ಹೆಣ್ಣುಮಕ್ಕಳ ಸರಾಸರಿ ಋತುಸ್ರಾವದ ವಯಸ್ಸು ಅನಿರೀಕ್ಷಿತವಾಗಿ 8-9 ವಯಸ್ಸಿಗೆ ಇಳಿದಿರುವುದು ಹೆಣ್ಣು ಮಕ್ಕಳ ಪೋಷಕರ ನಿದ್ದೆಗೆಡಿಸಿದೆ.

Update: 2024-07-10 05:50 GMT

ನಾನು ಇತ್ತೀಚೆಗೆ ಕಾರಣ ನಿಮಿತ್ತ ಸ್ನೇಹಿತರ ಮನೆಗೆ ಭೇಟಿ ನೀಡಿದ್ದೆ. ಸ್ನೇಹಿತರಿಗೆ ಇಬ್ಬರು ಹೆಣ್ಣುಮಕ್ಕಳು. ಒಂದಿಷ್ಟು ಸಿಹಿ ತಿನಿಸುಗಳನ್ನು ಕೊಂಡು ಸ್ನೇಹಿತನ ಮನೆ ಬಾಗಿಲುಬಡಿದೆ. ಸ್ನೇಹಿತರು ಬಾಗಿಲು ತೆರೆದು ಸ್ವಾಗತಿಸಿದರು. ಉಭಯ ಕುಶಲೋಪರಿ ನಂತರ ನಾನು ಮಕ್ಕಳ ಬಗ್ಗೆ ವಿಚಾರಿಸಿದೆ. ಸ್ನೇಹಿತರ ಪತ್ನಿಯ ಮುಖ ಬಾಡಿದ್ದನ್ನು ಗಮನಿಸಿದೆ. ನಾನು ಸ್ವಲ್ಪ ಗಾಬರಿಯಾಗಿ ಏನಾಯಿತು ದೊಡ್ಡವಳಿಗೆ ಎಂದು ಕೇಳಿದೆ. ನನಗೆ ಗೊತ್ತಿರೋ ಮಟ್ಟಿಗೆ ಆಕೆ ನಾಲ್ಕು ಅಥವಾ ಐದನೇ ತರಗತಿ ಓದುತ್ತಿದ್ದ ಹೆಣ್ಣು ಮಗು. ವಿಜ್ಞಾನ ಶಿಕ್ಷಕನಾದ ನಾನು ಆ ವಿಚಾರ ಕೇಳಿ ಒಂದು ಕ್ಷಣ ಮೂಕನಾದೆ. ಕೇವಲ ಹತ್ತು ವರ್ಷಕ್ಕೆ ಆ ಹೆಣ್ಣು ಮಗಳಿಗೆ ಋತುಸ್ರಾವ ಆರಂಭವಾಗಿತ್ತು. ಏನು ಹೇಳಬೇಕೋ ನನಗೆ ತೋಚಲಿಲ್ಲ. ಉತ್ಸಾಹದ ಚಿಲುಮೆಯಂತೆ ಆಟ ಆಡುತ್ತಿದ್ದ ಹೆಣ್ಣು ಮಗು ಅಲ್ಲಿ ಎಲ್ಲೂ ಕಾಣುತ್ತಿರಲಿಲ್ಲ. ನನಗೆ ಪರಿಸ್ಥಿತಿ ಅರ್ಥವಾಗಿತ್ತು. ನಾನು ಪೋಷಕರಿಗೆ ತೋಚಿದಷ್ಟು ಸಮಾಧಾನ ಮಾಡಿ ಹೊರಬಂದೆ. ಇದು ಒಂದು ಮನೆಯ ಕತೆಯಲ್ಲ. ಕಳೆದ 20 ವರ್ಷಗಳಲ್ಲಿ ಭಾರತೀಯ ಹೆಣ್ಣುಮಕ್ಕಳಲ್ಲಿ ಋತುಸ್ರಾವದ ಆರಂಭದ ವಯಸ್ಸು ಭಾರೀ ಪ್ರಮಾಣದಲ್ಲಿ ಬದಲಾವಣೆ ಒಳಗಾಗಿದೆ ಎಂದು ಸಂಶೋಧನಾ ವರದಿಗಳು ಸಾರಿ ಸಾರಿ ಹೇಳುತ್ತಿವೆ. ಆದರೆ ಯಾರೂ ಅದನ್ನು ಗಮನಿಸುತ್ತಿಲ್ಲ ಅಷ್ಟೇ.

ಕೆಲ ವರ್ಷಗಳ ಹಿಂದೆ ಅಲ್ಲಲ್ಲಿ ಮೆಲ್ಲನೆ ಕೇಳಿಬರುತ್ತಿದ್ದ ಇಂತಹ ಸುದ್ದಿಗಳು ಈಗ ದಿನನಿತ್ಯದ ಮನೆಮನೆ ಮಾತಾಗಿದೆ. ಮನೆ ಹೆಣ್ಣು ಮಗು 5ನೇ ತರಗತಿ ದಾಟುತ್ತಿದ್ದಂತೆ ತಂದೆ-ತಾಯಿಗಳಿಗೆ ಎದೆಬಡಿತ ಆರಂಭವಾಗುತ್ತದೆ. ಋತುಸ್ರಾವದ ವಯಸ್ಸಿನ ವಿಚಾರದಲ್ಲಿ ಜೈವಿಕ ಮಾನವ ಶಾಸ್ತ್ರಜ್ಞರು ಬಹಳ ವರ್ಷಗಳಿಂದ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ವಿಜ್ಞಾನಿಗಳ ಪ್ರಕಾರ ಋತುಸ್ರಾವದ ವಯಸ್ಸು ಪ್ರಪಂಚದ ವಿವಿಧ ಖಂಡಗಳ ವಿವಿಧ ದೇಶಗಳ ಮೇಲೆ ಅವಲಂಬಿತವಾಗಿದೆ ಎನ್ನಲಾಗುತ್ತದೆ. ಉದಾಹರಣೆಗೆ ಅಮೆರಿಕ, ಯುರೋಪಿನಲ್ಲಿ ಹೆಣ್ಣುಮಕ್ಕಳ ಋತುಸ್ರಾವದ ವಯಸ್ಸು 14-15. ಆದರೆ ಭಾರತದಲ್ಲಿ ಸರಾಸರಿ ಋತುಸ್ರಾವದ ವಯಸ್ಸು 11-12 ಆಗಿದೆ. ಇತ್ತೀಚಿನ ದಿನಗಳಲ್ಲಿ ಭಾರತವೂ ಸೇರಿದಂತೆ ಕೆಲವು ದೇಶಗಳಲ್ಲಿ ಹೆಣ್ಣುಮಕ್ಕಳ ಸರಾಸರಿ ಋತುಸ್ರಾವದ ವಯಸ್ಸು ಅನಿರೀಕ್ಷಿತವಾಗಿ 8-9 ವಯಸ್ಸಿಗೆ ಇಳಿದಿರುವುದು ಹೆಣ್ಣು ಮಕ್ಕಳ ಪೋಷಕರ ನಿದ್ದೆಗೆಡಿಸಿದೆ.

ಹಿಂದಿನ ದಿನಗಳಲ್ಲಿ ಋತುಸ್ರಾವ ಆರಂಭವಾದರೆ ಹೆಣ್ಣು ಮಗು ಮದುವೆಯ ವಯಸ್ಸಿಗೆ ಬಂದಳು ಎಂದೇ ಗುರುತಿಸಲಾಗುತ್ತಿತ್ತು. ಇಂದಿಗೂ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಋತುಸ್ರಾವದ ಸಮಯದಲ್ಲಿ ಹೆಣ್ಣು ಮಗುವಿಗೆ ಮದುವೆಯ ನಿಶ್ಚಯ ಮಾಡಲಾಗುತ್ತದೆ! ಬಾಲಕಿಯೊಬ್ಬಳು ಪರಿಪೂರ್ಣ ಸ್ತ್ರೀಯಾಗಿ ಪರಿವರ್ತನೆ ಹೊಂದುವ ಅತ್ಯಂತ ಸಂಕ್ರಮಣ ಕಾಲವದು. ವಿಜ್ಞಾನದ ಪ್ರಕಾರ ಬಾಲಕಿಯೊಬ್ಬಳು ಅತ್ಯಂತ ಕಡಿಮೆ ವಯಸ್ಸಿಗೆ ಋತುಸ್ರಾವದ ಹಂತಕ್ಕೆ ಬರುವುದಕ್ಕೆ ಹತ್ತು ಹಲವಾರು ಕಾರಣಗಳಿವೆ. ಇದಕ್ಕೆ ನಮ್ಮಜೀವನ ಶೈಲಿ, ಆಹಾರ ಪದ್ಧತಿ ಮತ್ತು ಇತರ ಬಾಹ್ಯ ಅಂಶಗಳು ಅನೇಕ ರೀತಿಯಲ್ಲಿ ಕಾರಣವಾಗುತ್ತಿವೆ. ಇನ್ನೂ ಒಂದು ಆಶ್ಚರ್ಯದ ಸಂಗತಿಯೆಂದರೆ ಇತ್ತೀಚಿನ ಕೊರೋನ ಸಮಸ್ಯೆಯೂ ಇದಕ್ಕೆ ಪರೋಕ್ಷವಾಗಿ ಕಾರಣವೆಂದು ಹೇಳಲಾಗುತ್ತಿದೆ.

ವಿಜ್ಞಾನದ ಪ್ರಕಾರ ಈ ಸಮಸ್ಯೆಗೆ ಮೂಲಭೂತ ಕಾರಣ ನಾವು ಅನುಸರಿಸುತ್ತಿರುವ ಆಹಾರ ಪದ್ಧತಿ ಮತ್ತು ಕಲುಷಿತ ವಾತಾವರಣ. ಇಂದು ಮನೆಯೊಂದರ ಆಹಾರ ಪದ್ಧತಿಯನ್ನು ಮಕ್ಕಳು ನಿರ್ಣಯ ಮಾಡುತ್ತಿದ್ದಾರೆ! ಪ್ರತಿಯೊಂದು ಅಡುಗೆಮನೆಯಲ್ಲಿ ಮತ್ತು ರೆಫ್ರಿಜರೇಟರ್‌ಗಳಲ್ಲಿ ಕೇವಲ ಕೃತಕ ಆಹಾರ ಮತ್ತು ಫಾಸ್ಟ್‌ಫುಡ್ ತುಂಬಿಕೊಂಡಿವೆ. ಮನೆಗಳಲ್ಲಿ ಅಡುಗೆ ಮಾಡುವುದು ನಿಧಾನವಾಗಿ ಕಡಿಮೆಯಾಗಿದೆ. ಅಡುಗೆ ಮನೆಗಳಲ್ಲಿ ಇಂಗು, ತೆಂಗುಗಳು ಮರೆಯಾಗಿ ವರ್ಷಗಳೇ ಕಳೆದುಹೋಗಿವೆ. ಭಾರತೀಯ ಸಾಂಪ್ರದಾಯಿಕ ಅಡುಗೆಗಳು ಇಂದು ಕೇವಲ ದಂತಕಥೆಗಳಾಗಿವೆ. ಪ್ರೊಸೆಸ್ಡ್ ಆಹಾರಗಳಲ್ಲಿ ತುಂಬಿಕೊಂಡಿರುವ ರಾಸಾಯನಿಕ ವಸ್ತುಗಳು ನಮ್ಮ ದೇಹದ ಹಾರ್ಮೋನ್‌ಗಳನ್ನು ಮತ್ತು ಕಿಣ್ವಗಳನ್ನು ವಿಚಿತ್ರರೀತಿಯಲ್ಲಿ ಕೆಣಕುತ್ತಿವೆ. ಇದರೊಂದಿಗೆ ಕೃತಕವಾಗಿ ರಾಸಾಯನಿಕಗಳನ್ನು ಬೆರೆಸಿ ಬೆಳೆಸುವ ಕೋಳಿ ಮತ್ತು ಕುರಿಗಳ ಮಾಂಸಗಳ ಅತಿಯಾದ ಬಳಕೆ ಸಹ ದೇಹದ ಮೇಲೆ ಭಾರೀ ರೀತಿಯಲ್ಲಿ ಋಣಾತ್ಮಕ ಪರಿಣಾಮ ಬೀರುತ್ತಿದೆ. ಕೆಲವು ತಜ್ಞರು ಜಂಕ್‌ಫುಡ್‌ಗಳ ಅತಿಯಾದ ಸೇವನೆ ಇದಕ್ಕೆಲ್ಲ ಮುಖ್ಯಕಾರಣ ಎಂದು ಖಂಡಿತವಾಗಿ ಹೇಳುತ್ತಾರೆ. ಆಯಾ ದೇಶಗಳ ಭೌಗೋಳಿಕ ಅಂಶಗಳು ಸಹ ಒಂದು ಕಾರಣ.

ಇದರೊಂದಿಗೆ ಕಡಿಮೆಯಾಗುತ್ತಿರುವ ಹೆಣ್ಣುಮಕ್ಕಳ ದೈಹಿಕ ಚಟುವಟಿಕೆಗಳು ಇನ್ನೊಂದು ಪ್ರಮುಖ ಕಾರಣವೆಂದು ಗುರುತಿಸಲಾಗಿದೆ. ಸಾಮಾನ್ಯವಾಗಿ ಇಂದಿಗೂ ಕೆಲವು ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಹೆಣ್ಣು ಮಕ್ಕಳ ದೈಹಿಕ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ. ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಅವಧಿಯಲ್ಲಿ ಸಹ ಹೆಣ್ಣುಮಕ್ಕಳು ತರಗತಿ ಒಳಗಡೆ ಕುಳಿತಿರುತ್ತಾರೆ ಹಾಗೂ ಮನೆಯಲ್ಲಿಯೂ ಹೆಚ್ಚಿನ ಹೆಣ್ಣುಮಕ್ಕಳ ಪೋಷಕರು ಮಕ್ಕಳನ್ನು ಹೊರಗೆ ಆಟ ಆಡಲು ಬಿಡುವುದಿಲ್ಲ. ಇದು ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಈ ರೀತಿ ದೈಹಿಕ ಚಟುವಟಿಕೆಗಳ ಕೊರತೆ ಸಹ ಹೆಣ್ಣುಮಕ್ಕಳು ಬೇಗ ಋತುಸ್ರಾವಕ್ಕೆ ಒಳಗಾಗುವ ಸಾಧ್ಯತೆಯನ್ನು ಉಂಟು ಮಾಡುತ್ತದೆ ಎನ್ನುತ್ತಾರೆ ವೈದ್ಯರು. ಶೈಕ್ಷಣಿಕ ಓಟದ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ಉಂಟಾಗುವ ಮಾನಸಿಕ ಒತ್ತಡ ಸಹ ಇದಕ್ಕೆ ಇನ್ನೊಂದು ಕಾರಣ ಎನ್ನುತ್ತಾರೆ ಮಾನಸಿಕ ತಜ್ಞರು. ಇದರೊಂದಿಗೆ ತಂದೆತಾಯಿಗಳ ಜೈವಿಕ ಮತ್ತು ಜೆನೆಟಿಕ್ಸ್ ಅಂಶಗಳು ಸಹ ಕಾರಣವಾಗುತ್ತವೆ. ವಾತಾವರಣದಲ್ಲಿ ಉಂಟಾಗುತ್ತಿರುವ ಏರುಪೇರುಗಳು ದೈಹಿಕ ಬೆಳವಣಿಗೆಯ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮವನ್ನು ಉಂಟು ಮಾಡುತ್ತಿದೆ. ಅಲ್ಲದೆ ಇತ್ತೀಚಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಲೈಂಗಿಕ ವಿಚಾರದಲ್ಲಿ ಕುರಿತಾದ ಮಾಹಿತಿಗಳು ಅತಿ ಸುಲಭವಾಗಿ ಮಕ್ಕಳಿಗೆ ದೊರಕುತ್ತಿದೆ. ಕೊರೋನ ಸಮಯದಲ್ಲಿ ಉಂಟಾದ ಅನಿರೀಕ್ಷಿತ ಲಾಕ್‌ಡೌನ್ ಸಹ ಮಕ್ಕಳಲ್ಲಿ ದೈಹಿಕ ಚಟುವಟಿಕೆಗಳನ್ನು ಸಾಕಷ್ಟು ಕುಂಠಿತಗೊಳಿಸಿವೆ. ಈ ಎಲ್ಲಾ ಕಾರಣಗಳಿಂದ ಎಳೆಯ ವಯಸ್ಸಿನ ಹೆಣ್ಣುಮಕ್ಕಳ ದೇಹವು ಅನಿರೀಕ್ಷಿತವಾಗಿ ವಯಸ್ಕ ದೇಹದಂತೆ ವರ್ತಿಸಲು ಆರಂಭವಾಗುತ್ತದೆ. ದೇಹದಲ್ಲಿನ ಹಾರ್ಮೋನುಗಳು ನಿಯಂತ್ರಣ ಮೀರಿ ವರ್ತಿಸುತ್ತವೆ. ತನ್ನ ದೇಹದ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವ ಮುಂಚಿತವಾಗಿಯೇ ಹೆಣ್ಣುಮಕ್ಕಳು ಋತುಸ್ರಾವದ ಬಲೆಗೆ ಬೀಳುತ್ತಾರೆ.

ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಈ ಕುರಿತು ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು ಅತಿಚಿಕ್ಕ ವಯಸ್ಸಿನಲ್ಲಿ ಋತುಸ್ರಾವ ಆರಂಭವಾದರೆ ಮುಂದೆ ಅಂತಹ ಹೆಣ್ಣುಮಕ್ಕಳ ಆರೋಗ್ಯ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟುಮಾಡಬಹುದು ಎನ್ನುವ ಅಂಶಗಳು ಬೆಳಕಿಗೆ ಬರುತ್ತಿವೆ. ಇಂತಹ ಹೆಣ್ಣುಮಕ್ಕಳು ಮುಂದೆ ಎರಡನೇ ವಿಧದ ಸಕ್ಕರೆ ಕಾಯಿಲೆಗೆ ಒಳಗಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ಕೆಲವು ವಿಜ್ಞಾನಿಗಳು. ಅಲ್ಲದೆ ಇಂತಹ ಹೆಣ್ಣು ಮಕ್ಕಳು 38-40 ವಯಸ್ಸಿಗೆಲ್ಲ ರಜೋ ನಿವೃತ್ತಿ ಅಥವಾ ಮೆನೋಪಾಸ್‌ಗೆ ಒಳಗಾಗುವ ಸಾಧ್ಯತೆ ಇರುತ್ತದೆ ಮತ್ತು ಇಂತಹವರಲ್ಲಿ ಕ್ರಮೇಣ ಲೈಂಗಿಕ ಆಸಕ್ತಿಯೂ ಕಡಿಮೆಯಾಗಿ ಅದು ಮತ್ತೊಂದು ಸಮಸ್ಯೆಗೆ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು. ಅದಕ್ಕಿಂತ ಮುಖ್ಯವಾಗಿ ಮುಂದೆ ಹೆರಿಗೆ ಸಮಯದಲ್ಲಿ ಸಹ ಕೆಲವು ಕ್ಲಿಷ್ಟಕರ ಸಂದರ್ಭಗಳು ಬರಬಹುದು ಎನ್ನಲಾಗುತ್ತಿದೆ. ಇಂಥ ಮಹಿಳೆಯರಲ್ಲಿ ಮುಂದೆ ಹಾರ್ಮೋನ್ ವ್ಯತ್ಯಾಸಗಳು ಉಂಟಾಗಿ ಅದು ಇನ್ನೊಂದು ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರವೆಂದರೆ ಮೇಲ್ಕಂಡ ಸಮಸ್ಯೆಗಳು ಎಲ್ಲರಲ್ಲೂ ಉಂಟಾಗುತ್ತದೆ ಎಂದು ಅರ್ಥವಲ್ಲ. ಆದರೆ ಸಾಧ್ಯತೆಗಳನ್ನು ನಾವು ಅಲ್ಲಗಳೆಯುವಂತಿಲ್ಲ. ಇವೆಲ್ಲವೂ ಮಹಿಳೆಯನ್ನು ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಿಂದ ದೂರ ಮಾಡುತ್ತದೆ.

ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳ ಹೆಣ್ಣುಮಕ್ಕಳಲ್ಲಿ ಋತುಸ್ರಾವದ ವಿಚಾರ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವಿಚಾರಗಳನ್ನು ಅಡಗಿಸಿಕೊಂಡಿದೆ. ಕೆಲವು ಆದಿವಾಸಿ ಪರಿಸರದಲ್ಲಿ ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳು ಗುಡಿಸಲಿನ ಹೊರಗಡೆ ಕೆಲವು ದಿನ ಕಳೆಯಬೇಕಾದ ಉದಾಹರಣೆಗಳನ್ನು ನಾವು ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇವೆ. ಇನ್ನು ಕೆಲವು ಸಮುದಾಯಗಳಲ್ಲಿ ಬಡತನದ ಕಾರಣದಿಂದ ಋತುಸ್ರಾವದ ವಿಚಾರವನ್ನು ವೈಜ್ಞಾನಿಕವಾಗಿ ನಿರ್ವಹಿಸದೆ ಹೆಣ್ಣುಮಕ್ಕಳು ಮುಂದೆ ಸಂತಾನೋತ್ಪತ್ತಿ ವಿಚಾರದಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ ಎನ್ನುತ್ತಾರೆ ಸ್ತ್ರೀರೋಗ ತಜ್ಞರು. ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಯದಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಇಷ್ಟಪಡುವುದಿಲ್ಲ. ಇನ್ನು ಕೆಲವು ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಹೆಣ್ಣು ಈ ಹಂತಕ್ಕೆ ಬಂದ ತಕ್ಷಣವೇ ಮದುವೆ ನೆರವೇರಿಸುವ ಸಂಪ್ರದಾಯ ಕಂಡೂಕಾಣದಂತೆ ನಡೆಯುತ್ತಿದೆ. ಇಂತಹ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಆಗುವ ಮದುವೆಗಳು ಆಕೆಯ ಆರೋಗ್ಯದ ಮೇಲೆ ಭವಿಷ್ಯದಲ್ಲಿ ಬಹಳ ಪರಿಣಾಮ ಬೀರುತ್ತದೆ. ಮಹಿಳೆಯರು ಅತ್ಯಂತ ಗಂಭೀರವಾದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಇದು ಚಿಕ್ಕವಯಸ್ಸಿನಲ್ಲೇ ಅವರುಗಳ ಋತುಬಂಧ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಭಾರತದಲ್ಲಿ ಋತುಸ್ರಾವದ ಕುರಿತಾಗಿ ವೈಜ್ಞಾನಿಕ ಆಲೋಚನೆಗಳು, ಆಚರಣೆಗಳು ಮತ್ತು ಪದ್ಧತಿಗಳಿವೆ. ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಋತುಸ್ರಾವದ ವಿಚಾರದಲ್ಲಿ ವಿಚಿತ್ರವಾದ ಆಚರಣೆಗಳಿವೆ. ಕೆಲವೊಂದು ಅಂಶಗಳು ನಮ್ಮ ಕೈಯಲ್ಲಿ ಇಲ್ಲದಿರುವುದರಿಂದ ನಾವು ಮುಂಜಾಗ್ರತೆ ವಹಿಸುವುದರ ಮೂಲಕ ಒಂದು ಮಟ್ಟಿಗೆ ಈ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಪೋಷಕರು ಮುಖ್ಯವಾಗಿ ಮಕ್ಕಳು ಬಳಸುವ ಆಹಾರ ವಿಚಾರದಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಬೇಕಾಗುತ್ತದೆ. ಹೆಚ್ಚಿನ ಪ್ರೊಟೀನ್ ಪದಾರ್ಥಗಳು, ಜಂಕ್ ಆಹಾರ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಸಬೇಕು. ತಾಯಿ ಅತಿಚಿಕ್ಕ ವಯಸ್ಸಿನಲ್ಲಿ ಋತುಸ್ರಾವಕ್ಕೆ ಒಳಗಾಗಿದ್ದರೆ ಆಕೆಯ ಮಗಳು ಕೂಡಾ ಅತಿಚಿಕ್ಕ ವಯಸ್ಸಿನಲ್ಲಿ ಋತುಸ್ರಾವಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ ಎನ್ನುತ್ತವೆ ಸಂಶೋಧನೆಗಳು. ಇಂತಹ ಸಂದರ್ಭಗಳಲ್ಲಿ ಅವರು ಸಾಕಷ್ಟು ಮುಂಚಿತವಾಗಿ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

ಅತಿಚಿಕ್ಕ ವಯಸ್ಸಿನಲ್ಲಿ ಋತುಸ್ರಾವಕ್ಕೆ ಒಳಗಾದರೆ ಪೋಷಕರು ಮಗಳಿಗೆ ಧೈರ್ಯ ಹೇಳಿ ಆಕೆ ಮುಂದೆ ಮಾನಸಿಕ ಖಿನ್ನತೆಗೆ ಒಳಗಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಮುಖ್ಯವಾಗಿ ಅಕ್ಕಪಕ್ಕದವರು, ಸ್ನೇಹಿತರು, ಸಂಬಂಧಿಕರು ಇದರ ಬಗ್ಗೆ ಏನು ಎಂದುಕೊಳ್ಳುತ್ತಾರೆ ಎನ್ನುವ ಕುರಿತು ಯಾವ ಪೋಷಕರು ಯಾವ ಕಾರಣಕ್ಕೂ ಚಿಂತಿಸಬಾರದು. ಮಗಳಿಗೆ ಧೈರ್ಯ ಹೇಳಿ, ಇದರ ಹಿಂದಿನ ವೈಜ್ಞಾನಿಕತೆಯನ್ನು ವಿವರಿಸಿ ಆಕೆಯನ್ನು ಮಾನಸಿಕವಾಗಿ ಸದೃಢಗೊಳಿಸಬೇಕು. ಅವಶ್ಯವಿದ್ದಲ್ಲಿ ತಜ್ಞರಿಂದ ಆಪ್ತ ಸಮಾಲೋಚನೆಯನ್ನು ಮಾಡಿಸಬಹುದು. ಋತುಸ್ರಾವ ಜೀವನದ ಒಂದು ಅವಿಭಾಜ್ಯ ಅಂಗ ಎನ್ನುವುದನ್ನು ಮಗಳಿಗೆ ಮನದಟ್ಟು ಮಾಡಿಕೊಡಬೇಕಾಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳು ಏನನ್ನು ನೋಡುತ್ತಿದ್ದಾರೆ ಎನ್ನುವುದರ ಕುರಿತೂ ಮುಂಜಾಗ್ರತೆ ವಹಿಸಬೇಕಾಗುತ್ತದೆ. ಮಗಳೊಂದಿಗೆ ಈ ವಿಚಾರದಲ್ಲಿ ಚರ್ಚಿಸಲು ಯಾವುದೇ ಹಿಂಜರಿಕೆ ಬೇಡ. ಋತುಸ್ರಾವದ ವೈಜ್ಞಾನಿಕ ನಿರ್ವಹಣೆಯನ್ನು ಆಕೆಗೆ ಕಲಿಸಿಕೊಡುವುದರಲ್ಲಿ ತಾಯಿಯ ಪಾತ್ರ ಮಹತ್ವವಾದದ್ದು.

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಡಿ.ಸಿ.ನಂಜುಂಡ

contributor

Similar News