ಕನಿಷ್ಠ ವೇತನ ದರ ಪಟ್ಟಿ: ನಿಯಮ ಪಾಲಿಸದ ಪೆಟ್ರೋಲ್ ಪಂಪ್ ಮಾಲಕರು
ಬೆಂಗಳೂರು, ಸೆ.29: 2024-25ನೇ ಸಾಲಿನ ಕನಿಷ್ಠ ವೇತನ ದರಗಳ ಪಟ್ಟಿಯನ್ನು ರಾಜ್ಯ ಸರಕಾರವು ಪ್ರಕಟಿಸಿದ್ದು, ಪೆಟ್ರೋಲ್, ಡೀಸೆಲ್, ತೈಲ ಮತ್ತು ಎಲ್‌ಪಿಜಿ ಉದ್ಯಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೂತನ ದರಪಟ್ಟಿಯಂತೆ ವೇತನವನ್ನು ನೀಡುತ್ತಿಲ್ಲ. ಪೆಟ್ರೋಲ್ ಪಂಪ್ ಕಾರ್ಮಿಕರಿಗೆ 16ಸಾವಿರ ರೂ. ಮಾಸಿಕ ವೇತನ ನೀಡಬೇಕೆನ್ನುವ ನಿರ್ದೇಶನ ಇದ್ದರೂ, ಕಾರ್ಮಿಕರಿಗೆ ಕೇವಲ 12ಸಾವಿರ ರೂ. ಮಾತ್ರ ವೇತನ ನೀಡಲಾಗುತ್ತಿದೆ. ಹೀಗಾಗಿ ಕಾರ್ಮಿಕರ ಜೀವನ ಶೋಚನೀಯ ಸ್ಥಿತಿಗೆ ತಲುಪಿದೆ.
ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕೆನ್ನುವುದು ಸಂವಿಧಾನದ ಆಶಯವಾಗಿದ್ದು, ಈ ಕುರಿತು ಸುಪ್ರೀಂಕೋರ್ಟ್ ಆದೇಶಗಳನ್ನು ಹೊರಡಿಸಿದೆ. ಆದರೆ, ಅಸಂಘಟಿತ ಕಾರ್ಮಿಕ ವಲಯದಲ್ಲಿ ಕನಿಷ್ಠ ವೇತನ ನೀಡದೆ, ಗುಲಾಮರಂತೆ ದುಡಿಸಿಕೊಂಡು ಕಾರ್ಮಿಕರ ಶ್ರಮವನ್ನು ದೋಚುತ್ತಿರುವ ಕ್ಷೇತ್ರಗಳನ್ನು ಇನ್ನು ನೋಡಬಹುದಾಗಿದೆ. ಅಂತಹದ್ದೇ ಕ್ಷೇತ್ರಗಳಲ್ಲಿ ಒಂದು ಪೆಟ್ರೋಲ್ ಪಂಪ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕ ಕ್ಷೇತ್ರ.
ಉದ್ಯಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಗರಿಷ್ಟ ಅವಧಿಯನ್ನು 8 ಗಂಟೆಗಳಿಗೆ ನಿಗಧಿ ಮಾಡಲಾಗಿದೆ. ಆದರೆ ಪೆಟ್ರೋಲ್ ಪಂಪ್‌ಗಳಲ್ಲಿ 12 ರಿಂದ 18 ಗಂಟೆ ಕೆಲಸ ಮಾಡುತ್ತಿದ್ದರೂ, ಕನಿಷ್ಠ ವೇತನ ನೀಡದೆ ಮಾಸಿಕ ವೇತನವನ್ನು ಕೇವಲ 12 ಸಾವಿರ ರೂ.ಗಳಿಗೆ ಸೀಮಿತಗೊಳಿಸಲಾಗಿದೆ.
ಪೆಟ್ರೋಲ್ ಪಂಪ್‌ಗಳಲ್ಲಿ ದುಡಿಸಿಕೊಳ್ಳುತ್ತಿರುವ ಮಾಲಕರು, ಕಾರ್ಮಿಕ ಕಾಯ್ದೆಗಳನ್ನು ಗಾಳಿಗೆ ತೂರಿ, ಕಾರ್ಮಿಕರನ್ನು ಗುಲಾಮರಂತೆ ಶೋಚನೀಯವಾಗಿ ಕನಿಷ್ಠ ವೇತನವೂ ನೀಡದೆ ಕಾರ್ಮಿಕರ ಶ್ರಮ ಲೂಟಿ ಮಾಡುತ್ತಿದ್ದಾರೆ. ಕಾರ್ಮಿಕರು ಮಾನಸಿಕ ಒತ್ತಡದಿಂದಾಗಿ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ಮಾಸಿಕ 12ಸಾವಿರ ರೂ. ವೇತನ ನೀಡಿದರೆ ಬೆಂಗಳೂರಿನಂತಹ ಮಹಾನಗರದಲ್ಲಿ ಬದುಕುವುದಕ್ಕೆ ಸಾಧ್ಯವಿಲ್ಲ. ಜೀವನ ನಡೆಸಬೇಕೆನ್ನುವ ಅನಿವಾರ್ಯತೆಯಿಂದ ಹಲವು ಕಾರ್ಮಿಕರು ದಿನಕ್ಕೆ 16ಗಂಟೆ ಕೆಲಸ ಮಾಡುತ್ತಿರುವರನ್ನು ನೋಡಬಹುದು.
ಈ ಕ್ಷೇತ್ರದಲ್ಲಿ ಕೆಲಸ ಮಾಡುವರು ದಲಿತ ಸಮುದಾಯಕ್ಕೆ ಸೇರಿದ ಮತ್ತು ಆರ್ಥಿಕವಾಗಿ ಹಿಂದುಳಿದವರೆ ಆಗಿದ್ದಾರೆ. ಬಹುತೇಕ ಕಾರ್ಮಿಕರೆಲ್ಲರೂ ಉತ್ತರ ಕರ್ನಾಟಕ ಮತ್ತು ಗ್ರಾಮೀಣ ಭಾಗಗಳಿಂದ ಬಂದಿರುವರು. ಮಹಿಳಾ ಕಾರ್ಮಿಕರಲ್ಲಿ ಬಹುತೇಕರು ಸಿಂಗಲ್ ಪೇರೆಂಟ್. ಕಡಿಮೆ ವಿದ್ಯಾಭ್ಯಾಸ ಪಡೆದವರು ಅಥವಾ ಅವಿಧ್ಯಾವಂತರೇ ಆಗಿದ್ದಾರೆ. ಇಲ್ಲಿ ಕೆಲಸ ಮಾಡುವ ಯಾರಿಗೂ ಕಾರ್ಮಿಕ ಕಾಯ್ದೆಗಳ ಬಗ್ಗೆ ಅರಿವು ಇಲ್ಲ.
ನೂರಾರು ಕಿ.ಮೀ. ದೂರದಿಂದ ನಗರಕ್ಕೆ ಕೆಲಸ ಹುಡುಕಿಕೊಂಡು, ಜೀವನ ನಡೆಸಬೇಕೆನ್ನುವ ಕನಸು ಹೊತ್ತು ಬಂದ ಕಾರ್ಮಿಕರು ಪೆಟ್ರೋಲ್ ಪಂಪ್‌ಗಳಲ್ಲಿ ಕೆಲಸಕ್ಕೆ ಸೇರಿಕೊಂಡರೆ, 12ಸಾವಿರ ರೂ. ವೇತನದಿಂದ ಬದುಕುವುದಾದರೂ ಹೇಗೆ? ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುವುದಾದರೂ ಹೇಗೆ? ಎನ್ನುವ ಪ್ರಶ್ನೆ ಕಾಡುತ್ತದೆ.
ಕೆಲವು ಪೆಟ್ರೋಲ್ ಪಂಪ್‌ಗಳಲ್ಲಿ ಮಹಿಳಾ ಕಾರ್ಮಿಕರಿಗೆ ಪ್ರತ್ಯೇಕ ಶೌಚಾಲಯಗಳೆ ಇರುವುದಿಲ್ಲ. ಕೆಲಸ ಮಾಡುವವರಿಗೂ, ಗ್ರಾಹಕರಿಗೂ, ಮಹಿಳೆಯರಿಗೂ, ಪುರಷರಿಗೂ ಒಂದೆ ಎನ್ನುವ ರೀತಿಯಲ್ಲಿ ಇರುತ್ತದೆ. ಪೆಟ್ರೋಲ್ ಪಂಪ್‌ಗಳಲ್ಲಿ ಎಲ್ಲ ರೀತಿಯ ಮೂಲಸೌಕರ್ಯಗಳು ಇದೆಯೇ? ಇಲ್ಲವೇ? ಎನ್ನುವುದನ್ನು ಸರಕಾರ ಗಮನ ಹರಿಸಬೇಕು. ಕೆಲಸ ಮಾಡುವ ಕಾರ್ಮಿಕರಿಗೆ ಕಾರ್ಮಿಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು. ಕೆಲಸ ಮಾಡುವ ಕ್ಷೇತ್ರದಲ್ಲಿ ಕಾರ್ಮಿಕರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಕಾರ್ಮಿಕ ಹಕ್ಕುಗಳ ನಾಮ ಫಲಕಗಳನ್ನು ಪ್ರದರ್ಶಿಸಬೇಕು.
ಬೆಳಗ್ಗೆ 5:30ಕ್ಕೆ ಪೆಟ್ರೋಲ್‌ಪಂಪ್ ಮಿಷನ್ ಆನ್ ಮಾಡಿದರೆ, ರಾತ್ರಿ 12ಗಂಟೆಗೆ ಮುಚ್ಚುತ್ತೇವೆ. ವಾರಕ್ಕೆ ಒಂದು ದಿನ ಮಾತ್ರ ರಜೆ ಕೊಡುತ್ತಾರೆ. ನಿತ್ಯ 12-15 ಗಂಟೆ ಕೆಲಸ ಮಾಡಿದರೂ ನಮಗೆ 15 ಸಾವಿರ ರೂ. ಮಾತ್ರ ಸಂಬಳ ಸಿಗುತ್ತದೆ. ಹೆಚ್ಚಿಗೆ ಹಣ ಕೇಳಿದರೆ ನಿಮಗೆ ಉಳಿದುಕೊಳ್ಳಲು ಜಾಗ ಕೊಟ್ಟಿರುವುದರಿಂದ ಅಷ್ಟೆ ಕೊಡುವುದಕ್ಕೆ ಸಾಧ್ಯ ಎಂದು ಹೇಳುತ್ತಾರೆ. ಯಾವುದೆ ರೀತಿಯ ಪಿ.ಎಫ್, ಇಎಸ್‌ಐ, ವಿಮೆ ತರದ ಸೇವೆಗಳು ನೀಡುವುದಿಲ್ಲ.
-ಕಿರಣ್, ಪೆಟ್ರೋಲ್ ಪಂಪ್ ಕಾರ್ಮಿಕ
ಅಸಂಘಟಿತ ಕಾರ್ಮಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ವಲಯ ಕಾರ್ಮಿಕರಿಗೂ ಕಾರ್ಮಿಕರ ಕಾನೂನುಗಳನ್ನು ಅನುಸರಿಸುತ್ತಿಲ್ಲ. ಕಾರ್ಮಿಕ ಹಕ್ಕುಗಳನ್ನು ಅಸಂಘಟಿತ ವಲಯದವರಿಗೆ ನೀಡದೇ ಇದ್ದರೂ, ನಮ್ಮನ್ನು ಕೇಳುವರು ಯಾರು ಇಲ್ಲ ಎನ್ನುವ ಮನಸ್ಥಿತಿಯಲ್ಲಿ ಮಾಲಕರಿದ್ದಾರೆ. ಪೆಟ್ರೋಲ್ ಪಂಪ್‌ಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಜೀತಪದ್ಧತಿಗಿಂತ ಖಂಡನೀಯವಾಗಿ ಅವರ ಶ್ರಮವನ್ನು ದೋಚಿಕೊಳ್ಳುತ್ತಿದ್ದಾರೆ. ಅವರಿಗೆ ನಿರ್ದಿಷ್ಟ ಸಮಯ ನಿಗದಿ ಮಾಡದೇ ಇರುವುದನ್ನು ಗಮನಿಸಿದಾಗ, ಅವರ ಉದ್ಯೋಗಕ್ಕೆ ಯಾವುದೇ ಭದ್ರತೆ ಇಲ್ಲ ಎನ್ನುವುದು ಖಾತ್ರಿಯಾಗುತ್ತದೆ. ಸರಕಾರ ಪೆಟ್ರೋಲ್ ಪಂಪ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸುರಕ್ಷತೆಯನ್ನು ಖಾತ್ರಿ ಮಾಡಿಕೊಡಬೇಕು ಮತ್ತು ಕನಿಷ್ಠ ವೇತನ ಜಾರಿ ಮಾಡಬೇಕು.
-ರವಿ ಮೋಹನ್,
ರಾಜ್ಯಾಧ್ಯಕ್ಷ, ಶ್ರಮಿಕ ಶಕ್ತಿ ಸಂಘಟನೆ
ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಂಡು ನಮಗೆ ದೂರು ನೀಡಿ ಎಂದು ಹೇಳಿ ಸುಮ್ಮನೆ ಕೂರುವುದಲ್ಲ. ಅಸಂಘಟಿತ ವಲಯದ ಕಾರ್ಮಿಕರನ್ನು ಒಳಗೊಂಡಂತೆ ಎಲ್ಲ ಕ್ಷೇತ್ರಗಳಿಗೂ ಭೇಟಿ ನೀಡಿ ಆಯಾ ಕ್ಷೇತ್ರದಲ್ಲಿ ಕಾನೂನು ಉಲ್ಲಂಘನೆ ಆಗುತ್ತಿದೆಯೇ? ಕಾರ್ಮಿಕ ಕಾನೂನುಗಳನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡಿದ್ದಾರೆಯೇ? ಎಲ್ಲ ಕಾರ್ಮಿಕ ಕ್ಷೇತ್ರದಲ್ಲಿಯೂ ಬೋನಸ್ ಹಣ ನೀಡಬೇಕಾಗಿದೆ. ಇದು ನೀಡುತ್ತಿದ್ದಾರೆಯೇ? ಇಲ್ಲವೇ ಎನ್ನುವುದನ್ನು ಪರಿಶೀಲಿಸಬೇಕು.
-ಮೈತ್ರಿ ಕೃಷ್ಣನ್, ವಕೀಲೆ