ನಮ್ಮ ಸಮಸ್ಯೆಗಳನ್ನು ಕೇಳುವವರೇ ಇಲ್ಲ
ಪಿರಿಯಾಪಟ್ಟಣ: ವಸತಿ ಮತ್ತು ವಿದ್ಯುತ್ ದೀಪಗಳು ಸೇರಿದಂತೆ ಯಾವುದೇ ಮೂಲ ಸೌಲಭ್ಯವಿಲ್ಲದೇ ವಂಚಿತರಾಗಿರುವ ನಮ್ಮ ಸಮಸ್ಯೆಗಳನ್ನು ಕೇಳುವವರೇ ಇಲ್ಲ ಎಂದು ಸೋಲಿಗ ಜನಾಂಗದವರು ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಆನಂದನಗರ (ಗೌಡನ ಕಟ್ಟೆ) ಗಿರಿಜನ ಹಾಡಿಯಲ್ಲಿ ಸುಮಾರು 16 ಕುಟುಂಬಗಳು ಕಳೆದ 70 ವರ್ಷಗಳಿಂದ ಜೀವನ ನಡೆಸುತ್ತಿರುವ ನಾವುಗಳು ಸ್ಮಶಾನ ಮತ್ತು ದೇವಾಲಯಕ್ಕಾಗಿ ಉಳಿಸಿಕೊಂಡಿರುವ ಜಾಗವನ್ನು ಅತಿಕ್ರಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಜೆಸಿಬಿ ಯಂತ್ರಗಳಿಂದ ಇಲ್ಲಿರುವ ಮರಗಳನ್ನು ನಾಶ ಮಾಡಿ ನಮಗೆ ನೆರಳು ಇಲ್ಲದಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರು ಆಗಿರುವ ಕೆ.ವೆಂಕಟೇಶ್ ಅವರು ಏಳು ವರ್ಷಗಳ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಅನುಸೂಚಿತ ಬುಡಕಟ್ಟುಗಳ ಮತ್ತು ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಗಳ ಮಾನ್ಯತೆ ನಿಯಮಗಳು 2008ರ 8 (ಎಚ್) ನಿಯಮದಡಿ ಸಮುದಾಯಕ್ಕೆ ಅರಣ್ಯ ಸಂಪನ್ಮೂಲಗಳಿಗೆ ಹಕ್ಕು ಪತ್ರ ನೀಡಿದ್ದಾರೆ.
ಈ ಜಾಗದಲ್ಲಿರುವ ಶ್ರೀಮುದ್ದುರಮ್ಮ ಮತ್ತು ಶ್ರೀಹುಲ್ಲುರಮ್ಮ ಎಂಬ ಎರಡು ದೇವಾಲಯಗಳಿಗೆ ಈ ಹಾಡಿಯ ಜನರಲ್ಲದೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಇಲ್ಲಿಗೆ ಬಂದು ಶುಭಕಾರ್ಯಗಳನ್ನು ನಡೆಸಿಕೊಂಡು ಹೋಗುವ ಉದ್ದೇಶದಿಂದ ಒಂದು ಎಕರೆಗೂ ಹೆಚ್ಚು ವಿಸ್ತೀರ್ಣದ ಜಾಗವನ್ನು ಉಳಿಸಿಕೊಂಡು ಮರಗಳನ್ನು ಬೆಳೆಸಲಾಗಿತ್ತು. ಆ ಮರಗಳನ್ನು ಅರಣ್ಯ ಅಧಿಕಾರಿಗಳು ತೆರವುಗಳಿಸಿದ್ದಾರೆ ಎಂದು ಹಾಡಿಯ ಮುಖಂಡರಾದ ಮುತ್ತಮ್ಮ, ದೊಡ್ಡ ಮುನಿಯಪ್ಪ, ಫಾತಿಮಾ ಬಾನು, ಶಾಂತರಾಜ್, ಚಿಕ್ಕ ಸಾಕಮ್ಮ, ರತ್ನಮ್ಮ, ಗಿರಿ ಮಾದ, ಚಿಕ್ಕನಂಜಮ್ಮ, ಮಹದೇವ್ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಆರೋಪಿಸಿದ್ದಾರೆ.
ಚಿರತೆಗಳ ಕಾಟ
ಆನಂದನಗರ (ಗೌಡನ ಕಟ್ಟೆ) ಗಿರಿಜನ ಹಾಡಿಯ ಸುತ್ತಮುತ್ತಲು ಮೀಸಲು ಅರಣ್ಯ ಇರುವುದರಿಂದ ಕಾಡು ಪ್ರಾಣಿಗಳಿಂದ ಭಾರಿ ನಷ್ಟ ಅನುಭವಿಸುತ್ತಿದ್ದು, ಅದರಲ್ಲೂ ಚಿರತೆಗಳ ದಾಳಿ ನಡೆಸಿ ಸಾಕುಪ್ರಾಣಿಗಳನ್ನು ಕೊಂದು ಹಾಕುತ್ತಿವೆ. ಈ ಬಗ್ಗೆ ವಲಯ ಅರಣ್ಯ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
-ಪಾಪಯ್ಯ, ಹಾಡಿ ಅರಣ್ಯ ಹಕ್ಕು ಸಮಿತಿ ಕಾರ್ಯದರ್ಶಿ
ಕನಿಷ್ಠ ಸೌಲಭ್ಯದಿಂದ ವಂಚಿತ
ಹಾಡಿಗೆ ಮತ ಕೇಳಲು ಬರುವ ರಾಜಕಾರಣಿಗಳು ಇಲ್ಲಿ ಖಾಲಿ ಜಾಗ ಇದ್ದರೂ ವಸತಿ ಮತ್ತು ವಿದ್ಯುತ್ ದೀಪಗಳು ಸೇರಿದಂತೆ ಯಾವುದೇ ಮೂಲಸೌಲಭ್ಯಗಳನ್ನು ದೊರಕಿಸಿಲ್ಲ. ನಾವುಗಳು ಕಾಡುಪ್ರಾಣಿಗಳಿಗಿಂತ ಕಡೆಯಾಗಿ ಜೀವನ ನಡೆಸುತ್ತಿದ್ದೇವೆ ಎಂದು ಗ್ರಾಮದ ನಿವಾಸಿ ಹಾಡಿ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಈರಯ್ಯ ತಿಳಿಸಿದ್ದಾರೆ.