ಒತ್ತುವರಿ ತೆರವು-ಕಸ್ತೂರಿ ರಂಗನ್ ವರದಿ ಮತ್ತು ರಾಜಕೀಯ ಪಕ್ಷಗಳ ಜವಾಬ್ದಾರಿ

Update: 2024-08-09 06:56 GMT

ಸಾಂದರ್ಭಿಕ ಚಿತ್ರ (freepik)

 ಅರಣ್ಯ ಭೂಮಿ ಒತ್ತುವರಿದಾರರನ್ನು ಒಕ್ಕಲೆಬ್ಬಿಸುವ ಅರಣ್ಯ ಸಚಿವರ ಹೇಳಿಕೆ ಮತ್ತು ಆರನೇ ಬಾರಿ ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವುದು ಮಲೆನಾಡಿನ ರೈತರಲ್ಲಿ ಆತಂಕ ಮೂಡಿಸಿದೆ.ರಾಜಕೀಯ ಪಕ್ಷಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದೆ.ಆದರೆ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಒತ್ತುವರಿ ತೆರವು ಮತ್ತು ಕಸ್ತೂರಿ ರಂಗನ್ ವರದಿ ಬಗ್ಗೆ ಒಟ್ಟಾಗಿ ರಾಜ್ಯ ಕೇಂದ್ರ ಸರ್ಕಾರದ ಗಮನ ಸೆಳೆಯಲು ಮತ್ತು ರೈತರ ಆತಂಕ,ಅನುಮಾನ ನಿವಾರಿಸಲು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ 2014 ರಲ್ಲಿ ಪ್ರಥಮ ಬಾರಿಗೆ ಅಧಿಸೂಚನೆ ಹೊರಡಿಸಿ ನಂತರ ವರದಿಯನ್ನು ಕನ್ನಡಕ್ಕೆ ತರ್ಜುಮೆಗೊಳಿಸಿದ ಪ್ರತಿಯನ್ನು ರಾಜ್ಯ ಸರ್ಕಾರ ಇದುವರೆಗೂ ತಂದಿರುವುದಿಲ್ಲ. ಜನರಿಗೆ ವರದಿಯ ವಾಸ್ತವತೆಯನ್ನು ಅರ್ಥ ಮಾಡಿಸುವುದರಲ್ಲಿ ಕಳೆದ ಹತ್ತು ವರ್ಷಗಳಿಂದ ರಾಜ್ಯದ ಅಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್(JCB) ಸರ್ಕಾರಗಳು ಸೋತಿದೆ ಮತ್ತು ಬೇಜಾವಾಬ್ದಾರಿ ತೋರಿದೆ. ಕಸ್ತೂರಿ ರಂಗನ್ ವರದಿಯ ಪೂರ್ಣ ವಿವರ ಕನ್ನಡದಲ್ಲಿ ಲಭ್ಯವಾದರೆ ವರದಿಯನ್ನು ಜನ ಅರ್ಥ ಮಾಡಿಕೊಂಡು ಸಕಾರಾತ್ಮಕ ಚರ್ಚೆ ನಡೆಸಲು ಸಾಧ್ಯವಾಗುತ್ತಿತ್ತು.

ಮಲೆನಾಡಿನ ರೈತರಿಗೆ ಅರಣ್ಯ, ಪರಿಸರ ಉಳಿಸದಿದ್ದರೆ ತಮ್ಮ ಅಸ್ತಿತ್ವ ಕಷ್ಟ ಎಂದು ಅವರಿಗೆ ಅರಿವಿದೆ.ಸರ್ಕಾರ ಮತ್ತು ಅರಣ್ಯ ಇಲಾಖೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯ ಉಳಿಸಲು,ಬೆಳೆಸಲು ಪ್ರೋತ್ಸಾಹ ನೀಡಬೇಕು ಹೊರತು ರೈತರನ್ನು ಕಾಡುಗಳ್ಳರಂತೆ ನೋಡುವ ದೃಷ್ಟಿ ಬದಲಾಯಿಸಬೇಕು. ಅರಣ್ಯ ಸಚಿವರು ಅರಣ್ಯ ಕಾಯ್ದೆ 1963ರ ಕಲಂ 64(A) ಅಡಿಯಲ್ಲಿ ಒತ್ತುವರಿದಾರರನ್ನು ತೆರವುಗೊಳಿಸಲು ನೀಡಿರುವ ಹೇಳಿಕೆ ಮಲೆನಾಡಿನ ರೈತರಲ್ಲಿ ತೀವ್ರ ಆತಂಕಕ್ಕೆ ದೂಡಲು ಕಾರಣ ಅರಣ್ಯ ಅಧಿಕಾರಿಗಳು ಎಸಿಎಫ್ ಕೋರ್ಟಿನಿಂದ ಹೈಕೋರ್ಟ್ ವರೆಗಿನ ಅಂತಿಮ ತೀರ್ಪುಗಳನ್ನು ಸಕಾಲದಲ್ಲಿ ಜಾರಿಗೆ ತರದೆ ಬಾಕಿ ಇರಿಸಿರುವುದು. ಕೋರ್ಟ್ ಎಚ್ಚರಿಕೆ ನೀಡಿದ್ದರಿಂದ ಎಚ್ಚೆತ್ತ ಸರ್ಕಾರ ತನ್ನ ಅಧಿಕಾರಿಗಳ ತಪ್ಪನ್ನು ಮುಚ್ಚಿಡಲು ಹೇಳಿಕೆ ನೀಡಿ ಮಲೆನಾಡಿನ ರೈತರ ನಿದ್ದೆಗೆಡಿಸಿದರು.ಪೀಕಲಾಟಕ್ಕೆ ಬಿದ್ದ ಆಡಳಿತ ಪಕ್ಷದ ಜನಪ್ರತಿನಿಧಿಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದರೆ,ವಿರೋಧ ಪಕ್ಷಗಳು ಸರ್ಕಾರದ ಒತ್ತುವರಿ ತೆರವಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.

ಬಿಜೆಪಿ, ಜೆಡಿಎಸ್ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷದ ಒತ್ತುವರಿ ತೆರವು ಕ್ರಮ ವಿರೋಧಿಸುತ್ತಿದೆ. ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ ಅಧಿಸೂಚನೆ ಮತ್ತು ಅರಣ್ಯ ಕಾಯ್ದೆ ತಿದ್ದುಪಡಿ ಮಾಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಎಂದು ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರವನ್ನು ವಿರೋಧಿಸುತ್ತಿದೆ. ಬಣ್ಣ ಹಚ್ಚದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮಾಡುತ್ತಿರುವ ಹಗಲು ವೇಷದ ಈ ನಾಟಕ ಹೀಗೆ ಎಷ್ಟು ದಿನ ಸಾಗಬಹುದು. ಜನ ಮರಳೋ ಜಾತ್ರೆ ಮರಳೋ ಎಂಬಂತೆ ಬಡ ರೈತರನ್ನು, ಬಡವರನ್ನು ಎಷ್ಟು ಕಾಲ ಮೋಸ ಮಾಡಬಹುದು. ಜನಪ್ರತಿನಿಧಿಗಳು ರಾಜಕೀಯ ಪಕ್ಷಗಳ ಮುಖಂಡರು ಒಗ್ಗಟ್ಟಿನಿಂದ ಕುಳಿತು ಒತ್ತುವರಿ ತೆರವು ಮತ್ತು ಕಸ್ತೂರಿ ರಂಗನ್ ವರದಿ ಅಧಿಸೂಚನೆಗೆ ಸಂಬಂಧಿಸಿದಂತೆ ರೈತ ಸಂಘಟನೆಗಳು ಮತ್ತು ಜನಪರ ಸಂಘಟನೆಗಳೊಂದಿಗೆ ಕುಳಿತು ಚರ್ಚೆ ಮಾಡಿ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆಯ ಮಾತುಗಳನ್ನು ಧೃಡವಾಗಿ ಹೇಳಬೇಕು.

ಒತ್ತುವರಿ ತೆರವು ಮತ್ತು ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಪ್ರೀಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿರುವುದರಿಂದ ಅಧಿಕಾರಿಗಳು ವರದಿಯನ್ನು ತಳ್ಳಿ ಹಾಕಲು ಅವರಿಗೆ ಅವಕಾಶವೇ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಒತ್ತುವರಿ ಮತ್ತು ಕಸ್ತೂರಿ ರಂಗನ್ ವರದಿಯಿಂದ ಬಾಧಿತರಾಗುವವರು ಮೂರು ರಾಜಕೀಯ ಪಕ್ಷಗಳ ಕಚೇರಿ ಮುಂದೆ ಧರಣಿ ನಡೆಸಬೇಕು.ಇವರ ಹಗಲು ವೇಷದ ನಾಟಕಕ್ಕೆ ತೆರೆ ಎಳೆಯಬೇಕು.

ವಿಪರ್ಯಾಸವೆಂದರೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ರಾಜ್ಯ ಸರ್ಕಾರವನ್ನು ವಿರೋಧಿಸಿ ಬೆಂಗಳೂರು ನಿಂದ ಮೈಸೂರು ಕಾಲ್ನಡಿಗೆ ಜಾಥಕ್ಕೆ ಜಿಲ್ಲೆಯ ಬಿಜೆಪಿ, ಜೆಡಿಎಸ್ ಜನಪ್ರತಿನಿಧಿಗಳು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದಾರೆ. ಅದನ್ನು ವಿರೋಧಿಸಿ ಇಂದು ಮೈಸೂರಿನಲ್ಲಿ ನಡೆಯಲಿರುವ ಸಮಾವೇಶಕ್ಕೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ರೈತರ ಮತ್ತು ಜನಸಾಮಾನ್ಯರ ಸಮಸ್ಯೆ ಬಗ್ಗೆ ಹೋರಾಟದ ಮಾತೇ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಎಂ.ಯೂಸುಫ್ ಪಟೇಲ್

contributor

Similar News