ಕಾರ್ಪೊರೇಟ್‌ಗಳ ಲಾಬಿಗೆ ಅಲ್ಪಸಂಖ್ಯಾತರ ಹಿತ ಬಲಿ?

Update: 2024-03-30 09:11 GMT

ಮಾನ್ಯರೇ,

ರಾಜ್ಯದಲ್ಲಿ ಅಲ್ಪಸಂಖ್ಯಾತರು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳನ್ನು ಅಲ್ಪಸಂಖ್ಯಾತರ ಸಂಸ್ಥೆಗಳನ್ನಾಗಿ ಘೋಷಿಸಲು ಇರುವ ನಿಯಮ/ಷರತ್ತುಗಳನ್ನು ಪರಿಷ್ಕರಿಸಿ, ಮಾರ್ಚ್ ೧೨ರ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಅನುಮೋದಿಸಿ ೧೬ರಂದು ಆದೇಶ ಹೊರಡಿಸಲಾಗಿದೆ.

ಸಂವಿಧಾನದ ಅನುಚ್ಛೇದ ೩೦ರಲ್ಲಿ ದೇಶದ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಸಮುದಾಯಕ್ಕೆ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಕಾರ್ಯನಿರ್ವಹಿಸುವ ಹಕ್ಕು ನೀಡಿದೆ. ಸಂವಿಧಾನ ಒದಗಿಸಿದ ಈ ಹಕ್ಕಿನಿಂದ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಸಮುದಾಯವು ತಮ್ಮ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಿತ್ತು.

ಅಲ್ಪಸಂಖ್ಯಾತ ಶೈಕ್ಷಣಿಕ ಸ್ಥಾನಮಾನ ಹೊಂದಲು ಬೇಕಾದ ಎರಡು ನಿಯಮ/ಷರತ್ತುಗಳು ಈ ರೀತಿ ಇತ್ತು.

೧. ಶಾಲಾ ಆಡಳಿತ ಮಂಡಳಿಯ ಸದಸ್ಯರು ಕಾರ್ಯಕಾರಿ ಸಮಿತಿಯಲ್ಲಿದ್ದು, ಆಯಾ ಭಾಷಾ/ಮತೀಯ ಅಲ್ಪಸಂಖ್ಯಾತ ಸದಸ್ಯರ ಸಂಖ್ಯೆ ಕನಿಷ್ಠ ಮೂರನೇ ಎರಡರಷ್ಟು ಇರಬೇಕು.

೨. ಅಲ್ಪಸಂಖ್ಯಾತ ಸಂಸ್ಥೆಯ ಶಾಲೆ/ಕಾಲೇಜುಗಳೆಂದು ಘೋಷಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನದಲ್ಲಿ ಬರುವ ಶಾಲೆಗಳು ಆಯಾ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಕನಿಷ್ಠ ಶೇ. ೨೫ರಷ್ಟು ಮತ್ತು ಉನ್ನತ, ತಾಂತ್ರಿಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ ಬರುವ ಕಾಲೇಜುಗಳಲ್ಲಿ ಶೇ. ೫೦ರಷ್ಟು ಆಯಾ ಭಾಷಾ ಮತೀಯ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳನ್ನು ಹೊಂದಿರಬೇಕು ಎಂಬ ನಿಯಮವಿತ್ತು.

ಇದೀಗ ರಾಜ್ಯ ಸರಕಾರದ ಸಚಿವ ಸಂಪುಟವು ಇತ್ತೀಚಿನ ಪರಿಷ್ಕೃತ ನಿಯಮದಲ್ಲಿ ಅಲ್ಪಸಂಖ್ಯಾತ ಪ್ರಾಥಮಿಕ ಶಾಲಾ ಸಂಸ್ಥೆಗಳಲ್ಲಿನ ಶೇ.೨೫ರಷ್ಟು ಮತ್ತು ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾಲೇಜುಗಳಲ್ಲಿನ ಶೇ. ೫೦ರಷ್ಟು ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು ಎಂಬ ನಿಯಮವನ್ನು ರದ್ದುಪಡಿಸಿ ಏಕರೂಪ ನಿಯಮ ಪಾಲನೆಗೆ ಆದೇಶ ನೀಡಿದೆೆ.

ಅನೇಕ ಶಿಕ್ಷಣ ತಜ್ಞರು ಮತ್ತು ಕಾನೂನು ತಜ್ಞರ ಅಭಿಪ್ರಾಯದಂತೆ ಈ ತಿದ್ದುಪಡಿಯ ಪರಿಷ್ಕೃತ ನಿಯಮವು ಸಂವಿಧಾನ ಒದಗಿಸಿದ ಹಕ್ಕನ್ನು ಬುಡಮೇಲು ಮಾಡುವಂತಿದೆ. ಈ ನಿರ್ಧಾರದಲ್ಲಿ ವಿದ್ಯಾರ್ಥಿಗಳಿಗಿಂತ ಶಿಕ್ಷಣ ಸಂಸ್ಥೆಗಳ ಮೇಲಿನ ಕಾಳಜಿ ಎದ್ದು ಕಾಣುತ್ತಿದೆ. ಇದು ಕಾರ್ಪೊರೇಟ್ ಅಥವಾ ಶಿಕ್ಷಣವನ್ನು ವ್ಯಾಪಾರವನ್ನಾಗಿ ಮಾಡಿಕೊಂಡವರ ಲಾಬಿ ಎಂಬುದು ಸ್ಪಷ್ಟವಾಗಿದೆ. ಈ ಪರಿಷ್ಕೃತ ಆದೇಶದಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಹಿತಕ್ಕಿಂತ ಆಡಳಿತ ವರ್ಗದ ಹಿತವೇ ಮೇಲುಗೈ ಸಾಧಿಸಿದೆ.

ಈ ತಿದ್ದುಪಡಿಯು ಅದರ ಮೂಲ ಆಶಯವನ್ನು ಬುಡಮೇಲು ಮಾಡುತ್ತದೆ. ಷರತ್ತನ್ನು ಸಡಿಲಿಕೆ ಮಾಡುವ ನೆಪದಲ್ಲಿ ಎರಡನೆಯ ನಿಯಮವನ್ನೇ ಸಂಪೂರ್ಣ ರದ್ದು ಪಡಿಸಿರುವುದು ವಿದ್ಯಾರ್ಥಿ ವಿರೋಧಿ ನಡೆಯಾಗಿದೆ. ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಹೆಸರಲ್ಲಿ ಕಾರ್ಪೊರೇಟೀಕರಣಕ್ಕೆ ಮುನ್ನುಡಿ ಬರೆದಿದೆ.

ಈ ತಿದ್ದುಪಡಿಯಿಂದ ಭಾಷಾ/ಮತೀಯ ಅಲ್ಪಸಂಖ್ಯಾತರ ಬಡ ಮತ್ತು ದುರ್ಬಲ ವರ್ಗವೂ ಶಿಕ್ಷಣದಿಂದ ವಂಚಿತರಾಗುವ ಆತಂಕವಿದೆ. ಈ ತಿದ್ದುಪಡಿಯು ದಾಖಲಾತಿ ಸಮಯದಲ್ಲಿ ಬಡ ಮತ್ತು ದುರ್ಬಲ ವರ್ಗದ ವಿದ್ಯಾರ್ಥಿಗಳನ್ನು ಬಹಳ ಸರಳವಾಗಿ ನಿರಾಕರಿಸಲು ಪುಷ್ಟಿ ನೀಡುತ್ತದೆ.

ಇಂತಿಷ್ಟು ಮಕ್ಕಳು ದಾಖಲಾಗಬೇಕು ಎನ್ನುವ ನಿಯಮವನ್ನು ಸಡಿಲಿಸಿ, ಆಯಾ ವರ್ಷದಲ್ಲಿ ನಿಗದಿತ ವಿದ್ಯಾರ್ಥಿಗಳು ದಾಖಲಾತಿ ಪಡೆಯದಿದ್ದರೂ ಸಂಸ್ಥೆಯ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಮತ್ತು ಸ್ವಾಯತ್ತತೆಗೆ ಧಕ್ಕೆ ಆಗದಂತೆ ನಿಯಮವನ್ನು ಬದಲಾಯಿಸಬಹುದಿತ್ತು. ಸಡಿಲಿಕೆ ಎಂದರೆ ಷರತ್ತನ್ನು ತೆಗೆದು ಹಾಕುವುದಲ್ಲ.

ಸಂವಿಧಾನದ ಪರಿಚ್ಛೇದ ೩೦ರ ಅಡಿಯಲ್ಲಿ ಅಲ್ಪಸಂಖ್ಯಾತ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ನೀಡಿರುವುದು ಆಯಾ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗಾಗಿ ಹೊರತು ಸಂಸ್ಥೆಗಳ ಅಭಿವೃದ್ಧಿಗಲ್ಲ. ಈ ತಿದ್ದುಪಡಿಯು ದುರ್ಬಳಕೆಯಾಗುವ ಸಂಭವವಿದೆ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಇಂತಿಷ್ಟು ವಿದ್ಯಾರ್ಥಿಗಳ ಕಡ್ಡಾಯ ದಾಖಲಾತಿಯು ಆಯಾ ಭಾಷಾ ಮತ್ತು ಮತೀಯ ಅಲ್ಪಸಂಖ್ಯಾತರ ಶೈಕ್ಷಣಿಕ ಅಭಿವೃದ್ಧಿಗೆ ಸಾಧ್ಯವಾಗುತ್ತಿತ್ತು. ಇದೀಗ ಆ ನಿಯಮವನ್ನೇ ತೆಗೆದು ಹಾಕಿದರೆ ಅದರ ಮೂಲ ಆಶಯವನ್ನು ತಿರುಚಿದಂತಾಗುತ್ತದೆ.

ಈಗಾಗಲೇ ನಮ್ಮಲ್ಲಿ ಅನೇಕ ಜಾತಿವಾರು/ಸಮುದಾಯವಾರು ಸಂಘ-ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ. ಅಲ್ಲಿ ಆಯಾ ಸಮುದಾಯದ ಮಕ್ಕಳಿಗೆ ಇಂತಿಷ್ಟು ದಾಖಲಾತಿ ನೀಡಬೇಕೆನ್ನುವ ನಿಯಮವಿಲ್ಲ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಇಂತಿಷ್ಟು ಮಕ್ಕಳನ್ನು ಹೊಂದಿರಬೇಕೆಂಬ ನಿಯಮವನ್ನೇ ತೆಗೆದು ಹಾಕಿದರೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೂ ಇತರ ಸಂಸ್ಥೆಗೂ ಯಾವುದೇ ವ್ಯತ್ಯಾಸ ಇಲ್ಲದಂತಾಗುತ್ತದೆ.

ಆರ್‌ಟಿಇ ಕಾಯ್ದೆಯಿಂದ ಅಲ್ಪಸಂಖ್ಯಾತ ಸ್ಥಾನಮಾನ ಹೊಂದಿದ ಶಾಲೆಗಳನ್ನು ಹೊರಗಿಟ್ಟಿದ್ದೇ ಅಂತಹ ಶಾಲೆಗಳಲ್ಲಿ ಇಂತಿಷ್ಟು ದಾಖಲಾತಿಯನ್ನು ಕಡ್ಡಾಯವಾಗಿ ನೀಡಬೇಕೆಂಬ ನಿಯಮದಿಂದ. ಇದೀಗ ಆ ನಿಯಮವನ್ನೇ ತೆಗೆದು ಹಾಕಿದರೆ ಸಮಾನ ಶಿಕ್ಷಣವನ್ನು ನಿರಾಕರಿಸಿದಂತಾಗುತ್ತದೆ.

ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಬಹುತೇಕ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದು, ಸರಕಾರಿ ಶಾಲೆಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಖಾಸಗಿ ಅಲ್ಪಸಂಖ್ಯಾತ ಸ್ಥಾನಮಾನ ಹೊಂದಿದ ಶಾಲೆಗಳಲ್ಲಿ ದಾಖಲಾತಿ ಪಡೆಯುತ್ತಿದ್ದ ಬಡ ಮತ್ತು ದುರ್ಬಲ ವರ್ಗದ ಮಕ್ಕಳು ಇದೀಗ ಇಲ್ಲಿಯೂ ಸಹ ಪೈಪೋಟಿ ನಡೆಸಬೇಕಾದ ಅನಿವಾರ್ಯತೆ ಎದುರಾಗಲಿದೆ.

ಆದ್ದರಿಂದ ಎರಡನೇ ಷರತ್ತನ್ನು ರದ್ದುಪಡಿಸಿ ಏಕರೂಪ ಆದೇಶ ಹೊರಡಿಸಿರುವುದನ್ನು ಮರುಪರಿಶೀಲಿಸಿ ಅಲ್ಪಸಂಖ್ಯಾತರು ನಡೆಸುವ ಶಿಕ್ಷಣ ಸಂಸ್ಥೆಯ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಯಾವುದೇ ಧಕ್ಕೆ ಬಾರದಂತೆ ಆಯಾ ಸಮುದಾಯದ ವಿದ್ಯಾರ್ಥಿಗಳ ಇಂತಿಷ್ಟು ದಾಖಲಾತಿಯನ್ನು ಹೊಂದಿರಬೇಕೆಂಬ ನಿಯಮವನ್ನು ಸಂಸ್ಥೆಗೆ ಹೊಂದಿಕೆಯಾಗುವಂತೆ ಪರಿಷ್ಕರಿಸಬೇಕಾಗಿದೆ.

- ಮಹಮ್ಮದ್ ಪೀರ್ ಲಟಗೇರಿ

ಇಳಕಲ್

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News