ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ

Update: 2024-01-03 05:46 GMT

1831ನೇ ಇಸವಿ. ಮಹಾರಾಷ್ಟ್ರದ ಪುಣೆಯಿಂದ 50 ಕಿ.ಮೀ. ದೂರವಿರುವ ಸತಾರಾ ಜಿಲ್ಲೆಯ ಹಳ್ಳಿ ನಾಯಗಾಂವಿನ ಖಂಡೋಜಿ ನೆವಶೆ ಪಾಟೀಲರ ಹಿರಿಯ ಮಗಳಾಗಿ ಸಾವಿತ್ರಿ ಹುಟ್ಟಿದಳು. ಶಾಲೆ ಇರಲಿಲ್ಲವಾದ್ದರಿಂದ ಶಿಕ್ಷಣವೂ ದೊರೆತಿರಲಿಲ್ಲ. ಆ ಕಾಲದಲ್ಲಿ ಎಲ್ಲ ಹುಡುಗಿಯರಿಗೆ ಹೇಗೋ ಹಾಗೆ ಸಾವಿತ್ರಿ ಬಾಯಿಗೆ 9 ವರ್ಷವಾದಾಗ ಮದುವೆಯಾಯಿತು. ಅವಳಿಗಿಂತ 4 ವರ್ಷ ಹಿರಿಯನಾದ ಫುಲೆ ಮನೆತನದ ಹುಡುಗ ಜೋತಿಬಾ ಅವಳ ಸಂಗಾತಿಯಾದ. ಅವಳು ಮದುವೆಯಾದ ಹುಡುಗ ಸಾಮಾನ್ಯ ವರನಾಗಿರಲಿಲ್ಲ. ಅವ ಇಂಗ್ಲಿಷ್ ಕಲಿತು ಅರಿವಿನ ಸ್ಫೋಟಕ್ಕೆ ಒಳಗಾಗಿದ್ದ ಹದಿ ಹರೆಯದ ಕನಸುಗಾರನಾಗಿದ್ದ. ಅವನ ಕನಸುಗಳು ತನ್ನ ಗೂಡು ಕಟ್ಟಿಕೊಳ್ಳುವುದರ ಆಚೆ, ಎಳೆಯ ವಧುವಿನೊಡನೆ ಲಲ್ಲೆವಾತುಗಳ ಆಡುವ ಆಚೆ ವಿಸ್ತರಿಸಿಕೊಂಡಿದ್ದವು. ಶಾಲೆ ಕಲಿಯದ ಜೀವನ ಸಂಗಾತಿಗೆ ತಾನೇ ಶಿಕ್ಷಕನಾಗಿ ಅಕ್ಷರ ಕಲಿಸಿದ. ಜೋತಿಬಾ ಗೆಳೆಯ ರಾದ ಸಖಾರಾಮ ಯಶ್ವಂತ ಪರಾಂಜಪೆ, ಕೇಶವ ಶಿವರಾಮ ಭಾವಲ್ಕರ್ ಕೂಡಾ ಸಾವಿತ್ರಿಗೆ ಮೊದಲ ಶಿಕ್ಷಣ ನೀಡಿದರು.

ಹೀಗೆ ಸಾವಿತ್ರಿ ಮನೆಯಲ್ಲೇ ಅಕ್ಷರ ಕಲಿತು, ಓದಿಬರೆಯುವಂತಾಗುತ್ತಿದ್ದರೆ ಅತ್ತ ಜೋತಿಬಾ ಪುಣೆಯ ಸ್ಕಾಟಿಷ್ ಮಿಷನ್ ಸ್ಕೂಲಿನಲ್ಲಿ ಓದು ಮುಂದುವರಿಸಿದ. ಸದಾಶಿವ ಗೋವಂದೆ, ವಾಲ್ವೇಕರ್ ಮತ್ತಿತರ ಗೆಳೆಯರ ಜೊತೆಗೆ ಜೋತಿಬಾಗೆ ಕಲಿಯದ ತನ್ನ ಪತ್ನಿಯಂಥ ಹುಡುಗಿಯರಿಗೆ ಶಾಲೆ ಶುರು ಮಾಡುವ, ಅಕ್ಷರ ಕಲಿಯಲೇಬಾರದ ಅಸ್ಪಶ್ಯರಿಗೂ ಶಾಲೆ ತೆರೆಯುವ ಆಶಯ ಹುಟ್ಟಿತು. ಅವರ ಕನಸುಗಳಿಗೆ ಪೂರಕವಾಗಿ ಆಗ ಮಹಾರಾಷ್ಟ್ರದಲ್ಲಿ ಸುಧಾರಣೆಯ ಗಾಳಿ ತೀವ್ರವಾಗಿ ಬೀಸುತ್ತಿತ್ತು. ಸ್ತ್ರೀವಾದ ಎಂಬ ಪದ, ಪರಿಭಾಷೆ ಎರಡೂ ಚಾಲ್ತಿಯಲ್ಲಿಲ್ಲದಿದ್ದರೂ ಪಾಶ್ಚಾತ್ಯ ಶಿಕ್ಷಣಕ್ಕೆ ತೆರೆದುಕೊಂಡ ಮಧ್ಯಮವರ್ಗದ ಕೆಲವು ತರುಣರು ಭಾರತೀಯ ಸಮಾಜ ಮಹಿಳೆಯರಿಗೆ ತೋರಿಸುತ್ತಿರುವ ತಾರತಮ್ಯದ ಬಗೆಗೆ ದನಿಯೆತ್ತಿದ್ದರು. ಬಾಲ್ಯವಿವಾಹ, ವಿಧವಾ ಪದ್ಧತಿ, ಸತಿ ಪದ್ಧತಿ, ದೇವದಾಸಿ ಪದ್ಧತಿಗಳನ್ನು ವಿರೋಧಿಸಿ ಬರಹ-ಹೋರಾಟ ಶುರುವಾಗಿತ್ತು. ಭಾರತೀಯ ಮಹಿಳೆಯರನ್ನು ಕಾಡುವ ಸಮಸ್ಯೆಗಳ ಗುರುತಿಸಿ ಪುರುಷರು ದನಿಯೆತ್ತತೊಡಗಿದ್ದರು. ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಸಾರ್ವಜನಿಕ ಶಿಕ್ಷಣದ ಅವಶ್ಯಕತೆ, ಅದರಲ್ಲೂ ಮಹಿಳಾ ಶಿಕ್ಷಣದ ಪ್ರಾಮುಖ್ಯತೆ ಏನೆಂದು ಅರಿವಾಗತೊಡಗಿತ್ತು. ನಿಧಾನವಾಗಿ ಶಾಲೆಗಳು ಶುರುವಾಗತೊಡಗಿದ್ದವು.

1824ರಲ್ಲಿ ಮೊದಲ ಮಿಷನರಿಗಳು ಬಾಲಕಿಯರ ಶಾಲೆಯನ್ನು ಮುಂಬೈಯಲ್ಲಿ ತೆರೆದಿದ್ದರು. ಅದೇ ವರ್ಷ ಗಂಗೂಬಾಯಿ ಎಂಬಾಕೆ ಮುಂಬೈಯಲ್ಲಿ ಬಾಲಕಿಯರ ಶಾಲೆ ತೆರೆದರೂ ಅದನ್ನು ಕೆಲವೇ ತಿಂಗಳಲ್ಲಿ ಮುಚ್ಚಿಸಲಾಗಿತ್ತು. ಮಿಷನರಿಗಳು ಕೋಲ್ಕತಾ, ಸತಾರಾ, ಪುಣೆ, ನಾಸಿಕ್, ಅಹ್ಮದ್ ನಗರಗಳಲ್ಲಿ ಬಾಲಕಿಯರಿಗೆ ಶಾಲೆ ತೆರೆದರು. ಆ ಶಾಲೆಗಳಿಗೆ ಸಾಮಾನ್ಯವಾಗಿ ಹೋಗುತ್ತಿದ್ದವರು ಕ್ರೈಸ್ತರು ಅಥವಾ ಅನಾಥರು. ಭಾರತೀಯ ಜನಸಾಮಾನ್ಯರು ವಿದೇಶೀ ಶಿಕ್ಷಕ-ಶಿಕ್ಷಕಿಯರು ಕಲಿಸುವ ಆ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುವ ಮನಸ್ಸು ಮಾಡಿರಲಿಲ್ಲ.

ಪುಣೆಯ ಜೋತಿಬಾ ಮತ್ತವರ ಗೆಳೆಯರು ಇವನ್ನೆಲ್ಲ ಗಮನಿಸಿದ್ದರು. ದೇಶೀ ಶಿಕ್ಷಕ-ಶಿಕ್ಷಕಿಯರ ಸಂಖ್ಯೆ ಜಾಸ್ತಿಯಾದರೆ ಕಲಿಯಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಬಹುದೆಂದು ಬಲವಾಗಿ ನಂಬಿದ್ದರು.

ಒಮ್ಮೆ ಗೆಳೆಯ ಸದಾಶಿವ ಗೋವಂದೆ ಕೆಲಸ ಮಾಡುತ್ತಿದ್ದ ಅಹ್ಮದ್ ನಗರಕ್ಕೆ ಹೋದಾಗ ಜೋತಿಬಾ ಅಲ್ಲಿನ ಫಾರ್ಮಲ್ ಸ್ಕೂಲಿಗೆ ಭೇಟಿ ಕೊಟ್ಟರು. ತಾನೂ ಶಾಲೆ ತೆರೆದು ಅಸ್ಪಶ್ಯ-ತಳಸಮು ದಾಯದ ವಿದ್ಯಾರ್ಥಿಗಳು ಹಾಗೂ ಹೆಣ್ಣುಮಕ್ಕಳಿಗೆ ಇಂಗ್ಲಿಷ್ ಕಲಿಸಲೇಬೇಕೆಂಬ ಹಂಬಲ ದೃಢವಾಯಿತು. ಅತ್ತೆ ಸಗುಣಾಬಾಯಿಯ ಒತ್ತಾಸೆಯ ಮೇರೆಗೆ ಹೆಂಡತಿ ಸಾವಿತ್ರಿಯನ್ನು ಅಹ್ಮದ್ ನಗರದ ಮಿಸ್ ಫರಾರ್ ಫಾರ್ಮಲ್ ಸ್ಕೂಲಿಗೆ ಶಿಕ್ಷಕ ತರಬೇತಿ ಪಡೆಯಲೆಂದು ಕಳಿಸಿದರು. ಅಲ್ಲಿ ಸಾವಿತ್ರಿ ಜೊತೆಗೆ ಫಾತಿಮಾ ಶೇಕ್ ಎಂಬಾಕೆಯೂ ಕಲಿತರು. ಅಧಿಕೃತವಾಗಿ ಶಿಕ್ಷಕ ವೃತ್ತಿ ನಡೆಸಲು ಅದು ಅವಶ್ಯವಾಗಿತ್ತು.

ಹೀಗೆ ಅನಕ್ಷರಸ್ಥ ವಧುವಾಗಿ ಫುಲೆ ಮನೆಗೆ ಕಾಲಿಟ್ಟ 9 ವರ್ಷದ ಪುಟ್ಟ ಸಾವಿತ್ರಿ 17 ವರ್ಷ ತುಂಬುವುದರಲ್ಲಿ ಇತರ ಹೆಣ್ಣುಮಕ್ಕಳಿಗೂ ಅಕ್ಷರ ಕಲಿಸುವ ಮಹದಾಸೆ ಹೊತ್ತು ಶಿಕ್ಷಕ ತರಬೇತಿ ಮುಗಿಸಿ ಭಾರತದ ಮೊತ್ತಮೊದಲ ಶಿಕ್ಷಕಿಯಾಗಿ ಹೊರಹೊಮ್ಮಿದರು. ಜೋತಿಬಾರೊಡನೆ ಒಂದಾದ ಮೇಲೊಂದರಂತೆ ಸರಣಿ ಶಾಲೆಗಳ ತೆರೆದರು. ಶಾಲೆಗೆ ಬರುವ ಮಕ್ಕಳ ಕಲಿಕೆಗೆ ಅವಶ್ಯವಾದ ಬೋಧನ ಸಾಮಗ್ರಿಯಿಂದ ಹಿಡಿದು ಎಲ್ಲದರ ಮೇಲುಸ್ತುವಾರಿ ವಹಿಸಿಕೊಂಡರು. ಧಾರ್ಮಿಕ- ಆಧ್ಯಾತ್ಮಿಕ ವ್ಯಕ್ತಿಯಾಗಿದ್ದ ಸಾವಿತ್ರಿ ತಾನು ಮಾಡುತ್ತಿರುವ ಕೆಲಸವನ್ನು ವ್ರತವೆಂದೇ ಬಗೆದು ಅಚಲ ಶ್ರದ್ಧೆಯನ್ನಿಟ್ಟುಕೊಂಡು ದಣಿವರಿಯದೆ ದುಡಿದರು.

ಆದರೆ ಹೆಣ್ಣುಮಕ್ಕಳಿಗೆ ಮನೆಗೆಲಸ, ವ್ರತಕತೆ, ಹಾಡುಹಸೆ, ಪುರಾಣಪಠಣಗಳ ಹೇಳಿಕೊಡುವುದು ಬಿಟ್ಟು ವಿಚಾರಗಳ ಕಿಡಿ ಹೊತ್ತಿಸುವುದು ಸಂಪ್ರದಾಯವಾದಿಗಳಿಗೆ ಸುತರಾಂ ಇಷ್ಟವಾಗಲಿಲ್ಲ. ಅವರು ಸಾವಿತ್ರಿಗೆ ನಾನಾ ತೆರನ ಹಿಂಸೆ ಕೊಡಲು ಶುರುಮಾಡಿದರು. ಶಾಲೆಗೆ ಹೋಗುವಾಗ ಪ್ರತಿದಿನ ಹಿಂದಿನಿಂದ ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಿದ್ದರು. ಅವಮಾನಕರವಾಗಿ ಕೂಗುತ್ತಿದ್ದರು. ದಾರಿಮೇಲೆ ನಡೆದು ಬರುವಾಗ ಕಲ್ಲು, ಮಣ್ಣು, ಸಗಣಿ ಉಂಡೆಗಳು ತೂರಿ ಬರುತ್ತಿದ್ದವು. ಮೊದಮೊದಲು ಸಹನೆಯಿಂದ ಅವರ ಪೀಡನೆಗಳನ್ನೆಲ್ಲ ಸಹಿಸಿದ ಸಾವಿತ್ರಿ ಎದೆಗುಂದದೆ ಪಾಠ ಹೇಳಿದರು. ಒಂದು ಹಳೆಯ ಸೀರೆ ಉಟ್ಟು ಮತ್ತೊಂದು ಸೀರೆ ಒಯ್ಯುತ್ತಿದ್ದ ಆಕೆ ಶಾಲೆಗೆ ಹೋದನಂತರ ಸೀರೆ ಬದಲಿಸಿ ಕೆಲಸ ಮಾಡುತ್ತಿದ್ದರು. ಮೂದಲಿಕೆಯ ಮಾತು ಕೇಳಿಬಂದರೂ, ‘ನಮ್ಮ ಅಂತಸ್ಸಾಕ್ಷಿಗೆ ಹಾಗೂ ದೇವರ ಇಚ್ಛೆಗೆ ಅನುಗುಣವಾಗಿ ನಡೆದುಕೊಂಡಿದ್ದೇವೆ’ ಎಂದು ಉತ್ತರಿಸುತ್ತಿದ್ದರು. ಅವರ ಜೊತೆಯಲ್ಲಿ ಜವಾನರೊಬ್ಬರನ್ನು ಕಳಿಸುವ ವ್ಯವಸ್ಥೆಯೂ ಶುರುವಾಯಿತು.

ಆದರೆ ಪ್ರತಿದಿನ ಶಾಲೆಗೆ ಹೋಗುವಾಗ ನಿಂದನೆಗಳ ಕೇಳಿಕೇಳಿ ಒಂದು ಹಂತದಲ್ಲಿ ಸೂಕ್ಷ್ಮ ಮನದ ಸಾವಿತ್ರಿ ಕೈಚೆಲ್ಲಿದರು. ಆಗ ಅವರ ಬೆಂಬಲಕ್ಕೆ ನಿಂತು ಧೈರ್ಯ ಹೇಳಿದ ಜೋತಿಬಾ ಸಂದರ್ಭವನ್ನು ದಿಟ್ಟವಾಗಿ ಎದುರಿಸಲು ಸೂಚಿಸಿದರು. ಕಿಡಿಗೇಡಿಗಳ ಬೇಜವಾಬ್ದಾರಿಯ ನಡವಳಿಕೆಗಳು ಉದಾತ್ತ ಗುರಿ ಹೊತ್ತ ಹೋರಾಟವನ್ನು ಕಂಗೆಡಿಸಬಾರದು; ಬೇಕೆಂದೇ ಅವಮಾನಿಸುವವರೆದುರು ಆತ್ಮಸ್ಥೆರ್ಯ ಕಳಕೊಳ್ಳಬಾರದು ಎಂದು ತಿಳಿಹೇಳಿದರು. ತಮ್ಮ ದೀರ್ಘ ಹೋರಾಟದ ದಾರಿಯಲ್ಲಿ ಇಂಥ ಸಣ್ಣಪುಟ್ಟ ಕಿರಿಕಿರಿಗಳು ಪರೀಕ್ಷೆಯೆಂದು ತಿಳಿಯಬೇಕೆಂದು ಸಾವಿತ್ರಿಗೂ ಅನಿಸಿತು. ಉದಾತ್ತತೆಯೊಡನೆ ಅವಶ್ಯವಿರುವಲ್ಲಿ ದಿಟ್ಟತನವೂ ಅವಶ್ಯವೆಂದು ಅವರ ತಾಯಿಮನಸ್ಸು ಅರಿತುಕೊಂಡಿತು. ಈ ತಿಳುವಳಿಕೆ ಮೂಡಿದ್ದೇ ಕಲ್ಲು ಬಿಸಾಡುತ್ತಿದ್ದವರನ್ನು ಒಂದುದಿನ ಸಾವಿತ್ರಿ ತಾವೇ ಹಿಡಿದರು. ಥಳಿಸಿ ಬುದ್ಧಿಹೇಳಿದರು.

ನಂತರ ನಿಂದೆ, ಕಲ್ಲು ತೂರಾಟಗಳು ಕ್ರಮೇಣ ನಿಂತುಹೋದವು.

ಆದರೆ ಗಂಭೀರ ಸ್ವಭಾವದ ಸಹನಾಮಯಿ ಮಹಿಳೆ ಸಾವಿತ್ರಿ ಶಾಲೆಯಲ್ಲಾಗಲೀ, ಹಾಸ್ಟೆಲಿನಲ್ಲಾಗಲೀ ಎಂದೂ ವಿದ್ಯಾರ್ಥಿಗಳನ್ನು ನಿಂದಿಸಿದವರಲ್ಲ, ಶಿಕ್ಷಿಸಿದವರಲ್ಲ. ಗ್ರಾಮೀಣ ಭಾಗದ ಅನಕ್ಷರಸ್ಥ ಕುಟುಂಬದ ಮಕ್ಕಳಿಗೆ ಕಲಿಕೆ ಸುಲಭವಾಗಲೆಂದು ನಾನಾ ಉಪಾಯ ಬಳಸಿ ಕಲಿಸುತ್ತಿದ್ದರು. ಅವರ ಬಳಿ ಕಲಿತ ವಿದ್ಯಾರ್ಥಿಗಳಿಬ್ಬರು ನಂತರ ಬರೆದುಕೊಂಡ ನೆನಪುಗಳಲ್ಲಿ ಸಾವಿತ್ರಿಯವರ ಸರಳ ನಡತೆ, ನೇರ ನುಡಿ, ಕರುಣೆ ತುಂಬಿದ ವ್ಯಕ್ತಿತ್ವವನ್ನು ಸ್ಮರಿಸಿದ್ದಾರೆ. ಅಲ್ಲದೆ ಸಾವಿತ್ರಿ, ಜೋತಿಬಾರ ನಡುವಿನ ಪ್ರೇಮವನ್ನೂ ನೆನಪಿಸಿಕೊಂಡಿದ್ದಾರೆ.

ಮುಂಬೈಯ ಲಕ್ಷ್ಮಣ ಕರಡಿ ಜಾಯಾ ಎಂಬ ಹುಡುಗ ಹಾಸ್ಟೆಲಿನಲ್ಲಿದ್ದು ಹೋದವನು, ನಂತರ ತನ್ನ ನೆನಪುಗಳಲ್ಲಿ, ‘ಸಾವಿತ್ರಿಬಾಯಿಯವರಷ್ಟು ಪ್ರೇಮಮಯಿಯೂ, ಕರುಣಾಮಯಿಯೂ ಆದ ಇನ್ನೊಬ್ಬ ಮಹಿಳೆಯನ್ನು ನಾನು ನೋಡಿಲ್ಲ. ನಮ್ಮ ತಾಯಿಗಿಂತ ಹೆಚ್ಚು ಅವರು ನಮ್ಮನ್ನು ಪ್ರೀತಿಸಿದರು’ ಎಂದು ಬರೆದುಕೊಂಡಿದ್ದಾನೆ.

ಮತ್ತೊಬ್ಬ ವಿದ್ಯಾರ್ಥಿ ಮಹದು ಸಹಾದು ವಾಘೋಳೆ ಬಲು ದೀರ್ಘವಾಗಿ ಸಾವಿತ್ರಿ-ಜೋತಿಬಾರ ನೆನಪುಗಳನ್ನು ದಾಖಲಿಸಿದ್ದಾನೆ. ಅವನ ಪ್ರಕಾರ:

‘‘ಸಾವಿತ್ರಿ ಬಾಯಿ ತುಂಬ ಉದಾರಿಯಾಗಿದ್ದರು. ಅವರ ಹೃದಯ ಕರುಣಾಭರಿತವಾಗಿತ್ತು. ಬಡವರು, ಅಸಹಾಯಕರ ಕುರಿತು ಬಹಳ ಅನುಭೂತಿ ಹೊಂದಿದ್ದರು. ಅಂಥ ಯಾರನ್ನಾಗಲೀ ನೋಡಿದರೆ ಅಲ್ಲೇ ತಿನ್ನಲು ಕೊಡುತ್ತಿದ್ದರು ಅಥವಾ ಅಡಿಗೆಯಾ ಗಿದ್ದರೆ ಊಟ ಕೊಡುತ್ತಿದ್ದರು. ಹರಿದ ಸೀರೆಯುಟ್ಟ ಹೆಣ್ಣುಮಕ್ಕಳನ್ನು ನೋಡಿದರೆ ತಮ್ಮದೇ ಒಂದು ಸೀರೆ ಮನೆಯಿಂದ ತಂದು ಕೊಟ್ಟು ಬಿಡುತ್ತಿದ್ದರು. ಇದರಿಂದ ಮನೆ ಖರ್ಚು ಹೆಚ್ಚುತ್ತ ಹೋಯಿತು. ತಾತ್ಯಾ ಒಮ್ಮೊಮ್ಮೆ ಹೇಳುತ್ತಿದ್ದರು, ‘‘ಇಷ್ಟು ಖರ್ಚು ಮಾಡಿದರೆ ಹೇಗೆ?’’ ಎಂದು. ಅದಕ್ಕೆ ಸಾವಿತ್ರಿಬಾಯಿ ನಸುನಗುತ್ತ, ‘‘ನಾವು ಸತ್ತು ಹೋಗುವಾಗ ಏನನ್ನಾದರೂ ಜೊತೆಗೆ ಒಯ್ಯುತ್ತೇವೆಯೇ?’’ ಎಂದು ಕೇಳುತ್ತಿದ್ದರು. ಇದಕ್ಕೆ ತಾತ್ಯಾ ಬಳಿ ಉತ್ತರವಿರುತ್ತಿರಲಿಲ್ಲ. ಅವರಿಬ್ಬರೂ ತುಂಬ ಪ್ರೀತಿಸುತ್ತಾರೆ. ಶೇಟ್ಜಿ ಎಂದು ಸಾವಿತ್ರಿಬಾಯಿ ತಾತ್ಯಾರನ್ನು ಕರೆಯುತ್ತಾರೆ. ತಾತ್ಯಾ ಅವರೂ ಸಹಾ ತುಂಬ ಗೌರವಪೂರ್ವಕವಾದ ಹೆಸರುಗಳಿಂದ ಸಾವಿತ್ರಿಬಾಯಿಯವರನ್ನು ಕರೆಯುತ್ತಾರೆ. ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ತುಂಬ ಸಂತೋಷ, ತಾವೇ ಅಡಿಗೆ ಮಾಡಿ ಬಡಿಸುತ್ತಾರೆ. ಅವರು ಸದಾ ಮಹಿಳೆಯರ ಶಿಕ್ಷಣ ಮತ್ತು ಉನ್ನತಿಯ ಬಗ್ಗೆಯೇ ಯೋಚಿಸುತ್ತಾರೆ. ಯಾವಾಗಲೂ ಶಾಂತವಾಗಿ ಇರುತ್ತಾರೆ. ಅವರಿಗೆ ಸಿಟ್ಟೇ ಬರುವುದೋ ಇಲ್ಲವೋ ಎಂಬ ಅನುಮಾನವಾಗುತ್ತದೆ. ಅವರ ಮುಖದಲ್ಲಿ ಸದಾ ಎಳೆಯ ನಗು ಇರುತ್ತದೆ.

ಅವರು ದೂರದೃಷ್ಟಿಯುಳ್ಳವರು ಮತ್ತು ಸ್ಪಷ್ಟವಾದ ವಿಚಾರಗಳನ್ನುಳ್ಳವರು. ಅವರಿಗೆ ಸಮಾಜದಲ್ಲಿ ತುಂಬ ಗೌರವವಿದೆ. ಅವರು ಶಿಕ್ಷಕಿಯಾಗಿ ಕೆಲಸ ಮಾಡುವುದರಿಂದ ಹೊಸದಾಗಿ ಶಿಕ್ಷಣ ಪಡೆದ ಮಹಿಳೆಯರಿಗೆ ಅವರೆಂದರೆ ತುಂಬ ಗೌರವ. ತಮ್ಮ ಬಳಿ ಬಂದ ಹುಡುಗಿಯರು, ಮಹಿಳೆಯರಿಗೆ ಹಿತನುಡಿಗಳನ್ನು ಆಡುತ್ತಾರೆ. ಪುಣೆಯ ಪಂಡಿತ ರಮಾಬಾಯಿ, ಆನಂದಿಬಾಯಿ ಜೋಷಿ, ರಮಾಬಾಯಿ ರಾನಡೆ ಮೊದಲಾದ ಮಹಿಳೆಯರು ಅವರ ಬಳಿ ಸಲಹೆ, ಮಾತುಕತೆಗಾಗಿ ಬರುತ್ತಾರೆ.

ಅವರು ತುಂಬ ಸರಳರು, ಶಿಸ್ತಿನ ಕೆಲಸಗಾರರು. ಸೂರ್ಯೋದಯಕ್ಕೆ ಮೊದಲೇ ಎದ್ದು ಸ್ನಾನ, ಮನೆಯ ಶುಚಿಯ ಕೆಲಸ ಮುಗಿಸಿರುತ್ತಾರೆ. ಮನೆಯಲ್ಲಿ ಒಂದು ಧೂಳಿನ ಕಣವೂ ಇರದಂತೆ ಸ್ವಚ್ಛವಾಗಿಡುತ್ತಾರೆ. ಅವರ ಮನೆಯ ಪಾತ್ರೆಗಳೂ ಅಷ್ಟೇ, ತುಂಬ ಹೊಳೆಯುತ್ತಿರುತ್ತವೆ. ತಾತ್ಯಾರ ಆರೋಗ್ಯದ ಸಲುವಾಗಿ ಕಾಳಜಿ ವಹಿಸಿ ಅವರೇ ಅಡಿಗೆ ಮಾಡುತ್ತಾರೆ...’’

ಹೀಗೆ ಅವರನ್ನು ಹತ್ತಿರದಿಂದ ನೋಡಿದ ವಿದ್ಯಾರ್ಥಿಗಳು ಸಾವಿತ್ರಿಬಾಯಿಯವರ ವ್ಯಕ್ತಿತ್ವ, ಸ್ವಭಾವದ ಬಗೆಗೆ ತಮ್ಮ ಗ್ರಹಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆ ಪ್ರಕಾರ ಆಕೆ ತಾವು ಮಾಡುವ ಕೆಲಸವನ್ನು ತುಂಬ ಶ್ರದ್ಧೆಯಿಂದ ಮಾಡುತ್ತಿದ್ದರು. ಅವರು ಸರಳತೆಯೇ ಮೂರ್ತಿವೆತ್ತಂತಹ ಮಹಿಳೆ. ನಾವೀಗ ಅವರ ಭಾವಚಿತ್ರಗಳಲ್ಲಿ ಕಿವಿಗೆ ಓಲೆ, ಕುತ್ತಿಗೆಗೆ ನೆಕ್ಲೇಸು ಹಾಕಿರುವುದನ್ನು ನೋಡುತ್ತೇವೆ. ಆದರೆ ಆಕೆ ನಿಜಜೀವನದಲ್ಲಿ ಕರಿದಾರಕ್ಕೆ ಪೋಣಿಸಿದ ಮಂಗಳಸೂತ್ರ, ಹಣೆಮೇಲೆ ಕುಂಕುಮವನ್ನುಳಿದು ಮತ್ಯಾವುದೇ ಅಲಂಕಾರ ಮಾಡುತ್ತಿರಲಿಲ್ಲ.

ಸೌಂದರ್ಯ, ಸಿರಿಸಂಪತ್ತು ಕುರಿತಾದ ನಿಗ್ರಹವನ್ನು ಎಳೆಯ ವಯಸ್ಸಿನಲ್ಲೇ ದಕ್ಕಿಸಿಕೊಂಡ ಕಾರಣ ಹಾಗೂ ತಾನು ಮಾಡುವ ಕೆಲಸದಲ್ಲಿ ಅಚಲ ಶ್ರದ್ಧೆ ಬೆಳೆಸಿಕೊಂಡ ಕಾರಣ ಸಾವಿತ್ರಿ ತನ್ನ ಕಾಲದ ಉಳಿದ ಮಹಿಳೆಯರಿಗಿಂತ ತೀರಾ ಭಿನ್ನವಾಗಿ ಯೋಚಿಸಲು; ಕಾರ್ಯಪ್ರವೃತ್ತರಾಗಲು ಸಾಧ್ಯವಾಯಿತು. ಇಂತಹ ಮನೋಭಾವವೇ ಎಲ್ಲ ಮಕ್ಕಳನ್ನೂ ತನ್ನವೇ ಎಂದುಕೊಂಡು ಅವರಿಗೆ ಅಕ್ಷರದ ಅನ್ನ ಉಣಬಡಿಸಲು, ಎಲ್ಲರಿಗೂ ತಾಯಿಯಾಗಲು ಸಾಧ್ಯ ಮಾಡಿತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಎಚ್.ಎಸ್. ಅನುಪಮಾ

contributor

Similar News