ನಿಶ್ಯಬ್ದ ಹಂತಕ ಧೂಮಪಾನ

Update: 2024-05-31 05:39 GMT

ತಂಬಾಕು ಸೇವನೆ ಸಂಬಂಧಿ ಅಂಕಿ ಅಂಶಗಳನ್ನು ನೋಡಿದರೆ ನಿಜಕ್ಕೂ ಆಘಾತವಾಗುತ್ತದೆ. ಪ್ರತೀ ವರ್ಷ ವಿಶ್ವಾದ್ಯಂತ್ಯ 55 ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. ಭಾರತದಲ್ಲಿ 10 ಲಕ್ಷ ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. ಪ್ರತೀ ವರ್ಷ ಏಡ್ಸ್, ಕ್ಷಯ ಹಾಗೂ ಮಲೇರಿಯಾ ಈ ಮೂರು ಮಾರಣಾಂತಿಕ ರೋಗಗಳಿಂದ ಒಟ್ಟಾರೆಯಾಗಿ ಸಾಯುವ ಜನಸಂಖ್ಯೆಗಿಂತ ತಂಬಾಕು ಸೇವನೆಯಿಂದ ಸಾಯುವವರು ಭಾರತದಲ್ಲಿ ಹೆಚ್ಚು.

ಇದೀಗ ಭಾರತದಲ್ಲಿ ಧೂಮಪಾನಿಗಳ ಸಂಖ್ಯೆ 11 ಕೋಟಿ. ದೇಶದಲ್ಲಿ ಜೀವಕ್ಕೆ ಅಪಾಯ ತಂದೊಡ್ಡುವ ಮೂರನೇ ಅತಿದೊಡ್ಡ ಸಂಗತಿ ಇದಾಗಿದೆ. ಅದಕ್ಕಿಂತ ಆತಂಕದ ಸಂಗತಿಯೆಂದರೆ 1.21 ಕೋಟಿ ಭಾರತೀಯ ಮಹಿಳೆಯರು ಇಂದು ಹೊಗೆಬತ್ತಿಯ ದಾಸರಾಗಿರುವುದು! 1980ರಲ್ಲಿ ಕೇವಲ 53 ಲಕ್ಷ ಮಹಿಳೆಯರು ಮಾತ್ರ ಸಿಗರೇಟು ಸೇದುತ್ತಿದ್ದರು. ಮೂರು ದಶಕಗಳಲ್ಲಿ ಈ ಪ್ರಮಾಣ ಶೇ. 50ಕ್ಕಿಂತ ಹೆಚ್ಚಾಗಿದೆ. ಅಮೆರಿಕದ ನಂತರ ಅತಿ ಹೆಚ್ಚು ಮಹಿಳಾ ಧೂಮಪಾನಿಗಳನ್ನು ಹೊಂದಿರುವ ರಾಷ್ಟ್ರ ಎಂಬ ಕುಖ್ಯಾತಿ ಈಗ ಭಾರತಕ್ಕೆ!

ಪ್ರಪಂಚದ ಜನಸಂಖ್ಯೆಯಲ್ಲಿ ಸುಮಾರು 1/9 ಭಾಗದಷ್ಟು ಜನರು ಪ್ರತಿದಿನ 5ರಿಂದ 20 ಸಿಗರೇಟುಗಳನ್ನು ಸೇದುತ್ತಾರೆಂದು ಅಂದಾಜಿಸಲಾಗಿದೆ. ಒಂದು ಸಿಗರೇಟನ್ನು ಸುಡಲು ಅಗತ್ಯವಾದ ಆಮ್ಲಜನಕವು ಅಷ್ಟೇ ಅವಧಿಯಲ್ಲಿ ನಾಲ್ಕು ಜನರು ಉಸಿರಾಡಲು ಅಗತ್ಯವಾದ ಆಮ್ಲಜನಕಕ್ಕೆ ಸಮವೆಂದು ತಿಳಿದು ಬಂದಿದೆ. ಪ್ರಾಣಾಧಾರವಾದ ಪ್ರಾಣವಾಯುವಿನ ಕೊರತೆ, ಪ್ರಾಣಾಂತಿಕವಾದ ವಿಷಾನಿಲದ ಉತ್ಪಾದನೆ, ಕ್ಯಾನ್ಸರ್ ರೋಗದ ಬೀಜಾಂಕುರ ಇವಿಷ್ಟೂ ದುಷ್ಪರಿಣಾಮಗಳು ಧೂಮಪಾನದಿಂದ ತಲೆದೋರುತ್ತವೆಂದು ಧೂಮಪಾನಾಸಕ್ತರು ಮನಗಾಣಬೇಕು. ಇತರರಿಗೆ ಉಂಟಾಗುವ ಹಾನಿ, ಅನ್ಯಾಯದ ಅರಿವು ಅವರಿಗೆ ಅವಶ್ಯವಾಗಿ ಇರಬೇಕು.

ಸಿಗರೇಟಿನ ಹೊಗೆ ಒಳಗೆ ಹೊಕ್ಕರೂ ಕಷ್ಟ, (ಸೇದುವವರಿಗೆ) ಹೊರಗೆ ಬಿಟ್ಟರೂ ಕಷ್ಟ(ಬೇರೆಯವರಿಗೆ). ಹೊಗೆ ಮಿಶ್ರಿತ ಹವೆಯನ್ನು ಉಸಿರಾಡುವುದು ಇಂದಿನ ಪರಿಸರದಲ್ಲಿ ಧೂಮಪಾನ ವಿರೋದಿಗಳಿಗೂ ಅನಿವಾರ್ಯ. ಈ ದೃಷ್ಟಿಯಲ್ಲಿ ಅವರೂ ಧೂಮಪಾನಿಗಳೇ, ಇದನ್ನು ಪರೋಕ್ಷ ಧೂಮಪಾನ ಎಂದು ಕರೆಯುತ್ತಾರೆ. ಧೂಮಪಾನದ ಹೊಗೆಯಿಂದ ಸೇದುವ ವರಿಗಿಂತ, ಅಕ್ಕಪಕ್ಕದಲ್ಲಿರುವವರಿಗೆ ಅಪಾಯ ಹೆಚ್ಚು. ಪ್ರತಿವರ್ಷ ಅಮೆರಿಕವೊಂದರಲ್ಲಿಯೇ 4,000-5,000 ಜನರು ಪರೋಕ್ಷ ಧೂಮಪಾನದಿಂದ ಅಸುನೀಗು ತ್ತಾರೆ.

ಧೂಮಪಾನ ಮಾನವನ ಪ್ರತಿಯೊಂದು ಅಂಗಾಂಗಗಳ ಮೇಲೆ ಒಂದಿಲ್ಲೊಂದು ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಶರೀರ ಗೆದ್ದಲು ಹತ್ತಿದ ಮರದಂತಾಗುತ್ತದೆ. ಧೂಮಪಾನದಿಂದಾಗುವ ದುಷ್ಪರಿಣಾಮಗಳನ್ನು ಕಂಡು ಹಿಡಿಯುವ ಸಲುವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಸಾಕಷ್ಟು ಸಂಶೋಧನಾ ಕಾರ್ಯ ನಡೆದಿದೆ. ಅಮೆರಿಕದ ಕ್ಯಾನ್ಸರ್ ಸಂಸ್ಥೆ, ಹೃದ್ರೋಗ ಸಂಘ, ಕೆನಡಾದ ರಾಷ್ಟ್ರೀಯ ಆರೋಗ್ಯ ಮತ್ತು ಕ್ಷೇಮಾಭಿವೃದ್ಧ್ದಿ ಇಲಾಖೆ, ಗ್ರೇಟ್ ಬ್ರಿಟನ್‌ನ ವೈದ್ಯಕೀಯ ಸಂಶೋಧನಾ ಮಹಾಮಂಡಳಿ ಮತ್ತು ಕ್ಷಯ ರೋಗ ನಿವಾರಣಾ ಸಂಘ ಇತ್ಯಾದಿ ಸಂಸ್ಥೆಗಳು ನಡೆಸಿರುವ ಅಧ್ಯಯನದಿಂದ ಹಲವಾರು ಅಂಶಗಳು ಬೆಳಕಿಗೆ ಬಂದಿವೆ.

ಧೂಮಪಾನದ ಹೊಗೆ ಬಾಯಿಯ ಹಾಗೂ ಗಂಟಲಲ್ಲಿರುವ ಲೋಳ್ಪರೆಯ ಜೀವಕೋಶಗಳಿಗೆ ಬಿಸಿಯನ್ನು ಮುಟ್ಟಿಸಿ ಅವು ನಶಿಸುವಂತೆ ಮಾಡುತ್ತದೆ. ಉರಿಯೂತವನ್ನುಂಟುಮಾಡುತ್ತದೆ. ಹೀಗಾಗಿ ಬಾಯಿಯೆಲ್ಲಾ ಕೆಂಪಾಗಿ ಖಾರ ಪದಾರ್ಥ ತಿನ್ನಲಾಗುವುದಿಲ್ಲ. ಒಮ್ಮೊಮ್ಮೆ ಹುಣ್ಣುಗಳು ಸಹ ಆಗುತ್ತವೆ. ಗಂಟಲುರಿತವಂತೂ ಸರ್ವಸಾಮಾನ್ಯ. ಇದರಿಂದ ಗಂಟಲುಕೆರೆತ, ಕೆಮ್ಮು ಕಾಣಿಸುತ್ತದೆ. ಜಠರದಲ್ಲಿಯ ಲೋಳ್ಪರೆಯ ಉರಿಯೂತದಿಂದಾಗಿ ಆಮ್ಲದ ಸ್ರವಿಕೆ ಹೆಚ್ಚಾಗಿ ಎದೆಯಲ್ಲಿ ಉರಿತ ಉಂಟಾಗಬಹುದು. ಹೊಟ್ಟೆಹುಣ್ಣು ಉಂಟಾಗಿ ತಿಂದ ಆಹಾರ ದಕ್ಕದೆ ದೇಹ ಕ್ಷೀಣಿಸಬಹುದು. ಹೊಟ್ಟೆಯ ಕ್ಯಾನ್ಸರಿನ ಬೆಳವಣಿಗೆಗೆ ಇದು ಅಡಿಪಾಯ ಹಾಕಬಹುದು. ಶ್ವಾಸಕೋಶದ ಕ್ಯಾನ್ಸರಿನ ಹಾವಳಿ ಧೂಮಪಾನಿಗಳಲ್ಲಿ ಅತಿ ಹೆಚ್ಚು. ಧೂಮಪಾನ ಕೇವಲ ಶ್ವಾಸಕೋಶದ ಕ್ಯಾನ್ಸರ್ ಅಷ್ಟೇ ಅಲ್ಲ, ತುಟಿ, ನಾಲಿಗೆ, ಗಂಟಲಿನ ಮತ್ತು ಅನ್ನನಾಳದ ಕ್ಯಾನ್ಸರನ್ನೂ ಉಂಟುಮಾಡುತ್ತದೆ.

ಸಿಗರೇಟುಗಳಲ್ಲಿ 3-4 ಬೆಂಜಪೈರಿನ್, 1-12 ಬೆಂಜಪೈರಿಲಿನ್ ಮುಂತಾದ ಕ್ಯಾನ್ಸರ್‌ಜನಕ ರಸಾಯನಿಕ ವಸ್ತುಗಳಿವೆ. ಆದ್ದರಿಂದ ಯಾವುದೇ ರೀತಿಯ ಫಿಲ್ಟರ್ ಸಿಗರೇಟನ್ನು ಸೇವಿಸಿದರೂ ಅದು ದೇಹಕ್ಕೆ ಹಾನಿಕರ ಎನ್ನುವುದರಲ್ಲಿ ಸಂದೇಹವಿಲ್ಲ. ನಿಕೋಟಿನ್ ನರಮಂಡಲಕ್ಕೆ ಮುತ್ತಿಗೆ ಹಾಕಿ, ಜೀವಕೋಶಗಳ ಚಟುವಟಿಕೆಗೆ ಅವಶ್ಯವಿರುವ ಜೀವಸತ್ವಗಳ ವಿಸರ್ಜನೆ ಹೆಚ್ಚುವಂತೆ ಮಾಡುತ್ತದೆ. ಪರಿಣಾಮವಾಗಿ ಧೂಮಪಾನಿಗೆ ಜೀವಸತ್ವಗಳ ಕೊರತೆಯುಂಟಾಗಿ ಕೈಕಾಲುಗಳಲ್ಲಿ ಸೆಳೆತ, ನೋವು ಕಾಣಿಸಿಕೊಳ್ಳಬಹುದು. ರಕ್ತನಾಳಗಳಲ್ಲಿ ಪೆಡಸುತನ ಉಂಟಾಗುವುದರಿಂದ ರಕ್ತ ಸಂಚಾರಕ್ಕೆ ಅಡ್ಡಿಯೊಡ್ಡಬಹುದು. ದೇಹದ ಎಲ್ಲಾ ಭಾಗಗಳಿಗೆ ಪ್ರಾಣವಾಯುವಿನ ಪೂರೈಕೆ ಕಡಿಮೆಯಾಗಿ ವ್ಯಕ್ತಿ ಅಶಕ್ತನಾಗುತ್ತಾನೆ. ಹೃದಯಕ್ಕೆ ರಕ್ತ ಸರಬರಾಜು ಮಾಡುವ ನಾಳಗಳಲ್ಲಿ ಪೆಡಸುತನ ಉಂಟಾದಾಗ ಹೃದ್ರೋಗ ಉಂಟಾಗುತ್ತದೆ. ಧೂಮಪಾನ ಮಾಡುವ ಗರ್ಭಿಣಿಯರು ಸರಾಸರಿ ಕಡಿಮೆ ತೂಕವುಳ್ಳ ಮಕ್ಕಳನ್ನು ಹಡೆಯುತ್ತಾರೆ. ಧೂಮಪಾನ ಮಾಡುವುದರಿಂದ ರಕ್ತದ ಒತ್ತಡ ಹೆಚ್ಚಿ ಪಾರ್ಶ್ವವಾಯು ಬಡಿಯುವ ಸಾಧ್ಯತೆಯುಂಟು. ಧೂಮಪಾನ ಮಾಡುವವರ ಮಕ್ಕಳು ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುವರು. ಆದ್ದರಿಂದ ಧೂಮಪಾನದಿಂದಾಗುವ ಕೇಡು ಒಂದು ತಲೆಮಾರಿಗೆ ಮಾತ್ರ ಸೀಮಿತವಾದುದಲ್ಲ ಎಂಬುದು ಅಕ್ಷರಶಃ ಸತ್ಯ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಕರವೀರಪ್ರಭು ಕ್ಯಾಲಕೊಂಡ

contributor

Similar News