ಸಾಮಾಜಿಕ ಮಾಧ್ಯಮ ಸಾಲು ಸಾಲು ಸವಾಲುಗಳು

Update: 2024-10-25 05:59 GMT

ಇಂದಿನ ದಿನಮಾನದಲ್ಲಿ ದಿನ ಪತ್ರಿಕೆ, ಪುಸ್ತಕಗಳನ್ನು ಕಣ್ಣೆತ್ತಿ ನೋಡದವರು ಇರಬಹುದು. ಆದರೆ ಸಾಮಾಜಿಕ ಮಾಧ್ಯಮ ಅಥವಾ ಸೋಶಿಯಲ್ ಮೀಡಿಯಾದ ಸಂಗ ಮಾಡದವರು ಬಹುಶಃ ಯಾರೂ ಇರಲಾರರು. ಯಾಕೆಂದರೆ ಈ ಸಾಮಾಜಿಕ ಮಾಧ್ಯಮವೆಂಬುದು ಅಷ್ಟೊಂದು ಪ್ರಭಾವಶಾಲಿ, ಜನಪ್ರಿಯ. ಇದು ಜನ ಸಮೂಹವನ್ನು ಪೂರ್ತಿಯಾಗಿ ತನ್ನ ತೆಕ್ಕೆಗೆ ಸೆಳೆದುಕೊಂಡು ಹಿಡಿದಿಟ್ಟುಕೊಂಡಿದೆ. ಆಧುನಿಕ ತಂತ್ರಜ್ಞಾನ ತಂದು ಕೊಟ್ಟಿರುವ ಈ ಸೌಲಭ್ಯ ಇಪ್ಪತ್ತೊಂದನೇ ಶತಮಾನದ ಅತ್ಯಂತ ಮಹತ್ವದ ಕೊಡುಗೆ. ಇದು ತಂದು ಕೊಟ್ಟಂತಹ ಅನುಕೂಲ, ಉಪಯೋಗ ಹಾಗೂ ಸ್ವಾತಂತ್ರ್ಯ ಅಪಾರ. ಎಲ್ಲ ಆವಿಷ್ಕಾರಗಳು ದುರುಪಯೋಗವಾಗುವಂತೆ ಇಲ್ಲಿಯೂ ಅನಾಹುತಕಾರಿ ಎನ್ನಬಹುದಾದಷ್ಟು ಕೆಟ್ಟ ಪರಿಣಾಮಗಳು ಸಮಾಜದ ಮೇಲಾಗುತ್ತಿವೆ.

ಈ ಸಾಮಾಜಿಕ ಮಾಧ್ಯಮದ ಸ್ವರೂಪ, ವ್ಯಾಪಕತೆ ಹಾಗೂ ವೈವಿಧ್ಯ ಬೆರಗು ಹುಟ್ಟಿಸುವಂತಿದೆ. ಯೂಟ್ಯೂಬ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್, ಟೆಲಿಗ್ರಾಂ ಮುಂತಾದವುಗಳು ತುಂಬಾ ಜನಪ್ರಿಯವಾಗಿರುವ ಸಾಮಾಜಿಕ ಮಾಧ್ಯಮಗಳು. ಇದಲ್ಲದೆ ಹೊಸ ಹೊಸ ವಿಚಿತ್ರ ಹೆಸರುವುಳ್ಳಂತಹ ಹಲವಾರು ಮಾಧ್ಯಮಗಳೂ ಇವೆ. ಮುಂದಿನ ದಿನಗಳಲ್ಲಿ ಈ ಮಾಧ್ಯಮಗಳು ತಾಳ ಬಹುದಾದ ಸ್ವರೂಪವನ್ನು ಈ ಹಂತದಲ್ಲಿ ಊಹಿಸಲು ಕೂಡ ಸಾಧ್ಯವಿಲ್ಲ.

ಯಾವುದೇ ಹೊಸ ಸಂಶೋದನೆ, ತಂತ್ರಜ್ಞಾನ ತಂದು ಕೊಡುವ ಅನುಕೂಲತೆ, ಸೌಲಭ್ಯಗಳೊಂದಿಗೆ ಕೆಲವೊಂದು ಅಡ್ಡ ಪರಿಣಾಮಗಳೂ ಸಹಜ. ಆದ್ದರಿಂದ ಅಂತರ್ಜಾಲದ ಅನ್ವೇಷಣೆಯ ಮೂಲಕ ಅಸ್ತಿತ್ವಕ್ಕೆ ಬಂದಿರುವ, ಅಪಾರ ಸಾಧ್ಯತೆಗಳ ಈ ಸಾಮಾಜಿಕ ಮಾಧ್ಯಮಗಳು ಸೃಷ್ಟಿಸಿರುವ ಸಮಸ್ಯೆಗಳನ್ನು ಅರಿತು ಕೊಳ್ಳುವುದು ಬಹುಮುಖ್ಯವಾಗುತ್ತದೆ. ಕೆಲವೊಮ್ಮೆ ಇಲ್ಲಿ ಬಹುತೇಕರಿಗೆ ಉಪಕಾರಕ್ಕಿಂತ ಉಪದ್ರವವೇ ಹೆಚ್ಚು ಎಂಬ ಭಾವನೆ ಮನಸ್ಸಿನಲ್ಲಿ ಹಾದು ಹೋಗಬಹುದು. ಹಾಗಂತ ಇವುಗಳನ್ನು ಬಹಿಷ್ಕರಿಸುವಂತೆಯೂ ಇಲ್ಲ, ನಿಷೇಧಿಸುವಂತೆಯೂ ಇಲ್ಲ. ಬದಲಾಗಿ ಕೆಲವೊಂದು ಕಟ್ಟುಪಾಡು, ಮಿತಿಗಳನ್ನು ಸರಕಾರ ವಿಧಿಸ ಬಹುದಾಗಿದೆ. ಜೊತೆಗೆ ವೈಯಕ್ತಿಕ ನೆಲೆಯಲ್ಲಿ ಸ್ವಯಂನಿಯಂತ್ರಣವೂ ಅಗತ್ಯ. ಮರ್ಕಟ ಮನಸ್ಸಿನ ಮನೋನಿಗ್ರಹವೂ ಸಮಸ್ಯೆ ಪರಿಹಾರದ ಒಂದು ವಿಧಾನ.

ಮನುಷ್ಯ ನಡವಳಿಕೆ ಎಷ್ಟೊಂದು ವಿಚಿತ್ರ ನೋಡಿ. ಯಾವನೋ ಒಬ್ಬ ರಾತ್ರಿ ಹಗಲು ತಲೆ ಕೆಡಿಸಿ ಕೊಂಡು ಸಮಯ ಕೊಟ್ಟು ಶ್ರಮ ವಹಿಸಿ ಮಾನವ ಜನಾಂಗದ ಒಳಿತಿಗಾಗಿ ಯಾವುದೋ ಒಂದು ಅಪೂರ್ವವಾದ ತಂತ್ರಜ್ಞಾನವನ್ನು ಶೋಧಿಸುತ್ತಾನೆ. ಆ ತಂತ್ರಜ್ಞಾನ ಬೆಳಕಿಗೆ ಬರುತ್ತಲೇ ಅದನ್ನು ದುರ್ಬಳಕೆ ಮಾಡುವಂತಹ ಒಂದು ವಿಕೃತ ಮನಸ್ಥಿತಿಯ ವರ್ಗ ನಮ್ಮ ನಡುವಿನಿಂದಲೇ ಹುಟ್ಟಿ ಬರುತ್ತದೆ. ಈಗ ಸಾಮಾಜಿಕ ಮಾಧ್ಯಮಗಳ ವಿಷಯದಲ್ಲಿ ನಡೆಯುತ್ತಿರುವುದು ಕೂಡಾ ಅದೇ ಆಗಿದೆ. ಇಲ್ಲಿ ಹಣಕಾಸಿನ ವಂಚನೆ, ವೀಕ್ಷಣಾ ವ್ಯಸನ, ಅಶ್ಲೀಲತೆ, ಅರ್ಧ ಸತ್ಯ- ಸುಳ್ಳುಗಳ ಹರಡುವಿಕೆ, ಸಾಮಾಜಿಕ ಸಾಮರಸ್ಯ ಕದಡುವಿಕೆ ಇತ್ಯಾದಿ ಆತಂಕಕಾರಿ ಸಮಸ್ಯೆಗಳು ಸಾಲು ಸಾಲುಗಳಾಗಿ ನಿಂತು ಸವಾಲೊಡ್ಡುತ್ತಿವೆ. ಈ ಸಮಸ್ಯೆಗಳನ್ನು ಒಂದೊಂದಾಗಿ ಎತ್ತಿಕೊಂಡು ವಿಸ್ತೃತವಾಗಿ ಚರ್ಚಿಸಿ ವಿಶ್ಲೇಷಿಸುವಷ್ಟು ಅಗಾಧತೆಯ ಆಯಾಮ ಇವುಗಳಿಗೆ ಇವೆ. ಆದ್ದರಿಂದ ಕೆಲವೊಂದು ಸಮಸ್ಯೆಗಳನ್ನು ಸ್ಥೂಲವಾಗಿ ಚರ್ಚಿಸಿ ಕೊಂಡು ಮುಂದುವರಿಯಬಹುದು ಎಂದನಿಸುತ್ತದೆ.

ವಿದ್ಯಾರ್ಥಿಗಳು, ಯುವಜನರನ್ನು ವಿಪರೀತವಾಗಿ ಆಕರ್ಷಿಸಿ ಸೆಳೆದುಕೊಂಡಿರುವ ಸಾಮಾಜಿಕ ಮಾಧ್ಯಮಗಳು ಇಂದು ಹೆತ್ತವರ ನಿದ್ದೆ ಕೆಡಿಸಿರುವುದು ನಿಜ. ಹಲವಾರು ಯುವಜನರ ವಿದ್ಯಾಭ್ಯಾಸ, ಭವಿಷ್ಯಕ್ಕೆ ಕಂಟಕವಾಗಿ ಹೋಗಿರುವ ಈ ಮಾಧ್ಯಮಗಳು ಇಂದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಕಂಪ್ಯೂಟರ್, ಮೊಬೈಲ್‌ಗಳ ನಿರಂತರ ವೀಕ್ಷಣೆಯೆನ್ನುವುದು ಕೆಲವರನ್ನು ವ್ಯಸನದಂತೆ ಕಾಡುತ್ತಿದೆ. ‘ಇಂಟರ್ ನೆಟ್ ಅಡಿಕ್ಷನ್’ ಎಂಬುದು ಕಾಯಿಲೆಯ ಸ್ವರೂಪ ಪಡೆದು ಕೊಂಡಿರುವುದನ್ನು ತಿಳಿದು ಕೊಂಡರೆ ಸಾಕು, ಈ ಸಮಸ್ಯೆಯ ಗಂಭೀರತೆಯನ್ನು ಅರ್ಥ ಮಾಡಿ ಕೊಳ್ಳಬಹುದು. ಇದಕ್ಕಾಗಿ ಇಂದು ಎಷ್ಟೋ ಮಂದಿ ಮಾನಸಿಕ ತಜ್ಞರಿಂದ ಆಪ್ತ ಸಮಾಲೋಚನೆ, ಚಿಕಿತ್ಸೆ ಪಡೆದು ಕೊಳ್ಳಬೇಕಾಗಿ ಬಂದಿರುವುದು ಕಣ್ಣೆದೆರುಗಿನ ವಾಸ್ತವ.

ಸಾಮಾಜಿಕ ಮಾಧ್ಯಮಗಳನ್ನು ವೈಚಾರಿಕ, ವೈಜ್ಞಾನಿಕ ವಿಷಯಗಳ ಮಂಡನೆ, ಚರ್ಚೆಗಳಿಗೆ ಬಳಸುವುದರಲ್ಲಿ ಅರ್ಥವಿದೆ. ಸದಭಿರುಚಿಯುಳ್ಳ ಮನರಂಜನೆಯೂ ಒಪ್ಪುವಂತಹದ್ದೆ. ಆದರೆ ಪ್ರಸಕ್ತ ಇಲ್ಲಿ ನಡೆಯುತ್ತಿರುವುದಾದರೂ ಏನು? ಕಾಲ ಹರಣ ಮಾಡುವುದಕ್ಕೋ, ಯಾವುದೋ ದುರುದ್ದೇಶ ಈಡೇರಿಸಲೋ ಈ ಮಾಧ್ಯಮಗಳು ಬಳಕೆಯಾಗುತ್ತಿರುವುದೇ ಹೆಚ್ಚು.

ಜನಪ್ರಿಯ ಮಾಧ್ಯಮವಾಗಿರುವ ಫೇಸ್‌ಬುಕ್‌ನಲ್ಲಿ ವ್ಯೆದ್ಯಕೀಯ, ಸಾಹಿತ್ಯಿಕ ವಿಚಾರಗಳು ಉಪಯುಕ್ತವೆನಿಸುತ್ತವೆ. ಹಾಗೆಯೇ ಕೆಲವೊಂದು ಮಾಹಿತಿ, ಸಮಕಾಲೀನ ಬೆಳವಣಿಗೆಗಳು ಗಮನ ಸೆಳೆಯವಂತಿರುತ್ತವೆ. ಆದರೆ ‘ಫೇಸ್‌ಬುಕ್ ಫ್ರೆಂಡ್ಸ್’ ಎಂಬ ಪರಿಕಲ್ಪನೆ ಇರುವ ಈ ಮಾಧ್ಯಮದಲ್ಲಿ ಹೊಸ ಪರಿಚಯ, ಸ್ನೇಹ ಎನ್ನುವುದು ತಲೆನೋವು ತರುವುದೂ ಇದೆ. ಅನೈತಿಕ ಸಂಬಂಧ ಹಾಗೂ ವ್ಯವಹಾರಿಕ ಸಂಬಂಧಕ್ಕಾಗಿಯೇ ಕೆಲವರು ಇಂತಹ ಮಾಧ್ಯಮದಲ್ಲಿ ತೊಡಗಿಸಿ ಕೊಂಡಿರುವುದು ಸುಳ್ಳಲ್ಲ. ಇದು ಸಾಮಾಜಿಕ ಸ್ವಾಸ್ಥ್ಯ ಕೆಡಿಸುವಂತಹ ಬೆಳವಣಿಗೆ. ಫೇಸ್‌ಬುಕ್‌ನಲ್ಲಿ ಇಂದು ವೈಚಾರಿಕ, ಜಾತ್ಯತೀತ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತ ಪಡಿಸುವುದು ಸುಲಭದ ಮಾತಲ್ಲ. ಸಾಕಷ್ಟು ಪೂರ್ವಗ್ರಹ ಪೀಡಿತ ವ್ಯಕ್ತಿಗಳು ಇಲ್ಲಿರುವುದರಿಂದ ಪರಿಣಾಮಗಳನ್ನು ಎದುರಿಸುವಂತಹ ಎದೆಗಾರಿಕೆಯೂ ಅಗತ್ಯ. ನಾವು ಭಿನ್ನಮತ, ರಚನಾತ್ಮಕ ಟೀಕೆಗಳನ್ನು ಸಹಜವಾಗಿಯೆ ಸ್ವೀಕರಿಸಬಹುದು. ಆದರೆ ಇಂತಹ ವ್ಯಕ್ತಿಗಳ ಆಕ್ರಮಣಕಾರಿ ಹೀಯಾಳಿಕೆ, ಬೈಗುಳಗಳ ದಾಳಿ ಎದುರಿಸುವುದು ಸುಲಭದ ಮಾತಲ್ಲ. ಸಭ್ಯರಾದವರು ಇಲ್ಲಿ ಮಾನಸಿಕ ಆಘಾತ, ನೋವು ಅನುಭವಿಸುವುದರಿಂದ ಪಾರಾಗುವಂತಿಲ್ಲ. ಹೀಗಾಗಿ ಇಂತಹ ಮಾಧ್ಯಮಗಳಲ್ಲಿ ಆರೋಗ್ಯಕಾರಿಯಾದ ವಿಚಾರ ವಿನಿಮಯ, ಚರ್ಚೆ ಎನ್ನುವುದು ಕನಸಿನ ಮಾತು. ಈಗೀಗ ವಾಟ್ಸ್‌ಆ್ಯಪ್ ಎನ್ನುವುದು ಅಗ್ಗದ ಜೋಕ್ಸ್, ಪಕ್ವತೆಯಿಲ್ಲದ ವಿಚಾರಗಳಿಗೆ ಸೀಮಿತವಾಗುವುದೇ ಹೆಚ್ಚು. ಆದರೆ ನೋವಿನ ವಿಷಯವೆಂದರೆ ಇದು ಸಂಬಂಧಿಕರ, ಸಹದ್ಯೋಗಿಗಳ, ಗೆಳೆಯರ ಸೌಹಾರ್ದ ಸಂಬಂಧಗಳಿಗೆ ತೊಡಕಾಗುವಂತಹದ್ದು. ಕೆಲವರಿಗೆ ತಮ್ಮ ವೈಯಕ್ತಿಕ ರಾಜಕೀಯ, ಸಾಮಾಜಿಕ, ಧಾರ್ಮಿಕ ನಿಲುವುಗಳನ್ನು ಇನ್ನೊಬ್ಬರ ಮೇಲೆ ಹೇರುವುದು ತಪ್ಪೆಂದು ತಿಳಿದಿದ್ದರೂ ಇಂತಹ ಮನೋಭಾವದವರು ಇನ್ನೊಬ್ಬರ ಅಭಿರುಚಿಯನ್ನು ಅರ್ಥ ಮಾಡಿಕೊಳ್ಳದೆ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವಂತಹ; ತಮ್ಮಿಷ್ಟದ ವೀಡಿಯೊ, ಆಡಿಯೊ ಕ್ಲಿಪ್ಸ್‌ಗಳನ್ನು ರವಾನಿಸುತ್ತ ಆತ್ಮೀಯ ಬಳಗದವರ ಮನಸ್ಸನ್ನು ನೋಯಿಸುವುದಲ್ಲದೆ ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತಾರೆ. ಈಗ ಕೆಲವು ನಿರ್ದಿಷ್ಟ ಉದ್ದೇಶಗಳಿಗೆ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಸೃಷ್ಟಿಸಿಕೊಳ್ಳುವುದಿದೆ. ಇಂತಹ ಸಂದರ್ಭದಲ್ಲಿ ಈ ಜಿಗುಟು ಮನೋಭಾವದವರು ಯಾವುದೋ ನಿರ್ದಿಷ್ಟ ಉದ್ದೇಶಗಳಿಗೋಸ್ಕರ ಸೃಷ್ಟಿಸಲಾದ ಗುಂಪುಗಳಲ್ಲಿ ಸಹ ತಮ್ಮ ಮೂಗಿನ ನೇರಕ್ಕಿರುವ ಸಂಬಂಧ ಪಡದ ವಿಷಯ, ದೃಶ್ಯಾವಳಿಗಳನ್ನು ಕಳುಹಿಸಿ ಅಹಿತಕರ ಪರಿಣಾಮ ಉಂಟು ಮಾಡುತ್ತಾರೆ. ಕೊನೆಗೆ ಈ ಗುಂಪುಗಳು ಒಡೆಯುವ ಹಂತ ತಲುಪುತ್ತದೆ.

ದೇಶದ ಪ್ರಮುಖ ರಾಜಕೀಯ ಪಕ್ಷಗಳೂ ಇಂದು ಸಾಮಾಜಿಕ ಮಾಧ್ಯಮಗಳನ್ನು ಪಕ್ಷದ ನೆಲೆ ವಿಸ್ತರಣೆ, ಮತಗಳಿಕೆಗಾಗಿ ಬಳಸಿ ಕೊಳ್ಳುತ್ತಿವೆ. ಇದರಲ್ಲಿ ತಪ್ಪೇನಿಲ್ಲ. ಆದರೆ ಅವುಗಳ ಗುಣ ಮಟ್ಟ ಅಪೇಕ್ಷಣೀಯ ಮಟ್ಟದಲ್ಲಿ ಇಲ್ಲದಿರುವುದು ಬೇಸರದ ವಿಚಾರ. ಜನತೆಗೆ ಮಾದರಿಯಾಗಬೇಕಾದ ಆಡಳಿತ ನಡೆಸುವಂತಹ ಪಕ್ಷಗಳೇ ಅಗ್ಗದ ತಂತ್ರಗಾರಿಕೆಗೆ ಶರಣಾಗಿರುವುದು ನಿಜಕ್ಕೂ ಖೇದಕರ. ಒಂದು ಕಡೆ ತಮ್ಮ ನಾಯಕನ ವ್ಯಕ್ತಿತವನ್ನು ಉತ್ಪ್ರೇಕ್ಷಿಸಿಕೊಳ್ಳುತ್ತಾ ಇನ್ನೊಂದೆಡೆ ಪ್ರತಿ ಪಕ್ಷದ ನಾಯಕನ್ನು ಅವಮಾನಕಾರಿಯಾಗಿ ಹೀಯಾಳಿಸುವುದು ಕಂಡು ಬರುತ್ತದೆ. ಎಲ್ಲಕ್ಕಿಂತ ಆಘಾತಕಾರಿಯಾದ ಸಂಗತಿಯೆಂದರೆ ಅರೆ ಸತ್ಯ-ಸುಳ್ಳು ಕಥಾನಕಗಳನ್ನು ಚುನಾವಣೆ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಹರಡುವುದು. ಇದಕ್ಕೆ ಪೂರಕವಾಗಿ ಆ ಪಕ್ಷಗಳ ಬೆಂಬಲಿಗರು ಸಾಮಾಜಿಕ ಸಾಮರಸ್ಯ ಕದಡುವ ರೀತಿಯಲ್ಲಿ ಪ್ರಚೋದನಕಾರಿ ಆಡಿಯೊ, ವೀಡಿಯೊಗಳನ್ನು ವ್ಯಾಪಕವಾಗಿ ತೇಲಿ ಬಿಡುತ್ತಾರೆ. ಆದ್ದರಿಂದ ಈ ವಿಷಯದಲ್ಲಿ ಪಕ್ಷಗಳ ಮುಂದಾಳುಗಳು ಹಾಗೂ ಅವುಗಳ ‘ಐಟಿ ಸೆಲ್’ಗಳು ಅಗತ್ಯವಾಗಿ ಆತ್ಮ ಶೋಧನೆ ಮಾಡಿಕೊಳ್ಳುವುದು ಒಳಿತು.

ಸಾಮಾಜಿಕ ಮಾಧ್ಯಮಗಳ ಅವಾಂತರಗಳನ್ನು ತಡೆಗಟ್ಟುವುದು ಸುಲಭದ ಮಾತಲ್ಲ. ಸರಕಾರ ಯಾವುದೇ ಕಾನೂನು ಜಾರಿ ತಂದರೂ ಅದರ ಪರಿಣಾಮಕಾರಿ ಅನುಷ್ಠಾನದಲ್ಲಿ ಸೋಲಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಸರಕಾರ, ನ್ಯಾಯಾಂಗ ಹಾಗೂ ದೇಶದ ಪ್ರಜ್ಞಾವಂತ ಜನತೆ ಒಟ್ಟಾಗಿ ಕೈ ಜೊಡಿಸಿದರೆ ಪರಿಹಾರ ಇಲ್ಲದಿಲ್ಲ. ಈ ನಿಟ್ಟಿನಲ್ಲಿ ಎಳೆಯ ಮಕ್ಕಳು, ಹದಿ ಹರೆಯದವರು ಹಾಗೂ ಮುಗ್ಧರಾದ ಅವಿದ್ಯಾವಂತರ ಹಿತದೃಷ್ಟಿ ನಮಗೆ ಮುಖ್ಯವಾಗಬೇಕು. ಜೊತೆಗೆ ಸುಸಂಸ್ಕೃತ ಸಮಾಜ ನಿರ್ಮಾಣದ ಆಶಯ ಕೂಡಾ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಕುಮಾರ್ ಕುಡ್ತಡ್ಕ

contributor

Similar News