ಪಂಜೆಯವರ ಕುರಿತು ಶಿವರಾಮ ಕಾರಂತರ ಕೆಲವು ನೆನಪುಗಳು
ಇವತ್ತು ಅಕ್ಟೋಬರ್ 10. ಡಾ. ಶಿವರಾಮ ಕಾರಂತರ 123ನೇ ಜನ್ಮದಿನಾಚರಣೆಯ ಸಂದರ್ಭ. 1938ರಲ್ಲಿ ಪ್ರಕಟವಾದ ಪತ್ರಿಕಾ ಬರಹವೊಂದರಲ್ಲಿ ಕಾರಂತರು ಪಂಜೆ ಮಂಗೇಶರಾಯರ ಕುರಿತು ಅತ್ಯಂತ ಆಪ್ತವಾಗಿ ಬರೆದಿದ್ದಾರೆ. ಈ ಬರಹ ಪಂಜೆಯವರಿಗೆ ನೀಡಿದ ಗೌರವ ಸ್ಮರಣಾಂಜಲಿ ಬರಹ ಎಂಬುದಕ್ಕಿಂತಲೂ ಕಾರಂತ -ಪಂಜೆಯವರ ಸ್ನೇಹ-ಕಾರ್ಯ ಚಟುವಟಿಕೆಗಳ ಕುರಿತ ಲೇಖನವಾಗಿದ್ದು, ಕಾರಂತರ ಜನ್ಮ ದಿನಾಚರಣೆಯ ನೆನಪಿನ ಬರಹವಾಗಿ ಇದನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಸಂಗ್ರಹ: ಐ.ಕೆ. ಬೊಳುವಾರು
ಕೆಲವೇ ದಿನಗಳ ಅಸ್ವಸ್ಥದಿಂದ ಶ್ರೀ ಪಂಜೆಯವರು ನಮಗೆ ದೂರವಾದ ಹೈದರಾಬಾದಿನಲ್ಲಿ ಮೃತ್ಯುವಶರಾದರು, ಎಂದು ಕೇಳಿದಾಗ ಆ ಸುದ್ದಿಯನ್ನು ನಿಜವೆಂದು ನಂಬುವುದೇ ಕಷ್ಟವಾಯಿತು. ಸರಿ-ಸುದ್ದಿ ನಿಜವಾದುದೇ ಎಂದು ತಿಳಿದ ಬಳಿಕ ಮೊದಲ ಸೋಜಿಗ, ಆಶ್ಚರ್ಯಗಳು ನೋವಿಗೆ ಎಡೆ ಮಾಡಿಕೊಟ್ಟುವು.
ದಕ್ಷಿಣ ಕನ್ನಡದವರಾದ ನಮ್ಮಲ್ಲಿ ಹಲವರಿಗೆ ಪಂಜೆಯವರು-ಬರಿಯ ವ್ಯಕ್ತಿಗಳು ಮಾತ್ರವಾಗಿರದೆ ಒಂದು ಸಂಸ್ಥೆಯೇ ಆಗಿದ್ದರು. ವ್ಯಕ್ತಿಗಷ್ಟೆ ಸಾವಿನ ಮಿತಿ; ಸಂಸ್ಥೆಯನ್ನು ಮೀರಿ ಉಳಿಯಬಲ್ಲ ಶಕ್ತಿಯು. ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ನನ್ನ ಹಲವಾರು ಜನಗಳಿಗೆ ಪಂಜೆಯವರ ಹೆಸರು ಓ ಮಂತ್ರವಿದ್ದಂತೆ!
ಅವರ ಹಿರಿಮೆಯೆಂಬುದು ವ್ಯಕ್ತಿಯಾಗಿಯೂ ನಿಲ್ಲಬಲ್ಲುದು; ಸಾಹಿತಿಯಾಗಿಯೂ ನಿಲ್ಲ ಬಲ್ಲುದು. ಸಾಹಿತಿಗಳ ಪಾಲಿಗೆ, ಸಾಹಿತ್ಯಪ್ರಿಯರ ಪಾಲಿಗೆ ಅವರಲ್ಲಿ ಅಪೂರ್ವ ಗುಣ, ಆಕರ್ಷಣ ಶಕ್ತಿ ಇದ್ದಂತಿತ್ತು. ಅವರ ಮಗುವಿನ ಮನಸ್ಸು; ತುಂಬು ನಗೆ, ನಯ ವಿನಯ-ಎಲ್ಲ ಬಗೆಯ ಜನಗಳನ್ನು ಸಮೀಪಕ್ಕೆ ತರಿಸಿಕೊಳ್ಳುವ ಚುಂಬಕ ಶಕ್ತಿಯಾಗಿತ್ತು. ಕಲಾಸೃಷ್ಟಿ ಮಾಡಬಲ್ಲ ಅವರು ಇತರ ಕಲಾವಿದರನ್ನು ಕಾಲ, ದೇಶ, ವಯಸ್ಸಿನ ಅಂತರವನ್ನು ಮೀರಿಯೂ ತಿಳಿದು ಮೆಚ್ಚಬಲ್ಲವರಾಗಿದ್ದರು.. ಅವರ ಕಾಲದಲ್ಲಿಯೇ, ಕಣ್ಮುಂದೆಯೇ ಅವರ ಮಿತ್ರರನೇಕರು ಹಳೆ-ಹೊಸತುಗಳ ವಿಚಾರದಲ್ಲಿ ಜಗಳಾಡುತ್ತಿದ್ದ ದಿನವದು. ಸಂಸ್ಕೃತಿಯ ಪುನರುಜ್ಜೀವನದ ಕಾಲದಲ್ಲಿ ಅಂತಹ ಕೋಲಾಹಲ ತೀರ ಸ್ವಾಭಾವಿಕವೆನ್ನಬೇಕು.
ಶ್ರೀ ಪಂಜೆಯವರು ಈ ವ್ಯರ್ಥ ಕಾದಾಟ ವನ್ನು ಕಂಡು ನಗುತ್ತಿದ್ದವರಲ್ಲೊಬ್ಬರು. ಅವರಿಗೆ ಹಳತು-ಹೊಸತುಗಳೆರಡರಲ್ಲಿಯೂ ಪ್ರೀತಿಯೇ ಸತ್ಯ, ಸೌಂದರ್ಯ ಇರುವಲ್ಲಿ ಎರಡನ್ನೂ ಅವರು ಮೆಚ್ಚುವವರೇ.
ಸಾಹಿತ್ಯದಲ್ಲಿ, ಕಾವ್ಯದಲ್ಲಿ ಅವರ ನೋಟ ವಿಚಿತ್ರವಾದದ್ದು; ವಿಶೇಷವಾದದ್ದು. ಹೊರಗಿನ ಕಟ್ಟು, ಕಟ್ಟಲೆಗಳ ಬೇಡಗಳನ್ನು ದಾಟಿ ಒಳಗೆ ಹುದುಗಿದ ಚೆಲುವು, ಕಂಪು, ಸತ್ಯವೇನೆಂದು ಅರಸಿ, ತಿಳಿದು, ಮೆಚ್ಚುವಂಥ ಅಪೂರ್ವ ದೃಷ್ಟಿ ಅವರದು. ಅವರ ಕಿವಿಗೆ ಸಂಗೀತ ಸದಾಮೋಹಕ ವಸ್ತು; ಒಂಟಿಯಾಗಿ ಇರುವಾಗಲೆಲ್ಲ ಜೈಮಿನಿಯಿಂದಲೋ ಗದುಗಿನ ಭಾರತದಿಂದಲೋ, ತುಳುಪಾಡ್ದ ನದಿಂದಲೋ ಏನಾದರೊಂದು ಸಾಲೆತ್ತಿಕೊಂಡು ರಾಗವಾಗಿ ಹಾಡುತ್ತ, ಅದರ ನಾದ ಲಹರಿ, ತರಂಗಿತತೆಗಳಲ್ಲಿ ಹುದುಗಿದ ಸವಿಯನ್ನು ಆಸ್ವಾದಿಸುತ್ತ ಆಚೀಚೆ ಹೆಜ್ಜೆ ಹಾಕುತ್ತಿರುವುದು ಅವರದ್ದೊಂದು ಅಭ್ಯಾಸ. ಬರಿಯ ಶಬ್ದಾಡಂಬರ ಅವರಿಗೆ ಅಮುಖ್ಯ.
ಸಾಹಿತ್ಯಕೃತಿಯಲ್ಲಿ ನಾದ, ಧ್ವನಿಗೆ ತುಂಬ ಪ್ರಾಧಾನ್ಯವಿದೆಯೆಂದು ಅರಿತವರವರು. ತಮ್ಮ ಬಳಿಗೆ ಹೊಸಬನಾವನಾದರೂ ಬಂದರೆ, ಸಾಹಿತ್ಯ ಪಿಪಾಸೆ ತೋರಿಸಿದರೆ ಅಕ್ಕರೆಯಿಂದ, ವಿನಯದಿಂದ ಕವನದ ಒಳ್ಳೆಯ ಮಾದರಿಗಳನ್ನು ಅವನೆದುರಿಗೆ ಹಾಡಿ ತೋರಿಸುತ್ತಿದ್ದರು. ಹಾಗೆ ತಮ್ಮಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದ ಬಗೆಯಲ್ಲೇ, ಅಷ್ಟೇ ಗಟ್ಟಿಯಾಗಿ, ಸ್ಪಷ್ಟವಾಗಿ ಹಳೆಯ ಕವಿಗಳೆಷ್ಟೋ ಮಂದಿಯ ಶುಷ್ಕವಾದ, ಚಮತ್ಕಾರಿಕವಾದರೂ ರಸಶೂನ್ಯವಾಗಿರುವ ಕವನಗಳನ್ನೂ ಕುರಿತು ‘‘ಇದಲ್ಲ-ಸಮನಲ್ಲ’’ವೆಂದು ತಲೆಯಲ್ಲಾಡಿಸಿ ಖಂಡಿಸುತ್ತಿದ್ದರು. ಅವರ ಮೆಚ್ಚುಗೆ, ಖಂಡನೆಗಳೆರಡೂ ತೆರೆಬಾಯಿಯವು. ಕಾವ್ಯದಲ್ಲಿ ಎಲ್ಲಿ ಚೆಲುವಿದೆ; ಎಲ್ಲಿ ಜಂಬವಿದೆ ಎಂದು ಕಂಡೊಡನೆ ತೋರಿಸಬಲ್ಲ ಕಣ್ಣು ಅವರದು.
ನಮ್ಮ ಕನ್ನಡ ವಾಂಗ್ಮಯ ಪುನರುಜ್ಜೀವನ ಕ್ಷೇತ್ರದಲ್ಲಿ ಅವರು ಮಾರ್ಗದರ್ಶಕರೂ, ಉತ್ಸಾಹಿಗಳೂ, ಪ್ರಮುಖರೂ ಆಗಿ ದುಡಿದವರಲ್ಲಿ ಒಬ್ಬರು. ಅದರ ವಿವಿಧ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಕಾಣಿಕೆಯೂ ಅಲ್ಪವಾಗಿಲ್ಲ. ಹೊಸದಾರಿ, ಹೊಸ ರಚನೆ, ಹೊಸದೃಷ್ಟಿಗಳೆಲ್ಲದರಲ್ಲೂ ಅವರಿಗೆ ಮಮತೆಯಿತ್ತು. ಯಾವನಾದರೊಬ್ಬ ಕಿರಿಯನಲ್ಲಿ ಒಂದಿಷ್ಟು ಭರವಸೆ, ಪ್ರತಿಭೆ, ಸ್ಫೂರ್ತಿಗಳನ್ನು ಕಂಡುದಾದರೆ- ತಮ್ಮ ಹಿರಿತನ ಪ್ರತಿಷ್ಠೆಗಳನ್ನು ಮೂಲೆಗೊತ್ತಿ, ಅವನ ಬಳಿಗೆ ಬಂದು, ಅವನನ್ನು ಪ್ರೋತ್ಸಾಹಿಸಿ, ಸ್ನೇಹದಿಂದ ಅವನ ಬೆಳವಣಿಗೆಗೆ ತಮ್ಮಿಂದಾದ ಸಹಾಯ ಮಾಡುತ್ತಿದ್ದರು.
ಶ್ರೀ ಪಂಜೆಯವರ ಸಾಹಿತ್ಯವೆಂಬುದು ಜೀವನದ ಒಂದು ಅಂಗವಾಗಿತ್ತು; ಜೀವನವೇ ಆಗಿತ್ತೆಂದರೂ ತಪ್ಪಲ್ಲ. ಜೀವನದ ನಾನಾ ಮುಖಗಳನ್ನು ಕಂಡುಂಡವರಾದುದರಿಂದಲೇ ಅವರಿಗೆ ಅಂತಹ ನೋಟ ಪ್ರಾಪ್ತಿಸಿರಬೇಕು. ಅವರು ಶಾಲಾ ಇನ್‌ಸ್ಪೆಕ್ಟರರಾಗಿದ್ದ ಸಮಯದಲ್ಲಿ ಎರಡೆರಡು ಕೆಲಸಗಳನ್ನು ಜತೆಗೆ ಮಾಡಿಕೊಂಡು ಹೋಗುತ್ತಿದ್ದಂತೆ ಕಾಣುತ್ತದೆ. ತಮ್ಮ ನೌಕರಿಯ ಕರ್ತವ್ಯಗಳೊಂದಿಗೆ ಹಳ್ಳಿಗಳಲ್ಲಿ ವಿವಿಧ ಜನಪದ ಸಾಹಿತ್ಯವನ್ನು ಸಂಗ್ರಹಿಸುತ್ತಿದ್ದರಲ್ಲದೆ, ಅವರನ್ನು ಪ್ರೇರಿಸಿದ ಹಳ್ಳಿಗರ ಸರಳ ಜೀವನ ತಿಳಿಯಲು ಪ್ರಯತ್ನಿಸುತ್ತಿದ್ದರು
ಅದು ತುಳುವಿರಲಿ, ಕೊಂಕಣಿಯಿರಲಿ, ಕನ್ನಡವಿರಲಿ ಎಲ್ಲಾದರೊಂದು ಚೆಲುವಿನ ಗಾದೆ, ದೇಸಿ, ಗೀತ, ಕತೆ ಕಿವಿಗೆ ಬಿತ್ತೆಂದರೆ ಅವರ ಮನಸ್ಸೆಲ್ಲ ಧುಮುಕಿತೇ- ಅದರ ಸೆರಗನ್ನು ಹಿಡಿದು, ಸಂಶೋಧಕನಂತೆ, ಬೇಟೆಗಾರನಂತೆ, ಪ್ರಣಯಿಯಂತೆ ಆ ಚೆಲುವಿನ ವಸ್ತು ಎಲ್ಲಿ ಹುಟ್ಟಿತು, ಹೇಗೆ ಉಂಟಾಯಿತು, ಹೇಗೆ ಈ ರೂಪ ತಾಳಿತು ಎಂದು ಅದರ ಹಿನ್ನೆಲೆಯನ್ನು ಅರಸಿ ಹೋದರೇ ಹೋದರು. ಹಲವು ಬಾರಿ, ನಾನು ಅವರಿಗೆ ನನ್ನ ಕೆಲವು ನಾಟಕಗಳನ್ನು ಓದಿ ಹೇಳಿದ್ದುಂಟು. ಹೆಚ್ಚಾಗಿ ಅವು ಗ್ರಾಮ ಜೀವನಕ್ಕೆ ಸಂಬಂಧಿಸಿದ ನಾಟಕಗಳು. ಜನತೆಯಾಡುತ್ತಿರುವ ಮಾತಿನ ಶೈಲಿಯೇ ಅದರದು. ಹಾಗೆ ಓದುವಾಗ ಎಲ್ಲಾದರೊಂದು ಶಬ್ದ ಅವರ ಮನಕ್ಕೆ ಬಂತೆಂದರೆ ತಟ್ಟನೆ ನನ್ನನ್ನು ನಿಲ್ಲಿಸಿ ‘‘ಹೌದಯ್ಯ, ಅದೆಲ್ಲಿ ಸಿಕ್ಕಿತು ನಿಮಗೆ! ನಾನು ಆ ಮಾತನ್ನು ಮೊದಲಿಗೆ ಬಾರಕೂರಲ್ಲಿ ಕೇಳಿದೆ 30 ವರ್ಷಗಳ ಹಿಂದೆ. ಅದು ತುಂಬ ಚೆನ್ನಾಗಿದೆಯಲ್ಲ’’ ಎಂದು ಉದ್ಗರಿಸುತ್ತಿದ್ದರು. ಹಾಗೆ ಮಾತು ಮುರಿದು ಜಾನಪದ ಸಾಹಿತ್ಯವನ್ನು ಕುರಿತಾದ ರಸದೌತಣಕ್ಕೇನೆ ಪ್ರಾರಂಭವಾಗುತ್ತಿತ್ತು ಒಮ್ಮೊಮ್ಮೆ.
ಶಿಕ್ಷಣ ಕ್ಷೇತ್ರದಲ್ಲಿ ಶ್ರೀ ಪಂಜೆಯವರ ದುಡಿಮೆ, ಹಿರಿಮೆಗಳೆರಡೂ ಹೆಚ್ಚಿನವು. ಅವರಿಗೆ ಚಿಕ್ಕಮಕ್ಕಳಲ್ಲಿದ್ದ ಪ್ರೇಮವೂ, ಪ್ರಾಥಮಿಕ ಶಾಲಾ ಉಪಾಧ್ಯಾಯರಲ್ಲಿದ್ದ ಮಮತೆಯೂ ಅಪಾರ. ಉಪಾಧ್ಯಾಯರನ್ನು ಅವರು ಅಧಿಕಾರದಲ್ಲಿದ್ದಾಗಲೂ ಸೋದರ ಭಾವದಿಂದ ಕಂಡವರು. ಕಲಿಸುವುದೆಂದರೆ ಅವರಿಗೆ ಜೀವ; ವಿದ್ಯಾರ್ಥಿಯು ತಾನಾದರೆ ಹೇಗೆಂದು ತಿಳಿಯಬಲ್ಲ ಗುರು ಅವರು. ಮಗುವೆಂಬ ವಸ್ತು ಗೌರವ ಸಲ್ಲಿಸಬೇಕಾದ ಜೀವ ಎಂದೇ ತಿಳಿದಿದ್ದರು. ಒಮ್ಮೆ ಶಾಲೆಯ ಶಿಕ್ಷಣದ ಪಠ್ಯಕ್ರಮವನ್ನು ಬರೆದುಕೊಡಲು ಕೆಲವು ಮಿತ್ರರು ಅವರನ್ನು ಸಮೀಪಿಸಿದರು.
ಆ ವಿಚಾರದಲ್ಲಿ ಅವರು ನನ್ನೊಡನೆ ನುಡಿದ ಮಾತುಗಳನ್ನು ಹೇಳುತ್ತಿದ್ದೇನೆ. ‘‘ಕಾರಂತರೇ, ಆ ಕೆಲಸವನ್ನು ನಾನು ಮಾಡಬೇಕಂತೆ. ಆದರೆ ಅದಕ್ಕೆಷ್ಟೆಲ್ಲ ವಿಚಾರಮಾಡಬೇಡ? ಸಮಯ ಬೇಡವೇ? ಅಷ್ಟನ್ನು ನಾನು ಕೊಡಬಲ್ಲೆನಾದರೂ 5ನೇ ತರಗತಿಯ ತನಕ, ಕೆಲವೊಂದು ವಿಷಯಗಳ ಕುರಿತು ಮಾತ್ರ ಏನಾದರೂ ಮಾಡಬಲ್ಲೆ. ಅದಕ್ಕೂ ದಾಟಿ ಮೇಲಿನ ತರಗತಿಗಳ ಪಠ್ಯಕ್ರಮ ಬರೆಯಿರಿ ಎಂದರೆ ನನ್ನಿಂದಾಗದೇ ಆಗದು; ಅದರ ಕುರಿತು ನಾನು ಈ ತನಕ ವಿಚಾರವನ್ನೇ ಮಾಡಿಲ್ಲ, ಈಗ ಮಾಡುವುದೆಲ್ಲಿಂದ ಬಂತು?’’ ಎಂದರು. ಪ್ರಾಮಾಣಿಕನಾದ ವ್ಯಕ್ತಿಗೆ ತನ್ನ ಮಿತಿ, ತನ್ನ ಕರ್ತವ್ಯದ ಭಾರ ಎರಡೂ ತಿಳಿದಾಗ ಬರುವಂಥ ಪ್ರತ್ಯುತ್ತರದ ರೀತಿ ಇದು.
1932ರಲ್ಲಿ ನಾವೆಲ್ಲ ಮಂಗಳೂರಿನಲ್ಲಿ ಒಂದು ಶಿಕ್ಷಣ ಸಪ್ತಾಹವನ್ನು ನಡೆಯಿಸುವ ಯೋಜನೆಯನ್ನು ಕೈಕೊಂಡೆವು. ನನ್ನನ್ನು ಎಳೆದುತಂದವರು ಅವರು. ಆಗ ನಾನೆಂದೆ ‘‘ತುಂಬ ಹಣದ ಖರ್ಚಿನ ಬಾಬ್ತಿದು, ದುಡ್ಡೆಲ್ಲಿಂದ ಬರಬೇಕು?’’ ಎಂದು. ಅವರಾಗ ‘‘ಕಾರಂತರೇ ನೀವು ಕೆಲಸ ಮುಂದುವರಿಸಿ’’ ಎಂದಷ್ಟೇ ನುಡಿದರು: ಆ ಕೆಲಸವನ್ನು ಶ್ರೀಮಾನ್ ಮೊಳಹಳ್ಳಿ ಶಿವರಾಯರ ಸಹಕಾರದಿಂದ ನಾನು ವಹಿಸಿಕೊಂಡೆ. ಒಂದು ವಾರದ ವಿಸ್ತಾರ ಕಾರ್ಯಕ್ರಮದ ಏರ್ಪಾಟಾಯಿತು. ಉಪನ್ಯಾಸಗಳು, ದೇಖಾವೆಗಳು, ವಿನೋದಗಳು ಎಲ್ಲವನ್ನೂ ಕೂಡಿದ ಒಂದು ಉತ್ಸವವೇ ಜರುಗಿತು. ಜನರು ತುಂಬಿದರು. ಆದರೆ ನಾವೆಣಿಸಿದಂತೆ ಧನಸಹಾಯ ಯಾವ ಮೂಲೆಯಿಂದಲೂ ಬರಲಿಲ್ಲ. ಶ್ರೀ ಪಂಜೆಯವರು ಶ್ರೀಮಂತರ ಮನೆಯ ಎದುರುನಿಂತು ಸೆರಗೊಡ್ಡಿ ಬೇಡುವವರಲ್ಲ.‘‘ಜನ ತಾವಾಗಿ ಇಂತಹ ಕೆಲಸಗಳಿಗೆ ಮುಂದೆ ಬಂದು ಸಹಾಯ ಮಾಡಬೇಕು. ಇದು ಹತ್ತು ಜನರ ಕೆಲಸವಲ್ಲವೇ? ಬದಲಿಗೆ ವಂತಿಗೆಪಟ್ಟಿ ಹೊರಡಿಸಿದರೆ, ಅದರ ಹಿಂದೆಯೇ ಆಮಂತ್ರಣ, ದುಡ್ಡಿನ ಅಂತರಕ್ಕೆ ಸಮನಾದ ಸ್ಥಾನಮಾನಗಳ ಸ್ವಾಗತದ ನಾಟಕ ನಡೆಯಬೇಕಾಗುತ್ತದೆ’’.
ವಿದ್ಯಾಭಿಮಾನಿಗಳೆನಿಸಿಕೊಂಡ ಕೆಲವು ಮಂಗಳೂರಿನ ಮಹಾನುಭಾವರಿಂದ ತನ್ನಂತೆ ಸಹಾಯ ಬಂದೀತೆಂದು ಅವರು ನಿರೀಕ್ಷಿಸಿದ್ದರು. ಸಪ್ತಾಹವೇನೋ ಮುಗಿಯಿತು. ಲೆಕ್ಕ ಪತ್ರ ಮಾಡಲಾಗಿ- ನಾನು ಮೂಲದಲ್ಲಿ ಸೂಚಿಸಿದಂತೆಯೇ 500 ರೂಪಾಯಿಗಳ ಖೋತಾ-ಬಿದ್ದಿತ್ತು. ಪಂಜೆಯವರಿಗೆ ಆ ವಿಚಾರ ತಿಳಿಸಿದಾಗ ನಸುನಕ್ಕರು; ‘‘ಅಷ್ಟು ಸ್ವಲ್ಪವೇ’’ಎಂಬಂತೆ ಅವರ ತುಟಿಗಳು ಬಿರಿದುವು. ಆ ಕ್ಷಣವೇ ರೂ. 500ರ ಒಂದು ಚೆಕ್ಕು ಬರೆದುಕೊಟ್ಟರು. ಬರೆಯುತ್ತಾ ಹೀಗೂ ನುಡಿದರು ‘‘ಕಾರಂತರೇ, ನಾನು ಡೆಪ್ಯುಟಿ ಇನ್‌ಸ್ಪೆಕ್ಟರನಾಗಿದ್ದಾಗ ಈ ಹಳ್ಳಿಯ ಶಾಲಾಮಾಸ್ತರು ನನ್ನ ಸಲುವಾಗಿ ಎಷ್ಟೆಲ್ಲ ಮಾಡಿಲ್ಲ. ನಾನು ಈಗ ಕೊಡುತ್ತಿರುವುದು ತೀರ ಅಲ್ಪ. ಅವರು ನನಗೆ ತೋರಿದ ಮಮತೆಗೆ ಸಮನಾದ ಋಣವನ್ನು ನಾನೆಂದಾದರೂ ಸಲ್ಲಿಸಬಲ್ಲೆನೇ?’’ ಎಂದು.
ಅವರ ಮನೋವೃತ್ತಿಯೇ ಸುಮಧುರವಾದುದು. ಬದುಕಿನ ಹೇಯನೋಟಗಳನ್ನೆಂದೂ ಸಹಿಸಲಾರದು. ಅಂಥವು ಅವರನ್ನು ತುಂಬ ನೋಯಿಸುತ್ತಿತ್ತು.
ಸಾಧ್ಯವಾದರೆ ಅವುಗಳಿಂದ ದೂರವಾಗಿರುತ್ತಿದ್ದರು. ನಾನೊಮ್ಮೆ ಉತ್ತರ ಹಿಂದೂಸ್ಥಾನದ ಪ್ರವಾಸಮಾಡಿದ್ದೆ. ಆ ವಿಚಾರವನ್ನು ತಿಳಿಸಲು ಅವರ ಮನೆಗೆ ಹೋಗಿದ್ದೆ. ನಾನು ಸಂದರ್ಶಿಸಿದ ಗ್ರಾಹಕರಲ್ಲಿ ತಾತಾನಗರ ಒಂದು. ಅಲ್ಲಿ ಶ್ರೀ ಪಂಜೆಯವರ ಹಿರಿಯ ಮಗ ಮುಕುಂದ ರಾಯರು ಕೆಲಸದಲ್ಲಿದ್ದರು. ನಾನು ಅಲ್ಲಿ ಉಕ್ಕಿನ ಕಾರ್ಖಾನೆಯ ಬೆಡಗನ್ನೆಲ್ಲಾ ಬಣ್ಣಿಸಿ
ಅದಾದ ಮೇಲೆ ಕೇಳಿದೆ ‘‘ನೀವು ತಾತಾನಗರಕ್ಕೆ ಹೋದವರು ಅಂತ ದೊಡ್ಡ ಕಾರ್ಖಾನೆಗಳನ್ನು ಕಂಡು ನಿಮಗೇನನಿಸಿತು?’’ ಅವರು ನಕ್ಕುನುಡಿದರು ‘‘ನಾನು ಅವನ್ನು ನೋಡಲೇ ಇಲ್ಲ, ಅಂತದ್ದೆಲ್ಲ ನನ್ನಿಂದ ನೋಡಲಿಕ್ಕೆ ಆಗದು’’ ಅಂದರು
ಅವರ ಚಿತ್ತವೃತ್ತಿ ಅಷ್ಟೊಂದು ಸೂಕ್ಷ್ಮ. ಅವರು ಕೇವಲ ಭಾವಜೀವಿ.
ಆ ಉಕ್ಕಿನ ಕಾರ್ಖಾನೆಯ ಕಬ್ಬಿಣದ ಗುಣಗಳನ್ನು ಬೆಸ್ಸಿಮಾರ್ ಕುಲುಮೆಗಳನ್ನು ಕಂಡು ಸಹಿಸಲು ಅವರಿಂದಾಗದು. ಅವರು ಬದುಕಿದ್ದಷ್ಟು ಕಾಲ ಅವರ ಮಂಗಳೂರಿನ ಮನೆ ಎಲ್ಲ ಕನ್ನಡ ಪ್ರಿಯರಿಗೂ ಒಂದು ಯಾತ್ರಾಸ್ಥಳವಾಗಿತ್ತು. ಇಂದು ಅವರು ಮಾಯವಾಗಿದ್ದಾರಾದರೂ ಅವರ ನೆನಪು ಅವರಿಗೆಲ್ಲ ಬಂದು ಕೈದೀವಿಗೆಯಾಗಿ ಉಳಿದಿದೆ.
ಕೆನರಾ ಬ್ರದರ್ ಹುಡ್ ಜರ್ನಲ್
ಜನವರಿ 1938