ಭಾಷಾ ಸೂಕ್ಷ್ಮತೆ ಮರೆತ ಸಂವಹನ ಸೇತುವೆಗಳು

ಸಾಮಾಜಿಕ ಮಾಧ್ಯಮಗಳ ಎಲ್ಲ ಪ್ಲಾಟ್‌ಫಾರಂಗಳು ಬಿತ್ತರಿಸುವ ಮಾತುಗಳು ಕ್ಷಣಮಾತ್ರದಲ್ಲಿ ಸಮಾಜದ ಎಲ್ಲ ಸ್ತರಗಳನ್ನೂ, ಎಲ್ಲ ವಲಯಗಳನ್ನೂ ತಲುಪುವುದೇ ಅಲ್ಲದೆ, ಅಲ್ಲಿ ಶಾಶ್ವತವಾಗಿ ನೆಲೆಗೊಳ್ಳುತ್ತವೆ. ಮತ್ತೊಂದೆಡೆ ಡಿಜಿಟಲ್ ಮಾಧ್ಯಮಗಳು ದೃಶ್ಯ ರೂಪದಲ್ಲಿರಲಿ, ಶ್ರಾವ್ಯ ರೂಪದಲ್ಲಿರಲಿ ಅದು ತಲುಪುವ ಜಾಗಗಳಲ್ಲಿರುವ ಶ್ರೋತೃಗಳನ್ನು ಅಥವಾ ಪ್ರೇಕ್ಷಕರನ್ನು ಅಷ್ಟೇ ವೇಗವಾಗಿ ಪ್ರಭಾವಿಸುತ್ತವೆ. ಈ ಪ್ರಭಾವಕ್ಕೊಳಪಡುವವರ ಪೈಕಿ ಸಮಾಜದ ಯುವ ಪೀಳಿಗೆಯೇ ಬಹುಸಂಖ್ಯಾತರಾಗಿರುವುದು ಸಹಜ. ಹಾಗಾಗಿ ಈ ತಾಣಗಳ ಮೂಲಕ ನಾವು ದಾಟಿಸಬೇಕಾದ ವಿಚಾರಗಳನ್ನು ಇಡೀ ಸಮಾಜಕ್ಕೆ ಒಪ್ಪಿಗೆಯಾಗುವ ಅಥವಾ ಸಮಾಜದ ಯಾವುದೇ ವಲಯದಲ್ಲೂ ಮುಜುಗರ ಉಂಟುಮಾಡದ ರೀತಿಯಲ್ಲಿ, ಪರಿಣಾಮಕಾರಿ ಭಾಷೆ-ಪರಿಭಾಷೆಯನ್ನು ಬಳಸುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಅವಶ್ಯ.

Update: 2024-10-10 04:36 GMT
Editor : Thouheed | Byline : ನಾ. ದಿವಾಕರ
ಭಾಷಾ ಸೂಕ್ಷ್ಮತೆ ಮರೆತ ಸಂವಹನ ಸೇತುವೆಗಳು
  • whatsapp icon

ನವ ಉದಾರವಾದ, ತಂತ್ರಜ್ಞಾನಾಧಾರಿತ ಸಂವಹನ ಕ್ರಾಂತಿ ಹಾಗೂ ಇಡೀ ಸಮಾಜದ ಮಾರುಕಟ್ಟೆ-ಕಾರ್ಪೊರೇಟೀಕರಣ ಈ ಮೂರೂ ಪ್ರಕ್ರಿಯೆಗಳು ಮಾನವ ಸಮಾಜವನ್ನು ಅದರ ಮೂಲ ಸೆಲೆಗಳಿಗೆ ಭಿನ್ನವಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಿವೆ. ಮಾರುಕಟ್ಟೆ ಎನ್ನುವುದನ್ನು ಕೇವಲ ಆರ್ಥಿಕ ನೆಲೆಯಲ್ಲಿ ನೋಡದೆ, ಸಮಾಜದ ನಿತ್ಯ ಬದುಕಿನ ಒಂದು ಭಾಗವಾಗಿ ನೋಡಿದಾಗ ಅಥವಾ ಸಾಮಾನ್ಯ ಜನಜೀವನವನ್ನು ನಿರ್ದೇಶಿಸುವ ಮೌಲಿಕ ಸಂಸ್ಕೃತಿಯ ರೂಪದಲ್ಲಿ ನೋಡಿದಾಗ, ಈ ಮಾರುಕಟ್ಟೆಯ ಗ್ರಾಹಕ ಸಂಸ್ಕೃತಿ ಬಾಹ್ಯ ಸಮಾಜದ ಬೌದ್ಧಿಕ ನೆಲೆಗಳನ್ನೂ ಆಕ್ರಮಿಸಿರುವುದನ್ನು ಗಮನಿಸಬಹುದು. ಇಲ್ಲಿ ಸೃಷ್ಟಿಯಾಗುವ ಭಾಷೆ ಅಥವಾ ಪರಿಭಾಷೆ ಅನೇಕ ಸಂದರ್ಭಗಳಲ್ಲಿ ಉತ್ಪಾದಿತವಾಗಿರುತ್ತದೆ. ಅಂದರೆ ಸಹಜ ಅಭಿವ್ಯಕ್ತಿಗಳನ್ನು ದಾಟಿ ಒಂದು ನಿರ್ದಿಷ್ಟ ಸಮಾಜಕ್ಕೆ ಅಗತ್ಯವಾದ ರೀತಿಯಲ್ಲಿ ಬಳಕೆಗೆ ಬಂದಿರುತ್ತದೆ.

ಈ ಉತ್ಪಾದಿತ ಪರಿಭಾಷೆಯನ್ನೇ ಜನಪ್ರಿಯಗೊಳಿಸುವ ಕೆಲಸವನ್ನು ಆಧುನಿಕ ಸಂವಹನ ತಂತ್ರಜ್ಞಾನಗಳನ್ನು ಬಳಸುವ ಮೂಲಕ ವಿದ್ಯುನ್ಮಾನ ಮಾಧ್ಯಮಗಳು ವ್ಯವಸ್ಥಿತವಾಗಿ ಮಾಡುತ್ತವೆ. ಸಾಹಿತ್ಯಕ ನೆಲೆಯಲ್ಲಿ ಬಳಸಲಾಗುವ ಶಿಷ್ಟ ಅಥವಾ ಶಿಷ್ಟವಲ್ಲದ ಭಾಷಾ ಪ್ರಯೋಗಗಳನ್ನು ಬದಿಗಿಟ್ಟು ನೋಡಿದಾಗ, ಮಾಧ್ಯಮಗಳು ಬಳಸುವ ಈ ಪರಿಭಾಷೆಯೇ ಸಾರ್ವಜನಿಕ ವಲಯದ ಎಲ್ಲ ಸಾಂಘಿಕ ನೆಲೆಗಳಲ್ಲೂ ನೆಲೆ ಕಂಡುಕೊಳ್ಳುತ್ತದೆ. ಬಹುಮುಖ್ಯವಾಗಿ ಸಮಾಜದ ಎಲ್ಲ ವರ್ಗಗಳನ್ನೂ ಸುಲಭವಾಗಿ ತಲುಪುವಂತಹ 24 ಘಿ 7 ಸುದ್ದಿಮನೆಗಳು, ಸಿನೆಮಾ ಮತ್ತು ಟಿವಿ ಧಾರಾವಾಹಿಗಳು ಇದನ್ನು ಬಳಸುವ ಮೂಲಕ ತಳಮಟ್ಟದ ಸಮಾಜವನ್ನು ತಲುಪಲು ನಿರಂತರ ಪ್ರಯತ್ನದಲ್ಲಿರುತ್ತವೆ. ಇಲ್ಲಿ ಉತ್ಪಾದಿಸಲಾಗುವ ಮಾರುಕಟ್ಟೆ ಭಾಷೆಯನ್ನೇ ಸಾರ್ವಜನಿಕ ವಲಯದಲ್ಲೂ ಅಳವಡಿಸಿಕೊಳ್ಳುವ ಅಪಾಯ ಸದಾ ಇದ್ದೇ ಇರುತ್ತದೆ.

ಸಾಮಾಜಿಕ ಉತ್ತರದಾಯಿತ್ವ

ಇಂತಹ ಒಂದು ಅಪಾಯವನ್ನು ಸಮಾಜ ಎದುರಿಸುತ್ತಿದೆ. ಕಂಪ್ಯೂಟರ್ ಯುಗ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸುವ ಹಂತದಲ್ಲಿ, ಕಂಪ್ಯೂಟರ್‌ಗಳ ಬಳಕೆ ಮತ್ತು ನಿರ್ವಹಣೆಗಾಗಿ ಬಳಕೆಗೆ ಬಂದ ಯುದ್ಧ ಕೇಂದ್ರಿತ ಭಾಷಾ ಬಳಕೆ ಇಂದು ಸಾಮಾನ್ಯ ಸಂವಹನ ಸಾಧನವಾಗಿ ಕಾಣುತ್ತಿದೆ. ಅಂತರ್ಜಾಲ ಎಂಬ ಆಧುನಿಕ ಸಂವಹನ ದೈತ್ಯದ ಜನನ ಆಗಿದ್ದು ಸೇನಾ ಕಾರ್ಯಾಚರಣೆಗಳ ಚೌಕಟ್ಟಿನೊಳಗೆ ಅಷ್ಟೇ ಅಲ್ಲದೆ ಸೇನಾ ವಿಭಾಗಗಳ ನಡುವೆ ನಡೆಸಬೇಕಾದ ಸಂವಾದದ ನೆಲೆಯಲ್ಲಿ. ಹಾಗಾಗಿ ಅಲ್ಲಿ Kill, Boot, Hang ಮೊದಲಾದ ಕ್ರಿಯಾತ್ಮಕ ಮತ್ತು ಹಿಂಸಾತ್ಮಕ ಪದಗಳು ಬಳಕೆಗೆ ಬಂದವು. ಸಂವಹನ ಕ್ರಾಂತಿಯ ಸಾಧನಗಳು ವ್ಯಾಪಕವಾಗಿ ಬಳಕೆಗೆ ಬರುತ್ತಿದ್ದಂತೆಲ್ಲಾ, ಈ ಸೇತುವೆಗಳನ್ನೂ ಸಹ ಇದೇ ಪದಗಳು ಆಕ್ರಮಿಸಿಕೊಂಡಿರುವುದನ್ನು ನಾವು ವಿದ್ಯುನ್ಮಾನ ಮಾಧ್ಯಮಗಳು ಬಳಸುವ ಭಾಷೆಯಲ್ಲಿ ಗಮನಿಸಬಹುದು.

ಕನ್ನಡದ ವಿದ್ಯುನ್ಮಾನ ಸುದ್ದಿಮನೆಗಳನ್ನೇ ಗಮನಿಸಿದರೂ ಪ್ರತಿದಾಳಿ, ವಾಗ್ದಾಳಿ, ವಾಗ್ಬಾಣ, ತಿರುಗೇಟು, ಒಳೇಟು ಮೊದಲಾದ ಪದಗಳು ಹೇರಳವಾಗಿ ಬಳಕೆಯಲ್ಲಿವೆ. ರಾಜಕೀಯ ಮತ್ತು ಸಾರ್ವಜನಿಕ ಸಂವಾದದಲ್ಲಿ ಸಾಮಾನ್ಯವಾಗಿ ಕಾಣುವ ಪ್ರತಿಕ್ರಿಯೆಗಳೂ, ಚರ್ಚೆಗಳೂ ಇದೇ ಪರಿಭಾಷೆಯಲ್ಲೇ ವರದಿಯಾಗುವುದನ್ನು ಮುದ್ರಣ ಮಾಧ್ಯಮಗಳಲ್ಲೂ ಗಮನಿಸಬಹುದು. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ನಾಯಕರ ಭಾಷಣಗಳನ್ನು ಗಮನಿಸಿದಾಗ ಇನ್ನೂ ಹೆಚ್ಚಿನ ಹಿಂಸಾತ್ಮಕ ಪರಿಭಾಷೆಯ ಬಳಕೆಯನ್ನು ಗುರುತಿಸಬಹುದು. ರಾಜಕೀಯ ವಿರೋಧಿಗಳನ್ನು ‘ಶತ್ರು’ ಎಂದು ಬಣ್ಣಿಸುವ ಅಥವಾ ಭಿನ್ನಮತವನ್ನು ‘ದ್ರೋಹ’ ಎಂದು ಪರಿಭಾವಿಸುವ ರಾಜಕೀಯ ಸಂಕಥನಗಳು ವರ್ತಮಾನದ ಸಮಾಜಕ್ಕೆ ಅಭ್ಯಾಸವಾಗಿ ಹೋಗಿದೆ. ಮಾರುಕಟ್ಟೆಯ ಗ್ರಾಹಕ ಸಂಸ್ಕೃತಿ ತಂತ್ರಜ್ಞಾನದ ಸಾಧನಗಳನ್ನು ಆಕ್ರಮಿಸುತ್ತಿರುವಂತೆಯೇ, ಇದೇ ಸಾಧನಗಳ ಮೂಲಕ ನಡೆಯುವ ಸಂವಹನದ ಭಾಷೆ-ಪರಿಭಾಷೆಗಳನ್ನೂ ಪ್ರಭಾವಿಸುತ್ತದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ.

ಈ ಬೆಳವಣಿಗೆಗಳ ಮತ್ತೊಂದು ಬದಿಯಲ್ಲಿ ನಾವು ಗಮನಿಸಬೇಕಿರುವುದು ಸಾಮಾಜಿಕ ಮಾಧ್ಯಮಗಳ ಹಾಗೂ ಇದನ್ನು ಆಕ್ರಮಿಸಿರುವ ಯೂಟ್ಯೂಬ್, ಎಕ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್ ಮತ್ತಿತರ ಡಿಜಿಟಲ್ ಪ್ಲಾಟ್‌ಫಾರಂ ಅಥವಾ ಸಂವಹನ ಸೇತುವೆಗಳನ್ನು. ಮುಖ್ಯವಾಹಿನಿಯ ವಿದ್ಯುನ್ಮಾನ ಮಾಧ್ಯಮಗಳನ್ನು ಆರ್ಥಿಕ ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸುವ ಕಾರ್ಪೊರೇಟ್ ಉದ್ದಿಮೆಗಳೇ ವ್ಯಾಪಕವಾಗಿ ಆಕ್ರಮಿಸಿರುವುದರಿಂದ, ತಳಮಟ್ಟದ ಸಮಾಜದಲ್ಲಿ ಮತ್ತು ಮಧ್ಯಮ ವರ್ಗಗಳನ್ನು ಪ್ರತಿನಿಧಿಸುವ ಸಮುದಾಯಗಳಲ್ಲಿ ಸಾಮಾಜಿಕ ಮಾಧ್ಯಮಗಳು ತಮ್ಮ ಅವಕಾಶಗಳನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿದೆ. ಈ ಸಾಮಾಜಿಕ ಮಾಧ್ಯಮಗಳ ಡಿಜಿಟಲ್ ಪ್ಲಾಟ್‌ಫಾರಂಗಳ ಮೂಲಕ ತಮ್ಮ ಅಭಿಪ್ರಾಯ, ಅನಿಸಿಕೆ ಮತ್ತು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ, ನಾವು ಬಳಸುವ ಭಾಷೆ-ಪರಿಭಾಷೆಯ ಚೌಕಟ್ಟು ಹೇಗಿರಬೇಕು ಎನ್ನುವುದು ಬಹುಚರ್ಚಿತ ವಿಷಯವಾಗಿದೆ.

ಸಾಮಾಜಿಕ-ಸಾರ್ವಜನಿಕ ಪ್ರಜ್ಞೆ

ಇಲ್ಲಿ ನಮಗೆ ಸಾರ್ವಜನಿಕವಾಗಿ ಬಳಕೆಯಾಗಬೇಕಿರುವ, ಬಳಕೆಯಾಗುತ್ತಿರುವ ಮತ್ತು ಬಳಕೆಯಾಗಬಹುದಾದ ಭಾಷೆ-ಪರಿಭಾಷೆ ಮುಖ್ಯವಾಗುತ್ತದೆ. ತಳಮಟ್ಟದ ಸಮಾಜ ಮಾತ್ರವೇ ಅಲ್ಲದೆ ನಗರೀಕರಣಕ್ಕೊಳಗಾದ, ಆಧುನಿಕ ಸುಶಿಕ್ಷಿತ ಹಿತವಲಯದಲ್ಲೂ ಈ ಭಾಷೆಯನ್ನು ಪ್ರಭಾವಿಸುವುದು ‘ಶಿಷ್ಟ ಭಾಷೆ’ ಎಂದು ಕರೆಯಲಾಗುವ, ರೂಢಿಗತವಾದ ಸಾಹಿತ್ಯಕ ಅಥವಾ ಲಿಖಿತ ಭಾಷೆ ಮತ್ತು ಇದನ್ನೇ ಅನುಕರಿಸುವ ಸಿನೆಮಾ ಮತ್ತಿತರ ದೃಶ್ಯ ಮಾಧ್ಯಮಗಳ ಪರಿಭಾಷೆ. ಇಲ್ಲಿ ‘ಶಿಷ್ಟ’ ಎಂಬ ಪದವನ್ನು ಸಾಂಪ್ರದಾಯಿಕ ಅರ್ಥದಲ್ಲಿ ಬಳಸದೆ, ವ್ಯಾಪಕ ಸಮಾಜದಲ್ಲಿ ರೂಢಿಗತವಾಗಿ, ಸ್ವೀಕೃತವಾಗಿರುವ ಒಂದು ಪದದ ರೂಪದಲ್ಲಿ ಅರ್ಥಮಾಡಿಕೊಂಡರೆ, ಇದು ಸಮಾಜದ ಎಲ್ಲ ಸ್ತರಗಳಲ್ಲೂ ಪ್ರಭಾವಿಸಿರುವುದನ್ನು ಗುರುತಿಸಲು ಸಾಧ್ಯ. ಹಾಗಾಗಿ ಶಿಷ್ಟ ಎಂಬುದನ್ನು ಶ್ರೇಷ್ಠ ಅಥವಾ ಉತ್ಕೃಷ್ಟ ಎಂದು ಅರ್ಥೈಸುವ ಅಗತ್ಯವಿಲ್ಲ ಅಥವಾ ಅದಕ್ಕೆ ಪ್ರತಿವಾದಿಯಾಗಿ ಶಿಷ್ಟೇತರ ಅಥವಾ ಪರಿಶಿಷ್ಟ ಎಂದೂ ಅರ್ಥೈಸಬೇಕಿಲ್ಲ.

ಆದರೆ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಸಂಭಾಷಿಸುವಾಗ ನಮ್ಮೊಳಗಿನ ನಾಗರಿಕ ಪ್ರಜ್ಞೆ ಮತ್ತು ಸಾರ್ವಜನಿಕ ಪ್ರಜ್ಞೆ ಸದಾ ಜಾಗೃತವಾಗಿರಬೇಕಾದ್ದು ಅತ್ಯವಶ್ಯ. ಏಕೆಂದರೆ ತಂತ್ರಜ್ಞಾನದ ಹರಿವು, ವಿಸ್ತರಣೆ ಮತ್ತು ಪ್ರಸರಣದ ವೇಗ ಒಂದು ಮಾತನ್ನು ಕ್ಷಣಗಳಲ್ಲಿ ಇಡೀ ವಿಶ್ವಕ್ಕೆ ತಲುಪಿಸುವ ಸಾಮರ್ಥ್ಯವನ್ನು ಕಲ್ಪಿಸಿದೆ. ಸಾಮಾಜಿಕ ಮಾಧ್ಯಮಗಳ ಎಲ್ಲ ಪ್ಲಾಟ್‌ಫಾರಂಗಳು ಬಿತ್ತರಿಸುವ ಮಾತುಗಳು ಕ್ಷಣಮಾತ್ರದಲ್ಲಿ ಸಮಾಜದ ಎಲ್ಲ ಸ್ತರಗಳನ್ನೂ, ಎಲ್ಲ ವಲಯಗಳನ್ನೂ ತಲುಪುವುದೇ ಅಲ್ಲದೆ, ಅಲ್ಲಿ ಶಾಶ್ವತವಾಗಿ ನೆಲೆಗೊಳ್ಳುತ್ತವೆ. ಮತ್ತೊಂದೆಡೆ ಡಿಜಿಟಲ್ ಮಾಧ್ಯಮಗಳು ದೃಶ್ಯ ರೂಪದಲ್ಲಿರಲಿ, ಶ್ರಾವ್ಯ ರೂಪದಲ್ಲಿರಲಿ ಅದು ತಲುಪುವ ಜಾಗಗಳಲ್ಲಿರುವ ಶ್ರೋತೃಗಳನ್ನು ಅಥವಾ ಪ್ರೇಕ್ಷಕರನ್ನು ಅಷ್ಟೇ ವೇಗವಾಗಿ ಪ್ರಭಾವಿಸುತ್ತವೆ. ಈ ಪ್ರಭಾವಕ್ಕೊಳಪಡುವವರ ಪೈಕಿ ಸಮಾಜದ ಯುವ ಪೀಳಿಗೆಯೇ ಬಹುಸಂಖ್ಯಾತರಾಗಿರುವುದು ಸಹಜ. ಹಾಗಾಗಿ ಈ ತಾಣಗಳ ಮೂಲಕ ನಾವು ದಾಟಿಸಬೇಕಾದ ವಿಚಾರಗಳನ್ನು ಇಡೀ ಸಮಾಜಕ್ಕೆ ಒಪ್ಪಿಗೆಯಾಗುವ ಅಥವಾ ಸಮಾಜದ ಯಾವುದೇ ವಲಯದಲ್ಲೂ ಮುಜುಗರ ಉಂಟುಮಾಡದ ರೀತಿಯಲ್ಲಿ, ಪರಿಣಾಮಕಾರಿ ಭಾಷೆ-ಪರಿಭಾಷೆಯನ್ನು ಬಳಸುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಅವಶ್ಯ.

ರಾಜಕಾರಣದ ಬೌದ್ಧಿಕ ಅವನತಿ

ದುರಂತ ಎಂದರೆ ನಮ್ಮನ್ನು ಆಳುತ್ತಿರುವ ಅಧಿಕಾರ ರಾಜಕಾರಣದ ಲಾಲಸೆಗಳು ಹಾಗೂ ಆದಷ್ಟು ಬೇಗನೆ ಜನಪ್ರಿಯತೆ ಗಳಿಸುವ ಮಹತ್ವಾಕಾಂಕ್ಷೆಗಳು ರಾಜಕೀಯ ನಾಯಕರನ್ನು ಈ ವ್ಯವಧಾನದಿಂದ ಬಹುದೂರ ಕರೆದೊಯ್ದಿದೆ. ಮೂರು ನಾಲ್ಕು ದಶಕಗಳ ಮುಂಚಿನ ರಾಜಕೀಯ ಸಂವಾದಗಳನ್ನು ಹಿಂದಿರುಗಿ ನೋಡಿದರೂ, ಪ್ರಸ್ತುತ ರಾಜಕೀಯ ಚರ್ಚೆಗಳು ಹೇಸಿಗೆ ಹುಟ್ಟಿಸುವಂತಿರುವುದನ್ನು ಈ ದೃಷ್ಟಿಯಿಂದಲೇ ಗಮನಿಸಬೇಕಿದೆ. ಇದು ಬೌದ್ಧಿಕವಾಗಿ ರಾಜಕೀಯ ಅವನತಿಯ ಸೂಚನೆಯಾಗಿದ್ದರೂ ತಮ್ಮ ಅಧಿಕಾರದಾಹವನ್ನು ತಣಿಸಲು ಅತ್ಯಂತ ಕೆಳಮಟ್ಟದ ಭಾಷೆಯನ್ನೂ ಬಳಸಲು ಹೇಸದ ರಾಜಕೀಯ ನಾಯಕರನ್ನು ಹೊರಗಿಟ್ಟು ನೋಡಿದಾಗ, ನಮಗೆ ಸಮಾಜದಲ್ಲಿ ರಾಜಕೀಯ ಪ್ರಜ್ಞೆಯನ್ನು ಆರೋಗ್ಯಕರ ಮಾದರಿಯಲ್ಲಿ ಮೂಡಿಸಲು ನಿರಂತರ ಶ್ರಮಿಸುತ್ತಿರುವ ಸಾಮಾಜಿಕ ಸಂಘಟನೆಗಳು, ಹೋರಾಟಗಳು ಮುಖ್ಯ ಸೇತುವೆಗಳಾಗಿ ಕಾಣುತ್ತವೆ.

ಈ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಪ್ರತಿಯೊಂದು ಮನಸ್ಸೂ ಸಹ ಸಮಾಜದ ಭೌತಿಕ-ಬೌದ್ಧಿಕ ಹಾಗೂ ಸಾಂಸ್ಕೃತಿಕ ಆರೋಗ್ಯವನ್ನು ರಕ್ಷಿಸುವುದಷ್ಟೇ ಅಲ್ಲದೆ, ಮುಂದಿನ ತಲೆಮಾರಿಗೆ ದಾಟಿಸುವ ಜವಾಬ್ದಾರಿಯನ್ನು ಹೊತ್ತಿರುತ್ತದೆ ಅಥವಾ ಹೊತ್ತಿರಬೇಕು. ಈ ಸಾಮಾಜಿಕ ಪ್ರಜ್ಞೆ ಬಹುತೇಕ ಎಲ್ಲರಲ್ಲೂ ಇರಬೇಕಾಗುತ್ತದೆ. ಹಾಗಾಗಿ ಅವನತಿಯತ್ತ ಸಾಗುತ್ತಿರುವ ರಾಜಕೀಯ ಪರಿಭಾಷೆಗೆ ಪ್ರತಿಯಾಗಿ ನಮ್ಮ ವಾದಗಳನ್ನು, ಹೇಳಿಕೆಗಳನ್ನು ಮಂಡಿಸುವಾಗ, ಈ ಪ್ರಜ್ಞೆ ನಮ್ಮನ್ನು ಸದಾ ಎಚ್ಚರಿಸುತ್ತಿರಬೇಕು. ‘‘ಅವರು ಅಂತಹ ಹೀನ ಭಾಷೆ ಬಳಸುವುದಿಲ್ಲವೇ?’’ ಎಂಬ ಪ್ರಶ್ನೆ ಎದುರಾದಾಗ ‘‘ಅವರ ಭಾಷೆಯಲ್ಲೇ ನಾವೂ ಉತ್ತರಿಸಬೇಕು’’ ಎಂಬ ಸ್ವರತಿಯ ಅಭಿವ್ಯಕ್ತಿಯೂ ಸಹಜವಾಗಿ ಉದ್ಧೀಪನಗೊಳ್ಳುತ್ತದೆ. ಇದು ಆ ಕ್ಷಣಕ್ಕೆ ಅಥವಾ ತಾತ್ಕಾಲಿಕವಾಗಿ ನಮ್ಮ ವ್ಯಕ್ತಿಗತ ಮನಸ್ಸಿಗೆ ಸಮಾಧಾನ ತರಬಹುದು ಅಥವಾ ‘‘ ಆಹಾ! ಸರಿಯಾಗಿ ಉತ್ತರಿಸಿ ತೆಪ್ಪಗಾಗಿಸಿದೆವು’’ ಎಂಬ ಅಹಮಿಕೆ ಸಹಜವಾಗಿ ಮೂಡುತ್ತದೆ. ಇದರ ದೀರ್ಘಕಾಲೀನ ಪರಿಣಾಮಗಳು ಭೀಕರವಾಗಿರುತ್ತವೆ.

ಸಾಂಸ್ಕೃತಿಕ ಉತ್ತರದಾಯಿತ್ವ

ಇಂತಹ ಸಂದರ್ಭಗಳಲ್ಲಿ ಯುವ ತಲೆಮಾರು ಕ್ಷಣಿಕ ಭಾವಾವೇಷಕ್ಕೆ ಒಳಗಾಗುವುದು ಸಹಜ. ಆದರೆ ಬೌದ್ಧಿಕವಾಗಿ ಔನ್ನತ್ಯದ ಹಾದಿಯಲ್ಲಿ ಸಾಗುತ್ತಿರುವ ಒಂದು ಸಮಾಜದಲ್ಲಿ ಇಂತಹ ವಿದ್ಯಮಾನಗಳು ಯುವ ತಲೆಮಾರನ್ನು ಹಾದಿ ತಪ್ಪಿಸುತ್ತವೆ. ‘‘An Eye for an Eye makes the whole world blind’’ ಎಂಬ ಮಹಾತ್ಮಾ ಗಾಂಧಿಯ ಹಿತವಚನವನ್ನು ಇಲ್ಲಿ ಉಲ್ಲೇಖಿಸಬಹುದು. ಹೇಗೆ ಹಿಂಸೆಗೆ ಪ್ರತಿಹಿಂಸೆ ಸಮಾಜದ ಭೌತಿಕ ಸ್ವಾಸ್ಥ್ಯವನ್ನು ಸರ್ವನಾಶ ಮಾಡುವುದೋ ಹಾಗೆಯೇ ಸಂವಹನದ ನೆಲೆಯಲ್ಲಿ ಹಿಂಸಾತ್ಮಕ-ಕ್ರೂರ-ಅಸಭ್ಯ ಮಾತು-ಪ್ರತಿಮಾತುಗಳೂ ಸಹ ಇಡೀ ಸಮಾಜದ ಬೌದ್ಧಿಕ ಸ್ವಾಸ್ಥ್ಯವನ್ನು ನಾಶಪಡಿಸುತ್ತದೆ. ಕನ್ನಡ ಸಿನೆಮಾದ ಚರಿತ್ರೆಯನ್ನೇ ಸೂಕ್ಷ್ಮವಾಗಿ ಗಮನಿಸಿದಾಗ ಡಾ. ರಾಜ್‌ಕುಮಾರ್ ಯುಗದ ಸಿನೆಮಾಗಳು ಇಂದಿಗೂ ಏಕೆ ತಮ್ಮ ಮೌಲ್ಯವನ್ನು ಉಳಿಸಿಕೊಂಡಿವೆ ಎಂಬ ಅಂಶವನ್ನು ನಿಕಶಕ್ಕೊಡ್ಡಬಹುದು. ಇಡೀ ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತು ಯಾವುದೇ ಮುಜುಗರ ಇಲ್ಲದೆ ನೋಡುವಂತಹ ಚಿತ್ರಗಳು ಅವಾಗಿದ್ದವು. ಆದರೆ 1990ರ ನಂತರದ ಚಿತ್ರಗಳು ಮಾರುಕಟ್ಟೆ ಸಂಸ್ಕೃತಿಗೊಳಗಾಗಿ ಈ ಮೌಲಿಕ ನೆಲೆಯನ್ನು ಕಳೆದುಕೊಂಡಿರುವುದನ್ನು ಗಮನಿಸಬೇಕಿದೆ.

ಸಾರ್ವಜನಿಕ ಬದುಕಿನ ಮೇಲೆ ಅತಿಯಾದ ಪ್ರಭಾವ ಬೀರುವ ಸಿನೆಮಾ ಮತ್ತು ಡಿಜಿಟಲ್ ಯುಗದ ತಂತ್ರಜ್ಞಾನಾಧಾರಿತ ಪ್ಲಾಟ್‌ಫಾರಂಗಳಲ್ಲಿ ಈ ಮೌಲಿಕ ನೆಲೆಗಳನ್ನು ಮರುಸ್ಥಾಪಿಸಬೇಕಿದೆ. ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ತಾಣಗಳೂ ಸಹ ಮುಖ್ಯವಾಹಿನಿ ಸುದ್ದಿಮಾಧ್ಯಮಗಳ ಹಾದಿಯಲ್ಲೇ ಕ್ರಮಿಸುತ್ತಿದ್ದು, ತಮ್ಮ ಭಾಷಾ ಬಳಕೆಯ ಮೇಲೆ ನಿಗ್ರಹ ಕಳೆದುಕೊಳ್ಳುತ್ತಿವೆ. ‘‘ಅವರಿಗೆ ಹಾಗೆ ಹೇಳಿದರಷ್ಟೇ ಅರ್ಥವಾಗೋದು’’ ಎಂಬ ಸರಳೀಕೃತ ಸಮರ್ಥನೆ ಅಪ್ರಬುದ್ಧವಾದುದು. ಕ್ಷಣಮಾತ್ರದಲ್ಲಿ ಇಡೀ ಸಮಾಜವನ್ನು ತಲುಪುವ ನಾವಾಡುವ ಮಾತುಗಳು ಉದ್ದೇಶಿತ ವ್ಯಕ್ತಿ ಅಥವಾ ಗುಂಪುಗಳನ್ನಷ್ಟೇ ತಲುಪುವುದಿಲ್ಲ. ಬದಲಾಗಿ ಸಮಾಜದ ತಳಮಟ್ಟದವರೆಗೂ ವ್ಯಾಪಿಸುತ್ತವೆ. ಈ ಪರಿಜ್ಞಾನ ಮತ್ತು ಅರಿವು ನಮ್ಮೊಳಗಿದ್ದರೆ ಅಭಿವ್ಯಕ್ತಿಯ ಒಂದು ಮಾದರಿಯಾಗಿ ಈ ತಳಮಟ್ಟದ ಸಮಾಜಕ್ಕೆ ನಾವು ಎಂತಹ ಸಂದೇಶ ನೀಡಬೇಕು ಎಂದು ಯೋಚಿಸುವ ವ್ಯವಧಾನವೂ ಇರಲಿಕ್ಕೆ ಸಾಧ್ಯ.

ಈ ಎಚ್ಚರ ಸಾಮಾಜಿಕ ಮಾಧ್ಯಮಗಳ ಡಿಜಿಟಲ್ ಪ್ಲಾಟ್‌ಫಾರಂಗಳನ್ನು ಬಳಸುವ ಪ್ರತೀ ವ್ಯಕ್ತಿಯಲ್ಲೂ ಇರಬೇಕು. ವಿಶೇಷವಾಗಿ ಸಾಮಾಜಿಕ ಚಳವಳಿಗಳಲ್ಲಿ, ಪ್ರಗತಿಪರ ಎನಿಸಿಕೊಳ್ಳುವ ಉನ್ನತಾದರ್ಶಗಳ ಹೋರಾಟಗಳಲ್ಲಿ ತೊಡಗಿರುವ ಮತ್ತು ಸಾಹಿತ್ಯಕವಾಗಿ ಸಮಾಜವನ್ನು ತಲುಪಲಿಚ್ಛಿಸುವ ಪ್ರತೀ ವ್ಯಕ್ತಿಯಲ್ಲೂ ಭಾಷಾ ಬಳಕೆಯ ಸೌಜನ್ಯ, ಸಭ್ಯತೆಯ ಅರಿವು ಇರಬೇಕು. ಈ ಗುಣಲಕ್ಷಣಗಳು ಯಾವುದೇ ಒಂದು ಜಾತಿ, ಮತ ಅಥವಾ ಸಮುದಾಯದ ಸ್ವತ್ತಲ್ಲ ಅಥವಾ ಇವುಗಳ ಮೇಲೆ ಯಾವ ಸಮಾಜವೂ ಪೇಟೆಂಟ್ ಸಾಧಿಸಲಾಗುವುದಿಲ್ಲ. ಇದು ಸಹಜ ಬದುಕಿನಲ್ಲಿ ಸಮಾಜವನ್ನು ನಿರ್ದೇಶಿಸುವ ಸಂವಹನದ ಸೇತುವೆಗಳಲ್ಲಿ ಸ್ವಾಭಾವಿಕವಾಗಿ ನೆಲೆಗಾಣಬೇಕಾದ ಮೌಲಿಕ ಲಕ್ಷಣಗಳು. ಇದನ್ನು ದಾಟಿ ಹೋದಾಗ ನಾವು ದಾಟಿಸುವ ಮಾತುಗಳು ಅಕ್ಷರ ರೂಪದಲ್ಲಿ ಯಥಾವತ್ತಾಗಿ ತಲುಪಬಹುದಾದರೂ, ಎದೆಗೆ ತಲುಪುವ ಹಾದಿಯಲ್ಲಿ ಭ್ರಷ್ಟವಾಗಿಬಿಡುತ್ತದೆ.

ವರ್ತಮಾನದ ಸಂದರ್ಭದಲ್ಲಿ ಇಂತಹ ಅಪಾಯಗಳು ವಿಭಿನ್ನ ಕಾರಣಗಳಿಗಾಗಿ ಸ್ವೀಕೃತಿ, ಸಮ್ಮಾನ ಪಡೆದುಕೊಂಡರೂ, ಭವಿಷ್ಯದ ದೃಷ್ಟಿಯಿಂದ, ಮುಂದಿನ ತಲೆಮಾರಿನ ಬೌದ್ಧಿಕ ವಿಕಾಸದ ದೃಷ್ಟಿಯಿಂದ ಇದು ಸಮಾಜಘಾತುಕವಾಗಿ ಕಾಣುತ್ತವೆ. ಯುವ ತಲೆಮಾರು ಸಾಮಾನ್ಯವಾಗಿ, ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವಿತವಾಗುವ ಸಾಮಾಜಿಕ ಮಾಧ್ಯಮಗಳ ಡಿಜಿಟಲ್ ಪ್ಲಾಟ್‌ಫಾರಂಗಳನ್ನು ಬಳಸುವ ಪ್ರತೀ ವ್ಯಕ್ತಿಯಲ್ಲೂ ಈ ನೈತಿಕ ಎಚ್ಚರಿಕೆ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಮಕಾಲೀನ ಭಾರತದಲ್ಲಿ ರಾಜಕೀಯವಾಗಿ ಅತಿಹೆಚ್ಚು ಪ್ರಭಾವಿಸಿರುವ ಇಬ್ಬರು ಮೇರು ದಾರ್ಶನಿಕರು ನಮಗೆ ಮಾರ್ಗದರ್ಶಕರಾಗಿ ಕಾಣುತ್ತಾರೆ. ಅದು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧಿ. ಈ ಇಬ್ಬರು ನಾಯಕರ ನಡುವೆ ನಡೆದ ಸಂಭಾಷಣೆ, ಸಂವಾದ, ವಾದಸರಣಿಗಳನ್ನು ಅಧ್ಯಯನ ಮಾಡುವ ಯಾರಿಗೇ ಆದರೂ ಈ ಉನ್ನತಾದರ್ಶದ ದರ್ಶನವಾಗುತ್ತದೆ. ಇದನ್ನು ಅರಗಿಸಿಕೊಳ್ಳುವ ಮೂಲಕ, ಇಂತಹ ಚಿಂತನಾಧಾರೆಗಳನ್ನು ಮೌಲಿಕವಾಗಿ ಒಳಗಿಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಾ. ದಿವಾಕರ

contributor

Similar News