ಹರ್ಯಾಣ ಚುನಾವಣಾ ಫಲಿತಾಂಶದಿಂದ ಕಾಂಗ್ರೆಸ್ ಕಲಿಯಬೇಕಾದ ಪಾಠವೇನು?

ಬಿಜೆಪಿಯ ತಪ್ಪುಗಳಿಂದ ಕಾಂಗ್ರೆಸ್‌ಗೆ ಲಾಭವಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ಕಾಂಗ್ರೆಸ್ ತನ್ನದೇ ತಪ್ಪುಗಳಿಂದ ಆ ಅವಕಾಶವನ್ನು ಪೂರ್ತಿಯಾಗಿ ಕಳೆದುಕೊಂಡಿತು. ಬಿಜೆಪಿ ಸರಕಾರ ರೈತರ ವಿರುದ್ಧ, ಕುಸ್ತಿಪಟುಗಳ ವಿರುದ್ಧ ನಡೆದುಕೊಂಡಿದೆ, ಇದೆಲ್ಲದರ ಕಾರಣದಿಂದ ಬಿಜೆಪಿ ವಿರುದ್ಧ ಜನ ಸಿಟ್ಟಾಗಿದ್ದಾರೆ, ಅದು ತನಗೆ ಲಾಭ ತರಲಿದೆ ಎಂದು ಲೆಕ್ಕ ಹಾಕಿಕೊಂಡು ಕುಳಿತ ಕಾಂಗ್ರೆಸ್, ತನ್ನದೇ ಆದ ಚುನಾವಣಾ ರಣತಂತ್ರವನ್ನು ಹೆಣೆಯಲೇ ಇಲ್ಲ. ಆದರೆ ಇದೇ ಹೊತ್ತಲ್ಲಿ ಬಿಜೆಪಿ ತನ್ನ ವಿರುದ್ಧದ ಅಭಿಪ್ರಾಯ ಜನರಲ್ಲಿ ಬದಲಾಗುವಂತೆ ಮಾಡಲು ತಳಮಟ್ಟದಲ್ಲಿ ಅಭಿಯಾನವನ್ನು ಚುರುಕುಗೊಳಿಸಿತ್ತು.

Update: 2024-10-10 05:58 GMT

ಹರ್ಯಾಣ ಚುನಾವಣೆ ಫಲಿತಾಂಶದ ನಂತರ ಒಂದು ವಿಷಯವಂತೂ ಸಾಬೀತಾಗಿದೆ. ಎಕ್ಸಿಟ್ ಪೋಲ್‌ಸ್ಟರ್‌ಗಳು ದೊಡ್ಡ ವಂಚಕರು ಎಂಬುದು ಆ ಸಂಗತಿ. ಅವರಿಗೆ ಇನ್ನು ಮುಂದೆ ಜನರ ಮಧ್ಯೆ ಯಾವುದೇ ಅಸ್ತಿತ್ವವೇ ಇಲ್ಲದಂತಾಗುವ ಸಾಧ್ಯತೆ ಇದೆ.

ಲೋಕಸಭೆ ಚುನಾವಣೆಯಲ್ಲಿ ಲೆಕ್ಕಾಚಾರ ಪೂರ್ತಿ ತಲೆಕೆಳಗಾದ ಬಳಿಕ ಕಾಣಿಸಿಕೊಂಡವರು ಮತ್ತೊಮ್ಮೆ ಘೋರ ವೈಫಲ್ಯ ತೋರಿಸಿದ್ದಾರೆ.

ಎಲ್ಲ ಚುನಾವಣೋತ್ತರ ಫಲಿತಾಂಶಗಳೂ ಹರ್ಯಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದೇ ಹೇಳಿದ್ದವು.

ಆಕ್ಸಿಸ್ ಮೈ ಇಂಡಿಯಾದ ಎಂ.ಡಿ. ಪ್ರದೀಪ್ ಗುಪ್ತಾ ಅಂತೂ ಕಾಂಗ್ರೆಸ್‌ಗೆ 60 ಪ್ಲಸ್ ಸ್ಥಾನಗಳು ಬರಲಿವೆ ಎಂದಿದ್ದರು. ಕಡೆಗೆ ಅವರು ಲೋಕಸಭೆ ಫಲಿತಾಂಶದ ವೇಳೆ ಟಿವಿ ಲೈವ್‌ನಲ್ಲೇ ಗೋಳೊ ಎಂದು ಅತ್ತಿದ್ದ ವೀಡಿಯೊ ಕೂಡ ಹರ್ಯಾಣದ ಫಲಿತಾಂಶ ಉಲ್ಟಾ ಹೊಡೆದ ಬಳಿಕ ಮತ್ತೆ ವೈರಲ್ ಆಯಿತು.

ತುಂಬಾ ಸಂಕೀರ್ಣ ಸಮೀಕರಣಗಳಿರುವ ಚುನಾವಣೆಗಳ ವಿಚಾರ ಹಾಗಿರಲಿ, ದಿಲ್ಲಿ ಪಕ್ಕದ ಹರ್ಯಾಣದ ಚುನಾವಣೆಯ ಬಗ್ಗೆಯೇ ಹೇಳಲಿಕ್ಕಾಗುತ್ತಿಲ್ಲ ಎಂದರೆ ಈ ಪೋಲಿಂಗ್ ಏಜನ್ಸಿಗಳು ಮತ್ತೇನು ಸಮೀಕ್ಷೆ, ವಿಶ್ಲೇಷಣೆ ಮಾಡಿಯಾವು ಎಂಬ ಗಂಭೀರ ಪ್ರಶ್ನೆ ಈಗ ಎದ್ದಿದೆ.

ಎಕ್ಸಿಟ್ ಪೋಲ್‌ಗಳು ಹೇಳಿದ್ದು ಸತ್ಯವೇ ಆಗಿಬಿಟ್ಟಿದ್ದರೆ ಇಷ್ಟು ಹೊತ್ತಿಗೆ ಬಿಜೆಪಿ ಕಂಗೆಟ್ಟು ಹೋಗಿರುತ್ತಿತ್ತು.

ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿಗೆ ಹರ್ಯಾಣದಲ್ಲಿ ಜಾಗವೇ ಇರಲಿಲ್ಲ. ಆದರೆ, ಬರೀ ಸುಳ್ಳುಗಳನ್ನು ಹೇಳಿದ ಪೋಲಿಂಗ್ ಏಜೆನ್ಸಿಗಳೇ ಈಗ ಜಾಗ ಕಳೆದುಕೊಳ್ಳುವ ಸ್ಥಿತಿಯನ್ನು ಎದುರಿಸಿವೆ.

ಕಾಂಗ್ರೆಸ್ ಮಂಗಳವಾರ ಬೆಳಗ್ಗಿನವರೆಗೂ ಗೆಲುವಿನ ಉತ್ಸಾಹದಲ್ಲಿಯೇ ಇತ್ತು. ಮಧ್ಯಾಹ್ನದ ವೇಳೆಗೆಲ್ಲ ಪಾರ್ಟಿ ಕಚೇರಿಯೇ ಖಾಲಿ ಖಾಲಿಯಾಗುವ ಹಾಗೆ ಅದು ಸೋಲಿನ ಅಂಚಿಗೆ ಜಾರುವ ಎಲ್ಲ ಸೂಚನೆಗಳೂ ಸಿಕ್ಕಿಬಿಟ್ಟಿದ್ದವು.

ಬಿಜೆಪಿಗೆ ಗೆಲ್ಲುತ್ತೇನೆ ಎಂಬ ನಿರೀಕ್ಷೆಯೇನೂ ಇರಲಿಲ್ಲ. ಆಡಳಿತ ವಿರೋಧಿ ಅಲೆ ಇದ್ದ ಕಾರಣಕ್ಕೇ ಖಟ್ಟರ್ ಅವರನ್ನು ಮನೆಗೆ ಕಳಿಸಿದ್ದ ಅದು ಸೈನಿಯನ್ನು ಸಿಎಂ ಹುದ್ದೆಗೇರಿಸಿತ್ತು.

ಹೀಗೆ ಬಿಜೆಪಿ ಸೋತುಹೋಗುತ್ತದೆ ಮತ್ತು ರಾಹುಲ್ ಮ್ಯಾಜಿಕ್ ನಡೆಯಲಿದೆ ಎನ್ನುವ ಹೊತ್ತಿನಲ್ಲಿ ಹರ್ಯಾಣದಲ್ಲಿ ಬಿಜೆಪಿ ಪರವಾಗಿ ಅಭಿಯಾನ ಶುರು ಮಾಡಿದ್ದು ಆರೆಸ್ಸೆಸ್. ಹಾಗಾಗಿ ಹರ್ಯಾಣದ ಬಿಜೆಪಿ ಗೆಲುವಿನಲ್ಲಿ ಆರೆಸ್ಸೆಸ್ ನಿರ್ವಹಿಸಿರುವ ಪಾತ್ರ ದೊಡ್ಡದು.

ಅದರ ಫಲಿತಾಂಶ ಈಗ ನಮ್ಮೆದುರು ಇದೆ.

ಈ ಗೆಲುವಿನೊಂದಿಗೆ ಬಿಜೆಪಿ ಸತತ ಮೂರನೇ ಬಾರಿಗೆ ಹರ್ಯಾಣದಲ್ಲಿ ಅಧಿಕಾರಕ್ಕೇರಿದೆ ಮತ್ತು ಈ ಸಲವಂತೂ ಪೂರ್ತಿ ತನ್ನ ಬಲದ ಮೇಲೆಯೇ ಅದು ಸರಕಾರ ರಚಿಸಲಿದೆ.

ಈ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನ ಪಡೆದಿದೆ ಈ ಬಾರಿ ಬಿಜೆಪಿ. ಕಳೆದ ಬಾರಿ ಬಿಜೆಪಿಗೆ ಸರಕಾರ ರಚಿಸಲು ನೆರವಾಗಿದ್ದ ಜೆಜೆಪಿ ಈ ಬಾರಿ ಸಂಪೂರ್ಣ ನೆಲಕಚ್ಚಿದೆ.

ಪ್ರಚಾರದಲ್ಲಿ ಮೋದಿ ಪ್ರಭಾವ ಇರದೇ ಇದ್ದರೂ, ಸೋತುಹೋಗಲಿದ್ದ ಬಿಜೆಪಿಯನ್ನು ಗೆಲುವಿನ ದಡ ಹತ್ತಿಸುವಲ್ಲಿ ಆರೆಸ್ಸೆಸ್ ಪ್ರಭಾವ ಇತ್ತೆಂಬುದು ಸ್ಪಷ್ಟವಾಗಿದೆ.

ಹೀಗೆ ಸೋತುಹೋಗಲಿದ್ದ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಒಂದೆಡೆಯಾದರೆ, ಗೆಲ್ಲಲೇಬೇಕಿದ್ದ ಚುನಾವಣೆಯಲ್ಲಿನ ಕಾಂಗ್ರೆಸ್ ಸೋಲು ಅದು ತಾನಾಗಿಯೇ ತಂದುಕೊಂಡದ್ದೇ ಎಂಬ ಪ್ರಶ್ನೆಯೂ ಏಳುತ್ತದೆ.

ತನ್ನ ತಪ್ಪು ಲೆಕ್ಕಾಚಾರಗಳು ಮತ್ತು ತಪ್ಪು ನಡೆಯಿಂದಾಗಿ ಕಾಂಗ್ರೆಸ್ ತನ್ನ ಸೋಲನ್ನು ತಾನೇ ಬರೆದುಕೊಂಡಿತೆ?

ಬಿಜೆಪಿಯಲ್ಲಿ ನಾಯಕರೇ ಸೋಲು ಒಪ್ಪಿಕೊಂಡುಬಿಟ್ಟಿದ್ದರು. ಗೆಲುವು ಈ ಬಾರಿ ತಮ್ಮ ಕೈಮೀರಿದೆ ಎಂದು ಅವರು ಖಾಸಗಿ ಮಾತುಕತೆಯಲ್ಲಿ ಒಪ್ಪಿಕೊಂಡಿದ್ದಾಗಿತ್ತು. ಆದರೆ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಬಿಜೆಪಿ ಗೆಲುವಿನ ನಗೆ ಬೀರುತ್ತಿತ್ತು.

ಬಿಜೆಪಿ ಸೋಲುತ್ತದೆ ಎಂದೇ ಹೇಳಿದ್ದ ರಾಜಕೀಯ ವಿಶ್ಲೇಷಕರೆಲ್ಲ ಪೋಲ್‌ಸ್ಟರ್‌ಗಳ ಹಾಗೆಯೇ ಮುಖಮುಚ್ಚಿಕೊಳ್ಳಬೇಕಾದ ಸ್ಥಿತಿ ಫಲಿತಾಂಶದ ನಂತರ ತಲೆದೋರಿತ್ತು.

ಕಾಂಗ್ರೆಸ್ ಈ ಚುನಾವಣೆಯಿಂದ ಕಲಿಯಬೇಕಾದ ಪಾಠ ವೆಂದರೆ, ಬಿಜೆಪಿ ಚುನಾವಣೆಯನ್ನು ಮೋದಿ ಕಾರಣದಿಂದ ಮಾತ್ರ ಗೆಲ್ಲುವುದಿಲ್ಲ ಎಂಬುದು. ಮೋದಿ ಹೊರತಾಗಿಯೂ ಬಿಜೆಪಿ ಗೆಲ್ಲಬಲ್ಲುದೆಂಬುದು ಹರ್ಯಾಣದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ಮೋದಿ ಈ ಬಾರಿ 4 ರ್ಯಾಲಿಗಳಲ್ಲಷ್ಟೇ ಹರ್ಯಾಣದಲ್ಲಿ ಪಾಲ್ಗೊಂಡಿದ್ದರು. ಸೋಲುವ ಚುನಾವಣೆಯಿಂದ ದೂರ ಇರಲು ಅವರು ಬಯಸಿದ್ದಾರೆಂಬ ಮಾತುಗಳೂ ಕೇಳಿಬಂದಿದ್ದವು. ಅದರ ಹೊರತಾಗಿಯೂ ಚುನಾವಣೆಯಲ್ಲಿ ಬಿಜೆಪಿ ಭರ್ಜರಿಯಾಗಿ ಗೆದ್ದುಬಿಟ್ಟಿದೆ.

ಹರ್ಯಾಣ ಚುನಾವಣೆ 2029ರ ಲೋಕಸಭೆ ಚುನಾವಣೆಗೆ ದಾರಿ ಎಂದೇ ಕಾಂಗ್ರೆಸ್ ಭಾವಿಸಿತ್ತು. ಆದರೆ ಲೆಕ್ಕಾಚಾರ ತಪ್ಪಿತು. ಜನ ಇನ್ನೂ ಕಾಂಗ್ರೆಸ್ ಮೇಲೆ ಪೂರ್ಣ ಭರವಸೆ ಇಡಲು ತಯಾರಿಲ್ಲವೇ ಎಂಬ ಪ್ರಶ್ನೆಯೊಂದು ದೊಡ್ಡದಾಗಿಯೇ ಉಳಿಯುವಂತಾಯಿತು.

10 ವರ್ಷ ಹರ್ಯಾಣದಲ್ಲಿ ಆಡಳಿತ ನಡೆಸಿದ್ದ ಬಿಜೆಪಿಯೊಳಗೆ ಅಲ್ಲೋಲ ಕಲ್ಲೋಲವೇ ನಡೆದಿತ್ತು. ಎಷ್ಟೋ ನಾಯಕರು ಪಕ್ಷ ಬಿಟ್ಟಿದ್ದರು. ಇದ್ದವರು ಕೂಡ ಕಚ್ಚಾಡಿಕೊಂಡೇ ಇದ್ದರು. ರೆಬೆಲ್‌ಗಳನ್ನು ಸಂಭಾಳಿಸುವ ಹಾಗೆಯೇ ಇರಲಿಲ್ಲ.

ಇದರ ಜೊತೆಗೇ ರೈತರ ಪ್ರತಿಭಟನೆ, ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಯ ವಿಚಾರದಲ್ಲಿನ ಅದರ ನಡೆ ವ್ಯಾಪಕ ಟೀಕೆಗೆ ತುತ್ತಾಗಿತ್ತು. ಅಗ್ನಿವೀರ್ ವಿಚಾರವೂ ಇತ್ತು. ಇಡೀ ಸನ್ನಿವೇಶ ಬಿಜೆಪಿಗೆ ವಿರುದ್ಧವಾಗಿದೆ ಎಂಬುದು ಕಣ್ಣಿಗೆ ಬೀಳುವ ಹಾಗಿತ್ತು.

ಆದರೂ ಆ ಇಡೀ ಸಂಕಥನವನ್ನು ಬಿಜೆಪಿ ತೀರಾ ತಳಮಟ್ಟದಲ್ಲಿ ಚುನಾವಣೆಗೆ ಕೆಲವೇ ದಿನಗಳಿರುವಾಗ ತನ್ನ ಪರವಾಗಿ ಬದಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ತನ್ನ ಮೇಲೆ ಜನರಿಗಿದ್ದ ಸಿಟ್ಟು ಪೂರ್ತಿ ಇಲ್ಲವಾಗುವ ಹಾಗೆ ಬಿಜೆಪಿ ಸದ್ದಿಲ್ಲದೆ ಮೋಡಿ ಮಾಡಿತ್ತು.

ಬಿಜೆಪಿ-ಜೆಜೆಪಿ ಮೈತ್ರಿ ತುಂಡಾಗಿತ್ತು. ಮನೋಹರ್ ಲಾಲ್ ಖಟ್ಟರ್ ಅಂಥ ಹಿರಿಯ ನಾಯಕನನ್ನೇ ಸಿಎಂ ಹುದ್ದೆಯಿಂದ ತೆಗೆಯಲಾಗಿತ್ತು. ಕಂಗನಾ ಥರದ ಲೀಡರ್‌ಗಳು ರೈತರ ವಿರುದ್ಧವಾಗಿ ಮಾತಾಡಿದ್ದನ್ನೂ ಜೀರ್ಣಿಸಿಕೊಂಡು ಬಿಜೆಪಿ ಈಗ ಈ ಮಟ್ಟದ ಗೆಲುವನ್ನು ಪಡೆದಿದೆ.

ಜನ ಬಿಜೆಪಿ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂಬುದು ನಿಜವೇ ಆಗಿತ್ತಾದರೂ, ಯಾವುದು ಜನರ ಅಸಮಾಧಾನಕ್ಕೆ ಕಾರಣವಾಗಿತ್ತೋ ಅದಕ್ಕೆ ಪರಿಹಾರ ಕಾಂಗ್ರೆಸ್ ಬಳಿಯೂ ಇರಲಿಲ್ಲ ಎಂಬ ಸತ್ಯವನ್ನು ಹೆಚ್ಚಿನ ವಿಶ್ಲೇಷಕರು ಗ್ರಹಿಸದೇ ಹೋಗಿದ್ದರು.

ಬಿಜೆಪಿ ಆಡಿಕೊಂಡು ಬಂದ ಒಂದು ಆಟವೆಂದರೆ, ಯಾವ್ಯಾವ ರಾಜ್ಯಗಳಲ್ಲಿ ಬಿಜೆಪಿ ಸರಕಾರವಿದೆಯೋ ಅಲ್ಲೆಲ್ಲ ಅದನ್ನು ಡಬಲ್ ಇಂಜಿನ್ ಸರಕಾರ ಎಂದು ಕರೆದುಕೊಂಡಿತ್ತು. ಈ ಘೋಷಣೆಯೇ ಹರ್ಯಾಣದ ಬಿಜೆಪಿ ಗೆಲುವಿನಲ್ಲೂ ಮುಖ್ಯ ಪಾತ್ರ ವಹಿಸಿದೆ.

ಏನೇ ಆದರೂ ಕೇಂದ್ರದಲ್ಲೂ ಬಿಜೆಪಿ ಇರುವುದರಿಂದ ಇಲ್ಲಿ ಬಿಜೆಪಿಯೇ ಇದ್ದರೆ ಒಂದಿಷ್ಟಾದರೂ ಕೆಲಸವಾಗುತ್ತದೆ, ಆದರೆ ಕಾಂಗ್ರೆಸ್ ಸರಕಾರ ಬಂದರೆ ಕೆಲಸಗಳೇ ಆಗದೇ ಹೋಗಬಹುದು ಎಂಬ ಆಲೋಚನೆಯೂ ಮತದಾನದ ಹಿಂದೆ ಕೆಲಸ ಮಾಡಿರುವ ಸಾಧ್ಯತೆ ಇದೆ.

ಬಿಜೆಪಿ ಕೆಲಸ ಮಾಡಿಯೇ ಇಲ್ಲ ಎಂಬುದು ಜನರಿಗೆ ಸ್ಪಷ್ಟವಾಗಿಯೇ ಗೊತ್ತಿತ್ತು. ಆದರೆ ಕಾಂಗ್ರೆಸ್ ಬಂದರೆ ಆಗುವುದೂ ಆಗಲಾರದಲ್ಲವೆ ಎಂಬುದು ಕೂಡ ಜನರಿಗೆ ಅಷ್ಟೇ ಸ್ಪಷ್ಟವಾಗಿತ್ತು.

ಜನರಲ್ಲಿನ ಈ ಅವಿಶ್ವಾಸವೇ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಕೊಟ್ಟಿರುವ ಹಾಗಿದೆ.

ಆದರೆ ತಾನು ಅಧಿಕಾರಕ್ಕೆ ಬಂದರೆ ಕೆಲಸವಾಗುತ್ತದೆ, ಕೆಲಸ ನಿಲ್ಲುವುದಿಲ್ಲ ಎಂದು ಮನವರಿಕೆ ಮಾಡಿಕೊಡುವುದು, ಡಬಲ್ ಇಂಜಿನ್ ಸರಕಾರ ಮಾಡಿದ್ದೇನೂ ಇಲ್ಲ ಎಂಬುದನ್ನು ಮನದಟ್ಟು ಮಾಡುವುದು ಕಾಂಗ್ರೆಸ್ ಜವಾಬ್ದಾರಿಯಾಗಿತ್ತು.

ಕಾಂಗ್ರೆಸ್ ತಾನೇನು ಎನ್ನುವುದನ್ನೂ, ಯಾವುದಕ್ಕಾಗಿ ಹೋರಾಡುತ್ತೇನೆ ಎನ್ನುವುದನ್ನೂ ಜನರಿಗೆ ಇನ್ನೂ ಸ್ಪಷ್ಟವಾಗಿ ತಿಳಿಸುವ ಕೆಲಸ ಮಾಡಿಯೇ ಇಲ್ಲ ಎಂಬ ಮಾತುಗಳಿವೆ.

ಹರ್ಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಬಹು ಮುಖ್ಯ ಕಾರಣವೇ ಅದರ ಅತಿಯಾದ ಆತ್ಮವಿಶ್ವಾಸ ಎಂಬುದು ಕೇಳಿಬರುತ್ತಿರುವ ಮತ್ತೊಂದು ಆರೋಪ.

ಹರ್ಯಾಣ ಚುನಾವಣೆಯಲ್ಲಿ 450 ಪಕ್ಷೇತರ ಅಭ್ಯರ್ಥಿಗಳಿದ್ದರು. ಅವರಲ್ಲಿ ಹೆಚ್ಚಿನವರು ಟಿಕೆಟ್ ಸಿಗದೇ ಹೋದುದಕ್ಕೆ ಕಾಂಗ್ರೆಸ್ ತೊರೆದು ಸ್ಪರ್ಧಿಸಿದವರೇ ಇದ್ದರು.ಎಎಪಿ ಐದು ಸೀಟುಗಳನ್ನು ಕೇಳಿತ್ತು. ಅದನ್ನು ಕೊಡಲು ಒಪ್ಪಿರಲಿಲ್ಲ ಕಾಂಗ್ರೆಸ್. ಹಾಗೆ ಎಲ್ಲರೂ ಒಟ್ಟಾಗಿ ಹೋಗಿದ್ದರೆ ಮತಗಳು ಒಡೆಯುವುದಾದರೂ ತಪ್ಪುತ್ತಿತ್ತು ಎಂಬುದು ಒಂದು ಲೆಕ್ಕಾಚಾರ. ಆದರೆ ಕಾಂಗ್ರೆಸ್ ಮಾತ್ರ ತಾನು ಏಕಾಂಗಿಯಾಗಿ ಕಣಕ್ಕಿಳಿಯುವ ನಿರ್ಧಾರ ಮಾಡಿತ್ತು. ಕಾಂಗ್ರೆಸ್ ತಾನು ಆಗಲೇ ಗೆದ್ದುಬಿಟ್ಟಿದ್ದೇನೆ ಎಂದುಕೊಂಡಿತ್ತು.

ಬಂಡಾಯವೆದ್ದು ಕಣಕ್ಕಿಳಿದಿರುವ ಪಕ್ಷೇತರ ಅಭ್ಯರ್ಥಿಗಳು ತೆಗೆದುಕೊಂಡು ಹೋಗಬಹುದಾದ ಮತಗಳೆಷ್ಟು, ಅದರಿಂದ ತನಗೇನು ಹಾನಿಯಾಗಲಿದೆ ಎಂಬ ವಿಚಾರವನ್ನೇ ಗಣನೆಗೆ ತೆಗೆದುಕೊಳ್ಳದೇ ಹೋಗಿತ್ತು.

ಬಿಜೆಪಿಯ ತಪ್ಪುಗಳಿಂದ ಕಾಂಗ್ರೆಸ್‌ಗೆ ಲಾಭವಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ಕಾಂಗ್ರೆಸ್ ತನ್ನದೇ ತಪ್ಪುಗಳಿಂದ ಆ ಅವಕಾಶವನ್ನು ಪೂರ್ತಿಯಾಗಿ ಕಳೆದುಕೊಂಡಿತು.

ಬಿಜೆಪಿ ಸರಕಾರ ರೈತರ ವಿರುದ್ಧ, ಕುಸ್ತಿಪಟುಗಳ ವಿರುದ್ಧ ನಡೆದುಕೊಂಡಿದೆ, ಇದೆಲ್ಲದರ ಕಾರಣದಿಂದ ಬಿಜೆಪಿ ವಿರುದ್ಧ ಜನ ಸಿಟ್ಟಾಗಿದ್ದಾರೆ, ಅದು ತನಗೆ ಲಾಭ ತರಲಿದೆ ಎಂದು ಲೆಕ್ಕ ಹಾಕಿಕೊಂಡು ಕುಳಿತ ಕಾಂಗ್ರೆಸ್, ತನ್ನದೇ ಆದ ಚುನಾವಣಾ ರಣತಂತ್ರವನ್ನು ಹೆಣೆಯಲೇ ಇಲ್ಲ. ಆದರೆ ಇದೇ ಹೊತ್ತಲ್ಲಿ ಬಿಜೆಪಿ ತನ್ನ ವಿರುದ್ಧದ ಅಭಿಪ್ರಾಯ ಜನರಲ್ಲಿ ಬದಲಾಗುವಂತೆ ಮಾಡಲು ತಳಮಟ್ಟದಲ್ಲಿ ಅಭಿಯಾನವನ್ನು ಚುರುಕುಗೊಳಿಸಿತ್ತು.

ಕಾಂಗ್ರೆಸ್ ಮಾಡಿದ ಇನ್ನೊಂದು ತಪ್ಪು, ಭುಪಿಂದರ್ ಸಿಂಗ್ ಹೂಡಾ ಮೇಲೆ ಪೂರ್ತಿಯಾಗಿ ಅವಲಂಬಿತವಾಗಿ, ಇಡೀ ಚುನಾವಣೆಯನ್ನು ಅವರ ಹೆಗಲಿಗೆ ಹಾಕಿ ಕೂತುಬಿಟ್ಟದ್ದು. ಆದರೆ ಹೂಡಾಗೆ ಪರ್ಯಾಯವಾಗಿ ಹೊಸ ನಾಯಕನನ್ನು ತಯಾರು ಮಾಡಲು ಕಾಂಗ್ರೆಸ್ ಮನಸ್ಸು ಮಾಡಲೇ ಇಲ್ಲ.

ಬಿಜೆಪಿ ತನ್ನ ಮುಖ್ಯಮಂತ್ರಿಯನ್ನೇ ಕೆಳಗಿಳಿಸಿ ಆ ಜಾಗಕ್ಕೆ ಮತ್ತೊಬ್ಬ ನಾಯಕನನ್ನು ಕೂರಿಸಿತ್ತು. ಆದರೆ ಕಾಂಗ್ರೆಸ್ ಈ ಹತ್ತು ವರ್ಷಗಳಲ್ಲಿ ಹೊಸ ನಾಯಕನನ್ನು ಹುಡುಕುವ, ಜನರ ಮುಂದೆ ತರುವ ಪ್ರಯತ್ನವನ್ನೂ ಮಾಡದೇ ಹೋಗಿತ್ತು.

ಬಹಳ ಸಲ ಕಾಂಗ್ರೆಸ್ ಸಂಘಟನಾತ್ಮಕವಾಗಿ ಅತ್ಯಂತ ಅಪಾಯಕಾರಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಅಂಥ ತೀರ್ಮಾನಗಳ ಬಗ್ಗೆ ಅಷ್ಟೇ ಲಘುವಾಗಿಯೂ ಇರುತ್ತದೆ.

ಹೂಡಾ ಬೆನ್ನಿಗೆ ನಿಂತ ಕಾಂಗ್ರೆಸ್, ಹೂಡಾ ಜೊತೆ ವೈಮನಸ್ಯ ಹೊಂದಿರುವ ದಲಿತ ನಾಯಕಿ ಕುಮಾರಿ ಸೆಲ್ಜಾ ಅವರನ್ನು ಕಡೆಗಣಿಸಿತ್ತು. ಟಿಕೆಟ್ ಹಂಚಿಕೆ ವೇಳೆ ಕೂಡ ಅವರ ಮಾತಿಗೆ ಹೆಚ್ಚು ಮನ್ನಣೆ ಸಿಗದೇ ಹೋಗಿತ್ತು.ಇದರಿಂದಾಗಿ ಅಂತಿಮವಾಗಿ ಕಾಂಗ್ರೆಸ್‌ಗೆ ಬರಬೇಕಿದ್ದ ದಲಿತ ಮತಗಳು ಬಾರದೇ ಹೋಗಿರಬಹುದಾದ ಸಾಧ್ಯತೆಯೂ ಇದೆ.

ಕುಮಾರಿ ಸೆಲ್ಜಾ ಅವರನ್ನು ಕಾಂಗ್ರೆಸ್ ಮೂಲೆಗುಂಪು ಮಾಡಿದೆ ಎಂಬ ಅನುಮಾನಗಳೇ ಎದ್ದವು. ಆದರೂ ಸೆಲ್ಜಾ ಪ್ರಭಾವ ಇರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ ಎಂಬುದೂ ಇಲ್ಲಿ ಗಮನಾರ್ಹ.

ತಮ್ಮದೇ ತಾಕತ್ತು ಹೊಂದಿದ್ದ ಅಭ್ಯರ್ಥಿಗಳೂ ಸೇರಿದಂತೆ ಎಲ್ಲರ ಜವಾಬ್ದಾರಿಯನ್ನೂ ಹೂಡಾ ಅವರಿಗೇ ವಹಿಸಿ ಕಾಂಗ್ರೆಸ್ ಹೈಕಮಾಂಡ್ ಕೈತೊಳೆದುಕೊಂಡಿತ್ತು. ಆದರೆ ನಿಜವಾಗಿಯೂ ತಾಕತ್ತಿದ್ದರಿಗೆ ಟಿಕೆಟ್ ಸಿಗದೆ, ಸ್ವಜನ ಪಕ್ಷಪಾತಕ್ಕೆ ಪಕ್ಷ ಬಲಿಯಾಗಬೇಕಾಯಿತು.

ಉದಾಹರಣೆಗೆ ಬಿಜೆಪಿಯ ಹಿರಿಯ ನಾಯಕ, ಸಿಎಂ ಹುದ್ದೆಗೆ ತಾನು ಅರ್ಹ ಎಂದೆಲ್ಲ ಹೇಳಿಕೊಳ್ಳುತ್ತಿದ್ದ 6 ಬಾರಿಯ ಎಂಎಲ್‌ಎ ಅನಿಲ್ ವಿಜ್ ಒಬ್ಬ ಪಕ್ಷೇತರ ಅಭ್ಯರ್ಥಿ ಎದುರಲ್ಲಿ ಇನ್ನೇನು ಸೋತೇ ಹೋದರು ಎನ್ನುವ ಹಂತ ಮುಟ್ಟಿ, ಸ್ವಲ್ಪದರಲ್ಲಿ ಸೋಲು ತಪ್ಪಿಸಿಕೊಂಡರು.

ಹಾಗೆ ಚುನಾವಣೆಯಲ್ಲಿ ಆ ನಾಯಕನಿಗೆ ಠಕ್ಕರ್ ಕೊಟ್ಟು ಕಂಗೆಡಿಸಿಬಿಟ್ಟ ಪಕ್ಷೇತರ ಅಭ್ಯರ್ಥಿ ಚಿತ್ರಾ ಸರ್ವಾರಾ ಕಾಂಗ್ರೆಸ್‌ನಲ್ಲಿದ್ದವರು. ಆದರೆ ಅವರ ಅರ್ಹತೆಯನ್ನು ಪಕ್ಷ ಗಣನೆಗೆ ತೆಗೆದುಕೊಳ್ಳದೇ ಹೋಗಿತ್ತು.

ಅನಿಲ್ ವಿಜ್ ಕಂಗೆಟ್ಟುಹೋದ ಕ್ಷೇತ್ರದಲ್ಲೇ ಮೂರನೇ ಸ್ಥಾನದಲ್ಲಿದ್ದ ಪಕ್ಷೇತರ ಅಭ್ಯರ್ಥಿ ಪರ್ವಿಂದರ್ ಪಾರಿ ಕೂಡ ಕಾಂಗ್ರೆಸ್‌ನಲ್ಲಿದ್ದವರು. ಈ ನಾಯಕರನ್ನು ಕಾಂಗ್ರೆಸ್ ಉಳಿಸಿಕೊಂಡಿದ್ದರೆ, ಟಿಕೆಟ್ ಹಂಚಿಕೆ ಸರಿಯಾಗಿ ನಡೆದದ್ದೇ ಆದರೆ ಹೀಗೆ ಸೋಲುವ ಸ್ಥಿತಿ ಬರುತ್ತಿರಲಿಲ್ಲ. ಅದೇ ಅನಿಲ್ ವಿಜ್‌ರನ್ನು ಸೋಲಿಸಿದ ಹೆಮ್ಮೆ ಕೂಡ ಚಿತ್ರಾ ಸರ್ವಾರಾ ಅಂಥ ನಾಯಕಿಯ ಕಾರಣದಿಂದ ಕಾಂಗ್ರೆಸ್ ಪಾಲಾಗುತ್ತಿತ್ತು.

ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿರುವ ಸಾವಿತ್ರಿ ಜಿಂದಾಲ್, ಬಿಜೆಪಿ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಸ್ವತಂತ್ರರಾಗಿ ಕಣಕ್ಕಿಳಿದವರಾಗಿದ್ದರು. ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದಾಗ ತಾನು ಟಿಕೆಟ್ ನೀಡಬಹುದಾದ ಅವಕಾಶ ಕೂಡ ಕಾಂಗ್ರೆಸ್ ಎದುರು ಇತ್ತು. ಹಾಗೆ ಮಾಡಲೇಬೇಕಿತ್ತು ಎಂದಲ್ಲವಾದರೂ, ಗೆಲುವಿನ ಲೆಕ್ಕಾಚಾರ ಮತ್ತು ಟಿಕೆಟ್ ಹಂಚಿಕೆಯಲ್ಲಿನ ಹಲವಾರು ತಪ್ಪುಗಳು ಕಾಂಗ್ರೆಸ್ ಅನ್ನು ದಶಕದ ನಂತರದ ಗೆಲುವಿನ ಸಾಧ್ಯತೆಯಿಂದ ದೂರ ಒಯ್ದುಬಿಟ್ಟವು ಎಂಬುದು ನಿಜ.

ಇನ್ನು ಈ ಫಲಿತಾಂಶ ಮುಂದಿನ ದಿನಗಳಲ್ಲಿ ಉಂಟುಮಾಡಲಿರುವ ಪರಿಣಾಮಗಳು ಏನಿರಬಹುದು?

ಈ ಫಲಿತಾಂಶ ಬಿಜೆಪಿಯಲ್ಲಿ ಇಲ್ಲವಾಗಿದ್ದ ಆತ್ಮವಿಶ್ವಾಸ ಮತ್ತೆ ಬರುವುದಕ್ಕೆ ಕಾರಣವಾಗಿದೆ. 2029ರ ಚುನಾವಣೆಗೆ ಸಜ್ಜಾಗುವ ಹಾದಿಯಲ್ಲಿ ಒಂದು ಬಾಗಿಲು ಕೂಡ ಅದಕ್ಕೆ ತೆರೆದಂತಾಗಿದೆ. ಅದಕ್ಕೂ ಮೊದಲು ಜಾರ್ಖಂಡ್, ಮಹಾರಾಷ್ಟ್ರಗಳಲ್ಲಿನ ಚುನಾವಣೆಗಳಿಗೂ ಇದೊಂದು ದಿಕ್ಸೂಚಿಯಾಗಲಿದೆ.

ಕಾಂಗ್ರೆಸ್ ಬಹಳ ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದ ಒಂದು ಸಂಗತಿಯೆಂದರೆ, ಬಿಜೆಪಿ ಬಗ್ಗೆ ಅಸಮಾಧಾನವಿರುವ ಜನರೆಲ್ಲ ಸೀದಾ ಬಂದು ಕಾಂಗ್ರೆಸ್‌ಗೆ ಮತ ಹಾಕಿಬಿಡುತ್ತಾರೆ ಎಂಬ ಭ್ರಮೆಯಿಂದ ಮೊದಲು ಅದು ಹೊರಬರಬೇಕಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪಿ.ಎಚ್. ಅರುಣ್

contributor

Similar News