ಆರ್ಥಿಕ ಸವಾಲು ಎದುರಿಸುತ್ತಿರುವ ರಾಜ್ಯದ ವಿಶ್ವವಿದ್ಯಾನಿಲಯಗಳು

ಜಗತ್ತಿನಾದ್ಯಂತ ಜರುಗಿರುವ ಶೈಕ್ಷಣಿಕ ಬೆಳವಣಿಗೆಗಳು, ಬದಲಾಗಿರುವಂತಹ ನಾಡಿನ ಉನ್ನತ ಶಿಕ್ಷಣ ನೀತಿ, ಹೊಸ ಆವಿಷ್ಕಾರಗಳು ಇತ್ಯಾದಿ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯದ ಆರ್ಥಿಕ ಪರಿಸ್ಥಿತಿ ಮೇಲೆ ಗಮನಾರ್ಹ ಪರಿಣಾಮವನ್ನು ಉಂಟು ಮಾಡಿದೆ. ಹೊಸ ಸರಕಾರಿ ಹಾಗೂ ಖಾಸಗಿ ವಿಶ್ವವಿದ್ಯಾನಿಲಯಗಳ ಸ್ಥಾಪನೆ, ಸ್ವಾಯತ್ತ ಕಾಲೇಜುಗಳ ಪ್ರಾರಂಭ, ಸಂಯೋಜಿತ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸುಗಳ ಆರಂಭ, ದೂರ ಶಿಕ್ಷಣ ಕೋರ್ಸುಗಳಿಗೆ ಸರಕಾರದ ತಡೆ ಇತ್ಯಾದಿಗಳು ವಿಶ್ವವಿದ್ಯಾನಿಲಯಗಳ ಆಂತರಿಕ ಸಂಪನ್ಮೂಲಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿದೆ.

Update: 2024-08-05 08:28 GMT

ರಾಜ್ಯದಲ್ಲಿ ಒಟ್ಟು 41 ಸರಕಾರಿ ವಿಶ್ವವಿದ್ಯಾನಿಲಯಗಳಿವೆ. ಈ ವಿಶ್ವವಿದ್ಯಾನಿಲಯಗಳಲ್ಲಿ ಕಾಲ ಕಾಲಕ್ಕೆ ನಡೆಯುವಂತಹ ಶೈಕ್ಷಣಿಕ ಕಾರ್ಯಕ್ರಮಗಳ ವಿವರಗಳೇನೋ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತವೆ. ಇಂತಹ ವಿಷಯವನ್ನು ಹೊರತು ಪಡಿಸಿದರೆ ವಿಶ್ವವಿದ್ಯಾನಿಲಯಗಳು ಎದುರಿಸುತ್ತಿರುವ ಗಂಭೀರ ಸವಾಲುಗಳು, ಬಿಕ್ಕಟ್ಟುಗಳು ಇತ್ಯಾದಿ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗಳಾದಂತೆ ಕಾಣುತ್ತಿಲ್ಲ. ಉನ್ನತ ಶಿಕ್ಷಣದ ಗುಣ ಮಟ್ಟ, ಯುವಜನರಿಗೆ ಉದ್ಯೋಗಾವಕಾಶ ಒದಗಿಸ ಬಲ್ಲ ಹೊಸ ಕೋರ್ಸುಗಳ ಅಳವಡಿಕೆ, ಸಮಾಜಮುಖಿ ಅಧ್ಯಯನ-ಸಂಶೋಧನೆ ಮುಂತಾದ ವಿಷಯಗಳೂ ಹೆಚ್ಚು ಮಹತ್ವವುಳ್ಳದ್ದೇ ಆಗಿದೆ. ಆದರೆ ಇಂತಹ ವಿಷಯಗಳಿಗೆ ಸಿಗ ಬೇಕಾದ ಪ್ರಾಮುಖ್ಯತೆ ಸಿಗುತ್ತಿಲ್ಲವೆಂಬುದು ಸತ್ಯ. ಈಗ ಈ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ವಿಷಯದಷ್ಟೇ ಮಹತ್ವವನ್ನು ಅವುಗಳ ಆರ್ಥಿಕ ಪರಿಸ್ಥಿತಿಯೂ ಪಡೆದು ಕೊಂಡಿರುವುದು ಹೊಸ ಬೆಳವಣಿಗೆ. ರಾಜ್ಯದ ಕೆಲವು ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಇದು ಹೆಚ್ಚು ಬೆಳಕಿಗೆ ಬಂದಿಲ್ಲದಿರಬಹುದು. ಆದರೆ ರಾಜ್ಯದ ಉನ್ನತ ಶೈಕ್ಷಣಿಕ ವಲಯದಲ್ಲಿ ಈ ಕುರಿತು ‘ಅಂತೆ ಕಂತೆ’ ಸುದ್ದಿಗಳು ಹರಿದಾಡುತ್ತಿವೆ. ಸರಕಾರದ ಸಂಬಂಧ ಪಟ್ಟ ಇಲಾಖೆಗಳಿಗೆ ವಸ್ತು ಸ್ಥಿತಿಯ ಮಾಹಿತಿ ಇಲ್ಲದೇನೂ ಇಲ್ಲ. ವಿಪರ್ಯಾಸವೆಂದರೆ ಸರಕಾರ ಈ ನಡುವೆಯೂ ಹೊಸ ವಿಶ್ವವಿದ್ಯಾನಿಲಯಗಳನ್ನು ತೆರೆಯುತ್ತಲೇ ಇದೆ.

ಈ ನಿಟ್ಟಿನಲ್ಲಿ ತೀವ್ರ ತೆರನಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ರಾಜ್ಯದ ವಿಶ್ವವಿದ್ಯಾನಿಲಯವೊಂದರ ಪ್ರಕರಣವನ್ನು ಪ್ರಾತಿನಿಧಿಕ ನೆಲೆಯಲ್ಲಿ ಇಲ್ಲಿ ನೋಡ ಬಹುದಾಗಿದೆ. ಈ ವಿಶ್ವವಿದ್ಯಾನಿಲಯದ ಹೆಸರು ಇಲ್ಲಿ ಉದ್ದೇಶ ಪೂರ್ವಕವಾಗಿಯೇ ಬೇಡ. ಕೆಲವು ವರ್ಷಗಳ ಹಿಂದೆ ಈ ವಿಶ್ವವಿದ್ಯಾನಿಲಯವು ರಾಷ್ಟ್ರಮಟ್ಟದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿತ್ತು. ಅದು ಏನಾಯಿತೋ ಗೊತ್ತಿಲ್ಲ. ಇದೀಗ ಈ ವಿಶ್ವವಿದ್ಯಾನಿಲಯವು ಬಹಳ ಕೆಟ್ಟ ದಿನಗಳನ್ನು ಕಾಣುತ್ತಿದೆ. ಒಂದು ಕಾಲಘಟ್ಟದಲ್ಲಿ ಅದು ದಾಖಲಿಸಿದ್ದ ಶೈಕ್ಷಣಿಕ ಔನ್ನತ್ಯ ಈಗ ಕಂಡು ಬರುತ್ತಿಲ್ಲ ಎಂಬ ಅಭಿಪ್ರಾಯವು ವ್ಯಾಪಕವಾಗಿದೆ. ಇದಕ್ಕಿಂತಲೂ ಕಳವಳಕಾರಿಯಾಗಿರುವುದು ಅದರ ಆರ್ಥಿಕ ಪರಿಸ್ಥಿತಿ. ಇಲ್ಲಿ ಕೋಟಿಗಟ್ಟಲೆ ರೂ. ಮೊತ್ತದ ಬಿಲ್ಲುಗಳು ಪಾವತಿಗೆ ಬಾಕಿಯಿದೆ ಎನ್ನಲಾಗುತ್ತಿದೆ. ಅತಿಥಿ ಉಪನ್ಯಾಸಕರ ಹಾಗೂ ತಾತ್ಕಾಲಿಕ ನೌಕರರ ಸಂಭಾವನೆ ಪಾವತಿಯು ಸಕಾಲದಲ್ಲಿ ಆಗುತ್ತಿಲ್ಲ ಎಂಬ ದೂರುಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಸೇವೆಯಿಂದ ನಿವೃತ್ತರಾಗಿರುವ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಯ ಪಿಂಚಣಿ ಸೌಲಭ್ಯದ ಮೊತ್ತ ದೀರ್ಘ ಕಾಲದಿಂದ ಪಾವತಿಯಾಗಲು ಬಾಕಿಯಿದೆ ಎಂಬ ಮಾಹಿತಿ ಗಾಬರಿ ಹುಟ್ಟಿಸುವಂತಿದೆ. ನಿವೃತ್ತಿ ಸಂದರ್ಭದಲ್ಲಿಯೇ ಪಾವತಿಯಾಗ ಬೇಕಾದ ಈ ಸೌಲಭ್ಯದ ಮೊತ್ತ ಪಾವತಿಯಾಗದಿರುವುದು ನಿಜಕ್ಕೂ ಗಂಭೀರ ವಿಷಯ. ಇದರೊಂದಿಗೆ ಮಾಸಿಕ ಪಿಂಚಣಿ ಪಾವತಿಗೂ ಮುಂದೆ ಸಂಚಕಾರ ಬರಬಹುದು ಎಂಬ ಸುದ್ದಿಯಿದ್ದು ಇದರಿಂದ ನಿವೃತ್ತರು ಆತಂಕಕ್ಕೆ ಸಿಲುಕಿದ್ದಾರೆ.

ಬಹುಶಃ ಇದು ಒಂದು ವಿಶ್ವವಿದ್ಯಾನಿಲಯದ ಕತೆಯಲ್ಲ. ರಾಜ್ಯದ ಅನೇಕ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳು ಆರ್ಥಿಕ ಸವಾಲುಗಳನ್ನು ಅವುಗಳದೇ ರೀತಿಯಲ್ಲಿ ಎದುರಿಸುತ್ತಿರುವುದು ವಾಸ್ತವ. ನಿಜ, ಇಲ್ಲಿ ಉಲ್ಲೇಖಿಸಿರುವ ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಹಾಗಂತ ಉಳಿದೆಲ್ಲ ವಿಶ್ವವಿದ್ಯಾನಿಲಯಗಳು ಆರ್ಥಿಕವಾಗಿ ಸುದೃಢ ಅಥವಾ ಸುಸ್ಥಿರವಾಗಿವೆ ಎಂದರ್ಥವಲ್ಲ. ರಾಜ್ಯದ ಕೆಲವೊಂದು ವಿಶ್ವವಿದ್ಯಾನಿಲಯಗಳು ಹೆಚ್ಚು ಕಡಿಮೆ ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸುತ್ತಿವೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾಯ್ದೆ ಪ್ರಕಾರ ಸ್ಥಾಪಿತವಾಗುವ ವಿಶ್ವವಿದ್ಯಾನಿಲಯಗಳು ಹೆಸರಿಗೆ ಮಾತ್ರ ಸ್ವಾಯತ್ತ ಸಂಸ್ಥೆಗಳು. ಆದರೆ ವಾಸ್ತವ ಹಾಗಿರುವುದಿಲ್ಲ. ಈ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕವಾಗಿ ಒಂದು ಮಟ್ಟದ ಸ್ವಾಯತ್ತೆ ಇದ್ದರೂ ಹಣಕಾಸಿನ ವಿಚಾರದಲ್ಲಿ ಸರಕಾರದ ಅವಲಂಬನೆ ಇದ್ದೇ ಇದೆ. ಆರ್ಥಿಕ ವಿಚಾರಕ್ಕೆ ಸಂಬಂಧ ಪಟ್ಟಂತೆ ಸರಕಾರದ ನೆರವು, ಅನುದಾನ ವಿಶ್ವವಿದ್ಯಾನಿಲಯಕ್ಕೆ ಅನಿವಾರ್ಯ. ಈ ನಿಟ್ಟಿನಲ್ಲಿ ಉದ್ಯೋಗಿಗಳ ಮಾಸಿಕ ವೇತನಕ್ಕಾಗಿ ಸರಕಾರವೇ ಪೂರ್ತಿ ಅನುದಾನ ನೀಡುತ್ತಿದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಎಸ್‌ಸಿಪಿ/ ಟಿಎಸ್‌ಪಿ ಯೋಜನೆಯಡಿ ಸೀಮಿತ ಅನುದಾನವು ಪಾವತಿಯಾಗುತ್ತಿದೆ. ಇನ್ನು ಪಿಂಚಣಿ ಪಾವತಿಗಾಗಿ ಒಂದು ಸೀಮಿತ ಮೊತ್ತವನ್ನು ಮಾತ್ರ ನೀಡಲಾಗುತ್ತಿದೆ. ಹಿಂದೆ ಹೊಸ ಕಾಮಗಾರಿ, ಕಟ್ಟಡ ನಿರ್ವಹಣೆ ಇತ್ಯಾದಿಗಳಿಗೆ ಬಿಡುಗಡೆಯಾಗುತ್ತಿದ್ದಂತಹ ಅಭಿವೃದ್ಧಿ ಅನುದಾನ ಸ್ಥಗಿತವಾಗಿ ವರ್ಷಗಳೇ ಉರುಳಿವೆ. ಆದರೆ ವಿಶ್ವವಿದ್ಯಾನಿಲಯವೊಂದಕ್ಕೆ ಇವಿಷ್ಟು ಅನುದಾನಗಳು ಮಾತ್ರ ಸಾಕಾಗುವುದಿಲ್ಲ. ನಿಜವಾಗಿ ನೋಡಿದರೆ ಉದ್ಯೋಗಿಗಳ ವೇತನ ವೆಚ್ಚ ಹೊರತು ಪಡಿಸಿ ಉಳಿದೆಲ್ಲ ವೆಚ್ಚಗಳಲ್ಲಿ ವಿಶ್ವವಿದ್ಯಾನಿಲಯದ ಆಂತರಿಕ ಸಂಪನ್ಮೂಲದ್ದೇ ಸಿಂಹಪಾಲು.

ಆದರೆ ಇದೀಗ ಆಂತರಿಕ ಸಂಪನ್ಮೂಲವು ಗಣನೀಯವಾಗಿ ಕುಸಿತ ಕಾಣುತ್ತಿರುವುದೇ ಆರ್ಥಿಕ ಸಂಕಷ್ಟಕ್ಕೆ ಪ್ರಮುಖ ಕಾರಣವಾಗಿದೆ. ಇದಕ್ಕೆ ಪೂರಕವಾಗಿ ಹಿಂದೆ ದೂರದೃಷ್ಟಿಯಿಲ್ಲದೆ ಕೈಗೊಂಡಿದ್ದ ಬೃಹತ್ ಯೋಜನೆಗಳು ಹಾಗೂ ಆರ್ಥಿಕ ಅಶಿಸ್ತಿನ ಕ್ರಮಗಳು ಆಂತರಿಕ ಸಂಪನ್ಮೂಲದ ಸಮಸ್ಯೆಯನ್ನು ಉಲ್ಬಣಗೊಳಿಸಿದೆ ಎನ್ನ ಬಹುದು. ಇದರಿಂದ ಬಾಧಿತ ವಿಶ್ವವಿದ್ಯಾನಿಲಯದ ಖಜಾನೆ ಹೆಚ್ಚು ಕಡಿಮೆ ಬರಿದಾಗಿರುವುದು ಎದ್ದು ಕಾಣುವ ಅಂಶ. ಇದಕ್ಕೆ ಪೂರಕವಾಗಿ ಈ ಹಿಂದೆ ಸರಕಾರ ಕೆಲವು ನಿರ್ದಿಷ್ಟ ಉದ್ದೇಶಗಳಿಗೆ ನೀಡುತ್ತಿದ್ದಂತಹ ನೆರವು ಕಡಿತ ಗೊಳಿಸಿರುವುದು ಇಲ್ಲವೇ ಸ್ಥಗಿತ ಗೊಳಿಸಿರುವುದು ಸಮಸ್ಯೆಯ ಇನ್ನೊಂದು ಮುಖ.

ಒಂದು ಹಂತದಲ್ಲಿ ಆರ್ಥಿಕವಾಗಿ ಸದೃಢವಾಗಿದ್ದ ವಿಶ್ವವಿದ್ಯಾನಿಲಯದ ಖಜಾನೆ ಯಾಕೆ ಕರಗಿತು ಎನ್ನುವುದನ್ನು ತಿಳಿಯಲು ಸ್ವಲ್ಪ ಹಿಂದಕ್ಕೆ ಹೋಗ ಬೇಕಾಗುತ್ತದೆ. ಉನ್ನತ ಶಿಕ್ಷಣ ರಂಗವನ್ನು ಪ್ರವೇಶಿಸಿರುವ ಕೊಳಕು ರಾಜಕಾರಣ; ವಿಶ್ವವಿದ್ಯಾನಿಲಯದೊಳಗೆ ತಲೆ ಎತ್ತಿರುವ ಭ್ರಷ್ಟಾಚಾರ ಹಾಗೂ ಅವ್ಯವಹಾರ ಇತ್ಯಾದಿ ವಿಶ್ವವಿದ್ಯಾನಿಲಯಗಳ ಪಾವಿತ್ರ್ಯವನ್ನು ಕೆಡಿಸಿತಲ್ಲದೆ ಆರ್ಥಿಕ ಹೊಡೆತವನ್ನೂ ನೀಡಿರುವುದು ಕಣ್ಣೆದುರುಗಿನ ಸತ್ಯ. ವಿಶ್ವವಿದ್ಯಾನಿಲಯಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವ ಕುಲಪತಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟತೆ ನುಸುಳಿ ದಶಕಗಳೇ ಕಳೆದಿವೆ. ಇಲ್ಲಿ ಹಣ ಮತ್ತು ಪ್ರಭಾವಗಳೇ ನಿರ್ಣಾಯಕ ಅಂಶಗಳಾಗಿರುವುದರಿಂದ ಯೋಗ್ಯರಾದವರನ್ನು ಕಡೆಗಣಿಸುವಂತಹ ವಾತಾವರಣವಿದೆ. ಇದರಿಂದ ಅಂತಿಮವಾಗಿ ಆಯ್ಕೆಯಾಗುವವರು ಯಾರು ಎಂದು ಸುಲಭದಲ್ಲಿ ಊಹಿಸಬಹುದು. ಈ ರೀತಿ ನೇಮಕ ಗೊಳ್ಳುವ ಕುಲಪತಿಗಳು ವಿಶ್ವವಿದ್ಯಾನಿಲಯಗಳ ‘ಆರ್ಥಿಕ ಅರೋಗ್ಯ’ವನ್ನು ಎಷ್ಟರ ಮಟ್ಟಿಗೆ ಕಾಯ್ದುಕೊಂಡು ಬಂದಾರು?

ಸರಕಾರದ ಮಟ್ಟದಲ್ಲಿ ನಡೆಯುವಂತಹ ಅವ್ಯವಹಾರ, ಭ್ರಷ್ಟಾಚಾರಗಳಂತೆ ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ ಅಕ್ರಮಗಳು ಹೆಚ್ಚು ಸುದ್ದಿ ಮಾಡುವುದಿಲ್ಲ. ಇಲ್ಲಿ ಯಾವುದೋ ಸ್ವಹಿತಾಸಕ್ತಿಯಿಂದ ಕೈಗೊಳ್ಳುವಂತಹ ದೊಡ್ಡ ಮಟ್ಟದ ಯೋಜನೆಗಳಿಗೆ ಆಂತರಿಕ ಸಂಪನ್ಮೂಲವನ್ನು ಬಳಸಿಕೊಳ್ಳಲಾಗುತ್ತಿದೆ. ಬಹುತೇಕವಾಗಿ ಸರಕಾರದ ಯಾವುದೇ ಆರ್ಥಿಕ ನೆರವು ಇವುಗಳಿಗಿರುವುದಿಲ್ಲ. ಇಂತಹ ಯೋಜನೆಗಳು ಕೊನೆಗೆ ಫಲದಾಯಕವಾಗದೆ ಹೊರೆಯಾಗುವುದೇ ಹೆಚ್ಚು. ಹೀಗೆ ದೂರದೃಷ್ಟಿಯಿಲ್ಲದೆ ರೂಪಿಸಿದ ಯೋಜನೆಗಳು ಕೋಟ್ಯಂತರ ರೂಪಾಯಿಯನ್ನು ನುಂಗಿ ಹಾಕಿರುತ್ತದೆ. ಹಾಗೆಯೇ ಅನಗತ್ಯ ಖರೀದಿ, ಅದ್ದೂರಿ ಸಭೆ-ಸಮಾರಂಭಗಳು, ನಿಯಂತ್ರಣವಿಲ್ಲದ ದುಂದು ವೆಚ್ಚ ಇತ್ಯಾದಿ ಆರ್ಥಿಕ ಅಶಿಸ್ತಿನ ಭಾಗವಾಗಿ ಕಣ್ಣಿಗೆ ರಾಚುತ್ತವೆ. ಹಾಗೆಯೇ ನಿಯಮಗಳ ಚೌಕಟ್ಟು ಮೀರಿ ಪಾವತಿಸಲಾಗುವ ಸಂಭಾವನೆ, ಪ್ರಯಾಣ ಭತ್ತೆ, ಉಪಸ್ಥಿತಿ ಭತ್ತೆ, ಅನಗತ್ಯ ಊಟೋಪಚಾರಗಳ ವೆಚ್ಚ ಇತ್ಯಾದಿಗಳು ಖಜಾನೆಗೆ ಸದ್ದಿಲ್ಲದೆ ಕನ್ನ ಹಾಕುವುದು ಗೊತ್ತಾಗುವುದೇ ಇಲ್ಲ. ಇದರಿಂದ ವಿಶ್ವವಿದ್ಯಾನಿಲಯಗಳ ಖಜಾನೆ ಬರಿದಾಗುತ್ತ ಸಾಗಿದೆ ಎನ್ನಬಹುದು. ಹಿಂದೆ ಒಂದು ಕಡೆ ಇಂತಹ ಖರ್ಚು-ವೆಚ್ಚವಾಗುತ್ತಿದ್ದಂತೆ ಇನ್ನೊಂದೆಡೆ ಆಂತರಿಕ ಸಂಪನ್ಮೂಲ ಅದೇ ಗತಿಯಲ್ಲಿ ಖಜಾನೆ ತುಂಬುತ್ತಿದ್ದಾಗ ಇದೆಲ್ಲ ಗೊತ್ತಾಗುವಂತಿರಲಿಲ್ಲ. ಒಮ್ಮೆ ಸಂಪನ್ಮೂಲ ಹರಿದು ಬರುವುದು ಕಡಿಮೆಯಾಗುತ್ತಿದ್ದಂತೆ ಸಮಸ್ಯೆ ಗಂಭೀರವಾಗ ತೊಡಗಿದೆ.

ವಿದ್ಯಾರ್ಥಿಗಳು ಪಾವತಿಸುತ್ತಿರುವ ವಿವಿಧ ಶುಲ್ಕಗಳು ಮತ್ತು ಕಾಲೇಜುಗಳಿಂದ ಸಂಗ್ರಹವಾಗುತ್ತಿರುವ ಸಂಯೋಜನಾ ಶುಲ್ಕಗಳೇ ವಿಶ್ವವಿದ್ಯಾನಿಲಯಗಳ ಮುಖ್ಯ ಆಂತರಿಕ ಸಂಪನ್ಮೂಲವಾಗಿದೆ. ಇದು ಗಣನೀಯವಾಗಿ ಕುಸಿತವಾಗುತ್ತಿರುವಂತಹ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಉನ್ನತ ಶೈಕ್ಷಣಿಕ ರಂಗದಲ್ಲಿ ಜರುಗಿರುವ ಇತ್ತೀಚೆಗಿನ ವಿದ್ಯಮಾನವನ್ನು ತಿಳಿದುಕೊಳ್ಳಬೇಕಾಗಿದೆ. ಜಗತ್ತಿನಾದ್ಯಂತ ಜರುಗಿರುವ ಶೈಕ್ಷಣಿಕ ಬೆಳವಣಿಗೆಗಳು, ಬದಲಾಗಿರುವಂತಹ ನಾಡಿನ ಉನ್ನತ ಶಿಕ್ಷಣ ನೀತಿ, ಹೊಸ ಆವಿಷ್ಕಾರಗಳು ಇತ್ಯಾದಿ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯದ ಆರ್ಥಿಕ ಪರಿಸ್ಥಿತಿ ಮೇಲೆ ಗಮನಾರ್ಹ ಪರಿಣಾಮವನ್ನು ಉಂಟು ಮಾಡಿದೆ. ಹೊಸ ಸರಕಾರಿ ಹಾಗೂ ಖಾಸಗಿ ವಿಶ್ವವಿದ್ಯಾನಿಲಯಗಳ ಸ್ಥಾಪನೆ, ಸ್ವಾಯತ್ತ ಕಾಲೇಜುಗಳ ಪ್ರಾರಂಭ, ಸಂಯೋಜಿತ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸುಗಳ ಆರಂಭ, ದೂರ ಶಿಕ್ಷಣ ಕೋರ್ಸುಗಳಿಗೆ ಸರಕಾರದ ತಡೆ ಇತ್ಯಾದಿಗಳು ವಿಶ್ವವಿದ್ಯಾನಿಲಯಗಳ ಆಂತರಿಕ ಸಂಪನ್ಮೂಲಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿದೆ. ಹಾಗೆಯೇ ವಿಶ್ವವಿದ್ಯಾನಿಲಯದಲ್ಲಿ ಖಾಯಂ ಅಧ್ಯಾಪಕರ ಹುದ್ದೆಗಳು ಖಾಲಿಯಾದಂತೆ ಅವುಗಳು ಸಕಾಲದಲ್ಲಿ ಮರುಭರ್ತಿಗೊಳ್ಳದೆ ಇರುವುದರಿಂದ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಗುಣ ಮಟ್ಟವೂ ಕುಸಿದಿದೆ. ಇದರಿಂದ ವಿದ್ಯಾರ್ಥಿಗಳು ಸಹಜವಾಗಿ ಉನ್ನತ ವ್ಯಾಸಂಗಕ್ಕಾಗಿ ಖಾಸಗಿ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳತ್ತ ಮುಖ ಮಾಡುತ್ತಿದ್ದಾರೆ. ಜೊತೆಗೆ ಮಾನವಿಕ ಕೋರ್ಸುಗಳು ಬೇಡಿಕೆಯಿಲ್ಲದೆ ಸೊರಗುತ್ತಿವೆ.

ಈ ಎಲ್ಲ ಆದಾಯ ಮತ್ತು ವೆಚ್ಚಗಳ ಸರಿದೂಗಿಸುವಿಕೆಯಲ್ಲಿ ನಿವೃತ್ತ ಸಿಬ್ಬಂದಿಯ ಮಾಸಿಕ ಪಿಂಚಣಿ ಪಾವತಿ ಮತ್ತು ನಿವೃತ್ತಿ ಸಂದರ್ಭದಲ್ಲಿ ಪಾವತಿಸ ಬೇಕಾದ ನಿವೃತ್ತಿ ಸೌಲಭ್ಯಗಳದ್ದೇ ಒಂದು ಪ್ರತ್ಯೇಕ ಲೆಕ್ಕಾಚಾರವಿದೆ. ಸರಕಾರ ಈ ಉದ್ದೇಶಕ್ಕಾಗಿ ನೀಡುವ ಸೀಮಿತ ಅನುದಾನ ಒಟ್ಟು ಬೇಡಿಕೆಯ ಮೂರನೇ ಒಂದು ಭಾಗಕ್ಕಿಂತಲೂ ಬಹುತೇಕ ಕಡಿಮೆಯಾಗಿರುವುದರಿಂದ ವಿಶ್ವವಿದ್ಯಾನಿಲಯವು ಬಹಳ ದೊಡ್ಡ ಮೊತ್ತದ ಪಾಲನ್ನು ತನ್ನ ಆಂತರಿಕ ಸಂಪನ್ಮೂಲದಿಂದ ಹೊಂದಿಸಿ ಕೊಳ್ಳಬೇಕಾಗುತ್ತದೆ. ಹಿಂದೆ ಆದಾಯ ಸುಸ್ಥಿರವಾಗಿದ್ದಾಗ ಈ ವೆಚ್ಚ ಭರಿಸಲು ಯಾವುದೇ ಸಮಸ್ಯೆಯಿರಲಿಲ್ಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಇದು ಒಂದು ಗಂಭೀರ ಸಮಸ್ಯೆಯಾಗಿ ಕಾಡ ತೊಡಗಿದೆ.

ರಾಜ್ಯದ ಉನ್ನತ ಶಿಕ್ಷಣ ರಂಗದಲ್ಲಿ ಇಂತಹ ಗಂಭೀರ ಸಮಸ್ಯೆಗಳು ಉದ್ಭವಿಸಿದಾಗ ಸರಕಾರ ಮಧ್ಯ ಪ್ರವೇಶ ಮಾಡಲೇ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಸಾಂಪ್ರದಾಯಿಕ ಸರಕಾರಿ ವಿಶ್ವವಿದ್ಯಾನಿಲಯಗಳ ಆರ್ಥಿಕ ಸ್ಥಿತಿ-ಗತಿಯ ಅಧ್ಯಯನ ನಡೆಸಿ ಗಂಭೀರ ಆರ್ಥಿಕ ಸಮಸ್ಯೆಗಳಿಗೆ ತುತ್ತಾಗಿರುವ ವಿಶ್ವವಿದ್ಯಾನಿಲಯ ಗಳ ಅಭಿವೃದ್ಧಿಗಾಗಿ ಕಾಯಕಲ್ಪ ನೀಡುವಂತಹ ಒಂದು ಸಮಗ್ರ ಯೋಜನೆಯನ್ನು ರೂಪಿಸುವುದು ನಾಡಿನ ಹಿತದೃಷ್ಟಿಯಿಂದ ಅತ್ಯಂತ ಅಗತ್ಯ. ಮುಖ್ಯವಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರು ವಂತಹ ವಿಶ್ವವಿದ್ಯಾನಿಲಯಗಳ ಘನತೆ, ಗೌರವಗಳು ಮಣ್ಣು ಪಾಲಾಗುವ ಮುನ್ನ ಸರಕಾರ ಎಚ್ಚೆತ್ತು ಕೊಳ್ಳಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಕುಮಾರ್ ಕುಡ್ತಡ್ಕ

contributor

Similar News