ಟೋಲ್ ಪಾವತಿ ನಿಲ್ಲಲಿ
ಮಾನ್ಯರೇ,
ವಿಶ್ವ ವಿಖ್ಯಾತ, ಕೆ.ಆರ್.ಎಸ್. ಅಣೆಕಟ್ಟಿನ ಕೆಳಭಾಗದಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಓಡಾಟಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಳೆದ 20 ವರ್ಷಗಳ ಹಿಂದೆ ಸುಮಾರು ಒಂದು ಫರ್ಲಾಂಗ್ ದೂರದ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.
ಕೆ.ಆರ್.ಎಸ್. ಅಣೆಕಟ್ಟನ್ನು ವೀಕ್ಷಿಸಲು ಬರುವವರಿಗೆ ಮತ್ತು ಕೆ.ಆರ್.ಎಸ್.ನಿಂದ ಉತ್ತರ ಭಾಗಕ್ಕೆ ಕಾರು, ಬಸ್ಸು, ಟೆಂಪೋಗಳಲ್ಲಿ ಪ್ರಯಾಣ ಮಾಡುವ ಎಲ್ಲರೂ ಈ ಸೇತುವೆ ಮೇಲೆ ಸಂಚರಿಸಲು ಟೋಲ್ (ವಾಹನಗಳ ಸಂಚಾರ ಶುಲ್ಕ) ಅನ್ನು ಕೊಟ್ಟು ಸಂಚರಿಸಬೇಕು. 20 ವರ್ಷಗಳ ಹಿಂದೆ ಈ ಒಂದು ಫರ್ಲಾಂಗ್ ದೂರದ ಸೇತುವೆ ನಿರ್ಮಾಣ ಕಾರ್ಯಕ್ಕೆ 8 ರಿಂದ 10 ಕೋಟಿ ರೂಪಾಯಿ ಖರ್ಚು ಮಾಡಿರಬಹುದು. ಆದರೆ ಪ್ರತೀ ವರ್ಷ ಈ ಟೋಲ್ ಸಂಗ್ರಹದಿಂದ ಕನಿಷ್ಠ ಪಕ್ಷ 4ರಿಂದ 5 ಕೋಟಿ ರೂ. ಸಂಗ್ರಹವಾಗುತ್ತಿದೆ, ಅಂದರೆ ಸುಮಾರು 20 ವರ್ಷಗಳಿಂದ ಸರಿ- ಸುಮಾರು 100 ಕೋಟಿ ರೂ. ಟೋಲ್ ಸಂಗ್ರಹಿಸಿದಂತಾಗಿದೆ.
ಸಂಪರ್ಕ ಸೇತುವೆಗಳನ್ನು ನಿರ್ಮಾಣ ಮಾಡುವುದು ಸರಕಾರ ಲಾಭ ಗಳಿಸಲೋ, ಅಥವಾ ಸಾರ್ವಜನಿಕರ ಅನುಕೂಲಕ್ಕಾಗಿಯೋ?
ಕಳೆದ ಹತ್ತು ವರ್ಷಗಳಿಂದೀಚೆಗಂತೂ, ಕೆ.ಆರ್.ಎಸ್.ನ ಹಿನ್ನೀರಿನ ಭಾಗದಲ್ಲಿ ನಿರ್ಮಾಣವಾಗಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಮತ್ತು ಭೂ ವರಾಹ ಸ್ವಾಮಿ ದೇವಸ್ಥಾನಕ್ಕೆ ಶನಿವಾರ ಮತ್ತು ರವಿವಾರ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ, ಇವರಿಂದಲೇ ಸಾಕಷ್ಟು ಟೋಲ್ ಸಂಗ್ರಹವಾಗುತ್ತಿದೆ.
ಈ ಸೇತುವೆಯ ಮೇಲೆ ಓಡಾಡುವ ಎಲ್ಲಾ ರೀತಿಯ ವಾಹನಗಳಿಗೂ ಟೋಲ್ ಅನ್ನು ಸರಕಾರ ರದ್ದು ಮಾಡಬೇಕು. ಆದರೆ ಸಂಬಂಧಿಸಿದ ಅಧಿಕಾರಿಗಳು ಇತ್ತೀಚೆಗೆ ಮತ್ತೆ ಇನ್ನೊಂದು ವರ್ಷ ಮಾತ್ರ ಟೋಲ್ ಸಂಗ್ರಹಿಸುವುದಾಗಿ ಹೇಳಿದ್ದಾರೆ. ಇವರು ಹೀಗೆ ಕಳೆದ 5 ವರ್ಷಗಳಿಂದ ಹೇಳುತ್ತಲೇ ಇದ್ದಾರೆ. ಮಾನ್ಯ ಪ್ರವಾಸೋದ್ಯಮ ಸಚಿವರು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಇನ್ನಾದರೂ ಟೋಲ್ ಸಂಗ್ರಹ ರದ್ದು ಪಡಿಸಿಯಾರೇ?.
-ಬೂಕನಕೆರೆ ವಿಜೇಂದ್ರ
ಕುವೆಂಪು ನಗರ, ಮೈಸೂರು