ಸ್ವಾತಿ ಮಲಿವಾಲ್ ಪ್ರಕರಣದಲ್ಲಿ ಬಿಜೆಪಿ ಏಕಿಷ್ಟು ಆಸಕ್ತಿ ವಹಿಸುತ್ತಿದೆ?
ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದ್ದರಿಂದ ಎಎಪಿಗೂ ‘ಇಂಡಿಯಾ’ ಒಕ್ಕೂಟಕ್ಕೂ ದೊಡ್ಡ ಹುಮ್ಮಸ್ಸು ಬಂದಂತಾಗಿತ್ತು. ಮತ್ತದರಿಂದ ಬಿಜೆಪಿಗೆ ಇನ್ನಷ್ಟು ತಳಮಳ, ತಲ್ಲಣ ಎದುರಾಗಿತ್ತು. ಹಾಗಾಗಿ ಸ್ವಾತಿ ಮಲಿವಾಲ್ ಪ್ರಕರಣ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು ನಡೆದಿರುವುದೇ ಅಥವಾ ಈ ಪ್ರಕರಣದ ಮೂಲಕ ಎಎಪಿಯ ಇನ್ನೊಂದು ಮುಖ ಬಯಲಾಗಿದೆಯೇ? ನಿಜವಾಗಿಯೂ ಆಗಿರುವುದೇನು?
ವಾರಗಳ ಕಾಲ ಅಮೆರಿಕದಲ್ಲಿದ್ದ ಆಪ್ ಸಂಸದೆ ಸ್ವಾತಿ ಮಲಿವಾಲ್ ದಿಲ್ಲಿಗೆ ಬಂದ ಬೆನ್ನಿಗೇ ದೊಡ್ಡದೊಂದು ವಿವಾದದ ಕೇಂದ್ರವಾಗಿದ್ದಾರೆ. ಅವರ ಮೇಲೆ ಹಲ್ಲೆ ಮಾಡಿರುವ ಗಂಭೀರ ಆರೋಪ ಕೇಜ್ರಿವಾಲ್ ಅವರ ಆಪ್ತನ ಮೇಲಿದೆ. ಆದರೆ ಕೇಜ್ರಿವಾಲ್ ಸರಕಾರಿ ನಿವಾಸದ್ದು ಎಂದು ವೈರಲ್ ಆಗಿರುವ ವೀಡಿಯೊ ಬಿಡುಗಡೆ ಬೆನ್ನಿಗೇ ಪ್ರಕರಣ ಪಡೆದಿರುವ ದೊಡ್ಡ ತಿರುವು ಏನು? ಈ ಇಡೀ ಪ್ರಕರಣದಲ್ಲಿ ಬಿಜೆಪಿಯ ದ್ವಂದ್ವ ಹೇಗೆ ಸಂಪೂರ್ಣ ಬಯಲಾಗಿದೆ? ಏನಿದು ಪ್ರಕರಣ ಮತ್ತು ನಿಜವಾಗಿಯೂ ನಡೆದದ್ದು ಏನು ಎಂಬುದನ್ನು ಸ್ವಲ್ಪ ಗಮನಿಸೋಣ.
ಪ್ರಕರಣದಲ್ಲಿ ಆರೋಪವಿರುವುದು ಕೇಜ್ರಿವಾಲ್ ಆಪ್ತನ ಮೇಲಾದರೂ, ಇಡೀ ಪ್ರಕರಣ ಕೇಜ್ರಿವಾಲ್ ವಿರುದ್ಧವಾಗಿದೆಯೇ ಎಂಬ ಅನುಮಾನ ಬಾರದೇ ಇರುವುದಿಲ್ಲ ಮತ್ತು ಈ ಪ್ರಕರಣದಲ್ಲಿ ಬಿಜೆಪಿ ಅತಿಯಾದ ಆಸಕ್ತಿ ತೋರಿಸುತ್ತಿದೆ. ದೇಶದ ಗಮನ ಸೆಳೆದ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಆಸಕ್ತಿ ತೋರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಕೇಜ್ರಿವಾಲ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸುವವರೆಗೆ ಬಿಜೆಪಿ ಮಂದಿ ಈ ಪ್ರಕರಣವನ್ನು ರಾಜಕೀಯ ಅಸ್ತ್ರವಾಗಿ ತೆಗೆದುಕೊಂಡಿರುವ ಹಾಗಿದೆ.
ಅರವಿಂದ್ ಕೇಜ್ರಿವಾಲ್ ಸೂಚನೆ ಮೇರೆಗೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆದಿದೆ ಎನ್ನುವಲ್ಲಿಯವರೆಗೆ ಆರೋಪಿಸಲಾಗುತ್ತಿದೆ.
ಏನಿದು ಹಾಗಾದರೆ?
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಎಪಿ ನಾಯಕಿ, ದಿಲ್ಲಿ ಸಚಿವೆ ಆತಿಶಿ ಸಿಂಗ್ ಆರೋಪಿಸಿರುವ ಪ್ರಕಾರ, ಇಡೀ ಪ್ರಕರಣ ಕೇಜ್ರಿವಾಲ್ ವಿರುದ್ಧದ ಬಿಜೆಪಿಯ ಷಡ್ಯಂತ್ರವಾಗಿದೆ.
ಆತಿಶಿ ಪ್ರಕಾರ ಸ್ವಾತಿ ಮಲಿವಾಲ್ ಬಲವಂತವಾಗಿ ಸಿಎಂ ನಿವಾಸಕ್ಕೆ ನುಗ್ಗಲು ಯತ್ನಿಸಿದ್ದಾರೆ. ಆಗ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ವಿಭವ್ ಕುಮಾರ್ ತಡೆಯಲು ಪ್ರಯತ್ನಿಸಿದ್ದಾರೆ. ಸ್ವಾತಿ ಅವರಿಗೆ ಯಾವುದೇ ಗಾಯಗಳಾಗಿಲ್ಲ, ಬಟ್ಟೆ ಹರಿದಿಲ್ಲ. ಬದಲಾಗಿ ಸಿಎಂ ನಿವಾಸದಲ್ಲಿ ಆರಾಮವಾಗಿ ಕೂತಿರುವ ಸ್ವಾತಿ ಅವರೇ ಭದ್ರತಾ ಸಿಬ್ಬಂದಿಗಳ ಜೊತೆ ಕೆಟ್ಟದಾಗಿ ಬೊಬ್ಬೆ ಹಾಕಿ ಮಾತಾಡಿದ್ದಾರೆ. ಈ ಎಲ್ಲ ಅಂಶಗಳೂ ವೀಡಿಯೊ ಕ್ಲಿಪ್‌ನಲ್ಲಿ ಸ್ಪಷ್ಟ ಇವೆ. ಕೇಜ್ರಿವಾಲ್ ಅವರಿಗೆ ಮಾನಹಾನಿ ಮಾಡಲು, ಅವರನ್ನು ಈ ಪ್ರಕರಣದಲ್ಲಿ ಬಂಧಿಸಲು ಪಿತೂರಿ ನಡೆದಿದೆ ಎಂಬುದು ಆತಿಶಿ ಆರೋಪ.
ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದ್ದರಿಂದ ಎಎಪಿಗೂ ‘ಇಂಡಿಯಾ’ ಒಕ್ಕೂಟಕ್ಕೂ ದೊಡ್ಡ ಹುಮ್ಮಸ್ಸು ಬಂದಂತಾಗಿತ್ತು. ಮತ್ತದರಿಂದ ಬಿಜೆಪಿಗೆ ಇನ್ನಷ್ಟು ತಳಮಳ, ತಲ್ಲಣ ಎದುರಾಗಿತ್ತು. ಹಾಗಾಗಿ ಇದು ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು ನಡೆದಿರುವುದೇ ಅಥವಾ ಈ ಪ್ರಕರಣದ ಮೂಲಕ ಎಎಪಿಯ ಇನ್ನೊಂದು ಮುಖ ಬಯಲಾಗಿದೆಯೇ? ನಿಜವಾಗಿಯೂ ಆಗಿರುವುದೇನು?
ತಾನು ಸಿಎಂ ಕೇಜ್ರಿವಾಲ್ ಅಧಿಕೃತ ನಿವಾಸದಲ್ಲಿ ಅವರನ್ನು ಭೇಟಿಯಾಗಲು ಹೋಗಿದ್ದಾಗ ಅಲ್ಲಿ ತನ್ನ ಮೇಲೆ ಹಲ್ಲೆಯಾಗಿದೆ, ಕೇಜ್ರಿವಾಲ್ ಆಪ್ತ ವಿಭವ್ ಕುಮಾರ್ ಸಂಪೂರ್ಣ ಬಲ ಬಳಸಿ ಹಲ್ಲೆ ನಡೆಸಿರುವುದಾಗಿ ಸ್ವಾತಿ ಆರೋಪಿಸಿದ್ದಾರೆ.
ಒಂದೆಡೆ ಹೀಗೆ ಹೇಳುತ್ತಲೇ, ಅವರು ಇದರಲ್ಲಿ ರಾಜಕೀಯ ತರಬೇಡಿ ಎಂತಲೂ ಹೇಳುತ್ತಿರುವುದೇ ನಿಜವಾಗಿಯೂ ರಾಜಕೀಯವೇ ಎಂಬ ಅನುಮಾನವೂ ಕಾಡುತ್ತಿದೆ.
ಆಪ್ ರಾಜ್ಯಸಭಾ ಸದಸ್ಯೆಯ ಈ ಆರೋಪಗಳನ್ನು ಬಿಜೆಪಿ ಮಾತ್ರ ವಿಶೇಷ ಆಸಕ್ತಿಯಿಂದ ಕೈಗೆತ್ತಿಕೊಂಡು ಹಿಂಡುತ್ತಿರುವುದು, ಬಿಜೆಪಿಯ ಇಡೀ ಐಟಿ ಸೆಲ್ ಇದರ ಬೆನ್ನುಬಿದ್ದಿರುವುದು ಗಮನಿಸಬೇಕಿರುವ ವಿಷಯ. ಮಹಿಳಾ ಕುಸ್ತಿಪಟುಗಳ ವಿಚಾರದಲ್ಲಿ, ಮಣಿಪುರದಲ್ಲಿ ಮಹಿಳೆಯರ ಮೇಲಾದ ಅತ್ಯಾಚಾರದ ಬಗ್ಗೆ, ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಹಗರಣದ ಬಗ್ಗೆ ಏನೇನೂ ಮಾತಾಡದ ಬಿಜೆಪಿಗೆ ಈಗ ಸ್ವಾತಿ ಮಲಿವಾಲ್ ಪ್ರಕರಣದಲ್ಲಿ ಮಾತ್ರ ಎಲ್ಲಿಲ್ಲದ ಕಾಳಜಿ ಹಾಗೂ ಆಸಕ್ತಿ ಏಕೆ?
ಶುಕ್ರವಾರ ಕೇಜ್ರಿವಾಲ್ ನಿವಾಸದ ಡ್ರಾಯಿಂಗ್ ರೂಂನ ವೀಡಿಯೊ ಕ್ಲಿಪ್ ಒಂದು ಬಹಿರಂಗಗೊಂಡಿದೆ.
ಭದ್ರತಾ ಸಿಬ್ಬಂದಿ ಜೊತೆಗೆ ಸ್ವಾತಿ ವಾದಿಸುವ ಆ ಸಿಸಿಟಿವಿ ಫೂಟೇಜ್ ನೋಡಿದರೆ, ಇಡೀ ಪ್ರಕರಣವನ್ನು ವ್ಯವಸ್ಥಿತವಾಗಿ ಬೆಳೆಸಲಾಗಿದೆ ಮತ್ತು ಸ್ವಾತಿ ಮಾಲಿವಾಲ್ ಸುಳ್ಳು ಹೇಳುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ ಎಂಬುದು ಈಗ ಎದ್ದಿರುವ ಒಂದು ವಾದ.
ಎಫ್‌ಐಆರ್ ಪ್ರಕಾರ,
ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಹೋಗಿದ್ದೆ. ಮೊದಲು ಅವರು ಇದ್ದಾರೆ ಎಂದು ಹೇಳಿ, ಕಾಯಲು ಹೇಳಲಾಗಿತ್ತು. ಆದರೆ ಅದಾದ ನಂತರ ವಿಭವ್ ಕುಮಾರ್ ಬಂದು ನಿಂದನೀಯವಾಗಿ ಮಾತಾಡಿದರು ಎಂದು ದೂರಿರುವ ಸ್ವಾತಿ, ಅದಕ್ಕೆ ಏನು ಕಾರಣವಾಯಿತು ಎಂಬುದನ್ನು ದೂರಿನಲ್ಲಿ ಸ್ಪಷ್ಟವಾಗಿ ಹೇಳಿಲ್ಲ.
ಅಪಾಯಿಂಟ್‌ಮೆಂಟ್ ಪಡೆಯದೇ ಬೆಳ್ಗಗೆಯೆ ಕೇಜ್ರಿವಾಲ್ ನಿವಾಸಕ್ಕೆ ಹೋದದ್ದೇಕೆ ಎಂಬುದನ್ನೂ ಅವರು ಹೇಳಿಲ್ಲ.
ಆದರೆ ತನ್ನ ಮೇಲೆ ಕೇಜ್ರಿವಾಲ್ ಆಪ್ತ ಸಹಾಯಕ ವಿಭವ್ ಕುಮಾರ್ ಹಲ್ಲೆ ಮಾಡಿದರು, ಹಲವು ಬಾರಿ ಕಪಾಳಕ್ಕೆ ಹೊಡೆದರು. ಕಾಲಿನಿಂದ ಒದ್ದರು. ಸಹಾಯಕ್ಕಾಗಿ ಕೂಗಿದರೂ ಯಾರೂ ಬರಲಿಲ್ಲ. ತಾನು ಕೆಳಗೆ ಬಿದ್ದೆ. ಎದೆ, ಹೊಟ್ಟೆ, ದೇಹದ ಕೆಳಭಾಗಕ್ಕೆ ಒದ್ದರು. ಬಟ್ಟೆ ಹರಿಯಿತು ಎಂದೆಲ್ಲ ವಿವರವಾಗಿ ದೂರಿನಲ್ಲಿ ಹೇಳಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಫೋನ್ ಮಾಡಿದೆ ಎನ್ನುತ್ತಾರೆ. ಈ ವಿಚಾರವನ್ನು ರಾಜಕೀಯಗೊಳಿಸುವುದು ಇಷ್ಟವಿರಲಿಲ್ಲ, ಹಾಗಾಗಿ ಪೊಲೀಸ್ ಠಾಣೆಗೆ ಹೋದರೂ ದೂರು ಕೊಡದೆ ವಾಪಸ್ ಬಂದೆ ಎಂದೂ ಹೇಳುತ್ತಾರೆ.
ನಿಜವಾಗಿಯೂ ಏನಾಯಿತು ಎನ್ನುವುದರ ಬಗ್ಗೆ ಎಎಪಿಗೇ ಸರಿಯಾದ ಮಾಹಿತಿ, ಸ್ಪಷ್ಟತೆ ಇರಲಿಲ್ಲ. ಸಂಜಯ್ ಸಿಂಗ್ ಕೂಡ ಸ್ವಾತಿ ಮಲಿವಾಲ್ ವಿಚಾರದಲ್ಲಿ ನಡೆದಿರುವುದು ನಡೆಯಬಾರದ ಘಟನೆ, ವಿಭವ್ ಕುಮಾರ್ ವಿರುದ್ಧ ಕ್ರಮ ಜರುಗಬೇಕು ಎಂದೇ ಬುಧವಾರ ಹೇಳಿದ್ದರು. ಆದರೆ ಭದ್ರತಾ ಸಿಬ್ಬಂದಿ ಜೊತೆ ಸ್ವಾತಿ ವಾದಿಸುವ ಸಿಸಿಟಿವಿ ಫೂಟೇಜ್ ಸಿಕ್ಕಿದ ಬಳಿಕ ಸ್ವಾತಿ ಮಲಿವಾಲ್ ಸುಳ್ಳುಗಳು ಬಯಲಾಗಿವೆ ಎಂಬುದು ಈಗ ಎಎಪಿ ವಾದ.
ಶುಕ್ರವಾರ ಬಯಲಾದ ವೀಡಿಯೊ ಪ್ರಕಾರ, ಸ್ವಾತಿ ಮಲಿವಾಲ್ ಹೇಳುವಂತೆ ಏನೂ ಆಗಿಯೇ ಇಲ್ಲ ಎಂದು ಆತಿಶಿ ಸಿಂಗ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸ್ವಾತಿ ಮಲಿವಾಲ್ ಡ್ರಾಯಿಂಗ್ ರೂಂನಲ್ಲಿ ಆರಾಮಾಗಿ ಕುಳಿತಿದ್ದರು. ವಿಭವ್ ಕುಮಾರ್ ವಿರುದ್ಧ ಆರೋಪ ಮಾಡಿರುವ ಸ್ವಾತಿಯವರು ಭದ್ರತಾ ಸಿಬ್ಬಂದಿಗೆ ಸ್ವತಃ ಜೋರು ದನಿಯಲ್ಲಿ ಮಾತನಾಡಿದ್ದಾರೆ, ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಆತಿಶಿ ಆರೋಪಿಸಿದ್ದಾರೆ.
ಸ್ವಾತಿಯವರ ಬಟ್ಟೆ ಹರಿದಿರುವುದಾಗಲಿ, ಯಾವುದೇ ಥರದ ಗಾಯಗಳಾಗಿರುವುದಾಗಲಿ ವೀಡಿಯೊದಲ್ಲಿ ಕಾಣಿಸಿಲ್ಲ. ಆದರೆ ಸ್ವಾತಿಯವರು ಆರಾಮವಾಗಿ ಕೂತುಕೊಂಡು ಸಿಬ್ಬಂದಿ ಬಳಿ ವಿಭವ್ ಕುಮಾರ್ ವಿರುದ್ಧ ಜೋರು ದನಿಯಲ್ಲಿ ಮಾತಾಡಿರುವುದು, ಧಮ್ಕಿ ಹಾಕಿರುವುದು ಮಾತ್ರ ಸ್ಪಷ್ಟವಾಗಿದೆ ಎಂದು ಆತಿಶಿ ಹೇಳಿದ್ಧಾರೆ.
ಸ್ವಾತಿ ಮಲಿವಾಲ್ ಮಾಡಿರುವ ಎಲ್ಲ ಆರೋಪಗಳು ಪೂರ್ತಿ ಆಧಾರರಹಿತ ಮತ್ತು ಪೂರ್ತಿ ಸುಳ್ಳು ಎಂಬುದು ಈ ವೀಡಿಯೊದಿಂದಾಗಿ ಇಡೀ ದೇಶಕ್ಕೇ ಗೊತ್ತಾಗಿದೆ ಎಂದು ಆತಿಶಿ ಹೇಳಿದ್ದಾರೆ.
ಸಿಸಿಟಿವಿ ಫೂಟೇಜ್ ಪೂರ್ತಿಯಾಗಿ ಬಹಿರಂಗವಾದರೆ ಈ ಪ್ರಕರಣಕ್ಕೆ ಇನ್ನಷ್ಟು ತಿರುವುಗಳು ಸಿಗಲಿವೆ.
ಸ್ವಾತಿ ಮಲಿವಾಲ್ ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ಎಲ್ಲ ಪ್ಲ್ಯಾನ್ ಮಾಡಿದೆ ಎಂಬ ಗಂಭೀರ ಆರೋಪಗಳು ಎದ್ದಿವೆ. ಕೇಜ್ರಿವಾಲ್ ಎದುರಲ್ಲಿ ಮತ್ತೊಂದು ಬಿಕ್ಕಟ್ಟು ಸೃಷ್ಟಿಸಲು ಇದೆಲ್ಲವೂ ವ್ಯವಸ್ಥಿತವಾಗಿ ಯೋಜಿಸಲ್ಪಟ್ಟಿದೆ ಎನ್ನಲಾಗುತ್ತಿದೆ.
ಸ್ವಾತಿ ಮಲಿವಾಲ್ ಸಂಸದೆಯಾಗಿರುವುದರಿಂದ ಅವರದೇ ಭದ್ರತಾ ಸಿಬ್ಬಂದಿಯಿರುತ್ತಾರೆ. ವಾಹನ ಇರುತ್ತದೆ. ಚಾಲಕ ಇರುತ್ತಾನೆ. ಆದರೆ ತಾನು ಆಟೋ ಮಾಡಿಕೊಂಡು ಹೋದೆ ಎಂದು ಸ್ವಾತಿ ಹೇಳುತ್ತಿರುವುದು ಕೂಡ ವಿಚಿತ್ರವಾಗಿದೆ. ಅವರ ಅಧಿಕೃತ ಸರಕಾರಿ ವಾಹನ ಎಲ್ಲಿತ್ತು ಹಾಗಾದರೆ? ಅದಾದ ಬಳಿಕ ವೈದ್ಯಕೀಯ ಪರೀಕ್ಷೆಗೂ ಆಕೆ ಒಪ್ಪದೇ ಇದ್ದುದೇಕೆ? ತಡವಾಗಿ ಪರೀಕ್ಷೆಗೆ ಒಳಗಾಗಿದ್ದೇಕೆ ಎಂಬ ಪ್ರಶ್ನೆಯೂ ಈಗ ಏಳುತ್ತದೆ.
ಅದಕ್ಕಿಂತಲೂ, ಬೆಳ್ಳಂಬೆಳಗ್ಗೆ, ಅದೂ ಅನುಮತಿಯನ್ನೂ ಪಡೆಯದೆ ಕೇಜ್ರಿವಾಲ್ ಭೇಟಿಗೆ ಅವರ ಮನೆಗೆ ಯಾಕೆ ಹೋಗಿದ್ದರು ಎನ್ನುವ ಪ್ರಶ್ನೆಗೆ ಕೂಡ ಇನ್ನೂ ಉತ್ತರ ಸಿಕ್ಕಿಲ್ಲ.
ಮೇ ೧೩ರಂದು ನಡೆದ ಘಟನೆಯ ಸಂಬಂಧ ಮೇ ೧೬ರಂದು ಎಫ್‌ಐಆರ್ ದಾಖಲಾಗಿದೆ. ಇಡೀ ಪ್ರಕರಣದಲ್ಲಿ ಸ್ವಾತಿ ಮಲಿವಾಲ್‌ಗಿಂತಲೂ ಮುಂದೆ ಬಿಜೆಪಿ ಸಕ್ರಿಯವಾಗಿ ನಿಂತಿದೆ. ಬಿಜೆಪಿಗೆ ಯಾವುದು ಬೇಕಾಗಿದೆಯೋ ಆ ವಿಚಾರವನ್ನು ದೊಡ್ಡದಾಗಿಸಲು ಮೀಡಿಯಾ ಕಾದಿರುತ್ತದೆ ಎಂಬುದಕ್ಕೂ ಸ್ವಾತಿ ಮಲಿವಾಲ್ ಪ್ರಕರಣ ಒಂದು ಉದಾಹರಣೆ.
ಶುಕ್ರವಾರ ಆತಿಶಿ ಸುದ್ದಿಗೋಷ್ಠಿಗೆ ಬಲವಾದ ಆಧಾರವಾಗಿ ಒದಗಿದ ವೀಡಿಯೊ ಯಾವಾಗಿನದು ಎಂಬುದು ಮೊದಲು ಸ್ಪಷ್ಟವಾಗಬೇಕಿದೆ.
ಸ್ವಾತಿ ಹೇಳಿದಂತೆ ಆಕೆ ಮೇಲೆ ಹಲ್ಲೆಯಾಗಿದ್ದರೆ ಈ ವೀಡಿಯೊ ಹಲ್ಲೆಗೆ ಮೊದಲಿನದೋ ಅಥವಾ ಹಲ್ಲೆಯ ನಂತರದ್ದೋ ಎನ್ನುವುದು ಸದ್ಯಕ್ಕೆ ಸ್ಪಷ್ಟವಿಲ್ಲ. ಸ್ವಾತಿ ಮಲಿವಾಲ್ ಒಮ್ಮೆ ಮಾತ್ರ ಈ ವೀಡಿಯೊದಲ್ಲಿ ಕಾಣಿಸುತ್ತಾರೆ. ಉಳಿದಂತೆ ಅವರ ಮಾತುಗಳು ಕೇಳಿಸುತ್ತವೆ. ಹೊರಗೆ ಬನ್ನಿ ಎಂದು ಭದ್ರತಾ ಸಿಬ್ಬಂದಿ ಕರೆಯುತ್ತಿದ್ದರೆ, ತನ್ನನ್ನು ಮುಟ್ಟಿದರೆ ನಿಮ್ಮ ನೌಕರಿ ಹೋಗುತ್ತದೆ ಎಂದು ಸ್ವಾತಿ ಹೇಳುವುದೂ ಕೇಳಿಸುತ್ತದೆ. ಕೆಟ್ಟ ಪದ ಬಳಸಿದ್ದೂ ಕೇಳಿಸುತ್ತದೆ. ಗಾರ್ಡ್ ಹೊರಗೆ ಬನ್ನಿ ಎಂದು ಕೇಳಿಕೊಂಡರೂ ಸ್ವಾತಿ ಒಪ್ಪುವುದಿಲ್ಲ. ಮೊದಲು ಪೊಲೀಸರು ಬರಲಿ ಎನ್ನುತ್ತಾರೆ. ಇದು ಬಿಟ್ಟರೆ, ಇಲ್ಲಿ ಸ್ವಾತಿ ಮೇಲೆ ಹಲ್ಲೆಯಾಗಿದೆ ಎಂಬುದೇನೂ ಈ ವೀಡಿಯೊ ಮೂಲಕ ಸ್ಪಷ್ಟವಾಗುವುದಿಲ್ಲ.
ಎಎಪಿ ಈ ವೀಡಿಯೊ ಇಟ್ಟುಕೊಂಡು ಸುದ್ದಿಗೋಷ್ಠಿ ಮಾಡಿದ ಬಳಿಕ ಸ್ವಾತಿ ಕೂಡ ಪ್ರತಿಕ್ರಿಯಿಸಿದ್ದಾರೆ. ಆ ರೂಂನ ಸಿಸಿಟಿವಿ ಫೂಟೇಜ್ ಬಹಿರಂಗವಾದರೆ ಸತ್ಯ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ. ಸತ್ಯ ಒಂದಲ್ಲ ಒಂದು ದಿನ ಬಯಲಾಗಲೇಬೇಕು ಎಂದಿದ್ದಾರೆ.
ಇಲ್ಲಿ ಸ್ವಾತಿ ಮಲಿವಾಲ್ ಎತ್ತಿರುವ ರಾಜಕೀಯದ ಪ್ರಶ್ನೆ ಕೂಡ ಚರ್ಚಾರ್ಹ.
ಕೇಜ್ರಿವಾಲ್ ಮತ್ತು ಸ್ವಾತಿ ಮಲಿವಾಲ್ ನಡುವೆ ರಾಜಕೀಯ ವೈಷಮ್ಯ ಮೂಡಿದೆಯೇ? ಅದು ಬಿಗಡಾಯಿಸಿದೆಯೇ?
ಸ್ವಾತಿ ಹೇಳಿರುವಂತೆ, ಡ್ರಾಯಿಂಗ್ ರೂಂನ ಸಿಸಿಟಿವಿ ಫೂಟೇಜ್ ಬಯಲಾಗಲಿದೆ. ಪೊಲೀಸರು ಕೇಜ್ರಿವಾಲ್ ಅವರನ್ನು ಈ ವಿಚಾರವಾಗಿ ಪ್ರಶ್ನಿಸಬಹುದು.
ಇದೇನೇ ಇದ್ದರೂ, ಇಲ್ಲಿ ಬಿಜೆಪಿ ಮತ್ತು ಮೀಡಿಯಾ ಎರಡೂ ಒಟ್ಟೊಟ್ಟಿಗೇ ಸಕ್ರಿಯವಾಗಿರುವುದು ನೋಡಿದರೆ, ಎಂದಿನಂತೆ ವಿಪಕ್ಷವನ್ನು ಗುರಿ ಮಾಡಲಾಗಿದೆಯೇ ಎಂಬ ಅನುಮಾನ ಮೂಡದೇ ಇರುವುದಿಲ್ಲ.
ಸ್ವಾತಿ ಮಲಿವಾಲ್ ಪ್ರಕರಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ವಿಭವ್ ಕುಮಾರ್‌ಗೆ ಸಮನ್ಸ್ ನೀಡಿದೆ. ಬರೀ ಒಂದು ಹೇಳಿಕೆಯ ಆಧಾರದ ಮೇಲೆ ಈ ಪ್ರಕರಣದಲ್ಲಿ ಸಮನ್ಸ್ ನೀಡಿರುವ ಆಯೋಗ, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಏಕೆ ಸಮನ್ಸ್ ನೀಡಿಲ್ಲ? ಈ ಪ್ರಕರಣದಲ್ಲಿ ಸಕ್ರಿಯವಾಗಿದ್ದು, ಎಎಪಿ ವಿರುದ್ಧ ನಿಂತಿರುವ ಬಿಜೆಪಿ, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮಾತ್ರ ಯಾವುದೇ ಮಾತಾಡುತ್ತಿಲ್ಲ ಏಕೆ?
ಎಲ್ಲಿ ಬಿಜೆಪಿಗೆ ತೊಂದರೆಯಾಗುತ್ತದೆಯೋ ಅಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಸುಮ್ಮನಾಗಿಬಿಡುತ್ತದೆಯೇ?
ಆದರೆ ಮಲಿವಾಲ್ ಪ್ರಕರಣದಲ್ಲಿ ದಿಲ್ಲಿಯ ಲೋಕಸಭಾ ಸೀಟುಗಳ ವಿಚಾರದಲ್ಲಿ ಬಿಜೆಪಿಗೆ ಲಾಭವಾಗುವುದರಿಂದ, ಅಲ್ಲಿ ಮಾತ್ರ ರಾಷ್ಟ್ರೀಯ ಮಹಿಳಾ ಆಯೋಗ ಚುರುಕಾಗಿ ಕೆಲಸ ಮಾಡುತ್ತಿದೆಯೇ?
ಸ್ವಾತಿ ಮಲಿವಾಲ್ ಪರ ಹೋರಾಟಕ್ಕೆ ನಿಂತ ಬಿಜೆಪಿಯವರೆಲ್ಲ ಪಶ್ಚಿಮ ಬಂಗಾಳ ರಾಜ್ಯಪಾಲರಿಂದ ಅನ್ಯಾಯಕ್ಕೊಳಗಾಗಿದ್ದಾರೆ ಎನ್ನಲಾದ ಇಬ್ಬರು ಮಹಿಳೆಯರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ನಿಷ್ಕ್ರಿಯರಾಗಿದ್ದಾರೆ.
ಈಗ ಈ ಪ್ರಕರಣದಲ್ಲಿ ಇದ್ದಬಿದ್ದ ಪತ್ರಕರ್ತರೆಲ್ಲ ಸ್ವಾತಿ ಮಲಿವಾಲ್ ಮನೆಯೆದುರು ಹೋಗಿ ಕಾದುಕೊಂಡು ನಿಂತಿದ್ದಾರಲ್ಲ, ಇವರೆಲ್ಲ ಮಹಿಳಾ ಕುಸ್ತಿಪಟುಗಳು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ದಿಲ್ಲಿಯ ಬೀದಿಗಳಲ್ಲಿ ಅಳುತ್ತ ನಿಂತಿದ್ದಾಗ ಎಲ್ಲಿ ಹೋಗಿದ್ದರು?
ಬ್ರಿಜ್ ಭೂಷಣ್ ಸಿಂಗ್‌ನಿಂದ ಹಿಡಿದು ಪ್ರಜ್ವಲ್ ರೇವಣ್ಣವರೆಗೆ, ಮಣಿಪುರದಲ್ಲಿ ಅನ್ಯಾಯಕ್ಕೊಳಗಾದ ಮಹಿಳೆಯರಿಂದ ಹಿಡಿದು ಬಂಗಾಳ ರಾಜ್ಯಪಾಲರಿಂದ ಅನ್ಯಾಯಕ್ಕೊಳಗಾದ ಮಹಿಳೆಯರ ವಿಚಾರದವರೆಗೆ ಏಕೆ ಈ ಮೀಡಿಯಾಗಳಿಗೆ ಮಾತಾಡಲು, ಪ್ರಶ್ನೆಯೆತ್ತಲು ಬಾಯಿಯಿಲ್ಲ?
ಪಶ್ಚಿಮ ಬಂಗಾಳದಲ್ಲಿ ಅನ್ಯಾಯಕ್ಕೊಳಗಾದ ಮಹಿಳೆಯರ ಬಗ್ಗೆ ನಿರ್ಮಲಾ ಸೀತಾರಾಮನ್ ಆಗಲಿ ಸ್ಮತಿ ಇರಾನಿಯಾಗಲೀ ಮಾತಾಡುತ್ತಲೇ ಇಲ್ಲ. ಆದರೆ ಸ್ವಾತಿ ಮಲಿವಾಲ್ ಪ್ರಕರಣದಲ್ಲಿ ಕೇಜ್ರಿವಾಲ್ ಕ್ಷಮೆ ಯಾಚನೆಗೆ ಆಗ್ರಹಿಸುತ್ತಿದ್ದಾರೆ.
ಹಲ್ಲೆಯಾದ ಬಗ್ಗೆ ಸ್ವಾತಿ ಟ್ವೀಟ್ ಮೂಲಕ ಹೇಳಿದರೇ ಹೊರತು, ದಿನಗಳು ಕಳೆದರೂ ಮೀಡಿಯಾ ಮುಂದೆ ಬಂದಿರಲೇ ಇಲ್ಲ. ಆದರೆ ಎಎಪಿಯ ಸಂಜಯ್ ಸಿಂಗ್ ಮಾರನೇ ದಿನವೇ ಮಾಧ್ಯಮಗಳ ಮುಂದೆ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ನಿಜವಾಗಿಯೂ ಏನಾಗಿದೆ ಎಂಬುದರ ಸ್ಪಷ್ಟತೆ ಇಲ್ಲದಿರುವಾಗಲೂ ಅವರು ಸ್ವಾತಿ ಪರವಾಗಿ ಮಾತಾಡಿ, ಅವರ ಮೇಲೆ ಆಗಿದೆಯೆನ್ನಲಾದ ಹಲ್ಲೆಯ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದರು. ತಾವೆಲ್ಲರೂ ಸ್ವಾತಿಯವರ ಜೊತೆಗಿರುವುದಾಗಿ ಹೇಳಿದ್ದರು.
ಸ್ವಾತಿಯವರು ಇನ್ನೂ ಟ್ವೀಟ್ ಮಾಡುತ್ತಲೇ ಇದ್ದಾರೆ. ಇದನ್ನು ರಾಜಕೀಯಗೊಳಿಸದಿರುವಂತೆ ಕೇಳುವ ಅವರು, ಮತ್ತೊಂದೆಡೆ, ಚಾರಿತ್ರ್ಯವಧೆ ಮಾಡಲು ಯತ್ನಿಸಿದವರು ಬೇರೆ ಪಕ್ಷದವರ ಒತ್ತಾಯದ ಮೇರೆಗೆ ಮಾಡುತ್ತಿದ್ದಾರೆ ಎಂದವರಿಗೂ ದೇವರ ದಯೆ ಇರಲಿ ಎಂದು ಟ್ವೀಟ್ ಮಾಡುತ್ತಾರೆ. ಅಂತಿಮವಾಗಿ ಈ ಮೂಲಕ ಅವರು ಕೂಡ ರಾಜಕೀಯ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ.
ವರದಿಯೊಂದರ ಪ್ರಕಾರ,
ಕೇಜ್ರಿವಾಲ್ ನಿವಾಸದಲ್ಲಿ ಸೋಮವಾರ ಆ ಘಟನೆ ಬಳಿಕ ಸ್ವಾತಿ ತಮ್ಮ ಮೇಲೆ ಹಲ್ಲೆಯಾಗಿರುವುದಾಗಿ ಪೊಲೀಸರಿಗೆ ಕರೆ ಮಾಡಿ ತಿಳಿಸುತ್ತಾರೆ. ನಂತರ ದೂರು ನೀಡುವುದಕ್ಕಾಗಿ ಅವರು ಪೊಲೀಸ್ ಠಾಣೆಗೂ ಹೋಗುತ್ತಾರೆ. ಅಲ್ಲಿ ಅವರಿಗೆ ಕೆಲವು ಫೋನ್ ಕರೆಗಳು ಬಂದ ಬಳಿಕ, ಮರಳಿ ಬರುವುದಾಗಿ ಹೇಳಿ ದೂರು ದಾಖಲಿಸದೆಯೇ ಠಾಣೆಯಿಂದ ಹೊರ ಬರುತ್ತಾರೆ. ಆದರೆ ಮತ್ತೆ ಅವರು ಠಾಣೆಗೆ ಹೋಗುವುದೇ ಇಲ್ಲ. ಅವರ ಹೇಳಿಕೆಯ ಸ್ಟೇಟಸ್ ಅನ್ನು ಪೊಲೀಸರು ಪೆಂಡಿಂಗ್ ಇಡುತ್ತಾರೆ ಮತ್ತು ಅವರನ್ನು ಸಂಪರ್ಕಿಸಲು ಆಗಿನಿಂದಲೂ ಪ್ರಯತ್ನಿಸುತ್ತಾರೆ. ಆದರೆ ಸ್ವಾತಿ ಪೊಲೀಸರ ಕರೆಗೆ ಉತ್ತರಿಸಿದ್ದು ಗುರುವಾರ ಬೆಳಗ್ಗೆ.
ಯಾಕೆ ಅವರು ಅಲ್ಲಿಯವರೆಗೆ ಪೊಲೀಸರ ಕರೆ ಸ್ವೀಕರಿಸದೆ ಇದ್ದರು? ಠಾಣೆಯಲ್ಲಿರುವಾಗ ಅವರಿಗೆ ಯಾರ ಫೋನ್ ಕರೆಗಳು ಬಂದಿದ್ದವು ಎಂಬುದು ಕೂಡ ರಹಸ್ಯವಾಗಿಯೇ ಇದೆ. ಘಟನೆ ನಡೆದ ದಿನ ಠಾಣೆಗೆ ತೆರಳಿ ದೂರು ಕೊಡದೆ ಮರಳಿದ ಅವರು, ನಾಲ್ಕು ದಿನಗಳ ನಂತರ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದಾರೆ. ಇಷ್ಟು ದಿನ ತಡ ಮಾಡಿದ್ದು ಯಾಕೆ?
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ, ಇಂತಹ ಯಾವುದೇ ಘಟನೆಗಳಲ್ಲೂ ತಾವು ಮಹಿಳೆಯರ ಪರ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಕೇಜ್ರಿವಾಲ್ ನಿವಾಸದ ಸಿಸಿಟಿವಿ ಫೂಟೇಜ್ ಬಹಿರಂಗವಾದ ಬಳಿಕ ತಿಳಿಯಲಿರುವ ಸತ್ಯಗಳು ಅನೇಕ ಇರಬಹುದು.
ಈ ಜನವರಿಯಲ್ಲಷ್ಟೇ ಸ್ವಾತಿ ರಾಜ್ಯಸಭಾ ಸದಸ್ಯೆಯಾಗಿದ್ದರು. ಆದರೆ ಕೇಜ್ರಿವಾಲ್ ಬಂಧನದ ನಂತರ ಏನಾಯಿತು?
ಎಎಪಿ ನಾಯಕರೆಲ್ಲ ಪ್ರತಿಭಟನೆಯಲ್ಲಿ, ಪ್ರಚಾರದಲ್ಲಿ ತೊಡಗಿದ್ದಾಗ ಸ್ವಾತಿ ಮಾಲಿವಾಲ್ ಮತ್ತು ರಾಘವ್ ಛಡ್ಡಾ ಮಾತ್ರ ಕಾಣಿಸಲೇ ಇಲ್ಲ. ರಾಘವ್ ಛಡ್ಡಾ ಕಣ್ಣಿನ ತುರ್ತು ಶಸ್ತ್ರ ಚಿಕಿತ್ಸೆಗಾಗಿ ಲಂಡನ್‌ಗೆ ಹೋಗಿದ್ದಾರೆ ಎಂಬ ಮಾಹಿತಿ ಬಂತು. ಆದರೆ ರಾಜ್ಯ ಸಭಾ ಸದಸ್ಯೆಯಾಗುವ ಮೊದಲು ಅಷ್ಟೊಂದು ಸಕ್ರಿಯವಾಗಿದ್ದ ಸ್ವಾತಿ ಆಮೇಲೆ ಇದ್ದಕ್ಕಿದ್ದಂತೆ ಅಮೆರಿಕಕ್ಕೆ ಹೋಗಿದ್ದೇಕೆ?
ನಿಜವಾಗಿಯೂ ಆಪ್ ಪಕ್ಷದೊಳಗೆ ಏನು ನಡೆದಿದೆ? ಕೇಜ್ರಿವಾಲ್ ಜೊತೆಗೆ ಅವರ ಸಂಬಂಧ ಸರಿಯಿಲ್ಲವೆ? ಇವೆಲ್ಲ ಉತ್ತರ ಸಿಗಬೇಕಿರುವ ಪ್ರಶ್ನೆಗಳಾಗಿವೆ.
ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಸ್ವಾತಿ ಮಾಡಿದ್ದ ಮಹತ್ವಪೂರ್ಣ ಕೆಲಸಗಳನ್ನು ನೋಡಿಯೇ ಅವರನ್ನು ಕೇಜ್ರಿವಾಲ್ ರಾಜ್ಯಸಭೆ ಸದಸ್ಯೆಯನ್ನಾಗಿಸಿದ್ದರು.
ಒಂದು ಕಾಲದಲ್ಲಿ ಬಿಜೆಪಿಯೇ ಸ್ವಾತಿ ವಿರುದ್ಧ ಮಾತಾಡಿತ್ತು. ಅವರ ವಿರುದ್ಧ ಏನೇನೆಲ್ಲಾ ಆರೋಪ ಮಾಡಿದ್ದ ಬಿಜೆಪಿಯೇ ಈಗ ಸ್ವಾತಿಗಾಗಿ ಅವರು ಕೇಳದೆಯೂ ಹೋರಾಟಕ್ಕೆ ನಿಂತಿದೆ.
ಸುಳ್ಳು ಮೊಕದ್ದಮೆಗಳು ಸೃಷ್ಟಿಯಾಗುವುದು, ಅದರ ಪರಿಣಾಮವಾಗಿ ರಾಜಕಾರಣದಲ್ಲೂ ಮಹತ್ವದ ತಿರುವುಗಳು ಬರುವುದೆಲ್ಲ ಈ ದೇಶದಲ್ಲಿ ನಡೆಯುತ್ತಿದೆ.
ನಿಜವಾದ ವಿಷಯಗಳು ಚುನಾವಣೆಯ ಹೊತ್ತಿನಲ್ಲೂ ಚರ್ಚೆಯಾಗುತ್ತಲೇ ಇಲ್ಲ.
ಈಗ ಕೇಜ್ರಿವಾಲ್ ಜೈಲಿನಿಂದ ಹೊರಬಂದು ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಹೊತ್ತಿನಲ್ಲಿ, ಅವರದೇ ಪಕ್ಷದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಪ್ರಕರಣ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಬರೀ ಕಾಕತಾಳೀಯ ಎಂದು ನಂಬುವುದು ಹೇಗೆ?