ಮುಂಡಾಜೆಯಲ್ಲಿದೆ ದೇಶದಲ್ಲೇ ಪ್ರಥಮ 'ಕಾರ್ಗಿಲ್ ವನ'

Update: 2024-07-26 05:56 GMT

ಮಂಗಳೂರು: ಕಾರ್ಗಿಲ್ ಯುದ್ಧ ಗೆದ್ದು ಶುಕ್ರವಾರಕ್ಕೆ 25 ವರ್ಷ. ಯುದ್ಧದಲ್ಲಿ ಸೆಣಸಾಡಿ ವೀರ ಮರಣವನ್ನಪ್ಪಿದ ಯೋಧರ ನೆನಪು ದೇಶದ ನಾಗರಿಕರಿಗಿರಲಿಕ್ಕಿಲ್ಲ. ಆದರೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಪಂ ವ್ಯಾಪ್ತಿಯ ಮೂಲತಃ ಕೃಷಿಕ, ಪರಿಸರವಾದಿ, ಸಮಾಜ ಸೇವಕ ಸಚಿನ್ ಭಿಡೆ ಗಿಡಗಳನ್ನು ನೆಟ್ಟು ಹುತಾತ್ಮ ಯೋಧರನ್ನು ಸದಾ ಜೀವಂತವಾಗಿರಿಸುವ ಅಪರೂಪದ ಪ್ರಯತ್ನ ಮಾಡಿದ್ದಾರೆ.

ಹಿರಿಯರಿಂದ ಬಳುವಳಿಯಾಗಿ ಬಂದ ಐದು ಎಕರೆ ಪಟ್ಟಾ ಜಾಗದಲ್ಲಿ ವಿವಿಧ ಪ್ರಭೇದಗಳ ಸುಮಾರು 800 ಗಿಡಗಳನ್ನು ನೆಟ್ಟಿದ್ದು, ಇದರಲ್ಲಿ 527 ಗಿಡಗಳನ್ನು ಕಾರ್ಗಿಲ್ ಹುತಾತ್ಮ ಯೋಧರ ನೆನಪಿನಲ್ಲಿ ನೆಟ್ಟು ಅವುಗಳಿಗೆ ಹುತಾತ್ಮರ ಹೆಸರಿಡುವ ಕಾಯಕದಲ್ಲಿ ತೊಡಗಿದ್ದಾರೆ. 2020ರಲ್ಲಿ ಬೆಳ್ತಂಗಡಿಯ ನಿವೃತ್ತ ಯೋಧರ ಸಂಘದವರು ಉದ್ಘಾಟಿಸಿದ ಈ ಯೋಜನೆಗೆ ‘ಕಾರ್ಗಿಲ್ ವನ’ ಎಂದು ಹೆಸರಿಟ್ಟಿದ್ದಾರೆ.

‘ಕಾಲೇಜು ದಿನಗಳಲ್ಲಿ ಪ್ರಾಂಶುಪಾಲರು ಪ್ರತೀ ದಿನ ಅರ್ಧ ಗಂಟೆ ನಮಗೆ ವ್ಯಾಯಾಮ ಮಾಡಿಸುತ್ತಿದ್ದರು. ಅವರು ದೇಶ ಸೇವೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಯುದ್ಧದ ಸಂದರ್ಭ ನನ್ನ ತಂದೆಯವರು ಮನಿ ಆರ್ಡರ್ ಮಾಡಲು ಹೇಳಿದರು. ಆ ದಿನಗಳಿಂದಲೇ ನನ್ನಲ್ಲಿ ದೇಶ ಸೇವೆಯ ಬಗ್ಗೆ ಆಸಕ್ತಿ ಮೂಡಿತು. ಒಂದೆರಡು ಬಾರಿ ಯೋಧನಾಗುವ ಪ್ರಯತ್ನದಲ್ಲಿ ಪರೀಕ್ಷೆ ಬರೆದೆ. ಆದರೆ ಯಶಸ್ಸು ಕಾಣಲಿಲ್ಲ. ಈ ರೀತಿಯಾದರೂ ಸೇವೆ ಮಾಡೋಣ ಎನ್ನುವ ಚಿಂತನೆಯೊಂದಿಗೆ ಕಾರ್ಗಿಲ್ ವನವನ್ನು ನಿರ್ಮಿಸಿದ್ದೇನೆ. ಇದಕ್ಕೆ ನನ್ನ ಕುಟುಂಬದವರ ಸಂಪೂರ್ಣ ಬೆಂಬಲ ಇದೆ’ ಎನ್ನುತ್ತಾರೆ ಸಚಿನ್ ಭಿಡೆ.

ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸಕ್ರಿಯ ಸದಸ್ಯರಾಗಿರುವ ಇವರು ತನ್ನೂರಿನ ಸುತ್ತ ಮುತ್ತ ಹಲವು ರೀತಿಯ ಸಮಾಜ ಸೇವೆಯಲ್ಲಿ ಆಸಕ್ತಿಯಿಂದ ತೊಡಗಿಕೊಂಡಿದ್ದಾರೆ.

‘ಸಾರ್ವಜನಿಕರಿಗೆ ಈ ವನಕ್ಕೆ ಭೇಟಿ ನೀಡಲು ಮುಕ್ತ ಅವಕಾಶ ಇದೆ. ಆದರೆ ಇಲ್ಲಿ ಯಾರೂ ಪ್ಲಾಸ್ಟಿಕ್ ಬಳಸುವುದಾಗಲಿ, ಎಸೆಯುವುದಾಗಲಿ ಸಲ್ಲದು. ಮುಂದಿನ ದಿನಗಳಲ್ಲಿ ಇಲ್ಲಿ ವಾಕಿಂಗ್ ಟ್ರ್ಯಾಕ್ ಸೇರಿದಂತೆ ಬೆಂಚ್‌ಗಳನ್ನು ಅಳವಡಿಸುವ ಯೋಜನೆ ಇದೆ ಎಂದು ಸಚಿನ್ ಭಿಡೆ ತಿಳಿಸಿದ್ದಾರೆೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಅವಿನಾಶ್ ಕಾಮತ್

contributor

Similar News