ರಾಜಕೀಯ ನೇತಾರರ ಬುದ್ಧಿಗೇಡಿ ಹುಮ್ಮಸ್ಸನ್ನು ತಡೆಯಬೇಕಿದೆ

ಚುನಾವಣೆ ಗೆಲ್ಲಲು, ಅಧಿಕಾರ ಪಡೆಯಲು ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುವ ಹಿಂಸೆ ಮತ್ತು ದೌರ್ಜನ್ಯಗಳನ್ನು ಧರ್ಮ ಮತ್ತು ಜಾತಿ ಬಣ್ಣ ಲೇಪಿಸುವುದು ಮತಿವಿಕಲ್ಪ. ತಮ್ಮ ತಾಯಿಯನ್ನು ಗೌರವಿಸುವ, ಅವರ ಹುಟ್ಟು ಹಬ್ಬವನ್ನು ವೈಭವದಿಂದ ಆಚರಿಸುವುದನ್ನು ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ನಾಯಕರುಗಳನ್ನು ಭವ್ಯ ಭಾರತದಲ್ಲಿ ಕಾಣುತ್ತಿದ್ದೇವೆ. ತಾಯಿಯನ್ನು ಗೌರವಿಸುವ ನಮ್ಮ ರಾಜಕೀಯ ನಾಯಕರು ಮಹಿಳಾ ಸಮುದಾಯವನ್ನು ಧರ್ಮ, ಜಾತಿ ಮತ್ತು ಕೋಮು ನೆಲೆಯಲ್ಲಿ ವಿಂಗಡಿಸಿ ನೋಡುವುದು ರಾಜಕೀಯ ನೇತಾರರ ಕೆಟ್ಟ ಮನಸ್ಥಿತಿಯನ್ನು ಸೂಚಿಸುತ್ತದೆ.

Update: 2024-05-20 09:10 GMT

ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಉತ್ಸುಕವಾಗಿರುವ ರಾಜಕೀಯ ನೇತಾರರು ಮತ್ತು ಹುರಿಯಾಳುಗಳು ಅಸಂಸದೀಯ(ಅನ್‌ಪಾರ್ಲಿಮೆಂಟರಿ) ಪದಗಳ ಮೂಲಕ ಟೀಕೆಗಳನ್ನು ಮಾಡುವಲ್ಲಿ ಒಬ್ಬರನ್ನೊಬ್ಬರು ಮೀರಿಸಿದ್ದಾರೆ. ಇದು ಒಂದು ರೀತಿಯಲ್ಲಿ ಪ್ರಜಾಸತ್ತೆಯನ್ನು ಅಣಕಿಸುವ, ಸಂವಿಧಾನದ ಆಶಯವನ್ನು ಪರೋಕ್ಷವಾಗಿ ವಿರೋಧಿಸುವ ಬೆಳವಣಿಗೆ. ರಾಜಕೀಯದಲ್ಲಿ ಧರ್ಮವಾದಿ, ಜಾತಿವಾದಿ, ಭ್ರಷ್ಟಾಚಾರದ ಟೀಕೆಗಳು ಸಾಮಾನ್ಯ. ಇತ್ತೀಚೆಗೆ ಮಹಿಳೆಯರ ಘನತೆ, ಮಹಿಳೆಯ ವ್ಯಕ್ತಿತ್ವ ಮತ್ತು ಅವರ ವೈಯಕ್ತಿಕ ಸಂಬಂಧಗಳನ್ನು ಕಾಮಪ್ರಚೋದಕ ದೃಷ್ಟಿಕೋನದಲ್ಲಿ ಟೀಕಿಸುವುದು ಬಹಳ ಹೆಚ್ಚಾಗಿದೆ. ಭಾರತದ ರಾಜಕಾರಣದಲ್ಲಿ ಧರ್ಮ(ಧಾರ್ಮಿಕ ಭಾವನೆಗಳು), ಜಾತಿ ನೆಲೆಯಲ್ಲಿ ಸಮಾಜವನ್ನು ಪ್ರತ್ಯೇಕಿಸುತ್ತಿರುವ ಪ್ರಕೃತಿ 1990ರ ನಂತರ ನಿರಂತರವಾಗಿ ಹೆಚ್ಚುತ್ತಲೇ ಇವೆ. ಇತ್ತೀಚಿನ ರಾಜಕೀಯದಲ್ಲಿ ಮಹಿಳೆಯನ್ನು ಧರ್ಮದ ನೆಲೆಯಲ್ಲಿ ಪ್ರತ್ಯೇಕಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ರಾಜಕೀಯ ನೇತಾರರು ಮಂಗಳಸೂತ್ರ, ಕುಂಕುಮ, ಹೆಣ್ಣು ಮಕ್ಕಳ ಮರ್ಯಾದೆ ಎಂದು ಮತ್ತೆ ಮತ್ತೆ ಹೇಳುವ ಸಣ್ಣ ಮನಸ್ಸಿನ ದೊಡ್ಡ ರಾಜಕಾರಣಿಗಳು ‘‘ನಾವೇನೂ ಸೀರೆ ಉಟ್ಟುಕೊಂಡಿಲ್ಲ’’, ‘‘ನಾನೇನು ಬಳೆ ತೊಟ್ಟಿಲ್ಲ’’, ‘‘ನಾನು ಗಂಡಸು’’ ಎಂದು ಹೇಳುವುದನ್ನು ಮರೆಯುತ್ತಿಲ್ಲ. ಇದರ ಮೂಲ ಬೇರು ಗಂಡಸಿನ ರಕ್ಷಣೆಯಲ್ಲಿ ಹೆಣ್ಣು ಇರಬೇಕು ಎನ್ನುವ ಪಿತೃಪ್ರಭುತ್ವ ಸಂಸ್ಕೃತಿಯಾಗಿದೆ. ಈ ಸಂಸ್ಕೃತಿಯು ಇತ್ತೀಚೆಗೆ ಮಹಿಳೆಯನ್ನು ಧರ್ಮ, ಜಾತಿ, ವರ್ಗ, ಭಾಷೆ, ಪ್ರದೇಶ ಮತ್ತು ಬಂಡವಾಳ ನೆಲೆಯಲ್ಲಿ ಪ್ರತ್ಯೇಕಿಸುತ್ತಿದೆ. ಆ ಮೂಲಕ ಮಹಿಳೆಯರನ್ನು ರಾಜಕೀಯ ಭಾಗವಹಿಸುವಿಕೆಯಿಂದ ಹೊರಗಿಡುವ, ಅವಳ ಎಲ್ಲಾ ಹಕ್ಕುಗಳನ್ನು ಕಸಿಯುವ ಮನೋಭಾವ ಹೆಚ್ಚುತ್ತಿದೆ. ಇದು ಹೆಣ್ಣು ಸಾರ್ವಜನಿಕ ವಲಯದಲ್ಲಿ ಸ್ವತಂತ್ರವಾಗಿ, ಸಮತೆಯ ನೆಲೆಯಲ್ಲಿ ಭಾಗವಹಿಸುವುದನ್ನು ಸಹಿಸದ ಮತಿವಿಕಲ್ಪ. ಇದರ ಮುಂದುವರಿದ ಭಾಗವಾಗಿಯೇ ಹೆಣ್ಣು ಮಕ್ಕಳು ಮತ್ತು ಮಹಿಳೆಯನ್ನು ರಾಜಕೀಯದಲ್ಲಿ ಬೇಕಾಬಿಟ್ಟಿ ಎಳೆದುತರುವುದು. ಇವನ್ನು ರಾಜಕೀಯ ಅಪಮಾನದ ಟೀಕೆಗಳು ಎಂದು ಕರೆಯಲಾಗುತ್ತದೆ. ಮಹಿಳೆಯನ್ನು ಸಾರ್ವಜನಿಕವಾಗಿ ನಿಂದಿಸುವುದು ಕೇವಲ ಚುನಾವಣಾ ಕಾಲದಲ್ಲಿ ಮಾತ್ರವಲ್ಲ. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಕಾಲದಲ್ಲಿಯೂ ಹೆಣ್ಣನ್ನು ಅಪಮಾನಿಸುವ ಪರಂಪರೆಯಲ್ಲಿ ಕೆಲವನ್ನು ಇಲ್ಲಿ ಪಟ್ಟಿಮಾಡಬಹುದು.

ಮಹಿಳಾ ರಾಜಕೀಯ ನಾಯಕಿಯರ ಮೇಲೆ ಮಾಡಲಾದ ರಾಜಕೀಯ ಅವಮಾನ ಮತ್ತು ಅಪಮಾನಗಳನ್ನು ಮೊದಲಿಗೆ ನೋಡೋಣ. ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಎಸ್‌ಪಿ-ಬಿಎಸ್‌ಪಿ ಮೈತ್ರಿಯ ಬಗ್ಗೆ ಮಾತನಾಡುವಾಗ ಮಾಯಾವತಿ ಅವರನ್ನು, ಮಹಿಳಾಕುಲಕ್ಕೆ ಕಳಂಕ ಎಂದು ಕರೆದಿದ್ದು, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರನ್ನು, ಕರ್ನಾಟಕದ ಸಚಿವರಾದ ಆರ್. ರಾಮಲಿಂಗಾ ರೆಡ್ಡಿ ಅವರು ‘‘ನಿಮ್ಹಾನ್ಸ್‌ಗೆ ಹೋಗಿ ಸೇರಿಕೊಳ್ಳಲಿ’’ ಎಂದು ಹೇಳಿದ್ದು, ಲಕ್ಷೀ ಹೆಬ್ಬಾಳ್ಕರ್ ಅವರನ್ನು ‘ವಿಷಕನ್ಯೆ’ ಎಂದು ರಮೇಶ್ ಜಾರಕಿಹೂಳಿ ಕರೆದಿರುವುದು, ಕಳೆದ ಎಪ್ರಿಲ್‌ನಲ್ಲಿ ತ್ರಿಪುರಾದ ಮುಖ್ಯಮಂತ್ರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ‘‘ಆಸ್ಪತ್ರೆಯಲ್ಲಿ ಮೆದುಳನ್ನು ಪರೀಕ್ಷಿಸಬೇಕು’’ ಎಂದು ಹೇಳಿದ್ದು, ಸೋನಿಯಾ ಗಾಂಧಿ ಅವರನ್ನು ‘ಜರ್ಸಿಹಸು’, ‘ಕಾಂಗ್ರೆಸ್ ಕಿ ವಿಧವಾ’ ಇನ್ನೂ ಮುಂತಾದ ಬುದ್ಧಿಗೇಡಿ ಪದಗಳಿಂದ ಕರೆಯಲಾಗುತ್ತಿದೆ. 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಸುಮಲತಾ ಅವರನ್ನು ಎಚ್.ಡಿ. ರೇವಣ್ಣ, ಎಲ್.ಆರ್. ಶಿವರಾಮೇಗೌಡ ಇನ್ನೂ ಕೆಲವರು ಸಮಾಜ ಒಪ್ಪದ ಭಾಷೆಯಲ್ಲಿ ಕರೆದರು. ಇವು ಮಹಿಳೆಯರನ್ನು ಕುರಿತು ಸಣ್ಣ ಮನಸ್ಸಿನ ದೊಡ್ಡ ರಾಜಕಾರಣಿಗಳಿಂದ ಬಳಕೆಯಾಗುವ ಕೆಲವು ಅನ್‌ಪಾರ್ಲಿಮೆಂಟ್ ಪದಗಳಾಗಿವೆ. ಇವುಗಳಲ್ಲದೆ ಪುರುಷ ರಾಜಕಾರಣಿಗಳು ನಾಗರಿಕ ಸಮಾಜ ಒಪ್ಪದ ಭಾಷೆಯಲ್ಲಿ ಮಹಿಳೆಯರನ್ನು ಕರೆದಿರುವ ಹಲವು ಉದಾಹರಣೆಗಳನ್ನು ನಾವು ನೀಡಬಹುದು. ಇವುಗಳು ಮಹಿಳೆಯರ ಬಗ್ಗೆ ಇರುವ ಪೂರ್ವಾಗ್ರಹ ಪೀಡಿತ ಮಾನಸಿಕ ಅಸ್ವಸ್ಥತೆಯನ್ನು ಸೂಚಿಸುವುದು ಮಾತ್ರವಲ್ಲದೆ, ಜಾತಿ, ಮತ, ನಂಬಿಕೆ, ಪ್ರದೇಶ ಮತ್ತು ಭಾಷೆಯ ನೆಲೆಯಲ್ಲಿ ಮಹಿಳೆಯರನ್ನು ಗುರುತಿಸುವುದು ದೀರ್ಘಕಾಲೀನ ದೋಷಪೂರಿತ ಗ್ರಹಿಕೆಯಾಗಿದೆ. ಭಾವನೆ, ಆಲೋಚನೆ, ಮಾತು, ಕ್ರಿಯೆಗಳು ಮತ್ತು ನಡವಳಿಕೆಗಳ ನಡುವಿನ ಸಂಬಂಧದಲ್ಲಿ ಸಮತೆ, ಸಹೋದರತ್ವ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ಸೂತ್ರಗಳ ಸ್ಥಗಿತತೆಯಾಗಿದೆ. ಭಾರತದ ರಾಜಕಾರಣವು ವಾಸ್ತವ ಸಂಗತಿಗಳಿಗಿಂತ, ಫ್ಯಾಂಟಸಿ ಮತ್ತು ಭ್ರಮೆಯಿಂದ ರೂಪಿತವಾಗುತ್ತಿರುವುದನ್ನು ಸೂಚಿಸುತ್ತದೆ.

ರಾಜಕೀಯ ನೇತಾರರು ಮಂಗಳಸೂತ್ರ, ಕುಂಕುಮ ಸೇರಿದಂತೆ ಇನ್ನೂ ಮುಂತಾದ ಭಾವನಾತ್ಮಕ ನೆಲೆಯಲ್ಲಿನ ಪದಗಳನ್ನು ಬಳಸಿಕೊಂಡು ಕೋಮು ಆಧಾರಿತವಾಗಿ ಮತದಾರರನ್ನು ವಿಭಜಿಸಲು ಹೆಚ್ಚು ಹುಮ್ಮಸ್ಸು ತೋರುತ್ತಿದ್ದಾರೆ. ಹುಬ್ಬಳ್ಳಿಯ ನೇಹಾ ಕೊಲೆಗೆ ಧರ್ಮದ ಬಣ್ಣಕಟ್ಟಿದ್ದಾರೆ. ಈ ಕೊಲೆಯನ್ನು ಕೆಲವು ರಾಜಕೀಯ ನಾಯಕರು ಜಾತಿಯ ಮೂಲಕ ಗುರುತಿಸಿದ್ದಾರೆ. ಮನಃಕಲಕುವ ನೇಹಾ ಕೊಲೆ ಕುರಿತು ನಡೆದ ಪ್ರತಿಭಟನೆಗಳು ಅವಳು ಒಂದು ಹೆಣ್ಣು ಮಗಳು ಎನ್ನುವುದಕ್ಕಿಂತಲೂ ಯಾವ ಧರ್ಮ ಮತ್ತು ಜಾತಿಗೆ ಸೇರಿದವಳು ಎನ್ನುವುದನ್ನು ಎಳೆದುತಂದಿರುವುದು ಪಿತೃಸಂಸ್ಕೃತಿಯ ಮತ ವಿಭಜನೆಯ ರಾಜಕಾರಣವಾಗಿದೆ. ನೇಹಾ ಕೊಲೆಯಲ್ಲಿ ನಮ್ಮ ರಾಜಕೀಯ ನೇತಾರರಿಗೆ ನ್ಯಾಯಕ್ಕಾಗಿ ಹೋರಾಟಕ್ಕಿಂತಲೂ ವೋಟು ಪಡೆಯುವುದೇ ಮುಖ್ಯವಾಗಿದೆ. ಏಕೆಂದರೆ ಮಹಿಳೆಯರ ಬದುಕಿನ ಬಗ್ಗೆ ಇಷ್ಟೊಂದು ಹುಮ್ಮಸ್ಸು ತೋರುತ್ತಿರುವ ರಾಜಕೀಯ ನೇತಾರರು ಮಣಿಪುರದಲ್ಲಿ ಮೇ 2023ರಲ್ಲಿ ಪ್ರಾರಂಭವಾದ ಹಿಂಸಾಚಾರದ ಬಗ್ಗೆಗಾಗಲಿ, ಅಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ಕುರಿತಾಗಲಿ, ಅಲ್ಲಿ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಹಿಂಸಾಚಾರ ಕುರಿತಾಗಲಿ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಆಡಳಿತ ಪಕ್ಷದ ರಾಜಕೀಯ ನಾಯಕರು ನೀಡಲಿಲ್ಲ. ಒಲಿಂಪಿಕ್ಸ್ ಮಹಿಳಾ ಆಟಗಾರರ ಮೇಲೆ ನಡೆದ ಲೈಂಗಿಕ ಹಿಂಸೆ ಮತ್ತು ದೌರ್ಜನ್ಯದ ಬಗ್ಗೆ ಬಾಯಿ ಬಿಡಲಿಲ್ಲ. ಅವರನ್ನು ಪೊಲೀಸರು ನಡೆಸಿಕೊಂಡಿದ್ದು, ಹಾಸನದ ಸಂಸದರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮೌನ ವಹಿಸಿದ ರಾಜಕೀಯ ನೇತಾರರು 2024ರ ಚುನಾವಣಾ ಪ್ರಚಾರದಲ್ಲಿ ತುಂಬಾ ಬ್ಯುಸಿಯಾಗಿದ್ದನ್ನು ನಾವು ಕಂಡೆವು!

ಕರ್ನಾಟಕದಲ್ಲಿ 2024ರ ಫೆಬ್ರವರಿ ಒಂದು ತಿಂಗಳಲ್ಲಿ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 4,742. ಇವುಗಳಲ್ಲಿ ಮತ್ತು 198 ಅತ್ಯಾಚಾರ ಪ್ರಕರಣಗಳು(ಜನವರಿಯಿಂದ ಎಪ್ರಿಲ್ 30, 2024ವರೆಗೆ) ಹಾಗೂ 430ಕ್ಕೂ ಹೆಚ್ಚು ಕೊಲೆ ಪ್ರಕರಣಗಳು ಮಾತ್ರ ದಾಖಲಾಗಿವೆ. ಇದು ಎನ್.ಡಿ.ಪಿ.ಎಸ್. ಕಾಯ್ದೆ ಮತ್ತು ಸೈಬರ್ ಕ್ರೈಮ್ ಮೂಲಕ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆದ ದೌರ್ಜನ್ಯಗಳ ಪ್ರಕರಣಗಳ ಹೊರತಾದ ಸಂಖ್ಯೆಯಾಗಿದೆ. ಇವುಗಳನ್ನು ಸೇರಿಸಿದ್ದರೆ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಸಂಖ್ಯೆ ದುಪ್ಪಟ್ಟಾಗುತ್ತದೆ. ಮಧುಗಿರಿಯ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾದಾಗ, ಇತ್ತೀಚೆಗೆ ಬಂಟ್ವಾಳದಲ್ಲಿ ಯುವತಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದಾಗ, ಮೈಸೂರಿನ ರುಕ್ಸಾನ ಕೊಲೆಯಾದಾಗ, ಕಲಬುರಗಿಯ ದಲಿತ ಕಟ್ಟಡ ಕಾರ್ಮಿಕರ ಹೆಣ್ಣು ಮಕ್ಕಳಾದ ಚಂದಮ್ಮ ಮತ್ತು ಶರಣಮ್ಮ ಅವರ ಬರ್ಬರ ಕೂಲೆಯಾದಾಗ ಮತ್ತು ಕೊಪ್ಪಳದ ಕಿನ್ನಾಳ ಗ್ರಾಮದ 7 ವರ್ಷದ ಹೆಣ್ಣು ಮಗುವಿನ ಕೊಲೆಯಾದಾಗ, ಅತ್ಯಂತ ದುಸ್ಥಿತಿಯಲ್ಲಿ ಇರುವ ಅಸಹಾಯಕ ಬಡ ಕುಟುಂಬಗಳಿಗೆ ಸೇರಿದ ಹಲವು ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲೆ ನಡೆದ ಹಿಂಸೆ ಮತ್ತು ದೌರ್ಜನ್ಯಗಳು ದಾಖಲಾಗದಂತೆ ಮುಚ್ಚಿ ಹಾಕಲಾಗಿದೆ. ಈ ಕುರಿತು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದಲ್ಲಿ ಇರುವ ಸಣ್ಣ ಮನಸ್ಸಿನ ದೊಡ್ಡ ರಾಜಕಾರಣಿಗಳು ಗಂಭೀರವಾದ ಚರ್ಚೆಗಳನ್ನು ಮಾಡಲಿಲ್ಲ. ರಾಜಕೀಯ ನೇತಾರರು ಅವರವರ ಕ್ಷೇತ್ರ ವ್ಯಾಪ್ತಿಯಲ್ಲಿ ಅವರ ಹಿಂಬಾಲಕರಿಂದ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲೆ ನಡೆದ ಹಿಂಸೆ ಮತ್ತು ದೌರ್ಜನ್ಯಗಳ ಅಪರಾಧಗಳನ್ನು ಮರೆಮಾಚಲು ಮತ್ತು ಮುಚ್ಚಿಹಾಕಲು ಪೊಲೀಸ್ ಠಾಣೆಗಳು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಪ್ರಭಾವ ಬೀರುವಲ್ಲಿ ಹಿಂದೆ ಬೀಳಲಿಲ್ಲ. ಅಲ್ಲದೆ ತಮಗೆ ಬೇಕಾದ ವ್ಯಕ್ತಿಗಳು ಮಾಡಿದ ಅಪರಾಧಗಳ ಎಫ್‌ಐಆರ್ ಆಗದಂತೆ, ತಮ್ಮ ರಾಜಕೀಯ ವಿರೋಧಿಗಳ ಮೇಲೆ ಎಫ್‌ಐಆರ್ ಹಾಕಿಸುವಲ್ಲಿ ಹಿಂದೆ ಮುಂದೆ ನೋಡುತ್ತಿಲ್ಲ. ಈ ದೃಷ್ಟಿಯಲ್ಲಿ ಎಲ್ಲಾ ಪಕ್ಷಗಳ ರಾಜಕೀಯ ನೇತಾರರದ್ದು ಸತ್ಯವನ್ನು ಸುಳ್ಳಾಗಿಸುವ, ಸುಳ್ಳನ್ನು ಸತ್ಯವಾಗಿಸುವ ಪ್ರಕ್ರಿಯೆಯಲ್ಲಿ ಒಂದೇ ನಾಣ್ಯದ ಎರಡು ಮುಖಗಳು.

ಕರ್ನಾಟಕದ ಹಲವು ಸ್ವಾಮೀಜಿಗಳು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯಗಳು ಮತ್ತು ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಕೊಲೆ ಬಗ್ಗೆ ಆ ಸಮಯದಲ್ಲಿ ರಾಜ್ಯದ ಮತ್ತು ರಾಷ್ಟ್ರದ ಯಾವುದೇ ರಾಜಕಾರಣಿಗಳು ಬಾಯಿ ಬಿಚ್ಚಲಿಲ್ಲ. ಪ್ರಕರಣಗಳಲ್ಲಿ ಆಯಾ ಕಾಲದಲ್ಲಿ ಆಡಳಿತದಲ್ಲಿದ್ದ ಪಕ್ಷ ಮತ್ತು ಪ್ರತಿಪಕ್ಷದ ರಾಜಕೀಯ ನೇತಾರರು ಮೌನವಹಿಸಿದ್ದರು. ಮುರಾಘಾಮಠದ ಪ್ರಕರಣದಲ್ಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಬಾರದು ಎಂದು ಹೋರಾಟ ಮಾಡಿದ ಕೆಲವು ಸರಕಾರೇತರ ಸಂಘಟನೆಯ ಮುಂದಾಳುಗಳು ಮತ್ತು ಹೋರಾಟಗಾರರು ಮೌನಕ್ಕೆ ಶರಣಾದರು.

ಹಾಸನದ ಸಂಸದರೆನ್ನಲಾದ ಲೈಂಗಿಕ ಹಗರಣ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಆದರೆ ಕೆಲವೇ ಸಮಯದಲ್ಲಿ ಈ ಪ್ರಕರಣವೂ ಜನ ಮಾನಸದಿಂದ ಮರೆಯಾಗುವುದರಲ್ಲಿ ಅನುಮಾನವಿಲ್ಲ. ಬಿಲ್ಕಿಸ್ ಬಾನು ಪ್ರಕರಣದಲ್ಲಿ ಭಾಗಿಯಾದ ಅಪರಾಧಿಗಳು ಖುಲಾಸೆಯಾದಂತೆ ಆಗಬಹುದು. ಇದೇ ಸತ್ಯವನ್ನು ಸುಳ್ಳಾಗಿಸುವ ಸುಳ್ಳನ್ನು ಸತ್ಯವಾಗಿರುವ ಸಂಸ್ಕೃತಿ. ಇದೇ ಭ್ರಮೆ ಮತ್ತು ಅವಾಸ್ತವಿಕತೆಯಿಂದ ಸಮಾಜದ ದೈನಂದಿನ ಕಾರ್ಯ ಚಟುವಟಿಕೆಯನ್ನು ದುರ್ಬಲಗೊಳಿಸಿ ಸಮಾಜದ ಸ್ವಾಸ್ಥ್ಯವನ್ನು ಅಸ್ತವ್ಯಸ್ತವಾಗಿಸುವ ಆಲೋಚನೆ. ‘ಬೇಟಿ ಬಚಾವೋ ಬೇಟಿ ಪಡಾವೋ’ ನಾರಿ ಶಕ್ತಿ, ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳು, ಶಕ್ತಿ ಮತ್ತು ಗೃಹ ಲಕ್ಷ್ಮಿ, ಇತ್ಯಾದಿ ಯೋಜನೆಗಳ ಭರವಸೆಯ ಹೊರತಾಗಿಯೂ ಸುಮಾರು ಶೇ. 5ರಷ್ಟು ಹೆಣ್ಣು ಮಕ್ಕಳು ಜನಿಸುವ ಮೊದಲೇ ಬಲಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. 21ನೇ ಶತಮಾನದ ಮೊದಲ ಎರಡೂವರೆ ದಶಕಗಳಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಅನುಭವಿಸುತ್ತಿರುವ ದೌರ್ಜನ್ಯ ಮತು ಹಿಂಸೆಗಳು ವಿಪರೀತವಾಗಿವೆ.

ಅಸಹಾಯಕ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ದೌರ್ಜನ್ಯಕ್ಕೆ ಒಳಗಾದಾಗ ಯಾವುದೇ ಪ್ರತಿಕ್ರಿಯೆ ನೀಡದ, ಶಾಸಕಾಂಗ ಸಭೆಗಳಲ್ಲಿ ರಚನಾತ್ಮಕವಾದ ಚರ್ಚೆಗಳನ್ನು ಮಾಡದ ರಾಜಕೀಯ ನೇತಾರರು 2024ರ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರುತ್ತಿರುವುದು ಮಾನಸಿಕ ಅಸ್ವಸ್ಥತೆಯಲ್ಲದೆ ಮತ್ತೇನಲ್ಲ.

ಚುನಾವಣೆ ಗೆಲ್ಲಲು, ಅಧಿಕಾರ ಪಡೆಯಲು ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುವ ಹಿಂಸೆ ಮತ್ತು ದೌರ್ಜನ್ಯಗಳನ್ನು ಧರ್ಮ ಮತ್ತು ಜಾತಿ ಬಣ್ಣ ಲೇಪಿಸುವುದು ಮತಿವಿಕಲ್ಪ. ತಮ್ಮ ತಾಯಿಯನ್ನು ಗೌರವಿಸುವ, ಅವರ ಹುಟ್ಟು ಹಬ್ಬವನ್ನು ವೈಭವದಿಂದ ಆಚರಿಸುವುದನ್ನು ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ನಾಯಕರುಗಳನ್ನು ಭವ್ಯ ಭಾರತದಲ್ಲಿ ಕಾಣುತ್ತಿದ್ದೇವೆ. ತಾಯಿಯನ್ನು ಗೌರವಿಸುವ ನಮ್ಮ ರಾಜಕೀಯ ನಾಯಕರು ಮಹಿಳಾ ಸಮುದಾಯವನ್ನು ಧರ್ಮ, ಜಾತಿ ಮತ್ತು ಕೋಮು ನೆಲೆಯಲ್ಲಿ ವಿಂಗಡಿಸಿ ನೋಡುವುದು ರಾಜಕೀಯ ನೇತಾರರ ಕೆಟ್ಟ ಮನಸ್ಥಿತಿಯನ್ನು ಸೂಚಿಸುತ್ತದೆ. ರಾಜಕೀಯ ನೇತಾರರಲ್ಲಿ ಹೇಗಾದರೂ ಮಾಡಿ ಅಧಿಕಾರವನ್ನು ಉಳಿಸಿಕೊಳ್ಳಬೇಕು, ಪಡೆಯಬೇಕು ಎನ್ನುವ ಮಾನಸಿಕ ಅಸ್ವಸ್ಥತೆ ಹೆಚ್ಚಿದೆ. ವಾಸ್ತವದ ಗ್ರಹಿಕೆ, ವಸ್ತುನಿಷ್ಠ ಆಲೋಚನೆ ಮತ್ತು ಸಾಮಾಜಿಕ ಸಂವಹನಗಳಿಗಿಂತಲೂ ಭಾವನಾತ್ಮಕ ಪ್ರತಿಕ್ರಿಯೆಗಳು ಭಾರತದ ರಾಜಕೀಯದಲ್ಲಿ ಹೆಚ್ಚು ಸಾಮರ್ಥ್ಯ ಪಡೆದುಕೊಂಡಿದೆ. ಸಂವಹನ ಮಾಡಲು ಬೇಕಾದ ತಾಳ್ಮೆ ಮತ್ತು ಸಾಮರ್ಥ್ಯ ಕಳೆದುಹೋಗಿದೆ. ವಾಸ್ತವವೇ ಭ್ರಮೆಯಾಗುವ, ಭ್ರಮೆಯೇ ವಾಸ್ತವವಾಗುವ ಮತಿವಿಕಲ್ಪ ರಾಜಕೀಯ ನೇತಾರರಲ್ಲಿ ಹೆಚ್ಚುತ್ತಿದೆ. ಈ ಕುರಿತು ಮಾಧ್ಯಮಗಳು ವಸ್ತುನಿಷ್ಠ ವರದಿಗೆ ಮತ್ತು ಚರ್ಚೆಗೆ ಗಮನ ನೀಡದಿರುವುದು ಅತ್ಯಂತ ಅಪಾಯಕಾರಿ ಸ್ಥಿತಿ ಮಾತ್ರವಲ್ಲದೆ, ಭಾರತದ ರಾಜಕೀಯದ ಬಗ್ಗೆ ಮಾಧ್ಯಮಗಳ ಸ್ಕಿಜೋಫ್ರೇನಿಯಾವನ್ನು ಸೂಚಿಸುತ್ತದೆ. ಇದಕ್ಕೆ ಬಹು ಮುಖ್ಯವಾದ ಕಾರಣ ‘‘ನಾನು ಯಾವ ಧರ್ಮಕ್ಕೂ ಸೇರಿಲ್ಲ. ನನ್ನ ಧರ್ಮವೇ ಪ್ರೀತಿ, ಪ್ರತಿಯೊಂದು ಹೃದಯವೂ ನನ್ನ ದೇವಾಲಯ’’ ಎನ್ನುವ ಬುದ್ಧ ಗುರುವಿನ ಮಾತಿನ ನಿರಂತರ ಸವಕಳಿ. ಇದನ್ನು ತಡೆಯಬೇಕಿದೆ. ಸರಿ ತಪ್ಪುಗಳನ್ನು ಆಳವಾಗಿ ಎಲ್ಲಾ ಮೂಲೆಗಳಿಂದ ಯೋಚಿಸಿ ಚರ್ಚೆ ಮಾಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಎಚ್.ಡಿ. ಪ್ರಶಾಂತ್

contributor

Similar News