ಪ್ರಬಲ ಸಮುದಾಯದವರು ಮಾತೃ ವಾತ್ಸಲ್ಯ ಪ್ರದರ್ಶಿಸುವುದಕ್ಕೆ ಇದು ಸಕಾಲ

ಸಮೀಕ್ಷೆ ನಡೆಸಿದ ಉದ್ದೇಶವೇ ಸಮಾಜದಲ್ಲಿರುವ ಎಲ್ಲ ವರ್ಗಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿ ಹೇಗಿದೆ ಎಂಬುದನ್ನು ಅರಿತು ಅವರ ಸ್ಥಿತಿ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಹಾಗೂ ಹಕ್ಕುಗಳನ್ನು ಕಲ್ಪಿಸುವುದಕ್ಕೆ ಎಂಬುದು ವಿರೋಧ ವ್ಯಕ್ತಪಡಿಸುತ್ತಿರುವ ಮಠಾಧೀಶರು ಹಾಗೂ ರಾಜಕೀಯ ನಾಯಕರಿಗೆ ಅರ್ಥವಾದಂತೆ ತೋರುತ್ತಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯನವರ ಮೇಲೆ ವರದಿ ಸ್ವೀಕರಿಸದಂತೆ ಒತ್ತಡ ಹೇರಲಾಗುತ್ತಿದೆ. ಆದರೆ ವರದಿ ಸ್ವೀಕಾರ ಮಾಡುವುದರಿಂದ ಸಮಾಜದ ಎಲ್ಲ ವರ್ಗದವರಿಗೆ ಅನುಕೂಲವಾಗುತ್ತದೆ.

Update: 2024-01-11 04:48 GMT

ರಾಜ್ಯದಲ್ಲಿ ಆಗಷ್ಟೇ ಹಿಂದುಳಿದ ವರ್ಗದವರಲ್ಲಿ ತಮ್ಮ ರಾಜಕೀಯ ಹಕ್ಕುಗಳ ಬಗ್ಗೆ ಪ್ರಜ್ಞೆ ಮೂಡುತ್ತಿದ್ದ ಕಾಲ. ವಿಧಾನಸೌಧದಂಥ ಆಡಳಿತ ಕೇಂದ್ರದಲ್ಲಿ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಸಮುದಾಯದ ಹಲವು ಶಾಸಕರು ಇದ್ದರೂ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ ರಾಜಕೀಯ ಮೀಸಲು ಪಡೆಯಬಹುದೆಂಬ ಭಾವನೆಗೆ ಆಗಷ್ಟೇ ಚಿಗುರೊಡೆಯುತ್ತಿದ್ದ ಸಮಯ. ಆ ಸಮಯದಲ್ಲಿ ಜಿಲ್ಲಾ-ತಾಲೂಕು ಪಂಚಾಯತ್, ನಗರ ಪಾಲಿಕೆ, ನಗರ ಸಭೆ, ಪುರಸಭೆ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ಜಾರಿ ಮಾಡಬೇಕೆಂಬ ಒತ್ತಡ ಶೋಷಿತ ಹಾಗೂ ಹಿಂದುಳಿದ ವರ್ಗದಿಂದ ಪ್ರಬಲವಾಗಿ ಪ್ರತಿಪಾದನೆಯಾಗುತ್ತಿತ್ತು. ಸಹಜವಾಗಿಯೇ ಸಮಾಜದ ಪ್ರಬಲ ಜಾತಿಗಳಿಂದ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಕೆಲವು ಶಾಸಕರು ಮಂತ್ರಿಗಳಿಂದ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ನೀಡುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಆ ರೀತಿ ವಿರೋಧ ವ್ಯಕ್ತಪಡಿಸಿದವರಲ್ಲಿ ಕೆಲವರಂತೂ ವೇದಿಕೆಗಳಲ್ಲಿ ‘ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ’ ಎಂದು ಸಾರ್ವಜನಿಕ ವೇದಿಕೆಗಳಲ್ಲಿ ಬಸವಣ್ಣನವರ ವಚನವನ್ನು ಪುಂಖಾನುಪುಂಖವಾಗಿ ಪಠಿಸುವವರಾಗಿದ್ದರು. ಭಾಷಣದಲ್ಲಿ ಸಮಾನತೆಯ ಪ್ರತಿಪಾದನೆ, ಆದರೆ ಸಚಿವ ಸಂಪುಟ ಸಭೆಯಲ್ಲಿ ಮಾತ್ರ ಹಿಂದುಳಿದವರು ಹಾಗೂ ಶೋಷಿತ ಸಮುದಾಯದವರಿಗೆ ಮೀಸಲು ನೀಡುವುದಕ್ಕೆ ವಿರೋಧ! ಆ ರೀತಿ ವಿರೋಧ ವ್ಯಕ್ತಪಡಿಸಿದವರ ಪೈಕಿ ಯಾರೊಬ್ಬರೂ ಈಗ ನಮ್ಮೊಂದಿಗೆ ಇಲ್ಲವಾದ್ದರಿಂದ ಅವರ ಹೆಸರನ್ನು ಉಲ್ಲೇಖಿಸುವುದು ಅಸಮಂಜಸ ಎಂದು ನಾನು ಭಾವಿಸಿದ್ದೇನೆ. ಅಂದಹಾಗೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯ ಸ್ಥಾನಕ್ಕೆ ಮೀಸಲು ಕಲ್ಪಿಸುವ ಉದ್ದೇಶದಿಂದ ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡರು ಸಿದ್ದರಾಮಯ್ಯ ನೇತೃತ್ವದಲ್ಲಿ ಒಂದು ಸಂಪುಟ ಉಪಸಮಿತಿಯನ್ನು ರಚನೆ ಮಾಡಿದ್ದರು. ಆ ಸಮಿತಿ ಮೀಸಲಾತಿಗೆ ಶಿಫಾರಸು ಮಾಡಿದಾಗ ಮೇಲು ವರ್ಗದಿಂದ ಈ ವಿರೋಧ ವ್ಯಕ್ತವಾಯಿತು. ಅತ್ಯಂತ ಸಜ್ಜನ ರಾಜಕಾರಣಿ ಎಂದೇ ಪರಿಗಣಿಸಲ್ಪಟ್ಟಿದ್ದ ದಿ.ಎಂ.ಪಿ. ಪ್ರಕಾಶ್‌ರಂಥವರೇ ಈ ವಿರೋಧವನ್ನು ಎದುರಿಸಲಾರದೇ ಕೈ ಚೆಲ್ಲಿದ್ದರು. ದೇವೇಗೌಡರು ಸಿದ್ದರಾಮಯ್ಯನವರನ್ನು ಕರೆಸಿ ‘‘ಒಂದು ಸಮುದಾಯದ ಶಾಸಕರು ಹಾಗೂ ಮಂತ್ರಿಗಳು ಈ ಪ್ರಸ್ತಾಪಕ್ಕೆ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸಂಪುಟ ಉಪಸಮಿತಿಯ ವರದಿ ಒಪ್ಪಿಕೊಳ್ಳುವುದು ಕಷ್ಟವಾಗಬಹುದು’’ ಎಂದು ಓಲೈಸುವ ಪ್ರಯತ್ನ ಮಾಡಿದ್ದರು. ಆ ಸಮಯದಲ್ಲೂ ಸಿದ್ದರಾಮಯ್ಯರವರು ಹಠ ಬಿಡಲಿಲ್ಲ. ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದರು. ಆ ಸಮಯದಲ್ಲಿ ಸಿದ್ದರಾಮಯ್ಯನವರಿಗೆ ಶಕ್ತಿಯಾಗಿ ನಿಂತವರು ಮಾಜಿ ಸಿಎಂ ದಿ.ಜೆ.ಎಚ್. ಪಟೇಲ್.

ಹಿಂದುಳಿದವರಿಗೆ ಮೀಸಲಾತಿಯನ್ನು ವಿರೋಧಿಸುತ್ತಿದ್ದ ಸಚಿವರನ್ನು ಸಂಪುಟ ಸಭೆಯಲ್ಲಿ ಸರಿಯಾಗಿ ತರಾಟೆಗೆ ತೆಗೆದುಕೊಂಡ ಪಟೇಲರು ‘‘ನಾವು ಸಮಾಜದ ಮೇಲುವರ್ಗದವರು. ನಾವು ಇತರ ಎಲ್ಲಾ ಜಾತಿಯವರ ಬಗ್ಗೆ ಸದಾ ಮಾತೃ ವಾತ್ಸಲ್ಯದಿಂದಿರಬೇಕು. ಅದನ್ನು ಬಿಟ್ಟು ಮೀಸಲು ವಿರೋಧಿಸುವುದು ಸರಿಯಲ್ಲ. ಭಾಷಣದಲ್ಲಿ ಬಸವಣ್ಣನ ವಚನ ಹೇಳಿ ಕೃತಿಯಲ್ಲಿ ಅನ್ಯ ಸಮುದಾಯವನ್ನು ಅಧಿಕಾರದಿಂದ ತುಳಿಯುವುದು ಸರಿಯಲ್ಲ’’ ಎಂದು ಕ್ಲಾಸ್ ತೆಗೆದುಕೊಂಡರು. ಇದರ ಪರಿಣಾಮವಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗದವರಿಗೆ ರಾಜಕೀಯ ಮೀಸಲಾತಿ ನೀಡುವ ಸಿದ್ದರಾಮಯ್ಯನವರ ವರದಿಯನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿ ಪರಿಣಮಿಸಿತ್ತು. ಅದರ ಫಲವನ್ನು ಅಹಿಂದ ವರ್ಗದವರು ಈಗ ಅನುಭವಿಸುತ್ತಿದ್ದಾರೆ.

ಈಗಲೂ ಸಮಾಜದ ಮೇಲುವರ್ಗದಲ್ಲಿ ಗುರುತಿಸಿಕೊಂಡವರು ಸಮಸಮಾಜ ಸೃಷ್ಟಿಯ ದೃಷ್ಟಿಯಿಂದ ಇನ್ನೊಂದು ಅಂಥದ್ದೇ ಪ್ರಸ್ತಾಪಕ್ಕೆ ಒಪ್ಪಿಕೊಳ್ಳುವ ಔದಾರ್ಯವನ್ನು ಪ್ರದರ್ಶಿಸುವುದಕ್ಕೆ ಈಗ ಕಾಲ ಪಕ್ವವಾಗಿದೆ. ಅದು ರಾಜ್ಯ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ ಬಗ್ಗೆ.

ಹೌದು. ಸಿದ್ದರಾಮಯ್ಯನವರು ಮೊದಲನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ನೇತೃತ್ವದಲ್ಲಿ ಈ ಸಮೀಕ್ಷೆ ನಡೆಸುವುದಕ್ಕೆ ಆದೇಶ ನೀಡಿದ್ದರು. ಸುಮಾರು 160 ಕೋಟಿ ರೂ. ವೆಚ್ಚದಲ್ಲಿ ಈ ಸಮೀಕ್ಷೆಯನ್ನು ನಡೆಸಿದ ಆಯೋಗ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸುವ ಸಂದರ್ಭದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂತು. ಸಮೀಕ್ಷೆ ನಡೆಸುವಾಗಲೇ ವಿರೋಧ ವ್ಯಕ್ತಪಡಿಸಿದ್ದ ಕುಮಾರಸ್ವಾಮಿಯವರು ಸಹಜವಾಗಿಯೇ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವರದಿಯನ್ನು ಜಾರಿ ಮಾಡುವುದಕ್ಕೆ ಮನಸ್ಸು ಬಿಚ್ಚಲಿಲ್ಲ. ಆ ಬಳಿಕ ಬಂದ ಬಿಜೆಪಿ ಸರಕಾರವೂ ಇದೇ ಹಾದಿಯಲ್ಲಿ ಮುಂದುವರಿಯಿತು. ಆದರೆ ಚುನಾವಣೆಗೂ ಮುನ್ನ ಸಿದ್ದರಾಮಯ್ಯನವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಂತರಾಜ್ ಆಯೋಗದ ವರದಿ ಜಾರಿಗೊಳಿಸುವುದಾಗಿ ಅಹಿಂದ ಸಮುದಾಯಕ್ಕೆ ವಚನ ನೀಡಿದ್ದರು.

ಈಗ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಬಂದು ಏಳು ತಿಂಗಳಾಗಿದೆ. ಹೀಗಾಗಿ ಸಹಜವಾಗಿಯೇ ಶೋಷಿತ ಸಮುದಾಯ ಹಿಂದೆ ನೀಡಿದ ವಚನದ ಬಗ್ಗೆ ಕಾತುರವಾಗಿದೆ. ವರದಿ ಜಾರಿಗಾಗಿ ಹಿಂದುಳಿದ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಠಾಧೀಶರು ಹಾಗೂ ರಾಜಕೀಯ ನಾಯಕರು ಒತ್ತಾಯಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡಾ ಈ ಬಗ್ಗೆ ಒಲವು ಹೊಂದಿರುವಾಗಲೇ ಸಮಾಜದ ಎರಡು ಪ್ರಬಲ ವರ್ಗದಿಂದ ವಿರೋಧ ವ್ಯಕ್ತವಾಗಿರುವುದು ಈಗ ತೊಡಕಾಗಿ ಪರಿಣಮಿಸಿದೆ.

ಅಷ್ಟಕ್ಕೂ ಈ ವರದಿಯ ಜಾರಿಯ ಬಗ್ಗೆ ಕೆಲವರಿಗೆ ಮಿಥ್ಯ ಕಲ್ಪನೆಗಳು ಇದ್ದಂತೆ ತೋರುತ್ತಿದೆ. ಇನ್ನು ಕೆಲವರಂತೂ ಇದರಲ್ಲಿ ಸೇಡಿನ ಕ್ರಮವನ್ನು ಹುಡುಕುವ ಪ್ರಯತ್ನ ನಡೆಸಿದ್ದಾರೆ. ಈ ವರದಿಗೆ ಜಾತಿ ಗಣತಿ ಎಂಬ ಲೇಬಲ್ ಅಂಟಿಸಿ ತಮ್ಮ ಸಮುದಾಯವನ್ನು ತುಳಿಯುವ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಭಾವನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ಈ ವರದಿ ಜಾರಿಯಾದರೆ ತಮ್ಮ ಸಮುದಾಯದ ರಾಜಕೀಯ ಪ್ರಾಬಲ್ಯಕ್ಕೆ ಧಕ್ಕೆ ತರಲಾಗುತ್ತದೆ. ಹಕ್ಕುಗಳು ಕಸಿದುಕೊಳ್ಳಲ್ಪಡುತ್ತದೆ. ಸಮಾಜದ ಸಂಖ್ಯಾ ಬಾಹುಳ್ಯವನ್ನು ಗಣನೀಯವಾಗಿ ಕಡಿಮೆ ಮಾಡಿ ಜನಸಂಖ್ಯೆಗೆ ಅನುಗುಣವಾಗಿ ಸಿಗಬೇಕಾದ ಹಕ್ಕುಗಳನ್ನು ತಪ್ಪಿಸುವ ಕುತಂತ್ರ ಇದರಲ್ಲಿ ಅಡಕವಾಗಿದೆ ಎಂಬಿತ್ಯಾದಿ ತಪ್ಪು ಮಾಹಿತಿಯನ್ನು ಹರಡಿಸಲಾಗುತ್ತಿದೆ.

ಆದರೆ ಇವೆಲ್ಲವೂ ಸಂಪೂರ್ಣ ಸುಳ್ಳು. ಅಷ್ಟಕ್ಕೂ ಸಮೀಕ್ಷೆ ನಡೆಸಿದ ಉದ್ದೇಶವೇ ಸಮಾಜದಲ್ಲಿರುವ ಎಲ್ಲ ವರ್ಗಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿ ಹೇಗಿದೆ ಎಂಬುದನ್ನು ಅರಿತು ಅವರ ಸ್ಥಿತಿ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಹಾಗೂ ಹಕ್ಕುಗಳನ್ನು ಕಲ್ಪಿಸುವುದಕ್ಕೆ ಎಂಬುದು ವಿರೋಧ ವ್ಯಕ್ತಪಡಿಸುತ್ತಿರುವ ಮಠಾಧೀಶರು ಹಾಗೂ ರಾಜಕೀಯ ನಾಯಕರಿಗೆ ಅರ್ಥವಾದಂತೆ ತೋರುತ್ತಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯನವರ ಮೇಲೆ ವರದಿ ಸ್ವೀಕರಿಸದಂತೆ ಒತ್ತಡ ಹೇರಲಾಗುತ್ತಿದೆ. ಆದರೆ ವರದಿ ಸ್ವೀಕಾರ ಮಾಡುವುದರಿಂದ ಸಮಾಜದ ಎಲ್ಲ ವರ್ಗದವರಿಗೆ ಅನುಕೂಲವಾಗುತ್ತದೆ. ವರ್ಷದ ಹಿಂದೆ ಹಿಂದುಳಿದ ವರ್ಗದವರಿಗೆ ಬೆಂಗಳೂರು ಮಹಾನಗರ ಪಾಲಿಕೆಯ ಮೀಸಲು ನಿಗದಿ ಪಡಿಸುವುದಕ್ಕೆ ಯಾವ ಮಾನದಂಡವನ್ನು ಅನುಸರಿಸುತ್ತೀರಿ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದಾಗ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡುವುದಕ್ಕೆ ರಾಜ್ಯ ಸರಕಾರದ ಮುಂದೆ ಯಾವುದೇ ದತ್ತಾಂಶಗಳು ಇರಲಿಲ್ಲ. ಈ ಸಮೀಕ್ಷೆಯ ವರದಿಯನ್ನು ಸರಕಾರ ಸ್ವೀಕರಿಸದೆ ಇದ್ದುದರಿಂದ ಲಭ್ಯ ದತ್ತಾಂಶವನ್ನು ಸಾದರ ಪಡಿಸುವುದಕ್ಕೆ ಸಾಧ್ಯವಾಗಿರಲಿಲ್ಲ.

ಹೀಗಾಗಿ ಸಿದ್ದರಾಮಯ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಈ ವರದಿ ಎಲ್ಲ ದೃಷ್ಟಿಯಿಂದ ಸಾಮಾಜಿಕ ಸ್ವಾಸ್ಥ್ಯಕ್ಕೆ ಅನುಕೂಲವಾಗಿದೆಯೇ ಹೊರತು ಮಾರಕವಲ್ಲ. ಈ ವರದಿ ಜಾರಿಯ ವಿಚಾರದಲ್ಲೂ ಸಮಾಜದ ಮೇಲು ವರ್ಗದವರು ಮತ್ತೆ ಮಾತೃವಾತ್ಸಲ್ಯ ಪ್ರದರ್ಶಿಸುವ ಕಾಲ ಬಂದಿದೆ. ಎಲ್ಲರೂ ಒಂದೇ ಎಂಬ ಉದಾರತೆಯ ಪ್ರದರ್ಶನಕ್ಕೆ ಇದು ಸಕಾಲವಾಗಿದೆ. ಈ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸಂದರ್ಭಾನುಸಾರವಾಗಿ ಬಣ್ಣ ಬದಲಾಯಿಸುವುದನ್ನು ಮೊದಲು ನಿಲ್ಲಿಸಬೇಕಿದ್ದು, ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಬೇಡಿಕೆಯನ್ನು ಕಾನೂನು ಬಾಹಿರ ಎಂಬಂತೆ ಬಿಂಬಿಸುವುದನ್ನು ನಿಲ್ಲಿಸಬೇಕಿದೆ.

ಈ ಹಿಂದೆ ಹಾವನೂರು ಮತ್ತು ಮಂಡಲ್ ವರದಿಗಳ ಜಾರಿ ಸಂದರ್ಭದಲ್ಲಿ ರಾಜಕೀಯ ಪಟ್ಟಭದ್ರ ಶಕ್ತಿಗಳು ಹಾಗೂ ಸಾಮಾಜಿಕ ನ್ಯಾಯದ ವಿರೋಧಿಗಳು ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾಗಿಯೂ ಆಗಿನ ಮುಖ್ಯಮಂತ್ರಿಗಳಾಗಿದ್ದ ದಿ.ದೇವರಾಜ ಅರಸುರವರು ಮತ್ತು ಮಾಜಿ ಪ್ರಧಾನಿ ದಿ.ವಿ.ಪಿ. ಸಿಂಗ್‌ರವರು ತಮ್ಮ ರಾಜಕೀಯ ಇಚ್ಛಾಸಕ್ತಿಯಿಂದಾಗಿ ಆ ವರದಿಗಳನ್ನು ಜಾರಿಗೊಳಿಸಿದ್ದು, ಇದರಿಂದ ಅಹಿಂದ ವರ್ಗಗಳ ಕೋಟ್ಯಂತರ ಯುವಕರು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಸೌಲಭ್ಯ ಪಡೆದು ಉನ್ನತ ಹುದ್ದೆಗಳಲ್ಲಿರುವುದು ನಮ್ಮೆಲ್ಲರ ಕಣ್ಣಮುಂದಿದೆ.

ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆಯವರ ಆಯೋಗದ ವರದಿಯನ್ನು ತಕ್ಷಣವೇ ಸ್ವೀಕಾರ ಮಾಡಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಿ.ಎಸ್. ಶಿವಣ್ಣ

ಅಧ್ಯಕ್ಷರು, ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆ

Similar News