ಕೊರೋನ ಲಸಿಕೆ ಹಾಕಿಸಿದವರು, ಹಾಕಿದವರು ಈಗೇನು ಮಾಡಬೇಕು?

ವೈದ್ಯವಿಜ್ಞಾನವೂ, ವೈದ್ಯ ವೃತ್ತಿಯೂ ಜನರ ವಿಶ್ವಾಸವನ್ನು ಮರಳಿ ಗಳಿಸಿ ಉಳಿಸಿಕೊಳ್ಳಬೇಕಿದ್ದರೆ ಕೊರೋನ ಕಾಲದ ತಪ್ಪುಗಳನ್ನು ಒಪ್ಪಿಕೊಂಡು, ಲಸಿಕೆಯ ಬಗ್ಗೆ ವೈಜ್ಞಾನಿಕವಾದ, ಸಾಕ್ಷ್ಯಾಧಾರಿತವಾದ ಮಾಹಿತಿಯನ್ನು ಪ್ರಾಮಾಣಿಕವಾಗಿ ಜನರ ಮುಂದಿಡಬೇಕಾಗಿದೆ. ವೈದ್ಯರ ಬದ್ಧತೆಯು ವೈದ್ಯಕೀಯ ವಿಜ್ಞಾನಕ್ಕೆ, ಜನರ ಹಿತಕ್ಕೆ ಮತ್ತು ಸತ್ಯಕ್ಕೆ ಇರಬೇಕೇ ಹೊರತು ಯಾವುದೇ ಸರಕಾರಕ್ಕೆ, ರಾಜಕೀಯ ಪಕ್ಷ ಅಥವಾ ನಾಯಕನಿಗೆ, ಔಷಧ ಯಾ ಲಸಿಕೆ ಕಂಪೆನಿಗೆ ಅಲ್ಲ ಎನ್ನುವುದನ್ನು ಎಲ್ಲ ವೈದ್ಯರೂ ತಿಳಿಯಬೇಕಾಗಿದೆ. ಕೊರೋನ ಸೋಂಕು ಹಾಗೂ ಕೊರೋನ ಲಸಿಕೆ ಕಲಿಸಬೇಕಾದ ಪಾಠ ಅದುವೇ ಆಗಿದೆ.

Update: 2024-05-29 05:40 GMT

PC: PTI

ಅಗತ್ಯವಿಲ್ಲದೆ, ಅಡ್ಡ ಪರಿಣಾಮಗಳ ಬಗ್ಗೆ ಮಾಹಿತಿ ನೀಡದೆ 95 ಕೋಟಿ ಜನರಿಗೆ ಲಸಿಕೆ ಚುಚ್ಚಿಸಿ ಈಗ ಅವುಗಳ ಗಂಭೀರ ಅಡ್ಡ ಪರಿಣಾಮಗಳ ಬಗ್ಗೆ ಕಂಪೆನಿಗಳಿಂದಲೂ, ಇತರ ಅಧ್ಯಯನಗಳಿಂದಲೂ ಪ್ರತಿನಿತ್ಯವೆಂಬಂತೆ ವರದಿಗಳು ಹೊರಬರುತ್ತಿರುವಾಗ, ಜೊತೆಗೆ ಪ್ರತಿನಿತ್ಯವೆಂಬಂತೆ ಎಲ್ಲೆಡೆಗಳಿಂದ ಹಠಾತ್ ಹೃದಯ ಸ್ತಂಭನ, ಹೃದಯಾಘಾತ ಹಾಗೂ ಮೆದುಳಿನ ಆಘಾತಗಳ ಪ್ರಕರಣಗಳು ವರದಿಯಾಗುತ್ತಿರುವಾಗ ಸಹಜವಾಗಿಯೇ ಲಸಿಕೆ ಹಾಕಿಸಿಕೊಂಡವರಲ್ಲಿ ಆತಂಕ, ಭಯಗಳು ಹೆಚ್ಚುತ್ತಿವೆ, ಆದರೆ ಅದಕ್ಕೆ ಸಮಾಧಾನಕರವಾದ ಉತ್ತರಗಳು ಎಲ್ಲೂ ದೊರೆಯುತ್ತಿಲ್ಲ ಎಂಬಂತಾಗಿದೆ.

ಅವಸರದಲ್ಲಿ ಲಸಿಕೆ ಕೊಡಿಸಿದ, ಅದನ್ನು ಉತ್ತೇಜಿಸಿದ ಸರಕಾರ, ವೈದ್ಯರುಗಳು ಹಾಗೂ ಲಸಿಕೆ ಕಂಪೆನಿಗಳು ಈಗಾಗಲೇ ಆಗಿರುವ ಆ ಹಾನಿಗಳನ್ನು ಸಾಧ್ಯವಾದಷ್ಟು ಸರಿಪಡಿಸಲು, ಜನರ ಆತಂಕಗಳನ್ನು ನಿವಾರಿಸಲು ಅಗತ್ಯ ಕ್ರಮಗಳನ್ನು ಮಾಡಲೇಬೇಕಾಗಿದೆ.

ಮೊದಲನೆಯದಾಗಿ, ಕೊರೋನ ಲಸಿಕೆಗಳನ್ನು ನೀಡಿದ್ದರಿಂದ ಆಗಿರುವ ಪ್ರಯೋಜನಗಳು ಮತ್ತು ಸಮಸ್ಯೆಗಳ ಬಗ್ಗೆ ಎಲ್ಲಾ ವಿವರಗಳನ್ನು ಜನರ ಮುಂದಿರಿಸಬೇಕು. ನಮ್ಮ ದೇಶದಲ್ಲಿ ಲಸಿಕೆ ಹಾಕಿಸಿಕೊಂಡವರು, ಕೊರೋನ ಪರೀಕ್ಷೆ ಮಾಡಿಸಿಕೊಂಡವರು, ಕೊರೋನದಿಂದ ಗಂಭೀರ ಸಮಸ್ಯೆಗೀಡಾದವರು, ಮೃತ ಪಟ್ಟವರು, ಎಲ್ಲರ ಮಾಹಿತಿಯನ್ನೂ ಅವರವರ ಆಧಾರ್ ಸಂಖ್ಯೆಯೊಂದಿಗೆ ಜೋಡಿಸಲಾಗಿರುವುದರಿಂದ (ಅದು ಸರಿಯೋ, ತಪ್ಪೋ ಎನ್ನುವ ಚರ್ಚೆ ಬೇರೆಯೇ ಇದೆ) ಇವೆಲ್ಲವುಗಳ ನಡುವಿನ ಅಂತರ ಸಂಬಂಧಗಳನ್ನು ತಾಳೆ ಹಾಕುವುದು ಸುಲಭವಿದೆ, ಆದ್ದರಿಂದ ಅಂತಹ ವಿಶ್ಲೇಷಣೆಗಳನ್ನು ನಡೆಸಿ, ಅವುಗಳ ವರದಿಗಳನ್ನು ಕೂಡಲೇ ಜನರೆದುರು ಇರಿಸಬೇಕು. ಮೊದಲೇ ಸೋಂಕಿತರಾಗಿದ್ದ ಎಷ್ಟು ಮಂದಿಗೆ ಲಸಿಕೆ ನೀಡಲಾಯಿತು, ಲಸಿಕೆ ಪಡೆದ ಬಳಿಕ ಎಷ್ಟು ಜನರು ಸೋಂಕಿತರಾದರು, ಲಸಿಕೆ ಪಡೆದವರಲ್ಲಿ ಎಷ್ಟು ಜನರು ಸೋಂಕಿನಿಂದ ಸಮಸ್ಯೆಗೀಡಾದರು, ಅದರಿಂದ ಮೃತರಾದರು, ಲಸಿಕೆಯ ಕಾರಣಕ್ಕೆ ಎಷ್ಟು ಜನರು ಯಾವ ಸಮಸ್ಯೆಗೀಡಾದರು, ಅವರಲ್ಲಿ ಎಷ್ಟು ಜನರು ಗುಣಮುಖರಾದರು, ಎಷ್ಟು ಜನರು ಶಾಶ್ವತ ಸಮಸ್ಯೆಗೀಡಾದರು, ಎಷ್ಟು ಜನರು ಮೃತರಾದರು ಎಂಬೆಲ್ಲಾ ವಿವರಗಳನ್ನು ಪಾರದರ್ಶಕವಾಗಿ ಪ್ರಕಟಿಸಬೇಕು. ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳ ಬಗ್ಗೆ ನಡೆಸಲಾಗಿರುವ ಮೂರನೇ ಹಾಗೂ ನಾಲ್ಕನೇ ಹಂತದ ಪರೀಕ್ಷೆಗಳ ಅಂತಿಮ ವರದಿಗಳನ್ನೂ ಕೂಡಲೇ ಪ್ರಕಟಿಸಬೇಕು.

ಎರಡನೆಯದಾಗಿ, ಕೊರೋನ ಸೋಂಕು ಹಾಗೂ ಕೊರೋನ ಲಸಿಕೆಗಳ ನಂತರದಲ್ಲಿ ಉಂಟಾಗಿರುವ ರಕ್ತ ಹೆಪ್ಪುಗಟ್ಟುವ ಪ್ರಕರಣಗಳೆಷ್ಟು; ಅಂತಹ ಪ್ರಕರಣಗಳಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದವರೆಷ್ಟು, ಪಡೆಯದವರೆಷ್ಟು; ಕೋವಿಶೀಲ್ಡ್ ನೀಡಲಾರಂಭಿಸಿದ ನಂತರದಲ್ಲಿ ಮೆದುಳಿನ ಅಭಿಧಮನಿಗಳಲ್ಲಿ (ಸಿವಿಟಿ), ಸ್ನಾಯುಗಳೊಳಗಿನ ಅಭಿಧಮನಿ ಗಳಲ್ಲಿ (ಡಿವಿಟಿ), ಶ್ವಾಸಕೋಶಗಳ ಅಭಿಧಮನಿಗಳಲ್ಲಿ, ಕರುಳಿನ ರಕ್ತನಾಳಗಳಲ್ಲಿ, ಅಕ್ಷಿಪಟಲದ ರಕ್ತನಾಳಗಳಲ್ಲಿ, ರಕ್ತ ಹೆಪ್ಪುಗಟ್ಟಿ ಸಮಸ್ಯೆಗಳಾದ ಪ್ರಕರಣಗಳೆಷ್ಟು; ಗೀಲನ್ ಬಾ ಮತ್ತು ಇತರ ನರದೌರ್ಬಲ್ಯದ ಪ್ರಕರಣಗಳೆಷ್ಟು; ಮತ್ತು ಈ ಎಲ್ಲಾ ಪ್ರಕರಣಗಳಿಗೂ ಅವರವರು ಹಾಕಿಸಿಕೊಂಡ ಕೊರೋನ ಲಸಿಕೆಗಳಿಗೂ ಸಾಮಯಿಕ ಸಂಬಂಧಗಳೇನು ಎಂಬ ಎಲ್ಲಾ ಮಾಹಿತಿಯನ್ನು ದೇಶದಾದ್ಯಂತ ಸಂಗ್ರಹಿಸಿ ಪ್ರಕಟಿಸಬೇಕು.

ಮೂರನೆಯದಾಗಿ, ಕನಿಷ್ಠ ಸುಮಾರು ಮೂರು-ನಾಲ್ಕು ಸಾವಿರ ಜನರನ್ನು ಆಯ್ದು, ಕೋವಿಶೀಲ್ಡ್ ಲಸಿಕೆ ಪಡೆದವರು, ಕೊವ್ಯಾಕ್ಸಿನ್ ಲಸಿಕೆ ಪಡೆದವರು, ಯಾವುದೇ ಲಸಿಕೆ ಪಡೆಯದವರು ಮತ್ತು ಈ ಮೂರು ಗುಂಪುಗಳಲ್ಲಿ ಕೊರೋನ ಸೋಂಕಿತರು ಮತ್ತು ಇದುವರೆಗೆ ಸೋಂಕು ತಗಲದೇ ಇರುವವರು ಎಂದು ವಿಂಗಡಿಸಿ, ಅವರಲ್ಲಿ ಆ್ಯಂಟಿ ಪ್ಲೇಟ್ಲೆಟ್ ಫ್ಯಾಕ್ಟರ್ 4 ಪ್ರತಿಕಾಯಗಳನ್ನು ಪರೀಕ್ಷಿಸುವ ಅಧ್ಯಯನಗಳನ್ನು ನಡೆಸಬೇಕು. ಹಾಗೆಯೇ, ಇನ್ನು ಮುಂದಕ್ಕೆ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆ, ಹೃದಯಾಘಾತ, ಹಠಾತ್ ಹೃದಯ ಸ್ತಂಭನ, ಮಿದುಳಿನ ಆಘಾತಗಳಾಗುವ ಪ್ರಕರಣಗಳಲ್ಲಿ ಆ್ಯಂಟಿ ಪ್ಲೇಟ್ಲೆಟ್ ಫ್ಯಾಕ್ಟರ್ 4 ಪ್ರತಿಕಾಯಗಳನ್ನು ಪರೀಕ್ಷಿಸುವ ಅಧ್ಯಯನಗಳನ್ನು ನಡೆಸಬೇಕು. ಈ ಅಧ್ಯಯನಗಳು ಕ್ಲಿಷ್ಟಕರವೂ, ಸಂಕೀರ್ಣವೂ, ವೆಚ್ಚದಾಯಕವೂ ಆಗಿರುವುದರಿಂದ ಎಐಐಎಂಎಸ್, ಜಯದೇವ ಹೃದ್ರೋಗ ಸಂಸ್ಥೆ ಮುಂತಾದ ಅತ್ಯುನ್ನತ ಸಂಸ್ಥೆಗಳಲ್ಲಿ ಐಸಿಎಂಆರ್ ಸಹಯೋಗದಲ್ಲಿ ಅವನ್ನು ನಡೆಸಬಹುದು. ಇಂತಹ ಅಧ್ಯಯನಗಳು ಪ್ರಾಮಾಣಿಕವಾಗಿ ನಡೆಯದ ಹೊರತು ಕೊರೋನ ಲಸಿಕೆಗಳು ನಿರಪಾಯಕರವೆನ್ನುವುದಕ್ಕಾಗಲೀ, ಮೇಲೆ ಹೇಳಿರುವ ಗಂಭೀರ ಸಮಸ್ಯೆಗಳೆಲ್ಲಕ್ಕೂ ಲಸಿಕೆಗಳೇ ಕಾರಣ ಎನ್ನುವುದಕ್ಕಾಗಲೀ ಆಧಾರಗಳು ದೊರೆಯಲಾರವು.

ನಾಲ್ಕನೆಯದಾಗಿ, ಈಗಾಗಲೇ ದೃಢಪಟ್ಟಿರುವ ಲಸಿಕೆ ಸಂಬಂಧಿತ ಅಡ್ಡ ಪರಿಣಾಮಗಳಿಂದ ಗಂಭೀರ ಸಮಸ್ಯೆಗೀಡಾದವರಿಗೆ ಹಾಗೂ ಮೃತ ಪಟ್ಟವರಿಗೆ ಸರಕಾರವು ಸಹಾನುಭೂತಿಯೊಂದಿಗೆ ಸೂಕ್ತ ಪರಿಹಾರವನ್ನು ನೀಡಬೇಕು.

ಐದನೆಯದಾಗಿ, ಭಾರತದಲ್ಲಿ ಲಸಿಕೆಗಳಿಂದ ಯಾವುದೇ ಸಮಸ್ಯೆಯಾಗಿಲ್ಲವೆಂದು ಸಾರಾಸಗಟಾಗಿ ನಿರಾಕರಿಸುವುದು, ಲಸಿಕೆಗಳು ಭಾರೀ ಪ್ರಯೋಜನಕಾರಿಯಾಗಿದ್ದುದರಿಂದ ಅವನ್ನು ನೀಡುವುದು ಅನಿವಾರ್ಯವಾಗಿತ್ತು, ಹಾಗಾಗಿ ಕೆಲವರಿಗೆ ಅಡ್ಡ ಪರಿಣಾಮಗಳಾಗಿದ್ದರೆ ಅದೇನೂ ದೊಡ್ಡದಲ್ಲ ಎಂದು ವಾದಿಸುವುದು ಅಪ್ರಾಮಾಣಿಕವೂ, ಆಧಾರರಹಿತವೂ ಆಗುವುದರಿಂದ, ಅಂತಹ ಸಮರ್ಥನೆಗಳನ್ನು ಮಾಡದೆ, ಕಷ್ಟಕ್ಕೀಡಾಗಿರುವವರಿಗೆ ಸತ್ಯವನ್ನು ಹೇಳಿ ಧೈರ್ಯ ತುಂಬುವ, ಸಂತೈಸುವ ಕೆಲಸವಾಗಬೇಕು.

ಲಸಿಕೆ ಪಡೆದಿರುವವರು ಏನು ಮಾಡಬಹುದು?

ಅನಗತ್ಯವಾಗಿ ದೇಹದೊಳಕ್ಕೆ ಚುಚ್ಚಿರುವ ಲಸಿಕೆಯನ್ನು ಹೊರತೆಗೆಯುವುದಂತೂ ಸಾಧ್ಯವಿಲ್ಲ. ಈಗ ಕಂಪೆನಿಯೇ ಒಪ್ಪಿಕೊಂಡಿರುವ ಅಡ್ಡ ಪರಿಣಾಮಗಳ ಬಗ್ಗೆಯಾಗಲೀ, ಎಲ್ಲೆಡೆ ವರದಿಯಾಗುತ್ತಿರುವ ಹಠಾತ್ ಹೃದಯ ಸ್ತಂಭನಗಳಂತಹ ಪ್ರಕರಣಗಳ ಬಗ್ಗೆಯಾಗಲೀ ಸದಾ ಚಿಂತೆಗೀಡಾಗುವುದು ಕೂಡಾ ಒಳ್ಳೆಯದಲ್ಲ. ಸರಕಾರ, ಲಸಿಕೆ ಕಂಪೆನಿಗಳು ಹಾಗೂ ವೈದ್ಯ ಸಮೂಹ ಪ್ರಾಮಾಣಿಕವಾಗಿ ಆತಂಕ ನಿವಾರಣೆಗೆ ಯತ್ನಿಸುತ್ತಿಲ್ಲ ಎಂದು ಹತಾಶರಾಗಿಯೂ ಫಲವಿಲ್ಲ. ಆದ್ದರಿಂದ ಲಸಿಕೆ ಪಡೆದಿರುವ ಜನಸಾಮಾನ್ಯರು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳನ್ನು ರಕ್ಷಿಸಿಕೊಳ್ಳುವತ್ತ ಗಮನ ಹರಿಸುವುದೊಳ್ಳೆಯದು.

ಕೊರೋನ ವೈರಸ್ ಮತ್ತು ಕೋವಿಡ್ ನಮ್ಮ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುವುದಲ್ಲದೆ ರಕ್ತದಲ್ಲಿ ಸಕ್ಕರೆಯ ಮಟ್ಟ, ರಕ್ತದೊತ್ತಡ, ರಕ್ತನಾಳಗಳ ಸುಸ್ಥಿತಿಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಎಸಿಇ2 ಗ್ರಾಹಿಗಳ ಮೇಲೆ ವರ್ತಿಸುತ್ತದೆ ಎನ್ನುವುದು ಸೋಂಕಿನ ಆರಂಭದಲ್ಲೇ ತಿಳಿದಿತ್ತು. ಇದೇ ಕಾರಣಕ್ಕೆ ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ, ಬೊಜ್ಜು, ಹೃದ್ರೋಗ ಇತ್ಯಾದಿ ಆಧುನಿಕ ರೋಗಗಳಿದ್ದವರಲ್ಲಿ ಕೋವಿಡ್ ಹೆಚ್ಚು ಸಮಸ್ಯೆಗಳನ್ನುಂಟು ಮಾಡುತ್ತದೆ ಎನ್ನುವುದೂ, ಕೋವಿಡ್‌ನಿಂದಾಗಿ ಈ ಕಾಯಿಲೆಗಳು ಕೂಡ ಇನ್ನಷ್ಟು ಬಿಗಡಾಯಿಸುತ್ತವೆ ಎನ್ನುವುದೂ ಸ್ಪಷ್ಟವಾಗಿತ್ತು. ಕೋವಿಡ್ ಲಸಿಕೆಗಳಲ್ಲೂ ಎಸಿಇ2 ಗ್ರಾಹಿಗಳ ಮೇಲೆ ವರ್ತಿಸುವ ಕೊರೋನ ವೈರಸಿನ ಮುಳ್ಳಿನ ಪ್ರೊಟೀನುಗಳೇ ಇರುವುದರಿಂದ ಮತ್ತು ಅದಾಗಲೇ ಸೋಂಕು ತಗಲಿದವರಿಗೂ ಈ ಲಸಿಕೆಗಳನ್ನು ನೀಡಿರುವುದರಿಂದ ಈ ಎಲ್ಲಾ ಕಾಯಿಲೆಗಳ ಮೇಲೆ ಪರಿಣಾಮಗಳಾಗಿರುವ ಸಾಧ್ಯತೆಗಳನ್ನು ಪರಿಗಣಿಸಬೇಕಾಗುತ್ತದೆ. ಜೊತೆಗೆ, ಈ ಆಧುನಿಕ ರೋಗಗಳಿಗೂ, ಆಧುನಿಕ ಆಹಾರ, ಜೀವನಶೈಲಿ, ನಿತ್ಯಜೀವನದ ಒತ್ತಡಗಳಿಗೂ ನಿಕಟ ಸಂಬಂಧಗಳಿರುವುದು ಕೂಡ ಸುಸ್ಪಷ್ಟವಾಗಿದ್ದು, ಇವುಗಳೆಲ್ಲವೂ ಪರಸ್ಪರ ಒಂದನ್ನೊಂದು ಬಿಗಡಾಯಿಸಿಕೊಳ್ಳುವುದನ್ನೂ ಪರಿಗಣಿಸಬೇಕಾಗುತ್ತದೆ. ಕೊರೋನ ಕಾಲದಲ್ಲಿ ಲಾಕ್‌ಡೌನ್ ಮಾಡಿದ್ದು, ಶಾಲೆ-ಕಾಲೇಜುಗಳನ್ನು ಮುಚ್ಚಿದ್ದು, ಯಾರೂ ಹೊರಬಾರದಂತೆ ಮಾಡಿ ಆಟೋಟ, ನಿತ್ಯ ವ್ಯಾಯಾಮಗಳನ್ನು ತಡೆದದ್ದು, ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಮಾಡಿದ್ದು, ಇವೆಲ್ಲವುಗಳಿಂದ ಆಹಾರಕ್ರಮ ಬದಲಾದದ್ದು, ದೈಹಿಕ ಶ್ರಮ ಕಡಿಮೆಯಾದದ್ದು, ಮಾನಸಿಕ ಒತ್ತಡ ಹೆಚ್ಚಿದ್ದು, ಅವುಗಳ ಜೊತೆಗೆ ಕೊರೋನ ಸೋಂಕು ಮತ್ತದರ ಲಸಿಕೆ ಕೂಡ ಸೇರಿಕೊಂಡದ್ದು ಈ ಆಧುನಿಕ ಕಾಯಿಲೆಗಳನ್ನು ಇನ್ನಷ್ಟು ಉಲ್ಬಣಿಸಿರುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗಿವೆ.

ಲಾಕ್‌ಡೌನ್, ಮಾಸ್ಕ್ ಇತ್ಯಾದಿ ಮಾಡಿದರೂ ಅವೆಲ್ಲ ವಿಫಲವಾಗಿ ದೇಶದ ಬಹುತೇಕ ಎಲ್ಲರಿಗೂ ಈಗಾಗಲೇ ಕೊರೋನ ಸೋಂಕು ತಗಲಿರುವುದರಿಂದ ಮತ್ತು ಸಣ್ಣ ಮಕ್ಕಳನ್ನು ಬಿಟ್ಟು ಉಳಿದವರಲ್ಲಿ ಶೇ. 90ಕ್ಕೂ ಹೆಚ್ಚು ಜನರಿಗೆ ಕೊರೋನ ಲಸಿಕೆಗಳನ್ನು ಚುಚ್ಚಿ ಆಗಿರುವುದರಿಂದ ಇವುಗಳಿಂದ ಆಗಿರುವ, ಆಗಬಹುದಾದ ಪರಿಣಾಮಗಳನ್ನು ಹೋಗಲಾಡಿಸುವುದಕ್ಕೆ ಸಾಧ್ಯವಾಗದು. ಆದರೆ ರಕ್ತ ಹೆಪ್ಪುಗಟ್ಟುವಿಕೆ, ಹೃದಯಾಘಾತ, ಮೆದುಳಿನ ಆಘಾತದಂತಹ ಸಮಸ್ಯೆಗಳನ್ನು ಉಲ್ಬಣಿಸುವ ಇತರ ಕಾಯಿಲೆಗಳನ್ನು ಮತ್ತು ಕಾರಣಗಳನ್ನು ನಿಯಂತ್ರಿಸುವುದಕ್ಕೆ ಸಾಧ್ಯವಿದೆ, ಆ ಪ್ರಯತ್ನವನ್ನು ಎಲ್ಲರೂ ಮಾಡಬೇಕು. ಸಕ್ಕರೆ ಕಾಯಿಲೆ ಹಾಗೂ ಅಧಿಕ ರಕ್ತದೊತ್ತಡಗಳನ್ನು ಉತ್ತಮವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಈ ಕಾಯಿಲೆಗಳಿಗೂ, ಬೊಜ್ಜು, ಉರಿಯೂತದ ಹೆಚ್ಚಳಗಳಿಗೂ ಕಾರಣವಾಗುವ ಆಹಾರ ಹಾಗೂ ಜೀವನಶೈಲಿಗಳನ್ನು ತ್ಯಜಿಸುವುದು, ನಿಯತವಾಗಿ ದಿನಕ್ಕೆ 30-60 ನಿಮಿಷಗಳ ಕಾಲ ವೇಗವಾಗಿ ನಡೆಯುವುದು ಅಥವಾ ಈಜುವುದು, ಸಾಕಷ್ಟು ವಿಶ್ರಾಂತಿ, ಮನೋಲ್ಲಾಸ ಹಾಗೂ ರಾತ್ರಿಯಲ್ಲಿ ಕನಿಷ್ಠ 7-8 ಗಂಟೆ ನಿದ್ದೆಯನ್ನು ಪಡೆಯುವುದು ಅಗತ್ಯವಾಗಿದೆ. ಪಶುವಿನ ಹಾಲು ಮತ್ತದರ ಉತ್ಪನ್ನಗಳು, ಸಕ್ಕರೆ ಮತ್ತು ಸಕ್ಕರೆ/ಸಿಹಿಭರಿತ ತಿನಿಸುಗಳು ಹಾಗೂ ಪೇಯಗಳು, ಹಣ್ಣುಗಳು ಮತ್ತು ಹಣ್ಣುಗಳ ರಸಗಳು, ಸಂಸ್ಕರಿತ ಸಿದ್ಧ ತಿನಿಸುಗಳು, ಮದ್ಯಪಾನ, ಧೂಮಪಾನಗಳನ್ನು ವರ್ಜಿಸುವುದು ಹೃದಯ ಹಾಗೂ ರಕ್ತನಾಳಗಳ ಆರೋಗ್ಯವನ್ನು ರಕ್ಷಿಸಲು ನೆರವಾಗುತ್ತದೆ.

ಹೃದಯದ ರಕ್ತನಾಳಗಳಿಗೆ ಸಮಸ್ಯೆಯಾಗಿರುವ ಸಂದರ್ಭಗಳಲ್ಲಿ ಹೃದಯಾಘಾತಕ್ಕೆ ಮೊದಲೇ ಕೆಲವೊಂದು ಮುನ್ಸೂಚನೆಗಳು ಸಾಮಾನ್ಯವಾಗಿ ಕಂಡುಬರುತ್ತವೆ, ಅವನ್ನು ನಿರ್ಲಕ್ಷಿಸದೆ ತಕ್ಕ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಕೆಲವೊಮ್ಮೆ ವೈದ್ಯರು ಕೂಡ ಅವನ್ನು ಗಂಭೀರವಾಗಿ ತೆಗೆದುಕೊಳ್ಳದಿರಬಹುದು, ಹಾಗಿದ್ದಲ್ಲಿ ಸಮಸ್ಯೆಯಿದ್ದವರೇ ವೈದ್ಯರನ್ನು ಒತ್ತಾಯಿಸಬೇಕಾಗಬಹುದು. ಹೃದಯದ ರಕ್ತನಾಳಗಳಲ್ಲಿ ಅಡಚಣೆಯು ಬೆಳೆಯುತ್ತಿದ್ದರೆ, ಯಾವುದೇ ಕೆಲಸವನ್ನು ಮಾಡುವಾಗ ಹೃದಯದ ಸ್ನಾಯುಗಳಿಗೆ ಕಷ್ಟವೆನಿಸಿ ಅದರ ಲಕ್ಷಣಗಳು ಕಂಡುಬರುತ್ತವೆ - ನಡೆಯುವಾಗ, ಮೆಟ್ಟಲುಗಳನ್ನು ಅಥವಾ ಎತ್ತರವನ್ನು ಏರುವಾಗ, ಆಡುವಾಗ, ಹೀಗೆ ದೈಹಿಕ ಶ್ರಮದ ಸಂದರ್ಭದಲ್ಲಿ ಕತ್ತು ಹಿಸುಕಿದಂತಾಗುವುದು, ಎದೆ ಹಿಂಡಿದಂತೆ, ಒತ್ತಿದಂತೆ, ಭಾರವಾದಂತೆ ಅನಿಸುವುದು, ಹೊಟ್ಟೆಯ ಮೇಲ್ಭಾಗದಲ್ಲಿ ಉರಿ ಅಥವಾ ಉಬ್ಬಿದಂತಾಗುವುದು, ಕತ್ತು, ಭುಜಗಳು, ಕೆಳ ದವಡೆಗಳು, ಬೆನ್ನಿನ ಮೇಲ್ಭಾಗಗಳಲ್ಲಿ ಸೆಳೆತ ಅಥವಾ ನೋವುಂಟಾಗುವುದು, ಉಸಿರಾಡಲು ಕಷ್ಟವೆನಿಸುವುದು, ಎದೆ ಬಡಿತ ಹೆಚ್ಚುವುದು, ತಲೆ ಸುತ್ತುವುದು - ಹೀಗೆ ಯಾವುದೇ ಕೆಲಸಗಳನ್ನು ಮಾಡುವಾಗ ಇಂತಹ ಯಾವುದೇ ಲಕ್ಷಣಗಳಿದ್ದಲ್ಲಿ, ಮತ್ತು ಪ್ರತೀ ಬಾರಿಯೂ ಅಂಥ ಕೆಲಸಗಳನ್ನು ಮಾಡುವಾಗ ಇವು ಮರುಕಳಿಸುವುದಾದಲ್ಲಿ, ಹೃದ್ರೋಗಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಒಳ್ಳೆಯದು. ಕೆಲವೊಮ್ಮೆ ಈ ಲಕ್ಷಣಗಳಿರುವವರಲ್ಲಿ ಇಸಿಜಿಯನ್ನಷ್ಟೇ ಮಾಡಿದರೆ ಸಮಸ್ಯೆಯು ಗುರುತಿಸಲ್ಪಡದೇ ಹೋಗಬಹುದು, ಆದ್ದರಿಂದ ಸ್ಪಷ್ಟವಾದ ಲಕ್ಷಣಗಳಿದ್ದು, ಇಸಿಜಿಯಲ್ಲಿ ವ್ಯತ್ಯಾಸಗಳಿಲ್ಲ ಎಂದಾದರೆ, ಟ್ರೆಡ್‌ಮಿಲ್ ಪರೀಕ್ಷೆ ಅಥವಾ ಆಂಜಿಯೋಗ್ರಾಂ ಪರೀಕ್ಷೆ ಬೇಕಾಗಬಹುದು.

ಲಸಿಕೆ ಪಡೆದವರ ದೇಹ ಶುದ್ಧಿ ಮಾಡುವುದೆನ್ನುವ ಚಿಕಿತ್ಸೆಗಳು, ಅಪಾಯವನ್ನು ಅಂದಾಜಿಸಬಹುದೆನ್ನುವ ಪರೀಕ್ಷೆಗಳು ಇತ್ಯಾದಿಗಳ ಹಿಂದೆ ಹೋಗುವ ಅಗತ್ಯವಿಲ್ಲ, ಅಂತಹ ಪರೀಕ್ಷೆಗಳಾಗಲೀ, ಚಿಕಿತ್ಸೆಗಳಾಗಲೀ ಲಭ್ಯವಿಲ್ಲ.

ಒಟ್ಟಿನಲ್ಲಿ, ಕೊರೋನ ಸೋಂಕಿನ ನಿರ್ವಹಣೆ ಹಾಗೂ ಕೊರೋನ ಲಸಿಕೆಗಳ ವಿಚಾರದಲ್ಲಿ ಮಾಡಿರುವ ಅಮಾನವೀಯವಾದ, ಅವೈಜ್ಞಾನಿಕವಾದ ಕಾರ್ಯಗಳಿಂದಾಗಿ ಇಂದು ಜನಸಾಮಾನ್ಯರು ವೈದ್ಯವಿಜ್ಞಾನದ ಮೇಲೆ, ವೈದ್ಯವೃತ್ತಿಯ ಬಗ್ಗೆ ವಿಶ್ವಾಸವನ್ನೇ ಕಳೆದುಕೊಳ್ಳುವಂತಾಗಿದೆ, ಇವುಗಳಲ್ಲಿ ಭಾಗಿಯಾಗಿದ್ದ ಸರಕಾರ ಹಾಗೂ ಲಸಿಕೆ ಕಂಪೆನಿಗಳಿಗಿಂತಲೂ ವೈದ್ಯಕೀಯ ಸಮೂಹವೇ ಹೆಚ್ಚು ಆಪಾದನೆಗೀಡಾಗುವಂತಾಗಿದೆ. ವೈದ್ಯವಿಜ್ಞಾನವೂ, ವೈದ್ಯ ವೃತ್ತಿಯೂ ಜನರ ವಿಶ್ವಾಸವನ್ನು ಮರಳಿ ಗಳಿಸಿ ಉಳಿಸಿಕೊಳ್ಳಬೇಕಿದ್ದರೆ ಕೊರೋನ ಕಾಲದ ತಪ್ಪುಗಳನ್ನು ಒಪ್ಪಿಕೊಂಡು, ಲಸಿಕೆಯ ಬಗ್ಗೆ ವೈಜ್ಞಾನಿಕವಾದ, ಸಾಕ್ಷ್ಯಾಧಾರಿತವಾದ ಮಾಹಿತಿಯನ್ನು ಪ್ರಾಮಾಣಿಕವಾಗಿ ಜನರ ಮುಂದಿಡಬೇಕಾಗಿದೆ. ವೈದ್ಯರ ಬದ್ಧತೆಯು ವೈದ್ಯಕೀಯ ವಿಜ್ಞಾನಕ್ಕೆ, ಜನರ ಹಿತಕ್ಕೆ ಮತ್ತು ಸತ್ಯಕ್ಕೆ ಇರಬೇಕೇ ಹೊರತು ಯಾವುದೇ ಸರಕಾರಕ್ಕೆ, ರಾಜಕೀಯ ಪಕ್ಷ ಅಥವಾ ನಾಯಕನಿಗೆ, ಔಷಧ ಯಾ ಲಸಿಕೆ ಕಂಪೆನಿಗೆ ಅಲ್ಲ ಎನ್ನುವುದನ್ನು ಎಲ್ಲ ವೈದ್ಯರೂ ತಿಳಿಯಬೇಕಾಗಿದೆ. ಕೊರೋನ ಸೋಂಕು ಹಾಗೂ ಕೊರೋನ ಲಸಿಕೆ ಕಲಿಸಬೇಕಾದ ಪಾಠ ಅದುವೇ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ಶ್ರೀನಿವಾಸ ಕಕ್ಕಿಲ್ಲಾಯ

contributor

Similar News