ಉತ್ತರ ಪ್ರದೇಶದಲ್ಲಿ ಭಿನ್ನಾಭಿಪ್ರಾಯ ಹತ್ತಿಕ್ಕಲು ವ್ಯಾಪಕವಾಗಿ ಬಳಕೆಯಾಗುತ್ತಿರುವ ಗೂಂಡಾ ಕಾಯ್ದೆ
ಕಾಯ್ದೆಯ ದುರ್ಬಳಕೆ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಪರಿಶೀಲಿಸಿದರೆ, ನಾಗರಿಕರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಸಂಪೂರ್ಣ ಮತ್ತು ಬಹುತೇಕ ಅನಿಯಂತ್ರಿತ ಅಧಿಕಾರವನ್ನು ಅದು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗಳ ವಿವೇಚನೆಗೆ ಬಿಡುತ್ತದೆ. ಅನೇಕ ಸಂದರ್ಭಗಳಲ್ಲಿ, ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಮತ್ತು ರಾಜಕೀಯ ಕಾರಣಗಳಿಗಾಗಿ ಕಾಯ್ದೆಯನ್ನು ಬಳಸಲು ಅವಕಾಶ ಮಾಡಿಕೊಡುತ್ತದೆ.
ಉತ್ತರ ಪ್ರದೇಶ ಸರಕಾರದ ವಿಚಾರವಾಗಿ ಅಲಹಾಬಾದ್ ಹೈಕೋರ್ಟ್ ಕಳೆದ ಆಗಸ್ಟ್ ತಿಂಗಳಲ್ಲಿ ಒಂದು ಆದೇಶ ಜಾರಿಗೊಳಿಸಿತು. ಉತ್ತರ ಪ್ರದೇಶ ಸರಕಾರ ಗೂಂಡಾ ಕಾಯ್ದೆಯನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಗೂಂಡಾ ಕಾಯ್ದೆ ಹೇರುವ ವಿಷಯದಲ್ಲಿ ಉತ್ತರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಏಕರೂಪತೆ ಇಲ್ಲದಿರುವುದನ್ನು ಗಮನಿಸಿರುವುದಾಗಿ ರಾಹುಲ್ ಚತುರ್ವೇದಿ ಹಾಗೂ ಮುಹಮ್ಮದ್ ಅಝರ್ ಹುಸೈನ್ ಅವರನ್ನೊಳಗೊಂಡ ವಿಭಾಗೀಯ ಪೀಠ ತನ್ನ ಆದೇಶದಲ್ಲಿ ಹೇಳಿತು. ಮಾತ್ರವಲ್ಲ, ಗೂಂಡಾ ಕಾಯ್ದೆಯನ್ನು ಯಾವುದೇ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಅಕ್ಟೋಬರ್ 31ರೊಳಗೆ ಏಕರೂಪದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಂತೆಯೂ ಹೈಕೋರ್ಟ್ ಆದಿತ್ಯನಾಥ್ ನೇತೃತ್ವದ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತು.
ಉತ್ತರ ಪ್ರದೇಶ ಗೂಂಡಾಗಳ ನಿಯಂತ್ರಣ ಕಾಯ್ದೆ-1970 ಸಾರ್ವಜನಿಕ ಸುವ್ಯವಸ್ಥೆಗೆ ತೊಂದರೆಯಾಗುವುದನ್ನು ತಡೆಯುವ ಕ್ರಮದ ಭಾಗವಾಗಿ ಜಿಲ್ಲೆಯೊಂದರಿಂದ ಒಬ್ಬ ವ್ಯಕ್ತಿಯನ್ನು ಹೊರಹಾಕಲು ಅಥವಾ ಗಡಿಪಾರು ಮಾಡಲು ಜಿಲ್ಲಾಡಳಿತಕ್ಕೆ ಅವಕಾಶ ನೀಡುತ್ತದೆ.
ಕಾಯ್ದೆಯ ದುರ್ಬಳಕೆ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಪರಿಶೀಲಿಸಿದರೆ, ನಾಗರಿಕರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಸಂಪೂರ್ಣ ಮತ್ತು ಬಹುತೇಕ ಅನಿಯಂತ್ರಿತ ಅಧಿಕಾರವನ್ನು ಅದು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗಳ ವಿವೇಚನೆಗೆ ಬಿಡುತ್ತದೆ. ಅನೇಕ ಸಂದರ್ಭಗಳಲ್ಲಿ, ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಮತ್ತು ರಾಜಕೀಯ ಕಾರಣಗಳಿಗಾಗಿ ಕಾಯ್ದೆಯನ್ನು ಬಳಸಲು ಅವಕಾಶ ಮಾಡಿಕೊಡುತ್ತದೆ.
ಕಾಯ್ದೆ ಏನು ಹೇಳುತ್ತದೆ?
ಜಿಲ್ಲೆಯೊಳಗೆ ಕ್ರಿಮಿನಲ್ ಅಪರಾಧ ಮಾಡಬಹುದೆಂಬ ಶಂಕೆಯ ಮೇಲೆ ಈ ಕಾಯ್ದೆಯಡಿಯಲ್ಲಿ ಗೂಂಡಾ ಎಂದು ವ್ಯಾಖ್ಯಾನಿಸಲಾದ ವ್ಯಕ್ತಿಯನ್ನು ಹೊರಹಾಕಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಬಹುದು ಎಂದು ಅದು ಹೇಳುತ್ತದೆ.
ಹೀಗೆ ಜಿಲ್ಲೆಯಿಂದ ಹೊರಹಾಕುವಿಕೆ ಎರಡು ವರ್ಷಗಳವರೆಗೆ ಇರಬಹುದು. ಈ ಕಾಯ್ದೆಯಡಿ ಗೂಂಡಾ ಎಂದು ಕರೆಸಿಕೊಳ್ಳುವವರು ಹೇಗೆ ನಡೆದುಕೊಳ್ಳಬೇಕು ಎಂಬ ನಿರ್ದೇಶನಗಳನ್ನು ಆದೇಶದಲ್ಲಿ ನೀಡಲು ಮತ್ತು ಅವರು ಕೆಲವು ವಸ್ತುಗಳ ಬಳಕೆಯನ್ನೂ ಮಾಡದಂತೆ ನಿಷೇಧಿಸಲು ಅವಕಾಶ ಮಾಡಿಕೊಡಬಹುದು. ಅಲ್ಲದೆ, ಅವರ ಮೇಲೆ ಮ್ಯಾಜಿಸ್ಟ್ರೇಟ್ ಕಣ್ಗಾವಲು ಹಾಕುವಂತೆಯೂ ಆದೇಶಿಸಬಹುದು.
ಬಹಿಷ್ಕಾರದ ಆದೇಶವನ್ನು ಅಂಗೀಕರಿಸುವ ಮೊದಲು, ಗೂಂಡಾ ಎಂಬ ಆಪಾದನೆಗೆ ಒಳಪಡುವವರಿಗೆ ಆ ಆರೋಪಕ್ಕೆ ಪ್ರತಿಕ್ರಿಯಿಸಲು ಮ್ಯಾಜಿಸ್ಟ್ರೇಟ್ ಮೊದಲು ನೋಟಿಸ್ ನೀಡುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಲು ಮತ್ತು ಸಾಕ್ಷಿಗಳನ್ನು ಒದಗಿಸಲು ಅಂತಹವರು ವಕೀಲರ ನೆರವನ್ನು ಪಡೆಯಬಹುದಾಗಿರುತ್ತದೆ.
ಆದೇಶಕ್ಕಾಗಿ ಮ್ಯಾಜಿಸ್ಟ್ರೇಟ್ ಭಾರತೀಯ ಸಾಕ್ಷಿ ಕಾಯ್ದೆಯ ವ್ಯಾಪ್ತಿಯ ಹೊರಗಿನ ಸಾಕ್ಷ್ಯವನ್ನು ಕೂಡ ಅವಲಂಬಿಸಬಹುದು. ಅಂದರೆ, ಮ್ಯಾಜಿಸ್ಟ್ರೇಟ್ ಯಾವುದೇ ಪುರಾವೆಯನ್ನು ಅವಲಂಬಿಸಬಹುದು. ಅದು ನ್ಯಾಯಾಲಯದಲ್ಲಿ ಕಾನೂನುಬದ್ಧವಾಗಿ ಸ್ವೀಕಾರಾರ್ಹವಾಗಿದ್ದರೂ, ಸಂಪೂರ್ಣವಾಗಿ ಅವರ ವಿವೇಚನೆಯನ್ನು ಆಧರಿಸಿದೆ.
ಬಹಿಷ್ಕಾರದ ಆದೇಶದ ಉಲ್ಲಂಘನೆ ಮಾಡಿದರೆ, ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಿಸುವುದಕ್ಕೂ ಕಾಯ್ದೆಯಲ್ಲಿ ಅವಕಾಶವಿದೆ.
ಬಹಿಷ್ಕಾರದ ಆದೇಶದ ವಿರುದ್ಧದ ಮೇಲ್ಮನವಿಗಳು ಮತ್ತೊಂದು ಕಾರ್ಯನಿರ್ವಾಹಕ ಪ್ರಾಧಿಕಾರವಾದ ಆಯುಕ್ತರ ಮುಂದೆ ಇರುತ್ತದೆ. ಪರಿಶೀಲನೆ ಪ್ರಕ್ರಿಯೆಯಲ್ಲಿ ಯಾವುದೇ ನ್ಯಾಯಾಂಗ ಪ್ರಾಧಿಕಾರ ಇರುವುದಿಲ್ಲ.
ಸಮಾಜದ ಕಣ್ಣಲ್ಲಿ ಅಪರಾಧಿಗಳಾಗುವ ಸ್ಥಿತಿ
ಕಾಯ್ದೆಯು ಗೂಂಡಾ ಎಂದು ಗುರುತಿಸಲಾಗುವ ವ್ಯಕ್ತಿಗಳನ್ನು ಹನ್ನೊಂದು ವರ್ಗಗಳಲ್ಲಿ ವಿಂಗಡಿಸುತ್ತದೆ. ಇವುಗಳಲ್ಲಿ ಕೆಲವು ನಿಗದಿತ ದಂಡದ ನಿಬಂಧನೆಗಳ ಅಡಿಯಲ್ಲಿ ಬರುವ ಅಪರಾಧಿಗಳಾದರೆ, ಇತರ ಕೆಲವು ವರ್ಗಗಳಲ್ಲಿ ಶಿಕ್ಷಾರ್ಹ ಅಪರಾಧಗಳಾದ ಮನೆ ದೋಚುವಿಕೆ, ಮಾನವ ಕಳ್ಳಸಾಗಣೆ, ಪ್ರಾಣಿ ಹಿಂಸೆ ಮತ್ತು ಗೋಹತ್ಯೆಗಳಲ್ಲಿ ಭಾಗಿಯಾದವರು ಎನ್ನಲಾಗಿರುವವರಾಗಿರುತ್ತಾರೆ.
ಹೀಗೆ, ಭಾಗಿಯಾದವರು ಎಂದರೆ, ನಿರ್ದಿಷ್ಟ ಅಪರಾಧಗಳ ಅಡಿಯಲ್ಲಿ ನಿಜವಾಗಿ ಶಿಕ್ಷೆಯಾಗದಿದ್ದರೂ, ಅವರು ಗೂಂಡಾ ಎಂದೇ ಪರಿಗಣಿಸಲ್ಪಡುತ್ತಾರೆ. ಆನಂತರ ಬಿಡುಗಡೆ ಮಾಡಲಾಗುತ್ತದೆ ಅಥವಾ ಖುಲಾಸೆಗೊಳಿಸಲಾಗುತ್ತದೆ.
ಈ ಕಾರಣದಿಂದಾಗಿ ಉತ್ತರ ಪ್ರದೇಶದ ಗೋಹತ್ಯೆ ತಡೆ ಕಾಯ್ದೆ, 1955ರ ಅಡಿಯಲ್ಲಿ ಮುಸ್ಲಿಮ್ ಪುರುಷರ ಮೇಲೆ ನಿಯಮಿತವಾಗಿ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂಬ ಆರೋಪಗಳಿವೆ. ಉತ್ತರ ಪ್ರದೇಶದ ವಿವಿಧ ಭಾಗಗಳ ಹಲವಾರು ಸಾಮಾಜಿಕ ಕಾರ್ಯಕರ್ತರು ಇದನ್ನೇ ಪ್ರತಿಪಾದಿಸುತ್ತಾರೆ. ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಆರೋಪ ಹೊರಿಸಿ ಬಹಿಷ್ಕರಿಸುವುದು ಸಾಮಾನ್ಯ ಎನ್ನಲಾಗುತ್ತದೆ.
ಈ ಕಾಯ್ದೆಯಡಿಯಲ್ಲಿ ಆರೋಪಿಯಾದವನ ಪರವಾಗಿ ಸಾಕ್ಷಿ ಹೇಳಲು ಯಾರೂ ಸಿದ್ಧರಿರುವುದಿಲ್ಲ. ಏಕೆಂದರೆ ಅವರು ತಮ್ಮ ಸುರಕ್ಷತೆಗೆ ಅದರಿಂದ ಅಪಾಯ ಎಂದು ಹೆದರುತ್ತಾರೆ. ಸಾಕಷ್ಟು ಪುರಾವೆಗಳಿಲ್ಲದೆ ಮ್ಯಾಜಿಸ್ಟ್ರೇಟರ್ ತಮ್ಮ ಸ್ವಂತ ವಿವೇಚನೆಯಿಂದ ಯಾರನ್ನಾದರೂ ಜಿಲ್ಲೆಯಿಂದ ಹೊರಹಾಕಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ.
ಗೂಂಡಾ ಕಾಯ್ದೆಯನ್ನು ಪೊಲೀಸರು ತಮ್ಮ ವಿರುದ್ಧ ದುರುಪಯೋಗ ಪಡಿಸಿ ಕೊಂಡಿದ್ದಾರೆ ಎಂದು ಹಲವರು ದೂರುವುದೂ ಇದೆ.
ಕಳೆದ ಡಿಸೆಂಬರ್‌ನಲ್ಲಿ ಪತ್ರಕರ್ತ ಝಾಕಿರ್ ಅಲಿ ತ್ಯಾಗಿ ಅವರನ್ನು ಗೂಂಡಾ ಕಾಯ್ದೆಯಡಿ ಹೊರಡಿಸಲಾದ ಬಹಿಷ್ಕಾರದ ಆದೇಶದ ಮೂಲಕ ಅವರ ತವರು ಜಿಲ್ಲೆ ಮೀರತ್‌ನಿಂದ ಹೊರಹಾಕಲಾಯಿತು. ಏಳು ತಿಂಗಳ ಕಾಲ ಮನೆಯಿಂದ ದೂರ ಇರಲು ಬಲವಂತವಾಗಿ ಈ ಕಾನೂನಿನ ಬಳಕೆ ಮಾಡಲಾಗಿರುವುದು ತಮ್ಮನ್ನು ಮಾನಸಿಕವಾಗಿ ನೋಯಿಸಿದೆ ಎನ್ನುತ್ತಾರೆ ತ್ಯಾಗಿ.
ತಮ್ಮ ಖ್ಯಾತಿ ಮತ್ತು ಸಾಮಾಜಿಕ ಘನತೆ ಇದರಿಂದ ಹಾಳಾಗಿದೆ ಎಂಬ ನೋವು ಅವರದು. ಸಾಮಾಜಿಕ ಮಾಧ್ಯಮದಲ್ಲಿ ನಿಯಮಿತವಾಗಿ ನಿಂದನೆಯನ್ನು ಎದುರಿಸಬೇಕಾಗಿದೆ. ಎಲ್ಲರೂ ತಮ್ಮನ್ನು ಅಪರಾಧಿ ಎಂದೇ ನೋಡುವಂತಾಗಿದೆ ಎನ್ನುತ್ತಾರೆ ಅವರು.
ಫವಾದ್ ಎಂಬ ಇನ್ನೊಬ್ಬರು ಅಝಂಗಢದಲ್ಲಿ ಸಾಮಾನ್ಯ ಸೇವಾ ಕೇಂದ್ರವನ್ನು ನಿರ್ವಹಿಸುತ್ತಿದ್ದವರು. ಸಾಮಾನ್ಯ ಸೇವಾ ಕೇಂದ್ರಗಳು ಬಹುತೇಕ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಇರುವ ಸೌಲಭ್ಯಗಳಾಗಿವೆ. ಅಲ್ಲಿ ನಾಗರಿಕರು ಸರಕಾರದ ಆನ್‌ಲೈನ್ ಸೇವೆಗಳು ಮತ್ತು ಕಲ್ಯಾಣ ಯೋಜನೆಗಳಿಗೆ ನೋಂದಾಯಿಸಿಕೊಳ್ಳಬಹುದು. ಫವಾದ್ ಕಳೆದ ವರ್ಷ ಜೂನ್‌ನಲ್ಲಿ ಅಝಂಗಡ ಬಳಿಯ ತಮ್ಮ ಗ್ರಾಮದಲ್ಲಿ ಪ್ರಧಾನ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅದಕ್ಕಾಗಿ ಅವರು ಗ್ರಾಮದ ಕೆಲವು ಪ್ರಬಲ ವ್ಯಕ್ತಿಗಳ ವಿರೋಧಕ್ಕೆ ತುತ್ತಾದರು. ಚುನಾವಣೆಯಲ್ಲಿ ಅವರು ಸೋತ ಬಳಿಕ ಗೋಹತ್ಯೆಯ ಆರೋಪ ಹೊರಿಸಲಾಯಿತು ಮತ್ತು ಪೊಲೀಸರು ಬಂಧಿಸಿದರು. ಆರು ತಿಂಗಳು ಬಂಧನದಲ್ಲಿ ಕಳೆದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ಇದಾದ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಅವರಿಗೆ ಗೂಂಡಾ ಕಾಯ್ದೆಯಡಿ ನೋಟಿಸ್ ಕಳುಹಿಸಿದ್ದಾರೆ. ಈ ಪ್ರದೇಶದಲ್ಲಿ ಅಪರಾಧ ವರದಿಯಾದಾಗಲೆಲ್ಲಾ ಸ್ಥಳೀಯ ಪೋಲೀಸರು ಅವರ ಮನೆಗೆ ನುಗ್ಗುತ್ತಾರೆ. ಘಟನೆ ನಡೆದ ಸಮಯದಲ್ಲಿ ಅವರು ಎಲ್ಲಿದ್ದರು ಎಂಬ ಪ್ರಶ್ನೆಯನ್ನು ಕೇಳುತ್ತಾರೆ.
ಯಾವ ತಪ್ಪನ್ನು ಮಾಡದಿದ್ದರೂ, ಎಲ್ಲ ಸ್ಪಷ್ಟ ದಾಖಲೆಗಳನ್ನು ಹೊಂದಿದ್ದರೂ, ತಮ್ಮನ್ನು ಸಾಮಾನ್ಯ ಅಪರಾಧಿಯಂತೆ ನಡೆಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಅವರು.
ಅಂತಿಮವಾಗಿ ಕಿರುಕುಳದಿಂದ ತಪ್ಪಿಸಿಕೊಳ್ಳಲು ಫವಾದ್ ಮನೆಯನ್ನೇ ತೊರೆದರು. ಅವರು ಈಗ ಅಝಂಗಢ ನಗರದ ಮಾರುಕಟ್ಟೆಯಲ್ಲಿ ತಮ್ಮ ಸಾಮಾನ್ಯ ಸೇವಾ ಕೇಂದ್ರವನ್ನು ನಡೆಸುತ್ತಿದ್ದಾರೆ.
ಸ್ಥಳಾಂತರಗೊಂಡ ನಂತರ, ಪೊಲೀಸ್ ಕಿರುಕುಳ ಮತ್ತು ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ವಿಚಾರಣೆ ನಿಲ್ಲಿಸಲಾಗಿದೆ ಎಂದು ಹೇಳುತ್ತಾರೆ.
ಗಂಭೀರ ಪ್ರಸಾದ್ ಎಂಬವರು ಸೋನಭದ್ರ ಜಿಲ್ಲೆಯ ಕೊರ್ಚಿ ಗ್ರಾಮದ ಮಾಜಿ ಪ್ರಧಾನರು. ಅವರು ಜನಪರ ಹೋರಾಟಗಾರ. ನೀರಾವರಿ ಯೋಜನೆಗಾಗಿ ರಾಜ್ಯ ಸರಕಾರ ಸೋನಭದ್ರಾದಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಗೆ ನ್ಯಾಯಯುತ ಪರಿಹಾರಕ್ಕಾಗಿ ಜನರ ಚಳವಳಿಯಲ್ಲಿ 2002ರಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವುದಾಗಿ ಹೇಳುತ್ತಾರೆ.
ಅವರ ಪ್ರಕಾರ, ಡಿಸೆಂಬರ್ 2014ರಲ್ಲಿ ಚಳವಳಿಯನ್ನು ಹತ್ತಿಕ್ಕಲು ಪೊಲೀಸರು ಕೆಲವು ಪ್ರತಿಭಟನಾಕಾರರೊಂದಿಗೆ ಘರ್ಷಣೆ ಬಳಿಕ ಅವರನ್ನೂ ಸೇರಿಸಿದಂತೆ ಹಲವಾರು ಕಾರ್ಯಕರ್ತರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿದರು. ಆ ಡಿಸೆಂಬರ್‌ನಿಂದ 2015ರ ಎಪ್ರಿಲ್‌ವರೆಗೆ ಗಲಭೆ, ಕಾನೂನುಬಾಹಿರ ಸಭೆಯ ಸದಸ್ಯತ್ವ, ಕೊಲೆಗೆ ಯತ್ನ, ಸಾರ್ವಜನಿಕ ಅಧಿಕಾರಿಗೆ ನೋವುಂಟುಮಾಡುವುದು ಮತ್ತು ಡಕಾಯಿತಿ ಮುಂತಾದ ಅಪರಾಧಗಳನ್ನು ಒಳಗೊಂಡ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಅವರ ವಿರುದ್ಧ ಕೇಸ್ ಹಾಕಲಾಯಿತು.