ಧ್ವನಿ ಇಲ್ಲದವರ ಧ್ವನಿಯಾಗಿ ‘ವಾರ್ತಾಭಾರತಿ’ ಮುನ್ನಡೆಯುತ್ತಿದೆ

Update: 2024-08-29 09:28 GMT

ರಾಜ್ಯದಲ್ಲಿ ಹತ್ತಾರು ರಾಜ್ಯಮಟ್ಟದ ದಿನ ಪತ್ರಿಕೆಗಳು ಜನರಿಗೆ ಸುದ್ದಿಗಳನ್ನು ಒದಗಿಸುತ್ತಿವೆ. ಹಲವು ಪತ್ರಿಕೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ಕಾರ್ಯನಿರ್ವಹಿಸುತ್ತಿರುವುದು ಅಪರೂಪವಾಗಿದೆ. ಇಂತಹ ಪತ್ರಿಕೆಗಳ ನಡುವೆ ವಿಶೇಷ ಪತ್ರಿಕೆಯಾಗಿ ಕಾಣುವ ವಾರ್ತಾಭಾರತಿ ರಾಜ್ಯಮಟ್ಟದ ದಿನ ಪತ್ರಿಕೆ ಎನ್ನುವುದು ಹೆಮ್ಮೆಯ ವಿಷಯ. ವಾರ್ತಾ ಭಾರತಿ ಪತ್ರಿಕೆಯು ಮೊದಲಿಗೆ ಕೇವಲ ಕರಾವಳಿ ಪ್ರದೇಶಕ್ಕೆ ಮಾತ್ರ ಸಿಮೀತವಾಗಿ, ಇಂದು ಹಂತ ಹಂತವಾಗಿ ಬೆಂಗಳೂರು, ಮಂಗಳೂರು, ಶಿವಮೊಗ್ಗ ಭಾಗದಲ್ಲಿ ಏಕ ಕಾಲಕ್ಕೆ ಮುದ್ರಣಗೊಳ್ಳುತ್ತಿರುವುದು ಸಂತೋಷದ ವಿಷಯವಾಗಿದೆ. ಇಂತಹ ಪತ್ರಿಕೆ ಪ್ರಕಟಣೆಯಾಗಿ 21 ವಸಂತಗಳನ್ನು ಪೂರೈಸಿದೆ ಎನ್ನುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ವಾರ್ತಾಭಾರತಿ ಪತ್ರಿಕೆಯು ನೂರಾರು ವರ್ಷ ಮುದ್ರಣವಾಗಲಿ, ಅತ್ಯಂತ ಯಶಸ್ವಿ ಪತ್ರಿಕೆಯಾಗಿ ಮುಂದುವರಿಯಲಿ ಎನ್ನುವುದು ಬಹುತೇಕ ಜನರ ಅಭಿಪ್ರಾಯವಾಗಿದೆ. ಕಳೆದ ಎರಡೂವರೆ ದಶಕದಿಂದ ಪತ್ರಿಕೆಯನ್ನು ಎಡೆಬಿಡದೆ ಮುದ್ರಣ ಮಾಡಿಕೊಂಡು ಬಂದಿರುವ ಪತ್ರಿಕೆಯ ಆಡಳಿತ ಮಂಡಳಿಯು ಅಭಿನಂದನಾರ್ಹವಾದದ್ದು.

ವಸ್ತುನಿಷ್ಠ ವರದಿಯ ಪತ್ರಿಕೆಯಾಗಿ ವಾರ್ತಾಭಾರತಿ ಇಂದು ರಾಜ್ಯದಲ್ಲಿ ಪ್ರಚಲಿತದಲ್ಲಿದೆ. ವಾರ್ತಾಭಾರತಿ ಪತ್ರಿಕೆಯಲ್ಲಿ ಸುದ್ದಿ ಬಂದಿರುವುದನ್ನು ಸರಕಾರ ಮತ್ತು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕಾರ್ಯನಿರ್ವಹಿಸುತ್ತಿರುವುದನ್ನು ಕಾಣಬಹುದಾಗಿದೆ. ಸರಕಾರ ಯಾವುದಿದ್ದರೂ ಪ್ರಾಮಾಣಿಕ ಸುದ್ದಿಗಳನ್ನು ಯಾವುದೇ ಅಳುಕು ಇಲ್ಲದೆ, ಪೂರ್ವಗ್ರಹವಿಲ್ಲದೆ ಮುದ್ರಿಸುವುದು ಇಂದಿನ ಕಾಲಘಟ್ಟದಲ್ಲಿ ಸಂಕಷ್ಟದ ಕೆಲಸ. ಅಂತಹ ಕೆಲಸವನ್ನು ‘ವಾರ್ತಾಭಾರತಿ’ ಮಾಡುತ್ತಿದೆ ಎಂದು ಹೇಳಬಹುದು. ವಾರ್ತಾಭಾರತಿ ಪತ್ರಿಕೆಯ ವಸ್ತುನಿಷ್ಠ ವರದಿಗಾಗಿಯೇ ಕೆಲವು ಸಂಘಟನೆಗಳು ಪತ್ರಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿರಂತರ ದಾಳಿ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇಷ್ಟಾದರೂ ಪತ್ರಿಕೆ ತನ್ನ ಬದ್ಧತೆ ಬಿಟ್ಟುಕೊಟ್ಟಿಲ್ಲ. ಧ್ವನಿ ಇಲ್ಲದವರ ಧ್ವನಿಯಾಗಿ ಪತ್ರಿಕೆ ಮುನ್ನಡೆಯುತ್ತಿರುವುದು ಸಹ ಕೆಲವೊಬ್ಬರಿಗೆ ಸಂಕಟವಾಗುತ್ತಿದೆ ಎನ್ನಬಹುದು. ವಿಶೇಷವಾಗಿ ಬಲಪಂಥೀಯ ಸಂಘಟನೆಗಳಿಗೆ ‘ವಾರ್ತಾಭಾರತಿ’ ಪತ್ರಿಕೆ ನುಂಗಲಾರದ ತುತ್ತಾಗಿದೆ. ಬಹುತೇಕ ಪತ್ರಿಕೆಗಳು ಅವರ ಮುಖವಾಣಿಯಾಗಿ ಸುದ್ದಿ ಬರೆಯುವಾಗ ‘ವಾರ್ತಾಭಾರತಿ’ ಮಾತ್ರ ವಿಶೇಷ ಎನ್ನುವಂತೆ ಅವರ ಹುಳುಕುಗಳನ್ನು ಜನರ ಮುಂದಿಡುವಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಬಹುದು.

ವಾರ್ತಾ ಭಾರತಿ ಪತ್ರಿಕೆಯ ವಿಶೇಷವೆಂದರೆ ರಾಜ್ಯಮಟ್ಟದ ಪತ್ರಿಕೆಯಾದರೂ ಹೊಸಬರಿಗೆ ಲೇಖನಗಳನ್ನು ಬರೆಯಲು ಪ್ರೋತ್ಸಾಹಿಸಿ, ಮುನ್ನಡೆಸಿಕೊಂಡು ಹೋಗುತ್ತಿರುವುದು, ಈ ಪತ್ರಿಕೆಯ ಮೂಲಕ ನೂರಾರು ಯುವಕರು, ಪ್ರಗತಿಪರರು, ವಿಜ್ಞಾನಿಗಳು, ಸಾಮಾಜಿಕ ಕಾರ್ಯಕರ್ತರು, ಸಾಮಾಜಿಕ ವಿಜ್ಞಾನಿಗಳು, ಶಿಕ್ಷಕರು, ಹೋರಾಟಗಾರರು ಉತ್ತಮ ಲೇಖಕರಾಗಿ ಹೊರಹೊಮ್ಮಿದ್ದಾರೆ. ಪತ್ರಿಕೆಯ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಷಯಗಳನ್ನು ಸಾರ್ವಜನಿಕರಿಗೆ ಮತ್ತು ಸರಕಾರಗಳಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿವಿಧ ವಿಷಯಗಳ ಪರಿಣಿತರು ಲೇಖನಗಳನ್ನು ಬರೆದು ದೇಶದ ಜನರಿಗೆ ವಿಷಯಗಳ ಗಂಭೀರತೆಯನ್ನು ಅರಿತುಕೊಳ್ಳಲು ‘ವಾರ್ತಾಭಾರತಿ’ ಪತ್ರಿಕೆಯು ಬಹುದೊಡ್ಡ ಕಾರ್ಯವನ್ನು ಮಾಡುತ್ತಾ ಬಂದಿದೆ. ನನ್ನಂತಹ ಹೋರಾಟಗಾರನಿಗೆ ಸಾರ್ವಜನಿಕರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವಲ್ಲಿ ಲೇಖನಗಳ ಮೂಲಕ ಪತ್ರಿಕೆ ನೀಡಿದಂತಹ ಸದವಕಾಶ ಎಂದೂ ಮರೆಯಲು ಸಾಧ್ಯವಿಲ್ಲ. ನನ್ನಂತಹ ನೂರಾರು ಹೊಸ ಮುಖಗಳಿಗೆ ‘ವಾರ್ತಾಭಾರತಿ’ ಲೇಖನಗಳನ್ನು ಬರೆಯಲು ಅವಕಾಶ ನೀಡಿರುವುದು, ಸಮಾಜವನ್ನು ಅರ್ಥಮಾಡಿಕೊಳ್ಳಲು ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಂತಾಗಿದೆ. ಯುವಕರಿಗೆ, ವಿಷಯ ತಜ್ಞರಿಗೆ, ಪ್ರಗತಿಪರರಿಗೆ, ಹೋರಾಟಗಾರರಿಗೆ ಒಂದು ವೇದಿಕೆಯಾಗಿ ‘ವಾರ್ತಾಭಾರತಿ’ ಕೆಲಸ ಮಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.

ವಾರ್ತಾಭಾರತಿ ಪತ್ರಿಕೆಯು ರಾಜ್ಯ ಮತ್ತು ರಾಷ್ಟ್ರದ ಹಿತಾಸಕ್ತಿ ಹೊಂದಿರುವ ಸುದ್ದಿಗಳನ್ನು ಮುಖ ಪುಟದಲ್ಲಿ ಪ್ರಕಟಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದ ಕಣ್ಣುತೆರೆಸುವ ಕೆಲಸಗಳನ್ನು ಮಾಡಿದೆ. ಇದರ ಮೂಲಕ ಗಂಭೀರ ವಿಷಯಗಳು ಸರಕಾರಗಳ ಗಮನ ಸೆಳೆಯಲು ಸಾಧ್ಯವಾಗಿದೆ. ಪತ್ರಿಕಾ ಮಾಧ್ಯಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೆಯ ಸ್ತಂಭವೆಂದು ಕರೆದುಕೊಳ್ಳುವಾಗ ಆಡಳಿತ ಪಕ್ಷಗಳನ್ನು ಸರಿದಾರಿಗೆ ತರುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸಬೇಕಾಗುತ್ತದೆ. ಅಂತಹ ಕೆಲಸವನ್ನು ವಾರ್ತಾಭಾರತಿ ಪತ್ರಿಕೆ ಮಾಡುತ್ತಿದೆ ಎಂದು ನಿಸ್ಸಂಕೋಚವಾಗಿ ಹೇಳಬಹುದು. ಇಂದು ಬಹುತೇಕ ಮಾಧ್ಯಮವನ್ನು ಜನರು ನಂಬುವಂತಹ ಸ್ಥಿತಿಯಲ್ಲಿ ಇಲ್ಲದೇ ಇರುವಾಗ, ವಾರ್ತಾಭಾರತಿ ಪತ್ರಿಕೆ ಸೆಟೆದು ನಿಂತಿರುವುದು ಎಲ್ಲರೂ ಹುಬ್ಬೇರುವಂತೆ ಮಾಡಿದೆ. ದೇಶದ ಜನರು ಮಾಧ್ಯಮವನ್ನು ‘ಗೋದಿ ಮೀಡಿಯಾ’ ಎಂದು ಹೀಯಾಳಿಸುತ್ತಿರುವಾಗ, ವಾರ್ತಾಭಾರತಿ ಪತ್ರಿಕೆ ಜನರ ಧ್ವನಿಯಾಗಿ ಗಟ್ಟಿಯಾಗಿ ನಿಂತಿರುವುದು ಸಹ ಓದುಗರ ಮೆಚ್ಚುಗೆ ಪಡೆದಿದೆ.

ಪತ್ರಿಕೆಯಲ್ಲಿ ಪ್ರಕಟವಾಗುವ ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ ಸುದ್ದಿಗಳು ಯಾವುದೇ ಪತ್ರಿಕೆಗಳಲ್ಲಿ ಕಾಣಸಿಗುವುದಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಬಹುತೇಕ ಪತ್ರಿಕೆಗಳು ಜಿಲ್ಲಾ ಪತ್ರಿಕೆಗಳಾಗಿ ಮಾರ್ಪಾಡಾಗಿದ್ದು, ಇಂತಹವುಗಳ ನಡುವೆಯೇ ವಾರ್ತಾಭಾರತಿ ಪತ್ರಿಕೆ ವಿಭಾಗ ಮಟ್ಟದ ಸುದ್ದಿಗಳನ್ನು ಗಂಭೀರವಾಗಿ ಪ್ರಕಟಿಸುವ ಮೂಲಕ ಪ್ರಾದೇಶಿಕ ಸುದ್ದಿಗಳಿಗೆ ಆದ್ಯತೆ ನೀಡುತ್ತಿದೆ. ವಸ್ತುನಿಷ್ಠವಾಗಿ ಸುದ್ದಿ ಪ್ರಕಟಿಸುವಾಗ ಆಡಳಿತ ಸರಕಾರಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಎದೆಗುಂದದೆ ಮುನ್ನಡೆಯುವುದು ಅತ್ಯಂತ ಸವಾಲಿನ ಕೆಲಸವಾಗುತ್ತದೆ. ಅದೆಲ್ಲವನ್ನೂ ಮೆಟ್ಟಿ ನಿಂತಿರುವುದು ‘ವಾರ್ತಾಭಾರತಿ’ಯ ವಿಶೇಷತೆ. ಸರಕಾರದಲ್ಲಿ ಒಳಗೆ ನಡೆಯುವ ವಿಚಾರಗಳನ್ನು ಸಾಕ್ಷಿ ಸಮೇತ ಸಾರ್ವಜನಿಕರ ಮುಂದಿಡುವ ಕೆಲಸವನ್ನು ಸಹ ‘ವಾರ್ತಾಭಾರತಿ’ ಮಾಡಿದೆ.

ಪತ್ರಿಕೆಯ ಪ್ರಧಾನ ಸಂಪಾದಕರ ಶ್ರಮ, ಬದ್ಧತೆ ಮತ್ತು ನಿಷ್ಠುರವಾದಿತನ ಶ್ಲಾಘನೀಯವಾದದ್ದು. ಒಂದು ಪತ್ರಿಕೆ ನಡೆಸುವುದು ಅತ್ಯಂತ ಸವಾಲಿನ ಕೆಲಸವಾಗಿರುವಾಗ ಯಶಸ್ವಿಯಾಗಿ 21 ವಸಂತಗಳನ್ನು ಪೂರೈಸಿರುವ ‘ವಾರ್ತಾಭಾರತಿ’ ಪತ್ರಿಕೆಯು ಅದೇ ಬದ್ಧತೆಯೊಂದಿಗೆ ರಾಜ್ಯದ ಮೂಲೆ ಮೂಲೆಗೂ ವಿಸ್ತರಣೆಯಾಗಲಿ. ಇತರ ಭಾಷೆಗಳಾದ ಉರ್ದು, ಆಂಗ್ಲ, ಮಲಯಾಳಂ, ಮರಾಠಿ ಭಾಷೆಗಳಲ್ಲಿಯೂ ಪ್ರಕಟಣೆಯಾಗಲಿ, ಓದುಗರ ಸಂಖ್ಯೆ ಹೆಚ್ಚಾಗುವುದರ ಮೂಲಕ ನಂಬರ್ ಒನ್ ಪತ್ರಿಕೆಯಾಗಿ ಹೊರಹೊಮ್ಮಲಿ ಎಂದು ಹಾರೈಸೋಣ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಝಾಕ್ ಉಸ್ತಾದ

contributor

Similar News