ಪ್ರಜಾಪ್ರಭುತ್ವದ ಗೆಲುವು
ಮಾನ್ಯರೇ,
1. ಜನವರಿ 30ರಂದು ಚಂಡಿಗಡ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ನಡೆದಿತ್ತು. ಆಪ್ ಮತ್ತು ಕಾಂಗ್ರೆಸ್ ಜಂಟಿಯಾಗಿಯೂ ಬಿಜೆಪಿ ಏಕಾಂಗಿಯಾಗಿಯೂ ಅಭ್ಯರ್ಥಿಯನ್ನು ಕಣಕ್ಕಿಳಿಸಿದವು. ಆಗ ಆಪ್ ಮತ್ತು ಕಾಂಗ್ರೆಸ್‌ನ ಮತಗಳನ್ನು ಚುನಾವಣಾಧಿಕಾರಿ ಅಮಾನ್ಯಗೊಳಿಸಿದ ಕಾರಣ ಬಿಜೆಪಿಯ ಅಭ್ಯರ್ಥಿ 16 ಮತಗಳನ್ನು ಪಡೆದು 12 ಮತ ಪಡೆದ ಆಪ್‌ನ್ನು ಸೋಲಿಸಿತ್ತು. ಆದರೆ ಮತ ಅಸಿಂಧುವಾಗಿರುವುದರಿಂದ ಆಪ್ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ದೇಶದ ಯಾವುದೇ ಸಂಸ್ಥೆಗಳ ಚುನಾವಣೆಗೆ ಎಚ್ಚರಿಕೆ ಸಂದೇಶ ನೀಡಲಾದ ಅತ್ಯಂತ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸಿದ್ದು, ಚಂಡಿಗಡದ ಮೇಯರ್ ಚುನಾವಣೆಯ ಫಲಿತಾಂಶವನ್ನು ರದ್ದುಗೊಳಿಸಿದೆಯಲ್ಲದೆ ಪರಾಜಿತ ಆಪ್-ಕಾಂಗ್ರೆಸ್ ಮೈತ್ರಿಯ ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ನಗರಪಾಲಿಕೆಯ ಹೊಸ ಮೇಯರ್ ಆಗಿ ಘೋಷಿಸಿದೆ. ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರ ದುರ್ವರ್ತನೆ ಬಗ್ಗೆ ಕಟುವಾದ ಕ್ರಮವಹಿಸಬೇಕೆಂದು ಕೋರ್ಟ್ ಆದೇಶಿಸಿದೆ.
2. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಚುನಾವಣಾ ಬಾಂಡ್‌ಗಳ ವಿಚಾರವು ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟಿನ ಪಂಚ ಪೀಠ ಕಳೆದ ವಾರ ನೀಡಿದ ತೀರ್ಪಿನ ಬೆನ್ನಲ್ಲೇ ಈ ತೀರ್ಪು ಬಂದಿರುವುದು ಕೇಂದ್ರದ ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಿದೆ.
3. ಬಿಲ್ಕಿಸ್‌ಬಾನು ಅತ್ಯಾಚಾರ ಪ್ರಕರಣದಲ್ಲಿ ಗುಜರಾತ್ ಸರಕಾರವು 11 ಮಂದಿ ಅಪರಾಧಿಗಳಿಗೆ ಕ್ಷಮದಾನ ನೀಡಿ ಅವರನ್ನು ಕಾರಾಗೃಹದಿಂದ ಬಿಡುಗಡೆಗೊಳಿಸಿದ ವೇಳೆ ಕೆಲವು ಮಹಿಳೆಯರು ತಿಲಕವಿಟ್ಟು, ಹೂವಿನ ಹಾರ ಹಾಕಿ, ಸಿಹಿತಿಂಡಿ ಹಂಚಿದ್ದರು. ಈ ವಿಚಾರದಲ್ಲ್ ಗುಜರಾತ್ ಸರಕಾರಕ್ಕೆ ಹಾಗೂ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಸಾರ್ವಜನಿಕವಾಗಿ ಮಂಗಳಾರತಿ ಎತ್ತಿದೆ. ತಪ್ಪಿತಸ್ಥರು ಯಾವುದೇ ಕಾರಣಕ್ಕೂ ಬಿಡುಗಡೆ ಆಗಬಾರದು, ಜೀವನಪರ್ಯಂತ ಶಿಕ್ಷೆ ಅನುಭವಿಸಬೇಕು ಎಂದು ಕನ್ನಡತಿಯಾದ ಮಾನ್ಯ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಅವರು ಈ ಪ್ರಕರಣದಲ್ಲಿ ನ್ಯಾಯ ಒದಗಿಸಿ ‘ರತ್ನ’ವಾಗಿ ಪ್ರಕಾಶಿಸುತ್ತಿದ್ದಾರೆ.
ದೇಶದ ಸಾಂವಿಧಾನಿಕ ಸಂಸ್ಥೆಗಳು ದಾಳಿಗೀಡಾಗುತ್ತಿರುವ ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟಿನ ಈ ತೀರ್ಪುಗಳು ಐತಿಹಾಸಿಕವಾಗಿದೆ. ಸತ್ಯದ ಕಡೆಗೂ ಗೆಲುವು ಲಭಿಸಿದೆ. ಈ ಮೂರೂ ತೀರ್ಪುಗಳು ಪ್ರಜಾಪ್ರಭುತ್ವದ ಗೆಲುವು ಆಗಿದೆ.