ಹಿಂದುತ್ವದ ವಾದಕ್ಕೆ ವಿರುದ್ಧದ ವಿವೇಕಾನಂದರ ಚಿತ್ರಣ
ಗೋವಿಂದ್ ಅವರ ನಿರೂಪಣೆಯಲ್ಲಿ ವಿವೇಕಾನಂದರು ಒಳಗಿನವರಾ ಗಿದ್ದುಕೊಂಡೇ ವಿಮರ್ಶಿಸಬಲ್ಲವರೂ ಹಿಂದೂ ಧಾರ್ಮಿಕ ಚಿಂತನೆಯ ಪ್ರಬಲ ವಕ್ತಾರರೂ ಆಗಿ ಚಿತ್ರಿತಗೊಂಡಿದ್ದಾರೆ. ಆಗಿನ ಒಟ್ಟು ಸನ್ನಿವೇಶವೇ ಅವರು ಸಾರ್ವತ್ರಿಕ ಧರ್ಮದ ಪರಿಕಲ್ಪನೆಯ ಕಡೆಗೆ ಹೊರಳುವಂತೆ ಮಾಡಿದ್ದಿರಬಹುದು. ಈ ವಿವೇಕಾನಂದರ ಬಗ್ಗೆ ಓದುವುದು ಹೃದಯ ವಿಕಸನದ ಪ್ರಕ್ರಿಯೆಯಾಗಿದೆ. ಇದು ಭರವಸೆಯನ್ನು ಸಾಧ್ಯವಾಗಿಸುವಂತಿದೆಯೇ ಹೊರತು ಬೇಡವಾದುದನ್ನು ಹೇರುವ ರೀತಿಯಂತಲ್ಲ.
ಆತ್ಮೀಯ ಮಿಸ್ ನೋಬಲ್,
ಭಾರತದ ದಮನಿತ ಸಮುದಾಯದ ಪರವಾಗಿ ಮಾಡಲು ನಿಮಗೊಂದು ಸ್ವಲ್ಪ ಮುಖ್ಯವಾದ ಕೆಲಸ ವಹಿಸುತ್ತಿದ್ದೇನೆ. ನಿಮಗೆ ನಾನು ಪರಿಚಯಿಸುತ್ತಿರುವ ಇಲ್ಲಿನ ಮಲಬಾರ್ ರಾಜ್ಯದ ಈಳವ ಜಾತಿಗೆ ಸೇರಿರುವ ಆ ವ್ಯಕ್ತಿ ಇಂಗ್ಲೆಂಡ್‌ನಲ್ಲಿದ್ದಾರೆ. ಕೇವಲ ಜಾತಿಯ ಕಾರಣದಿಂದ ಆ ಬಡವರ ಮೇಲೆ ಎಂತಹ ದಬ್ಬಾಳಿಕೆ ನಡೆಯುತ್ತಿದೆ ಎಂಬುದನ್ನು ಅವರೇ ನಿಮಗೆ ಹೇಳಲಿದ್ದಾರೆ. ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಕೂಡದೆಂಬ ಕಾರಣದಿಂದ ಭಾರತ ಸರಕಾರ ಮಧ್ಯಪ್ರವೇಶಕ್ಕೆ ನಿರಾಕರಿಸಿದೆ. ಈ ಜನರ ಏಕೈಕ ಭರವಸೆ ಇಂಗ್ಲೆಂಡ್ ಸಂಸತ್ತು. ಈ ವಿಷಯ ಬ್ರಿಟಿಷ್ ಸರಕಾರದ ಮುಂದೆ ಬರುವಂತಾಗಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸಿ.
ಸತ್ಯದಲ್ಲಿ ಎಂದೆಂದಿಗೂ ನಿಮ್ಮ,
ವಿವೇಕಾನಂದ
ಇದು ಸ್ವಾಮಿ ವಿವೇಕಾನಂದರು ತಮ್ಮ ಗೆಳತಿ, ಶಿಷ್ಯೆ ಮಾರ್ಗರೆಟ್ ನೋಬಲ್ (ಆನಂತರ ಆಕೆ ಸೋದರಿ ನಿವೇದಿತಾ ಎಂದು ಬದಲಾಗುತ್ತಾರೆ) ಅವರಿಗೆ 1897ರ ಎಪ್ರಿಲ್ 3ರಂದು ಡಾರ್ಜಿಲಿಂಗ್‌ನಿಂದ ಬರೆದಿದ್ದ ಪತ್ರ.
ಜಾತಿ ವಿರೋಧಿ ನಿಲುವಿಗೆ ಅವರೆಷ್ಟು ಪ್ರಾಮುಖ್ಯತೆ ಕೊಟ್ಟಿದ್ದರು ಮತ್ತು ಕೆಳ ಜಾತಿಗಳಿಗೆ ಸಾಮಾಜಿಕ ನ್ಯಾಯವನ್ನು ನಿರಾಕರಿಸಲಾಗಿರುವುದು ಭಾರತೀಯರ ಅಥವಾ ಹಿಂದೂಗಳ ಆಂತರಿಕ ಸಮಸ್ಯೆ ಎಂದು ನೋಡಲಾಗದು ಎಂಬ ನಂಬಿಕೆ ಪಶ್ಚಿಮದ ಕಡೆಗಿನ ಅವರ ದೃಷ್ಟಿಕೋನ ಎಂತಹದಿತ್ತು ಎಂಬುದಕ್ಕೆ ಒಂದು ನಿದರ್ಶನ. ಈಳವರ ವಿರುದ್ಧದ ತಾರತಮ್ಯ ವಿಚಾರವನ್ನು 1897ರ ಜುಲೈ 19ರಂದು ಬ್ರಿಟಿಷ್ ಸಂಸತ್ತಿನಲ್ಲಿ, ಆಗ ವಿರೋಧ ಪಕ್ಷದವರಾಗಿದ್ದ ಲಿಬರಲ್ ಸಂಸದ ಹರ್ಬರ್ಟ್ ರಾಬರ್ಟ್ಸ್ ಎತ್ತಿದ್ದರು.
ಕೇರಳದ ಈಳವರಲ್ಲಿ ರಾಜಕೀಯ- ಸಾಂಸ್ಕೃತಿಕ ಮತ್ತು ಸಾಮಾಜಿಕ-ಆರ್ಥಿಕ ಜಾಗೃತಿ ಮೂಡಿಸಿದ್ದ ಡಾ. ಪದ್ಮನಾಭನ್ ಪಲ್ಪು ಹಾಗೂ ವಿವೇಕಾನಂದರ ಕೃತಿಯ ಅನುವಾದಕರಾಗಿದ್ದ ಈಳವ ಸಮುದಾಯದ ಕವಿ ಮತ್ತು ಸಮಾಜ ಸುಧಾರಕ ಕುಮಾರನ್ ಆಶಾನ್ ಅವರೊಂದಿಗೆ ಸಂವಹನದಲ್ಲಿದ್ದ ವಿವೇಕಾನಂದರು, ಕೇರಳದ ಪ್ರಗತಿಪರ, ಜಾತಿ ವಿರೋಧಿ ಸಮಾಜವಾದಿ ಧೋರಣೆಗೆ ಜೊತೆಯಾಗಿದ್ದರು.
ಆದರೆ ವಿವೇಕಾನಂದರು ಸಂಘ ಪರಿವಾರದ ಐಕಾನ್ ಎಂಬಂತೆ ಕಾಣಲಾಗುವ ಉತ್ತರ ಭಾರತದಲ್ಲಿ ಇದನ್ನು ನಂಬುವುದು ಕಷ್ಟ. ತನಗೆ ಬೇಕಾದಂತೆ ನಿರಂತರ ಪುನರಾವರ್ತಿತ ಪ್ರಚಾರದ ಮೂಲಕ ಸಂಘ ಪರಿವಾರ ಇಂಥದೊಂದು ಸನ್ನಿವೇಶವನ್ನು ಸೃಷ್ಟಿಸಿಬಿಟ್ಟಿದೆ. ಸಂಘ ಪರಿವಾರದ ಈ ನಡೆಯ ಬಗ್ಗೆ ಗೋವಿಂದ್ ಕೃಷ್ಣನ್ ಅವರು Vivekananda, the Philosopher of Freedom ಎಂಬ ತಮ್ಮ ಇತ್ತೀಚಿನ ಕೃತಿಯಲ್ಲಿ ಚರ್ಚಿಸುವ ಪ್ರಯತ್ನ ಮಾಡಿದ್ದಾರೆ.
ಗೋವಿಂದ್ ಅವರು ಅನುಸರಿಸಿರುವ ವಿಧಾನ ಸಾಕಷ್ಟು ಪರಿಣಾಮಕಾರಿಯಾಗಿದೆ. ಅವರು ನಮ್ಮ ಕಾಲದ ರಾಜಕೀಯ ಘಟನೆಗಳು ಮತ್ತು ಬೆಳವಣಿಗೆಗಳ ಚಿತ್ರಣವನ್ನು ಕೊಡುತ್ತಾರೆ ಮತ್ತು ಅವುಗಳಿಗೆ ಸೈದ್ಧಾಂತಿಕ ನೆಲೆಯನ್ನು ರೂಪಿಸುವ ಹಿಂದುತ್ವ ನಾಯಕರ ಸ್ಥಾನಮಾನಗಳನ್ನು ವಿವರಿಸುತ್ತಾರೆ. ನಂತರ ಅವರು ಐತಿಹಾಸಿಕ ಘಟನೆಗಳ ವಿಶ್ಲೇಷಣೆ ಮತ್ತು ಮಂಡನೆಯ ಮೂಲಕ ವಿವೇಕಾನಂದರ ಸ್ಥಾನವನ್ನು ವಿವರಿಸಲು ಆಧಾರವಾಗಿರುವ ರಾಜಕೀಯ ತತ್ವದ ಕಡೆಗೆ ಗಮನ ಸೆಳೆಯುತ್ತಾರೆ.
ವಿವೇಕಾನಂದರು ಮತ್ತು ಹಿಂದುತ್ವ ದೃಷ್ಟಿಕೋನದ ನಡುವಿನ ಮೊದಲ ವಿರೋಧಾಭಾಸವನ್ನು ಗೋವಿಂದ್ ಗುರುತಿಸುವುದು, ಹಿಂದುತ್ವವು ಮುಸ್ಲಿಮ್ ರಾಜರನ್ನೇ ಆಗಲಿ, ಬ್ರಿಟಿಷ್ ಸಾಮ್ರಾಜ್ಯವನ್ನೇ ಆಗಲಿ (ಹಿಂದೂ ಬಲಪಂಥೀಯರು ಅವರನ್ನು ಕ್ರೈಸ್ತರು ಎಂದು ಕರೆಯುತ್ತಾರೆ) ಹೊರಗಿನವರು ಎಂದು ದೂಷಿಸುತ್ತದೆ ಎಂಬುದನ್ನು ಗ್ರಹಿಸುವ ಮೂಲಕ. ವಿವೇಕಾನಂದರ ಪ್ರಕಾರ, ಅವನತಿಗೆ ಭಾರತದ ಪ್ರಬಲ ಜಾತಿಗಳು ಕಾರಣ. ಉನ್ನತ ಜಾತಿಯ ಮಂದಿ ದೇಶದ ಕೆಳವರ್ಗದ ಜನಸಮುದಾಯವನ್ನು ನಿರಂತರ ತುಳಿಯುತ್ತಲೇ ಹೋದರು, ಈ ಹಿಂಸೆಯ ಹೊತ್ತಿನಲ್ಲಿ ಅವರು ಬಡವರು ಕೂಡ ಮನುಷ್ಯರೇ ಆಗಿದ್ದಾರೆಂಬುದನ್ನು ಬಹುತೇಕ ಮರೆತಿದ್ದರು.
ಜಾತಿ ತಾರತಮ್ಯ ಮತ್ತು ಶೋಷಣೆಗೆ ವಿವೇಕಾನಂದರು ಹಿಂದೂ ಸಮಾಜವನ್ನು ಹೊಣೆಯಾಗಿಸುತ್ತಾರೆಯೇ ಹೊರತು ಹಿಂದೂ ಧರ್ಮವನ್ನಲ್ಲ. ಅವರ ಪ್ರಕಾರ, ಭೂಮಿಯ ಮೇಲಿನ ಯಾವುದೇ ಧರ್ಮವು ಹಿಂದುತ್ವದ ರೀತಿಯಲ್ಲಿ ಶ್ರೇಷ್ಠತೆಯ ಒತ್ತಡವನ್ನು ಹೇರುವುದಿಲ್ಲ ಮತ್ತು ಯಾವುದೇ ಧರ್ಮವು ಹಿಂದುತ್ವದ ಹಾಗೆ ಬಡವರು ಮತ್ತು ಕೆಳವರ್ಗದವರ ದಮನ ಮಾಡುವುದಿಲ್ಲ.
ಸಂಘ ಪರಿವಾರದ ನಿರೂಪಣೆಯಲ್ಲಿನ ವಿದೇಶಿ ಧರ್ಮಗಳ ಕುರಿತ ಗ್ರಹಿಕೆ ಹೊರಗಿನವರು ಎಂಬ ಭಾವನೆಯನ್ನು ಇನ್ನಷ್ಟು ಹೆಚ್ಚಿಸಿದೆ. ವಿವೇಕಾನಂದರು ಹಿಂದೂ ಪ್ರಾಬಲ್ಯ ಕುರಿತ ಧೋರಣೆಯನ್ನು ಒಪ್ಪುವುದಿಲ್ಲ ಮಾತ್ರವಲ್ಲ, ಅವರು ಸಂಕುಚಿತ ದೃಷ್ಟಿಕೋನವನ್ನು ಕೂಡ ಅಷ್ಟೇ ಸ್ಪಷ್ಟವಾಗಿ ವಿರೋಧಿಸುತ್ತಾರೆ. ವಿವೇಕಾನಂದರು ತಮ್ಮ ಪ್ರಯಾಣದ ವೇಳೆ ಜೊತೆಗಿರಿಸಿಕೊಳ್ಳುತ್ತಿದ್ದ ಎರಡು ಪುಸ್ತಕಗಳಲ್ಲಿ ಥಾಮಸ್ ಎ. ಕೆಂಪಿಸ್ ಅವರು ಬರೆದ ಕ್ರಿಶ್ಚಿಯನ್ ಮಿಸ್ಟಿಸಿಸಂ ಕುರಿತThe Imitation of Christ ಒಂದಾಗಿತ್ತು ಎಂಬುದನ್ನು ಗೋವಿಂದ್ ಹೇಳುತ್ತಾರೆ. ಕಡೆಗೆ ಅವರು ಆ ಪುಸ್ತಕವನ್ನು ‘ಈಶಾನುಸರಣ’ ಎಂದು ಬಂಗಾಳಿಗೆ ಅನುವಾದಿಸಿದ್ದರು. ಅಮೆರಿಕದಲ್ಲಿ ವಿವೇಕಾನಂದರ ಅನೇಕ ಉಪನ್ಯಾಸಗಳು ಯುನಿಟೇರಿಯನ್ ಚರ್ಚ್‌ಗಳಲ್ಲಿ ನಡೆದಿದ್ದರ ಬಗ್ಗೆಯೂ ಅದು ಹೇಳುತ್ತದೆ.
ಪಾಶ್ಚಿಮಾತ್ಯ ಕ್ರೈಸ್ತರು ಮತ್ತು ಮಿಷನರಿಗಳು ಇಸ್ಲಾಮ್ ಅನ್ನು ದೂರವಿಡಲು ಪ್ರಯತ್ನಿಸಿದಾಗ ಇಸ್ಲಾಮ್ ಧರ್ಮ ಬೋಧಿಸಿದ ಸಮಾನತೆಯ ದೃಷ್ಟಿಕೋನ ಮತ್ತು ಸಾರ್ವತ್ರಿಕ ಸಹ ಭಾವನೆಯನ್ನು ವಿವೇಕಾನಂದರು ಸಮರ್ಥಿಸಿದ ನಿದರ್ಶನಗಳನ್ನು ಗೋವಿಂದ್ ವಿವರಿಸುತ್ತಾರೆ. ಮೊಗಲ್ ವಾಸ್ತುಶೈಲಿ ಮತ್ತು ಸೌಂದರ್ಯದ ಬಗೆಗಿನ ಅವರ ಮೆಚ್ಚುಗೆ ಖಂಡಿತವಾಗಿಯೂ ಇತಿಹಾಸವನ್ನು ವರ್ತಮಾನದ ಸಮಾಧಿ ಎಂದು ಅರ್ಥೈಸುವ ಹಿಂದುತ್ವದ ಯೋಜನೆಗೆ ಅದು ಮದ್ದೆಂಬುದನ್ನು ಗ್ರಹಿಸಿದ್ದಾಗಿತ್ತು. ಕ್ರಿಸ್ಟೀನ್ ಗ್ರೀನ್‌ಫೀಲ್ಡ್ ಅವರ ಮಾತಿನಲ್ಲಿ ಹೇಳುವುದಾದರೆ, ಮೊಗಲರು ಸ್ವಾಮಿ ವಿವೇಕಾನಂದರ ಮೇಲೆ ಮೋಡಿ ಮಾಡಿದಂತೆ ತೋರುತ್ತಿತ್ತು. ಅವರು ಭಾರತೀಯ ಇತಿಹಾಸದ ಆ ಅವಧಿಯನ್ನು ಎಷ್ಟು ತೀವ್ರತೆಯಿಂದ ಚಿತ್ರಿಸಿದ್ದಾರೆಂದರೆ, ಅವರು ತಮ್ಮದೇ ಹಿಂದಿನ ಕಥೆಯನ್ನು ಹೇಳುತ್ತಿದ್ದಾರೇನೋ ಎಂದು ಆಗಾಗ ಅನ್ನಿಸುವ ಹಾಗಿದೆ. ಗೋವಿಂದ್ ಅವರು ವಿವೇಕಾನಂದರ ಬದುಕಿನಲ್ಲಿನ ಮುಸ್ಲಿಮ್ ಉಪಸ್ಥಿತಿಗಳನ್ನು ಉಲ್ಲೇಖಿಸುತ್ತಾರೆ. ಆಗ ಇದ್ದ ರೂಢಿಗೆ ವ್ಯತಿರಿಕ್ತವಾಗಿ ಅವರು ಮುಸ್ಲಿಮರ ಆತಿಥ್ಯವನ್ನು ಸ್ವೀಕರಿಸಿದ್ದರ ಬಗ್ಗೆ ಹೇಳುತ್ತಾರೆ.
ಗೋವಿಂದ್ ಅವರ ನಿರೂಪಣೆಯಲ್ಲಿ ವಿವೇಕಾನಂದರು ಒಳಗಿನವರಾ ಗಿದ್ದುಕೊಂಡೇ ವಿಮರ್ಶಿಸ ಬಲ್ಲವರೂ ಹಿಂದೂ ಧಾರ್ಮಿಕ ಚಿಂತನೆಯ ಪ್ರಬಲ ವಕ್ತಾರರೂ ಆಗಿ ಚಿತ್ರಿತಗೊಂಡಿದ್ದಾರೆ. ಆಗಿನ ಒಟ್ಟು ಸನ್ನಿವೇಶವೇ ಅವರು ಸಾರ್ವತ್ರಿಕ ಧರ್ಮದ ಪರಿಕಲ್ಪನೆಯ ಕಡೆಗೆ ಹೊರಳುವಂತೆ ಮಾಡಿದ್ದಿರಬಹುದು. ಈ ವಿವೇಕಾನಂದರ ಬಗ್ಗೆ ಓದುವುದು ಹೃದಯ ವಿಕಸನದ ಪ್ರಕ್ರಿಯೆಯಾಗಿದೆ. ಇದು ಭರವಸೆಯನ್ನು ಸಾಧ್ಯವಾಗಿಸುವಂತಿದೆಯೇ ಹೊರತು ಬೇಡವಾದುದನ್ನು ಹೇರುವ ರೀತಿಯಂತಲ್ಲ.
ಈ ಪುಸ್ತಕದ ಸಾಧನೆ ಏನೆಂದರೆ, 1893ರ ಚಿಕಾಗೋ ಭಾಷಣದ ಮುಕ್ತಾಯದ ಸಾಲುಗಳು ವಿವೇಕಾನಂದರು ತಮ್ಮ ಜೀವನ ಮತ್ತು ಕೆಲಸದ ಮೂಲಕ ಏನು ಮಾಡಲು ಪ್ರಯತ್ನಿಸುತ್ತಾರೆ ಎಂಬುದರ ಸೂಕ್ತ ಮತ್ತು ಸಮರ್ಪಕ ಸಾರವೆಂಬಂತೆ ಭಾಸವಾಗುತ್ತದೆ.
‘‘... ಈ ಸಂಸತ್ತಿನಲ್ಲಿ ಸೇರಿರುವ ಜಗತ್ತಿನ ವಿವಿಧ ಧರ್ಮಗಳ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಗ್ಗೆ ಮೊಳಗಿದ ಗಂಟೆಯು ಎಲ್ಲಾ ಮತಾಂಧತೆಗೆ, ಕತ್ತಿ ಅಥವಾ ಲೇಖನಿಯ ಮೂಲಕ ವ್ಯಕ್ತವಾಗುವ ಎಲ್ಲ ಕಿರುಕುಳಕ್ಕೆ ಮತ್ತು ಒಂದೇ ಗುರಿಯತ್ತ ಸಾಗುತ್ತಿರುವ ಸಹೋದರರ ನಡುವಿನ ಎಲ್ಲಾ ಅನುಚಿತ ಭಾವನೆಗಳಿಗೆ ಮರಣದಂಡನೆಯಾಗಿದೆ ಎಂದು ನಾನು ತೀವ್ರವಾಗಿ ನಂಬುತ್ತೇನೆ.’’
(ಎನ್.ಪಿ. ಆಶ್ಲೇ ದಿಲ್ಲಿಯ ಸೈಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಬೋಧಕರಾಗಿದ್ದಾರೆ.)