ವಕ್ಫ್ ಅದಾಲತ್ ಮೂಲಕ 1,921 ವಕ್ಫ್ ಆಸ್ತಿಗಳಿಗೆ ಖಾತಾ: ಕಾನೂನು ಹೋರಾಟದಿಂದ 200 ಎಕರೆ ವಕ್ಫ್ ಭೂಮಿ ಮರಳಿ ಪಡೆದ ಬೋರ್ಡ್

Update: 2024-10-21 08:30 GMT

ಬೆಂಗಳೂರು: ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಕಲ್ಯಾಣಕ್ಕಾಗಿ ಹಿರಿಯರು ದಾನ ನೀಡಿದ್ದ ಆಸ್ತಿಗಳಿಗೆ ಸೂಕ್ತ ದಾಖಲಾತಿಗಳನ್ನು ಸರಿಪಡಿಸಿ, ಸಂರಕ್ಷಣೆ ಮಾಡಿ, ಅದನ್ನು ಸಮುದಾಯದ ಸರ್ವಾಂಗೀಣ ಪ್ರಗತಿಗೆ ಬಳಸುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಆರಂಭಿಸಲಾಗಿರುವ ವಕ್ಫ್ ಅದಾಲತ್ ಮೂಲಕ ಈವರೆಗೆ ಖಾತಾ ಆಗಿಲ್ಲದ 1,921 ವಕ್ಫ್ ಆಸ್ತಿಗಳ ಖಾತಾ ಮಾಡಿಸಲಾಗಿದೆ.

ರಾಜ್ಯದಲ್ಲಿ ಸುಮಾರು 1.08 ಲಕ್ಷ ಎಕರೆ ವಕ್ಫ್ ಆಸ್ತಿ ಇದ್ದು, ಈ ಪೈಕಿ 85 ಸಾವಿರ ಎಕರೆ ಒತ್ತುವರಿಯಾಗಿದೆ. ಈ ಆಸ್ತಿಯನ್ನು ಮರಳಿ ವಕ್ಫ್ ಬೋರ್ಡ್‌ಗೆ ಪಡೆಯಲು ಹಾಗೂ ಈಗಾಗಲೇ ವಕ್ಫ್ ಬೋರ್ಡ್ ಸುಪರ್ಧಿಯಲ್ಲಿರುವ ಆಸ್ತಿಯನ್ನು ಸಂರಕ್ಷಣೆ ಮಾಡಲು ವಕ್ಫ್ ಅದಾಲತ್ ಮೂಲಕ ದಿಟ್ಟ ಹೆಜ್ಜೆ ಇರಿಸಲಾಗಿದೆ.

ವಕ್ಫ್ ಅದಾಲತ್‌ನಲ್ಲಿ ಯಾವ ಯಾವ ವಕ್ಫ್ ಆಸ್ತಿಗಳಿಗೆ ಖಾತಾ ಆಗಿಲ್ಲ ಎಂಬುದನ್ನು ಪರಿಶೀಲಿಸಿ, ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸುವುದು, ಆಸ್ತಿಗಳ ಸಮೀಕ್ಷೆಗೆ ಇರುವ ತೊಡಕು ನಿವಾರಿಸುವುದು, ಮ್ಯುಟೇಷನ್ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಆಲಿಸಿ, ಆನಂತರ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ.

2023ನೇ ಸಾಲಿನ ಡಿಸೆಂಬರ್‌ನಿಂದ ಈವರೆಗೆ ಬೆಳಗಾವಿ, ಚಿಕ್ಕೋಡಿ, ಬೀದರ್, ಕಲಬುರಗಿ, ಯಾದಗಿರಿ, ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ, ವಿಜಯಪುರ (ಬಿಜಾಪುರ) ಜಿಲ್ಲೆಗಳಲ್ಲಿ ವಕ್ಫ್ ಅದಾಲತ್‌ಗಳನ್ನು ನಡೆಸಲಾಗಿದೆ.

ರಾಜ್ಯದಲ್ಲಿ 26,855 ವಕ್ಫ್ ಆಸ್ತಿಗಳಿದ್ದು, ಈ ಪೈಕಿ ವಕ್ಫ್ ಅದಾಲತ್‌ಗಳನ್ನು ನಡೆಸುವ ಮುನ್ನ 10,675 ಆಸ್ತಿಗಳಿಗೆ ಮಾತ್ರ ಖಾತಾಗಳನ್ನು ಮಾಡಿಸಲಾಗಿತ್ತು. 10 ತಿಂಗಳಲ್ಲಿ 1,921 ಆಸ್ತಿಗಳ ಖಾತಾ ಮಾಡಿಸಲಾಗಿದೆ. 904 ಆಸ್ತಿಗಳ ಫ್ಲಾಗ್ ಆಫ್ (ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ ಪರಭಾರೆ ಮಾಡಬಾರದು ಹಾಗೂ ವಕ್ಫ್ ಸಂಸ್ಥೆಯ ಮಾಲಕತ್ವ ನಮೂದು) ಮಾಡಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ 1,232 ವಕ್ಫ್ ಆಸ್ತಿಗಳಿದ್ದು, ವಕ್ಫ್ ಅದಾಲತ್ ಆರಂಭಿಸುವ ಮುನ್ನ 150 ಆಸ್ತಿಗಳಿಗೆ ಮಾತ್ರ ಖಾತಾ ಇತ್ತು. ಈಗ 169 ಆಸ್ತಿಗಳಿಗೆ ಖಾತಾ ಮಾಡಿಸಿ, 68 ಆಸ್ತಿಗಳಿಗೆ ಫ್ಲಾಗ್ ಆಫ್ ಮಾಡಿಸಲಾಗಿದೆ. ಚಿಕ್ಕೋಡಿಯಲ್ಲಿ 1,455 ಆಸ್ತಿಗಳಿದ್ದು, ವಕ್ಫ್ ಅದಾಲತ್ ಆರಂಭಿಸುವ ಮುನ್ನ 782 ಆಸ್ತಿಗಳಿಗೆ ಮಾತ್ರ ಖಾತಾ ಇತ್ತು. ಈಗ 119 ಆಸ್ತಿಗಳಿಗೆ ಖಾತಾ ಮಾಡಿಸಿ, 186 ಆಸ್ತಿಗಳಿಗೆ ಫ್ಲಾಗ್ ಆಫ್ ಮಾಡಿಸಲಾಗಿದೆ.

ಬೀದರ್ ಜಿಲ್ಲೆಯಲ್ಲಿ 3,822 ಆಸ್ತಿಗಳಿದ್ದು, ವಕ್ಫ್ ಅದಾಲತ್ ಆರಂಭಿಸುವ ಮುನ್ನ 2,160 ಆಸ್ತಿಗಳಿಗೆ ಮಾತ್ರ ಖಾತಾ ಇತ್ತು. ಈಗ 136 ಆಸ್ತಿಗಳಿಗೆ ಖಾತಾ ಮಾಡಿಸಿ, 233 ಆಸ್ತಿಗಳಿಗೆ ಫ್ಲಾಗ್ ಆಫ್ ಮಾಡಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 5,814 ಆಸ್ತಿಗಳಿದ್ದು, ವಕ್ಫ್ ಅದಾಲತ್ ಆರಂಭಿಸುವ ಮುನ್ನ 1,235 ಆಸ್ತಿಗಳಿಗೆ ಮಾತ್ರ ಖಾತಾ ಇತ್ತು. ಈಗ 32 ಆಸ್ತಿಗಳಿಗೆ ಖಾತಾ ಮಾಡಿಸಿ, 36 ಆಸ್ತಿಗಳಿಗೆ ಫ್ಲಾಗ್ ಆಫ್ ಮಾಡಿಸಲಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ 1,440 ವಕ್ಫ್ ಆಸ್ತಿಗಳಿದ್ದು, ವಕ್ಫ್ ಅದಾಲತ್ ಆರಂಭಿಸುವ ಮುನ್ನ 386 ಆಸ್ತಿಗಳಿಗೆ ಮಾತ್ರ ಖಾತಾ ಇತ್ತು. ಈಗ 20 ಆಸ್ತಿಗಳಿಗೆ ಖಾತಾ ಮಾಡಿಸಿ, 18 ಆಸ್ತಿಗಳಿಗೆ ಫ್ಲಾಗ್ ಆಫ್ ಮಾಡಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 1,503 ಆಸ್ತಿಗಳಿದ್ದು, ವಕ್ಫ್ ಅದಾಲತ್ ಆರಂಭಿಸುವ ಮುನ್ನ 366 ಆಸ್ತಿಗಳಿಗೆ ಮಾತ್ರ ಖಾತಾ ಇತ್ತು. ಈಗ 67 ಆಸ್ತಿಗಳಿಗೆ ಖಾತಾ ಮಾಡಿಸಿ, 6 ಆಸ್ತಿಗಳಿಗೆ ಫ್ಲಾಗ್ ಆಫ್ ಮಾಡಿಸಲಾಗಿದೆ.

ಧಾರವಾಡ ಜಿಲ್ಲೆಯಲ್ಲಿ 2,495 ವಕ್ಫ್ ಆಸ್ತಿಗಳಿದ್ದು, ವಕ್ಫ್ ಅದಾಲತ್ ಆರಂಭಿಸುವ ಮುನ್ನ 2,198 ಆಸ್ತಿಗಳಿಗೆ ಮಾತ್ರ ಖಾತಾ ಇತ್ತು. ಈಗ 136 ಆಸ್ತಿಗಳಿಗೆ ಖಾತಾ ಮಾಡಿಸಿ, 116 ಆಸ್ತಿಗಳಿಗೆ ಫ್ಲಾಗ್ ಆಫ್ ಮಾಡಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ 3,235 ಆಸ್ತಿಗಳಿದ್ದು, ವಕ್ಫ್ ಅದಾಲತ್ ಆರಂಭಿಸುವ ಮುನ್ನ 1,586 ಆಸ್ತಿಗಳಿಗೆ ಮಾತ್ರ ಖಾತಾ ಇತ್ತು. ಈಗ 218 ಆಸ್ತಿಗಳಿಗೆ ಖಾತಾ ಮಾಡಿಸಿ, 138 ಆಸ್ತಿಗಳಿಗೆ ಫ್ಲಾಗ್ ಆಫ್ ಮಾಡಿಸಲಾಗಿದೆ.

ಗದಗ ಜಿಲ್ಲೆಯಲ್ಲಿ 1,486 ವಕ್ಫ್ ಆಸ್ತಿಗಳಿದ್ದು, ವಕ್ಫ್ ಅದಾಲತ್ ಆರಂಭಿಸುವ ಮುನ್ನ 812 ಆಸ್ತಿಗಳಿಗೆ ಮಾತ್ರ ಖಾತಾ ಇತ್ತು. ಈಗ 57 ಆಸ್ತಿಗಳಿಗೆ ಖಾತಾ ಮಾಡಿಸಿ, 77 ಆಸ್ತಿಗಳಿಗೆ ಫ್ಲಾಗ್ ಆಫ್ ಮಾಡಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 4,373 ಆಸ್ತಿಗಳಿದ್ದು, ವಕ್ಫ್ ಅದಾಲತ್ ಆರಂಭಿಸುವ ಮುನ್ನ 1,000 ಆಸ್ತಿಗಳಿಗೆ ಮಾತ್ರ ಖಾತಾ ಇತ್ತು. ಈಗ 967 ಆಸ್ತಿಗಳಿಗೆ ಖಾತಾ ಮಾಡಿಸಿ, 26 ಆಸ್ತಿಗಳಿಗೆ ಫ್ಲಾಗ್ ಆಫ್ ಮಾಡಿಸಲಾಗಿದೆ.

ಸಾರ್ವಜನಿಕರಿಂದ ಉತ್ತಮ ಸ್ಪಂದನೆ

ವಕ್ಫ್ ಅದಾಲತ್‌ಗಳಿಗೆ ಸಾರ್ವಜನಿಕರಿಂದಲೂ ಉತ್ತಮವಾಗಿ ಸ್ಪಂದನೆ ಸಿಗುತ್ತಿದ್ದು, ಹಲವಾರು ಮಂದಿ ದಶಕಗಳಿಂದ ಒತ್ತುವರಿ ಮಾಡಿಕೊಂಡಿದ್ದ ವಕ್ಫ್ ಆಸ್ತಿಗಳನ್ನು ಸ್ವಯಂ ಪ್ರೇರಿತವಾಗಿ ಹಿಂದಿರುಗಿಸುತ್ತಿದ್ದಾರೆ. ಉದಾಹರಣೆಗೆ ಹಾವೇರಿಯಲ್ಲಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದ ಒಂದೂವರೆ ಎಕರೆ ವಕ್ಫ್ ಆಸ್ತಿಯನ್ನು ಹಿಂದಿರುಗಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಟಿಪ್ಪು ಟ್ರಸ್ಟ್‌ನವರು 40 ವರ್ಷಗಳಿಂದ ಸುಮಾರು 20 ಸಾವಿರ ಚದರ ಅಡಿ ವಿಸ್ತೀರ್ಣದ ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿಕೊಂಡು ಪದವಿ ಕಾಲೇಜು ನಡೆಸುತ್ತಿದ್ದರು. ಈಗ ಆ ಆಸ್ತಿಯನ್ನು ವಕ್ಫ್ ಬೋರ್ಡ್‌ಗೆ ಹಿಂದಿರುಗಿಸಿದ್ದಾರೆ. ಅದೇ ರೀತಿ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ಬೇಲ್‌ದಾರ್ ಬಾಶುಸಾಬ್ ಎಂಬವರು ಒತ್ತುವರಿ ಮಾಡಿಕೊಂಡಿದ್ದ 39 ಗುಂಟೆ ಜಮೀನನ್ನು ವಕ್ಫ್ ಬೋರ್ಡ್‌ಗೆ ವಾಪಸ್ ನೀಡಿದ್ದಾರೆ.

ಬೆಂಗಳೂರಿನ ಹಜ್ ಭವನ ಬಳಿಯಿರುವ ಬೆಳ್ಳಳ್ಳಿಯಲ್ಲಿ ಮುನೀರ್ ಎಂಬವರು ಒತ್ತುವರಿ ಮಾಡಿಕೊಂಡಿದ್ದ 8 ಎಕರೆ ವಕ್ಫ್ ಆಸ್ತಿಯನ್ನು ವಕ್ಫ್ ಬೋರ್ಡ್‌ಗೆ ವಾಪಸ್ ಮಾಡಿದ್ದಾರೆ. 2023-24ನೇ ಸಾಲಿನಲ್ಲಿ ಸುಪ್ರೀಂಕೋರ್ಟ್, ಹೈಕೋರ್ಟ್ ಹಾಗೂ ವಕ್ಫ್ ನ್ಯಾಯಾಧೀಕರಣಗಳಲ್ಲಿ 155 ಎಕರೆ 4 ಗುಂಟೆ ಜಮೀನಿಗೆ ಸಂಬಂಧಿಸಿದ 58 ಪ್ರಕರಣಗಳು ಇತ್ಯರ್ಥಗೊಂಡಿವೆ. ಕಂದಾಯ ನ್ಯಾಯಾಲಯಗಳಲ್ಲಿ 429 ಎಕರೆ ಜಮೀನಿಗೆ ಸಂಬಂಧಿಸಿದ 90 ಪ್ರಕರಣಗಳು ಇತ್ಯರ್ಥವಾಗಿವೆ.(ಈ ಪೈಕಿ ಹಲವು ಪ್ರಕರಣಗಳು ಮೇಲ್ಮನವಿಯಾಗಿ ದಾಖಲಾಗಿವೆ).

ವಕ್ಫ್ ಬೋರ್ಡ್ ಅಧ್ಯಕ್ಷನಾಗಿ 14 ತಿಂಗಳ ಅಧಿಕಾರಾವಧಿಯಲ್ಲಿ ಸಚಿವ ಝಮೀರ್ ಅಹ್ಮದ್ ಖಾನ್ ಅವರ ನೆರವಿನೊಂದಿಗೆ ಹಲವಾರು ಮಹತ್ವದ ಕೆಲಸಗಳನ್ನು ಮಾಡಿದ್ದೇವೆ. ನ್ಯಾಯಾಲಯದಲ್ಲಿ ಹೋರಾಟ ಮಾಡಿ ಸುಮಾರು 429 ಎಕರೆ ವಕ್ಫ್ ಭೂಮಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಈ ಪೈಕಿ 200 ಎಕರೆಯನ್ನು ವಕ್ಫ್ ಬೋರ್ಡ್ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಉಳಿದ ಭೂಮಿಯನ್ನು ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಕ್ಫ್ ಬೋರ್ಡ್ ವತಿಯಿಂದ 47 ಕೋಟಿ ರೂ. ವೆಚ್ಚದಲ್ಲಿ ಹೆಣ್ಣು ಮಕ್ಕಳಿಗಾಗಿ ಜಿಲ್ಲಾ ಕೇಂದ್ರಗಳಲ್ಲಿ 15 ಪದವಿ ಪೂರ್ವ ಕಾಲೇಜುಗಳನ್ನು ಸ್ಥಾಪನೆ ಮಾಡುವ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ್ದೇವೆ. ಸಚಿವ ಝಮೀರ್ ಅಹ್ಮದ್ ಖಾನ್ ಅವರ ವಿಡಿಪಿ ಖಾತೆಯಿಂದ 15 ಕೋಟಿ ರೂ. ವೆಚ್ಚದಲ್ಲಿ 31 ಕಂದಾಯ ಜಿಲ್ಲೆಗಳಿಗೆ ತಲಾ ಒಂದು ಆ್ಯಂಬುಲೆನ್ಸ್ ಅನ್ನು ವಕ್ಫ್ ಸಂಸ್ಥೆಗಳಿಗೆ ನೀಡಿದ್ದೇವೆ. ಮೃತದೇಹಗಳನ್ನು ಇರಿಸಲು ತಾಲೂಕು ಕೇಂದ್ರಗಳಿಗೆ ಫ್ರೀಝರ್‌ಗಳನ್ನು ನೀಡಲಾಗಿದೆ. ದೇಶದಲ್ಲೇ ಮೊದಲ ಬಾರಿ ವಕ್ಫ್ ಅದಾಲತ್ ಅನ್ನುವ ವಿನೂತನ ಕಾರ್ಯಕ್ರಮ ಮಾಡಿದ್ದೇವೆ. ಈಗಾಗಲೇ 11 ಜಿಲ್ಲೆಗಳಲ್ಲಿ ವಕ್ಫ್ ಅದಾಲತ್ ಮಾಡಿ, ಸುಮಾರು 2000 ಖಾತಾಗಳನ್ನು ಅಪ್‌ಡೇಟ್ ಮಾಡಲಾಗಿದೆ. 2,000 ಆಸ್ತಿಗಳಿಗೆ ಫ್ಲಾಗ್ ಆಫ್(ಆರ್‌ಟಿಸಿ ಕಾಲಂ 11ರಲ್ಲಿ ವಕ್ಫ್ ಆಸ್ತಿ ಪರಭಾರೆ ಮಾಡಬಾರದು ಹಾಗೂ ಕಾಲಂ 9ರಲ್ಲಿ ವಕ್ಫ್ ಆಸ್ತಿಯ ಮಾಲಕತ್ವ ಯಾವ ಸಂಸ್ಥೆಗೆ ಸೇರಿದೆ ಎಂಬುದನ್ನು ನಮೂದಿಸಿದ್ದೇವೆ) ಮಾಡಿದ್ದೇವೆ.

-ಕೆ.ಅನ್ವರ್ ಬಾಷಾ, ಅಧ್ಯಕ್ಷ, ರಾಜ್ಯ ವಕ್ಫ್ ಬೋರ್ಡ್

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಅಮ್ಜದ್ ಖಾನ್ ಎಂ.

contributor

Similar News