ಒಳಮೀಸಲಾತಿಗೆ ಬೇಕಿರುವ ಒಳಮಾನದಂಡಗಳೇನು?
181 ಜಾತಿ-ಉಪ ಜಾತಿಗಳಲ್ಲಿ, ಪ್ರಾತಿನಿಧ್ಯ ಪಡೆದಿರುವುದು ಮತ್ತು ಪಡೆಯದಿರುವುದನ್ನು ಪ್ರತ್ಯೇಕವಾಗಿಯೇ ಎಲ್ಲಾ ಜಾತಿ-ಉಪಜಾತಿಗಳಿಗೂ ಅನ್ವಯಿಸುವ ಹಾಗೆ ಕ್ರಮವಹಿಸಬೇಕಾಗುತ್ತದೆ. ಇಲ್ಲಿ ಪ್ರಾತಿನಿಧ್ಯವೇ ಅತಿ ಮುಖ್ಯವಾಗಿದೆ. ನಂತರದಲ್ಲಿ ಯಾವ ಜಾತಿ ಶೇಕಡಾವಾರು ಎಷ್ಟರ ಮಿತಿಯಲ್ಲಿ ಪ್ರಾತಿನಿಧ್ಯ ಪಡೆದುಕೊಂಡಿದೆ ಎಂಬುದನ್ನು ಅವಶ್ಯ ನೋಡಲೇಬೇಕು. ಯಾವುದೋ ಗುಂಪಿನ ಮುಖ್ಯ ಜಾತಿಗೆ ಪ್ರಾತಿನಿಧ್ಯ ಹೆಚ್ಚಿದೆ ಎಂದಾಕ್ಷಣ ಅದರಲ್ಲಿ ಬರುವ ಎಲ್ಲಾ ಉಪಜಾತಿಗಳಿಗೂ ಸಮಾನವಾಗಿ ಪ್ರಾತಿನಿಧ್ಯ ಸಿಕ್ಕಿದೆ ಎಂಬ ಊಹೆಯೂ ತಪ್ಪು. ಈ ಪ್ರಾಯೋಗಿಕ ಮಾನದಂಡವನ್ನು ಅತಿ ಮುಖ್ಯವಾಗಿ ಪರಿಗಣಿಸಲೇಬೇಕು.;

ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ಒಂದು ಬೃಹತ್ ಸಮಸ್ಯೆಗೆ ಪರಿಹಾರ ಸಿಕ್ಕಿದ ದಿನ ಆಗಸ್ಟ್ 1, 2024. ಆ ದಿನ, ಒಳಮೀಸಲಾತಿ ಬಯಸಿದವರೆಲ್ಲರಿಗೂ ಹಾಲೋಗರ ಉಂಡ ದಿನವೂ ಹೌದು. ಸರ್ವೋಚ್ಚ ನ್ಯಾಯಾಲಯ, ಪರಿಶಿಷ್ಟ ಜಾತಿಗಳೊಳಗೆ, ಉಪ-ವರ್ಗೀಕರಣ ಮಾಡಲು, ಸರಕಾರಗಳಿಗೆ ಅಧಿಕಾರವಿದೆ ಎಂದು ಹೇಳಿದೆ. ಪರಿಶಿಷ್ಟ ಜಾತಿಗಳಲ್ಲಿ ಲಾಗಾಯ್ತಿನಿಂದಲೂ, ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗಗಳಲ್ಲಿ ಸ್ವಲ್ಪವಾದರೂ ಪ್ರಾತಿನಿಧ್ಯ ಪಡೆದಿರುವ ಅಥವಾ ಏನೂ ಪಡೆಯದೇ ಅನಾಥ ಸ್ಥಿತಿಯಲ್ಲಿರುವ ಜಾತಿ - ಉಪಜಾತಿಗಳಿಗೆ ಮತ್ತು ಅವರವರ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡುವ ಅಧಿಕಾರವು, ಆಯಾಯ ರಾಜ್ಯಗಳು, ಕೇಂದ್ರ ಆಡಳಿತ ಪ್ರದೇಶಗಳು ಮತ್ತು ಕೇಂದ್ರ ಸರಕಾರಕ್ಕೂ ಇದೆ ಎಂಬುದನ್ನು, ಸಾಂವಿಧಾನಿಕ ಪೀಠ ತೀರ್ಪು ನೀಡಿದ ದಿನವದು(ಪಂಜಾಬ್‌ರಾಜ್ಯ vs ದೇವಿಂದ್ರ ಸಿಂಗ್).
ಏಳು ಮಂದಿಯ ಸಂವಿಧಾನ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ವಿಕ್ರಂನಾಥ್, ಬೇಲಾ ತ್ರಿವೇದಿ, ಪಂಕಜ್ ಮಿತ್ತಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಶರ್ಮಾ ಇವರುಗಳಲ್ಲಿ ನ್ಯಾ. ಬೇಲಾ ತ್ರಿವೇದಿ ಒಬ್ಬರನ್ನು ಹೊರತುಪಡಿಸಿ ಇನ್ನುಳಿದ ಆರು ಮಂದಿ ನ್ಯಾಯಾಧೀಶರು ಪರಿಶಿಷ್ಟ ಜಾತಿಯ ಉಪವರ್ಗೀಕರಣ ಸಂವಿಧಾನದ ವಿಧಿ 14 ಮತ್ತು ವಿಧಿ 341 ಅನ್ನು ಉಲ್ಲಂಘಿಸುವುದಿಲ್ಲ ಎಂದು ತೀರ್ಪಿತ್ತಿರುವರು.
ಒಂದು ಮೈಲಿಗಲ್ಲು ಎನ್ನಬಹುದಾದ ಈ ತೀರ್ಪು ಬಂದು ಏಳು ತಿಂಗಳುಗಳೇ ಗತಿಸಿದ್ದರೂ, ಬಿಜೆಪಿಯ ಹಿಡಿತದಲ್ಲಿರುವ ಕೇಂದ್ರ ಸರಕಾರ ಮಾತ್ರ ಇಂದಿಗೂ, ಕೇಂದ್ರ ಸರಕಾರದ ಪರಿಶಿಷ್ಟ ಜಾತಿಯ ನೌಕರರ ನ್ಯಾಯೋಚಿತ ಬೇಡಿಕೆ ಉಪವರ್ಗೀಕರಣ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ವಿಷಾದದ ಸಂಗತಿ. ಸದ್ಯ ಈ ಲೇಖನದ ಉದ್ದೇಶ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. ಪ್ರಸಕ್ತ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ತೀರ್ಪು ಬಂದು ಮೂರು -ನಾಲ್ಕು ತಿಂಗಳು ಕಳೆದರೂ, ಪರಿಶಿಷ್ಟ ಜಾತಿಗಳ ಉಪವರ್ಗೀಕರಣ ಮಾಡುವುದಕ್ಕಾಗಿ ಯಾವುದೇ ಆಯೋಗ ರಚಿಸದೆ ಕಾಲದೂಡುವ ಪರಿಸ್ಥಿತಿ ಇತ್ತು. ಆ ವರ್ಗಕ್ಕೆ ಸೇರಿದ ಕೆಲವು ಕ್ರಿಯಾಶೀಲರ ಗುಂಪು ಒತ್ತಾಯ ತಂದ ನಂತರದಲ್ಲಿ ಅನಿವಾರ್ಯವಾಗಿ, ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಆಯೋಗವನ್ನು ರಚಿಸಿದ ಸರಕಾರ ವರದಿ ನೀಡಲು ಎರಡು ತಿಂಗಳ ಗುಡುವು ನೀಡಿದೆ. ಎರಡು ತಿಂಗಳಲ್ಲಿ ವರ್ಗೀಕರಣದ ಕೆಲಸವನ್ನು ಪೂರೈಸಿದರೆ ಅದು ಪವಾಡವೇ ಸರಿ. ಆಯೋಗ ರಚಿಸಿದ ಕೆಲ ದಿನಗಳ ನಂತರ ಪರಿಶೀಲನಾಂಶಗಳನ್ನು ಹೊರಡಿಸಿತು. ಆಯೋಗವೇನೋ ಆ ದಿಸೆಯಲ್ಲಿ ತ್ವರಿತ ಕ್ರಮ ಕೈಗೊಂಡು ಮುನ್ನಡೆಯುತ್ತಿದೆ.
ಸರ್ವೋಚ್ಚ ನ್ಯಾಯಾಲಯ ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿಯನ್ನು ನೀಡುವ ಬಗ್ಗೆ ಇದ್ದ ಎಲ್ಲಾ ಕಾನೂನಿನ ತೊಡರುಗಳನ್ನು ನಿವಾರಿಸಿದೆ. ಅಷ್ಟೇ ಅಲ್ಲ, ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಗಳಲ್ಲಿ ಈಗಾಗಲೇ ರಾಷ್ಟ್ರಪತಿಗಳಿಂದ ಅನುಮೋದಿಸಲ್ಪಟ್ಟ ಪರಿಶಿಷ್ಟ ಜಾತಿಗಳಲ್ಲಿ, ಸರಕಾರ ಮತ್ತು ಸರಕಾರದ ಅಂಗ ಸಂಸ್ಥೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ, ಯಾವ ಜಾತಿ ಮತ್ತು ಉಪಜಾತಿಗೆ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ದೊರಕಿರುವ ಬಗ್ಗೆ, ಪ್ರಾಯೋಗಿಕ ದತ್ತಾಂಶಗಳನ್ನು ಇಟ್ಟುಕೊಂಡು ಉಪ-ವರ್ಗೀಕರಣ ಕೈಗೊಳ್ಳಲು ತೀರ್ಪಿತ್ತಿದೆ.
ತೀರ್ಪಿಗೆ ಪೂರಕವಾಗಿ, ಕರ್ನಾಟಕದಲ್ಲಿ ಆಯೋಗ ರಚಿಸಿರುವ ಬಗ್ಗೆ ಈಗಾಗಲೇ ಪ್ರಸ್ತಾಪಿಸಲಾಗಿದೆ. ಈ ನಿಟ್ಟಿನಲ್ಲಿ ತೆಲಂಗಾಣ ರಾಜ್ಯವೂ ಆಯೋಗ ರಚಿಸಿ, ಅದು ಕೊಟ್ಟ ವರದಿ ಅನುಸಾರ ಒಳಮೀಸಲಾತಿಯನ್ನು ಈಗಾಗಲೇ ಜಾರಿಗೊಳಿಸಿ ಆದೇಶ ಹೊರಡಿಸಿರುವ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಅದು ಮುಂಚೂಣಿಯಲ್ಲಿ ನಿಲ್ಲುವ ರಾಜ್ಯ.
ಇತ್ತ ಕರ್ನಾಟಕದಲ್ಲಿ, ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಆಯೋಗವು ಸಂಬಂಧಿತ ಹಿತಾಸಕ್ತರ ಮತ್ತು ತಜ್ಞರನ್ನೊಳಗೊಂಡವರ ಸಭೆಯನ್ನು ಕರೆದು, ಅವರೊಡನೆ ಚರ್ಚಿಸಿ ಅವರು ಸಲ್ಲಿಸಿರುವ ಮಾಹಿತಿಗಳನ್ನು ಪಡೆದುಕೊಂಡಿದೆ. ಉಪ-ವರ್ಗೀಕರಿಸುವ ದೃಷ್ಟಿಯಲ್ಲಿ ಯಾವ ಪ್ರಾಯೋಗಿಕ ದತ್ತಾಂಶವನ್ನು ಅವರು ನೀಡಿರುವವರು ಎಂಬುದು ಮಾತ್ರ ತಿಳಿದು ಬಂದಿಲ್ಲ. ಆದರೂ ಈ ದಿಸೆಯಲ್ಲಿ ಆಯೋಗದಿಂದ ಪ್ರಾಮಾಣಿಕ ಪ್ರಯತ್ನವಂತೂ ಸಾಗುತ್ತಿದೆ. ಮಾಮೂಲಿನಂತೆ ಆಯೋಗದ ಪರ-ವಿರುದ್ಧ ಅಪಸ್ವರಗಳು ಇದ್ದೇ ಇವೆ. ಅದಕ್ಕೆಲ್ಲ ಗಮನವೀಯದೆ, ತನಗೆ ನೀಡಿರುವ ಕೆಲಸವನ್ನು ಮಾಡುವುದಷ್ಟೇ ಆಯೋಗದ ತುರ್ತು.
ಈ ದಿಸೆಯಲ್ಲಿ ಕರ್ನಾಟಕದಲ್ಲಿ 2004ರಲ್ಲಿಯೇ ನ್ಯಾ. ಎ.ಜೆ. ಸದಾಶಿವ ಆಯೋಗವನ್ನು ರಚಿಸಲಾಗಿತ್ತು. ಆದರೆ ಅದೇನು ಕಾರಣವೋ, ಆಯೋಗವು ಅಂದಾಜು 8 ವರ್ಷಗಳ ಕಾಲವನ್ನು ವ್ಯಯಿಸಿ 2012ರಲ್ಲಿ ಸರಕಾರಕ್ಕೆ ವರದಿಯನ್ನು ಸಲ್ಲಿಸಿತು. ಆದರೆ ಅದೃಷ್ಟವೋ ಅಥವಾ ದುರದೃಷ್ಟವೋ ಆಯೋಗದ ವರದಿಯನ್ನು ಸರಕಾರ ಬಯಲು ಮಾಡಲಿಲ್ಲ. ಪತ್ರಿಕೆಗಳ ಮೂಲಕ ತಿಳಿದುಬಂದಂತೆ, 101 ಪರಿಶಿಷ್ಟ ಜಾತಿ-ಉಪಜಾತಿಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಮೀಸಲಾತಿ ಕೋಟಾ ನೀಡಿತ್ತು ಎಂಬುದಷ್ಟೇ ಗೊತ್ತು. ಆ ಪ್ರಕಾರ, ಪರಿಶಿಷ್ಟ ಜಾತಿಗಳಲ್ಲಿ ಹೆಚ್ಚಿರುವವರು ಎಂದು ಹೇಳಲಾದ ಎಡಗೈ ಸಮುದಾಯ ಮತ್ತು ಅದರ 28(29) ಉಪಜಾತಿಗಳಿಗೆ ಶೇ. 6ರಷ್ಟು ಮೀಸಲಾತಿ ಕೋಟಾ ನೀಡಿ, ಬಲಗೈ ಸಮುದಾಯ ಮತ್ತದರ 25 (26) ಉಪಜಾತಿಗಳಿಗೆ ಶೇ. 5ರಷ್ಟು, ಸ್ಪಶ್ಯರೆಂದು ಕರೆಯಲ್ಪಡುವ ಲಂಬಾಣಿ, ಭೋವಿ ಮತ್ತು ಕೊರಮ-ಕೊರಚ ಜಾತಿಯೂ ಸೇರಿದಂತೆ 4 ಜಾತಿ- ಉಪಜಾತಿಗಳಿಗೆ ಶೇ. 3ರಷ್ಟನ್ನು ಹಾಗೂ ಇತರ 38 ಜಾತಿ-ಉಪಜಾತಿಗಳಿಗೆ ಶೇ. 1ರಷ್ಟು ಮೀಸಲಾತಿ ಕೋಟಾ ನೀಡಿ, ಹೀಗೆ ಒಟ್ಟು ನೂರೊಂದು ಜಾತಿ-ಉಪಜಾತಿಗಳಿಗೆ ಶೇ. 15ರಷ್ಟು ಮೀಸಲಾತಿ ಕೋಟಾವನ್ನು ನಿಗದಿ ಮಾಡಲಾಗಿತ್ತು. ಕೊನೆಯಲ್ಲಿ ಹೇಳಿರುವ 38 ಜಾತಿ-ಉಪಜಾತಿಗಳು ಸ್ಪಶ್ಯರೋ ಅಥವಾ ಅಸ್ಪಶ್ಯರೋ ಎಂಬುದು ಸ್ಪಷ್ಟವಾಗಿರುವುದು ಎಲ್ಲಿಯೂ ಕಂಡುಬಂದಿಲ್ಲ.
2012ರಲ್ಲಿಯೇ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರು ಸರಕಾರಕ್ಕೆ ವರದಿ ನೀಡಿದ್ದರು. ಆಗ ಇದ್ದ ಬಿಜೆಪಿ ಸರಕಾರ ವರದಿಯ ಬಗ್ಗೆ ಯಾವ ನಿಲುವನ್ನೂ ತಾಳದೆ 2013ರ ಚುನಾವಣೆಯಲ್ಲಿ ಕೈ ಬೀಸಿಕೊಂಡು ಸೋತು ಮನೆಗೆ ಹೋಯಿತು. ಬಹುಮತ ಗಳಿಸಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು. ಅವರು ಅಧಿಕಾರದಲ್ಲಿದ್ದ 5 ವರ್ಷಗಳು ಮತ್ತು 2018ರ ಚುನಾವಣೆಯಲ್ಲಿ ಯಾವ ಪಕ್ಷವೂ ಅಧಿಕಾರ ಹಿಡಿಯುವಷ್ಟು ಬಹುಮತ ಸಿಗಲಿಲ್ಲವಾದ್ದರಿಂದ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಬೆಂಬಲಿತ ಸಮ್ಮಿಶ್ರ ಸರಕಾರ ರಚನೆಯಾಯಿತು. ಆ ಸರಕಾರಕ್ಕೆ 14 ತಿಂಗಳ ಸಮಯದಲ್ಲೂ, ಈ ವಿಷಯದಲ್ಲಿ ಯೋಚಿಸಲೂ ಸಮಯ ಸಿಗಲಿಲ್ಲ. ಚುನಾಯಿತರಾದ ಪಕ್ಷಕ್ಕೆ ಮಾತೃದ್ರೋಹ ಎಸಗಿದ 17 ಶಾಸಕರು ಪಕ್ಷೋಲ್ಲಂಘನೆ ಮಾಡಿ ಭಾಜಪ ಸೇರಿ ಯಡ್ಡಿಯೂರಪ್ಪನವರು ಮುಖ್ಯಮಂತ್ರಿ ಪಟ್ಟವೇರಲು ಸಹಕಾರವಿತ್ತರು. ಈ ಅವಧಿಯಲ್ಲಿಯೂ ಎ.ಜೆ. ಸದಾಶಿವ ಆಯೋಗದ ವರದಿಯ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಪರಿಶಿಷ್ಟ ಜಾತಿಗಳಲ್ಲಿ ಎಡಗೈ ಸಮುದಾಯ ಭಾಜಪಕ್ಕೆ ಚುನಾವಣೆಯಲ್ಲಿ ಬೆಂಬಲ ನೀಡಿದೆ, ಆದ್ದರಿಂದ ಯಡಿಯೂರಪ್ಪ ನೇತೃತ್ವದ ಸರಕಾರ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಅವರಿಗೆ ಒಳಮೀಸಲಾತಿ ಕಲ್ಪಿಸುತ್ತದೆ ಎಂಬ ಭ್ರಮೆಯಲ್ಲಿದ್ದರು. ಆದರೆ ಅವರು ಕೂಡ ವರದಿ ಬಗ್ಗೆ ಕಣ್ಣು ಹಾಯಿಸಲಿಲ್ಲ. ಎರಡು ವರ್ಷ ಕಳೆದ ನಂತರ ಅಧಿಕಾರದಿಂದ ಇಳಿದ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಅತ್ತು ಕರೆದು ಔತಣಕ್ಕೆ ಹೇಳಿಸಿಕೊಂಡ ಎಂಬ ಗಾದೆಯಿದೆ. ಆ ಪ್ರಕಾರ ಎಡಗೈ ಸಮುದಾಯದ ಒತ್ತಾಯಕ್ಕೆ ಮಣಿದ ಬೊಮ್ಮಾಯಿ ಸರಕಾರ, ಕೊನೆಗೂ ಕಾನೂನು ಸಚಿವ ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿಯೊಂದನ್ನು ರಚಿಸಿ ಕೈ ತೊಳೆದುಕೊಂಡಿತು. ಉಪ-ವರ್ಗೀಕರಣ ಮಾಡುವ ಅಧಿಕಾರ ರಾಜ್ಯಗಳಿಗೆ ಇಲ್ಲ ಎಂದು ಸ್ಪಷ್ಟವಾಗಿ ಸರ್ವೋಚ್ಚ ನ್ಯಾಯಾಲಯ ಹೇಳಿದ್ದರೂ, ಬೆಂಬಿಡದೆ ಮಾಡಲೇಬೇಕು ಎಂದು ಎಡಗೈ ಸಮುದಾಯದವರು ಮುಖ್ಯವಾಗಿ ಉಪಸಮಿತಿ ಮೇಲೆ ಒತ್ತಡ ಹೇರಿದರು. ಉಪಸಮಿತಿಯ ಅಧ್ಯಕ್ಷರ ಹೇಳಿಕೆಯಂತೆ, ನ್ಯಾ ಎ.ಜೆ. ಸದಾಶಿವ ವರದಿಯನ್ನು ತಿರಸ್ಕರಿಸಿ ಹೊಸದಾಗಿಯೇ ಸಚಿವ ಸಂಪುಟದ ಉಪ ಸಮಿತಿ ವರದಿ ತಯಾರಿಸಿದೆ ಎಂದು ಅದರ ಅಧ್ಯಕ್ಷರು ಹೇಳಿಕೊಂಡರು. ವರದಿ ತಯಾರಿಸುವಲ್ಲಿ ಏನು ಮಾನದಂಡಗಳನ್ನು ಇಟ್ಟುಕೊಳ್ಳಲಾಗಿತ್ತು ಎಂಬುದನ್ನು ಮಾತ್ರ ಬಹಿರಂಗಪಡಿಸಲಿಲ್ಲ. ಆದರೆ ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಈ ಮೂರು ಪ್ರದೇಶ ಸೂಚಿತ ಹೆಸರುಗಳಲ್ಲಿರುವ ಜಾತಿಗಳನ್ನು ಜಿಲ್ಲಾವಾರು, ಜಿಲ್ಲಾಧಿಕಾರಿಗಳ ಸಹಾಯದಿಂದ ಸರಿಪಡಿಸಿ ಎಲ್ಲಾ 101 ಜಾತಿಗಳ ಜನಸಂಖ್ಯೆಯನ್ನು ಕಂಡುಕೊಂಡಿದ್ದೇವೆ ಎಂದು ಹೇಳಿದ್ದು ಮಾತ್ರ ಪತ್ರಿಕೆಯಲ್ಲಿ ವರದಿಯಾಯಿತು.
ಕಡೆಗೂ ಉಪ ಸಮಿತಿ ವರದಿಯೊಂದನ್ನು ತಯಾರಿಸಿ, ಕೇಂದ್ರ ಸರಕಾರದತ್ತ ಮುಖ ಮಾಡಿ, ವರದಿಯನ್ನು ಅಲ್ಲಿಗೆ ಸಲ್ಲಿಸಿತು. ಇದೇ ಸಮಯದಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಕೋಟಾವನ್ನು ಹೆಚ್ಚಿಸಿತು. ಅದರಂತೆ ಪರಿಶಿಷ್ಟ ಜಾತಿಗೆ ಶೇ. 17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 7ರಷ್ಟನ್ನು ಹೆಚ್ಚಿಸಿ ಅಧಿಸೂಚನೆ ಹೊರಡಿಸಿತು.
ಮಾಧುಸ್ವಾಮಿ ಅಧ್ಯಕ್ಷತೆಯ ಉಪಸಮಿತಿ ವರದಿ ಪ್ರಕಾರ, ಎಡಗೈ ಸಮುದಾಯದ ಜಾತಿ ಉಪ-ಜಾತಿಗಳಿಗೆ ಕೋಟಾವನ್ನು ಶೇ. 6, ಬಲಗೈ ಸಮುದಾಯದ ಜಾತಿ ಉಪ-ಜಾತಿಗಳಿಗೆ ಶೇ. 5.5, ಭೋವಿ, ಲಂಬಾಣಿ, ಕೊರಚ-ಕೊರಮ ಇತ್ಯಾದಿಯವರಿಗೆ ಶೇ. 4 ಹಾಗೂ ಉಳಿದ ಎಲ್ಲರಿಗೂ ಶೇ. 1ರಷ್ಟು ಮೀಸಲಾತಿ ಕೋಟಾ ಕೊಡಲಾಗಿತ್ತು ಎಂಬುದು ಮಾಧ್ಯಮಗಳ ಮೂಲಕ ತಿಳಿದು ಬಂತು. ಅಲ್ಲಿಗೆ ಭಾಜಪ ಸರಕಾರ, ತನ್ನ ಕೆಲಸ ಮಾಡಲಾಗಿದೆ ಎಂದು ಹೇಳಿಕೊಂಡು ಓಡಾಡಿದ್ದೇ ಬಂತು. ಅತ್ತ ಕೇಂದ್ರ ಸರಕಾರ, ವರದಿಯನ್ನು ಯಾವ ಸ್ಥಳದಲ್ಲಿ ಭದ್ರವಾಗಿ ಇಟ್ಟಿದೆ ಎಂಬುದು ಮಾತ್ರ ಈ ತನಕ ಯಾರಿಗೂ ಗೊತ್ತಿಲ್ಲ. ಆ ಕಥೆ ಅಲ್ಲಿಗೆ ಮುಗಿಯಿತು.
ಸರ್ವೋಚ್ಚ ನ್ಯಾಯಾಲಯದ ಸಕಾರಾತ್ಮಕ ತೀರ್ಪಿನ ಆಧಾರದ ಮೇಲೆ ಕರ್ನಾಟಕ ಸರಕಾರ ಆಯೋಗ ಒಂದನ್ನು ರಚಿಸಿದೆ ಎಂಬ ವಿಷಯ ಈಗಾಗಲೇ ಚರ್ಚಿತ ಗೊಂಡಿದೆ. ಆಯೋಗಕ್ಕೆ ನೀಡಿರುವ ಎರಡು ತಿಂಗಳ ಗಡುವು ಮುಗಿಯುತ್ತಾ ಬಂದಿದೆ. ಅವಧಿ ವಿಸ್ತರಿಸುವ ಎಲ್ಲಾ ಸಾಧ್ಯತೆಗಳು ಸರಕಾರದ ಮುಂದಿವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ.
ಆಯೋಗದ ಮುಂದಿರುವ ಸದ್ಯದ ಪ್ರಶ್ನೆ, ಪರಿಶಿಷ್ಟ ಜಾತಿಯಲ್ಲಿ ಇರುವ 101 ಜಾತಿಗಳನ್ನು ಯಾವ ರೀತಿ ಒಳ ಮೀಸಲಾತಿಗೊಳಪಡಿಸಬೇಕು ಎಂಬುದಷ್ಟೇ. ಈಗಾಗಲೇ ಆಯೋಗ ಪೂರ್ವ ತಯಾರಿ ಮಾಡಿಕೊಂಡಿರಲೂ ಬಹುದು. ವಾಸ್ತವವಾಗಿ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ ಎಂದು ಹೇಳಲಾಗಿದ್ದರೂ, ಜಾತಿಗಳನ್ನು ಬಿಡಿ ಬಿಡಿಯಾಗಿ ತೆಗೆದುಕೊಂಡಲ್ಲಿ ಅವು 181 ಆಗುತ್ತವೆ. ಕೆಲ ಜಾತಿ ಸಮುದಾಯಗಳನ್ನು ಅವುಗಳ ಉಪಜಾತಿಗಳನ್ನು ಒಳಗೊಂಡಂತೆ ಗುಂಪು ಮಾಡಲಾಗಿದೆ. ಹೀಗೆ ಮಾಡಿರುವುದರಿಂದಲೇ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ ಎಂದು ಹೇಳುತ್ತಿರುವುದು. ಒಳ ಮೀಸಲಾತಿ ಅಥವಾ ಉಪವರ್ಗೀಕರಣದ ದೃಷ್ಟಿಯಿಂದ ಅವುಗಳನ್ನು 181 ಎಂತಲೇ ಪರಿಗಣಿಸಬೇಕು. ಈಗಾಗಲೇ 181 ಜಾತಿ-ಉಪಜಾತಿಗಳನ್ನು ಮಾರ್ಗಸೂಚಿ ಅನ್ವಯ ರಾಷ್ಟ್ರಪತಿಗಳು ಅವುಗಳನ್ನು ಪರಿಶಿಷ್ಟ ಜಾತಿಗಳು ಎಂದು ಆದೇಶ ಹೊರಡಿಸಿರುವರು. ಹಾಗಾಗಿ, ಉಪವರ್ಗೀಕರಣಕ್ಕಷ್ಟೇ ಸೀಮಿತವಾಗಬೇಕಾಗಿದೆ. ಪ್ರಾಯೋಗಿಕ ದತ್ತಾಂಶಗಳ ಹೆಸರಿನಲ್ಲಿ ಆರ್ಥಿಕ ಪರಿಸ್ಥಿತಿ, ಅವರ ನೆಲೆ, ಕಸುಬು ಅಥವಾ ವೃತ್ತಿ, ಅಸ್ಪಶ್ಯತೆಯ ಕಳಂಕ, ಅವರ ಸಾಮಾಜಿಕ ಅಥವಾ ರಾಜಕೀಯ ಹಿನ್ನೆಲೆಗೆ ಸಂಬಂಧಿಸಿದ ಯಾವ ಅಂಕಿ ಅಂಶಗಳು ಪ್ರಸಕ್ತ ಅಗತ್ಯವಿರುವುದಿಲ್ಲ. ಸದ್ಯ, 181 ಜಾತಿ, ಉಪಜಾತಿಗಳು ಸರಿಸಮಾನವಾಗಿ ಶಿಕ್ಷಣ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯೋಗಗಳಲ್ಲಿ ಯಾವ ಮಟ್ಟದ ಪ್ರಾತಿನಿಧ್ಯ ಪಡೆದಿರುವರು? ಮತ್ತು ಅದಕ್ಕಾಗಿ ಯುಕ್ತ ಪ್ರಾಯೋಗಿಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು, ಯಾವುದೇ ಜಾತಿ- ಉಪಜಾತಿಗೆ ಅನ್ಯಾಯವಾಗದಂತೆ ಒಳಮೀಸಲಾತಿ ಅಥವಾ ಉಪವರ್ಗೀಕರಣ ಮಾಡಬೇಕಾಗಿದೆ.
ಈ ನಿಟ್ಟಿನಲ್ಲಿ ಉದಾಹರಿಸಬಹುದಾದರೆ
ಪಟ್ಟಿಯ ಕ್ರಮ ಸಂಖ್ಯೆ 22ರಲ್ಲಿ ಮಾದಿಗ ಮತ್ತು ಉಪಜಾತಿಗಳು ಎಂದು ಹೇಳಲಾದ 23 ಜಾತಿಗಳನ್ನು ಒಟ್ಟು ಸೇರಿಸಿ ಒಂದು ಗುಂಪನ್ನು ರಚಿಸಲಾಗಿದೆ. ಇಲ್ಲಿ ಮೋಚಿ ಮತ್ತು ಮಾದಿಗ ಎರಡು ಜಾತಿಗಳು ಒಟ್ಟಿಗೆ ಇವೆ. ಅದರ ಅರ್ಥ ಸಾರ್ವಜನಿಕ ಉದ್ಯೋಗದಲ್ಲಿ ಆ ಎರಡೂ ಜಾತಿಗಳು ಸರಿ ಸಮಾನವಾಗಿ ನೇಮಕಾತಿ ಮತ್ತು ಹುದ್ದೆಗಳಲ್ಲಿ ಪ್ರಾತಿನಿಧ್ಯ ಪಡೆದಿವೆ ಎಂದು ಹೇಳಲಾಗುವುದಿಲ್ಲ. ಜೊತೆಗೆ ಇದೇ ಗುಂಪಿಗೆ ಬಹುತೇಕ ಪ್ರಾತಿನಿಧ್ಯವೇ ಇಲ್ಲದ ದಕ್ಕಲಿಗ ಜಾತಿಯನ್ನು ತಂದು ಸೇರಿಸಿದರೆ ಘೋರ ಅನ್ಯಾಯವನ್ನು ಎಸಗಿದಂತಾಗುತ್ತದೆ. ಕಾರಣ ಈ ಪ್ರವರ್ಗಕ್ಕೆ ಮೀಸಲಿಟ್ಟ ಹುದ್ದೆಗಳೆಲ್ಲವನ್ನೂ ಒಂದೆರಡು ಬಲಾಢ್ಯ ಜಾತಿಗಳೇ ಪಡೆದುಕೊಳ್ಳುವ, ಇತ್ತೀಚಿನ ರಾಜಕೀಯ ಸನ್ನಿವೇಶದಲ್ಲಿ, ಸಂಭವವೇ ಹೆಚ್ಚು. ಈ ನಿಯಮ ಅಥವಾ ಸೂತ್ರ ಎಲ್ಲಾ ಜಾತಿಗಳಿಗೂ ಅನ್ವಯಿಸುತ್ತದೆ ಎಂಬುದೂ ಸ್ಪಷ್ಟ.
181 ಜಾತಿ-ಉಪ ಜಾತಿಗಳಲ್ಲಿ, ಪ್ರಾತಿನಿಧ್ಯ ಪಡೆದಿರುವುದು ಮತ್ತು ಪಡೆಯದಿರುವುದನ್ನು ಪ್ರತ್ಯೇಕವಾಗಿಯೇ ಎಲ್ಲಾ ಜಾತಿ-ಉಪಜಾತಿಗಳಿಗೂ ಅನ್ವಯಿಸುವ ಹಾಗೆ ಕ್ರಮವಹಿಸಬೇಕಾಗುತ್ತದೆ. ಇಲ್ಲಿ ಪ್ರಾತಿನಿಧ್ಯವೇ ಅತಿ ಮುಖ್ಯವಾಗಿದೆ. ನಂತರದಲ್ಲಿ ಯಾವ ಜಾತಿ ಶೇಕಡಾವಾರು ಎಷ್ಟರ ಮಿತಿಯಲ್ಲಿ ಪ್ರಾತಿನಿಧ್ಯ ಪಡೆದುಕೊಂಡಿದೆ ಎಂಬುದನ್ನು ಅವಶ್ಯ ನೋಡಲೇಬೇಕು. ಯಾವುದೋ ಗುಂಪಿನ ಮುಖ್ಯ ಜಾತಿಗೆ ಪ್ರಾತಿನಿಧ್ಯ ಹೆಚ್ಚಿದೆ ಎಂದಾಕ್ಷಣ ಅದರಲ್ಲಿ ಬರುವ ಎಲ್ಲಾ ಉಪಜಾತಿಗಳಿಗೂ ಸಮಾನವಾಗಿ ಪ್ರಾತಿನಿಧ್ಯ ಸಿಕ್ಕಿದೆ ಎಂಬ ಊಹೆಯೂ ತಪ್ಪು. ಈ ಪ್ರಾಯೋಗಿಕ ಮಾನದಂಡವನ್ನು ಅತಿ ಮುಖ್ಯವಾಗಿ ಪರಿಗಣಿಸಲೇಬೇಕು. ಈ ಪ್ರಾತಿನಿಧ್ಯಕ್ಕೆ ಸಂಬಂಧಪಟ್ಟಂತೆ ಸರಕಾರದ ಎಲ್ಲಾ ಇಲಾಖೆಗಳು ಅಂಗ ಸಂಸ್ಥೆಗಳಿಂದ ಪ್ರತ್ಯೇಕವಾಗಿ ಮಾಹಿತಿ ತರಿಸಿಕೊಳ್ಳಬೇಕು. ಚಮ್ಮಾರಿಕೆ ಮಾಡುವವರು ಒಂದೇ ಗುಂಪಿನಲ್ಲಿ ಇದ್ದರೂ, ಮಾದಿಗ, ಮಾದರ, ಚಮ್ಮಾರ, ಚಮಗಾರ ಇವರೆಲ್ಲ ಒಂದು ಕಡೆ ಬಂದರೆ, ಮೋಚಿ, ತೆಲುಗು ಮೋಚಿ, ಕಾಮಾಟಿ ಮೋಚಿ, ಹರಳಯ್ಯ, ಸಮಗಾರ ಇವರೆಲ್ಲ ಒಂದು ಕಡೆ ಬರುತ್ತಾರೆೆ. ಎರಡು ಗುಂಪಿನಲ್ಲಿ ಆ ಗುಂಪಿನ ಯಾವುದೇ ಒಂದು ಜಾತಿಗೆ ಪ್ರಾತಿನಿಧ್ಯ ಸಿಕ್ಕಿದ್ದರೆ, ಆ ಜಾತಿಗೆ ಪ್ರಾತಿನಿಧ್ಯವಿದೆ ಎಂದು ತಿಳಿದುಕೊಳ್ಳಬಹುದು. ಆದರೆ ಮಾದಿಗರಿಗೆ ಸಿಕ್ಕಿದೆ ಎಂದು, ಮೋಚಿಗೆ ಅದನ್ನು ಸೇರಿಸಲಾಗುವುದಿಲ್ಲ. ಇಂತಹ ಸೂಕ್ಷ್ಮವಾದ ಕೆಲಸ ಅತಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಕೆಲವೊಮ್ಮೆ ಸ್ಥಳ ಅಜಮಾಯಿಶಿ ಮಾಡಬೇಕಾದ ಸಂಭವವು ಬರಬಹುದು.
ಇನ್ನು ಎರಡನೆಯದಾಗಿ, 181 ಜಾತಿಗಳಲ್ಲಿ ಜಾತಿಗಳ ಜನಸಂಖ್ಯೆಯೂ ಕೂಡ ಮುಖ್ಯ, ಅದರಿಂದ ಶೇಕಡಾವಾರು ಜನಸಂಖ್ಯೆಯನ್ನು ಲೆಕ್ಕ ಹಾಕಲು ಬರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಆಯೋಗಕ್ಕೆ ಕಷ್ಟದ ಕೆಲಸ. 181 ಜಾತಿಗಳಿಗೆ ಅನ್ವಯಿಸುವಂತೆ ಜನಸಂಖ್ಯೆಯ ಮಾಹಿತಿ 2015ರಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಖಂಡಿತ ದೊರಕುತ್ತದೆ. ಆದರೆ ಒಂದೇ ಒಂದು ತೊಡಕೆಂದರೆ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಎಂಬ ಪ್ರದೇಶ ಸೂಚಕ ನುಡಿಗಟ್ಟುಗಳಿಗೆ ಸಂಬಂಧಿಸಿದ ಹಾಗೆ ಎಚ್ಚರಿಕೆಯಿಂದ ಜಿಲ್ಲಾವಾರು ಬೇರ್ಪಡಿಸಬೇಕಾಗುತ್ತದೆ. ಜಾತಿ- ಉಪಜಾತಿಗಳು ಪಡೆದಿರುವ ಪ್ರಾತಿನಿಧ್ಯದ ಶೇಕಡಾವಾರು ಅಂಶಗಳ ಮೇಲೆ, ಒಳಮೀಸಲಾತಿಗಾಗಿ ವಿಭಾಗಿಸಬೇಕಾಗುತ್ತದೆ. ಉದಾಹರಣೆಗೆ: 1. ಪ್ರಾತಿನಿಧ್ಯವನ್ನೇ ಪಡೆಯದ, ಹೀಗೆ ಪ್ರಾರಂಭಗೊಂಡು ಶೇಕಡಾವಾರು ಪ್ರಾತಿನಿಧ್ಯವನ್ನು ಅನುಸರಿಸಿ ಆರೋಹಣ ರೀತಿಯಲ್ಲಿ ವಿಭಾಗಿಸಿ ಜೊತೆಗೆ ವೈಟೇಜ್ ಕೊಡುವ ಅಗತ್ಯವಿದೆ.
ಬಹುಶಃ ನನಗೆ ತಿಳಿದಿರುವ ಸ್ವಲ್ಪಮಟ್ಟಿನ ತಿಳುವಳಿಕೆಯನ್ನು ಆಧರಿಸಿ ಹೇಳುವುದಾದರೆ, ಆಯೋಗ ಒಳ ಮೀಸಲಾತಿ ಅಥವಾ ಉಪವರ್ಗೀಕರಣ ಮಾಡಿ ವರದಿ ತಯಾರಿಸಲು ಎರಡು ಪ್ರಾಯೋಗಿಕ ದತ್ತಾಂಶಗಳೇ ಸಾಕು. ಬೇರೆ ಅಂಕಿ ಅಂಶಗಳು ಇಲ್ಲಿ ಗೌಣವಾಗುತ್ತವೆ. ಇನ್ನು ಆಯೋಗ ಯಾವ ಅಂಕಿ ಅಂಶಗಳನ್ನು ಪರಿಗಣಿಸಬೇಕು ಎಂಬುದನ್ನು ತೀರ್ಮಾನಿಸಲು ಸ್ವತಂತ್ರವಿದೆ.