ಕನಿಷ್ಠ ಬೆಂಬಲ ಬೆಲೆ - ಸಿಎಂ ನರೇಂದ್ರ ಮೋದಿ ಹೇಳಿದ್ದೇನು?, ಪಿಎಂ ನರೇಂದ್ರ ಮೋದಿ ಮಾಡಿದ್ದೇನು?

Update: 2024-02-15 14:50 GMT

ಪ್ರಧಾನಿ ನರೇಂದ್ರ ಮೋದಿ (PTI)

ಆತ್ಮೀಯರೇ,

ಅಭೂತಪೂರ್ವ ರೈತ ಹೋರಾಟಕ್ಕೆ ಮಣಿದು ಮೂರು ರೈತ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಂಡ ಮೋದಿ ಸರ್ಕಾರ ರೈತರ ಪ್ರಮುಖ ಆಗ್ರಹವಾಗಿದ್ದ ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ (MSP) ಬೇಡಿಕೆಗೆ ಮಾತ್ರ ಒಂದು ಸಮಿತಿಯನ್ನು ಮಾಡಿ ಕೈತೊಳೆದುಕೊಂಡು ಮೂರು ವರ್ಷಗಳಾಯಿತು. ಇಷ್ಟು ವರ್ಷಗಳಾದರೂ MSP ಸಮಿತಿ ತನ್ನ ವರದಿಯನ್ನ ನೀಡಿಲ್ಲ. ಬದಲಿಗೆ ಈಗ ಮತ್ತೊಮ್ಮೆ ಬೃಹತ್ ರೈತ ಹೋರಾಟ ದೆಹಲಿಯ ಬಾಗಿಲಿಗೆ ಬರುತ್ತಿದ್ದಂತೆ MSP ವಿಷಯವನ್ನು ಅವಸರವಾಗಿ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ 2021-24 ರ ತನಕ ಮೋದಿ ಸರ್ಕಾರ ನಿದ್ದೆ ಮಾಡುತ್ತಿತ್ತೇ?

ತನಗೆ ಅಪ್ಯಾಯಮಾನವಾದ ಮೇಲ್ಜಾತಿ ಮಧ್ಯಮ ವರ್ಗದ EWS ಮೀಸಲಾತಿ ಜಾರಿ ಮಾಡಲು ಕೇವಲ ಒಂದು ತಿಂಗಳು, ಆದಿವಾಸಿ ವಿರೋಧಿ ಕಾಯಿದೆಯನ್ನು ಜಾರಿಗೆ ತರಲು ಆರು ತಿಂಗಳು, ದೇಶ ವಿರೋಧಿ NEP ಯನ್ನು ಜಾರಿಗೆ ತರಲು ಕೇವಲ ಎರಡು ವರ್ಷ ತೆಗೆದುಕೊಂಡ ಮೋದಿ ಸರ್ಕಾರ, ಅಂಬಾನಿ-ಆದಾನಿ ಕಾರ್ಪೊರೇಟ್ ಪರ ಕಾರ್ಪೊರೇಟ್ ತೆರಿಗೆ ಕಡಿತ ಮಾಡಲು ಸಂಸತ್ತಿನ ಒಪ್ಪಿಗೆಯನ್ನು ಕೇಳದ ಮೋದಿ ಸರ್ಕಾರ ದೇಶದ ಕೋಟ್ಯಂತರ ರೈತಾಪಿ ಕುಟುಂಬಕ್ಕೆ ಭದ್ರತೆ ಒದಗಿಸುವ ಮಸೂದೆಯನ್ನು ಜಾರಿ ಮಾಡಲು ಮಾತ್ರ ಮೋದಿ ಸರ್ಕಾರಕ್ಕೆ ಮೂರು ವರ್ಷ ಅವಧಿಯೂ ಅವಸರವೆನಿಸುವುದು ರೈತದ್ರೋಹಿ ನಿಲುವಲ್ಲವೇ?

ಅಷ್ಟು ಮಾತ್ರವಲ್ಲ. ರೈತ ಹೋರಾಟ ಮತ್ತೊಮ್ಮೆ ದೆಹಲಿಯ ದ್ವಾರಕ್ಕೆ ಬರುತ್ತಿದ್ದಂತೆ ಆಕಾಶದಿಂದ ಡ್ರೋನ್ ಮೂಲಕ- ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ಮಾಡುತ್ತಿರುವಂತೆ - ಟಿಯರ್ ಗ್ಯಾಸ್ ಬಾಂಬ್ ಹಾಕುತ್ತಿದ್ದಾರೆ.

ಮತ್ತೊಂದೆಡೆ ತನ್ನ ಟ್ರೋಲ್ ಪಡೆಯ ಮೂಲಕ ರೈತರು ಕೇಳುವಷ್ಟು MSP ಕೊಟ್ಟರೆ ದೇಶದ ಬಜೆಟ್ಟು ಸಾಲುವುದಿಲ್ಲ ..ಬದಲಿಗೆ ದೇಶದ ಆರ್ಥಿಕತೆಯೇ ದಿಕ್ಕೆಡುತ್ತದೆ ಎಂಬ ಅಪ್ರಚಾರದ ದಾಳಿಯನ್ನು ಪ್ರಾರಂಭಿಸಿದೆ .

ಹಾಲಿ ಕೇಂದ್ರ ಸರ್ಕಾರ ರೈತರು ಬೆಳೆಯುವ 23 ಬೆಳೆಗಳಿಗೆ MSP-Minimum Support Price- ಕನಿಷ್ಠ ಬೆಂಬಲ ಬೆಳಯನ್ನೇನೋ ಪ್ರತಿ ವರ್ಷ ಎರಡು ಬಾರಿ ಘೋಷಿಸುತ್ತದೆ. ಆದರೆ ಖಾಸಗಿ ಮಂಡಿಗಳಲ್ಲಾಗಲೀ ಅಥವಾ APMC ಗಳಲ್ಲಾಗಲೀ MSP ಯನ್ನು ಕಡ್ಡಾಯವಾಗಿ ಪಾವತಿ ಮಾಡಲೇ ಬೇಕೆಂಬ ಯಾವ ನಿಯಮಗಳೂ ಇಲ್ಲ. ಸರ್ಕಾರವು ಖರೀದಿ ಮಾಡಿದರೆ ಮಾತ್ರ ರೈತರಿಗೆ MSP ದಕ್ಕುತ್ತದೆ.

ಆದರೆ ಸರ್ಕಾರ ಚುನಾವಣಾ ವರ್ಷಗಳಲ್ಲಿ ಬಿಟ್ಟರೆ ಪ್ರತಿವರ್ಷ ತನ್ನ ಖರೀದಿಯನ್ನು ಕಡಿಮೆ ಮಾಡುವ ನೀತಿಯನ್ನು ಅನುಸರಿಸುತ್ತಿದೆ. ಆದ್ದರಿಂದ ರೈತರು ತಾವು ಬೆಳೆದ ಬೆಳೆಯನ್ನು ಯಾರೇ ಖರೀದಿ ಮಾಡಿದರೂ ಕಡ್ಡಾಯವಾಗಿ MSP ಯನ್ನು ಕೊಟ್ಟು ಖರೀದಿಸುವುದನ್ನು ಕಾನೂನು ಮಾಡಬೇಕೆಂದೂ ಅಥವಾ ಖರೀದಿ ದರ ಮತ್ತು MSP ನಡುವಿನ ವ್ಯತ್ಯಾಸವನ್ನು ಸರ್ಕಾರ ತುಂಬಿಸಿಕೊಡಬೇಕೆಂದೂ ಆಗ್ರಹಿಸುತ್ತಿದ್ದಾರೆ.

ಇದಕ್ಕೆ ಹೆಚ್ಚೆಂದರೆ ಸರ್ಕಾರಕ್ಕೆ 1.5- 2ಲಕ್ಷ ಕೋಟಿ ರೂ. ವೆಚ್ಚವಾಗಬಹುದು. ಇದರಿಂದ ಈ ದೇಶದ 100 ಕೋಟಿ ರೈತಾಪಿ ಮತ್ತವರ ಕುಟುಂಬದವರ ಬದುಕು ನಿರಾತಂಕವಾಗುತ್ತದೆ.

ಈ ಹೆಚ್ಚುವರಿ ಆದಾಯವನ್ನು ರೈತಾಪಿಯು ಹೇಗಿದ್ದರೂ ಕಾರ್ಪೊರೇಟುಗಳಂತೆ ಬೇರೆ ದೇಶಕ್ಕೆ ಸಾಗಿಸದೆ ಇಲ್ಲೇ ವೆಚ್ಚ ಮಾಡುತ್ತಾರಾದ್ದರಿಂದ ಶೇ.18 GST ಎಂದು ಲೆಕ್ಕಾಚಾರ ಹಾಕಿದರೂ ಅದರಲ್ಲಿ 36,000 ಕೋಟಿ ರೂ. ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ವಾಪಸ್ ಬರುತ್ತದೆ.

ಮೇಲಾಗಿ ಇದು ಹೆಚ್ಚೆಂದರೆ ನಮ್ಮ ಜಿಡಿಪಿಯ ಶೇ. 1 ಭಾಗ ಅಥವಾ ಈ ದೇಶದ ಕೇವಲ 100 ಶತಕೋಟ್ಯಾಧಿಪತಿಗಳು ಕೋವಿಡ್ ಕಾಲದಲ್ಲೂ ಮಾಡಿದ ಹೆಚ್ಚುವರಿ 13 ಲಕ್ಷ ಕೋಟಿ ಲಾಭದ ಶೇ. 18 ಭಾಗ ಅಥವಾ ಈ ದೇಶದ ಕೇವಲ 400 ಅತಿ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಪ್ರತಿ ವರ್ಷ ಕೇಂದ್ರ ಸರ್ಕಾರ ಬಿಟ್ಟುಕೊಡುತ್ತಿರುವ ತೆರಿಗೆ ಆದಾಯದ ಅರ್ಧ ಭಾಗ ಮಾತ್ರ!

ಅಥವಾ ಮೋದಿ ಮಿತ್ರ ಆದಾನಿ, ಅಂಬಾನಿಗಳು ದೇಶದ ಸಂಪನ್ಮೂಲಗಳನ್ನು ಹರಾಜು ಹಾಕುತ್ತಾ ವರ್ಷ ಒಪ್ಪತ್ತಿನಲ್ಲಿ ಗಳಿಸುತ್ತಿರುವ ಆದಾಯದ ಕಾಲು ಭಾಗ ಮಾತ್ರ.

ಆದ್ದರಿಂದ ಪ್ರಶ್ನೆ ಇಷ್ಟೇ... 100 ಕಾರ್ಪೊರೇಟ್ ಕುಳಗಳ ಲಾಭಕ್ಕಾಗಿ ಲಕ್ಷ ಲಕ್ಷ ಕೋಟಿ ಬಿಟ್ಟುಕೊಡುವ ಮೋದಿ ಸರ್ಕಾರ 100 ಕೋಟಿ ರೈತಾಪಿಗಳ ಹಿತಾಸಕ್ತಿ ಕಾಯಲು MSP ಯನ್ನು ಕಡ್ಡಾಯ ಮಾಡುವುದೇ?

ಅರ್ಥಾತ್ ಅದಾನಿ ಕಾ ಸಾಥ್ ಬಿಜೆಪಿ ಕಾ ವಿಕಾಸೋ ಅಥವಾ ಕಿಸಾನೋಂಕಾ ಸಾಥ್ ದೇಶ್ ಕಾ ವಿಕಾಸೋ ?

ಆದರೆ ಅಸಲು ವಿಷಯವೇನೆಂದರೆ ಯಾವ ಕಾರಣಕ್ಕೂ ಎಂಎಸ್‌ಪಿ ಯನ್ನು ಶಾಸನಬದ್ಧ ಕಾಯಿದೆಗೊಳಿಸುವುದಿಲ್ಲ ಎಂದು ಹಠ ಹಿಡಿದಿರುವ ಪ್ರಧಾನಿ ಮೋದಿ, ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಎಂಎಸ್‌ಪಿಯನ್ನು ಶಾಸನಬದ್ಧಗೊಳಿಸಬೇಕೆಂದು ಶಿಫಾರಸ್ಸು ಮಾಡಿದ್ದರು!

ಈಗ ವಿದೇಶಿ ಹಾಗೂ ದೇಶೀ ಕಾರ್ಪೊರೇಟ್ ಕಂಪನಿಗಳು ಕೃಷಿ ಮಾರುಕಟ್ಟೆಗೆ ಲಗ್ಗೆ ಹಾಕಲು ಅವಕಾಶ ಮಾಡಿಕೊಟ್ಟಿರುವ ಬಿಜೆಪಿ ಸರ್ಕಾರದ ಮುಖಂಡರು ಆಗ ಯಾವ ಕಾರಣಕ್ಕೂ ಖಾಸಗಿ ಮಂಡಿ ಹಾಗೂ ಮಾರುಕಟ್ಟೆಗೆ ಅವಕಾಶ ಮಾಡಿಕೊಡಕೂಡದೆಂದು ಸಂಸತಿನಲ್ಲಿ ರಣಭೀಷಣವಾಗಿ ವಾದಿಸಿದ್ದರು.

ಉದಾಹರಣೆಗೆ ಈ ಕೆಳಗಿನ ಸಂಗತಿಗಳನ್ನು ಗಮನಿಸಿ. ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸಿ-ಮುಖ್ಯಮಂತ್ರಿ ಮೋದಿ ಸಮಿತಿ, 2011

2011 ರಲ್ಲಿ ಯುಪಿಎ ಸರ್ಕಾರ ಕೃಷಿ ಮಾರುಕಟ್ಟೆ ಸುಧಾರಣೆಯ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು, ಹಾಲೀ ಪ್ರಧಾನಿ-ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತ್ತು.

ಆ ಮೋದಿ ಸಮಿತಿ 2011ರ ಡಿಸೆಂಬರ್ 1 ರಂದು ತನ್ನ ವರದಿಯನ್ನು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿತ್ತು. ಅದು 20 ಪ್ರಮುಖ ಶಿಫಾರಸ್ಸು ಗಳನ್ನು ಒಳಗೊಂಡಿತ್ತು.

ಅದರಲ್ಲಿ ಈ ಪ್ರಮುಖ ಶಿಫಾರಸ್ಸನ್ನೂ ಮಾಡಿತ್ತು:

" .. .. Reduction in farmers marketing risk will improve farm income and thus increase the agriculture production. For the purpose, Government should announce of MSPs well in advance and ensure that no farmer-trader transaction is below MSP”

ಅಂದರೆ: "ಮಾರುಕಟ್ಟೆಯಲ್ಲಿ ರೈತರು ಎದುರಿಸುವ ಅಪಾಯ ಕಡಿಮೆ ಮಾಡುವುದರಿಂದ ಕೃಷಿ ಆದಾಯ ಹೆಚ್ಚುವುದಲ್ಲದೆ ಕೃಷಿ ಉತ್ಪಾದನೆಯೂ ಹೆಚ್ಚುತ್ತದೆ. ಇದನ್ನು ಸಾಧಿಸಲು ಸರ್ಕಾರವು ಮುಂಚಿತವಾಗಿಯೇ ಕನಿಷ್ಠ ಬೆಂಬಲ ಬೆಲೆ - MSP- ಯನ್ನು ಘೋಷಿಸಬೇಕು ಮತ್ತು ವ್ಯಾಪಾರಿ-ರೈತರ ನಡುವಿನ ಯಾವುದೇ ವ್ಯವಹಾರವು MSP ಗಿಂತ ಕಡಿಮೆ ಇಲ್ಲದಿರುವುದನ್ನು ಖಾತರಿಗೊಳಿಸಬೇಕು.

b.3- Enforce MSP: Since intermediaries play a vital role in the functioning ofthe market and at times they have advance contract with farmers. In respect of all essential commodities, *we should protect farmer’s interests by mandating through statutory provisions that no farmer - trader transaction should be below MSP, wherever prescribed

ಅಂದರೆ: ಕೃಷಿ ಮಾರುಕಟ್ಟೆಯ ವ್ಯವಹಾರಗಳಲ್ಲಿ ಮಧ್ಯವರ್ತಿಗಳು ಕೀಲಕ ಪಾತ್ರ ವಹಿಸುತ್ತಾರೆ ಮತ್ತು ಕೆಲವು ಸಂದರ್ಭಗಳಲ್ಲಿ ರೈತರ ಜೊತೆ ಮುಂಗಡ ಒಪ್ಪಂದವನ್ನೂ ಮಾಡಿಕೊಂಡಿರುತ್ತಾರೆ. ಎಲ್ಲಾ ಅತ್ಯಗತ್ಯ ಸರಕುಗಳ ವಹಿವಾಟುಗಳ ವಿಷಯದಲ್ಲಿ ರೈತಾಪಿ- ಮತ್ತು ವ್ಯಾಪಾರಿಗಳ ನಡುವೆ ನಡೆಯುವ ಯಾವುದೇ ವಹಿವಾಟುಗಳು ಎಂಎಸ್‌ಪಿ- ಕನಿಷ್ಟ ಬೆಂಬಲ ಬೆಲೆ-ಗಿಂತ ಕಡಿಮೆ ದರದಲ್ಲಿ ನಡೆಯದಂತೆ ಮಾಡುವುದನ್ನು ಶಾಸನಾತ್ಮಕವಾಗಿ ಕಡ್ಡಾಯಗೊಳಿಸುವ ಮೂಲಕ ರೈತರ ಹಿತಾಸಕ್ತಿಯನ್ನು ರಕ್ಷಿಸಬೇಕು.

ಈಗ ರೈತಾಪಿ ಕೇಳುತ್ತಿರುವುದೂ ಇದನ್ನೇ ಅಲ್ಲವೇ?

ಆಗ ಕಾಂಗ್ರೆಸ್ ಸರ್ಕಾರದ ಮುಂದೆ ಎಂಎಸ್‌ಪಿ ಯನ್ನು ಶಾಸನಾತ್ಮಕವಾಗಿ ಕಡ್ಡಾಯಗೊಳಿಸಿ ಎಂದು ಆಗ್ರಹಿಸಿದ ನರೇಂದ್ರ ಮೋದಿಯವರು ಈಗ ತಮ್ಮ ಬಳಿ ಅಧಿಕಾರವಿದ್ದರೂ ಅದನ್ನು ಜಾರಿಗೊಳಿಸದಿರುವುದು ಏಕೆ? MSP ಇರುತ್ತದೆ ಎಂದು ಬರೆದುಕೊಡುತ್ತೇವೆ ಎಂದು ಹೇಳುವ ಬಿಜೆಪಿ ಸರ್ಕಾರ ಅವರ ಪ್ರಧಾನಿ ಮೋದಿ ಮುಖ್ಯಮಂತ್ರಿಯಾಗಿದ್ದಾಗ ನೀಡಿದ ವರದಿಯಲ್ಲಿ ಹೇಳಿರುವಂತೆ "ಯಾವುದೇ ವ್ಯಾಪಾರಿ-ರೈತರ ನಡುವಿನ ವ್ಯವಹಾರವು MSP ಗಿಂತ ಕಡಿಮೆ ಇಲ್ಲದಿರುವುದನ್ನು ಖಾತರಿಗೊಳಿಸಲು" ಯಾವುದೇ ಶಾಸನ ಬದ್ಧ ಕ್ರಮಗಳನ್ನು ತೆಗೆದುಕೊಳ್ಳಲು ಏಕೆತಯಾರಿಲ್ಲ?

ರೈತರ ಆಗ್ರಹವನ್ನು ಬಿಡಿ.. ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಏಕೆ ಕೇಳುತ್ತಿಲ್ಲ?

ಮುಖ್ಯಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ The Working Group on Consumer Affairs ನ ಸಂಪೂರ್ಣ ಶಿಪಾರಸ್ಸುಗಳನ್ನು ಆಸಕ್ತರು ಈ ಕೆಳಕಂಡ ವಿಳಾಸದಲ್ಲಿ ಪಡೆದುಕೊಳ್ಳಬಹುದು ..

https://consumeraffairs.nic.in/sites/default/files/file-uploads/recommendation_of working_group/1535352127_Working Group.pdf

ಹೀಗಾಗಿ ಕೇಳಲೇಬೇಕಾದ ಪ್ರಶ್ನೆ: ಸಿಎಂ ನರೇಂದ್ರ ಮೋದಿ ಹೇಳಿದ್ದೇನು?, ಪಿಎಂ ನರೇಂದ್ರ ಮೋದಿ ಮಾಡಿದ್ದೇನು?

ಜಸ್ಟ್ ಆಸ್ಕಿಂಗ್

-ಶಿವಸುಂದರ್

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ಶಿವಸುಂದರ್

contributor

Similar News