ಸಿದ್ದರಾಮಯ್ಯರಿಂದ ಮುಸ್ಲಿಮರಿಗೆ ದಕ್ಕಿದ್ದೇನು?

ಕಳೆದ ಎರಡು ತಿಂಗಳಲ್ಲಿ ಒಟ್ಟು 6 ಜನರನ್ನು ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿರುವ ಸರಕಾರಕ್ಕೆ ಕನಿಷ್ಠ ಒಬ್ಬ ಮುಸ್ಲಿಮ್ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡದ ಮನಸ್ಥಿತಿಯನ್ನು ಸಿದ್ದರಾಮಯ್ಯರ ನೇತೃತ್ವದ ಸರಕಾರ ಹೊಂದಿದೆಯಲ್ಲ ಎನ್ನುವುದೇ ಬೇಸರದ ಸಂಗತಿ. ಸಿದ್ದರಾಮಯ್ಯನವರ ನಾಯಕತ್ವದಲ್ಲಿಯೇ ಪದೇ ಪದೇ ಹೀಗಾಗುತ್ತಿರುವುದು ಯಾತಕ್ಕೆ ಎಂಬುದೇ ತಿಳಿಯದಾಗಿದೆ. ಅಹಿಂದದಿಂದ ಮುಂದೆ ಬಂದ ಸಿದ್ದರಾಮಯ್ಯನವರು ‘ಅ’ಅನ್ನು ರಾಜಕೀಯವಾಗಿ ಹಿಂದೆಯೇ ಬಿಟ್ಟುಬಿಡಬೇಕೆಂದು ನಿರ್ಧರಿಸಿದ್ದಾರೆಯೇ ಎಂಬ ಅನುಮಾನ ಬಲವಾಗತೊಡಗಿದೆ.

Update: 2023-08-19 05:01 GMT

ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಅಧಿಕಾರಕ್ಕೆ ಬಂದಿದ್ದು ರಾಜ್ಯದ ಹಲವಾರು ಸಮುದಾಯಗಳಿಗೆ ಸಂತಸದ ವಿಚಾರ, ವಿಶೇಷವಾಗಿ ಮುಸ್ಲಿಮ್ ಸಮುದಾಯಕ್ಕಂತೂ ಆಕಾಶವೇ ಕೈಗೆ ಸಿಕ್ಕಷ್ಟು ಸಂತೋಷವಾಗಿತ್ತು. ಏಕೆಂದರೆ ಹಿಂದಿನ ಅವಧಿಯಲ್ಲಿನ ಕೋಮುವಿಚಾರಗಳಿಂದ ಬೇಸತ್ತು ಹೋಗಿದ್ದ ಇಡೀ ಸಮುದಾಯವು ಒಟ್ಟಾರೆಯಾಗಿ ಅತೀ ಹೆಚ್ಚು ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿರುವುದು ಜಗಜ್ಜಾಹೀರು. ಮುಸ್ಲಿಮ್ ಸಮುದಾಯದ ಒಗ್ಗಟ್ಟು ಯಾವ ಮಟ್ಟಕ್ಕಿತ್ತೆಂದರೆ ಚುನಾವಣೆ ಫಲಿತಾಂಶದ ನಂತರ ಬಿಜೆಪಿಯ ಪರಾಭಾವಗೊಂಡ ಅಭ್ಯರ್ಥಿಗಳು ತಮ್ಮ ಸರಕಾರ ಮುಸ್ಲಿಮ್ ಸಮುದಾಯವನ್ನು ಕೆಟ್ಟದಾಗಿ ನಡೆಸಿಕೊಂಡದ್ದೇ ಪಕ್ಷದ ಸೋಲಿಗೆ ಪ್ರಮುಖ ಕಾರಣವೆಂಬ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ, ಇದು ಒಳ್ಳೆಯ ಬೆಳವಣಿಗೆಯೇ. ಆದರೆ, ಇದೇ ಒಗ್ಗಟ್ಟು ಇಂದು ಎಚ್.ಡಿ. ಕುಮಾರಸ್ವಾಮಿಯವರು ಬಿಜೆಪಿಯ ಸಖ್ಯ ಬೆಳೆಸಲು ಅಣಿಯಾಗುತ್ತಿರುವುದಕ್ಕೆ ಮತ್ತು ಜಾತ್ಯತೀತ ತತ್ವದ ಬಗ್ಗೆ ಭ್ರಮನಿರಸನಗೊಳ್ಳುವುದಕ್ಕೆ ಕಾರಣವಾ ಗುತ್ತಿದೆ. ಇದು ಸಮುದಾಯದ ಒಗ್ಗಟ್ಟಿನ ಮತದಾನದ ಕೆಟ್ಟ ಪರಿಣಾಮ ಎಂದರೆ ತಪ್ಪಾಗಲಿಕ್ಕಿಲ್ಲವೇನೋ.

ಕಾಂಗ್ರೆಸ್‌ನ ಬಹುತೇಕ ನಾಯಕರೇ ಮಾತನಾಡು ವಂತೆ ರಾಜ್ಯದಲ್ಲಿ ೫೦ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಶೇ. ೩೦ರಷ್ಟು ಮುಸ್ಲಿಮ್ ಮತಗಳು ಬೇರೆ ಪಕ್ಷಕ್ಕೆ ಹೋದರೂ ಕಾಂಗ್ರೆಸ್ ಪಕ್ಷ ಆ ಕ್ಷೇತ್ರಗಳಲ್ಲಿ ಗೆಲ್ಲುತ್ತಿರಲಿಲ್ಲ, ಇನ್ನೂ ೫೦ ಕ್ಷೇತ್ರಗಳಲ್ಲಿ ಶೇ. ೫೦ರಷ್ಟು ಮತಗಳು ಬೇರೆ ಪಕ್ಷಕ್ಕೆ ಹೋದರೆ ಕಾಂಗ್ರೆಸ್ ಪಕ್ಷ ಆ ಕ್ಷೇತ್ರಗಳಲ್ಲಿ ಗೆಲ್ಲುತ್ತಿರಲಿಲ್ಲ. ಇದರರ್ಥ ಬೇರೆ ಸಮುದಾಯಗಳು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಲೇ ಇಲ್ಲವೆಂದಲ್ಲ, ಆದರೆ ಯಾವುದೇ ಸಮುದಾಯವು ಒಂದಿಡೀಯಾಗಿ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರ ರೀತಿ ಮತದಾನ ಮಾಡಿಲ್ಲವೆಂಬುದನ್ನು ಅಲ್ಲಗಳೆಯುವಂತಿಲ್ಲ. ಇತರ ಸಮುದಾಯದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರಲು ಹಲವು ಕಾರಣಗಳು ಇರಬಹುದು, ಆದರೆ ಮುಸ್ಲಿಮರ ಮತಗಳು ಕಾಂಗ್ರೆಸ್ ಪರ ಧ್ರುವೀಕರಣಗೊಳ್ಳಲು ಹಿಂದಿನ ಬಿಜೆಪಿ ಸರಕಾರದ ಮುಸ್ಲಿಮರ ಕುರಿತು ದ್ವೇಷರಾಜಕಾರಣ ಹಾಗೂ ಮಲತಾಯಿಧೋರಣೆಯು ಕಾರಣವಾಗಿದ್ದರೆ, ಸಮುದಾಯದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಕಂಡಿದ್ದು ಮಾತ್ರ ಕಾಂಗ್ರೆಸ್ ಪಕ್ಷ, ಅದರಲ್ಲಿಯೂ ವಿಶೇಷವಾಗಿ ಸಿದ್ದರಾಮಯ್ಯ ಮಾತ್ರ. ಇದು ಸಮುದಾಯಕ್ಕೆ ಸಿದ್ದರಾಮಯ್ಯನವರ ಮೇಲೆ ಇರುವ ಪ್ರೀತಿ, ನಂಬಿಕೆ ಮತ್ತು ವಿಶ್ವಾಸವಲ್ಲದೆ ಮತ್ತೇನಲ್ಲ. ಹೀಗಾಗಿ ಸಿದ್ದರಾಮಯ್ಯನವರ ಮೇಲೆ ಸಮುದಾಯಕ್ಕೆ ನಿರೀಕ್ಷೆಗಳು ಆಕಾಶದಷ್ಟಿದ್ದು, ಸಿದ್ದರಾಮಯ್ಯನವರ ಎರಡನೇ ಅಧಿಕಾರಾವಧಿಯಲ್ಲಿ ಸಮುದಾಯದ ನಿರೀಕ್ಷೆಗಳು ಒಂದೊಂದಾಗಿ ಹುಸಿಯಾಗುತ್ತಿವೆ ಎಂಬುದಂತೂ ಸತ್ಯ.

೨೦೨೩ರ ಚುನಾವಣೆಯ ನಂತರ ರಾಜ್ಯದಲ್ಲಿ ಮುಸ್ಲಿಮರನ್ನು ಬೇರೆ ಯಾವ ಪಕ್ಷದವರೂ ನಂಬದ ಸ್ಥಿತಿ ಎದುರಾಗಿದೆ, ಏನೇ ಮಾಡಿದರೂ ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ಬೇರೆ ಪಕ್ಷಗಳಿಗೆ ಮಣೆ ಹಾಕುವುದಿಲ್ಲವಾದ್ದರಿಂದ ಮುಸ್ಲಿಮ್ ಸಮುದಾಯವು ಒಂದು ರೀತಿಯ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಯಾಕೆಂದರೆ, ಹಿಂದಿನ ಸರಕಾರದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸಮಸ್ಯೆಗಳು ಎದುರಾದಾಗ ಸಮುದಾಯದ ನಾಯಕರು ಹಾಗೂ ಕಾಂಗ್ರೆಸ್ ಪಕ್ಷಕ್ಕಿಂತ ಒಂದು ಹೆಜ್ಜೆ ಮುಂದೆ ಇದ್ದದ್ದು ಎಚ್.ಡಿ. ಕುಮಾರಸ್ವಾಮಿಯವರು ಮಾತ್ರ. ಮಂಗಳೂರು ಗೋಲಿಬಾರ್ ಸಂದರ್ಭದಲ್ಲಿ ಮೊತ್ತಮೊದಲಿಗೆ ಮಂಗಳೂರಿಗೆ ಭೇಟಿ ನೀಡಿ ಅಲ್ಲಿಯ ಪೊಲೀಸ್ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡು ಅದು ನ್ಯಾಯಾಲಯದ ಕಟಕಟೆಗೆ ಹೋಗುವ ತನಕವೂ ಹೋರಾಡಿದ್ದು, ನಂತರ ಹಿಜಾಬ್ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ಯಾವೊಬ್ಬ ನಾಯಕರೂ ತುಟಿಬಿಚ್ಚದಿದ್ದಾಗ, ತುಂಬಾ ಸ್ಪಷ್ಟ ಪದಗಳಲ್ಲಿ ಸರಕಾರದ ದ್ವೇಷರಾಜಕಾರಣವನ್ನು ಖಂಡಿಸಿದ್ದರು, ಅಲ್ಲದೆ ಹಲಾಲ್-ಜಟ್ಕಾ ವಿಷಯ, ಜಾತ್ರೆಗಳಲ್ಲಿ ವ್ಯಾಪಾರ ಮಾಡಬಾರ ದೆನ್ನುವ ವಿಷಯಗಳು ಮುನ್ನೆಲೆಗೆ ಬಂದಾಗ ಮೊತ್ತಮೊದಲಿಗೆ ಸರಕಾರವನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದು ಕುಮಾರಸ್ವಾಮಿಯವರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಆದರೆ, ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಮರು ಹೋಲ್‌ಸೇಲ್ ಆಗಿ ಸಿದ್ದರಾಮಯ್ಯನವರನ್ನು ಮಾತ್ರ ಮೆಚ್ಚಿಕೊಂಡಿದ್ದರಿಂದ ಇತರ ಪಕ್ಷದ ನಾಯಕರು ಮುಸ್ಲಿಮರ ಪರವಾಗಿ ನಿಲ್ಲಬೇಕಾ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳಬೇಕಾದ ಸ್ಥಿತಿಗೆ ಮುಸ್ಲಿಮ್ ಸಮುದಾಯ ಬಂದು ನಿಂತಿದೆ. ‘ಕುಲಗೆಟ್ಟರೂ ಸುಖವುಣ್ಣಬೇಕು’ ಎಂಬ ಒಂದು ಗಾದೆ ಮಾತಿದೆ, ಅಂದರೆ ಸದ್ಯದ ಕುಲಗೆಟ್ಟ ರಾಜಕೀಯ ಪರಿಸ್ಥಿತಿಯಲ್ಲಿ ಒಂದೇ ಪಕ್ಷದ ಪರವಾಗಿ ಬಹಿರಂಗವಾಗಿ ಸಮರ್ಥಿಸಿದ ಮೇಲೆ ಕನಿಷ್ಠ ಪಕ್ಷ ಅಧಿಕಾರವನ್ನು ಪಡೆದಾದರೂ ಯಶಸ್ವಿಯಾಗಬೇಕಿತ್ತು, ಆದರೆ ಅದೂ ಆಗಲಿಲ್ಲ. ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯನವರ ಪಕ್ಷಕ್ಕೆ ಅತೀ ಹೆಚ್ಚು ಮತದಾನ ಮಾಡಿದ ಮುಸ್ಲಿಮ್ ಸಮುದಾಯಕ್ಕೆ ದಕ್ಕಿದ್ದು ಕೇವಲ ಎರಡು ಸಚಿವ ಸ್ಥಾನಗಳು ಮಾತ್ರ. ಈ ಹಿಂದೆ ಎಸ್.ಎಂ. ಕೃಷ್ಣರವರ ಸಚಿವ ಸಂಪುಟದಲ್ಲಿ ೫ ಜನ ಮುಸ್ಲಿಮ್ ಸಮುದಾಯದ ಸಚಿವರಾಗಿದ್ದರೆ, ಧರಂಸಿಂಗ್ ಸಂಪುಟದಲ್ಲಿ ೪ ಜನ ಸಚಿವರು, ಕುಮಾರಸ್ವಾಮಿಯವರ ಮೊದಲ ಅವಧಿಯಲ್ಲಿ ೩ ಜನ ಸಚಿವರು (ಬಿಜೆಪಿಯಿಂದ ಯಾರೂ ಮುಸ್ಲಿಮ್ ಸಚಿವರು ಇರಲಿಲ್ಲ), ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ ೩ ಜನ ಸಚಿವರು, ಈಗ ಎರಡು ಜನ ಮಾತ್ರ ಸಚಿವರು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್, ಬಿಜೆಪಿಯನ್ನೂ ಮೀರಿಸಬಹುದೇನೋ ಎನ್ನುವ ಭಾವನೆ ಮೂಡುತ್ತಿದೆ.

ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ಬರುವುದಕ್ಕಿಂತ ಮುಂಚೆ ರಾಜ್ಯದಲ್ಲಿ ಮೂರು ಜನ ಮುಸ್ಲಿಮ್ ಲೋಕಸಭಾ ಸಂಸದರಿದ್ದರು, ಒಬ್ಬರು ರಾಜ್ಯಸಭಾ ಸದಸ್ಯರಿದ್ದರು, ನಾಲ್ಕು ಜನ ವಿಧಾನ ಪರಿಷತ್ ಸದಸ್ಯರಿರುತ್ತಿದ್ದರು. ಆದರೆ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ಬಂದ ಮೇಲೆ ಒಬ್ಬರಿಗೆ ಲೋಕಸಭಾ ಸೀಟು ನೀಡಲಾಗುತ್ತಿದೆ, ಆದರೆ ಒಬ್ಬರೂ ಲೋಕಸಭಾ ಸದಸ್ಯರಿಲ್ಲ. ೨೦೦೮ಕ್ಕಿಂತ ಮೊದಲು ರಾಜ್ಯದಲ್ಲಿ ಕನಿಷ್ಠ ೨೨ ಜನ ಮುಸ್ಲಿಮರಿಗೆ ಕಾಂಗ್ರೆಸ್ ಟಿಕೇಟ್ ನೀಡಲಾಗುತ್ತಿತ್ತು, ಅದು ಈಗ ೧೫ಕ್ಕೆ ಬಂದು ನಿಂತಿದೆ, ಪ್ರತೀ ಚುನಾವಣೆಯಲ್ಲಿ ಒಂದಿಲ್ಲೊಂದು ಕಾರಣ ನೀಡಿ ಸೀಟು ಕಡಿಮೆ ಮಾಡಲಾಗುತ್ತಿದೆ. ಕಳೆದ ಬಾರಿ ಹೆಬ್ಬಾಳ ಕ್ಷೇತ್ರದ ಟಿಕೆಟನ್ನು, ಈ ಬಾರಿ ಕೋಲಾರ ಮತ್ತು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಟಿಕೆಟನ್ನು ಮುಸ್ಲಿಮರಿಂದ ಕಸಿದುಕೊಳ್ಳಲಾಯಿತು, ಒಂದು ಕ್ಷೇತ್ರವನ್ನು ಸಿದ್ದರಾಮಯ್ಯನವರ ಹೆಸರಿನಲ್ಲಿ ದೋಚಿದರೆ ಇನ್ನೊಂದು ಕ್ಷೇತ್ರವನ್ನು ಜಗದೀಶ್ ಶೆಟ್ಟರ್‌ರವರ ಹೆಸರಿನಲ್ಲಿ ದೋಚಲಾಯಿತು. ಹೀಗೆ ಪ್ರತೀ ಬಾರಿ ಕಾಂಗ್ರೆಸ್ ಪಕ್ಷಕ್ಕೆ ತ್ಯಾಗ ಮಾಡಲು ಮುಸ್ಲಿಮರ ಕ್ಷೇತ್ರಗಳೇ ಬಲಿಯಾಗಿವೆ. ಈ ಹಿನ್ನೆಲೆಯನ್ನು ಇಟ್ಟುಕೊಂಡು ವಿಶ್ಲೇಷಿಸುತ್ತಾ ಹೋದರೆ ಸಿದ್ದರಾಮಯ್ಯನವರ ಮೇಲಿನ ಅತಿಯಾದ ನಂಬಿಕೆಯೇ ಮುಸ್ಲಿಮ್ ಸಮುದಾಯದ ರಾಜಕೀಯ ಪ್ರಾತಿನಿಧ್ಯದಲ್ಲಿನ ತೀವ್ರವಾದ ಕುಸಿತಕ್ಕೆ ಕಾರಣವೆಂಬುದು ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ.

೨೦೨೩ರ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿದಂತಹ ಕ್ಷೇತ್ರಗಳಲ್ಲಿ ಸುಮಾರು ಐದು ಕ್ಷೇತ್ರಗಳಲ್ಲಿ ಮುಸ್ಲಿಮ್ ಸಮುದಾಯ ಬೆಂಬಲಿಸಿರದ ವ್ಯಕ್ತಿಗಳಿಗೆ ಟಿಕೆಟ್ ನೀಡಲಾಯಿತು, ಅವೆಲ್ಲ ಕ್ಷೇತ್ರಗಳಲ್ಲಿ ಮುಸ್ಲಿಮ್ ಅಭ್ಯರ್ಥಿಗಳು ಸೋತರು. ಆ ಕ್ಷೇತ್ರಗಳಲ್ಲಿ ಹಿಂದಿನ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನು ಬದಲಾಯಿಸುವ ಅಗತ್ಯವೇ ಇರಲಿಲ್ಲ. ಆದರೂ ಸ್ಥಳೀಯವಾಗಿ ಅಡ್ಜಸ್ಟ್‌ಮೆಂಟ್ ರಾಜಕಾರಣವನ್ನು ಮಾಡುವ, ತಮ್ಮ ರಾಜಕೀಯ ಬೆಳವಣಿಗೆಗಾಗಿ ಕಾಂಗ್ರೆಸ್ ಪಕ್ಷವನ್ನೇ ಬಲಿ ನೀಡುತ್ತಿರುವ ಆಯಾ ಜಿಲ್ಲೆಯ ಸೋಕಾಲ್ಡ್ ಪ್ರಬಲ ನಾಯಕರು ಶಿಫಾರಸು ಮಾಡಿದ ಮುಸ್ಲಿಮ್ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ. ಹೀಗಾಗಿಯೇ ತುಮಕೂರು, ಮಂಗಳೂರು ಉತ್ತರ, ವಿಜಯಪುರ ನಗರ, ಶಿಗ್ಗಾಂವಿ, ರಾಯಚೂರು ನಗರಗಳ ಕ್ಷೇತ್ರಕ್ಕೆ ಸೋಕಾಲ್ಡ್ ಪ್ರಬಲ ನಾಯಕರು ಶಿಫಾರಸು ಮಾಡಿಯೂ ಗೆಲ್ಲಿಸಿಕೊಂಡು ಬರುವಲ್ಲಿ ವಿಫಲರಾದರು. ಆ ಶಿಫಾರಸುಗಳು ಮುಸ್ಲಿಮ್ ಸಮುದಾಯದ ರಾಜಕೀಯ ಪ್ರಾತಿನಿಧ್ಯವನ್ನು ಚುನಾವಣಾ ಪೂರ್ವದಲ್ಲಿಯೇ ರಾಜಿ ಮಾಡಿಕೊಂಡಿದ್ದವು ಎಂದರೆ ತಪ್ಪಾಗಲಿಕ್ಕಿಲ್ಲ.

ಇಷ್ಟೆಲ್ಲಾ ಚರ್ಚೆ ಈಗ ಮಾಡುವ ಕಾರಣವೇನೆಂದರೆ, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ ನಂತರ ಕೇವಲ ಸಚಿವ ಸಂಪುಟದಲ್ಲಿ ಸ್ಥಾನ ಒದಗಿಸುವುದು ಮಾತ್ರವಲ್ಲದೆ ಜೂನ್ ತಿಂಗಳಲ್ಲಿ ೩ ಜನರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಯಿತು.

ಅದರಲ್ಲಿ ಜಗದೀಶ್ ಶೆಟ್ಟರ್ ಲಿಂಗಾಯತ ಸಮುದಾಯ, ತಿಪ್ಪಣ್ಣಪ್ಪ ಕಮಕನೂರ ಹಾಗೂ ಎನ್.ಎಸ್. ಬೋಸರಾಜ್ ಹಿಂದುಳಿದ ವರ್ಗಗಳ ಸಮುದಾಯದ ಹಿನ್ನೆಲೆಯವರು. ಅದೇ ರೀತಿ ಈಗ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲು ರಾಜ್ಯಪಾಲರಿಗೆ ೩ ಜನರ ಹೆಸರುಗಳನ್ನು ಕಳುಹಿಸಲಾಗಿದೆ, ಅದರಲ್ಲಿ ಎಂ.ಆರ್. ಸೀತಾರಾಮ್ ಹಾಗೂ ಶ್ರೀಮತಿ ಉಮಾಶ್ರೀ ಅವರು ಹಿಂದುಳಿದ ವರ್ಗಗಳ ಸಮುದಾಯ, ಸುಧಾಮ್ ದಾಸ್ ಅವರು ಪರಿಶಿಷ್ಟ ಸಮುದಾಯದಿಂದ ಬಂದವರು. ಕಳೆದ ಎರಡು ತಿಂಗಳಲ್ಲಿ ಒಟ್ಟು ೬ ಜನರನ್ನು ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿರುವ ಸರಕಾರಕ್ಕೆ ಕನಿಷ್ಠ ಒಬ್ಬ ಮುಸ್ಲಿಮ್ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡದ ಮನಸ್ಥಿತಿಯನ್ನು ಸಿದ್ದರಾಮಯ್ಯರ ನೇತೃತ್ವದ ಸರಕಾರ ಹೊಂದಿದೆಯಲ್ಲ ಎನ್ನುವುದೇ ಬೇಸರದ ಸಂಗತಿ. ಸಿದ್ದರಾಮಯ್ಯನವರ ನಾಯಕತ್ವದಲ್ಲಿಯೇ ಪದೇ ಪದೇ ಹೀಗಾಗುತ್ತಿರುವುದು ಯಾತಕ್ಕೆ ಎಂಬುದೇ ತಿಳಿಯದಾಗಿದೆ. ಅಹಿಂದದಿಂದ ಮುಂದೆ ಬಂದ ಸಿದ್ದರಾಮಯ್ಯನವರು ‘ಅ’ಅನ್ನು ರಾಜಕೀಯವಾಗಿ ಹಿಂದೆಯೇ ಬಿಟ್ಟುಬಿಡಬೇಕೆಂದು ನಿರ್ಧರಿಸಿದ್ದಾರೆಯೇ ಎಂಬ ಅನುಮಾನ ಬಲವಾಗತೊಡಗಿದೆ. ಮುಸ್ಲಿಮರು ಕೇವಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಬೇಕು, ನಂತರ ಏನೂ ಕೇಳಬಾರದೆನ್ನುವ ಸಂದೇಶವನ್ನು ಸಮುದಾಯಕ್ಕೆ ಪದೇ-ಪದೇ ನೀಡಲಾಗುತ್ತಿದೆ. ಇದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಕನಿಷ್ಠ ಪ್ರತಿರೋಧವನ್ನು ಕೂಡ ಒಡ್ಡಲಾರದಂತಹ ದುರ್ಬಲ ಸ್ಥಿತಿ ಮುಸ್ಲಿಮ್ ಸಮುದಾಯದ್ದಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದ ನಡೆಯಾಗಿದೆ.

ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರಕಾರ ಬಂದರೆ ಏನೋ ಭಾರೀ ಬದಲಾವಣೆಯಾಗುತ್ತದೆ ಎಂದು ಕಾದು ಕುಳಿತ ಮುಸ್ಲಿಮ್ ಸಮುದಾಯಕ್ಕೆ ನಿರಾಸೆ ಬಿಟ್ಟರೆ ಮತ್ತೇನು ಇಲ್ಲ ಎನ್ನುವುದು ಸತ್ಯ. ಸಿದ್ದರಾಮಯ್ಯನವರು ತಮ್ಮ ಸಂಪುಟದಲ್ಲಿ ಕೇವಲ ಇಬ್ಬರಿಗೆ ಸ್ಥಾನ ನೀಡಿದರೂ ಸಮುದಾಯ ಮಾತನಾಡಲಿಲ್ಲ, ತಮ್ಮ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಕೇವಲ ೨,೧೦೧ ಕೋ.ರೂ. ಅನುದಾನ ನೀಡಿದಾಗಲೂ ಏನೂ ಮಾತನಾಡಲಿಲ್ಲ, ಈಗ ವಿಧಾನ ಪರಿಷತ್ ಸದಸ್ಯರ ನಾಮನಿರ್ದೇಶನದಲ್ಲಿಯೂ ಏನೂ ಸಿಗಲಿಲ್ಲ, ಈಗಲೂ ಸಮುದಾಯ ಪ್ರತಿಕ್ರಿಯೆ ನೀಡದೆ, ಹೀಗೆಯೇ ಮುಂದುವರಿದರೆ ಸಮುದಾಯ ಕೇವಲ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಬ್ಯಾಂಕ್ ಆಗಿ ಉಳಿಯಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸಮುದಾಯದ ಪ್ರಾತಿನಿಧ್ಯ ಇಲ್ಲವೆಂದರೆ ಆ ಸಮುದಾಯದ ಸ್ಥಾನಮಾನ ಏನು ಎನ್ನುವುದು ಸಿದ್ದರಾಮಯ್ಯನವರಿಗಿಂತ ಹೆಚ್ಚು ಯಾರಿಗೆ ತಿಳಿದಿದೆ? ಇದೆಲ್ಲಾ ತಿಳಿದೇ ಸಿದ್ದರಾಮಯ್ಯನವರು ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದ್ದಾರಾ ಎನ್ನುವುದೂ ತಿಳಿಯದ ಸಂಗತಿಯಾಗಿದೆ. ಮುಂದೆ ಲೋಕಸಭಾ ಚುನಾವಣೆ ಬರುತ್ತಿದೆ, ಬಿಜೆಪಿ ಗುಮ್ಮ ನೋಡಿ ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೇ ಮತದಾನ ಮಾಡಬೇಕು, ಬೇರೆ ವಿಧಿಯಿಲ್ಲ!

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಡಾ. ಮುಹಮ್ಮದ್ ಹಬೀಬ್

contributor

Similar News